ಕತ್ತೆ ಹಾಲಿನ ಸಿಂಪಲ್ ಕಹಾನಿ!

ಕತ್ತೆ ಹಾಲಿನ ಸಿಂಪಲ್ ಕಹಾನಿ!

`ಹಾಲೂ...ಹಾಲೂ... ಕತ್ತೆ ಹಾಲೂ...’
-ಕೂಗು ಕೇಳಿದ ಕೂಡಲೇ ಹೊರಕ್ಕೆ ಇಣುಕಿದ್ದೆ. ಅಲ್ಲಿ ನಾಗಿ ಆಗಷ್ಟೇ ಮರಿ ಹಾಕಿದ್ದ ತಾಯಿಕತ್ತೆಯನ್ನು ಕತ್ತಿಗೆ ಬೆಲ್ಟು ಬಿಗಿದು ಎಳೆದೊಯ್ಯುತ್ತಿದ್ದಳು.

ಎಳೆಯ ಮರಿಕತ್ತೆ ಅವಳ ಗುಡಿಸಲ ಕಂಬಕ್ಕೆ ಕಟ್ಟಲ್ಪಟ್ಟು, ತನ್ನ ತಾಯಿಯನ್ನು ಎಳೆದೊಯ್ಯುತ್ತಿರುವ ನಾಗಿಯನ್ನೇ ಗುರಾಯಿಸಿ ನೋಡುತ್ತಿತ್ತು. ತಾಯಿಕತ್ತೆ ನಾಗಿಯ ಬಲವಂತಕ್ಕೆ ಎರಡು ಹೆಜ್ಜೆ ಮುಂದಿಡುವುದು, ಹಾಗೆಯೇ ನಿಂತು ಬಿಡುವುದು ಮಾಡುತ್ತಿರುವಾಗ ಹಿಂದಿಂದ ನಾಗಿಯ ಮಗ ದಬ್ಬೆ ಕೋಲಿನಿಂದ ಒದೆಯುತ್ತಿದ್ದ. ಆ ಕ್ಷಣಕ್ಕೆ ಅಲ್ಲೊಂದು ಹೃದಯವಿದ್ರಾವಕ ದೃಶ್ಯ ಸೃಷ್ಟಿಯಾಗಿತ್ತು. ತನ್ನ ಹಕ್ಕನ್ನು ಚಲಾಯಿಸಿ ತನ್ನ ತಾಯಿಯ ಮೊಲೆಯಿಂದ ಹಾಲನ್ನು ಚೀಪಬೇಕಾಗಿದ್ದ ಮರಿಕತ್ತೆ ಕಂಬಕ್ಕೆ ಕಟ್ಟಲ್ಪಟ್ಟು ಒದ್ದಾಡುತ್ತಿತ್ತು. ಇನ್ನೊಂದು ಕಡೆ ನಾಗಿ ತಾಯಿಕತ್ತೆಯ ಹಾಲನ್ನು ಮಾರಲು ಹರಸಾಹಸ ಪಡುತ್ತಿದ್ದಳು. ಇಲ್ಲಿ ನಾಗಿ, ನಾಗಿಯ ಮಗ, ಕತ್ತೆ, ಕತ್ತೆಯ ಮಗು ಎಲ್ಲರೂ ಒಬ್ಬರಿಗೊಬ್ಬರು ಅವಲಂಭಿಸಿದಂತೆ ಕಂಡಿದ್ದು ಸುಳ್ಳಲ್ಲ.

