ಬಹುರೂಪಿ ದೈವ….., 

ಊರಿನ ಅಂಚಿನ ಕೇರಿಯಲ್ಲಿ ಕೆಳವರ್ಗದ ಜನರು ವಾಸಿಸುತ್ತಿದ್ದರು. ಅವರು ಓಣಿಯಲ್ಲಿ ಪ್ರವೇಶಿಸುವುದು ಓಣಿಯ ಕಸಗೂಡಿಸುವ, ಗಟಾರು ಬಳಿಯುವ ಕೆಲಸಗಳಿಗಾಗಿ ಮಾತ್ರ! ಉಳಿದಂತೆ ಅವರಾರೂ ಓಣಿಯಲ್ಲಿ ಬರುತ್ತಿರಲಿಲ್ಲ. ಅವರನ್ನು ಯಾರೂ ಮುಟ್ಟಿಸಿಕೊಳ್ಳುತ್ತಲೂ ಇರಲಿಲ್ಲ. ಈ ಕೆಳವರ್ಗದ ಮಕ್ಕಳಲ್ಲಿ ಕೆಲವರು ನಮ್ಮ ಸಹಪಾಠಿಗಳೂ ಆಗಿದ್ದರು. ನಾವು ಶಾಲೆಯಲ್ಲಿ ಅವರ ಜೊತೆಗೆ ತುಂಬಾ ಸಲಿಗೆಯಿಂದಿರುತ್ತಿದ್ದೆವು. ಅವರೂ ಕೂಡ ಅಷ್ಟೇ. ಆದರೆ ಅವರು ನಮ್ಮ ಮನೆಗೆ ಬರಲು ಅಳುಕುತ್ತಿದ್ದರು

ಬಹುರೂಪಿ ದೈವ….., 

ಬೆಟಗೇರಿ ಗದುಗಿನ ಅವಳಿ ನಗರವಾದರೂ ಅದೊಂದು ದೊಡ್ಡಹಳ್ಳಿಯಂತಿತ್ತು. ಇದನ್ನು ಮೊದಲು ‘ಬಟ್ಟೆಗೇರಿ’ ಎಂತಲೂ ಕರೆಯಲಾಗುತ್ತಿತ್ತು. ಕಾರಣ ಈ ಊರಿನ ತುಂಬಾ ಬರೀ ಮಗ್ಗಗಳದ್ದೇ ಕಾರುಬಾರು! ಗದಗ-ಬೆಟಗೇರಿಯನ್ನು ಬೆಟಗೇರಿಯ ದಕ್ಷಿಣ ದಿಕ್ಕಿಗೆ ಹಾಯ್ದು ಹೋದ ರೈಲು ಹಳಿ ಇಬ್ಭಾಗ ಮಾಡಿದೆ. ರೈಲು ಹಳಿಯ ಆಕಡೆ ಗದುಗು ಪಟ್ಟಣ, ಈ ಕಡೆ ಬೆಟಗೇರಿ. ಬೆಟಗೇರಿಯ ದಕ್ಷಿಣದ ಮೇರೆ ರೈಲು ಹಳಿಯಾದರೆ ಉತ್ತರದ ಮೇರೆ ರಂಗಪ್ಪನ ಹೊಂಡದಾಚೆಗಿನ ಸ್ಮಶಾನ, ಅದರಾಚೆಗೆ ಹೊಲಗಳು. ಪೂರ್ವದ ಗಡಿ ಊರಾಚೆಯ ಲಂಡನ್ ಹಳ್ಳ , ಹಳ್ಳದಾಚೆಗೆ ಉದ್ದಗಲಕ್ಕೂ ಹರಡಿನಿಂತ ಹೊಲಗಳು. ಪಶ್ಚಿಮದ ಗಡಿ ಕ್ರೈಸ್ತಮಿಶನರಿಗಳು ಕಟ್ಟಿಸಿದ, ತುಂಬಾ ವಿಶಾಲವಾದ ಜರ್ಮನ್ ದವಾಖಾನೆ ಮತ್ತದರ ಸಿಬ್ಬಂದಿಯ ಮನೆಗಳು, ಚರ್ಚುಗಳು. ನಾವು ವಾಸಿಸುವ ಓಣಿಯಲ್ಲಿ ನೇಕಾರರು ತುಂಬಾ ಸಾಂದ್ರವಾಗಿದ್ದರು. ಹೀಗಾಗಿ ಅದನ್ನು ‘ನೇಕಾರ ಓಣಿ’ ಎಂತಲೇ ಕರೆಯುತ್ತಿದ್ದರು. ಇನ್ನುಳಿದಂತೆ ಗಾಣದಲ್ಲಿ ಎಣ್ಣೆ ತೆಗೆಯುವ, ಒಕ್ಕಲುತನ ಮಾಡುವ ನಾಲ್ಕಾರು ಲಿಂಗಾಯತರ ಮನೆಗಳೂ ಒಂದೆರಡು ಜಂಗಮರ ಮನೆಗಳೂ ಇದ್ದವು. ಬಟ್ಟೆ ಹೊಲಿಯುವ, ಬೀಡಿ ಕಟ್ಟುವ, ಹೊಲಮನೆಯುಳ್ಳ ಕೃಷಿಕರ ಮೂರ್ನಾಲ್ಕು ಮುಸ್ಲಿಂ ಕುಟುಂಬಗಳೂ, ಒಂದೆರಡು ಕ್ರಿಶ್ಚಿಯನ್ ಮನೆಗಳೂ ಇದ್ದವು. ಓಣಿಯ ಅಂಚಿಗೆ ಒಂದೆರಡು ಬ್ರಾಹ್ಮಣರ ಮನೆಗಳಿದ್ದವು. ಅದರಾಚೆಗೆ ಕುಂಬಾರರ ಮನೆಗಳಿದ್ದವು. ಅವರು ಮಾಡುವ ತಿಗರಿ ಮೇಲಿನ ಗಡಿಗೆಗಳಿಗೆ ಓಣಿಯ ಜನ ಮುಗಿಬೀಳುತ್ತಿದ್ದರು. 

