ನಕಲು ಲೋಕದ ತಲ್ಲಣಗಳು!

ಮಕ್ಕಳಾಗದಿದ್ದವರು ಮಕ್ಕಳನ್ನು ಪಡೆಯಲು ದೇವಸ್ಥಾನಗಳಿಗೆ, ಮಠ-ಮಂದಿರಗಳಿಗೆ ಹೋಗುವ ಅವಶ್ಯಕತೆ ಮುಂದಿನ ದಿನಗಳಲ್ಲಿ ಇರುವುದಿಲ್ಲ- ಅದರ ಬದಲಾಗಿ ಕ್ಲೋನಿಂಗ್ ಕ್ಲಿನಿಕ್‍ಗಳಿಗೆ ಹೋಗಿ, ಅಲ್ಲಿ ತನಗೆ ಇಂಥದ್ದೇ ರೀತಿಯ ಮುಖವುಳ್ಳ, ದೇಹವುಳ್ಳ ಮಗು ಬೇಕೆಂದು ಅಳತೆಗೋಲಿಟ್ಟುಕೊಂಡು  ಆರ್ಡರ್ ನೀಡಿ ಬಂದರೆ, ಅಲ್ಲಿ ನಿಮ್ಮ ಆಸೆಯಂತಹ ಹಾಗೂ ನೀಡಿದ ಅಳತೆಯಂತಹ ಮಗು ಸಿದ್ಧವಾಗಿರುತ್ತದೆ.

ನಕಲು ಲೋಕದ ತಲ್ಲಣಗಳು!

ಮೊಸಳೆಯಂತಹ ಮುಖ, ಚಿರತೆಯಂತಹ ದೇಹವುಳ್ಳ ಪ್ರಾಣಿಯೊಂದನ್ನು ನೋಡಿದ್ದೀರಾ? ಮನುಷ್ಯರ ಮುಖ ಹೊಂದಿದ, ನಾಯಿ ದೇಹವುಳ್ಳ ಜೀವಿಯೊಂದನ್ನು ಕಂಡಿದ್ದೀರಾ? ಮೊದಲಿಂದಲೂ ವಿಕೃತ ಮನಸ್ಸಿನಿಂದಲೇ ಯೋಚಿಸುತ್ತಾ ಬಂದಿರುವ ಹಾಗೂ ಇಡೀ ಜಗತ್ತನ್ನು ವಿಕೃತ ರೀತಿಯಲ್ಲಿಯೇ ಸೃಷ್ಟಿಸುತ್ತಾ ಬಂದಿರುವ ಮನುಷ್ಯನ ಮುಂದೆ ಈಗ ‘ಕ್ಲೋನಿಂಗ್’ ಭೂತ ಚೇಷ್ಟೆ ಮಾಡತೊಡಗಿದೆ. ಇಡೀ ಜಗತ್ತು ಒಂದು ಕಡೆ ಸರ್ವನಾಶಕ್ಕೆ ಸಿದ್ಧವಾಗಿದ್ದರೆ, ಇನ್ನೊಂದು ಕಡೆ ಸೃಷ್ಟಿಯ ನಿಯಮಗಳನ್ನೇ ಗಾಳಿಗೆ ತೂರಿ, ಮನುಷ್ಯ ತನ್ನ ಬುದ್ಧಿವಂತಿಕೆಯ ಸಾಕ್ಷಿಗಳನ್ನು ‘ಕ್ಲೋನಿಂಗ್’ ಜಗತ್ತಿನಲ್ಲಿ ಮೂಡಿಸುತ್ತಿದ್ದಾನೆ. ತಾನು ದೇವರಿಗಿಂತ ಕಡಿಮೆಯಿಲ್ಲ ಅಥವಾ ಇಡೀ ಜಗತ್ತನ್ನು ನಾನೇ ನಿರ್ಮಿಸಬೇಕೆಂಬ ದೊಡ್ಡದೊಂದು ಅಹಂಕಾರ ಈ ಮನುಷ್ಯನಲ್ಲಿ ರೂಪುಗೊಂಡಿದೆ. ಅದಕ್ಕೆ ‘ಕ್ಲೋನಿಂಗ್’ ಸಂಪೂರ್ಣ ಜೊತೆಯಾಗಿ ನಿಂತಿದೆ.

