ಈಗಲೂ ಹೃದಯದೊಳಗೆ ಭದ್ರ : ಡಾ.ಪಿ.ಬಿ.ಶ್ರೀನಿವಾಸರ ಮಾತು !

ನಾವು ಜೀವಂತ ಇದ್ದೇವೆ ಅಂದುಕೊಂಡರೆ ಸಾಕಾ...? ಜೀವಂತ ಹೇಗಿದ್ದೇವೆ... ಎನ್ನುವುದು ಮುಖ್ಯ ಆಗುತ್ತಲ್ಲವಾ...? ಅದಕ್ಕೆ ಹೇಳಿದ್ದು; ಸಾಹಿತ್ಯ ನನ್ನ ಆಸೆ. ಸಂಗೀತ ನನ್ನ ಶ್ವಾಸೆ ಅಂತ. ನನ್ನ ಜೀವನದ ಧ್ಯೇಯ ಯಾರಿಗೂ ನೋವಾಗದಂತೆ ಬದುಕುವುದು. ಹಾಗೆಯೇ ಬದುಕುತ್ತಿದ್ದೇನೆ.

ಈಗಲೂ ಹೃದಯದೊಳಗೆ ಭದ್ರ : ಡಾ.ಪಿ.ಬಿ.ಶ್ರೀನಿವಾಸರ ಮಾತು !

ಮಧುರಧ್ವನಿಯ ಮಹಾನ್ ಗಾಯಕ ಡಾ|| ಪಿ.ಬಿ.ಶ್ರೀನಿವಾಸ್. ಜೀವಂತ ದಂತಕಥೆಯೆನಿಸಿದ್ದ ಅದ್ವಿತೀಯ ಅಮೋಘ ಪ್ರತಿಭೆ, ಈ ನಾಡುಕಂಡ ಅಪರೂಪದ `ಮೆಲೋಡಿ ಕಿಂಗ್’ ಎಂದೇ ಪಿಬಿಎಸ್ ಆರಾಧಕರಿಂದ ಆದರಿಸಲ್ಪಡುವ `ಪ್ರತಿವಾದಿ ಭಯಂಕರ ಶ್ರೀನಿವಾಸ್’ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ- ನೀಡಿದ ಕೊಡುಗೆ ಅನನ್ಯ. ಚಿತ್ರಗೀತೆ- ಭಕ್ತಿಗೀತೆಗಳ ಮಾಧುರ್ಯ ಪ್ರಧಾನಯುಗದಲ್ಲಿ `ಸಿರಿಕಂಠದ ಸೂಪರ್ ಸ್ಠಾರ್’ ಆಗಿ ಮೆರೆದ ಈ ಗಾನಕೋಗಿಲೆ, `ನಟಸಾರ್ವಭೌಮ ಡಾ|| ರಾಜ್‍ಕುಮಾರ್’ರಂತಹ ಚಾರಿತ್ರಿಕ ನಟರಿಗೆ, ಧ್ವನಿಯಾಗಿ ಗುರುತಿಸಿಕೊಂಡು ಬಂದಿದ್ದ ಗಾಯನ ಸಾರ್ವಭೌಮರು. ವರನಟ ಡಾ||ರಾಜ್‍ರವರ `ಕಪ್ಪುಬಿಳುಪು’ ಚಿತ್ರಗಳ ಸಾಮ್ರಾಜ್ಯದಿಂದ ಹಿಡಿದು, ‘ವರ್ಣಮಯ’ ಚಿತ್ರಗಳ ಸುವರ್ಣಯುಗದವರೆಗೂ ಪಿಬಿಎಸ್‍ರವರ ಕಂಠಸಿರಿಯಿಂದ ಮೂಡಿಬಂದಂತಹ ಸಾವಿರಾರು ಸುಶ್ರಾವ್ಯ ಸುಮಧುರ ಗೀತೆಗಳು ಶೋತೃ ಹೃದಯಗಳನ್ನು ಸೂರೆಗೈದಿದ್ದವು. 

ಡಾ|| ರಾಜ್ ಚಿತ್ರಗಳ ಪ್ರತೀ ಹಾಡಿಗೂ ಪಿಬಿಎಸ್‍ರ ಮೋಹಕ ಧ್ವನಿ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ರಾಜ್-ಪಿಬಿಎಸ್ ಕಾಂಬಿನೇಷನ್ ಸುವಿಖ್ಯಾತಿಯ ತುತ್ತ ತುದಿಯನ್ನೇರಿತ್ತು. ಅದೇ ಗತ್ತು, ಅದೇ ಮೋಡಿ ಮಾಡುವ ಮಾಧುರ್ಯದ ಧ್ವನಿ ಮಾಗಿದ ಕಲಾವಿದ- ಹಿರಿಯ ಚೇತನ ಡಾ|| ಪಿಬಿಎಸ್ ಧ್ವನಿಯಲ್ಲಿ ಅನುರಣಿಸುತ್ತದೆ. ಅಂತಹ ಮಧುರ ಧ್ವನಿಯ ಮಹಾನ್ ಗಾಯಕ, ಗೀತೆರಚನೆಕಾರರಾಗಿ- ಸ್ವರ ಸಂಯೋಜಕರಾಗಿ, ಕವಿಗಳಾಗಿಯೂ ಸುಪ್ರಸಿದ್ಧರೆನಿಸಿದ್ದವರು. ಮೇರು ಗಾಯಕ ಡಾ|| ಪಿ.ಬಿ. ಶ್ರೀನಿವಾಸ್ ಅವರು ಚೆನ್ನೈನ ಹೋಟೆಲ್‍ನಲ್ಲಿ ದೋಸೆ ತಿನ್ನುತ್ತಾ, ತಿನಿಸುತ್ತಾ ಉಲ್ಲಾಸಿತ ಭಾವದಿಂದ ಮಾತಿಗಿಳಿದಿದ್ದರು...ಆ ಕ್ಷಣಗಳನ್ನು ಅವರಿಲ್ಲದ ಈ ಸಂದರ್ಭದಲ್ಲಿ ಕಟ್ಟಿಕೊಡುವ ಪ್ರಯತ್ನವಿದು! ಅವರ ಸಾವಿಗೆ ಮೂರು ವರ್ಷ (ನಿಧನ; 14/04/2013) ಮುನ್ನ ನಡೆಸಿದ್ದ ಸಂದರ್ಶನವಿದು...(ಅವರೀಗ ಇದ್ದಿದ್ದರೆ ತೊಂಭತ್ತಾಗುತ್ತಿತ್ತು- ಹುಟ್ಟಿದ್ದು; 22/09/1930)