ಕೆರೆಯಂಗಳದ ಕತ್ತೆಗಳಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡು; ಅದರಲ್ಲೂ ಆಗಷ್ಟೇ ಮಗು ಹೆತ್ತ ತಾಯಿಕತ್ತೆಗಳಿಗೆ ಇನ್ನಿಲ್ಲದ ಬೇಡಿಕೆ. ಇಡೀ ಕೆರೆಯಂಗಳದಲ್ಲಿ ಹತ್ತಕ್ಕೂ ಹೆಚ್ಚಿನ ಕತ್ತೆಗಳಿದ್ದರೂ ಅದರಲ್ಲಿ ಮರಿ ಹಾಕಿದ್ದ ತಾಯಿಕತ್ತೆ ಇದ್ದಿದ್ದು ಒಂದೆ. ಅದೂ ಕೂಡ ನಾಗಿಗೆ ಸಂಬಂಧಪಟ್ಟಿದ್ದು. ಕತ್ತೆಗಳ ಜಮಾನ ಮುಗಿದೇ ಹೋಯಿತು, ಕತ್ತೆಗಳ ಜಾಗದಲ್ಲಿ ಯಂತ್ರಗಳು ಬಂದು ಕತ್ತೆಗಳು ಬೇಕಾರ್ ಆದವು ಎಂದೆಲ್ಲ ಬಹಳಷ್ಟು ಜನ ಬಡಬಡಿಸುವುದನ್ನು ಕೇಳಿದ್ದೆ, ನೋಡಿದ್ದೆ. ಸುತ್ತಮುತ್ತಲಿನ ವಾತಾವರಣ ಕೂಡ ಯಂತ್ರಗಳ ಮೊರೆಹೋಗಿತ್ತು. ಬಟ್ಟೆ ತೊಳೆಯುವ ಅಗಸನ ಬದಲು ಅಲ್ಲಿ ವಾಷಿಂಗ್ ಮೆಷಿನ್ ಬಂದಿತ್ತು. ಕೊಳೆ ಬಟ್ಟೆಗಳನ್ನು ಹೊತ್ತು ಸಾಗುವ ಕತ್ತೆಗಳ ದೃಶ್ಯ ನೋಡದೇ ಅದೆಷ್ಟು ವರ್ಷಗಳಾದವೋ! ಅಗಸ ಕೂಡ ಈಗ ಫುಲ್ ಬದಲಾಗಿ ಹೋಗಿದ್ದಾನೆ. ಆತನಿಗೆ ಈಗ ಯಂತ್ರಗಳೇ ಜೀವಾಳ. ಪರಿಸ್ಥಿತಿ ಹೀಗಿರುವಾಗ, ಕತ್ತೆಗಳನ್ನು ಸಾಕುವಲ್ಲಿ ಮುತುವರ್ಜಿ ವಹಿಸುತ್ತಿದ್ದ ನಾಗಿಯಂತಹ ಕತ್ತೆ ಮಾಲೀಕರು ಯಾಕೋ ತಮ್ಮ ಕತ್ತೆಗಳನ್ನೇ ನಿರ್ಲಕ್ಷ್ಯಿಸತೊಡಗಿದರು. ಆ ನಿರ್ಲಕ್ಷ್ಯ ಯಾವ ಪರಿ ಕತ್ತೆಗಳ ಸಂತತಿ ಮೇಲೆ ಪರಿಣಾಮ ಬೀರಿತೆಂದರೆ, ಕೆರೆಯಂಗಳದ ಜಾಗದಲ್ಲಿದ್ದ ನೂರಾರು ಕತ್ತೆಗಳು ಕೇವಲ ಹತ್ತಿಪ್ಪತ್ತಕ್ಕೆ ಬಂದು ನಿಂತವು. ಮೊದಮೊದಲು ಅಗಸನ ವಾಹನವಾಗಿದ್ದ ಕತ್ತೆಗಳು, ನಂತರ ಸಾಮಾನು ಸರಂಜಾಮು ಸಾಗಿಸುವ ಲಗೇಜ್ ವಾಹನಗಳಂತೆ ಗೋಚರಿಸಿದ್ದವು. ಅದಾದ ನಂತರ, ನದಿ ತೊರೆಗಳಿಂದ ಮರಳನ್ನು ಬೇಕಾದವರ ಮನೆಗೆ ಸಾಗಿಸುವ ಕೆಲಸ ಕೂಡ ಕತ್ತೆ ಮಾಡುತ್ತಿತ್ತು. ಮರಳು ಸಾಗಿಸಲು ಟ್ರ್ಯಾಕ್ಟರ್, ಲಾರಿಗಳು ಸಿದ್ಧವಾದ ನಂತರ ಕತ್ತೆಗಳಿಗೆ ಡಿಮ್ಯಾಂಡ್ ಕಡಿಮೆಯಾಯಿತು. ಇದೇ ಸಂದರ್ಭದಲ್ಲಿ ಕಾಡಿನಿಂದ ಸೌದೆ ತರುವ ಕೆಲಸಕ್ಕೂ ಕತ್ತೆಗಳು ಬಳಸಲ್ಪಟ್ಟವು. ನಾನೇ ಈ ಹಿಂದೆ ಕತ್ತೆ ಸಾಗಿಸುವ ಸೌದೆಗಳಿಗೆ ಸಂಬಂಧಿಸಿದಂತೆ `ಕತ್ತೆ ಸೌದೆಯ ನಾಗಿ’ ಕಥೆ ಬರೆದಿದ್ದೆ. ಅದೇ ಅಂಶಗಳನ್ನಿಟ್ಟುಕೊಂಡು ಅದೇ ಹೆಸರಲ್ಲಿ ಪ್ರಬಂಧವೊಂದನ್ನು ಕೂಡ ಬರೆದಿದ್ದೆ. ಆನಂತರ, ಕತ್ತೆಗಳಿಗೆ ಕಾಲವಿಲ್ಲವೇನೋ? ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಈಗಲೂ ಕೂಡ ಅಂಥದ್ದೇ ವಾತಾವರಣವಿದೆ.

