ನೌಕರಿ ಕೊಡಿಸಿದ ನಾಯಿ!

ನೌಕರಿ ಕೊಡಿಸಿದ ನಾಯಿ!

ದಿ ಡೆಕ್ಕನ್ ನ್ಯೂಸ್ ನಲ್ಲಿ ಮೊನ್ನೆ ಶಿವಮೊಗ್ಗೆಯ ಪೊಲೀಸ್ ನಾಯಿ ರಮ್ಯಾಳ ಕಥೆ ಓದುತ್ತಿದ್ದಾಗ ನನಗೆ ಗಪ್ಪನೆ ನಮ್ಮ ಚವಡಾಳ ಡಾಕ್ಟರ್ ನಾಯಿಯ ಕಥೆ ನೆನಪಾಯಿತು. ನಮ್ಮ ಪಕ್ಕದೂರು ಕಜ್ಜರಿಯ  ಪಶು ಚಿಕಿತ್ಸಾಲಯದಲ್ಲಿ ಚವಡಾಳರು ಹಿರಿಯ ಪಶುವೈದ್ಯರಾಗಿ ಸೇವೆ ಸಲ್ಲಿಸುತಿದ್ದರು. ನಮ್ಮ ದನಕರುಗಳಿಗೆ ಏನಾದರೂ ಕಾಯಿಲೆ ಕಸಾಲೆ ಆದರೆ ನಾವು ಕಜ್ಜರಿಗೆ ಹೋಗಬೇಕಾಗಿತ್ತು. ಆಗಲೇ ನನಗವರು ಪರಿಚಯವಾಗಿದ್ದು.

ಹಿಂದೆಲ್ಲ ಒಂದು ರಾಜ್ಯದ ಸೈನ್ಯಬಲವನ್ನು ಆ ಸೈನ್ಯದಲ್ಲಿರುವ ಕುದುರೆ, ಆನೆಗಳ ಸಂಖ್ಯೆಯೇ ನಿರ್ಧರಿಸುತಿತ್ತು. ಒಂದು ಅಕ್ಷೌಹಿಣಿ ಸೈನ್ಯ ಎಂದರೆ, ಅದರಲ್ಲಿ ಎರಡು ಲಕ್ಷಕ್ಕೂ ಮಿಕ್ಕಿ ಆನೆಗಳೂ ಆರು ಲಕ್ಷಕ್ಕೂ ಮಿಕ್ಕಿ ಕುದುರೆಗಳು ಇರಬೇಕಿತ್ತು. ಸಂಪತ್ತನ್ನು ಗುರುತಿಸುವಲ್ಲಿ ಪಶುಸಂಪತ್ತು ಕೂಡ ಮುಖ್ಯವಾಗಿತ್ತು. ದನಕರುಗಳು ಸುಖವಾಗಿದ್ದ ಕಾಲದಲ್ಲಿ ಮನುಷ್ಯನೂ ಸುಖವಾಗಿದ್ದ. ಇವತ್ತಿನ ಜಗತ್ತಿನಲ್ಲಿ ಪ್ರಾಣಿಪಕ್ಷಿಗಳಿಂದ ಪರಿಸರದಿಂದ ದೂರವಾಗುತ್ತ ಸಾಗಿರುವ ನಾವೂ ಯಂತ್ರೋಪಕರಣಗಳಂತೆ ನಿರ್ಜೀವ, ನಿರ್ಭಾವದ ಬದುಕಿನತ್ತಲೇ ಸಾಗಿದ್ದೇವೆ. ಪಶು ಸಂಗೋಪನಾ ಇಲಾಖೆ ಎಂಬುವುದೊಂದಿದೆ ಎಂಬುದನ್ನು ಸರ್ಕಾರವೆ ಮರೆತಂತಿರುವ ಈ ಹೊತ್ತಿನಲ್ಲಿ , ಇದನ್ನೆಲ್ಲ ಯೋಚಿಸುತ್ತಿರುವಾಗಲೇ ಚವಡಾಳ ಡಾಕ್ಟರ್ ಅಂಥವರ ಪ್ರಾಣಿಪ್ರೇಮ, ಮಾನವೀಯ ಅಂತಃಕರಣ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅವರು ನಿರ್ವಹಿಸುವ ನಿಷ್ಪಲ ಕರ್ತವ್ಯ ನಿಷ್ಠೆ ನನ್ನನ್ನು ಸ್ತಬ್ಧಗೊಳಿಸುತ್ತದೆ. ನಮ್ಮ ನಡುವೆ ಇಂಥವರು ಇದ್ದಾರೆ ಎನ್ನುವುದೇ ಹೆಮ್ಮೆ ಹಾಗೂ ಸಂಭ್ರಮವನ್ನುಂಟು ಮಾಡುತ್ತದೆ. 