* ನೀವಿನ್ನೂ ಅದೇ ಹುಮ್ಮಸ್ಸು, ಯುವಕರೂ ನಾಚುವಂಥ ಆತ್ಮವಿಶ್ವಾಸದಿಂದ ಹಾಡುತ್ತಿದ್ದೀರಿ. ಈಗಲೂ ಅದು ಹೇಗೆ ಬಿಸಿರಕ್ತದ ತರುಣನಂತೆ ರೂಪುಗೊಳ್ಳುತ್ತೀರಿ...? ಈ ಹುಮ್ಮಸ್ಸು ಮತ್ತು ಆತ್ಮವಿಶ್ವಾಸದ ಹಿಂದೆ ಇರುವ ರಹಸ್ಯ ಬಹಿರಂಗ ಪಡಿಸೋಕೆ ಸಾಧ್ಯಾನಾ...?

ಸಾಹಿತ್ಯ ನನ್ನ ಆಸೆ, ಸಂಗೀತ ನನ್ನ ಶ್ವಾಸೆ. ಹಾಗಾಗಿ ನನಗೆ ಹುಮ್ಮಸ್ಸಿದೆ. ಹಾಡುತ್ತಲೇ ಇರಬೇಕೆಂಬ ಆತ್ಮದ ಕರೆಯಿದೆ. ದೇವರಿಗೆ ನಮಸ್ಕಾರ ಹೇಳಿ ಹಾಡುತ್ತೇನೆ. ಈಗಲೂ ನನ್ನನ್ನು ಹಾಡುವಂತೆ ಪ್ರೇರೇಪಿಸುವ ನಿಮ್ಮಂಥವರಿದ್ದಾರೆ. ಅದು ನನ್ನ ಪುಣ್ಯ. ಈಗಲೂ ಕನ್ನಡದ ಎಷ್ಟೋ ಜನ ಟಿವಿಯಲ್ಲಿ, ರೇಡಿಯೋದಲ್ಲಿ ನನ್ನ ಹಾಡು ಕೇಳಿ ಮೈಮರೆಯುವವರಿದ್ದಾರೆ. ಅವರೆಲ್ಲರ ಪ್ರೀತಿ ನನ್ನನ್ನು ರೋಮಾಂಚನಗೊಳಿಸುತ್ತೆ. ಬರೆಯುವಂತೆ, ಹಾಡುವಂತೆ ಮಾಡುತ್ತೆ. ಜನರ ಪ್ರೀತಿಯೇ ಇಲ್ಲದೆ ಕಲಾವಿದ ಬದುಕೋದಿಲ್ಲ. ನಾನು ಹಾಡುತ್ತಲೇ ಇರಬೇಕು ಅಂತ ದೇವರು, ಜನ ಇಷ್ಟಪಟ್ಟರೆ ನಾನು ಹಾಡದೇ ಇರಲು ಸಾಧ್ಯವೇ...?

ನಾವು ಜೀವಂತ ಇದ್ದೇವೆ ಅಂದುಕೊಂಡರೆ ಸಾಕಾ...? ಜೀವಂತ ಹೇಗಿದ್ದೇವೆ... ಎನ್ನುವುದು ಮುಖ್ಯ ಆಗುತ್ತಲ್ಲವಾ...? ಅದಕ್ಕೆ ಹೇಳಿದ್ದು; ಸಾಹಿತ್ಯ ನನ್ನ ಆಸೆ. ಸಂಗೀತ ನನ್ನ ಶ್ವಾಸೆ ಅಂತ. ನನ್ನ ಜೀವನದ ಧ್ಯೇಯ ಯಾರಿಗೂ ನೋವಾಗದಂತೆ ಬದುಕುವುದು. ಹಾಗೆಯೇ ಬದುಕುತ್ತಿದ್ದೇನೆ.

ಸಾಹಿತ್ಯ ಮತ್ತು ಸಂಗೀತ ನಮ್ಮ ಮನಸ್ಸು, ಭಾವನೆ, ಜೀವನ ವಿಧಾನದಲ್ಲಿ ಪರಿವರ್ತನೆ ತಂದುಕೊಡುತ್ತೆ. ಸಾಹಿತ್ಯ ಮತ್ತು ಸಂಗೀತ ಅತ್ಯುತ್ತಮವಾಗಿದ್ದರೆ ಮಾಧುರ್ಯ ಕಟ್ಟಿಕೊಡುತ್ತೆ... 

