ದಾವಣಗೆರೆ ಮಾರ್ಕೇಟಿನಲ್ಲಿ ಢಂ ಢಮಾರ್ ಪಟಾಕಿ

ದಾವಣಗೆರೆ  ಮಾರ್ಕೇಟಿನಲ್ಲಿ ಢಂ ಢಮಾರ್ ಪಟಾಕಿ

ಅದು 1980ರ ದಶಕ, ಸರ್ಕಾರಿ ಇಲಾಖೆಗಳು ಈಗಿನಂತೆ ದಪ್ಪ ಚರ್ಮ ಬೆಳೆಸಿಕೊಂಡಿರಲಿಲ್ಲ. ಸರ್ಕಾರಿ ಯೋಜನೆಗಳನ್ನು ಜನರ ಬಳಿ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನಗಳು ನಡೆಯುತಿದ್ದವು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಹಳ್ಳಿಪಟ್ಟಣಗಳಲ್ಲಿ ಆಟೋಟಗಳ ಕಾರ್ಯಕ್ರಮ‌ಗಳು ನಡೆಯುತಿದ್ದವು. 

 

ಇಂಥದೇ ಕಾರ್ಯಕ್ರಮ ಒಮ್ಮೆ ನಮ್ಮೂರಲ್ಲಿ ಏರ್ಪಾಟಾಗಿತ್ತು. ಇದರ ಪೂರ್ವಭಾವಿಯಾಗಿ ಮುಂಜಾನೆ ಹಳ್ಳಿಗಾಡಿನ ಓಟ ನಡೆಸುವುದು. ಅಲ್ಲಿ ವಿಜೇತರಾದವರಿಗೆ ಸಂಜೆ ಕಾರ್ಯಕ್ರಮ. ಅಲ್ಲಿ ಬಹುಮಾನ ವಿತರಣೆ ಜೊತೆಗೆ ಸರ್ಕಾರದ ಕೃಷಿ ಯೋಜನೆಗಳು, ಕುಟುಂಬಕಲ್ಯಾಣ ಯೋಜನೆಗಳು ಮತ್ತು ಸ್ವಾತಂತ್ರ್ಯಾ ನಂತರದ ಭಾರತದ ಸಾಧನೆಯನ್ನು ಪ್ರದರ್ಶಿಸುವ ಚಲನಚಿತ್ರ ಪ್ರದರ್ಶನ ಇದರ ಭಾಗವಾಗಿರುತಿದ್ದವು. ಆಗಿನ್ನು ರಾಜ್ಯದಲ್ಲಿ ಕಾಂಗ್ರೇಸ್ಸೇತರ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದಿರಲಿಲ್ಲವಾದ್ದರಿಂದ ಸರ್ಕಾರವೇ ಕಾಂಗ್ರೆಸ್, ಕಾಂಗ್ರೆಸ್ಸೇ ಸರ್ಕಾರ ಅನ್ನುವಂಥ ಸ್ಥಿತಿಯಲ್ಲಿ ಇವೆಲ್ಲ ಸಂಗತಿಗಳು ಸಾಮಾನ್ಯವಾಗಿದ್ದವು.

 

ಬೆಳಿಗ್ಗೆ ಏರ್ಪಾಟಾಗಿದ್ದ ಹಳ್ಳಿಗಾಡಿನ ಓಟವನ್ನು ನೋಡಲು ಅಬಾಲವೃದ್ಧರಾದಿಯಾಗಿ ನೆರೆದಿದ್ದರು. ಅವರಲ್ಲಿ ಷಣ್ಮುಖಪ್ಪ ಅಣಜಿ ಕೂಡ ಒಬ್ಬ. ಅವನು ಓಟವನ್ನು ನೋಡಲೆಂದೇ ಹೋಗಿದ್ದ. ಯಾರು ಯಾರು ಇದರಲ್ಲಿ ಪೈಪೋಟಿಗಿಳಿದಿದ್ದಾರೆ. ಇವರಲ್ಲಿ ಯಾರು ಗೆಲ್ಲಬಹುದೆಂಬ ಬಗ್ಗೆ ಒಬ್ಬೊಬ್ಬರೂ ಒಂದೊಂದು ಅಭಿಪ್ರಾಯ ಮಂಡಿಸುತಲಿದ್ದರು. ಅದನ್ನೆಲ್ಲಾ ಕೇಳುತ್ತ, ಓಟ ಮತ್ತು ಅದರಲ್ಲಿ ವಿಜೇತರಾಗುವವರ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇತ್ತು. ಷಣ್ಮುಖಪ್ಪನಿಗೆ ಎಲ್ಲರೂ ಸಣ್ಣ್ಯಾ ಸಣ್ಣ್ಯಾ ಎಂದು ಕರೆಯುವುದೇ ರೂಢಿ‌.