ಚವಡಾಳ ಡಾಕ್ಟರ್ ಪೂರ್ಣ ಹೆಸರು ನರೇಂದ್ರನಾಥ ಶಂಕ್ರಪ್ಪ ಚವಡಾಳ ಅಂತ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನಾಗರಮಡು ಗ್ರಾಮದವರು. ಆಗಿನ ಕಾಲದ ಬಡತನದ ಬೇಗುದಿಯಲ್ಲೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪಾಸು ಮಾಡಿದ್ದ  ಶಂಕ್ರಪ್ಪ ಅವರಿಗೆ ಸೈನ್ಯದ ಮದ್ದು ತಯಾರಿಕಾ ವಿಭಾಗದಲ್ಲಿ ಕೆಲಸ ಸಿಕ್ಕಿತ್ತು.  ತನ್ನಿಮಿತ್ತ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿಯೆ ವಾಸಿಸಬೇಕಾಗಿ ಬಂತು. ಹೀಗಾಗಿ ನರೇಂದ್ರನಾಥರ ಪ್ರಾಥಮಿಕ ವಿದ್ಯಾಭ್ಯಾಸ ಬಂಡಾರದಲ್ಲಿಯೆ ಆಯಿತು. ಶಂಕ್ರಪ್ಪ ಅವರದು ಏಳು ಜನ ಅಣ್ಣತಮ್ಮಂದಿರ, ಮೂವರು ಸಹೋದರಿಯರ ದೊಡ್ಡ ಅವಿಭಕ್ತ ಕುಟುಂಬ. ನರೇಂದ್ರನಾಥರು ಬೇಸಿಗೆ ರಜೆಗೆಲ್ಲ ನಾಗರಮಡುವಿಗೆ ಬರುತ್ತಿದ್ದರು‌. ಆಗ ಅವರದು ಹದಿನಾರೆತ್ತಿನ ಕಮ್ತ. ಮನೆತುಂಬ ದನಗಳು, ಕುದುರೆ, ಕುರಿ, ಆಡು, ಕೋಳಿ, ನಾಯಿ, ಬೆಕ್ಕು ಹೀಗೆ ಎಲ್ಲವನ್ನೂ ಸಾಕಿದ್ದರು. ಇವುಗಳೊಂದಿಗೆ ಆಟ ಆಡುತ್ತಲೆ ಹೊತ್ತು ಕಳೆದುಬಿಡುತಿದ್ದ ನರೇಂದ್ರನಿಗೆ ಬೇಸಿಗೆಯ ರಜೆ ಮುಗಿದದ್ದೇ ಗೊತ್ತಾಗುತ್ತಿರಲಿಲ್ಲ. ಒಲ್ಲದ ಮನಸಿನಿಂದಲೆ ನಾಗ್ಪುರಕ್ಕೆ ಮರಳುತಿದ್ದ ನರೇಂದ್ರ ಮತ್ತೆ ಶಾಲೆಗೆ ರಜೆ ಕೊಡುವುದನ್ನೆ ಕಾಯುತಿದ್ದ. ಬಂಡಾರದ ಶಾಲೆಯಲ್ಲಿ ಕೂತಿದ್ದರೂ ಮನಸು ನಾಗರಮಡುವಿನಲ್ಲೆ ಮುಳುಗಿರುತಿತ್ತು. ತನ್ನ ಹಳ್ಳಿಯ ಜನ, ಗಿಡಮರ ಪ್ರಾಣಿಪಕ್ಷಿ ಎಲ್ಲವೂ ಅವನ ಕಣ್ಣಮುಂದೆ ತೇಲಿ ನೆನಪಿನ ಚಿತ್ರ ಬರೆಯುತಿದ್ದವು.