* ಡಾ||ರಾಜ್‍ಕುಮಾರ್ ರವರಿಗೆ ಶಾರೀರವಾಗಿದ್ದವರು ನೀವು. ಸಿನಿಮಾದಲ್ಲಿ ಯಾವುದಾದರೂ ಪಾರ್ಟು ಸಿಗುತ್ತಾ ಅಂತ ಬಹಳ ಆಸೆಯಿಂದ ನೀವು ಬಂದವರೆಂದು ಕೇಳಿದ್ದೇನೆ. ಅಭಿನಯ ಬಿಟ್ಟು ಹಾಡಲು ಶುರು ಮಾಡಿದ್ದು ಹೇಗೆ...? ಡಾ|| ರಾಜ್‍ಕುಮಾರ್ ರವರ ಶಾರೀರದವರೆಗೆ ಬೆಳೆದಿದ್ದು ಹೇಗೆ...?

ಡಾ||ರಾಜ್ ಎಂದರೆ ದೊಡ್ಡ ಹೆಸರು. ಅವರೊಬ್ಬ ಬಂಗಾರದ ಮನುಷ್ಯ ಆಗಿದ್ದರು. ಬಂಗಾರದ ಮನುಷ್ಯ ತಕ್ಕಂತಹ ಹೆಸರು ರಾಜ್‍ರಿಗೆ. ಉಚ್ಛ್ರಾಯ ಸ್ಥಿತಿಯಲ್ಲೂ ವಿನಯ... ಬಿಟ್ಟು ಕೊಡುತ್ತಿರಲಿಲ್ಲ. ಪೂರ್ವಪುಣ್ಯದ ಫಲವೇ ಅವರ ವಿನಯ. ಅದು ಅವರ ಗುಣಮಣಿ, ಅದಕ್ಕೆ ಶಿರಬಾಗ್ತೇನೆ. ಎಲ್ಲರೂ ಅವರಿಂದ ಕಲಿಯಬೇಕಾಗಿದ್ದು ಇದನ್ನೇ. ವಿನಯವೇ ವಿಜಯದ ಕಿರೀಟ, ಆ ಕಿರೀಟವನ್ನು ತಲೆಯಲ್ಲಿ ಧರಿಸಬೇಕು. ಆಗಲೇ ರಾಜ್‍ರವರ ಹಾಗೆ ಆಗಲು ಸಾಧ್ಯ. ವಿನಯದ ಕಿರೀಟ ತಲೆಮೇಲಿದ್ದರೆ ಜೀವನದಲ್ಲಿ ತೊಂದರೆಗಳೂ ಇರೋದಿಲ್ಲ.

ಡಾ|| ರಾಜ್‍ಕುಮಾರ್, ಕಲ್ಯಾಣಕುಮಾರ್, ಉದಯ್‍ಕುಮಾರ್ ಗಳೆಂಬ `ಕುಮಾರ್'ಗಳ ಕಾಲವೆಂದರೆ ಸಂಗೀತಕ್ಕೆ ಬಂಗಾರದ ಕಾಲ. ದೊಡ್ಡವನಾಗಿದ್ದರೂ ನನ್ನ ಧ್ವನಿಯಲ್ಲಿ ಸ್ತ್ರೀ ಮಾಧುರ್ಯತೆ ಇತ್ತು. ಸ್ಕೂಲಿಗೆ ಹೋಗುತ್ತಿದ್ದಾಗಲೇ ಹಾಡು ಹೇಳುತ್ತಿದ್ದೆ. ದೊಡ್ಡವನಾದ ಮೇಲೂ ಅದು ಮುಂದುವರೆಯಿತು. ಹಿಂದಿ ಸಿನಿಮಾಗಳ ಹುಚ್ಚು. ಲತಾ ಮಂಗೇಶ್ಕರ್ ಹಾಡುಗಳೆಂದರೆ ಎಲ್ಲಿಲ್ಲದ ವ್ಯಾಮೋಹ. ಸಿನಿಮಾದ ನಂಟುಗಳಿಸಬೇಕೆಂಬುದೇ ನನ್ನ ಕನಸಾಗಿತ್ತು.

ಆದರೆ, ಜ್ಯೋತಿಷಿಯೊಬ್ಬ ನನ್ನ ತಂದೆಯ ಬಳಿ ಬೇರೆಯದನ್ನೇ ಹೇಳಿಬಿಟ್ಟಿದ್ದ. ಈ ಶ್ರೀನಿವಾಸ್ ಚಿತ್ರ ಸೀಮೆಗೆ ಬರೋದೇ ಇಲ್ಲ. ಸುಮ್ಮನೆ ಹುಚ್ಚು. ಜೀವನ ಹಾಳುಗುತ್ತೆ ಅಂದಿದ್ದ. ನನ್ನ ಧ್ಯೇಯವೇ ಸಿನಿಮಾ ಆಗಿತ್ತು. ಅಲ್ಲಿಯೇ ನನ್ನ ಬದುಕು ಎಂಬುದು ಮಾತ್ರ ನನಗೆ ಸ್ಪಷ್ಟವಾಗಿ ಹೋಗಿತ್ತು.

