ಪಂಕ್ತಿಭೇದದ ಬಂಡೆಗೆ ಮದುವೆಯ ಮದ್ದು!

ಪಂಕ್ತಿಭೇದದ ಬಂಡೆಗೆ ಮದುವೆಯ ಮದ್ದು!


ಅದು ಕಲ್ಯಾಣದ ಶರಣರು ನಡೆದಾಡಿದ ಪುಣ್ಯಭೂಮಿ. ಸಮಾನತೆ, ಸೋದರತೆ, ಸ್ವಾತಂತ್ರ್ಯ ಅಲ್ಲಿನ ತರುಲತೆಗಳ ಕೆಂಪೆಲರಲಿ ಸೂಸಿದ ದಿನಮಾನಗಳು ಜಗತ್ತಿಗೆ ಹೊಸ ಉಸಿರು ನೀಡಿದ್ದೂ ಸುಳ್ಳಲ್ಲ. ಶರಣರ ತತ್ವಾದರ್ಶಗಳನ್ನು ಸಹಜವಾಗಿಯೆ ಮೈದುಂಬಿಕೊಂಡಿದ್ದ ಮಲ್ಲಿನಾಥನಿಗೆ ಸುತ್ತಲಿನ  ವಾಸ್ತವ ಜಗತ್ತು ವಿಸ್ಮಯವನ್ನು ಹುಟ್ಟಿಸಿತ್ತು.

ಇದೇನು? ಮನುಷ್ಯರ ಮಧ್ಯೆ ಮೇಲುಕೀಳು, ಜಾತಿಭೀತಿ, ಧರ್ಮಭ್ರಾಂತಿ ಎಂದು ವಾಸ್ತವದೆದುರು ಅಚ್ಚರಿಪಡುತಿದ್ದ.
ಶರಣರ  ಉದಾತ್ತ ಬದುಕು ಕಣ್ಮುಂದಿನ ಬೆಳಕೇ ಆಗಿರುವಾಗ ನಾವು ಮತ್ತೂ ಏಕೆ ಈ ಕತ್ತಲಿನ ಹಾದಿಯಲ್ಲಿಯೆ ನಡೆಯುತಿದ್ದೇವೆ ಎಂದು ಖಿನ್ನನಾಗುತಿದ್ದ. ಮೌಢ್ಯ, ಅಜ್ಞಾನ ಮತ್ತು ಅಸಮಾನತೆಯ ಅಂಧಕಾರದಲ್ಲಿ
ಮುಳುಗಿದ್ದ ಸಮಾಜದಲ್ಲಿ, ಶರಣರು, ಸಂತರು ಮತ್ತು ಸ್ವಾತಂತ್ರ್ಯ ಚಳುವಳಿಯ ಸಂದರ್ಭದ ಮಹಾಪುರುಷರು ಕಂಡ ಆದರ್ಶಗಳನ್ನು ಬಿತ್ತಿ ಬೆಳೆಯುವುದು ಹೇಗೆಂಬ ಚಿಂತೆ ಮಲ್ಲಿನಾಥ ವಾಡೇಕರರನ್ನು ಕಾಡುತ್ತಲೇ ಇತ್ತು.

ಶರಣ ಚಳುವಳಿಯ ಮಹತ್ತನ್ನು ಜನರಿಗೆ ತಲುಪಿಸಲು ವಾಡೇಕರರು ಪುರಾಣವನ್ನೇ ಮಾಧ್ಯಮವಾಗಿಸಿಕೊಂಡರು. ಭಜನಾ ಸಂಘವನ್ನು ಕಟ್ಟಿ, ದಿನಂಪ್ರತಿ  ಎಲ್ಲ ಸಮುದಾಯದವರೂ ಕೂಡಿ ಶರಣರು, ದಾಸರು, ತತ್ವಪದಕಾರರ ಜೀವನಬೋಧೆಯನ್ನು ಹಾಡುವಂತೆ ಮಾಡಿದರು. 

