My Cup Of Coffee - ಕನಸುಗಳ ಕಲರವ…

ನನ್ನನ್ನಾಕ್ರಮಿಸಿ ನೀ ಹೇಳಿದ ಕೇಳುವ ಗೊಂಬೆಯಾಗಿಸಿದೆ. ನನಗೇನು ಕಿಂಚಿತ್ತೂ ಬೇಸರವಿಲ್ಲ. ಹೀಗೇ ಪ್ರೇಮದರಸನಾಗಿ ಆಳುತ್ತಿರು. ಯಾಕೆಂದರೆ, ನಿನ್ನೊಳಗೆ ಪ್ರೀತಿ ಖುಶಿ ಕೊಡೋದು ಬಿಟ್ಟರೆ ಬೇರೆ ಸ್ವಾರ್ಥನೇ ಕಂಡಿಲ್ಲ.

My Cup Of Coffee - ಕನಸುಗಳ ಕಲರವ…

ಕನಸಿನ ಕಲರವಕೆ ವಾಸ್ತವದ ಮೆರುಗು

ಬದುಕಿನಲ್ಲಿ ಅದೆಷ್ಟೋ ಬಿರುಗಾಳಿಯ ಅಲೆಗಳನ್ನು ಎದುರುಸಿ, ಎಲ್ಲಾ ಮುಗಿದೇ ಹೋಯಿತೆನ್ನುವ ಸಮಯದಲ್ಲಿ ಸುಂಯ್ ಎಂದು ಹೊಸ ಗಾಳಿಯ ಅಲೆಯೊಂದು ಮೈ ಸೋಕಿ, ಹಾಗೇ ನಿಧಾನಕ್ಕೆ ದೂರಾಗಿ ಹೋದ ಅನುಭವ ಆಯಿತು ನೋಡು, ಆ ಕ್ಷಣವೇ ಈ ಮನಸು ಜಾಗ್ರತವಾಯಿತು. ಒಮ್ಮಿಂದೊಮ್ಮೆಲೆ ಮೈ ನವಿರೇಳಿಸುವ ಕನಸೊಂದನ್ನು ಕಟ್ಟೇ ಬಿಟ್ಟಿತು. ಅದಕ್ಕೆ ಕಾರಣ ನೀನು ಕಣೊ! ಕೇವಲ ನೀನು.

‘ನನ್ನ ಹುಡುಗ! ಅಷ್ಟೇ ಅಲ್ಲ. ನನ್ನ ಕನಸಿನ ಹುಡುಗ!’ ಅಂತ ಈ ಪೆದ್ದು ಮನಸಿಗೆ ತಿಳಿಸಿದವ ನೀ. ಹೀಗೆ ನೀನು ಕಣ್ಣಿಗೆ ಕಾಣದ ಹೊಸ ಗೂಡೊಂದನ್ನು ಕಟ್ಟಿ, ಅದರೊಳಗಿನ ನಂದಾದೀಪ ಆಗಬಹುದೆಂದು ಅನಿಸಿರಲಿಲ್ಲ. ಯಾಕೆ ಗೊತ್ತಾ? ಇರಲಿ ಬಿಡು. ಈಗ ಬೇಡ. ಸಮಯ ಬಂದಾಗ ಹೇಳುವೆ. ಹೀಗೆ ನಿನಗೆ ನಾ ಸೋತ ಪರಿ ನೆನೆದರೆ ಈಗಲೂ ಮೈ ಜಮ್ಮೆಂದು, ಆ ಕ್ಷಣಕ್ಕೆ ಆದ ಅನುಭವ ನೆನಪಾಗಿ ಮನಸು ಬೆರಗಾಗುವುದು.

