ಮಹಾ ಪತನದಲ್ಲೂ ಏಕಾಂಗಿವೀರನಂತೆ ಕಂಡ ಡಿಕೆಶಿ :  ಯಾರ ಓಲೈಕೆಗೆ ಈ ಮಹಾನ್ ನಾಟಕ ?

ಮಹಾ ಪತನದಲ್ಲೂ ಏಕಾಂಗಿವೀರನಂತೆ ಕಂಡ ಡಿಕೆಶಿ :  ಯಾರ ಓಲೈಕೆಗೆ ಈ ಮಹಾನ್ ನಾಟಕ ?

ಮೈತ್ರಿ ಸರ್ಕಾರ ಭಂಗಕ್ಕೆ ನಡೆಸಿದ ಪ್ರಯತ್ನಗಳ ನಡುವೆಯೇ ಡಿ.ಕೆ.ಶಿವಕುಮಾರ್ ಏಕಾಂಗಿ ವೀರನಂತೆ ಮುಂಬೈಗೆ ಹೋಗಿ ಭಿನ್ನಮತೀಯರನ್ನು ಭೇಟಿಯಾಗಲು ವಿಫಲರಾದರೂ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಈ ಕುರಿತು ಜಿ.ಆರ್.ಸತ್ಯಲಿಂಗರಾಜು ವಿಶ್ಲೇಷಣೆ ಇಲ್ಲಿದೆ.

ಯಾರು ಯಾರನ್ನ ಮೆಚ್ಚಿಸಲು ಸರ್ಕಾರದ `ಮಹಾಪತನ’ದ ವೇಳೆಯಲ್ಲೂ ಮಹಾನ್ ನಾಟಕವನ್ನಾಡುತ್ತಿದ್ದಾರೆ ಎಂಬುದೇ ಅಂದಾಜಿಗೆ ಸಿಲುಕದ ವಿಚಾರವಾದರೂ, ಇಂಥದ್ದರಿಂದ ಯಾರೊಬ್ಬರೂ ಹೊರತಾಗಿಲ್ಲ ಎಂಬುದು ಮಾತ್ರ ಸ್ಪಷ್ಟ.

ಕಾಂಗ್ರೆಸ್‍ನಲ್ಲಿ ಬಂಡೆದ್ದಿರುವವರೆಲ್ಲ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರು, ಹೀಗಾಗಿ ಇವರದೇ ಕೈವಾಡ ಎಂಬ ದೂರನ್ನ ವರಿಷ್ಠರಿಗೆ ಮುಟ್ಟಿಸುವ ಸರದಿಯೀಗ ಡಿ.ಕೆ.ಶಿವಕುಮಾರ್ ಗಿದೆ. ಮೊನ್ನೆ ಸಂಜೆ ಇದ್ದಕ್ಕಿದ್ದಂತೆ ದೆಹಲಿಗೆ ಹೋಗಿ ಸಿದ್ದರಾಮಯ್ಯ ವಿರುದ್ದ ಒಂದಷ್ಟು ಹೇಳಿ ವಾಪಸ್ಸು ಬಂದವರು, ಇಲ್ಲಿನ ನಾಯಕರ ಗಮನಕ್ಕೂ ತರದೇ ಮುಂಬೈ ವಿಮಾನವನ್ನೇರಿ, ಅತೃಪ್ತರನ್ನ ಸದೆಬಡಿದಾದರೂ ಎತ್ತಿಕೊಂಡು ಬರುತ್ತೇನೆ ಎಂಬಂಥ ಪಟ್ಟುಗಳನ್ನ ಪ್ರದರ್ಶಿಸಿದರು.   ಜಟಿಲಗೊಂಡಿರುವ ಪರಿಸ್ಥಿತಿಯನ್ನ ನಿಭಾಯಿಸಲು ಮೊದಲಿಗೆ ಎಲ್ಲಾ ನಾಯಕರೂ ಸಾಮೂಹಿಕವಾಗಿ ನಿರ್ಣಯ ತೆಗೆದುಕೊಳ್ಳಬೇಕು ಎಂಬ ಪರಿಜ್ಞಾನ ಇಲ್ಲಿ ಬರಲೇ ಇಲ್ಲ.