ಷಣ್ಮುಖನಲ್ಲಿ `ನಾನೂ ಸ್ಪರ್ಧೆಗೆ ನಿಂತಿದ್ದರೆ ಗೆಲ್ಲುತಿದ್ದೆನೇನೋ' ಎಂಬ ಆತ್ಮವಿಶ್ವಾಸದ  ಎಳೆಯೊಂದು ನುಗ್ಗಿ ಅವನ ಮನಸಿನಲ್ಲಿ ಮೆಲ್ಲನೆ ಕೋಲಾಹಲ ಉಂಟುಮಾಡತೊಡಗಿತ್ತು.  ಅದೇ ಹೊತ್ತಿಗೆ `ಲೇ ಸಣ್ಣ್ಯಾ' ಎಂದು ಕೂಗಿದಂತಾಯಿತು. ಅತ್ತ ಹೊರಳಿ ನೋಡಿದರೆ, ಸುಭಾಸಗೌಡ ಮಾವ ನಗುತ್ತ ಇವನತ್ತಲೇ ನೋಡಿ ಮತ್ತೊಮ್ಮೆ ಕರೆದ‌. ಇವನು ಅವನ ಬಳಿ ಹೋಗುತ್ತಲೇ, `ಲೇ ಸಣ್ಣ್ಯಾ, ಇಲ್ಲೇ ಓಟಕ್ಕ ನಿಲ್ಲೋದ್ ಬಿಟ್ಟು ಅಲ್ಲಿ ಸೈಡಿಗ್ಹೋಗಿ ಯಾಕ ನಿಂತಿದಿ ಬಾಯಿಲ್ಲೆ ಓಟಕ್ ನಿಲ್ಲು" ಎಂದು ಅವನು ಷಣ್ಮುಕನನ್ನು ಛೇಡಿಸಿದ. ಕಾರ್ಯಕ್ರಮದ ರೂವಾರಿಗಳಲ್ಲೊಬ್ಬನಾಗಿದ್ದ ಸುಭಾಸಗೌಡ ಮಾವನೇ ಕರೆದಿದ್ದು ಷಣ್ಮುಖನಿಗೆ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ  ಎಂಬಂತಾಯಿತು. ಆದರೂ ಮುಜಗರಕ್ಕೊಳಗಾದವನಂತೆ `ಮಾವ, ನೀನೂ ನಿಲ್ಲು, ನಾ ನಿಲ್ಲಲಿಲ್ಲ ಅಂದ್ರ  ನೋಡು' ಎಂದು ಮಾತಿಗೆ ಮಾತು ಎಂಬಂತೆ ಹೇಳಿದ. 

 

`ಹೋ' ಎಂದು ನಗಾಡಿದ ಸುಭಾಸಗೌಡ ` ಓ ಅದಕ್ಕೇನಂತೆ ನಾನು ನಿಲ್ತತಿನೀ ಬಾ. ಇಬ್ರೂ ಜತೀಗೆ ಓಡೋಣ, ನಮ್ಮಿಬ್ಬರೊಳಗ ಯಾರು ಹೆಚ್ಚು ಓಡ್ತಾರ ಅನ್ನೋದೂ ಈಗ ಗೊತ್ತಾಗಿಬಿಡ್ಲಿ' ಅಂದವನೆ ಮೇಲಂಗಿ ಬಿಚ್ಚಿ ಬಾಜೂ ನಿಂತವನೊಬ್ಬನ ಕೈಗಿಕ್ಕಿ ಕಚ್ಚೆಪಂಚೆಯನ್ನು ಬಿಗಿದು ಕಟ್ಟಿ ಓಟಕ್ಕೆ ಅಣಿಯಾಗಿಯೇ ಬಿಟ್ಟ.