ಪ್ರತಿ ಹೆಣ್ಣಿನ ಒಳಗೊಂದು ತನ್ನದೇ ಆದ ವಿಸ್ಮಯದ ಲೋಕ ಅಡಗಿರುವುದೆಂದು ಸಾಬೀತಾದ ಸಮಯವದು. ಆ ಲೋಕವನ್ನು ಅನಾವರಣಗೊಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ನಿನ್ನಂಥವನು ಬೇಕು. ಗಟ್ಟಿ ಮನಸಿನ, ಎದೆಗಾರಿಕೆಯ ಧೀರೋದ್ಧಾತ. ಇಲ್ಲದಿದ್ದರೆ ಬದುಕು ಗೊತ್ತು ಗುರಿ ಇಲ್ಲದೆ ಹಾಗೇ ಕಳೆದು ಹೋಗುವುದು. ಸೋರುವ ನಳದಂತೆ ಆಯಸ್ಸು ಕ್ಷೀಣ.

ಎನೂ ಅರಿಯದವಳಿಗೆ, ಪ್ರೀತಿಯಲ್ಲಿ ಅಷ್ಟು ಶಕ್ತಿ ಇದೆಯೆಂದು ಕಲಿಸಿದವನು. ಅದರ ಮುಂದೆ ಈ ಮನುಕುಲವೇ ಸೋಲೊವಾಗ ನಾವಿಬ್ಬರು ಯಾವ ಗಿಡದ ತಪ್ಪಲು ಹೇಳು. ಆದರೂ ಒಂದು ಮಾತಂತೂ ಸತ್ಯ. ಹೀಗೆ ಇದೆಲ್ಲಾ ದಕ್ಕಲು, ದಕ್ಕಿಸಿಕೊಳ್ಳಲು, ದಕ್ಕಿಸಿಕೊಂಡೇ ಮುಂದೆ ಸಾಗುವ ಶಕ್ತಿ ಇರುವುದು, ಕೇವಲ ನಿನ್ನ ಪ್ರೀತಿಗೆ ಮಾತ್ರ. ಆ ನಿನ್ನ ಪ್ರೀತಿಯ ಮುಂದೆ ಹಿಮದಂತೆ ಕರಗಿ ನೀರಾಗುವುದನ್ನು ಬಿಟ್ಟರೆ ಬೇರೇನೂ ಸಾಧ್ಯವೇ ಇಲ್ಲ.

ಎಥಿಕ್ಸ್ ಮಾತುಗಳೆಲ್ಲ ಟೊಳ್ಳಾಗಿ ಗಾಳಿಗೆ ತೂರಿಕೊಂಡು ಹಾರಿ ಹೋಗಿ ಮೂರಾಬಟ್ಟೆ. ಅಗಲಿ ಬಿಡು ಅನಿಸಿದೆ. ಅದರಲ್ಲೇನು? ಹೌದು. ಹೀಗೆನೆ ಅಂತ ಮನಸು ಒಪ್ಪಿಕೊಂಡಾಯಿತು. ಇನ್ನೂ ಯಾರ ಮುಲಾಜು ಹಿಡಿಯಬಾರದೆಂದು ನೀ ತಿಳಿಸಿದ ಮೇಲೆ ಮುಗಿಯಿತು.

ತಿಳಿಯಿತು. ತಿಳಿದ ವಿಷಯವೇ ಮತ್ತೆ ಮತ್ತೆ ತಿಳಿಯಿತು. ಕ್ರಮೇಣ ಗ್ರಹಿಸಿದೆ. ನೀ ಕರುಳು ಕಿತ್ತುಕೊಂಡು ಗಿಣಿಗೆ ಹೇಳಿದ ಹಾಗೆ ಹೇಳಿದೆ. ಹೇಳುವಾಗ ಕೇಳಿದೆ. ಕೇಳುತ್ತಲೇ ಸಾಗಿದೆ. ಕೊನೆಗೆ ನಿನ್ನೆದೆಯಲ್ಲಿ ಹುದುಗಿ ಗೊಳೋ ಎಂದು ಅಳಬೇಕೆನಿಸಿದ್ದು ಸುಳ್ಳಲ್ಲ. ಇಷ್ಟು ಅರ್ಥೈಸಿಕೊಳ್ಳುವ ನೀ ಇಷ್ಟು ದಿನ ಎಲ್ಲಿ ಅಡಗಿದ್ದೆ? ಕಳೆದು ಹೋದ ಕಣ್ಣೀರಿಗೆ ಆ ದೇವ ಕಳಿಸಿದ ದೂತ ಎನಿಸಿತು.