ಹೋಟೆಲ್‍ನಲ್ಲಿ ಅತೃಪ್ತರನ್ನೆಲ್ಲ ಮಾತಾಡಿಸಿ, ಒಂದು ವೇಳೆ ಅದು ಯಶಸ್ವಿಯಾಗಿದ್ದರೆ ಸಿದ್ದರಾಮಯ್ಯ ಕೋಟೆಯನ್ನ ವಶಪಡಿಸಿಕೊಳ್ಳಬಹುದು, ಇದಾಗದಿದ್ದರೂ ತಾನೊಬ್ಬ ಧೈರ್ಯವಂತ ನಾಯಕ ಎಂಬುದನ್ನ ತೋರಿಸಿ, ವರಿಷ್ಠರಿಗೆ ಹತ್ತಿರಾಗುವುದು ಅದರ ಫಲವಾಗಿ ವಿರೋಧ ಪಕ್ಷದ ನಾಯಕ ಸ್ಥಾನ ಹೊಡೆದುಕೊಳ್ಳುವ ಪಕ್ಕಾ ಲೆಕ್ಕದಿಂದಲೇ ಡಿಕೆಶಿ ಹೋಗಿದ್ದು. ಬಂದಿದ್ದು ಬರಿಗೈಯಲ್ಲಾದರೂ ಮುಂದೆ ವಿಪಕ್ಷ ನಾಯಕನಾದರೆ ಆಗುವ ಅನುಕೂಲಗಳು ಅನೇಕ. ಅದರಲ್ಲಿ ಸಿದ್ದರಾಮಯ್ಯ ಮೂಲೆಗೋಗುತ್ತಾರೆ, ಆಗ 2013 ರಲ್ಲಿ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಕಳಂಕ ಇರುವವರಿಗೆ ಮಂತ್ರಿ ಮಾಡಲ್ಲ ಎಂಬ ಹಠದಿಂದ ಡಿಕೆಶಿಯನ್ನು ದೂರವೇ ಇಟ್ಟಿದ್ದರು. ಆರು ತಿಂಗಳ ಸತತ ಪ್ರಯತ್ನದಿಂದ ವರಿಷ್ಠರ ಮೂಲಕವೇ ಸಂಪುಟಕ್ಕೆ ಸೇರುವಲ್ಲಿ ಯಶಸ್ವಿಯಾಗಿದ್ದರು. ಡಾ. ಪರಮೇಶ್ವರ್ ಹುದ್ದೆಯಿಂದ ಇಳಿದಾಗಲೂ ಮತ್ತು ಸಂಸದ್ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಬದಲಾಯಿಸಬೇಕು ಎಂಬ ವಾತಾವರಣ ಬಂದಾಗಲೂ ಕೆಪಿಸಿಸಿ ಅಧ್ಯಕ್ಷತೆಗೆ ಡಿಕೆಶಿ ಏರದಂತೆ ತಡೆದು, ದಿನೇಶ್ ಗುಂಡೂರಾವ್ ಬೆನ್ನಿಗೆ ನಿಂತುಬಿಟ್ಟರು. ಈ ಹಳೇ ದ್ವೇಷವನ್ನ ತೀರಿಸಿಕೊಂಡಂತಾಗುತ್ತೆ.

