ನನಸಾಗುತ್ತಿದೆ ಕಾಯಂ ಸಂವಿಧಾನ ಪೀಠದ ಕನಸು

ಮುಖ್ಯ ನ್ಯಾಯಮೂರ್ತಿ ಗೊಗೊಯ್ ಪ್ರಧಾನಿಗೆ ಪತ್ರ ಬರೆದು, ಕಾಯಂ ಸಂವಿಧಾನ ಪೀಠ ರಚನೆಗೆ ಮುಂದಾಗಿದ್ದಾರೆ. ಮುಂದಿನ ತಿಂಗಳು ಈ ಪೀಠ ರಚನೆಯಾಗುವ ನಿರೀಕ್ಷೆಗಳಿವೆ.  

ನನಸಾಗುತ್ತಿದೆ ಕಾಯಂ ಸಂವಿಧಾನ ಪೀಠದ ಕನಸು

ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಸಲ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾಯಂ ಸಂವಿಧಾನ ಪೀಠ ರಚನೆಯಾಗಲಿದೆ.

ಸಂವಿಧಾನ ಅರ್ಥ ವ್ಯಾಖ್ಯಾನ ಮತ್ತು ಗಹನವಾದ ಕಾನೂನಿಗೆ  ಸಂಬಂಧಿಸಿದ  ಪ್ರಕರಣವನ್ನ ಇತ್ಯರ್ಥಗೊಳಿಸಲು  ಕಡೇಪಕ್ಷ ಐವರು ನ್ಯಾಯಾಧೀಶರುಳ್ಳ ಸಂವಿಧಾನ ಪೀಠ ರಚಿಸಲು ಸಂವಿಧಾನದ ಅನುಚ್ಚೇದ 145(3) ಅವಕಾಶ ಕೊಟ್ಟಿದೆ. ಅನುಚ್ಚೇದ 143 ರಡಿಯಲ್ಲಿ ರಾಷ್ಟ್ರಪತಿಯಿಂದ ಈ ಪೀಠಕ್ಕೆ ಪರಾಮರ್ಶನ ಮಾಡಬಹುದು, ಸರ್ವೋಚ್ಚ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಈ ಪೀಠ ರಚಿಸಬೇಕು ಎಂದು ತಿಳಿಸಿದೆ. 

ಸಮಯೋಚಿತವಾಗಿ ಸಂವಿಧಾನಿಕ ಪೀಠ ರಚನೆಯಾಗಿ, ಸಂಬಂಧಿಸಿದ ಪ್ರಕರಣಗಳಲ್ಲಿ ಮಹತ್ತರವಾದ ತೀರ್ಪುಗಳನ್ನ ಕೊಟ್ಟಿವೆ. ಆದರೆ 1950 ರಲ್ಲಿ ಎಂಟು ನ್ಯಾಯಾಧೀಶರಿದ್ದ ಸರ್ವೋಚ್ಚ ನ್ಯಾಯಾಲಯಕ್ಕೀಗ 34 ನ್ಯಾಯಾಧೀಶರಿದ್ದರೂ, ಕಾಯಂ ಆದ ಸಂವಿಧಾನ ಪೀಠ ಇಲ್ಲ.

ಇದುವರೆಗೆ ದ್ವಿಸದಸ್ಯ ಪೀಠ ಮಹತ್ವದ ಪ್ರಶ್ನೆ ಅಡಗಿದೆ ಎನಿಸಿದರೆ ಅದನ್ನ ಮೂವರು ಸದಸ್ಯರ ಪೀಠಕ್ಕೆ ಕೊಡುತ್ತಿತ್ತು. (ಒಟ್ಟು 164 ವಿಚಾರಗಳಿಗೆ ಸಂಬಂಧಿಸಿವೆ) ಅದರಲ್ಲಿ ಮತ್ತಷ್ಟು ಗಂಭೀರತೆ ಇದೆ ಎನಿಸಿದರೆ ಅದನ್ನ ಸಂವಿಧಾನ ಪೀಠಕ್ಕೆ ಪರಾಮರ್ಶೆ ಮಾಡಲಾಗುತ್ತಿತ್ತು. ಏಕ, ದ್ವಿ ಮತ್ತು ಮೂರು ಸದಸ್ಯ ಪೀಠಗಳು ಕಾರ್ಯ ಮಾಡುತ್ತಿದ್ದರೂ ಕಾರ್ಯದೊತ್ತಡ ಅಧಿಕವಾಗಿ, ವಿವರವಾಗಿ ವಾದ ವಿವಾದ ಆಲಿಸಲು ಆಗುತ್ತಿಲ್ಲ.

ಸಾರ್ವಜನಿಕ ಹಿತಾಸಕ್ತಿ, ಹಗರಣಗಳು, ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣಗಳೇ ನ್ಯಾಯಾಲಯದ ಹೆಚ್ಚು ಸಮಯ ಕಬಳಿಸುತ್ತಿವೆ. ನಿರೀಕ್ಷಣಾ ಜಾಮೀನು ಮತ್ತು ಜಾಮೀನು ಕುರಿತಂತೆಯೇ ಏಕ ಸದಸ್ಯ ಪೀಠವಿದೆ. ಅಯೋಧ್ಯೆ ವಿವಾದಕ್ಕೆ ಅಂತಿಮ ಗಡುವು ನಿಗಧಿಸಿಕೊಂಡು ದಿನಕ್ಕೆ ಹೆಚ್ಚುವರಿಯಾಗಿ ಒಂದು ಗಂಟೆ ಕಾಲ, ಪ್ರತಿನಿತ್ಯ ವಿಚಾರಣೆ ನಡೆಯುತ್ತಿದೆ. ವಿವಿಧ ವಿಚಾರಕ್ಕೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚು ಪೀಠಗಳು ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ಕಾಯಂ ಆಗಿ ಐವರು ಸದಸ್ಯರ ಸಂವಿಧಾನ ಪೀಠ, ಸಂವಿಧಾನದಲ್ಲಿ ಹೇಳಿದ್ದರೂ 70 ವರ್ಷಗಳಿಂದ ರಚನೆಯಾಗಿಯೇ ಇಲ್ಲ. ಈಗ ಮುಖ್ಯ ನ್ಯಾಯಮೂರ್ತಿ ಗೊಗೊಯಿ ಪ್ರಧಾನಿಗೆ ಪತ್ರ ಬರೆದು, ಕಾಯಂ ಸಂವಿಧಾನ ಪೀಠ ರಚನೆಗೆ ಮುಂದಾಗಿದ್ದಾರೆ. ಮುಂದಿನ ತಿಂಗಳು ಈ ಪೀಠ ರಚನೆಯಾಗುವ ನಿರೀಕ್ಷೆಗಳಿವೆ.