ಈ ಹಾದಿಯಲ್ಲಿ ಪ್ರೇರಕ ಶಕ್ತಿಯಾಗಿದ್ದು ಗಾಂಧೀ. ಗುರಿಗಿಂತ ಹಾದಿಯೆ ಮುಖ್ಯ ಎನ್ನುವ ಗಾಂಧೀಜಿ ಸರಿಯಾದ ದಿಶೆಯಲ್ಲಿ ಇಡುವ ಸಣ್ಣ ಸಣ್ಣ ಹೆಜ್ಜೆಗಳಿಂದಲೇ ದೂರದ ಗಮ್ಯವನ್ನು ತಲುಪುವ  ಗುಟ್ಟನ್ನು ಹೇಳಿಕೊಟ್ಟಿದ್ದರು. ಆದರ್ಶಗಳನ್ನು ಬರಿ ಆಡಿಕೊಳ್ಳುವುದಲ್ಲ; ದೈನಂದಿನ ಬದುಕಿನಲ್ಲಿ ಅವುಗಳ ಆಚರಣೆಯ ಸಾಧ್ಯತೆಯ ಬಗ್ಗೆ ಯೋಚಿಸುವ, ಕ್ರೀಯಾಶೀಲರಾಗುವ ಬಗೆಯನ್ನು ಗಾಂಧೀಯ ಓದು ಕಲಿಸಿಕೊಟ್ಟಿತ್ತು. ಅದು ವಾಡೇಕರರಿಗೆ ಊರಲ್ಲಿ ಇಂಥ ಸಣ್ಣ ಸಣ್ಣ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲೂ ಮುಖ್ಯ ಪ್ರೇರಣೆ ಆಗಿತ್ತು. ಕಲ್ಬುರ್ಗಿ, ಬೀದರ್ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಆ ದಿನಗಳಲ್ಲಿ ಬಾಬಾಸಾಹೇಬ ಅಂಬೇಡ್ಕರರ ಪ್ರಭಾವವೂ ದಟ್ಟವಾಗಿತ್ತು. ಅದರ ಛಾಯೆಯೂ ವಾಡೇಕರರ ಮೇಲೆ ಬಿದ್ದಿತ್ತು.

ರಿಗೆ ಗಾಂಧೀ, ಬೆಟ್ಟದ ಬುಡದಲ್ಲೆಲ್ಲೋ ಚಿಮ್ಮಿ ಕಣಿವೆ ಗುಡ್ಡ ಸೀಳಿ ಸಾಗರವನ್ನು ಸೇರುವ ನದಿಯಾದರೆ, ಅಂಬೇಡ್ಕರರು ಬಯಲಲ್ಲೆಲ್ಲೋ ಅನಾಥ ಗಾಳಿ ಸುಳಿಸುಳಿಯಾಗಿ ಸುತ್ತಿ ದಶದಿಕ್ಕನೂ ವ್ಯಾಪಿಸುವ ಮಳೆಗಾಳಿ ಎಂದೆನಿಸುತಿತ್ತು.

ಎಪ್ಪತ್ತರ ದಶಕದಲ್ಲಿ  ಸಮಾನ ಮನಸ್ಕ ಗೆಳೆಯರ ಜೊತೆಗೂಡಿ ನಾಟಕ ತಂಡ ಕಟ್ಟಿದ ಮಲ್ಲಿನಾಥರು, ಸಮಾಜದ ಮೌಢ್ಯಗಳನ್ನು ಗೇಲಿ ಮಾಡುವ, ಸಾಕ್ಷರತೆಯ ಮಹತ್ವವನ್ನು ಸಾರುವ, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಅನೇಕ ಬೀದಿ ನಾಟಕಗಳನ್ನು ಆಡಿದರು. ಕೋಲಾಟದ ತಂಡವನ್ನು ಕಟ್ಟಿ ಪಂಚಮಿಗೆ ಹಾಡುವ ಮೂಲಕ ಹೊಸ ಸಂಭ್ರಮವನ್ನು ಮೂಡಿಸಿದರು. ಈ ಎಲ್ಲ ಚಟುವಟಿಕೆಗಳಲ್ಲೂ ಎಲ್ಲ ಜಾತಿವರ್ಗದ ಜನರನ್ನೂ ಒಳಗೊಳ್ಳುತಿದ್ದರಿಂದ ಊರಲ್ಲಿ ಅಮಾನವೀಯ ಜಾತಿ ಕಟ್ಟಳೆಗಳು ತಾವೇ ದುರ್ಬಲಗೊಂಡು ಹೊಸಪೀಳಿಗೆಯ ಜನಮಾನಸದಲ್ಲಿ ಮನುಷ್ಯರೆಲ್ಲ ಒಂದೇ ಎಂಬ ಭಾವವನ್ನು ಬಿತ್ತಿದವು. ವರ್ಗಕಲಹಗಳು ಕ್ಷೀಣವಾಗಿ ದಮನಿತರನ್ನೂ ಗೌರವದಿಂದ ಕಾಣುವ ಮನೋಭಾವ ಮೂಡಿಸಿದವು. ಸುತ್ತ ಮುತ್ತಲಿನ ಹಳ್ಳಿಗಳಾದ ಬಾರ್ಖೇಡ, ಹತ್ತರ್ಗಿ, ಹಪ್ಪರ್ಗಿ, ಅಟ್ಟೂರು ಮತ್ತು ಬೆಟಗೇರಿಗಳಲ್ಲೂ ಈ ಹೊಸಗಾಳಿ ಬೀಸತೊಡಗಿತ್ತು.

ಎಂಭತ್ತರ ದಶಕದಲ್ಲೂ ಚಿತ್ಕೋಟದಲ್ಲಿ ಪಂಕ್ತಿಭೇದ ಜಾರಿಯಲ್ಲಿತ್ತು. ಇದನ್ನು ಮುರಿಯುವುದು ಹೇಗೆಂಬುದೇ ಮಲ್ಲಿನಾಥರ ಯೋಚನೆಯಾಗಿತ್ತು. ಅದೇ ಸಂದರ್ಭದಲ್ಲಿ ಮಗನ ಮದುವೆ ನಿಶ್ಚಯವಾಗಿತ್ತು. 

