ಆರಕ್ಕೇರದ ಮೂರಕ್ಕಿಳಿಯದ ನಾಲ್ವರು

ಆರಕ್ಕೇರದ ಮೂರಕ್ಕಿಳಿಯದ ನಾಲ್ವರು

ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಿಗೇನು ಕಮ್ಮಿಯಿಲ್ಲ. ಒಳ್ಳೊಳ್ಳೆ  ಸಿನಿಮಾಗಳ ಮೂಲಕ ಕೆಲ ನಟರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರೆ, ಇನ್ನು ಕೆಲವರು ಸಿನಿಮಾಗಳನ್ನು ಮಾಡ್ತಾ ಮಾಡ್ತಾ ಗುರುತಿಸಿಕೊಳ್ಳೋಕೆ ಆರಂಭಿಸಿದ್ರು. ಸಿನಿಮಾರಂಗದಲ್ಲಿ ನೆಲೆಯೂರೋಕೆ ತುಂಬಾ ಶ್ರಮಿಸಬೇಕಾಗತ್ತೆ. ಯಾಕಂದ್ರೆ ಬಣ್ಣದ ಬದುಕು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಇವತ್ತು ದರ್ಶನ್, ಸುದೀಪ್ ಇನ್ನಿತರ ಬೆರಳೆಣಿಕೆ ಕಲಾವಿದರು ಸಿನಿಮಾರಂಗದಲ್ಲಿ ನೆಲೆ ನಿಂತಿದ್ದಾರೆ ಅಂದ್ರೆ ಅದ್ಕೆ ಅವರು ಪಟ್ಟ ಶ್ರಮ ಕಾರಣ. ಶ್ರಮವೂ ಇದೆ ಪ್ರತಿಭೆಯೂ ಇದೆ ಆದ್ರೂ ಯಾಕೆ ಕೆಲ ನಟರ ಸಿನಿಮಾಗಳು  ನಿಲ್ತಿಲ್ಲ ಅನ್ನೋ ಪ್ರಶ್ನೆಗಳು ಮೂಡೋದು ಸಹಜ. ಈ ಲೇಖನದ ವಸ್ತು ವಿಚಾರವೇ ಅದು. ಓಡೋ ಕುದುರೆ ಮೇಲೆಯೇ ಜನ ದುಡ್ಡು ಹಾಕೋದು ಅನ್ನೋ ರೀತಿ ನಿರ್ಮಾಪಕರು ಸೆಲೆಕ್ಟಿವ್ ಆಗಿ ವರ್ತಿಸ್ತಿದ್ದಾರೆ. ಇನ್ನು ನಿರ್ದೇಶಕರುಗಳು ಕೂಡ ಕಥೆ ರೆಡಿ ಮಾಡುವಾಗಲೇ ಇದು ಇಂಥ ಸ್ಟಾರ್ ನಟನಿಗೆ ಅಂಥ ನಿರ್ಧರಿಸಿಯೇ ಅಂಥ ಕಥೆ ರೆಡಿ ಮಾಡಿರ್ತಾರೆ. ಈ ರೀತಿಯ ವಾತಾವರಣ ಇತ್ತ ಸ್ಟಾರ್ ಗಳು ಅಲ್ಲ, ಅತ್ತ ಹೊಸಬರು ಅಲ್ಲ ಅನ್ನೋ ನಟರನ್ನು ಪೇಚಿಗೆ ಸಿಲುಕಿಸತ್ತೆ. ಇಂಥ ಸ್ಥಿತಿಯಲ್ಲಿರೋ ನಾಯಕರ ಪಟ್ಟಿ ದಿನೇ ದಿನೇ ಉದ್ದವಾಗಿ ಬೆಳೆಯುತ್ತಲಿದೆ.  