 

ಷಣ್ಮುಖಪ್ಪ ಈಗ ಅಖಾಡಕ್ಕೆ ಇಳಿಯಲೇ ಬೇಕಾಯಿತು. ಆದದ್ದು ಆಗೇಬಿಡಲಿ ಎಂದು ಅವನೂ ಲಪಾಟಿ ಗಂಟುಕಟ್ಟಿ ಸೊಂಟಕ್ಕೆ ಟವೆಲ್ಲು ಬಿಗಿದೇ ಬಿಟ್ಟ.  ಹೀಗೆ ಸುಭಾಸಗೌಡ ಮಾವ ತೋರಿದ ಹ್ಯಾಂವದ ಕಾರಣಕ್ಕೆ ಅನಿರೀಕ್ಷಿತವಾಗಿ ಷಣ್ಮುಖನೂ ರನ್ನಿಂಗ್ ಟ್ರ್ಯಾಕ್‌ಗೆ ಬಂದು ನಿಲ್ಲುವಂತಾಗಿತ್ತು‌. 

 

ವಿಚಿತ್ರವೆಂದರೆ, ಅವತ್ತು ಇವನನ್ನು ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಿದ್ದ ಗೌಡರು, ಹತ್ತಾರು ಹೆಜ್ಜೆ ಓಡಿ ಸೈಡಿಗೆ ಸರಿದಿದ್ದರು. ಓಮ್ಮೆ ಓಟಕ್ಕೆ ನಿಂತ ಮೇಲೆ ತನಗಿಂತ ಮುಂದಿರುವವರನ್ನು ಹಿಂದೊಗೆವ ಗುರಿಯಲ್ಲೆ ಲಕ್ಷ್ಯವಿಟ್ಟಿದ್ದ ಷಣ್ಮುಖನಿಗೆ ಇದ್ಯಾವುದರ ಪರಿವೆಯೂ ಇರಲಿಲ್ಲ. ಸ್ವಲ್ಪವೇ ಅಂತರದಲ್ಲಿ ತಂಡೂರ ಬಸವರಾಜನಿಂದ ಹಿಂದುಳಿದು, ಮೊದಲ ಸ್ಥಾನದಿಂದ ವಂಚಿತನಾಗಿದ್ದ ಷಣ್ಮುಖಪ್ಪ ಸ್ಪರ್ಧೆಯಲ್ಲಿ ನೀಲನಗೌಡನನ್ನು ಹಿಂದಿಕ್ಕಿ ದ್ವಿತೀಯ ಸ್ಥಾನ ಪಡೆದಿದ್ದ‌. 

 

ಹೀಗೆ ಸ್ವಲ್ಪ ಹೊಗಳಿದರೆ ಇಲ್ಲ ಹಳಿದು ಹ್ಯಾಂವಕ್ಕೆ ಬೀಳಿಸಿದರೆ ಅಸಾಧ್ಯವಾದುದನ್ನೂ ಮಾಡಬಲ್ಲವನಾಗಿದ್ದ ಷಣ್ಮುಖಪ್ಪನಿಗೆ ಒಮ್ಮೆ  ರಾಣೇಬೆನ್ನೂರಿನ ಚನ್ನಬಸಪ್ಪ ಶೆಟ್ಟರ ಟ್ರ್ಯಾಕ್ಟರ್‌ಗೆ ಡ್ರೈವರ್  ಆಗಿ ಕೆಲಸ ಮಾಡಬೇಕಾದ ಅವಕಾಶ ಒದಗಿ ಬಂತು.