ಜೀವದ ಗೆಳೆಯ ಖಾಸೀಂಸಾಬನ ಜೊತೆಗೂಡಿ ಮದುವೆಯ ಸಿದ್ಧತೆಯಲ್ಲಿ ಭಾಗಿಯಾಗಿದ್ದ ಮಲ್ಲಿನಾಥರಿಗೆ ಇದ್ದಕ್ಕಿದ್ದಂತೆ, ಈ ಮದುವೆಯನ್ನೆ ಸಾಮೂಹಿಕ ನೆಲೆಯಲ್ಲಿ ಏರ್ಪಡಿಸಬಾರದೇಕೆ ಎಂಬ ಯೋಚನೆ ಬಂತು. ಇದನ್ನು ಖಾಸೀಂ ಸಾಬನ ಜೊತೆಗೇ ಚರ್ಚಿಸಿದರು. `ಊರಲ್ಲಿನ ಬಲಾಢ್ಯರನ್ನೂ, ಬಂಧುಬಳಗದವರನ್ನೂ ಎದುರು ಹಾಕಿಕೊಂಡು ಸುಮ್ಮನೆ ಏಕೆ ಸಂಕಷ್ಟವನ್ನು ತಂದುಕೊಳ್ಳುತ್ತೀರಿ?' ಎಂದು ಖಾಸೀಮ ಮಲ್ಲಿನಾಥರಿಗೆ ತಿಳಿಹೇಳಿದ. ಮಾಡು ಇಲ್ಲವೇ ಮಡಿ ಎಂಬ ಮನೋಭಾವದ ಮಲ್ಲಿನಾಥರು ಖಾಸೀಮನ ಮಾತಿಗೆ ಮುಗುಳ್ನಕ್ಕು ಹೇಳಿದರು.
`ಊರಲ್ಲಿನ ಪಂಕ್ತಿಭೇದ ಊಟದ ಪದ್ಧತಿಯನ್ನು ಉಡಾಯಿಸಲು ಇದೊಳ್ಳೆ ಅವಕಾಶ' ಎಂದುಬಿಟ್ಟರು. ಅಲ್ಲಿಗೆ ಕೌಟಂಬಿಕ ಕಾರ್ಯಕ್ರಮವಾಗಬೇಕಿದ್ದ ಮದುವೆ ಸಾರ್ವಜನಿಕ ಕಾರ್ಯಕ್ರಮ ಆಗುವುದು ಪಕ್ಕಾ ಆಗಿತ್ತು.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಎಲ್ಲ ಮನೆಗಳ ಹಿರಿಯರೂ ಮಕ್ಕಳ ಮದುವೆಯನ್ನು ಮನೆಯಂಗಳದಲ್ಲೆ ಮಾಡಲು ಹಂಬಲಿಸುತ್ತಾರೆ. ಆಗ ಮನೆ ತುಂಬುವ ಸಡಗರ, ಸಂಭ್ರಮಗಳನ್ನು ಕಣ್ತುಂಬಿಕೊಳ್ಳುವ ಆಸೆ ಅವರದು. ಇದು ಕೆಲವೊಮ್ಮೆ ಪ್ರತಿಷ್ಟೆಯ ಪ್ರದರ್ಶನಕ್ಕೂ ಅವಕಾಶ ಒದಗಿಸುವುದುಂಟು. ಆದರೆ , ಈ ರೂಢಿಯನ್ನು ಧಿಕ್ಕರಿಸಿ ಹೊರಟಿದ್ದ ಮಲ್ಲಿನಾಥರು ಮೊದಲು ಮಗನಿಂದಲೇ ವಿರೋಧವನ್ನು ಎದುರಿಸಬೇಕಾಯಿತು. ಬಂಧು ಬಳಗದವರಂತೂ ವಿವಾಹಕ್ಕೆ ಬರುವುದೆ ಇಲ್ಲ ಎಂದು ಹಟ ತೊಟ್ಟರು. ತಮ್ಮ ಜೀವನಾನುಭವ ಹಾಗೂ ವೈಚಾರಿಕ ಪ್ರಜ್ಞೆಯ ಮೂಲಕ ಎಲ್ಲರಿಗೂ ತಿಳಿವಳಿಕೆ ಮೂಡಿಸುವಲ್ಲಿ ಸಫಲರಾದ ಅವರು, ಮದುವೆಯ ಹಂದರವನ್ನು ಊರ ಚಾವಡಿ ಬಯಲಿನಲ್ಲಿ ಹಾಕಿಸಿದರು. ಅಲ್ಲದೇ ಒಂದೇ ಪಂಕ್ತಿಯಲ್ಲಿ ಕೂತು, ಎಲ್ಲರೂ ಜೊತೆಗೂಡಿ ಊಟ ಮಾಡುವ ವ್ಯವಸ್ಥೆ ಮಾಡಿದರು. ಕೆಲವರಿಗೆ ಇದು ಒಳಗೊಳಗೆ ಅಸಹನೆ, ಅತೃಪ್ತಿ ಉಂಟು ಮಾಡಿದ್ದೂ ನಿಜ. ಆದರೂ ಈ ವರೆಗೆ ಬಂಡೆಯಂತೆ ನಿಂತಿದ್ದ ಪಂಕ್ತಿಭೇದದ ಗೊಡ್ಡು ಸಂಪ್ರದಾಯ ಅಂದಿಗೆ ಪುಡಿಗಟ್ಟಿ ಹೋಗಿತ್ತು. ಆ ಪುಡಿಮಣ್ಣಿನಲ್ಲೆ ಸಾಮರಸ್ಯದ ಹೊಸಬೀಜವೊಂದು ಅಂಕುರವೊಡೆದು ಮುಗುಳು ನಗೆ ಬೀರಿತ್ತು.