ಡಾ|| ರಾಜ್‍ರವರ `ಓಹಿಲೇಶ್ವರ’ ಚಿತ್ರದ ಸಂದರ್ಭ. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶಕರು. `ನಾ ಪಾಪವನ್ನೇನಾ ಮಾಡಿದೆನು....’ ಎಂಬ ಹಾಡಿನಿಂದ ನಿಜವಾದ ನನ್ನ ಹಾಡುಗಾರನ ಬದುಕು ಆರಂಭವಾಯಿತು. ಬಹಳ ಜನಕ್ಕೆ ಗೊತ್ತಿಲ್ಲ.. ಡಾ|| ರಾಜ್‍ರವರು ಇದೇ `ಓಹಿಲೇಶ್ವರ’ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದರು. ನನಗೆ ನೆನಪಿರುವ ಹಾಗೆ ಆ ಹಾಡು `ಶರಣುಶಂಭು’ ಎಂದು ಆರಂಭವಾಗುತ್ತೆ.

ಕನ್ನಡ ಚಿತ್ರಗೀತೆಗಳನ್ನು ಹಾಡಲಾರಂಭಿಸುವ ಮೊದಲಿರಬೇಕು. ಧರ್ಮೆಂದ್ರ ಮತ್ತು ಮೀನಾಕುಮಾರಿ ಜೋಡಿಯ ಒಂದು ಹಿಂದಿ ಚಿತ್ರ ಬಂದಿತ್ತು. `ಮೈ ಭೀ ಲಡ್ಕೀ ಹ್ಞುಂ’ ಅಂತ ಆ ಚಿತ್ರದ ಹೆಸರು. ಅದರಲ್ಲಿ ಒಂದು ಹಾಡಿದೆ- `ಚಂದಾ ಸೇ ಹೋಗಾ ಪ್ಯಾರಾ’ ಎಂಬ ಹಾಡು ಹಾಡಿದ್ದೆ. ಲತಾ ಮಂಗೇಶ್ಕರ್ ಜೊತೆ ಹಾಡಬೇಕೆಂಬುದು ನನ್ನ ಅತಿ ದೊಡ್ಡ ಆಸೆಯಾಗಿತ್ತು. ಬಹಳ ವರ್ಷಗಳವರೆಗೆ ಸಾಧ್ಯವಾಗಲಿಲ್ಲ. ಹಿಂದೆ ಚಿತ್ರದ ಹಾಡು ಕೇಳಿ ಕನ್ನಡದಲ್ಲಿ ಸೋಲೋ ಮಾದರಿ ಹಾಡು ಹಾಡಲು ಅವಕಾಶ ಮಾಡಿಕೊಟ್ಟಿದ್ದು ನಾಗೇಂದ್ರ ನಾಯಕ್. ಎ.ವಿ.ಎಸ್.ಸ್ಟುಡಿಯೋದಲ್ಲಿ ಆರ್.ಗೋವರ್ಧನ್ ಮ್ಯೂಸಿಕ್ ಡೈರೆಕ್ಷನ್‍ನಲ್ಲಿ `ಚಿಂತಿಸದಿರು ರಮಣೀ’ಯಂಥ ಹಾಡು ಹಾಡಿದೆ.

`ಓಹಿಲೇಶ್ವರ’ ಚಿತ್ರದಲ್ಲಿ ಹಾಡಿದ `ನಾ ಪಾಪವನೇನಾ ಮಾಡಿದೆನು...’ ಹಾಡಿನಿಂದಾಗಿ ದೊಡ್ಡ ಅವಕಾಶವೇ ಸಿಕ್ಕಿತು. ಡಾ|| ರಾಜ್‍ರವರ `ಭಕ್ತ ಕನಕದಾಸ’ದಲ್ಲಿ ನನ್ನವೇ ಎಲ್ಲಾ ಹಾಡುಗಳು. ಎಲ್ಲಾ ಹಾಡುಗಳು ಹಿಟ್ ಆದವು. ಎಂ.ವಿ.ರಾಜ್ ಆ ಚಿತ್ರದ ಸಂಗೀತ ನಿರ್ದೇಶಕರು. `ಭಕ್ತಕನಕದಾಸ’ ಚಿತ್ರದಲ್ಲಿ ಹಾಡಿದ ಪ್ರತಿಯೊಂದು ಹಾಡೂ ಸಾಂಪ್ರದಾಯಿಕ ಹಳೆಧಾಟಿಯನ್ನು ಬಿಟ್ಟು ಹೊಸ ಧಾಟಿಯಲ್ಲಿತ್ತು. ಎಲ್ಲಾ ಹಾಡುಗಳೂ ಹಿಟ್ ಆದಾಗ ಡಾ|| ರಾಜ್ ಬಹಳ ದೊಡ್ಡತನದಿಂದ ಮಾತಾಡಿ....`ನನಗೆ ಇನ್ನು ಮೇಲೆ ಇವರೇ ಹಾಡಲಿ’ ಎಂದು ತಮ್ಮ ಪಾಲಿನ ಅವಕಾಶವನ್ನು ನನಗೆ ಬಿಟ್ಟುಕೊಟ್ಟರು. ನಾನು ಯಾವಾಗಲೂ ಡಾ||ರಾಜ್‍ರಿಗೆ ಚಿರಋಣಿ. ಆಗಲೇ ಗಾಯಕರಾಗಿದ್ದ ಡಾ|| ರಾಜ್‍ರಿಗೆ ನಾನು ಶಾರೀರವಾಗುವಂತಾಯಿತು.

* ಈಗ ಪ್ರತಿಯೊಂದೂ ಬದಲಾಗಿದೆ. ಹೊಸ ಹೊಸ ತಂತ್ರಜ್ಞಾನ, ವಿಜ್ಞಾನ ವಿನಾಶದ ಕಡೆಗೆ ಹೊರಟಿದೆ. ಸಂಗೀತದ ಅಬ್ಬರದಿಂದ ಜನಾಂಗವೇ ದಿಕ್ಕು ತಪ್ಪುವಂತಾಗಿದೆ. ಈ ಬಗ್ಗೆ ನಿಮ್ಮಲ್ಲಿ ಆತಂಕ ಮೂಡುತ್ತಿಲ್ಲವಾ...?

ರೇಡಿಯೋ ಇದ್ದ ಕಾಲದಲ್ಲೂ ಹಾಡುತ್ತಿದ್ದೆ. ಆಗಲೂ ರೇಡಿಯೋ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ. ರೇಡಿಯೋ ಇದೆ ಎಂದರೆ ಶ್ರೀಮಂತರು ಅಂತಿತ್ತು. ಆಮೇಲೆ ಮನೆ ಮನೆಗೂ ರೇಡಿಯೋ ಬಂತು. ವಿಜ್ಞಾನ- ತಂತ್ರಜ್ಞಾನದ ಪ್ರಗತಿಯಿಂದ ದೂರ (ಡೋರ್) ದರ್ಶನ ಬಂತು. ಹೊಸ ಬದಲಾವಣೆಗಳಾದವು. ಸಂಗೀತ, ಸಾಹಿತ್ಯ, ಜೀವನದ ಪರಿ ಬದಲಾಯಿತು. ಆದರೂ ಸಂಗೀತಕ್ಕೆ ಮೆಲೋಡಿ ಮುಖ್ಯ, ಅಷ್ಟೇ ಸಾಹಿತ್ಯವೂ ಮುಖ್ಯ. ಮಾಧುರ್ಯವೇ ಇಲ್ಲದಿದ್ದರೆ ಸಂಗೀತ ಇಷ್ಟ ಆಗೋದೆ ಇಲ್ಲ. ನೋಡಿ, ಫೈಟ್‍ಗೂ ಮ್ಯೂಸಿಕ್ ಇರುತ್ತೆ. ಆದರೆ, ಅದನ್ನು ಕೇಳೋರು ಯಾರು? ನಮ್ಮ ಮನಸ್ಸು, ಭಾವನೆ, ಜೀವನ ವಿಧಾನದಲ್ಲಿ ಪರಿವರ್ತನೆ ಬಂದರೂ ಮಾಧುರ್ಯತೆ ಬಿಟ್ಟು ಕೊಡೋಕೆ ಆಗೋಲ್ಲ. ಡೋರ್ ದರ್ಶನ್(!)ದಲ್ಲಿ ಈಗಲೂ ನನ್ನ ಹಾಡು ಕೇಳೋ ಲಕ್ಷಾಂತರ ಜನ ಇದ್ದಾರಲ್ಲವೇ? ಅವರಿಗೆಲ್ಲಾ ಮೆಲೋಡಿ ಸಂಗೀತ ಮುಖ್ಯ. ಇಂಪಾದ ಹಾಡು ಕಟ್ಟಿಕೊಡೋ ಸಾಹಿತ್ಯ ಮುಖ್ಯ.
ಸಾಹಿತ್ಯ ಮತ್ತು ಸಂಗೀತದ ಹೊಂದಾಣಿಕೆ ಇಂಪುತನ ಕಟ್ಟಿಕೊಡುತ್ತೆ. ಡಾ|| ರಾಜ್‍ಕುಮಾರ್ ಹಾಡಿದ `ಕಣ್ಣೀರಧಾರೆ ಇದೇಕೆ’ ಎಂಬ ಹಾಡು ಈಗಲೂ ನನ್ನಲ್ಲಿ ಕಣ್ಣೀರು ಬರಿಸುತ್ತೆ. ನಾನು ಹಾಡಿದ ಹಾಡುಗಳನ್ನೇ ನೋಡಿ. ಶೃಂಗಾರ, ವೇದಾಂತ, ಫಿಲಾಸಫಿ ಅಲ್ಲಿರುತ್ತದೆ. ಕೂಗಾಟದ ಹಾಡು ಹೇಳುವ ಸಂದರ್ಭ ನನಗೆ ಬರಲೇ ಇಲ್ಲ.

* ನೀವು ತಮಿಳು ನಾಡಿನಲ್ಲಿರುವವರು. ಈಗಲೂ ಕನ್ನಡದ ಹಾಡುಗಳನ್ನೂ ಹಾಡುತ್ತಿರುವವರು. ಭಾಷೆಯ ಜಗಳಗಳು ನಿಮ್ಮ ಮೇಲೆ ಪರಿಣಾಮ ಬೀರಲಿಲ್ಲವಾ? ಕನ್ನಡ ಸಿನಿಮಾಗಳಲ್ಲಿ ಹಾಡಲು ನಿಲ್ಲಿಸಿದ ನಂತರದಲ್ಲಿ... ತಮಿಳುನಾಡಿನಲ್ಲಿ ಕನ್ನಡ ಮರೆತು ಹೋದಂತಾಗಲಿಲ್ಲವಾ...?