 

ಹಸಿರುಕ್ರಾಂತಿಯ ಪರಿಣಾಮ ಒಂದೊಂದೇ ಟ್ರ್ಯಾಕ್ಟರ್‌ಗಳು ಕೃಷಿ ಕ್ಷೇತ್ರಕ್ಕೆ ಲಗ್ಗೆ ಹಾಕಲಾರಂಭಿಸಿದ್ದ ದಿನಗಳವು. ನಮ್ಮೂರಿನಲ್ಲಿ ಷಣ್ಮುಖಪ್ಪರ ದೊಡ್ಡಪ್ಪ ಬಸಪ್ಪಜ್ಜರ ಮನೆಗೆ ಮೊದಲ ಟ್ರ್ಯಾಕ್ಟರ್ ಬಂದಿತ್ತು. ಗೂಳಯ್ಯ ಅನ್ನೋರು ಅದರ ಡ್ರೈವರ್ಕೀ ಮಾಡುತಿದ್ದರು. ಗೂಳಯ್ಯನವರ ಸ್ನೇಹ ಸಂಪಾದಿಸಿದ ಷಣ್ಮುಖಪ್ಪ ಅವರೊಂದಿಗೆ ಚಿಕ್ಕಪುಟ್ಟ ಕೆಲಸ ಮಾಡುತ್ತಲೇ ತಾನೂ ಡ್ರೈವರ್ ಆಗಿದ್ದ. ಅದೇ ಹುಮ್ಮಸ್ಸಿನಲ್ಲಿ ಖಾಕಿ ಪ್ಯಾಂಟು ಶರ್ಟು ಹೊಲಿಸಿಕೊಂಡು, ಡ್ರೈವಿಂಗ್ ಲೈಸೆನ್ಸೂ ಮಾಡಿಸಿದ್ದ. ಅದೀಗ ಅಂಥಾದೊಂದು ಕೆಲಸವನ್ನೇ ಹುಡುಕಿಕೊಟ್ಟಿತ್ತು. ಅಲ್ಲಿವರೆಗೆ ಕಮ್ತ ಮಾಡಿಕೊಂಡಿದ್ದ ಷಣ್ಮುಖಪ್ಪ ಎಲ್ಲಿಗಾದರೂ ಹೊರಟರೆ ಬಿಳಿ ದೋತರ, ನೆಹರೂ ಜುಬ್ಬಾ ಮತ್ತು ಹೆಗಲ ಮೇಲೆ ಹಸಿರು ಟಾವೆಲ್ಲು ಹಾಕುತಿದ್ದ. ಇದೀಗ ಖಾಕಿ ಪ್ಯಾಂಟು ಶರ್ಟು ತೊಟ್ಟೇ ಶೆಟ್ಟರ ಟ್ರ್ಯಾಕ್ಟರ್ ಏರುತಿದ್ದ. ಖಾಕಿಯ ಯೋಗಾಯೋಗ ಅಂದರೆ ಇದೇ ಇರಬೇಕು ಎಂದು ಗೆಳೆಯರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದ.

 

ಚನ್ನಬಸಪ್ಪ ಶೆಟ್ಟರಾದರೂ ದೊಡ್ಡ ಹಿಡುವಳಿಯ ರೈತರು. ಟ್ರ್ಯಾಕ್ಟರ್ ತಗೊಂಡರೆ ಉಳುಮೆಯ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಬಹುದೆಂಬುದೆ ಅವರ ಲೆಕ್ಕಾಚಾರವಾಗಿತ್ತು. ಹೀಗಾಗಿ ಎತ್ತಿನ ಮೂಲಕ ಹೊಲ ಉಳುತಿದ್ದ ಷಣ್ಮುಖಪ್ಪ ಈಗ ಟ್ರ್ಯಾಕ್ಟರ್ ಹೊಡೆಯುವಂತಾಗಿತ್ತು.

 

ಶೆಟ್ಟರದು ಗಂಗಾಪುರ ರಸ್ತೆಯಲ್ಲಿ ತೋಟವೊಂದಿತ್ತು. ಅಲ್ಲಿಗೆ ಹೊಲ ಹೊಡೆಯಲೆಂದು ಷಣ್ಮುಕಪ್ಪನನ್ನು ಕರೆದೊಯ್ದರು. ಆ ವರ್ಷ ಶೆಟ್ಟರು ಆರೆಕರೆ ಉಳ್ಳಾಗಡ್ಡಿ ಚೆಲ್ಲಿದ್ದರು. ಷಣ್ಮುಖಪ್ಪ ಹೊಲಕ್ಕೆ ಹೋಗುತ್ತಲೇ ಅದು ಆಗಲೇ ಹುಟ್ಟಿ ಹಾಲುನೊರೆತಂತಾಗಿ ಬಿಳಚಿ ಬಿಳಚಿ ಆಗಿತ್ತು.