ಅದೆಷ್ಟೊ ಸಂಗತಿಗಳು, ಗೊತ್ತಿಲ್ಲದ ವಿಷಯಗಳು, ಈ ಪ್ರಪಂಚದ ವಿವಿಧ ಮುಖಗಳು, ಒಂದೇ ಎರಡೇ. ಹೀಗೂ ಇರಬಹುದಾ ಎಂದು ಹುಬ್ಬೇರಿಸುವುದನ್ನು ಬಿಟ್ಟರೆ ಏನೂ ಅರಿಯದ ಮರುಳುತನ. ಆ ನನ್ನ ಅಮಾಯಕತೆ, ಮುಗ್ಧ ಮುಖ ನೋಡಿ, ನಿನ್ನೊಳಗೆ ಹೆಪ್ಪುಗಟ್ಟಿದ್ದ ಪ್ರೀತಿ ಸಡಿಲಾಗಿ ಅಳ್ಳಕವಾಗಿ ಮಲ್ಲಿಗೆ ಹೂವಿನ ರಾಶಿಯಂತೆ ಸುರಿಯಿತು ನೋಡು, ಕುಳಿತಲ್ಲೆ ಮಾತು ಕೇಳುತ್ತ ಪುಳಕಿತಳಾದ ಪರಿಗೆ ಒಡಲೆಲ್ಲಾ ಒದ್ದೆಯಾಗಿ, ‘ನೀನು ಬೇಕೇ ಬೇಕು’ ಎನಿಸಿದ್ದಕ್ಕೆ ತಪ್ಪೆಂದು ಹೇಳುವವರು ಯಾರು?

ಈ ಮನಸಿನ ಮಾತುಗಳಿಗೆ ಮನಸೇ ಸಾಕ್ಷಿ ಕಣೊ. ನನಗೆ ನೀ ಸಾಕ್ಷಿ. ನಿನಗೆ ನಾ ಸಾಕ್ಷಿ. ನಮ್ಮ ಪ್ರೀತಿಗೆ ಆ ದೇವ ಸಾಕ್ಷಿ.

ಮರುಭೂಮಿಯ ನಡುವಿನ ಬಾವಿಯ ಆಳಕ್ಕೆ ಇಳಿದರೆ ನೀರು ಸಿಕ್ಕೀತೆ? ಹಾಗೆ ಹೆಣ್ಣಿನ ಭಾವನೆಗಳು. ಬದುಕಿನಲ್ಲಿ ಕಳೆದು ಹೋದ ಮನದ ಭಾವನೆಗಳನ್ನು ಹುಡುಕುವುದಾದರೂ ಎಲ್ಲಿ? ಆದರೆ ಅದರ ಕೀಲಿ ಕೈ ನಿನ್ನ ಬಳಿ ಇತ್ತು ನೋಡು. ಠಕ್ ಅಂತ ತೆಗೆದು, ಒಂದೇ ಕ್ಷಣಕ್ಕೆ ಬಡಿದೆಬ್ಬಿಸಿದ್ದು ಆಶ್ಚರ್ಯ. ಇಲ್ಲ ಸಾದ್ಯವೇ ಇಲ್ಲ ಹುಸಿ ಎಂದುಕೊಂಡ ನನ್ನ ಮನವ ಕಂಡು ನಿನ್ನ ಮನ ಗೇಲಿ ಮಾಡಿ ನಗೆಯಾಡಿತು.

ಆರಂಭದಲ್ಲಿ, ನಿನ್ನ ಸ್ವೀಕರಿಸಲಾಗದಕ್ಕೆ ನೂರೆಂಟು ಕುಂಟು ನೆಪ. ಸಾವಿರಾರು ಕುರುಡು ಕಾರಣ ಕೊಟ್ಟರೆ ಸಾಲದು. ಅದೆಷ್ಟು ಗಟ್ಟಿ. ಅದೆಷ್ಟು ಪ್ರಖರ. ನಿನ್ನ ಯಾಮಾರಿಸುವುದು ಅಷ್ಟು ಸುಲಭವಲ್ಲ. ಸುಲಭ ಏನು ಬಂತು ಸಾಧ್ಯವೇ ಇಲ್ಲ. ಹೇಳಿದ್ದೆಲ್ಲಾ ನಿಜ ಎಂದು ನಂಬುವ ಹುಂಬನಲ್ಲ.