ಈಗ ನಾಗಿ ತಾಯಿಕತ್ತೆಯನ್ನು ಎಳೆದುಕೊಂಡು `ಹಾಲೂ... ಹಾಲೂ... ಕತ್ತೆ ಹಾಲೂ...’ ಎಂದು ಕೂಗುತ್ತಾ ಗಲ್ಲಿ ಗಲ್ಲಿ ತಿರುಗಾಡುತ್ತಿದ್ದಾಳೆ. ಕತ್ತೆ ಹಾಲಿನ ಒಂದಿಷ್ಟು ಮಿಲಿ ಲೀಟರ್‍ಗೆ ಐವತ್ತು, ನೂರು ಎಂದೆಲ್ಲ ಹಣ ಪಡೆಯುತ್ತಾ, ದಿನದ ಕೊನೆಗೆ ಕನಿಷ್ಟ ಸಾವಿರಕ್ಕೂ ಹೆಚ್ಚಿನ ರೂಪಾಯಿಗಳನ್ನು ಕಮಾಯಿಸಿಕೊಂಡು ಬರುತ್ತಿದ್ದಾಳೆ. ಇದು ತಾಯಿಕತ್ತೆ ತನ್ನ ಮೊಲೆಹಾಲು ನಿಲ್ಲಿಸುವವರೆಗೆ ಸಾಗಬಹುದು. ನಾಗಿ ಅಲ್ಲಿಯವರೆಗೆ ಸೇಫ್. ಇದು ಕೇವಲ ನಾಗಿಯ ಕಥೆಯಲ್ಲ; ಬಹಳಷ್ಟು ಹೆಂಗಸರು ಹಾಲು ನೀಡುವ ಕತ್ತೆಗಳನ್ನು ಹಿಡಿದುಕೊಂಡು ತಾಜಾ ತಾಜಾ ಹಾಲನ್ನು ಹಿಂಡಿ, ಅಲ್ಲಲ್ಲೇ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬಹಳಷ್ಟು ದೃಶ್ಯಗಳು ಈಗೀಗ ಸಾಮಾನ್ಯ. 

ಕತ್ತೆ ಹಾಲು ಎಂದ ಕೂಡಲೇ ಮೂಗು ಮುರಿಯುವವರೂ ಇದ್ದಾರೆ. ಕತ್ತೆ ಹಾಲು ನಿಜವಾಗಲೂ ಮಕ್ಕಳಿಗೆ ಅನಿವಾರ್ಯವೇ? ಅಷ್ಟೊಂದು ಪೌಷ್ಟಿಕಾಂಶ ಈ ಹಾಲಿನಲ್ಲಿದೆಯೇ? ಕತ್ತೆ ಹಾಲನ್ನು ಮಕ್ಕಳಿಗೆ ಅದ್ಯಾಕಾದರೂ ಕುಡಿಸಬೇಕು? ಕತ್ತೆ ಹಾಲು ಕುಡಿದ ಮಕ್ಕಳು ಆರೋಗ್ಯದಿಂದ ಇರುತ್ತಾರಾ? ಕತ್ತೆ ಹಾಲು ಕುಡಿಸುವುದು ಬೊಗಳೆ ಮಾತಾ? ಬಹಳಷ್ಟು ಜನ ಇಂತಹ ಅನುಮಾನಗಳಲ್ಲಿಯೇ ಇರುತ್ತಾರೆ- ಪ್ರಶ್ನೆಗಳನ್ನು ಕೂಡ ತೂರಿ ತೂರಿ ಬಿಡುತ್ತಿರುತ್ತಾರೆ. ಈ ಕತ್ತೆ ಹಾಲಿನ ರಹಸ್ಯವಾದರೂ ಏನು? ಎಂದು ಮಾಹಿತಿಯುಗಕ್ಕೆ ಕೆದಕುತ್ತಾ ಕೆದಕುತ್ತಾ ಕಾಲಿಟ್ಟ ನನಗೆ ಆಶ್ಚರ್ಯವೋ ಆಶ್ಚರ್ಯ! 