ಅಜಯ್ ರಾವ್ ಎಂದ ತಕ್ಷಣ ಕಣ್ಮುಂದೆ ಬರೋದು ಅಮುಲ್ ಬೇಬಿಯಂಥ ಮುಗ್ಧ ಮುಖ. ಈ ಸ್ವಭಾವಕ್ಕೆ ತಕ್ಕಂತೆಯತೇ ಅಜಯ್ ಒಲಿದು ಬಂದಿದ್ದು ಎಕ್ಸ್ ಕ್ಯೂಸ್ ಮಿ ಸಿನಿಮಾದ ಒಂದು ಪಾತ್ರ. ಸುಮಲತಾ ಮಗನಾಗಿ, ಸುನಿಲ್ ಗೆ ಸ್ನೇಹಿತನಾಗಿ, ರಮ್ಯಾಗೆ ಜೋಡಿಯಾಗಿ ಅಜಯ್ ಎಕ್ಸ್ ಕ್ಯೂಸ್ ಮಿ ಸಿನಿಮಾದಲ್ಲಿ ಅಭಿನಯಿಸಿದ್ರು. ಮೊದಲ ಸಿನಿಮಾದಲ್ಲೇ ಭರವಸೆಯ ನಟನಾಗಿ ಕಾಣಿಸಿಕೊಂಡ ಅಜಯ್ ಗೆ ಮುಂದೆ ಅವಕಾಶಗಳು ಸಿಕ್ಕವಾದ್ರೂ ಯಾವ ಸಿನಿಮಾಗಳು ಯಶಸ್ಸು ಕಾಣಲಿಲ್ಲ. 2003 ರಲ್ಲಿ ತೆರೆಕಂಡ ಎಕ್ಸ್ ಕ್ಯೂಸ್ ಮಿ ಸಿನಿಮಾ ಬಳಿಕ ಅಜಯ್ ರಾವ್ ಗೆ ಬ್ರೇಕ್ ಕೊಟ್ಟ ಸಿನಿಮಾ ತಾಜ್ ಮಹಲ್. ಇದೊಂದು ಲವ್ ಸ್ಟೋರಿಯಾಧಾರಿತ ಕಥೆ ಹೊಂದಿತ್ತು. ಆರ್ ಚಂದ್ರು ನಿರ್ದೇಶನದಲ್ಲಿ ಅಜಯ್ ರಾವ್, ಪೂಜಾ ಗಾಂಧಿ ಮಿಂಚಿದ್ರು. ತಾಜ್ ಮಹಲ್ ಬರೀ ಲವ್ ಸ್ಟೋರಿ ಓರಿಯೆಂಟೆಡ್ ಸಿನಿಮಾವಾಗಿ ಮಾತ್ರವಲ್ಲದೇ ಮ್ಯೂಸಿಕಲ್ ಬ್ಲಾಕ್ ಬಾಸ್ಟರ್ ಸಿನಿಮಾವಾಗಿಯೂ ರೆಕಾರ್ಡ್ ಮಾಡ್ತು. ಅಜಯ್ ರಾವ್ ಹೆಸರು ಗಾಂಧಿನಗರದೆಲ್ಲೆಡೆ ಸಖತ್ ಆಗಿಯೇ ಸದ್ದು ಮಾಡ್ತು. ಸ್ಟಾರ್ ವ್ಯಾಲ್ಯೂ, ಕ್ಲಾಸ್ ಸಿನಿಮಾ, ಮಾಸ್ ಸೀನ್ಸ್ ಎಂಬೆಲ್ಲಾ ಮಾನದಂಡಗಳ ನಡುವೆ ಈ ರೀತಿ ಸಿನಿಮಾಗಳು ಕೂಡ ನೆಲೆಯೂರತ್ತೆ ಅಂಥ ಕೆಲವ್ರು ನಿರ್ಧರಿಸಿದ್ರು. ಈ ಸಿನಿಮಾದ ಬಳಿಕ ಅಜಯ್ ಅಭಿನಯಿಸಿದ ಮತ್ತೊಂದು ಸಿನಿಮಾ ಕೃಷ್ಣನ್ ಲವ್ ಸ್ಟೋರಿ. ರಾಧಿಕಾ ಪಂಡಿತ್ ಅಜಯ್ ರಾವ್ ಜೋಡಿಯಲ್ಲಿ ಈ ಸಿನಿಮಾ ಚೆನ್ನಾಗಿಯೇ ಮೂಡಿಬಂತು. ಕೃಷ್ಣನ್ ಲವ್ ಸ್ಟೋರಿ ಸಕ್ಸಸ್ ಬಳಿಕ ಕೃಷ್ಣನ್ ಮ್ಯಾರೇಜ್ ಸ್ಟೋರಿಯೂ ತೆರೆಕಂಡಿತು. ನಿಧಿ ಸುಬ್ಬಯ್ಯ ಅಜಯ್ ರಾವ್ ಜೋಡಿ ಸಾಧಾರಣ ಮಟ್ಟಿಗೆ ಪ್ರೇಕ್ಷಕರನ್ನು ತಲುಪಿತು. ಸ್ಯಾಂಡಲ್ ವುಡ್ ಕೃಷ್ಣ ಅಂತಲೇ ಬ್ರ್ಯಾಂಡ್ ಆಗಿದ್ದ ಅಜಯ್ ಗೆ ಮತ್ತೆ ಕೃಷ್ಣ ಲೀಲಾ ಸಿನಿಮಾ ಒಲಿದು ಬಂತು.ಕೃಷ್ಣ ಲೀಲಾದಲ್ಲಿ ಮಯೂರಿ ಕ್ಯಾತರಿ ಜತೆ ಅಜಯ್ ತೆರೆಹಂಚಿಕೊಂಡಿದ್ರು. ಮಯೂರಿ ಹೊಸ ನಟಿಯಾದ್ರೂ ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಯ್ತು. ಪ್ರಾಯಶಃ ೨೦೧೫ರ ಕೃಷ್ಣ ಲೀಲಾ ಸಿನಿಮಾನೇ ಲಾಸ್ಟ್ ಬಳಿಕ ಅಜಯ್ ರಾವ್ ಅಭಿನಯದ ಯಾವ ಸಿನಿಮಾಗಳು ನಿರೀಕ್ಷೆಯ ಗೆಲುವು ಸಾಧಿಸಲಿಲ್ಲ. ಕಳೆದ ವರ್ಷ ತೆರೆಕಂಡ ತಾಯಿಗೆ ತಕ್ಕ ಮಗ ಸಿನಿಮಾ ಕೂಡ ಫ್ಲಾಪ್ ಆಯ್ತು. ಸದ್ಯ ಅಜಯ್ ರಾವ್ ಪ್ರೊಡಕ್ಷನ್ ನಂಬರ್-೨ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡ್ತಾ ಬಂದ್ರೂ ಕೂಡ ಅಜಯ್ ಪರಿಪೂರ್ಣವಾಗಿ ನೆಲೆ ನಿಲ್ಲೋಕೆ ಸಾಧ್ಯವಾಗಿಲ್ಲ. 3 ವರ್ಷಕ್ಕೊಮ್ಮೆಯೋ 5 ವರ್ಷಕ್ಕೊಮೆಯೋ ಒಂದೊಂದು ಸಿನಿಮಾಗಳು ಗೆಲ್ತಿವೆಯಷ್ಟೇ. ಗೆಲುವು ಸೋಲಿನ ಲೆಕ್ಕಚಾರ, ಪಾತ್ರದ ಆಯ್ಕೆಯಲ್ಲಿ ಅಜಯ್ ರಾವ್ ಸೋಲ್ತಿದ್ದಾರಾ ಅಥವಾ ಉತ್ತಮ ಕಥೆ ನಿರ್ದೇಶಕ ನಿರ್ಮಾಪಕರು ಅವ್ರ ಬಳಿ ಹೋಗ್ತಾ ಇಲ್ವಾ ಅನ್ನೋದೆ ದೊಡ್ಡ ಪ್ರಶ್ನೆ. ಆದ್ರೆ ಅಜಯ್ ರಾವ್ ಸಾಮರ್ಥ್ಯ, ಪ್ರತಿಭೆಗೆ ತಕ್ಕಂತೆಯೇ ಸಿನಿಮಾ ಮಾಡಿದ್ರೆ ಗೆಲ್ಲೋದು ದೊಡ್ಡ ವಿಚಾರವೇನಲ್ಲ.  