ಜೀವಿಯೊಂದರ ಜೀನ್ಸಿನಲ್ಲಿರುವ ಅಣುವೊಂದನ್ನು ಸುರಕ್ಷಿತವಾಗಿ ತೆಗೆದು, ಮತ್ತೊಂದು ಜೀವಿಯ ಅಣುವೊಂದರ ಜೊತೆ ಸೇರಿಸಿ, ಮನುಷ್ಯ ಆಟವಾಡತೊಡಗಿದ್ದಾನೆ. ಮನುಷ್ಯ ಮತ್ತು ನಾಯಿಯ ಅಣುವೊಂದನ್ನು ಕೂಡಿಸಿದ ಮೇಲೆ ಮತ್ತೊಂದು ‘ಹೊಸ ಜೀವಿ’ ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತದೆ. ಮನುಷ್ಯ- ಮನುಷ್ಯನ ನಡುವಿನ ಅಣುವೊಂದನ್ನು ಪಡೆದು ಅದನ್ನು ಕ್ಲೋನ್ ಮಾಡಿದರೆ ಸೃಷ್ಟಿಯಾಗುವುದು ಮನುಷ್ಯನೇ. ವಿಜ್ಞಾನಿಗಳು ಇದರ ರಹಸ್ಯಗಳನ್ನು ತಿಳಿದು, ಮನುಷ್ಯ ಮತ್ತು ಮನುಷ್ಯನ ನಡುವಿನ ಕ್ಲೋನಿಂಗ್‍ಗೆ ಬೇಕಾದ ಅಣುಗಳನ್ನು ಪಡೆದು, ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಒಂದೇ ರೀತಿಯ ಮುಖ ಹಾಗೂ ದೇಹವುಳ್ಳ ಮನುಷ್ಯರ ಜಗತ್ತನ್ನು ನಿರ್ಮಿಸಬಹುದು! ಅವಳಿ- ಜವಳಿಗಳ ಸೃಷ್ಟಿಯಿಂದ ಹಿಡಿದು ಇಡೀ ಜಗತ್ತಿನ ಜನರನ್ನು ಒಂದೇ ರೀತಿಯಲ್ಲಿ, ಒಬ್ಬನೇ ವ್ಯಕ್ತಿಯಂತೆ ನಿರ್ಮಿಸುವ ರಹಸ್ಯವನ್ನು ವಿಜ್ಞಾನಿ ಕಂಡುಹಿಡಿದಿದ್ದಾನೆ! ಸದ್ಯಕ್ಕೆ ಈ ಸಾಹಸಕ್ಕೆ ಜಗತ್ತಿನಾದ್ಯಂತ ಅವಕಾಶವಿಲ್ಲ. ಈ ರೀತಿಯ ಮನುಷ್ಯನ ಸಾಹಸಗಳಿಂದ ನಿಸರ್ಗದಲ್ಲಿ ಅಗಾಧವಾದ ಸಮಸ್ಯೆಗಳು ಸೃಷ್ಟಿಯಾಗುವುದೇ ಹೆಚ್ಚು. ಅಲ್ಲದೇ, ಮನುಷ್ಯ- ಮನುಷ್ಯನ ನಡುವಿನ ಸಂಬಂಧಗಳು, ಈ ಸಂಬಂಧಗಳನ್ನೇ ಮುಖ್ಯವಾಗಿಟ್ಟುಕೊಂಡು ನಿರ್ಮಿಸಲ್ಪಟ್ಟ ಸಮಾಜಗಳು, ಈ ಸಮಾಜಗಳನ್ನೇ ನಂಬಿ ಕೊಂಡಿರುವ ದೇಶಗಳು, ಈ ದೇಶಗಳನ್ನೇ ನಂಬಿಕೊಂಡಿರುವ ಮನುಷ್ಯತ್ವ; ಎಲ್ಲದೂ ಈ ಕ್ಲೋನಿಂಗ್‍ಗಳ ಕಾರಣದಿಂದ ನಾಶವಾಗಲಿದೆಯೇ?!

