ಧೂಳಿನಿಂದ ದೂರ, ಅಸ್ತಮವೂ ದೂರ

ಧೂಳಿನಿಂದ ದೂರ, ಅಸ್ತಮವೂ ದೂರ

ಇಂದು ವಿಶ್ವ ಅಸ್ತಮ ದಿನ. ಈ ಹಿನ್ನೆಲೆಯಲ್ಲಿ ಅಸ್ತಮದ ಲಕ್ಷಣಗಳು, ಅದನ್ನುತಡೆಯುವ ಕ್ರಮಗಳು ಮತ್ತು ಚಿಕಿತ್ಸೆ ಬಗ್ಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಮಕ್ಕಳ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಎ.ಆರ್. ಸೋಮಶೇಖರ್ ವಿಶೇಷ ಲೇಖನ ಬರೆದಿದ್ದಾರೆ.

 

ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಮೇ 7 ರಂದು ವಿಶ್ವ ಅಸ್ತಮ ದಿನ ಎಂದು ಆಚರಿಸುತ್ತಾರೆ ಇದರ ಉದ್ದೇಶ ಸಾಮಾನ್ಯ ಜನರಿಗೆ ಅಸ್ತಮಾ ಹಾಗೂ ಅದರ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದಾಗಿದೆ.

ನಮ್ಮ ಸಹಜ ಉಸಿರಾಟದ ಕ್ರಿಯೆ ಯಲ್ಲಿ ಗಾಳಿಯು ಶ್ವಾಸನಾಳದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುತ್ತದೆ ಆದರೆ  ಅಸ್ತಮಾದಲ್ಲಿ ವಾಯು ಮಾರ್ಗಗಳು ಹಲವಾರು ಕಾರಣಗಳಿಂದ ಕಿರಿದುಗೊಂಡು ಗಾಳಿಯು ಸಹಜವಾಗಿ ಹರಡುವುದಕ್ಕೆ ತೊಂದರೆ ಉಂಟುಮಾಡುತ್ತದೆ ಇದರ ಪರಿಣಾಮವಾಗಿ ಅಸ್ತಮಾ ರೋಗದ ಚಿನ್ಹೆಗಳು ಕಾಣಿಸಿಕೊಳ್ಳುತ್ತವೆ.

ಅಂಕಿ ಅಂಶಗಳು

ಅಸ್ತಮ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಾಧಿಸುವ ಕಾಯಿಲೆ. ಅಂಕಿ ಅಂಶಗಳ ಪ್ರಕಾರ ಶೇಕಡ 20 ರಿಂದ 30ರಷ್ಟು ಮಕ್ಕಳಲ್ಲಿ ಕಂಡು ಬಂದಿದೆ.

ಅಸ್ತಮದ ಲಕ್ಷಣಗಳು

1.ರಾತ್ರಿ ಅಥವಾ ಮುಂಜಾವಿನ ಕೆಮ್ಮು

2.ಎದೆಯಿಂದ ಶಿಳ್ಳೆ ಅಂತಹ ಶಬ್ದ ಅಥವಾ ಎದೆ ಬಿಗಿತ

3.ಉಸಿರು ಕಟ್ಟಿದಂತಾಗುವುದು

4.ಹವಾಮಾನ ಬದಲಾವಣೆಯಿಂದ ಬರುವ ಕೆಮ್ಮು

5.ಮೇಲಿಂದ ಮೇಲೆ ಬರುವ ನೆಗಡಿ ಸೀನು ಮೂಗು ಕಟ್ಟುವುದು

6.ಕಣ್ಣು ಉರಿ ಕಿವಿ ಉರಿ

7.ಚರ್ಮದ ಉರಿ ಹಾಗೂ ನವೆ

8.ಮನೆಯ ಇತರ ಸದಸ್ಯರಲ್ಲಿ ಶ್ವಾಸಕೋಶದ ತೊಂದರೆ

9.ಪ್ರಚೋದಕ ಗಳಿಂದ ಉಲ್ಬಣಗೊಳ್ಳುವ ಚರಿತ್ರೆ

10.ಮೇಲಿಂದ ಮೇಲೆ ಗಂಟಲಿನ ಹಾಗೂ ಶ್ವಾಸಕೋಶದ ಸೋಂಕು

11.ಅಧಿಕ ದೈಹಿಕ ಶ್ರಮದಿಂದ ಉಲ್ಬಣಗೊಳ್ಳುವ ಕೆಮ್ಮು

ತೀವ್ರತರವಾದ ಲಕ್ಷಣಗಳು

1.ಅತಿಯಾದ ಕೆಮ್ಮು, ಉಸಿರು ಕಟ್ಟುವುದು

2.ಅತಿಯಾದ ಸೆಕೆ ಸುಸ್ತು

3.ನೀರಿನಂಶ ಕಡಿಮೆಯಾಗುವುದು

4.ದೇಹದಲ್ಲಿನ ಆಮ್ಲಜನಕದ ಕೊರತೆ ಉಂಟಾಗುವುದು

5.ಅಪಾಯ ಮಟ್ಟದಲ್ಲಿ ತುಟಿ ಮತ್ತು ಕೈಗಳು ನೀಲಿ ಯಾಗುವ ಸಾಧ್ಯತೆ.