ನಾಗರಮಡುವಿಗೆ ಬಂದಾಗಲೆಲ್ಲ ನಾಯಿ, ಬೆಕ್ಕು, ಹೋರಿಕರ, ಕುದುರೆಗಳೊಂದಿಗೆ ಆಡಿಕೊಂಡಿರುತಿದ್ದ ನರೇಂದ್ರನಿಗೆ ಪ್ರಾಣಿಗಳ ಜಗತ್ತು ವಿಸ್ಮಯವನ್ನುಂಟು ಮಾಡಿತ್ತು, ಮಾತನಾಡದಿದ್ದರೂ ಸಾಕಿ ಸಲುಹುವರಿಗಾಗಿ ಅವು ತೋರುವ ನಿಷ್ಠೆ, ಸಮರ್ಪಣಾ ಭಾವ ಅವನ ಅಂತಃಕರಣವನ್ನೆ ಅಲ್ಲಾಡಿಸಿ ಬಿಡುತಿತ್ತು.  ನೋವು, ನಲಿವುಗಳಲ್ಲಿ ಅವು ತೋರುವ ಭಾವ, ಸನ್ನೆ, ನಿಲುವುಗಳನ್ನು ಕೇವಲ ನೋಡುತ್ತಲೆ ಅರ್ಥಮಾಡಿಕೊಳ್ಳುವ ಹಿರಿಯರ , ಅನುಭವಿಗಳ ಸ್ಪಂದನಶೀಲತೆ ಅವನನ್ನು ಮಂತ್ರಮುಗ್ಧನನ್ನಾಗಿಸುತಿತ್ತು. ಬಹುಶಃ ಬಾಲ್ಯದ ಈ ಚಿತ್ರಗಳೆ ಮುಂದೆ ನರೇಂದ್ರ ನಾಗ್ಪುರದ ಪಶು ವೈದ್ಯಕೀಯ ಕಾಲೇಜು ಸೇರುವಂತೆ ಮಾಡಿದವು. 

ಆಗ ನರೇಂದ್ರನಾಥರು ಇನ್ನೂ ಚಿಗುರು ಮೀಸೆಯ ಹುಡುಗ, ಪಶು ವೈದ್ಯಕೀಯ ವಿಜ್ಞಾನ ಅವನ ಪ್ರೀತಿಯ ವಿಷಯವೇ ಆಗಿತ್ತು. ಆಗಲೇ ಮನೆಯಲ್ಲಿ ಒಂದು ನಾಯಿಯನ್ನು ಸಾಕಿದ್ದ ನರೇಂದ್ರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಮೆಕ್ಡರ್ಮ್ಯಾಟ್ ಮೇಲಿನ ಅಭಿಮಾನದಿಂದಾಗಿ ಅದಕ್ಕೆ ಮ್ಯಾಕ್ ಎಂದು ಕರೆಯುತ್ತಿದ್ದ. ಅದನ್ನೂ ಕಾಲೇಜಿಗೆ ಕರೆದುಕೊಂಡು ಹೋಗುತಿದ್ದ. ಕರೆದುಕೊಂಡು ಹೋಗುವುದು ಎನ್ನುವುದಕ್ಕಿಂಥ  ಅದೇ ಅವನನ್ನು ಹಿಂಬಾಲಿಸಿಕೊಂಡು ಕಾಲೇಜಿಗೂ ಬರುತಿತ್ತು ಎನ್ನುವುದೆ ಸರಿ. ನರೇಂದ್ರನಾಥ ಮತ್ತು ಮ್ಯಾಕ್ ಮಧ್ಯೆ ಅಂಥ ಅನ್ಯೋನ್ಯತೆ ಬೆಳೆದಿತ್ತು. ಇವರು ತರಗತಿಯಲ್ಲಿದ್ದರೆ ಮ್ಯಾಕ್ ಅಲ್ಲೆ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಓಡಾಡಿಕೊಂಡಿರುತಿತ್ತು. 