ಒಂದು ಕಾಲದಲ್ಲಿ ಕನ್ನಡದ ಫಿಲ್ಮ್ ಇಂಡಸ್ಟ್ರಿ ಇದ್ದಿದ್ದೇ ತಮಿಳುನಾಡಿನಲ್ಲಿ ಅನ್ನೋದು ನಿಮಗೂ ಗೊತ್ತು. ಭಾಷೆಯ ಜಗಳಗಳು ರಾಜಕೀಯಕ್ಕೆ ಮುಖ್ಯ ಆಗುತ್ತವೆ ಎನ್ನುವುದು ಬಿಟ್ಟರೆ ಕಲಾವಿದನಾದ ನನಗೆ, ನನ್ನಂಥವರಿಗೆ ಭಾಷೆಯ ಜಗಳಗಳು ನೀರಿನ ಜಗಳಗಳಷ್ಟೇ ಗೌಣ. ನನಗೆ 8 ಭಾಷೆಗಳ ನಂಟಿದೆ. ಎಂಟೂ ಭಾಷೆಗಳಲ್ಲಿ ನನಗೆ ಬರೆದು ಅಭ್ಯಾಸವಿದೆ. 64 ಗೀತೆಗಳ ಪುಸ್ತಕ `ಪ್ರಣವಂ’ ಅದಕ್ಕೆ ಇತ್ತೀಚಿನ ಸಾಕ್ಷಿ.

ನಾನು ಎಲ್ಲ ಭಾಷೆಗಳ ಪ್ರೇಮಿ. ಕಲೆ, ಸಂಗೀತ ನನ್ನ ಭಾಷೆ, ಪ್ರಪಂಚ ನನ್ನ ಊರು, ತಾಯಿಯನ್ನು ಪ್ರೀತಿಸುವ ಹಾಗೆ ಆಕೆಯ ಸಹೋದರಿಯರನ್ನೂ ಪ್ರೀತಿಸಬೇಕು. ಅನುಭವಕ್ಕಿಂತ ಅತಿದೊಡ್ಡ ಭಾಷೆ ಯಾವುದಿದೆ ಹೇಳಿ?! ವಿಶ್ವವೇ ವಿಶ್ವವಿದ್ಯಾನಿಲಯ. ಅನುಭವವೇ ಪಾಠಗಳು. ಈ ಪಾಠಗಳಿಲ್ಲದಿದ್ದರೆ ನಾನೇ ದೈವ ಎನ್ನುವ ಅಹಂಕಾರ ಬಂದುಬಿಡುತ್ತದೆ. ಇದು ನನ್ನ ಜೀವನದ ಮಾತು. ಪ್ರೀತಿ ಎಂಬುದೇ ನೀತಿ. ದ್ವೇಷದಿಂದಲೇ ನಾಶ. ಅನುಮಾನ ಬೇಡ...

ಭಾಷಾ ಪುಲ್ ಹೈ
ದಿವಾರ್ ನಹೀಂ
ಭಾಷಾ ಫೂಲ್ ಹೈ
ತಲವಾರ್ ನಹೀಂ

-ಭಾಷೆ ಹೃದಯಗಳ ಸೇತುವೆಯಾಗಬೇಕು. ಸಂಗೀತ ದೈವವಾಗಬೇಕು. ಹಾವಿಗೆ ಕಿವಿಯಿಲ್ಲ. ಆದರೂ ಪುಂಗಿ ಊದಿದಾಗ ಸ್ಪಂದಿಸುತ್ತೆ. ಅದರ ಕಣ್ಣು ಸಂಗೀತ ಕೇಳುತ್ತೆ! Love to Live- Live to Love ಇಲ್ಲಿ ನಾನು ಎಲ್ಲವನ್ನೂ ಹೇಳಿದ್ದೇನೆ. ಭಾಷೆಯಲ್ಲಿರುವ ಅಂದ ಚೆಂದಗಳು ಮುಳುಗಿ ಈಜಿದವರಿಗೆ ಮಾತ್ರ ಗೊತ್ತಾಗುತ್ತೆ.

ನಿಮಗೆ ಆಶ್ಚರ್ಯವಾಗಬಹುದು ಎಂಟು ಭಾಷೆಗಳಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಪದ್ಯಗಳನ್ನು ಬರೆದಿದ್ದೇನೆ. 

* ನೀವು ಅದ್ಭುತ ಗಾಯಕರು. ಅತ್ಯುತ್ತಮ ಕವಿಗಳು. ಅತ್ಯುತ್ತಮ ಮಾತುಗಾರರು. ಅಷ್ಟೇ ಅತ್ಯುತ್ತಮವಾದ ದೈವಭಕ್ತಿಯುಳ್ಳವರು. ಇಷ್ಟೆಲ್ಲದರ ನಡುವೆಯೂ ‘ಪದ ಪಿತಾಮಹ’ ಎಂದೇಕೆ ನಿಮ್ಮನ್ನು ಕರೆಯುತ್ತಾರೆ...?