ಮಕ್ಕಳಾಗದಿದ್ದವರು ಮಕ್ಕಳನ್ನು ಪಡೆಯಲು ದೇವಸ್ಥಾನಗಳಿಗೆ, ಮಠ-ಮಂದಿರಗಳಿಗೆ ಹೋಗುವ ಅವಶ್ಯಕತೆ ಮುಂದಿನ ದಿನಗಳಲ್ಲಿ ಇರುವುದಿಲ್ಲ- ಅದರ ಬದಲಾಗಿ ಕ್ಲೋನಿಂಗ್ ಕ್ಲಿನಿಕ್‍ಗಳಿಗೆ ಹೋಗಿ, ಅಲ್ಲಿ ತನಗೆ ಇಂಥದ್ದೇ ರೀತಿಯ ಮುಖವುಳ್ಳ, ದೇಹವುಳ್ಳ ಮಗು ಬೇಕೆಂದು ಅಳತೆಗೋಲಿಟ್ಟುಕೊಂಡು  ಆರ್ಡರ್ ನೀಡಿ ಬಂದರೆ, ಅಲ್ಲಿ ನಿಮ್ಮ ಆಸೆಯಂತಹ ಹಾಗೂ ನೀಡಿದ ಅಳತೆಯಂತಹ ಮಗು ಸಿದ್ಧವಾಗಿರುತ್ತದೆ. ಇಂತಹ ಲೋಕದಲ್ಲಿ ನಾವಿದ್ದೇವೆ. ಕತ್ತೆ ಮತ್ತು ಕುದುರೆಗಳು ಸೇರಿದ ಪರಿಣಾಮ ಹೇಸರಗತ್ತೆಯಂತಹ ಹೊಸದೊಂದು ಜೀವಿಯೇ ಜಗತ್ತಿನಲ್ಲಿ ಹುಟ್ಟಿಕೊಂಡಿತಲ್ಲ...ಅಂತಹ ಹೊಸ ಹೊಸ ಜೀವಿಗಳನ್ನು ಕೂಡ ನಾವು ಮುಂದಿನ ದಿನಗಳಲ್ಲಿ ಕಾಣಬಹುದೇನೋ!!