ಬೇರೆ ಎಲ್ಲಾದರೂ ಸ್ನೇಹಿತರೊಂದಿಗೆ ಹೋಗಬೇಕಾದರೆ ಅದರ ಕಣ್ಣು ತಪ್ಪಿಸಿ ಹೋಗಬೇಕಾಗಿತ್ತು. ಒಮ್ಮೆ ಹೀಗೆ ಯಾವುದೋ ಕೆಲಸಕ್ಕೆ ಅಂತ ನರೇಂದ್ರನಾಥರು ಕಾಲೇಜಿನಿಂದ ನಾಯಿಯ ಕಣ್ಣು ತಪ್ಪಿಸಿ ಪೇಟೆಗೆ ಹೋಗಿದ್ದರು. ತಿರುಗಿ ಬರುತ್ತಲೆ ಯಾರೋ ಒಬ್ಬರು ನಿಮ್ಮ ನಾಯಿ ಬೋಳು ಬಂದು ಬಿದ್ದಿದೆ ಹೋಗಿ ನೋಡಿ ಎಂದರು. ಇವರಿಗೆ ಆಕಾಶವೆ ಕಳಚಿ ಬಿದ್ದಂತೆನಿಸಿತು. ಅಲಾ ಇವನ, ಮನಿಯಿಂದ ಬರುವಾಗ ಆರಾಮಿದ್ದ ಮ್ಯಾಕ್‌ಗೆ ಇದೇನಾಯಿತು ಎಂದು ದಿಗಿಲಾಯಿತು. ಅದು ಮೊದಲೆ ಪಶು ವೈದ್ಯಕೀಯ ಕಾಲೇಜು. ಅಲ್ಲಿನ ಎಲ್ಲ ಹಿರಿಯ ವೈದ್ಯರು, ಉಪನ್ಯಾಸಕರೂ ನಾಯಿಯ ಸುತ್ತ ನೆರೆದಿದ್ದರು. ಎಲ್ಲರೂ ಅದನ್ನು ಪರೀಕ್ಷಿಸುವರೆ. ನರೇಂದ್ರ ಮ್ಯಾಕ್‌ನನ್ನು ಸಮೀಪಿಸಿ ನೋಡಿದರು. ಮ್ಯಾಕ್ ಉಸಿರಾಡುತ್ತಿದ್ದಾನೆ ಅಷ್ಟೇ..ಪ್ರಜ್ಞೆ ಇಲ್ಲ! ಅದನ್ನು ಪರೀಕ್ಷಿಸಿದ ಎಲ್ಲ ವೈದ್ಯರೂ ಅದು ಬದುಕುಳಿವ ಸಾಧ್ಯತೆ ಇಲ್ಲ ಎಂದೇ ಹೇಳಿಬಿಟ್ಟರು. ಇವರಿಗೆ ಅವರ ಈ ಮಾತನ್ನು ಅರಗಿಸಿಕೊಳ್ಳಲೇ ಆಗುತ್ತಿಲ್ಲ. ಏನೋ ಆ ಕ್ಷಣಕ್ಕೆ ಅವರ ಮನಸಿನಲ್ಲಿ ಎಂಥದೋ ಛಲ ಮಿಂಚಿದಂತಾಯ್ತು. ಏನೇ ಆಗಲಿ, ಹೆಂಗಾದರೂ ಮಾಡಿ ಮ್ಯಾಕ್‌ನನ್ನು ಉಳಿಸಿಕೊಳ್ಳಲೇಬೇಕು ಎಂದು ತಮಗೆ ತಾವೇ ಹೇಳಿಕೊಂಡರು. ಕೂಡಲೇ ತಮಗೆ ಗೊತ್ತಿರುವ ಪ್ರಥಮ ಶೂಶ್ರೂಷೆಯನ್ನೆಲ್ಲ ಮಾಡಿದರು. ನಾಯಿಯ ದೇಹದಲ್ಲಿ ಯಾವ ಸುಧಾರಣೆಯೂ ಕಂಡು ಬರಲಿಲ್ಲ. ಮ್ಯಾಕ್‌ನನ್ನು ಹೆಗಲಮೇಲೆ ಹೊತ್ತುಕೊಂಡ ನರೇಂದ್ರರು ಸಿಟಿ ಕ್ಲಿನಿಕ್‌‌ಗೆ ಧಾವಿಸಿದರು. 