‘ಸಾಕು ಸುಮ್ಮನಿರು. ಕಂಡಿದಿನಿ. ಸಮಯ, ಜವಾಬ್ದಾರಿ ಯಾರಿಗೆ ಇಲ್ಲ?’ ಎನ್ನುವ ವಾದ. ಯಾರೂ ಬಿಟ್ಟಿ ಕುಳಿತಿಲ್ಲ. ನನಗೂ, ನಿನಗೂ, ಪ್ರತಿಯೊಬ್ಬರಿಗೂ ಇದ್ದೇ ಇದೆ ಗೋಳು. ‘ನನಗೆ ನೀ ಬೇಕೇ ಬೇಕು’ ಹಾಗೆ ಹೇಳ್ತಾ ಹೇಳ್ತಾ ನನ್ನೊಳಗಿನ ಕನಸಿನ ಗಂಟಿಗೇ ಕೈ ಹಾಕಿ ಸಡಿಲಿಸಿದೆಯಲ್ಲ! ಅಬ್ಬಾ ತುಡುಗು ಮನಸಿನ ಹುಡುಗು ಬುದ್ಧಿಯವ ನೀ.

ಇನ್ನೇನು ಉಳಿಯಿತು ಹೇಳು? ಎಂದೋ ಏನೋ ನೆನಪಿಲ್ಲ. ಅಷ್ಟು ಹಿಂದಿನದು ನೆನಪಿರುವುದಾದರೂ ಹೇಗೆ ಸಾಧ್ಯ ಹೇಳು? ಮನದ ಉಪ್ಪರಿಗೆಯ ಮೇಲೆ ಕನಸುಗಳ ಗಂಟು ಕಟ್ಟಿಟ್ಟು ಕಾಲವೇ ಆಗಿತ್ತು. ಅದರ ಮೇಲೆಲ್ಲಾ ರಾಶಿ ಧೂಳು ಕುಳಿತು ಅಣಕಿಸುತಿತ್ತು. ನೀ ಝಾಡಿಸಿ, ಝಾಡಿಸಿ ಅದರ ಗಂಟಿನವರೆಗೆ ತಲುಪಿ, ಬಿಚ್ಚಲು ಮುಂದಾದಾಗ ಎಲ್ಲಿಲ್ಲದ ಪುಳಕ. ಆ ಕ್ಷಣ ಮನಸ್ಸು ಬೆಚ್ಚಗಾಗಿ ಚೈತ್ರದ ಚಿಗುರೊಡೆದ ಸಂಭ್ರಮ.

ನೀನು ಹೇಳುವಂತೆ ನನ್ನದೆಲ್ಲಾ ನಖರಾ ಕಣೊ. ನನಗೂ ಗೊತ್ತು. ಒಳಗೆಲ್ಲಾ ಬೇಕು ಬೇಕು ಎನಿಸಿದರೂ, ಮೇಲೆ ಮಾತ್ರ ಬಿಗುಮಾನದ ಸೋಗು. ಅದೂ ನಿನ್ನಿಂದ ಮುಚ್ಚಿಡಲು ಹೊರಟ ಹುಚ್ಚಿ. ಮನಸು ಕೇಳಬೇಕಲ್ಲ. ನಿನ್ನ ಪ್ರೀತಿಯ ಜಾಲದಲ್ಲಿ ಸಿಕ್ಕು ಸಾಧ್ಯವೇ ಇಲ್ಲ ಎನಿಸಿದಾಗ ಒಪ್ಪಿಕೊಂಡೆ. ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲ. ಎಲ್ಲಾ ಗೊತ್ತಿದ್ದ ನಿನಗೆ ಜೀವ ಹಿಂಡಿಬಿಟ್ಟೆ.