 

ಅಸ್ತಮವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ

1. ಲಘು ಪ್ರಮಾಣ:-ಇದರಲ್ಲಿ ಅಸ್ತಮ ಲಕ್ಷಣಗಳು ವಾರಕ್ಕೊಮ್ಮೆ ಅಥವಾ ಅದಕ್ಕಿಂತಲೂ ಹೆಚ್ಚಿನ ದೀರ್ಘಾವಧಿಯಲ್ಲಿ ಕಾಣಬಹುದು

2. ಮಧ್ಯಮ ಪ್ರಮಾಣದ ಅಸ್ತಮ:- ಲಕ್ಷಣಗಳು ವಾರದಲ್ಲಿ ಒಂದು ಬಾರಿ ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಬಹುದು

3. ತೀವ್ರ ತರಹದ ಅಸ್ತಮ:-ಇದರಲ್ಲಿ ಅಸ್ತಮಾ ಲಕ್ಷಣಗಳು ಪ್ರತಿದಿನ ಕಂಡುಬಂದು ಆಗಾಗ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚು.

 

ಅಸ್ತಮ ಚಿಕಿತ್ಸೆ

ತೀವ್ರತರಹದ ಅಸ್ತಮಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವುದು ಬಹಳ ಉತ್ತಮ, ಇದರಲ್ಲಿ ಗಾಳಿಯ ಮೂಲಕ ಕೊಡುವ ಔಷಧಿಗಳು ಹೆಚ್ಚು ಜನಪ್ರಿಯ. ಇದರಲ್ಲಿ ಗಾಳಿಯ ಮೂಲಕ ಕೊಡುವ ಔಷಧಿಗಳು ಸರಳ ವಿಧಾನ ಸರಳ ಹಾಗೂ ಸುಲಭ ಇದನ್ನು ಇನ್ಹೇಲರ್ ಅನ್ನುತ್ತೇವೆ, ಇದರಲ್ಲಿ ಎರಡು ಬಗೆಯಿದೆ 1 ರಿಲೀವರ್ ಮತ್ತೊಂದು ಪ್ರಿವೆಂಟರ್ ಎಂದು ಕರೆಯುತ್ತಾರೆ

 

ಪ್ರಚೋದಕಗಳ ನಿಯಂತ್ರಣ

ಹೆಚ್ಚಿನ ಪ್ರಚೋದಕಗಳು ಮನೆಯೊಳಗಿದ್ದು ಇದನ್ನು ಒಳಾಂಗಣ ಮಾಲಿನ್ಯ ಎನ್ನುತ್ತೇವೆ ಅದರಲ್ಲಿ ಮುಖ್ಯವಾದವು ಧೂಳಿನಿಂದ ಕೂಡಿದ ಪ್ರದೇಶ ಶಿಲಿಂದ್ರಗಳು ಮತ್ತು ಮನೆಯಲ್ಲಿ ಇರುವ ಇತರ ಪ್ರಚೋದಕ ಗಳಾದ ಅಗರಬತ್ತಿ ಸಾಮ್ರಾಣಿ ರಾಸಾಯನಿಕಗಳು ಸೊಳ್ಳೆ ಬತ್ತಿ ಕೃತಕ ವಾಸನೆಗಳು ಧೂಮಪಾನ ಸೀಗೆಕಾಯಿ ಪುಡಿ ಮತ್ತು ಮನೆಯಲ್ಲಿ ಕಾಣಿಸಿಕೊಳ್ಳುವ ಜಿರಳೆ ಗಳು.

ಕೆಲವು ಸಾಕು ಪ್ರಾಣಿಗಳಿಂದ ಕೂಡ ಅಸ್ತಮಾ ಬರುವ ಸಾಧ್ಯತೆಗಳು ಹೆಚ್ಚು ಆದ್ದರಿಂದ ಪ್ರಾಣಿಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಅವುಗಳನ್ನು ಮುಟ್ಟಿದ ನಂತರ ಕೈಗಳು ಶುಭ್ರವಾಗಿ ಇರುವಂತೆ ನೋಡಿಕೊಳ್ಳಬೇಕು.