ಅಲ್ಲಿನ ವೈದ್ಯರಲ್ಲಿ ಗೋಗರೆದು ಅಂಗಲಾಚಿ ನಾಯಿಗೆ ಸಲೈನ್ ಹಚ್ಚಿಸಿದರು. ಆಗಿನ ಕಾಲಕ್ಕೆ ಹತ್ತಿಪ್ಪತ್ತು ರೂಪಾಯಿ ಅಂದ್ರೆ ಅದೆ ಸಾವಿರಾರು ರೂಪಾಯಿಯಾಗಿತ್ತು. ಬಂಧುಗಳಲ್ಲಿ, ಸ್ನೇಹಿತರಲ್ಲಿ ಬೇಡಿ ಹಾಗೂ ಹೀಗೂ ಅಷ್ಟೂ ರೂಪಾಯಿ ಹೊಂದಿಸಿಕೊಂಡು ಕ್ಲಿನಿಕ್‌ನಲ್ಲಿ ಉಪಚಾರವನ್ನು ಮುಂದುವರೆಸುವಂತೆ ದುಂಬಾಲು ಬಿದ್ದು ಅದರಲ್ಲಿ ಯಶಸ್ವಿಯೂ ಆದರು. 

ಮ್ಯಾಕ್ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ ನಂತರ ನರೇಂದ್ರರಿಗೆ ಊಟವೂ ಸೇರದಾಯ್ತು. ಮಲಗಿದರೆ ನಿದ್ದೆಯೂ ಬಾರದು. ಕಾಲೇಜಿಗೆ ಹೋಗುವುದು, ಅಲ್ಲಿಂದ ಸೀದಾ ಆಸ್ಪತ್ರೆಗೆ ಬರುವುದು. ಇರುಳೆಲ್ಲ ಅದರೊಂದಿಗೆ ಕಳೆಯುತಿತ್ತು. ಅದೊಂದು ದಿನ ಭಾರಿ ಮಳೆ ಸುರಿಯಿತು. ನಾಯಿಗೆ ತಂಪಾಗಿ ಅದೆಲ್ಲಿ ಸತ್ತೆಬಿಡುವುದೇನೋ ಅಂತ  ನರೇಂದ್ರರಿಗೆ ಆತಂಕ ಸುರುವಾಯಿತು. ಮೊದಲು ನಾಯಿಯನ್ನು ಕೈಗೆತ್ತಿಕೊಂಡು ಅದಕ್ಕೆ ಗೋಣಿ ಚೀಲವನ್ನು ಸುತ್ತಿ ಮಲಗಿಸಿದರು. ಕೊನೆಗೆ ಅದೂ ಸಮಾಧಾನವಾಗದೆ ತಮ್ಮ ಅಂಗಿಯನ್ನೆ ಬಿಚ್ಚಿ ಅದಕ್ಕೆ ತೊಡಿಸಿ, ತಾವು ಬರಿ ಮೈಯಲ್ಲೆ ಆ ರಾತ್ರಿ ಕಳೆದರು. 