ನಿನಗೋ ‘ನಾನು’ ಅಂದರೆ ಅದೇನು ಪ್ರೀತಿ! ಈ ಪ್ರಪಂಚ ಒಂದು ಕಡೆಯಾದರೆ, ನಿನ್ನ ಪಾಲಿಗೆ ನಾನೊಂದು ಕಡೆ.

ಮನಸಿನ ಸಾಮ್ರಾಜ್ಯದ ದೇವತೆಯಾಗುವುದು ಯಾರಿಗೆ ಬೇಡ? ಅದೂ ಇಂಥ ಪ್ರೇಮಿಯ ಪ್ರೇಯಸಿ.

ನಿನ್ನ ಮೇಲೆ ಪ್ರೀತಿ ಹುಟ್ಟಿತೊ? ನಿನ್ನ ಕಂಡರೆ ಸೆಳೆತ ಆಯಿತೊ? ಮಾತಿಗೆ ಮರುಳಾದೆನೊ? ಧಾಟಿಗೆ ಮೋಡಿಯಾಯಿತೊ? ಇರುವ ರೀತಿಗೆ ಆಕರ್ಷಣೆಯೊ? ಒಂದೂ ತಿಳಿಯದು. ಇಷ್ಟು ಮಾತ್ರ ಹೇಳಬಲ್ಲೆ. ಅದೇನೋ ಜಾದುಗಾರಿಕೆ ಆವರಿಸಿ, ಅಫೀಮು, ಗಾಂಜಾ ಸೇವಿಸಿದಂತೆ ಸದಾ ನಿನ್ನದೇ ಧ್ಯಾನದಲ್ಲಿ ಓಲಾಟ. ಮಾಡುವ ಕೆಲಸವೆಲ್ಲಾ ಯಾಂತ್ರಿಕ. ನೀನು ಪಟ್ಟು ಹಿಡಿದ ಪುಂಡನಂತೆ ಕಂಡಾಗ ನನ್ನೆದೆಯಲ್ಲಿ ಸಂತಸದ ನಗಾರಿ.

‘ಹಾಂ! ಇವನೇ ನನ್ನ ಕನಸಿನ ಕುವರ’ ಎನಿಸಿ ಹಗಲುಗನಸು ಕಾಣುವ ಹರೆಯ ಉಕ್ಕಿಸಿದ ಶಕ್ತಿಗೆ ಏನು ಹೇಳಲಿ?

ಒಂದು ಸತ್ಯ ಹೇಳುವೆ. ಕೇಳು. ಆ ಕನಸಿನ ಗಂಟು ಬಿಚ್ಚಿದ ಮೇಲೆ ಮೈಯೆಲ್ಲಾ ಕನಸೇ ಕನಸು! ಹಗಲಿರುಳು ಮನಸೆಲ್ಲಾ ಕನಸಿನ ತವರೂರು. ನಿನ್ನ ಮಾತು, ರೀತಿ, ವೈಖರಿ ಮುಂದೆ ನಿನ್ನ ರೂಪ ಹೇಗಿದೆ? ನೀನು ಕಾಣಲು ಹೇಗಿರಬಹುದು ಎಲ್ಲಾ ಗೌಣ. ನೀನು ಬೇಕು ಎನ್ನುವ ಮನಸಿನ ಹಟ ಒಂದಕ್ಕೇ ಮೊದಲ ಆದ್ಯತೆ. ಆ ಪ್ರೀತಿಯ ಸೆಳೆತದ ಸುಳಿಯಲ್ಲಿ ಸಿಲುಕಿದಂತಾಗಿ ಸಿಹಿಸಿಹಿ ಯಾತನೆ.