 

ಆಹಾರ

ಕೆಲವೊಮ್ಮೆ ಸಂಸ್ಕರಿಸಿದ ಆಹಾರಗಳು, ಫಾಸ್ಟ್ ಫುಡ್ ಗಳು,ಆಹಾರಕ್ಕೆ ಉಪಯೋಗಿಸುವ ಬಣ್ಣಗಳು, ರಾಸಾಯನಿಕಗಳು ಕೂಡ ಅಸ್ತಮವನ್ನು ಉಲ್ಬಣಗೊಳಿಸುವ ಸಾಧ್ಯತೆಗಳಿವೆ ಇದರಿಂದ ದೂರವಿರುವುದು ಒಳ್ಳೆಯದು.

 ಶಾಲೆಗಳಲ್ಲಿ ಅಸ್ತಮದ ಬಗ್ಗೆ ಮಾಹಿತಿ ಹಾಗೂ ಪ್ರಥಮ ಚಿಕಿತ್ಸೆಗಳ ಬಗ್ಗೆ ಅರಿವು ಅತ್ಯಗತ್ಯ. ಹೊರಾಂಗಣ ಮಾಲಿನ್ಯ ಮತ್ತು ನಿಯಂತ್ರಣ ಕ್ರಮಗಳು ಬಹಳ ಮುಖ್ಯ.

ನಿಯಮಿತ ವ್ಯಾಯಾಮ ಬಹಳ ಮಟ್ಟಿಗೆ ಅಸ್ತಮದಿಂದ ಬಳಲುತ್ತಿರುವವರಿಗೆ ಒಂದು ರೀತಿಯ ಟಾನಿಕ್. ಅಸ್ತಮದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಮೇರೆಗೆ ಎಲ್ಲಾ ರೀತಿಯ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು

 

ಯೋಗ ಮತ್ತು  ಅಸ್ತಮ ನಿಯಂತ್ರಣ

ಹಲವಾರು ಸಂಶೋಧನೆಗಳು ಯೋಗದಿಂದ ಅಸ್ತಮ ನಿಯಂತ್ರಣದಲ್ಲಿರುವುದನ್ನು ದೃಡಪಡಿಸಿದೆ ಇದರ ಉಪಯೋಗ ಅತ್ಯಗತ್ಯ.

ಅಸ್ತಮಾ ಉಲ್ಬಣಗೊಳ್ಳುವ ಮುನ್ನ ತಡೆಗಟ್ಟಿ  ಎನ್ನುವುದು 2019ರ ವಿಶ್ವ ಅಸ್ತಮಾ ದಿನಾಚರಣೆಯ ಘೋಷ ವಾಕ್ಯವಾಗಿದೆ.

   

  ವಿಶ್ವ ಆರೋಗ್ಯ ಸಂಸ್ಥೆಯ ಕೆಲವು ಸೂತ್ರಗಳು

 

1.ಅಸ್ತಮಾ ಚಿಕಿತ್ಸೆಯನ್ನು ವೈದ್ಯರ ಸಲಹೆ ಮೇರೆಗೆ ಚಾಚು ತಪ್ಪದೇ ಪಾಲಿಸಿ

 

2.ಪ್ರಚೋದಕ ಗಳಿಂದ ದೂರವಿರಿ ಉದಾಹರಣೆಗೆ ಧೂಳು,  ಧೂಮಪಾನ ಹಾಗೂ ಪರಾಗ ಗಳು ಹಾಗೂ ಇತರ ಪ್ರಚೋದಕಗಳು

 

3.ಗಾಳಿ ಮೂಲಕ ತೆಗೆದುಕೊಳ್ಳುವ ಔಷಧೀಯ ವಿಧಾನಗಳನ್ನು ಚಾಚು ತಪ್ಪದೆ ಪಾಲಿಸಿ (iಟಿhಚಿಟeಡಿs)

 

4.ದೀರ್ಘಾವಧಿಯ ಚಿಕಿತ್ಸೆಯಲ್ಲಿ ಸಲಹೆ ಮಾಡಿದ ಔಷಧಿಗಳನ್ನು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೆ ನಿಲ್ಲಿಸಬಾರದು

 

5.ಯಾವಾಗಲೂ ಇನ್ಹೇಲರ್ ನಿಮ್ಮ ಬಳಿ ಇಟ್ಟುಕೊಳ್ಳಿ

 

 ಸೂಕ್ತವಾದ ಚಿಕಿತ್ಸೆಯಿಂದ ಹಾಗೂ ಪ್ರಚೋದಕಗಳ ಹತೋಟಿಯಿಂದ ಖಂಡಿತ ಅಸ್ತಮವನ್ನು ನಿಯಂತ್ರಣದಲ್ಲಿಡಬಹುದು ಹಾಗೂ ಸಹಜ ಜೀವನವನ್ನು ನಡೆಸಬಹುದು