ಮರುದಿನ ನಸುಕಿನಲ್ಲಿ ಬರಿ ಮೈಯಲ್ಲಿಯೆ ಮನೆಗೆ ತೆರಳುತಿದ್ದ ಇವರನ್ನು ಕಂಡು ಎಲ್ಲರೂ ಮಿಕಮಿಕ ನೋಡತೊಡಗಿದರು. ಇವ್ನು ಯಾವ್ನೋ ರೌಡಿ ಇರ್ಬೆಕು. ರಾತ್ರಿ ಕುಡಿದು ಯಾರ್ದೊ ಜತಿಗೆ ಗಲಾಟೆ ಮಾಡ್ಕೊಂಡು ಎಲ್ಲಿ ಬಿದ್ದಿದ್ದನೋ ಈಗ ಎಚ್ಚರಾಗಿದೆ. ಎದ್ದು ಹೊರಟಿದ್ದಾನೆ ಅಂತ ಕೆಲವರು, ಇವ್ನು ಯಾವ್ನೋ ಹುಚ್ಚ ಇರ್ಬೇಕು ಅಂತ  ಮತ್ತೆ ಕೆಲವರು ಆಡಿಕೊಂಡರು. ಮನೇಲಿ ಕೂಡ ನಿನಗೇನು ತಲೆಗಿಲೆ ಕೆಟ್ಟಿದೆಯಾ ಎಂದು ಬೈಸಿಕೊಂಡಿದ್ದೂ ಆಯಿತು.

ನಾಯಿಗೆ ಪ್ರಜ್ಞೆ ತಪ್ಪಿ ಅವತ್ತಿಗೆ ಹದಿನಾಲ್ಕು ದಿನಗಳಾಗಿದ್ದವು. ಅದು ಸ್ವಲ್ಪ ಸ್ವಲ್ಪವೇ ಕಣ್ಣು ತೆರೆದು ಮುಚ್ಚತೊಡಗಿತು. ನರೇಂದ್ರನಾಥರು ಒಂದು ಬಟ್ಟಲಿನಲ್ಲಿ ಹಾಲು ಹಾಕಿಕೊಂಡರು. ಮ್ಯಾಕ್‌ನನ್ನು ಕಾಲುಗಳ ಮೇಲೆ ಮಲಗಿಸಿಕೊಂಡು ಅದರ ಎರಡೂ ಕಿವಿಗಳನ್ನು ಹಿಡಿದುಕೊಂಡು ತೊಡೆಸಂಧಿಯಲ್ಲಿಟ್ಟುಕೊಂಡಿದ್ದ ಬಟ್ಟಲಿಗೆ ನಾಯಿಯ ಮುಸುಡಿಯನ್ನು ಜೋತುಬಿಟ್ಟರು. ಮ್ಯಾಕ್ ಹಾಗೇ ನಿಧಾನಕ್ಕೆ ಹಾಲು ನೆಕ್ಕತೊಡಗಿತು. ನಾಲ್ಕೈದು ದಿನ ಹೀಗೆ ಮಾಡುತ್ತ ನಾಯಿಯ ಆರೋಗ್ಯ ದಿನದಿನಕ್ಕೆ ಸುಧಾರಿಸುತ್ತ ಬಂತು. ಕೆಲವೇ ದಿನಗಳಲ್ಲಿ ನಾಯಿ ತನ್ನ ಮೊದಲಿನ ಚೈತನ್ಯವನ್ನು ಮರಳಿ ಪಡೆದಿತ್ತು.