ಮರಿ ಹಾಕಿದ ತಾಯಿಕತ್ತೆ ಎರಡು ದಿನಕ್ಕೊಮ್ಮೆ ಕನಿಷ್ಟ 200-350 ಮಿ.ಲೀ. ಹಾಲನ್ನು ಕೊಡುತ್ತದೆ. ಒಂದು ಲೀಟರ್ ಕತ್ತೆ ಹಾಲಿಗೆ ಇವತ್ತಿನ ಮಾರುಕಟ್ಟೆ ಬೆಲೆ ಕನಿಷ್ಟ ಎರಡರಿಂದ ಮೂರು ಸಾವಿರ ರೂ.ಗಳು. ಹಾಗೆಂದು, ಕತ್ತೆ ಮಾಲೀಕರೊಬ್ಬರು ಹೇಳಿದಾಗ ಬೆಚ್ಚಿ ಬೀಳದೇ ಏನು ಮಾಡಲಿ?! 2012ರಲ್ಲಿ ಭಾರತದಲ್ಲಿ 0.32 ಮಿಲಿಯನ್ ಕತ್ತೆಗಳಿದ್ದವು. ಈಗ ಆ ಕತ್ತೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2007ರ ಕತ್ತೆ ಗಣತಿಗೆ ಹೋಲಿಸಿದರೆ ಶೇ.27ರಷ್ಟು ಕತ್ತೆ ಸಂತತಿ ನಾಶ ಹೊಂದಿದೆ. ಭಾರತದಲ್ಲಿ ಕತ್ತೆಗಳ ಬಗ್ಗೆ ಬಹುದೊಡ್ಡ ನಿರ್ಲಕ್ಷ್ಯ ಮನೋಭಾವವಿದೆ. ಬೈಯುವುದಾದರೂ ನಾವು ಕತ್ತೆಯ ಹೆಸರನ್ನೇ ಮುಂದಿಟ್ಟುಕೊಂಡು ಬೈಯುತ್ತೇವೆ. ಕತ್ತೆಯನ್ನು ಅತ್ಯಂತ ನಿಕೃಷ್ಟ ಜೀವಿ ಎಂಬಂತೆ ನಾವು ಕಾಣುತ್ತೇವೆ. ಕೆಲಸಕ್ಕೆ ಮೂರ್ನಾಲ್ಕು ತಿಂಗಳು ಬಳಸಿಕೊಳ್ಳುವ ಕತ್ತೆ ಮಾಲೀಕರು ಆನಂತರ ಅವುಗಳನ್ನು ಅಕ್ಷರಶಃ ಬೀದಿಗೇ ತಳ್ಳಿಬಿಡುತ್ತಾರೆ. ಅವಕ್ಕೆ ತಿನ್ನಲು ಕೊಡುವುದಿಲ್ಲ, ನೆರಳಿರುವ ಶೆಡ್ ಕೂಡ ಕತ್ತೆಗಳಿಗೆ ನಸೀಬಾಗುವುದಿಲ್ಲ. ಸುಮಾರು 20 ವರ್ಷ ಆಯಸ್ಸು ಉಳ್ಳ ಕತ್ತೆಗಳು ತಮ್ಮ ಜೀವನದ ಬಹಳಷ್ಟು ವರ್ಷಗಳನ್ನು ಬೇಕಾರ್ ಆಗಿಯೇ ಕಳೆದುಬಿಡುತ್ತವೆ. 