ದಿನನಿತ್ಯದ ಜಂಜಾಟದಲ್ಲಿ ಸಿಲುಕಿರುವ ಕಾಲುಗಳು, ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಂತೆ. ಏನಾದರೊಂದು ವರಾತ ತೆಗೆಯುವಾಗ ಅರ್ಧದಲ್ಲೇ ತಡೆಯುವ ನಿನ್ನ ರೋಷ ಹೇಗೆ ವರ್ಣಿಸಲಿ? ಅಬ್ಬಾ! ಏನದು ಜೋರು. ಇನ್ನೂ ನಿನ್ನವಳೇ ಆಗಿಲ್ಲ ಆದರೂ ನಿನಗಾಗಿಯೇ ಜನಿಸಿದವಳೆಂಬಂತೆ ಮಿಸುಕಾಡಲು ಬಿಡದ ಹಟ.

ಹೌದಲ. ನೀ ಹೇಳಿದ್ದು ಸತ್ಯವೇ. ಯಾರಿಗಾಗಿ ಬದುಕುತ್ತಿರುವೆ? ಯಾರ ಬದುಕಿನಲ್ಲಿ ನಾನಿರುವೆ? ನನಗಾಗಿ ಏನಾದರೂ ಇದೆಯೆ? ಎಲ್ಲದಕ್ಕೂ ಉತ್ತರ ಉಹೂಂ. ನಿಜ ಕಣೊ ನೀನು ಹೇಳಿದ್ದರಲ್ಲಿ ಸುಳ್ಳಿಲ್ಲ. ನನಗಾಗಿ ಬದುಕೋದು ಯಾವಾಗ ಅಂತ ಲೆಕ್ಕ ಹಾಕುತ್ತಿರುವೆ. ಹಾಗೆ ಹೇಳಿದ್ದೇ ತಡ, ‘ಆ ಲೆಕ್ಕ ಹಾಕೋದು ಪದನ ನಿನ್ನ ಡಿಕ್ಷನರಿಯಿಂದ ತೆಗೆದು ಬಿಸಾಕು.’

ಅಬಾಬಬ ಆ ನಿನ್ನ ಕೋಪಕ್ಕೆ ನಡುಗಿಹೋದೆ. ಹಾಗೇ ಕರಗಿಯೂ ಹೋದೆ. ಈ ಪ್ರೀತಿಯ ಅಧಿಕಾರ ಅಧಿಕವಾಗಿ ಸುರಿಮಳೆಯಾದಷ್ಟೂ ಖುಶಿಯೋ ಖುಶಿ.

ಹೌದು ಕಣೊ. ಬದುಕುವೆ ಮೊದಲು ನನಗಾಗಿ. ಆಮೇಲೆ ನಿನಗಾಗಿ. ಎಲ್ಲಾ ಹೆಣ್ಣುಗಳಿಗೂ ಈ ತರಹ ಪಾಠ ಹೇಳಿ, ಪ್ರೀತಿ ಕೊಡುವವರಿದ್ದರೆ… ಬಹುಶಃ ಇದು ಅದೃಷ್ಟ ಇದ್ದವರ ಪಾಲಿಗೆ ಮಾತ್ರ ದಕ್ಕುವಂಥದ್ದೇನೊ? ಇಲ್ಲಿ ಸ್ವಾರ್ಥ ಜಾಗ್ರತ. ನಾನಂತೂ ಪಡೆದ ಪುಣ್ಯವಂತೆ.

ನನಗಾಗಿ, ನಿನಗಾಗಿ, ನನ್ನ ಬಾಯಿಂದ ಈ ಮಾತು ಕೇಳಿ ಮಂಜುಗಡ್ಡೆಯಂತೆ ತಣ್ಣಗಾಗಿದ್ದು ನೋಡಿ, ಇಷ್ಟು ಕೂಲಾಗಿಯೂ ಇರಬಲ್ಲೆಯಾ ಎನಿಸಿತು. ಹಾಗೆ ನೋಡಿದರೆ, ನೀನು ಅದೆಷ್ಟು ಸಂಯಮಿ ಎಂದರೆ ಅವ್ವನ ನೆನಪಾಗುವಷ್ಟು. ಪ್ರೀತಿಯ ಮರೆತು ಹುಚ್ಚಿಯ ಹಾಗೆ ನಡೆದುಕೊಂಡರಷ್ಟೆ ಸಿಟ್ಟು, ಸಿಡುಕು ಇಲ್ಲ ಅಂದರೆ ಐಸ್ ತರಹ.