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸದೊಂದು ಆಯಾಮ ಸೃಷ್ಟಿಸಿದ ಸಿನಿಮಾ ದುನಿಯಾ. ಈ ಸಿನಿಮಾ ನಟನಾಗಿ ಅಭಿನಯಿಸಿದ್ದ ವಿಜಯ್ ಗೆ ಹೇಗೆ ಹೆಸರು ತಂದುಕೊಟ್ಟಿತೋ ಹಾಗೆಯೇ ಯೋಗಿಗೆ ಲೂಸ್ ಮಾದ ಅನ್ನೋ ಟೈಟಲ್ ತಂದುಕೊಟ್ಟಿತು. ಪೋಷಕ ನಟನ ಪಾತ್ರವಾದ್ರೂ ಮೊದಲ ಸಿನಿಮಾದಿಂದಲೇ ಯೋಗಿಗೆ ಜನಪ್ರಿಯತೆ ಸಿಕ್ಕಿತು. ಮತ್ತಷ್ಟು ಅವಕಾಶಗಳು ಯೋಗಿಯನ್ನರಸಿ ಬಂದವು. ನಂತರದ ದಿನಗಳಲ್ಲಿ ನಾಯಕ ನಟನಾಗಿ ಯೋಗಿ ಬಡ್ತಿ ಪಡೆದ್ರು. ಆಗ ಮೂಡಿ ಬಂದ ಸಿನಿಮಾಗಳೇ ನಂದ ಲವ್ಸ್ ನಂದಿತಾ, ಪುಂಡ, ಪ್ರೀತ್ಸೆ, ಯೋಗಿ ಇನ್ನಿತರ ಸಿನಿಮಾಗಳು. ಇವುಗಳಲ್ಲಿ ನಂದ ಲವ್ಸ್ ನಂದಿತಾ ಸಿನಿಮಾ ಯೋಗಿಗೆ ಒಂದೊಳ್ಳೆ ಪ್ಲ್ಯಾಟ್ ಫಾರ್ಮ್ ಕ್ರಿಯೇಟ್ ಮಾಡ್ತು. ಯೋಗಿಯ ಸ್ಟೈಲ್, ವಾಯ್ಸ್, ಮ್ಯಾನರಿಸಂ, ಡೈಲಾಗ್ ಡೆಲಿವರಿ ಸಿನಿಮಾ ರಂಗಕ್ಕೆ ಹೊಸದಾಗಿತ್ತು. ಒಂದು ವಯೋಮಾನದವರು ಯೋಗಿಗೆ ಡೈ ಹಾರ್ಡ್ ಫ್ಯಾನ್ಸ್ ಆದ್ರು. ಅವಕಾಶಗಳೇನೋ ಆ ಸಮಯದಲ್ಲಿ ಯೋಗಿ ಕೈಯಲ್ಲಿದ್ವು. ಆದ್ರೆ ಎಲ್ಲದ್ರಲ್ಲೂ ಏಕತಾನತೆ ಆವರಿಸಿತ್ತು. ಜನರು ಪ್ರೇಕ್ಷಕರಾದ್ರೂ ಹೇಗೆ ತಾನೆ ಒಂದೇ ರೀತಿಯ ಕಥೆ ಸಿನಿಮಾಗಳನ್ನು ನೋಡೋಕೆ ಸಾಧ್ಯ..? ಈ ಹಿಟ್ ಫ್ಲಾಫ್ ಗಳ ನಡುವೆ ಯೋಗಿ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ರು ಅದು ಅಂಬಾರಿ. ಪ್ರೇಮಿಗಳ ಹಾರ್ಟ್ ಗೆ ಟಚ್ ಆದ ಸಿನಿಮಾ ಅಂಬಾರಿ. ಮೇಲ್ವರ್ಗ, ಕೆಳವರ್ಗದ ನಡುವೆ ಚಿಗುರೊಡೆಯೋ ಪ್ರೀತಿ ಬಗೆಗಿನ ಕಥೆ ಈ ಸಿನಿಮಾದಲ್ಲಿತ್ತು. ಯಾರೇ ನೀ ದೇವತೆಯ ಸಾಂಗ್ ಅಂತೂ ಪ್ರೇಮಿಗಳ ಹೃದಯದ ಬಾಗಿಲು ತಟ್ಟಿತ್ತು.  