ಕತ್ತೆ ಹಾಲು ಈಗಿನ ಕಲ್ಪನೆಯಲ್ಲ; ಕತ್ತೆ ಹಾಲಿಗೂ ಬಹುದೊಡ್ಡ ಇತಿಹಾಸವಿದೆ. ಕತ್ತೆ ಹಾಲಿನ ಪ್ರಸ್ತಾಪ ಪುರಾಣ ಕಾಲಗಳಲ್ಲೂ ಅಲ್ಲಲ್ಲಿ ಇಣುಕುತ್ತದೆ. ಈಜಿಫ್ಟಿನ ರಾಣಿ ಇದ್ದಳು. ಅವಳ ಹೆಸರು ಕ್ಲಿಯೋಪಾತ್ರ. ಕ್ಲಿಯೋಪಾತ್ರ ಎಂಬ ಹೆಸರನ್ನು ಕೇಳದವರು ಯಾರಿದ್ದಾರೆ? ಈಕೆ ತನ್ನ ಸೌಂದಂiÀರ್iವನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನ ಮೊರೆ ಹೋಗುತ್ತಿದ್ದಳು. ತನ್ನ ಸ್ನಾನಗೃಹದಲ್ಲಿ ಈಕೆಗೆ ಕತ್ತೆ ಹಾಲೇ ಇರಬೇಕಿತ್ತು. ಕತ್ತೆ ಹಾಲಲ್ಲೇ ಈಕೆಯ ಸ್ನಾನ. ಕತ್ತೆ ಹಾಲನ್ನು ತನ್ನ ಮುಖಕ್ಕೆ ಚಿಮುಕಿಸಿಕೊಳ್ಳುತ್ತಿದ್ದಳು. ಮುಖದ ಕಾಂತಿಗೆ ಕತ್ತೆ ಹಾಲಿಗಿಂತ ಮತ್ತೊಂದು ಉತ್ಪನ್ನವಿಲ್ಲ ಎಂದೇ ಅವಳು ಭಾವಿಸಿದ್ದಳು. ಇನ್ನೊಬ್ಬಳಿದ್ದಳು. ಫ್ರೆಂಚ್ ಇತಿಹಾಸದಲ್ಲಿ ಬರುವ ನೆಪೋಲಿಯನ್ ಬೋನಾಪಾರ್ಟೆಯ ಸಹೋದರಿ ಪೌಲಿನ್ ಬೋನಾಪಾರ್ಟೆಗೆ ಕತ್ತೆಗಳೆಂದರೆ ಪ್ರೀತಿ. ಬಹಳಷ್ಟು ಕತ್ತೆಗಳನ್ನು ಸಾಕಿಕೊಂಡಿದ್ದಳು. ಕತ್ತೆ ಹಾಲು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಳು.  ತನ್ನ ಸೌಂದರ್ಯ ವರ್ಧಿಸಲು ಕತ್ತೆ ಹಾಲು ಶ್ರೇಷ್ಠ ಎಂದೇ ನಂಬಿಕೊಂಡಿದ್ದ ಅವಳು, ತನ್ನ ಚರ್ಮಕಾಂತಿಗೆ ಕತ್ತೆ ಹಾಲೇ ಕಾರಣ ಎನ್ನುತ್ತಿದ್ದಳಂತೆ.