ಕೊನೆಗೂ ನಿನ್ನ ಹಟ ಸಾಧಿಸಿಯೇ ಬಿಟ್ಟೆ. ನನ್ನನ್ನಾಕ್ರಮಿಸಿ ನೀ ಹೇಳಿದ ಕೇಳುವ ಗೊಂಬೆಯಾಗಿಸಿದೆ. ನನಗೇನು ಕಿಂಚಿತ್ತೂ ಬೇಸರವಿಲ್ಲ. ಹೀಗೇ ಪ್ರೇಮದರಸನಾಗಿ ಆಳುತ್ತಿರು. ಯಾಕೆಂದರೆ, ನಿನ್ನೊಳಗೆ ಪ್ರೀತಿ ಖುಶಿ ಕೊಡೋದು ಬಿಟ್ಟರೆ ಬೇರೆ ಸ್ವಾರ್ಥನೇ ಕಂಡಿಲ್ಲ.

ಅಮೇಲೆ ಹೇಳುವೆ ಅಂದಿದ್ದೆ. ಅದೇನು ಗೊತ್ತಾ? ಯಾವತ್ತೂ ನನ್ನ ಪಾಡಿಗೆ ನಾನಿದ್ದವಳು. ಒಂದಿಷ್ಟೂ ಆಚೀಚೆ ಎನ್ನದವಳು. ಮಾತನಾಡಿಸಲೇ ಹೆದರುವವರು ಸುತ್ತಮುತ್ತ. ಸ್ಟ್ರಿಕ್ಟ್ ಅಂದರೆ ಅತ್ಯಂತ ಸ್ಟ್ರಿಕ್ಟ್. ಆ ನಿನ್ನ ಸವಿಮಾತು, ಕಿವಿಮಾತು, ಪಿಸುಮಾತು ಕ್ಷಣ ಕ್ಷಣಕ್ಕೂ ಮಾರ್ನುಡಿದಂತೆ. ಹಗಲಿರುಳೆನದೆ ಬೆನ್ನು ಬಿದ್ದವನು. ಯಾವ ಸಮಯದಲ್ಲೂ ಇಲ್ಲ ಎನ್ನದೆ ಸಿಗುವವನು. ಕೊನೆಗೆ ನೋಡಿದರೆ, ದೂರ ದೂರ ಓಡುವುದ ಬಿಟ್ಟು ಈಗ ನಿನ್ನ ಆರಾಧನೆಯ ಅಮಲಿನಲ್ಲಿ ಕಳೆದು ಹೋಗಿರುವೆ.

ಸಂತೋಷ, ಸಂತಸ, ಸಂಭ್ರಮದ ಬಾಗಿಲುಗಳು ಮುಚ್ಚೇ ಹೋಗಿದ್ದವೆಂದು ಭ್ರಮಿಸಿದ್ದೆ. ಭ್ರಮೆಯ ಆ ಪೊರೆ ಕಳಚಿ ವಾಸ್ತವ ತೋರಿದೆ.

ನಿನ್ನದೊಂದು ಕೋರಿಕೆ ನಿರಾಕರಿಸುವುದಾದರೂ ಹೇಗೆ? ಆಗವುದೇ ಇಲ್ಲ ಅಂತ ಹೇಳಬಹುದಾದರೂ ಹೇಳಲಾರೆ. ಒಳಗೊಳಗೆ ನನಗೂ ಅದೇ ಅಸೆ. ನಿನ್ನ ಹಾಗೆ ಮನಸು ಬಿಚ್ಚಿ ಹೇಳಲು ಸಾಧ್ಯವಾಗುವುದು ಸ್ವಲ್ಪ ಕಷ್ಟವೇ. ಇರಲಿ ಈಗ ಅದಕ್ಕಾಗಿ ಸಿದ್ಧಳಾಗಲು ಧೈರ್ಯ ತುಂಬಿರುವಿಯಲ್ಲ. ಅಷ್ಟು ಸಾಕು. ಈ ದೇಹದಲ್ಲಿ ನಾನಿಲ್ಲ ನೀನೇ ಎಂದುಕೊಂಡು ನಿನ್ನಾಸೆಯ ಈಡೇರಿಸಲು ಮುಂದಾದೆ.