 

`ಷಣ್ಮುಖ, ಇದು ಯಾಕ್ಹಿಂಗಾಗಿದಿಯೋ.. ಏನ್ಮಾಡಬೇಕು ಇದಕ್ಕೆ' ಎಂದು ಶೆಟ್ಟರು ಲೊಚಗುಟ್ಟಿದ್ದೆ ತಡ, ಕಮ್ತದಲ್ಲಿ ಆಗಲೇ ಅನುಭವಿ ಆಗಿದ್ದ ಷಣ್ಮುಖ `ಶೆಟ್ರ, ನೀವೇನೂ ಚಿಂತೀ ಮಾಡಬ್ಯಾಡ್ರೀ ನಾಳೇನ ಇದಕ ಆರು ಚೀಲ ಯೂರಿಯಾ ಚೆಲ್ಲಿ ನೀರು ಬಿಡಿಸ್ರಿ' ಎಂದ.

 

ಶೆಟ್ಟರು ಪ್ರಕಾರವೇ ಉಳ್ಳಾಗಡ್ಡಿಗೆ ಯೂರಿಯಾ ಚೆಲ್ಲಿ, ನೀರು ಹಾಸಿದ್ದೇ ಬಂತು ವಾರದಲ್ಲೇ ಉಳ್ಳಾಗಡ್ಡಿ ಬದಲಿ ಆಯ್ತು. ನಮ್ಮೂರಿನ ರೈತ ಬಡಪ್ಪನವರ ನಾಗಪ್ಪ ಹಾಗೂ ಶೆಟ್ಟರ ನಡುವೆ ಒಳ್ಳೆಯ ಒಡನಾಟವಿತ್ತು. ಹೀಗಾಗಿ ನಾಗಪ್ಪ ಆಗಾಗ ಶೆಟ್ಟರ ತೋಟಕ್ಕೆ ಬಂದು ಅಲ್ಲಿನ ಬೆಳೆಗಳನ್ನು ನೋಡಿ ಸಕಾಲಿಕ ಸಲಹೆ ನೀಡುವುದು ಅವರ ನಡುವೆ ಬೆಳೆದು ಬಂದ ರೂಢಿಯಾಗಿತ್ತು. ಹೀಗೊಮ್ಮೆ ಶೆಟ್ಟರ ಹೊಲಕ್ಕೆ ಬಂದ ನಾಗಪ್ಪ ಉಳ್ಳಾಗಡ್ಡಿ ಹೊಲ ನೋಡಿ `ಶೆಟ್ಟರ, ನಮ್ಮ ಉಳ್ಳಾಗಡ್ಡಿನೂ ಹೀಂಗ ಆಗಿತ್ತು. ನಾನು ಆರು ಚೀಲ ಡಿಎಪಿ ಹಾಕ್ಸೇನಿ. ಮತ್ತೀಗ ನಾಕು ಚೀಲ ಯೂರಿಯಾ ಮತ್ತ ಎರಡು ಚೀಲ ಪೊಟ್ಯಾಶ್ ಹಾಕಸ್ತೀನಿ..

ಹದಿನೈದು ದಿನ ಬಿಟ್ಟು ಬಂದು ನಮ್ಮ ಹೊಲಾ ನೋಡ್ರಿ ನೀವು, ಉಳ್ಳಾಗಡ್ಡಿ ಹ್ಯಾಂಗಿರ್ತೈತಿ' ಅಂದಿದ್ದ. 