 

ಭೂಲೋಕದಲ್ಲಿ ತಾಯಿ ಹಾಲಿಗಿಂತ ಮಿಗಿಲಿಲ್ಲ ಎಂದು ಮನುಷ್ಯ ಆಗಾಗ ಉಸುರುತ್ತಿರುತ್ತಾನೆ. ಅಲ್ಲಿಯೂ ಈಗ ಸ್ಪರ್ಧೆ ಏರ್ಪಟ್ಟಿದೆ. ಒಂದು ಕಡೆ ಮಗು ಹೆತ್ತ ಮನುಷ್ಯ ತಾಯಿ ಇದ್ದಾಳೆ. ಇನ್ನೊಂದು ಕಡೆ ಮರಿ ಹೆತ್ತ ಕತ್ತೆ ತಾಯಿ ನಿಂತಿದ್ದಾಳೆ. ಈ ಎರಡೂ ಜೀವಗಳ ಮೊಲೆ ಹಾಲಲ್ಲಿ ಯಾವುದು ಶ್ರೇಷ್ಠ? ಎಂಬ ತಕರಾರುಗಳು ಆರಂಭವಾದಾಗ ಎರಡೂ ಹಾಲುಗಳನ್ನು ಮೌಲಿಕ ತೂಕಕ್ಕೆ ಒಳಪಡಿಸಿ, ಕತ್ತೆ ಹಾಲು ಮನುಷ್ಯ ತಾಯಿಯ ಹಾಲಿಗೆ ಸಮ ಎಂಬ ಅಭಿಪ್ರಾಯಕ್ಕೆ ಆಗಾಗ ಮನುಷ್ಯನೇ ಬಂದುಬಿಟ್ಟಿದ್ದಾನೆ. ಕತ್ತೆ ಹಾಲಿನಲ್ಲಿ ಹಲವು ಖಾಯಿಲೆಗಳಿಗೆ ರಾಮಬಾಣವಿದೆ. ಈ ಹಾಲಿನಲ್ಲಿ ನ್ಯೂಟ್ರಿಷಿನಲ್ಸ್ ಬೆನಿಫಿಟ್‍ಗಳು ಬಹಳಷ್ಟಿವೆ. ತಾಯಿ ಹಾಲಿಗೆ ಈ ಹಾಲು ಸಮ ಸಮವಾಗಿದೆ. ಉತ್ಕøಷ್ಟ ವಿಟಮಿನ್‍ಯುಕ್ತ ಸತ್ವಗಳು ಕತ್ತೆ ಹಾಲಿನಲ್ಲಿ ಇವೆ. ಯಾವುದೇ ಪ್ರಾಣಿಯ ಹಾಲು ಕತ್ತೆ ಹಾಲಿಗಿಂತ ಕೆಳಗೇ ಇದೆ ಎಂದು ಕೆಲ ಸಂಶೋಧಕರು ಆಗಾಗ ತಮ್ಮ ಸಂಶೋಧನೆಗಳನ್ನು ಮುಂದಿಡುತ್ತಲೇ ಬಂದಿದ್ದಾರೆ. ಟಾಟಾ ಇನ್ಸಿಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‍ನಲ್ಲಿ ಅಭ್ಯಾಸ ಮಾಡಿರುವ ಬಹಳಷ್ಟು ವಿದ್ಯಾರ್ಥಿಗಳು ಕತ್ತೆ ಹಾಲಿನ ಹಿಂದೆ ಬಿದ್ದು ಸಂಶೋಧನೆ ಮಾಡಿ ಫಲ ಗಿಟ್ಟಿಸಿಕೊಂಡಿದ್ದಾರೆ. ಇದೇ ಸಂಸ್ಥೆಯ ಪ್ರೊ. ನೀಲಂ ಯಾದವ್, ಕತ್ತೆ ಹಾಲಿನ 200 ಸೋಪುಗಳನ್ನು ಸಿದ್ಧಪಡಿಸಿ 2017ರ ಅಕ್ಟೋಬರ್‍ನಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಟ್ಟಿದ್ದರು. ಎರಡು ತಿಂಗಳೊಳಗೆ ಆ ಎಲ್ಲಾ ಸೋಪುಗಳು ಮಾರಾಟವಾಗಿದ್ದಷ್ಟೇ ಅಲ್ಲ, ಅದರ  ಫಲಿತಾಂಶ ಕೂಡ ಅದ್ಭುತವಾಗಿಯೇ ಅವರಿಗೆ ದಕ್ಕಿತ್ತು. ಮೆಡಿಸಿನ್ ಲೋಕದ ಪಿತಾಮಹಾ ಎಂದೇ ಕರೆಸಿಕೊಳ್ಳುವ ಹಿಪ್ಪೊಕ್ರೇಟ್ಸ್ (460-370ಬಿಸಿ) ಕತ್ತೆ ಹಾಲಲ್ಲಿರುವ ಔಷಧೀಯ ಗುಣಗಳ ಬಗ್ಗೆ ವಿವರಣೆ ನೀಡಿದ್ದ ಎಂಬ ಅಂಶ ಕೂಡ ಆಶ್ಚರ್ಯ ಮೂಡಿಸಿತ್ತು. 