ಎಲ್ಲಾ ಕಟ್ಟುಪಾಡು ಮೀರಿ, ಸೀಮಿತ ರೇಖೆಗಳ ಉಲ್ಲಂಘಿಸಿ, ಗಡಿದಾಟಿ ಹೊರಟೇಬಿಟ್ಟೆ. ಅದು ನಿನ್ನಡೆಗೆ… ಇಷ್ಟು ಮಾಡಲು ಹೆದರಿ, ಮನದ ಬಯಕೆಗಳಿಗೆ ನೇಣು ಬಿಗಿದು, ಆಸೆಗಳಿಗೆ ಗೋರಿ ಕಟ್ಟಿ, ಅನಾಥಪ್ರಜ್ಞೆಯಿಂದ ನರಳುವುದೇ ರೂಢಿಯಾಗಿತ್ತು. ಆ ಕೂಪದೊಳಗಿಂದ ಹೊರಗೆಳೆದು, ನನ್ನೊಳಗೆ ನೀನಿಳಿದಾಗ ದೇಹ, ಮನಸಿಗೆ ನೂರು ಆನೆಯ ಬಲ.

ಕನಸಿನ ಕಲರವಕೆ ಈಗ ಅರ್ಥಪೂರ್ಣ ಆಲಾಪ. ನಿನಗೆದುರಾಗಿ ಕುಳಿತುಕೊಳ್ಳುವುದೆಂದರೆ ಸಾಮಾನ್ಯದ ಮಾತಲ್ಲ. ನನ್ನ ಪ್ರೀತಿಯ ಹುಡುಗನೆದುರು ಅವನ ಕಣ್ಮಣಿಯಾಗಿ ವಿರಮಿಸಿದಂತೆ. ಸುತ್ತಮುತ್ತಲಿನ ಆ ಗೌಜು, ಗದ್ದಲಿನ ಜಗ ಗೌಣ.

ಇರುಳಿನ ಹವಾನಿಯಂತ್ರಿತ ರೆಸ್ಟಾರೆಂಟ್ ನಲ್ಲಿ, ದುಂಡು ಮೇಜಿನ ಮೇಲೆ, ಬೆಳಗುತ್ತಿರುವ ಮೇಣದ ಬತ್ತಿಗೆ ನಮ್ಮ ಪ್ರೀತಿಯ ಪ್ರಭೆ. ದೀಪದ ಕೆಳಗಿನ ಕತ್ತಲಲಿ ಬೆಸೆದ ಬೆರಳುಗಳು. ಮೈ ಮನವೆಲ್ಲಾ ಬಲ್ಲೆ... ಬಲ್ಲೆ… ಎನ್ನುತ್ತ ಪಂಜಾಬಿ ನೃತ್ಯದ ಹಜ್ಜೆ ಹಾಕಿದಂತೆ ಆ ಕನಸಿನ ಕ್ಯಾಂಡಲ್ ಲೈಟ್ ಡಿನ್ನರ್!

ಪಿಸುಮಾತುಗಳ ನಡುವೆ ಮೆಲ್ಲುಸಿರು. ಮಧುರ… ಮಧುರ… ಅತಿ ಮಧುರ.

ಇದು ವಾಸ್ತವವಾದರೂ, ನಂಬಲಾಗದ ಸತ್ಯ. ಸಾಬೀತುಪಡಿಸಿದ ನಿನ್ನ ಸಾಂಗತ್ಯ ಸ್ವರ್ಗಕ್ಕಿಂತ ಕಡಿಮೆಯೇನಲ್ಲ. ಒಂದಾಗಿ ಹೆಜ್ಜೆ ಇಡುತ್ತ, ಕೈ ಹಿಡಿದು ನಡೆಸೆನ್ನನು ಈ ಸವಿಸುಖದ ಸತ್ಪಥದಲಿ...

*---ಸಿಕಾ*