 

ಶೆಟ್ಟರು ವಿಷಯವನ್ನು ಷಣ್ಮುಖನ ಮುಂದ ಪ್ರಸ್ತಾಪಿಸಿ, `ಷಣ್ಮುಖ, ನಾಗಪ್ಪ ಹಿಂಗ ಹೇಳ್ಯಾನ, ಮತ್ತೇನ್ ಮಾಡಾಣ, ನಾವೂ ಡಿಎಪಿ ಒಗೇನೇನು?' ಎಂದರು. ಅದಕ್ಕೆ ಷಣ್ಮುಕ ` ಯೇ, ನೀವ್ ಅವ್ರ ಮಾತು ಕೇಳಬ್ಯಾಡ್ರೀ ಶೆಟ್ರ, ಕೇಳ್ರಿಲ್ಲೇ, ಒಂದೆರಡು ಟ್ರಿಪ್ಪು ಸಗಣಿ ಹೇರಿ ನಾವು ಉಳ್ಳಾಗಡ್ಡಿಗೆ ಸಗಣಿ ನೀರು ಬೀಡೋಣು' ಎಂದಿದ್ದೆ ಸರಿಯೆನಿಸಿ ಶೆಟ್ಟರೂ ಹಾಗೇ ಮಾಡಿದರು. ಇದಾಗಿ ಹದಿನೈದು ದಿನಗಳಿಗೆ ಶೆಟ್ಟರ ಉಳ್ಳಾಗಡ್ಡಿ ಕರ್ರಗೆ ಕಂಗೊಳಿಸತೊಡಗಿತು. ಆಜುಬಾಜು ರೈತರು ಇದನ್ನು ನೋಡಿ ಶೆಟ್ರ ಇದೇನು ರಾಗಿ ಭಾರಿ ಬೆಳದೈತಿ ಅನ್ನತೊಡಗಿದರು. ಶೆಟ್ಟರು ಅವರಿಗೆ ` ರಾಗಿ ಅಲ್ಲಪಾ ಅದು ಉಳ್ಳಾಗಡ್ಡಿ' ಎಂದು ಸಮಜಾಯಿಷಿ ನೀಡಬೇಕಾಗಿತ್ತು.

 

ಗಣೇಶ ಚವತಿ ಹೊಳವಿಗೆ ಶೆಟ್ಟರು ಉಳ್ಳಾಗಡ್ಡಿ ಕಿತ್ತು ಹೊಲದ ತುಂಬಾ ಬಾಂದು ಹಾಕಿಸಿದ್ದರು. ಮಹಾನವಮಿಗೆ ಅದನ್ನು ಹೆಚ್ಚಿಸಿ ರಾಣೇಬೆನ್ನೂರು ಮಾರ್ಕೇಟಿಗೆ ಒಯ್ಯುವರಿದ್ದರು. ಷಣ್ಮುಖಪ್ಪ ರಾಣೇಬೆನ್ನೂರಲ್ಲಿ ಬೆಲೆ ಕಮ್ಮೀ ಇದೆ ದಾವಣಗೇರಿಗೆ ಒಯ್ಯುವಂತೆ ಸಲಹೆ ನೀಡಿದ. ಹಾಗೇ ಹಬ್ಬಕ್ಕೆ ತಾನು ಮೂರು ದಿನ ಊರಿಗೆ ಹೋಗಿ ಬರುವುದಾಗಿ ಹೇಳಿದ.

 

ಷಣ್ಮುಖನ ಮಾತಿನಂತೆ ಕೆಲಸ ಮಾಡಿದ್ದರಿಂದಲೇ ಉಳ್ಳಾಗಡ್ಡಿಯ ಭರ್ಜರಿ ಬೆಳೆ ಬಂದಿತ್ತು. ಈಗ ಮಾರಾಟಕ್ಕೂ ಅವನನ್ನೇ ಕರೆದೊಯ್ಯಬೇಕೆಂಬುದು ಶೆಟ್ಟರ ಅಭೀಪ್ಸೆಯಾಗಿತ್ತು. ಶೆಟ್ಟರ ಮಾತಿಗೆ ಕಟ್ಟು ಬಿದ್ದು ಷಣ್ಮುಕಪ್ಪನೂ ಉಳ್ಳಾಗಡ್ಡಿ ಮಾರಲು ದಾವಣಗೇರಿಗೆ ಬಂದ. 