1997ರ ಫೆಬ್ರವರಿ 22ರಂದು ಡಾಲಿ ಎಂಬ ಬೃಹತ್ ಕುರಿಯೊಂದರ ಜನ್ಮವಾಯಿತು. ಇದು ಸಸ್ತನಿಯ ಜೀನ್‍ವೊಂದರ ಅಣುವಿನಿಂದ ಕ್ಲೋನಿಂಗ್ ಮೂಲಕ ಹುಟ್ಟಿದ ಮೊದಲನೇ ಜೀವಂತ ಸಸ್ತನಿ. ಸ್ಕಾಟ್‍ಲ್ಯಾಂಡಿನ ರೋಸ್ಲಿನ್ ಇನ್ಸ್ ಟಿಟ್ಯೂಟ್‍ ನಲ್ಲಿ ಡಾಲಿ ಎಂಬ ಈ ಹೆಣ್ಣು ಕುರಿ ಜನ್ಮ ತಾಳಿದಾಗ ಇದಕ್ಕೆ 6LL3 ಎಂಬ ಕೋಡ್‍ನೇಮ್ ನೀಡಲಾಯಿತು. ಇದರ ಹುಟ್ಟಿಗೆ ಸಹಕರಿಸಿದ್ದ ವ್ಯಕ್ತಿಯೊಬ್ಬನ ಸೂಚನೆಯಂತೆ ಇದಕ್ಕೆ ಡಾಲಿ ಎಂದು ಹೆಸರು ನೀಡಲಾಯಿತು. ಡಾಲಿಯನ್ನು 1996ರಲ್ಲಿ ಕ್ಲೋನಿಂಗ್ ಮಾಡಲಾಗಿತ್ತು. ಈ ಕ್ಲೋನಿಂಗ್‍ ಗೊಂಡ ಡಾಲಿ ಇಡೀ ಜಗತ್ತಿನಾದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಮೊಟ್ಟ ಮೊದಲ ಹೆಣ್ಣು ಜೀವದ ಕ್ಲೋನಿಂಗ್ ಎಂದು ಡಾಲಿಯನ್ನು ಪ್ರಸಿದ್ಧಿಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಹವಾಯ್ ಯೂನಿವರ್ಸಿಟಿಯ ವಿಜ್ಞಾನಿಗಳು ಗಂಡು ಜೀವದ ಮೊಟ್ಟಮೊದಲ ಕ್ಲೋನಿಂಗ್ ನಾವು ಮಾಡಿದ್ದೇವೆಂದು ಪ್ರಚಾರ ಮಾಡಿದರು. 1999ರ ಜೂನ್ ತಿಂಗಳಲ್ಲಿ ಇದಕ್ಕೆ ಸಂಬಂಧಿಸಿದ ಒಂದು ವರದಿ ದಿ ಜರ್ನಲ್ ನೇಚರ್ ಜನೆಟಿಕ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಡಾಲಿ ಎಂಬ ಕುರಿ ಸೇರಿದಂತೆ ಹಲವು ಕ್ಲೋನಿಂಗ್‍ ಗೊಂಡ ಪ್ರಾಣಿಗಳೆಲ್ಲಾ ಹೆಣ್ಣು ಜೀವಗಳೇ ಆಗಿದ್ದಿದ್ದು ಮತ್ತೊಂದು ವಿಶೇಷ. ಇಂತಹ ಸಂದರ್ಭದಲ್ಲಿ ಹವಾಯ್ ಯೂನಿವರ್ಸಿಟಿಯ ವಿಜ್ಞಾನಿಗಳು ಗಂಡು ಜೀವವೊಂದನ್ನು ಕ್ಲೋನಿಂಗ್ ಮೂಲಕ ಸೃಷ್ಟಿಸಿರುವುದಾಗಿ ಹೇಳಿಕೊಂಡಾಗ, ಜಗತ್ತು ಸಹಜವಾಗಿ ಕುತೂಹಲಗೊಂಡಿತು. ಈ ಮೊಟ್ಟಮೊದಲ ಕ್ಲೋನಿಂಗ್‍ ಗೊಂಡ ಗಂಡು ಜೀವ ಇಲಿಯದಾಗಿತ್ತು. ಈ ಮೂಲಕ ‘ಕ್ಲೋನಿಂಗ್’ ಜಗತ್ತಿನ ನಿರಂತರ ಸೃಷ್ಟಿ ಕ್ರಿಯೆ ನಡೆಯುವ ಕೆಲಸವಾಗಲಿದೆ ಎಂದು ಹವಾಯ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಗಂಡು ಜೀವವಾಗಿದ್ದ ಕ್ಲೋನಿಂಗ್ ಇಲಿಯನ್ನು ಮುಂದಿಟ್ಟುಕೊಂಡು ಹೇಳತೊಡಗಿದ್ದರು.

ತೀರಾ ಇತ್ತೀಚಿನ ಉದಾಹರಣೆಯೆಂದರೆ, 2009ರ ಜೂನ್ 12ರಂದು ಸ್ಪೈನಿನಲ್ಲಿ 3 ಇಲಿಗಳ ಯಶಸ್ವಿ ಕ್ಲೋನಿಂಗ್ ಮಾಡಿದ್ದು, Cloe, Cleo ಮತ್ತು Clona ಎಂಬ ಹೆಸರನ್ನು ಈ ಇಲಿಗಳಿಗೆ ಇಡಲಾಯಿತು. ಮೇ 12ರಂದು, ಜೂನ್ 3ರಂದು ಹಾಗೂ ಜೂನ್ 10ರಂದು ಕ್ರಮವಾಗಿ ಈ ಮೂರು ಇಲಿಗಳ ಜನ್ಮವಾಯಿತು.  