ಸಿದ್ದರಾಮಯ್ಯ ಪಕ್ಕಾ ಬೆಂಬಲಿಗ ಪಡೆಯನ್ನೇ ಒಲಿಸಿಕೊಂಡರೆ, ತನ್ನದೇ ನಾಯಕತ್ವ ಸಾಬೀತಾಗಿ ಮುಂದೆ ಮುಖ್ಯಮಂತ್ರಿ ಗಾದಿಗೇರಲು ಹಾದಿ ಸುಲಭ ಎಂಬುದು ಇನ್ನೊಂದು ಲೆಕ್ಕವಾದರೆ, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಪ್ರಕರಣಗಳೇನು ಬೆನ್ನು ಹತ್ತಿ ಕೂತಿದ್ದಾವೋ ಅದು ಕುತ್ತಿಗೆ ಬರುವಷ್ಟರ ಮಟ್ಟಿಗೆ ಬರದಂತೆ ತಡೆದುಕೊಳ್ಳುವುದಕ್ಕೆ ವಿಪಕ್ಷ ನಾಯಕ ಸ್ಥಾನ ಕೆಲಸಕ್ಕೆ ಬರುತ್ತೆ, ಅದೂ ಯಡಿಯೂರಪ್ಪ ಜತೆ ಸುಮಧುರ ಬಾಂಧವ್ಯವಿರುವುದು ಇನ್ನೂ ಅನುಕೂಲವಾಗುತ್ತೆ ಎಂಬ ದೂರದೃಷ್ಟಿಯಿಂದಲೇ, ನಾನೊಬ್ಬನೇ ಎಂಬ ಏಕಾಂಗಿ ಪ್ರದರ್ಶನ ಮಾಡಿಬಿಟ್ಟರು.

ತನ್ನ ನೆಲೆಗೇ ಕೈಹಾಕಿ, ತನ್ನ ವಿರುದ್ದವೇ ದೂರು ಹೇಳುವುದನ್ನ ಸಹಿಸದ ಸಿದ್ದರಾಮಯ್ಯ, ಒಂಟಿಯಾಗಿ ಯಾಕೆ ಹೋಗಿದ್ದರು ಎಂದು ಬಹಿರಂಗವಾಗಿಯೇ ಕೇಳಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನಾಯಕರಲ್ಲೇ ಸರ್ಕಾರ ಉಳಿಸುವ ಮನಸಿಲ್ಲ, ಬದಲಿಗೆ ತಮ್ಮತಮ್ಮದನ್ನ ಗಟ್ಟಿ ಮಾಡಿಕೊಳ್ಳುವುದಷ್ಠೆ ಬೇಕಾಗಿದೆ ಎಂಬುದು ದೃಢವಾಗಿದೆ.

ನನ್ನದೇನೂ ಪಾತ್ರವಿಲ್ಲ, ಮುಖ್ಯಮಂತ್ರಿಗೆ ಮಾಡಬೇಕಾದ ಕೆಲಸಗಳ ಬಗ್ಗೆ ಪತ್ರಗಳನ್ನ ಬರೆದಿದ್ದೆ, ಅವರು ಒಂದನ್ನೂ ಮಾಡಲಿಲ್ಲ. ಹೀಗಾಗಿಯೇ ನಮ್ಮ ಶಾಸಕರು ತಿರುಗಿಬಿದ್ದಿರುವುದು ಎಂಬ ದೂರನ್ನ ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ದ ವರಿಷ್ಟರಿಗೆ ಕೊಟ್ಟಿದ್ದಾರೆ. ಇದರಿಂದಾಗಿಯೂ ಅಧ:ಪತನದ ಅಂಚಿಗೆ ಸರ್ಕಾರ ಸರಿದಿರುವುದಕ್ಕೆ ಕಾರಣ ಯಾರು ಎಂಬುದನ್ನ ಅವರವರ ನೆಲೆಗಟ್ಟಿನಲ್ಲೇ ಹೇಳುತ್ತಿರುವುದು ಒಟ್ಟಾರೆಯಾಗಿ ಸಮನ್ವಯ ಎಂಬುದು ಇರಲೇ ಇಲ್ಲ ಎಂಬುದು ಬಯಲಾಗಿದೆ ಅಷ್ಟೆ.   ನನ್ನನ್ನೆ ಅಪರಾಧಿ ಸ್ಥಾನದಲ್ಲಿಡಲು ನೋಡುತ್ತಿರುವ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಸೇರಿಕೊಂಡೇ, ಮುಂಬೈಗೆ ಹೋಗಿ ಅತೃಪ್ತರನ್ನ ಒಲಿಸಿಕೊಳ್ಳುವ ಮುಖೇನ ಸಿದ್ದರಾಮಯ್ಯ ಪಾತ್ರವನ್ನ ಬಹಿರಂಗಗೊಳಿಸುವ ತಂತ್ರ ರೂಪಿಸಿಕೊಂಡಿದ್ದರು ಎಂಬುದೇ ಸಿದ್ದುಗಿರುವ ಉರಿ. ಅದಕ್ಕಾಗಿಯೇ ಡಿಕೆಶಿಯ ಒಂಟಿಯಾಗಿ ಹೋಗಿದ್ದೇಕೆ ಎನುತ್ತಲೇ, ಪತ್ರಗಳಿಗೂ ಕಿಮ್ಮತ್ತು ಕೊಡಲಿಲ್ಲವೇಕೆ ಎಂದು ಅಬ್ಬರಿಸುತ್ತಿದ್ದಾರೆ.