 

ಆರೆಕರೆಯಲ್ಲಿ ಬೆಳೆದ ಅರ್ಧರಷ್ಟರಲ್ಲೆ ಒಂದು ಟ್ರ್ಯಾಕ್ಟರ್ ಲೋಡು ಉಳ್ಳಾಗಡ್ಡಿಯಾಗಿತ್ತು. ಇನ್ನರ್ಧ ಹೊಲದಲ್ಲೆ ಇತ್ತು. ಆಗ ಉಳ್ಳಾಗಡ್ಡಿ ಕ್ವಿಂಟಾಲ್‌ಗೆ ಇನ್ನೂರು, ಇನ್ನೂರೈವತ್ತು ಮಾರಿದರೆ ಅದೇ ದೊಡ್ಡ ರೇಟು!  ಕೆಂಪಗೆ ಸೇಬು ಹಣ್ಣಿನಂತಿದ್ದ ಶೆಟ್ಟರ ಉಳ್ಳಾಗಡ್ಡಿ ಅದೇ ರೇಟಿನ ಆಸುಪಾಸು ಮಾರಬಹುದೆಂಬುದು ಇವರ ನಿರೀಕ್ಷೆಯಾಗಿತ್ತು.

 

ದಾವಣಗೇರಿ ಮಾರ್ಕೇಟಿಗೆ ಬರುತ್ತಲೆ ಷಣ್ಮುಖ ಶೆಟ್ಟರ ಬಳಿ ಇನ್ನೂರು ರೂ. ಹಣ ಕೇಳಿದ. `ಯಾತಕ್ಕೆ' ಎಂದರು ಶೆಟ್ಟರು. `ಬೇಕಿಲ್ಲೆ ಕೊಡ್ರಿ' ಎಂದ ಷಣ್ಮುಖ. 

 

ಹಣ ಪಡೆದವನೇ ಸೀದಾ ಪೇಟೆಗೆ ಹೋಗಿ ನಾಲ್ಕು ಗರ್ನಾಲು ಪಟಾಕಿ, ಕಡ್ಡಿಪೆಟ್ಟಿಗೆ ತಂದ ಷಣ್ಮುಖ, ಹರಾಜು ಆರಂಭಗೊಳ್ಳುತ್ತಲೇ ಶೆಟ್ಟರ  ಉಳ್ಳಾಗಡ್ಡಿಯ ರಾಶಿಯ ಬಳಿ ಗರ್ನಾಲು ಹಚ್ಚಿ ಢಂ ಢಮಾರ್ ಅಂತ ನಾಲ್ಕೂ ಗರ್ನಾಲ್ ಪಟಾಕಿ ಸಿಡಿಸಿದ.

 

ಗಕ್ಕನೇ ಬೆರಗಾದ ಮಾರ್ಕೇಟು ಇದೇನಪ್ಪ ಇಲ್ಲಿ ಎಂದು ಬೆಚ್ಚಿಬಿತ್ತು. ಅಲ್ಲಿ ಇಲ್ಲಿ ನೆರೆದವರೆಲ್ಲ ಪಟಾಕಿ ಸಿಡಿದ ಸ್ಥಳಕ್ಕೆ ಧಾವಿಸಿದ್ದೇ ಬಂತು. ಅಲ್ಲಿ ನೋಡಿದರೆ ಸೇಬು ಹಣ್ಣಿನಂಥಾ ಉಳ್ಳಾಗಡ್ಡಿ!

 

ಹಿಂದೆಯೇ ಬಂದ ಹರಾಜಿನ ಪಾಳಿಯಲ್ಲಿ  ಶೆಟ್ಟರ ಉಳ್ಳಾಗಡ್ಡಿಗೆ ಸವಾಲು ಕೂಗತೊಡಗಿದರು. ಕೊಳ್ಳುವವರ ಮಧ್ಯೆ ಜುಗಲ್ಬಂಧಿಯೇ ಸುರುವಾದಂತಾಗಿ ಉಳ್ಳಾಗಡ್ಡಿಯ ಬೆಲೆ ಮುನ್ನೂರನಲವತ್ತಕ್ಕೆ ಹೋಗಿ ತಲುಪಿತ್ತು. ಶೆಟ್ಟರ ಮೊಗದಲ್ಲಿ ಮಂದಹಾಸ ತೇಲಿತ್ತು. ಕಣ್ಣುಗಳು ಮಾತ್ರ ನೆರೆದ ಗೌಜಿನಲ್ಲಿ ಮರೆಯಾಗಿದ್ದ ಷಣ್ಮುಖನನ್ನೇ ಹುಡುಕುತಿದ್ದವು!