ಎಂದಿನಂತೆ ನರೇಂದ್ರ ಕಾಲೇಜಿಗೆ ಹೋಗುತ್ತಲೇ, ಇವರೊಂದಿಗೆ ಮೊದಲಿನಂತೇ ಪುಟಿಯುತ್ತ, ನೆಗೆದಾಡುತ್ತ ಬಂದ ನಾಯಿಯನ್ನು ಕಂಡು ಎಲ್ಲರಿಗೂ ಆಶ್ಚರ್ಯ‌ವೇ ಆಶ್ಚರ್ಯ!

ಕೆಲದಿನಗಳ ಬಳಿಕ ನರೇಂದ್ರನಾಥರಿಗೆ ಪತ್ರವೊಂದು ಬಂತು! ತೆಗೆದು ನೋಡಿದರೆ, ಗೋವಾದ ಫೌಲ್ಟ್ರೀ ಫಾರ್ಮ‌ವೊಂದರ ಮ್ಯಾನೇಜರ್ ಆಗಿ ಇವರನ್ನು ನೇಮಿಸಿಕೊಂಡ ಬಗ್ಗೆ ತಿಳಿಸಿ, ಕರ್ತವ್ಯದ ಕಾರ್ಯಭಾರ ವಹಿಸಿಕೊಳ್ಳುವಂತೆ ವಿನಂತಿಸಲಾಗಿತ್ತು. ನರೇಂದ್ರರಿಗೆ ಇದೇನಪ್ಪಾ ವಿಚಿತ್ರ ನಾ ಯಾವ ಕೆಲಸಕ್ಕೂ ಅರ್ಜಿ ಹಾಕಿಲ್ಲ. ಕೆಲಸ ಬೇಕು ಅಂತ ಯಾರಲ್ಲೂ ಕೇಳಿಯೂ ಇಲ್ಲ. ನನ್ನ ಬಗ್ಗೆ ಇವರಿಗೆ ಹೇಗೆ ಗೊತ್ತಾಯಿತು. ಏನು ಕತೆ ಅಂತ ಅಚ್ಚರಿಯಾಯಿತು. 

ಸರಿ ನೋಡೋಣ ಅಂತ ಅಲ್ಲಿಗೆ ಹೋದರು. ಆಗ ಗೊತ್ತಾಗಿದ್ದೇನೆಂದರೆ, ನಾಗ್ಪುರದ ಪಶು ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರಾಗಿದ ಡಾ. ಬೆಲ್ಸರಿ ಅವರು, ಚವಡಾಳರು ತಮ್ಮ ನಾಯಿಯ ಬಗ್ಗೆ ತೋರಿದ ಕಾಳಜಿ, ಮಾಡಿದ ಶುಶ್ರೂಷೆ ಹಾಗೂ ಆ ಸಂದರ್ಭದಲ್ಲಿ ತೋರಿದ ಮಾನವೀಯ ಅಂತಃಕರಣದಿಂದ ಪ್ರೇರೆಪಿತರಾಗಿ ಗೋವಾದ ಫೌಲ್ಟ್ರ್ರೀ ಫಾರ್ಮ‌ಗೆ ಇವರ ಕುರಿತು ಮಾಹಿತಿ ನೀಡಿದ್ದರು. ಹೀಗೆ ಚವಡಾಳರು ಇನ್ನೇನು ಸತ್ತೇ ಹೋಯಿತು ಎಂಬಂತಾಗಿದ್ದ ತಮ್ಮ ನಾಯಿಯನ್ನು ಉಳಿಸಿಕೊಂಡಿದ್ದರು. ಮತ್ತು ಆ ನಾಯಿ ಮ್ಯಾಕ್ ರವರಿಗೆ ನೌಕರಿ ಕೊಡಿಸಿತ್ತು.