‘ಪದ ಪಿತಾಮಹ’ ಅಂತಾನಾ? ನಂಗೇ ಗೊತ್ತಿಲ್ಲ (ನಗು). ಪದಗಳನ್ನು ಉಲ್ಟಾಪಲ್ಟಾ ಮಾಡುತ್ತಿರುತ್ತೇನೆ. ಒಡೆಯುತ್ತಲೂ ಇರುತ್ತೇನೆ. Live ನ್ನು Wrong Side ನಿಂದ ನೋಡಿ, Evil ಆಗುತ್ತದೆ. ಜೀವನವೂ ಹಾಗೇನೇ; ಸರಿಯಾದ ದಿಕ್ಕಿನಿಂದಲೇ ನೋಡಬೇಕು. ಇಲ್ಲದಿದ್ದರೆ Evil ಗಳಾಗಿ ಬಿಡುತ್ತೇವೆ. ‘0’-ಇದು ಸೊನ್ನೆ. ಶೂನ್ಯ ಅಂತೇವೆ. ಹಾಗಲ್ಲ, ಅದು ‘ಸಂಪೂರ್ಣ’ ಅಂತ ನೋಡಬಾರದೇಕೆ? God, Good ನಲ್ಲಿ ಈ ಸಂಪೂರ್ಣತೆ ಕಂಡುಬರುತ್ತೆ. ಅಸತೋಮಾ, ತಮಸೋಮಾ, ಮೃತ್ಯೋಮಾ ಅಂತೇವೆ, ತಪ್ಪು ಅನಿಸುತ್ತದೆ. ಅಸತೋಮಾಂ, ತಮಸೋಮಾಂ, ಮೃತ್ಯೋಮಾಂ ಎಂದಿರಬೇಕು. ಇಲ್ಲಿಯೂ ತಪ್ಪಿದ್ದೇವೆನಿಸುತ್ತೆ. ಅಸಮತೋಮಾಂ ಆದ ಮೇಲೆ ಮೃತ್ಯೋಮಾಂ ಬರಬೇಕು ಆನಂತರ ತಮಸೋಮಾಂ ಇರಬೇಕು. ನನಗೆ ಹಾಗನಿಸುತ್ತೆ. ಭಾಷೆ ಎಂಬುದು ಸಾಗರ. ಕಡಲನ್ನು ಕಡೆದು ಅಮೃತ ತೆಗೆಯಬೇಕು.

‘ಅ’ದಿಂದ ಭಾಷೆ ಆರಂಭವಾಗುತ್ತದೆ. ‘ಆ’ದಿಂದ ಸಂದೇಶ ಸಿಗುತ್ತದೆ. ಅದು ಹೇಗೆ? ಅ- ಅಹಂಕಾರ, ಅಸೂಯೆ ಬಾಳಿನಲ್ಲಿ ಮೊದಲ ಇಂಥ ಮೆಟ್ಟಿಲುಗಳನ್ನು ದಾಟಿದರೇನೇ ‘ಆ’ನಂದ ಸಿಗೋದು. ಇದು ಜೀವನದ ಸಂದೇಶ.

* ನಿಮಗೆ ಆಶ್ಚರ್ಯವೆನಿಸಿದ ಸಂಗತಿಗಳ ಬಗ್ಗೆ ಹೇಳಿ...

* ನಾನು ಸೌತ್ ಆಫ್ರಿಕಾಕ್ಕೆ ಹೋದಾಗ ಒರಿಜಿನಲ್ ‘ಓಂ’ ಮ್ಯೂಸಿಕ್ ಕೇಳಿದ್ದು ಈಗಲೂ ನನಗೆ ಆಶ್ಚರ್ಯ. ಭಾರತದ ‘ಓಂ’ ದಕ್ಷಿಣ ಆಫ್ರಿಕಾದಲ್ಲಿ  ಒರಿಜಿನಾಲಿಟಿ ಉಳಿಸಿಕೊಂಡಿದ್ದಾದರೂ ಹೇಗೆ? ಅಂತ ಆಶ್ಚರ್ಯವಾಯ್ತು.

* ಮಹಾಗಾಯಕ + ಮಹಾನಾಯಕ ಡಾ|.ರಾಜ್‍ರಿಗೆ ನಾನು ಹಾಡಿದ್ದು. ಅವರ ಶಾರೀರ ಆದುದು ಕಡಿಮೆ ಆಶ್ಚರ್ಯದ ಸಂಗತೀನಾ?

* ಲತಾಮಂಗೇಶ್ಕರ್ ಜೊತೆ ಹಾಡಿದ್ದು.

* ಡಾ|.ರಾಜ್‍ರವರು ಅದೊಂದು ದಿನ ಒಟ್ಟಿಗೇ ಒಂದಾದ ಮೇಲೊಂದರಂತೆ 12 ಗೀತೆಗಳನ್ನು ಹಾಡಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ

* ಈಗಲೂ ದೇಶ- ವಿದೇಶಗಳಲ್ಲಿ ನಿಮ್ಮ ಹಾಡಿನ ಕಾರ್ಯಕ್ರಮಗಳಿರುತ್ತವೆ. ಈ ನಡುವಿನ ಬಿಡುವಿನಲ್ಲಿ ನಿಮ್ಮ ಸಾಧನೆಯ ವಿನೂತನ ಹೆಜ್ಜೆಗಳ ಕುರಿತು ಮಾತನಾಡುತ್ತೀರಾ...?