ಮ್ಯೂಸಿಕ್ ಅಭಿನಯ ಎಲ್ಲವೂ ಮೋಡಿ ಮಾಡಿತ್ತು. ಅಂಬಾರಿ ಬಳಿಕ ಯೋಗಿ, ಪುನೀತ್ ರಾಜ್ ಕುಮಾರ್ ಜತೆ ಹುಡುಗರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ತಮಿಳಿನ ರೀಮೇಕ್ ಆದ್ರೂ ಹುಡುಗರು ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತು. ಹಳೆಯ ಮ್ಯಾನರಿಸಂ ಹೊಸ ಅವತಾರ ಲೂಸ್ ಮಾದನಿಗೆ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಒಮ್ಮೆ ಸೋಲು ಮತ್ತೆ ಗೆಲುವು ಹೀಗೆ ಪ್ರತಿಯೊಂದು ಸಿನಿಮಾಕ್ಕೂ ಗ್ರಾಫ್ ಅಪ್ ಅಂಡ್ ಡೌನ್ ಆಗ್ತಿತ್ತು. ಹುಡುಗರು ಬಳಿಕ ಯೋಗಿಗೆ ಸಕ್ಸಸ್ ತಂದುಕೊಟ್ಟ ಸಿನಿಮಾ ಸಿದ್ಲಿಂಗು. ಮೋಹಕ ತಾರೆ ರಮ್ಯಾ ಜತೆ ಯೋಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಸುಮನ್ ರಂಗನಾಥ್ ಅಚ್ಯುತ್ ಕುಮಾರ್ ಇನ್ನಿತರ ಕಲಾವಿರು ಸಿನಿಮಾದ ತಾರಾಗಣದಲ್ಲಿದ್ರು. ಉತ್ತಮ ನಾಯಕ ನಟ ಅನ್ನೋ ಪ್ರಶ್ತಸ್ತಿಯನ್ನು ಸಿದ್ಲಿಂಗು ಪಾತ್ರ ಯೋಗಿಗೆ ತಂದುಕೊಡ್ತು. ಅದಾದ ಬಳಿಕ ಯೋಗಿಯ ಯಾವುದೇ ಸಿನಿಮಾಗಳು ಹಿಟ್ ಚಿತ್ರಗಳ ಲಿಸ್ಟ್ ಗೆ ಸೇರ್ಪಡೆಯಾಗಲೇ ಇಲ್ಲ. ಎಲ್ಲಾ ಸಿನಿಮಾದಲ್ಲಿಯೂ ಬಹುತೇಕ ಒಂದೇ ರೀತಿ ಪಾತ್ರವನ್ನು ಅನುಸರಿಸ್ತಿರೋದೆ ಸಿನಿಮಾಗಳ ಸೋಲಿಗೆ ಕಾರಣವಾಗಿರಬಹುದು. ಸದ್ಯ ಯೋಗಿಯ ಲಂಬೋದರ ಅನ್ನೋ ಸಿನಿಮಾ ತೆರೆಕಾಣಬೇಕಿದೆ. 

ನೆನಪಿರಲಿ ಪ್ರೇಮ್, ಲವ್ಲಿ ಸ್ಟಾರ್ ಪ್ರೇಮ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 10-12 ವರ್ಷಗಳ ಹಿಂದೆ ಒಂದರ ಹಿಂದೊಂದು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಕಲಾವಿದ ಪ್ರೇಮ್ ಕುಮಾರ್. ಅಭಿನಯಿಸಿದ್ದ ಮೊದಲ ಸಿನಿಮಾ ಪ್ರಾಣ, ಯಶಸ್ಸನ್ನು ತಂದು ಕೊಡಲಿಲ್ಲವಾದ್ರು ಅವಕಾಶಸಗಳನ್ನು ತಂದೊದಗಿಸಿತು. ನೆನಪಿರಲಿ ಸಿನಿಮಾದ ಪ್ರೇಮ್ ಮನೋಜ್ಞ ಅಭಿನಯ ಪ್ರೇಕ್ಷಕರ ಮನದಲ್ಲಿ ಜಾಗ ಗಿಟ್ಟಿಸಿಕೊಳ್ತು. ಹೆಸರು, ಹಣದ ಜತೆ ಪ್ರಶಸ್ತಿಯನ್ನು ನೆನಪಿರಲಿ ಸಿನಿಮಾ ಪ್ರೇಮ್ ಗೆ ತಂದುಕೊಟ್ಟಿತು. ಬಳಿಕ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಮೂಡಿಬಂದ ಜೊತೆಜೊತೆಯಲಿ ಸಿನಿಮಾದಲ್ಲಿ ರಮ್ಯಾಗೆ ಜೋಡಿಯಾದ್ರು. ಈ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯ ಜತೆಗೆ ೧೫೦ಕ್ಕೂ ಅಧಿಕ ದಿನ ಥಿಯೇಟರ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತು. ನೆನಪಿರಲಿ ಪ್ರೇಮ್ ಅನ್ನೋ ಹೆಸರಿನ ಜತೆಗೆ ಲವ್ಲಿ ಸ್ಟಾರ್ ಪ್ರೇಮ್ ಅನ್ನೋ ಹೆಸರು ಕೂಡ ಪ್ರೇಮ್ ಮುಡಿಗೇರಿತು. ಪ್ರೇಮ್ ಸಿನಿಮಾಗಳಂದ್ರೆ ಬ್ಯಾಕ್ ಟು ಬ್ಯಾಕ್ ಹಿಟ್ ಅನ್ನೋ ಮಟ್ಟಿಗೆ ಸುದ್ದಿಯಾಯ್ತು. ಬಳಿಕ ಪ್ರೇಮಕಥೆ ಹೊಂದಿದ್ದ ಪಲ್ಲಕ್ಕಿ ಸಿನಿಮಾ ಕೂಡ ೧೦೦ ಡೇಸ್ ಕ್ಲಬ್ ಸೇರಿತು.  ಪಲ್ಲಕ್ಕಿ ಸಿನಿಮಾದ ಬಳಿಕ ಪ್ರೇಮ್, ಹೊಂಗನಸು,ಸವಿ ಸವಿ ನೆನಪು, ಗುಣವಂತ, ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಇನ್ನಿತರ ಸಿನಿಮಾಗಳಲ್ಲಿ ಅಭಿನಯಿಸಿದ್ರು. ಈ ಯಾವ ಸಿನಿಮಾಗಳು ಸಹ ಪ್ರೇಮ್ ಆರಂಭದಲ್ಲಿ ಸಿಕ್ಕಷ್ಟು ಮನ್ನಣೆ ನೀಡಲಿಲ್ಲ. ನೆನಪಿರಲಿ ಪ್ರೇಮ್, ಲವ್ಲಿ ಸ್ಟಾರ್ ಪ್ರೇಮ್ ತಮ್ಮನ್ನು ತಾವು ಎಕ್ಸ್ ಪ್ಲೋರ್ ಮಾಡಿಕೊಳ್ಳೋಕೆ ಮುಂದೆ ಸಿಕ್ಕ ಒಳ್ಳೆಯ ಅವಕಾಶವೇ ಚಾರ್ ಮಿನಾರ್. ಜೀವನದ ಮೌಲ್ಯಗಳ ಜತೆ, ಒಂದು ಪ್ರೇಮ ಕಥೆ ಚಾರ್ ಮಿನಾರ್ ಸಿನಿಮಾದಲ್ಲಿ ಬೆರೆತಿತ್ತು. ಪ್ರೇಮ್ ಎರಡೂ ಶೇಡ್ ನ ಪಾತ್ರಗಳನ್ನು ನಿಭಾಯಿಸಿ ಸೈ ಎನಿಸಿಕೊಂಡ್ರು. ಅಭಿನಯದಲ್ಲಿ ಹೊಸತನ, ಪ್ರಯೋಗಾತ್ಮಕ ಕಥೆಗೆ ಪ್ರೇಮ್ ಎಂದಿಗೂ ಸೂಟ್ ಆಗ್ತಾರೆ ಅಂತಲೂ ಅನಿಸೋಕೆ ಶುರುವಾಯ್ತು. ಲಕ್ಕಿ ಚಾರ್ ಮಿನಾರ್ ಸಿನಿಮಾದ ಬಳಿಕ ಸಿಂಪಲ್ ಹುಡುಗಿ ಶ್ವೇತಾ ಜತೆಗಿನ ಫೇರ್ ಅಂಡ್ ಲವ್ಲಿ ಕೂಡ ಕ್ಲಿಕ್ ಆಯ್ತು. ಆಮೇಲೆ ತೆರೆಕಂಡ ಮಳೆ ಅಷ್ಟೇನು ಯಶಸ್ಸನ್ನು ತಂದುಕೊಡಲಿಲ್ಲ. ಆದ್ರೆ 2017ರಲ್ಲಿ ತೆರೆಕಂಡ ಮಲ್ಟಿ ಸ್ಟಾರ್ ಮೂವಿ ಚೌಕ ಪ್ರೇಮ್ ವೃತ್ತಿ ಜೀವನದ ಒಂದು ಸ್ಪೆಷಲ್ ಸಿನಿಮಾ ಎನಿಸಿಕೊಳ್ತು. ಸಿನಿಮಾ ನಾಲ್ವರು ನಾಯಕರ ಪೈಕಿ ಪ್ರೇಮ್ ಕೂಡ ಒಬ್ಬರಾಗಿದ್ರು. ಹಕ್ಕಿ ಗೋಪಾಲನಾಗಿ ನೆನಪಿರಲಿ ಪ್ರೇಮ್ ಮಿಂಚಿದ್ರು. ಸಿನಿಮಾದ ಕಥೆ ನ್ಯಾಯಕ್ಕಾಗಿ ಹೋರಾಡಿದ ಪರಿ ಅದ್ಭುತವೆನಿಸಿತ್ತು. ಸದ್ಯ  ಪ್ರೇಮ್ ತಮ್ಮ 25ನೇ ಸಿನಿಮಾ ಪ್ರೇಮಂ ಪೂಜ್ಯಂನಲ್ಲಿ ಅಭಿನಯಿಸ್ತಿದ್ದಾರೆ. ಪ್ರತಿ ಸಿನಿಮಾ ಕೂಡ ಒಂದಲ್ಲ ಒಂದು ನಿರೀಕ್ಷೆ ಇಟ್ಕೊಂಡೆ ತೆರೆ ಮೇಲೆ ಬಂದಿರತ್ತೆ. ಅಂಥ ನಿರೀಕ್ಷೆ ಮೂಡಿಸೋ ಸಿನಿಮಾದಲ್ಲೇ ಪ್ರೇಮ್ ನಟಿಸಿದ್ದಾರೆ. ಆದ್ರೆ ಪ್ರೇಮ್ ಗಾಗಿಯೇ ಈ ಕಥೆ ಮಾಡಿದ್ದೀವಿ ಅನ್ನೋ ಸಿನಿಮಾ ಇನ್ನಷ್ಟೇ ಮೂಡಿ ಬರಬೇಕಿದೆ.

 

ಬಾಲಿವುಡ್ ನಟನಂತಿರೋ ಕನ್ನಡದ ಸಿನಿಮಾ ಹೀರೋಗಳಲ್ಲಿ ದಿಗಂತ್ ಮಂಚಾಲೆ ಕೂಡ ಒಬ್ರು. ಸ್ಟಾರ್ ನಟರ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿಭಾಯಿಸ್ತಿದ್ದ ದಿಗಂತ್ ಗೆ ಒಬ್ಬ ನಾಯಕ ನಟ ಅಂತ ಗುರುತಿಸಿಕೊಳ್ಳೋಕೆ ಹಲವು ವರ್ಷಗಳೇ ಬೇಕಾಯ್ತು. ಆದ್ರೆ ಸಿನಿ ಕರಿಯರ್ ನ ಆರಂಭದಲ್ಲಿ ನಟಿಸಿದ್ದ ಗಾಳಿಪಟ ಸಿನಿಮಾ ಹೊಸರೀತಿಯಾಗಿ ಪ್ರೇಕ್ಷಕರನ್ನು ಎಂಟರ್ಟೈನ್ ಮಾಡಿತ್ತು. ಗಣೇಶ್ –ಡೈಸಿ ಬೋಪಣ್ಣ, ರಾಜೇಶ್ ಕೃಷ್ಣನ್-ಭಾವನಾ, ದಿಗಂತ್- ನೀತು ಕೆಮಿಸ್ಟ್ರಿ, ಅಭಿನಯ ಎಲ್ಲವೂ ಅತ್ಯತ್ತಮವಾಗಿ ಮೂಡಿಬಂದಿತ್ತು. ಬಜಾರಿಯಂತಿದ್ದ ನೀತುವನ್ನು ಮನವೊಲಿಸಿಕೊಳ್ಳೋ ಮುಗ್ಧನಾಗಿ, ಲವರ್ ಬಾಯ್ ಆಗಿ ದಿಗಿ ಸಿಕ್ಕಾಪಟ್ಟೆ ರಂಜಿಸಿದ್ರು. ಅದಾದ ಬಳಿಕ ಚಿಲಿಪಿಲಿ ಹಕ್ಕಿಗಳು, ಮಸ್ತ್ ಮಜಾ ಮಾಡಿ, ಹೌಸ್ ಫುಲ್ ಸಿನಿಮಾಗಳ ಮೂಲಕ ದಿಗಂತ್ ತೆರೆ ಮೇಲೆ ಕಾಣಿಸಿಕೊಂಡ್ರು. ಆದ್ರೆ ಇದ್ಯಾವ ಸಿನಿಮಾಗಳು ದಿಗಂತ್ ಪಾಲಿಗೆ ವರ್ಕೌಟ್ ಆಗಲಿಲ್ಲ. ಹೀಗಿರುವಾಗ್ಲೇ 2009ರಲ್ಲಿ ತೆರೆಕಂಡ ಭಟ್ಟರ ಮನಸಾರೆ ಸಿನಿಮಾ ದಿಗಂತ್ ಗೆ ಒಂದೊಳ್ಳೆ ಹೆಸರು ತಂದುಕೊಡ್ತು. ಮನಸಾರೆ ರೊಮ್ಯಾಂಟಿಕ್ ಪ್ರೇಮಕಥೆಯ ಜತೆಗೆ ಸೈಕಾಲಾಜಿಕಲ್ ಕಥಾ ಅಂಶಗಳನ್ನು ಕೂಡ ಒಳಗೊಂಡಿತ್ತು. ಭಟ್ಟರ ಸಿನಿಮಾಗಳ ಮೂಲಕ ಸಾಕಷ್ಟು ನಟ ನಟಿಯರಿಗೆ ಬ್ರೇಕ್ ಸಿಕ್ಕಿದೆ. ಆ ಸವಿ ಅನುಭವಿಸಿದವ್ರ ಸಾಲಿಗೆ ದಿಗಂತ್ ಕೂಡ ಸೇರಿದ್ರು. ಮನಸಾರೆ ಸಿನಿಮಾದ ಬಳಿಕ ದಿಗಂತ್ ಬೇರೆ ಸಿನಿಮಾಗಳಲ್ಲಿ ಅಭಿನಯಿಸಿದ್ರೂ ಸಹ ಮತ್ತೊಂದು ಒಳ್ಳೆ ಸಿನಿಮಾ ನೀಡೋಕೆ ಭಟ್ಟರೇ ಕಾರಣವಾದ್ರು. ಅದೇ ಪಂಚರಂಗಿ. ಯೋಗರಾಜ್ ಭಟ್ಟರ ನಿರ್ದೇಶನ, ಮನೋಮೂರ್ತಿಯವ್ರ ಸಂಗೀತದಲ್ಲಿ ದಿಗಂತ್-ನಿಧಿ ಸುಬ್ಬಯ್ಯ ಫುಲ್ ಶೈನ್ ಆದ್ರು, ಕಾಮಿಡಿ, ವೇದಾಂತ, ಬಹುತಾರಾಗಣದಿಂದ ಸಿನಿಮಾ ಯಶಸ್ಸು ಗಳಿಸಿತು. ಮತ್ತದೇ ಸೋಲುಗಳು ದಿಗಂತ್ ಬೆನ್ನಿಗೆ ಬಿದ್ದಿದ್ವು ಪಾರಿಜಾತ ಲೈಫು ಇಷ್ಟೇನೆ ಸಿನಿಮಾಗಳು ತಕ್ಕ ಮಟ್ಟಿಗೆ ಮೂಡಿಬಂದವು. ಆದ್ರೆ ಲೈಫು ಇಷ್ಟೇನೆ ಸಿನಿಮಾ, ಪಂಚರಂಗಿ ಸಿನಿಮಾಕ್ಕಿಂತ ವಿಭಿನ್ನ ವಿಶಿಷ್ಟ ಎಂಬೆಲ್ಲಾ ರೀತಿಯಲ್ಲಿ ಮೂಡಿಬರಲಿಲ್ಲ. ಈ ನಡುವೆ ಬಾಲಿವುಡ್ ಟಾಲಿವುಡ್ ನಲ್ಲೂ ದಿಗಂತ್ ತಮ್ಮನ್ನು ತೊಡಗಿಸಿಕೊಂಡ್ರು ಸಹ ಆ ಸಿನಿಮಾಗಳು ಅಷ್ಟೇನು ಸದ್ದು ಮಾಡಲಿಲ್ಲ. ದಿಗಂತ್ ರನ್ನು ಹೀರೋ ಆಗಿಟ್ಟುಕೊಂಡು ಯಾವುದೇ ಸಿನಿಮಾಗಳು ಮೂಡಿಬಂದ್ರು ಸಹ ಕಾಮನ್ ಎಲಿಮೆಂಟ್ಸ್ ಇದೆ ಅನಿಸತ್ತೆ. 

ಈ ಎಲ್ಲಾ ನಟರ ಕೈಯಲ್ಲಿ ಸದ್ಯ ಸಿನಿಮಾಗಳೇನೋ ಇವೆ. ಆದ್ರೆ ಎಂಥ ಕ್ವಾಲಿಟಿಯ ಸಿನಿಮಾಗಳು ಅನ್ನೋದನ್ನು ಇನ್ನಷ್ಟೇ ನೋಡಬೇಕಿದೆ.