ಇಂಥವೆಲ್ಲ ರಾಜಕೀಯ ಒಳಸುಳಿಗಳು ಅಸ್ತಿತ್ವದಲ್ಲಿ ಇರುವುದರಿಂದಲೇ, ಬಂಡಾಯವನ್ನ ಸದೆಬಡಿಯುವಂಥ ಪರಿಸ್ಥಿತಿ ನಿಯಂತ್ರಣ ಕಳೆದುಕೊಂಡುಬಿಟ್ಟಿದೆ. ಒಬ್ಬರು ನಿಯಂತ್ರಣ ತೆಗೆದುಕೊಂಡು ಯಶಸ್ವಿಯಾದರೆ ನನಗದು ಬುಡಕ್ಕೆ ಬರುತ್ತೆ ಎಂದೇ ಪ್ರತಿಯೊಬ್ಬರೂ ಅರ್ಥೈಸಿಕೊಂಡಿರುವುದರಿಂದ ಒಬ್ಬರ ಕೈ ಮೇಲಾಗಲು ಇನ್ನೊಬ್ಬರು ಬಿಡುತ್ತಿಲ್ಲ. ಪರಿಣಾಮವಾಗಿ ಸರ್ಕಾರ ಉರುಳಿಸುವ ಕೈಗಳೇ ಮೇಲಾಗಿವೆ.   ಕಾಂಗ್ರೆಸ್ಸಿನ ನಾಯಕರು ನಾಟಕಾಭಿನಯದಲ್ಲಿ ತೊಡಗಿದ್ದರೆ, ದಳದವರು ತಮ್ಮಿಂದಾದ ಎಡವಟ್ಟುಗಳು, ರೇವಣ್ಣ ರೂಪದಲ್ಲಿ ಬಂದೆರಗಿದ ಹಿಡಿತಗಳಂಥವನ್ನ ಆತ್ಮವಿಮರ್ಶೆಗೊಳಪಡಿಸಿಕೊಳ್ಳದೆ, ನಮ್ಮದೇನಿಲ್ಲ ಎಂಬ ಪೋಸು ಕೊಡುತ್ತಿದ್ದಾರೆ.  ಇಲ್ಲಿ ಎಲ್ಲಾ ನಾಯಕರ  ನೈತಿಕತೆ ಅಧ:ಪತನವಾಗಿದೆ, ಸರ್ಕಾರದ ಮಹಾಪತನವಾಗುತ್ತಿದೆ. ಬಿಜೆಪಿಯ ಪರ್ವಕ್ಕೆ ಮುನ್ನುಡಿ ಬರೆದಿದೆ.