ನಾನು ‘ಸ್ವರಜ್ಞಾನ ಶೂನ್ಯ’ ಬಿರುದು ಪಡೆದು ಬೆಳೆದವನು. ಕರ್ನಾಟಕ ಸಂಗೀತ ಡೈಮಂಡ್ ಕೀ ಇಟ್ಟುಕೊಂಡು ಪದ್ಯಶಾಸ್ತ್ರದಲ್ಲಿ ಹೊಸ ಛಂದಸ್ಸು ಕಂಡುಹಿಡಿದೆ. ಅದಕ್ಕೆ ‘ಶ್ರೀನಿವಾಸ ಗಾಯಿತ್ರಿ ವೃತ್ತಗಳು’ ಎಂದು ನಾಮಕರಣ ಮಾಡಿದ್ದೇನೆ. ‘ನವನೀತ ಸುಮಸುಧರಾಗ’ ಎಂಬ ಹೊಸರಾಗ ಕಂಡುಹಿಡಿದಿದ್ದೇನೆ. ಸುಮ ಎಂದರೆ ಶುದ್ಧ ಮಧ್ಯಮ, ಸುಧಾ ಎಂದರೆ ಶುದ್ಧ ದೈವತಾ ಎಂದರ್ಥ. ತ್ಯಾಗರಾಜ ಕೀರ್ತನೆಯನ್ನು ಅಷ್ಟರಾಗಗಳಲ್ಲಿ ಕಂಪೋಸ್ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯವೇ. ಒಂದೇ ಕೀರ್ತನೆ ಎಂಟು ರಾಗಗಳಲ್ಲಿ ಕಂಪೋಸ್ ಮಾಡಿದಾಗ ಎಂ.ಎಸ್.ಸುಬ್ಬಲಕ್ಷ್ಮಿ ತಲೆದೂಗಿ ಭೇಷ್ ಎಂದಾಗ ರೋಮಾಂಚನವಾಗಿತ್ತು.

* ಬದುಕಿನ ಬಗ್ಗೆ ನಿಮ್ಮದೇ ಆದ ದೃಷ್ಟಿಕೋನವಿದೆ. ದೈವವನ್ನು ಬದುಕಿನಲ್ಲಿ ಕಾಣುತ್ತೀರಿ. ಬದುಕು ದೇವರ ಕೃಪೆ ಎನ್ನುತ್ತೀರಿ. ಅತೀವವಾಗಿ ಕಾಡಿದ್ದು ದೈವವೋ...? ಬದುಕೋ...?

ಬದುಕೆಂಬುದು Divine Dictionary.. ದೇವರ ದರ್ಬಾರಿನಲ್ಲಿ ಎಲ್ಲವೂ ಪೂರ್ವ ನಿರ್ಣಿತಗೊಂಡಿದೆ. ನನಗೆ ಬರಬೇಕಾದುದು ಬಂದೇ ಬರುತ್ತೆ. ಅಸೂಯೆಗೆ ಜಾಗ ಕೊಟ್ಟು ಬಿಟ್ಟರೆ ಜೀವನ ಉರಿದು ಹೋಗುತ್ತದೆ. ಅಸೂಯೆ- ಅಹಂಕಾರದ ಗುಣಕ್ಕೆ ಜಾಗವೇಕೆ ಕೊಡಬೇಕು? ನನ್ನ ಪ್ರಕಾರ, ಸಂಗೀತವೂ ದೈವವೇ. ಒಳ್ಳೆಯ ಭಾವನೆಯಿದ್ದರೆ ಅಮೃತ ಮೂಡುತ್ತೆ. ಕೆಟ್ಟ ಭಾವನೆಯಿದ್ದರೆ ವಿಷ ಹುಟ್ಟುತ್ತೆ. ಎಲ್ಲ ಸುಖವಾಗಿರಲಿ- ದುಃಖ ಬರದೇ ಇರಲಿ.

...ಹೀಗೆ, ಗಂಟೆಗಟ್ಟಲೆ ಮಾತನಾಡಿಯೂ ದಣಿಯದ ಮೇರುಗಾಯಕ ಡಾ|.ಪಿ.ಬಿ.ಶ್ರೀನಿವಾಸ್ ತಮ್ಮ ಅನುಭವ-ಅಭಿಪ್ರಾಯಗಳ ಲಹರಿಯನ್ನು ಲಯಬದ್ಧವಾದ ಗೀತೆಯಂತೆಯೇ ಲಾಲಿತ್ಯದಿಂದ ವಿವರಿಸಿದ್ದ ಬಗೆ, ಹಳೆಯ ನೆನಪುಗಳ ಮೆಲುಕಿನೊಂದಿಗೆ Flash back ಗೆ ಹೋಗಿ ಗತವೈಭವ- ವೈಶಿಷ್ಟ್ಯತೆಗಳನ್ನು ಪುನರ್ ಅನಾವರಣಗೊಳಿಸುವಂತಹ ರೀತಿ ಅಚ್ಚರಿ ಮೂಡಿಸಿತ್ತು! ಆ ವಿನಯವಂತ ಮಹಾನ್ ಗಾಯಕನೊಂದಿಗೆ ಕಳೆದ ರಸ ಕ್ಷಣವಂತೂ ಅವಿಸ್ಮರಣೀಯ. ಈಗಲೂ ಅವರೊಂದಿಗೆ ಇದ್ದ ಕ್ಷಣಗಳನ್ನು ಮೆಲುಕು ಹಾಕುತ್ತಲೇ ಇರುತ್ತೇನೆ.