ಹೀಗೆ, ದಿನದಿಂದ ದಿನಕ್ಕೆ ಕ್ಲೋನಿಂಗ್ ಜಗತ್ತಿನಲ್ಲಿ ತಲ್ಲಣಗಳು ನಡೆಯುತ್ತಲೇ ಇವೆ. ಯಾರು, ಯಾವಾಗ ಮನುಷ್ಯ- ಮನುಷ್ಯನನ್ನೇ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಸೃಷ್ಟಿಸಿ ಬಿಡುತ್ತಾರೋ ಎಂಬ ಆತಂಕವೂ ಇಲ್ಲಿ ಮನೆಮಾಡಿದೆ. ಮನುಷ್ಯನನ್ನು ಕ್ಲೋನಿಂಗ್ ಮಾಡುವ ವಿಷಯ ಇಡೀ ಜಗತ್ತಿನ ಅತೀ ದೊಡ್ಡ ವಿವಾದಕ್ಕೆ ಒಳಗಾದ ವಿಷಯವೇ ಆಗಿದೆ. ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟೀವ್ಸ್ ನಲ್ಲಿ ಪದೇ ಪದೇ ಈ ಮನುಷ್ಯ ಕ್ಲೋನಿಂಗ್ ವಿಷಯ ಚರ್ಚೆಗೆ ಬಂದಿದೆ. ಚರ್ಚೆಗೆ ಬಂದಾಗಲೆಲ್ಲಾ ಮನುಷ್ಯನ ಕ್ಲೋನಿಂಗ್ ಪ್ರಯತ್ನವನ್ನು ನಿಷೇಧ ಮಾಡಲಾಗಿದೆ. ಹೀಗೆ, 1998, 2001, 2004 ಮತ್ತು 2007ರಲ್ಲಿ ಮನುಷ್ಯನ ಕ್ಲೋನಿಂಗ್ ಪ್ರಯತ್ನವನ್ನು ನಿಷೇಧಿಸಿ, ಆಜ್ಞೆ ಹೊರಡಿಸಲಾಯಿತು.

ಹೀಗೆ, ಅಣುವೊಂದರಿಂದ ಮನುಷ್ಯನ ಸಾವಿರಾರು, ಕೋಟ್ಯಾಂತರ ಹಾಗೂ ಬಿಲಿಯನ್‍ ಗಟ್ಟಲೆ ನಕಲು ಪ್ರತಿಗಳನ್ನು ಸೃಷ್ಟಿ ಮಾಡಿ ಜಗತ್ತಿನಾದ್ಯಂತ ಹರಡಿ ಬಿಟ್ಟರೆ ಇನ್ನೂ ಇಲ್ಲಿ ಬದುಕುತ್ತಿರುವ ಜಗತ್ತು ಮುಕ್ತಾಯಗೊಳ್ಳದೆ ಬೇರೆ ಅವಕಾಶಗಳಿರುವುದಿಲ್ಲ. ಮನುಷ್ಯ ಕುರಿತ ಕ್ಲೋನಿಂಗ್‍ ಗಳಿಂದ ಹಿಡಿದು ಆತ ಏನೆಲ್ಲಾ ವಿಕೃತವಾಗಿ ಹಾಗೂ ಬಹು ಸುಲಭವಾಗಿ ಇದನ್ನೆಲ್ಲಾ ಸೃಷ್ಟಿಮಾಡಬಹುದು ಎಂಬುದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಹೀಗೆ, ವಿಕೃತವಾಗಿ ಜೀವ ಸೃಷ್ಟಿಯ ಕುರಿತು ಮಾತನಾಡುತ್ತಿರುವ ಹಾಗೂ ಅದಕ್ಕಾಗಿ ಪ್ರಯತ್ನಿಸುತ್ತಿರುವ ಮನುಷ್ಯ ಮತ್ತೊಂದು ಭೂಮಿಯನ್ನು ಮಾತ್ರ ಸೃಷ್ಟಿಸುವಲ್ಲಿ ಹಾಗೂ ಅಲ್ಲಿ ಬದುಕನ್ನು ನಿರ್ಮಿಸುವಲ್ಲಿ ವಿಫಲನಾಗಿದ್ದಾನೆ.