ಮನುಷ್ಯನಿಗೆ ವಯಸ್ಸಾದಂತೆಲ್ಲ ಆತನ ದೇಹದ ಚರ್ಮ ಸುಕ್ಕುಗಟ್ಟುತ್ತದೆ. ಕಣ್ಣುಗಳ ಸುತ್ತ ಸುಕ್ಕಿನ ಲಕ್ಷಣಗಳು ಕಾಣಬರುತ್ತವೆ. ಚರ್ಮ ಸೂಕ್ಷ್ಮತೆಯಿಂದ ಜಾರಿ ಗಡಸು ಆಗತೊಡಗುತ್ತದೆ. ಇದೆಲ್ಲವನ್ನೂ ಮೆಟ್ಟಿ ನಿಲ್ಲಲು ಕತ್ತೆ ಹಾಲು ಒಳ್ಳೆಯ ಮೆಡಿಸಿನ್ ಎಂದು ನಂಬುವವರಿದ್ದಾರೆ. ರೋಮನ್ನರ ಪಾಲಿಗೆ ಕತ್ತೆ ಹಾಲು ಸಾಮಾನ್ಯವಾಗಿ ಬಳಸುವ ಪದಾರ್ಥವಾಗಿತ್ತು. ಫ್ರಾನ್ಸ್‍ನಲ್ಲಿ, 19ನೇ ಶತಮಾನದಲ್ಲಿ ತಾಯಿಯಿಲ್ಲದ ತಬ್ಬಲಿ ನವಜಾತ ಶಿಶುಗಳಿಗೆ ನೇರವಾಗಿಯೇ ಹಾಲು ನೀಡುವ ಕತ್ತೆ ಮೊಲೆಗಳನ್ನೇ ಬಾಯಿಗಿಡಲಾಗುತ್ತಿತ್ತು. ಕತ್ತೆ ಹಾಲು ಕೇವಲ ಕುಡಿಯಲು ಮಾತ್ರ ಬಳಕೆಯಲ್ಲಿಲ್ಲ; ಈಗ ಅದು ಹಲವು ಆಹಾರೋತ್ಪನ್ನಗಳ ರೂಪದಲ್ಲಿಯೂ ದೊಡ್ಡ ದೊಡ್ಡ ಸಂಸ್ಥೆಗಳ ಬ್ಯಾನರ್ರಿನಡಿ ಉತ್ಪಾದನೆಗೊಂಡು ಮಾರಾಟವಾಗುತ್ತಿದೆ. ಸೌಂದರ್ಯವರ್ಧಕಗಳ ರೂಪದಲ್ಲಿಯೂ, ಸೋಪು ರೂಪದಲ್ಲಿಯೂ ಕತ್ತೆ ಹಾಲು ಮೋಡಿ ಮಾಡಿದೆ. ರೋಮನ್ ಕವಿ ಓವಿಡ್(43ಬಿಸಿ-18ಡಿಸಿ)ಕತ್ತೆ ಹಾಲಿನ ಮಹತ್ವ ಸಾರಲು ಪದ್ಯವನ್ನೇ ಬರೆದುಬಿಟ್ಟಿದ್ದನಂತೆ. 

ಸುಮಾರು ಎರಡು ಸಾವಿರ ವರ್ಷಗಳಿಂದ ಕತ್ತೆ ಹಾಲು ಮನುಷ್ಯನ ಅನಿವಾರ್ಯತೆಯ ಭಾಗವಾಗಿಯೂ ದೂರ ಉಳಿದಿದೆ. ಯಾವುದಕ್ಕೂ ಪ್ರಯೋಜನಕ್ಕೆ ಬಾರದ `ಕತ್ತೆ’ ಎಂದೇ ನಾವು ಭಾವಿಸಿದ್ದೇವೆ. ಆದರೆ, ಕೇವಲ ಕತ್ತೆಯ ಹಾಲು ಅದೆಷ್ಟು ಪ್ರಯೋಜನಕಾರಿ ಎಂಬುದು ಮಾತ್ರ ಕುತೂಹಲ ಕೆರಳಿಸುವಂಥದ್ದು. ನಮ್ಮ ಕೆರೆಯಂಗಳದ ನಾಗಿಗೆ ಒಮ್ಮೆ ಕೂರಿಸಿಕೊಂಡು ಕತ್ತೆ ಹಾಲಿನ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ; ಒಮ್ಮೆ ಕತ್ತೆ ಹಾಲು ಕುಡಿದರೆ ಆ ಐಡಿಯಾ ದಕ್ಕಬಹುದೇನೋ!