ಊರಿನ ಅಂಚಿನ ಕೇರಿಯಲ್ಲಿ ಕೆಳವರ್ಗದ ಜನರು ವಾಸಿಸುತ್ತಿದ್ದರು. ಅವರು ಓಣಿಯಲ್ಲಿ ಪ್ರವೇಶಿಸುವುದು ಓಣಿಯ ಕಸಗೂಡಿಸುವ, ಗಟಾರು ಬಳಿಯುವ ಕೆಲಸಗಳಿಗಾಗಿ ಮಾತ್ರ! ಉಳಿದಂತೆ ಅವರಾರೂ ಓಣಿಯಲ್ಲಿ ಬರುತ್ತಿರಲಿಲ್ಲ. ಅವರನ್ನು ಯಾರೂ ಮುಟ್ಟಿಸಿಕೊಳ್ಳುತ್ತಲೂ ಇರಲಿಲ್ಲ. ಈ ಕೆಳವರ್ಗದ ಮಕ್ಕಳಲ್ಲಿ ಕೆಲವರು ನಮ್ಮ ಸಹಪಾಠಿಗಳೂ ಆಗಿದ್ದರು. ನಾವು ಶಾಲೆಯಲ್ಲಿ ಅವರ ಜೊತೆಗೆ ತುಂಬಾ ಸಲಿಗೆಯಿಂದಿರುತ್ತಿದ್ದೆವು. ಅವರೂ ಕೂಡ ಅಷ್ಟೇ. ಆದರೆ ಅವರು ನಮ್ಮ ಮನೆಗೆ ಬರಲು ಅಳುಕುತ್ತಿದ್ದರು. ನಾವು ಎಷ್ಟು ಕರೆದರೂ ಬರಲು ನಿರಾಕರಿಸುತ್ತಿದ್ದರು. ಯಾಕೆ ಎಂದು ತಿಳಿಯುತ್ತಿರಲಿಲ್ಲ. ಒಂದು ಬಾರಿ ನನ್ನ ಗೆಳತಿಯ ಭುಜಕ್ಕೆ ಭುಜತಾಗಿಸಿ, ಹೆಗಲ ಮೇಲೆ ಕೈಹಾಕಿಕೊಂಡು ಬರುತ್ತಿದ್ದ ನನ್ನನ್ನು ಕಂಡ ಅವ್ವ ಮನೆಗೆ ಬಂದ ನಂತರ ಚೆನ್ನಾಗಿ ಬೈದಿದ್ದಳು. “ನಮ್ಮನಿ ದೇವ್ರು ಉಗ್ರ ಈರಣ್ಣ. ಹಿಂಗೆಲ್ಲಾ ಮಾಡಿದ್ರ ಮನ್ಯಾಗ ಹಾವು-ಚೋಳು ಬರ್ತಾವು”ಎಂದು ಗದರಿಸಿದ್ದಳು. ಅವರನ್ನು ಯಾಕೆ ಮುಟ್ಟಿಸಿಕೊಳ್ಳಬಾರದು? ದೇವರು ಯಾಕೆ ಉಗ್ರನಾಗುತ್ತಾನೆ? ಯಾಕೆ ಹಾವು-ಚೇಳುಗಳು ಬರುತ್ತವೆ? ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ಈ ‘ಮುಟ್ಟಿಸಿಕೊಳ್ಳುವ’ ಕಾರಣಕ್ಕೆ ಮನೆಯಲ್ಲಿ ತಿಂಗಳಿಗೆ ಎರಡುದಿನ ಅಪ್ಪ-ಅವ್ವನ ನಡುವೆ ಜಗಳವೇ ನಡೆಯುತ್ತಿತ್ತು! 

ಓಣಿಯ ಗಟಾರು ಬಳಿಯುವ ಹನುಮಣ್ಣ ತುಂಬಾ ಸಾಧು ಮನುಷ್ಯ. ಆತ ಪ್ರತಿ ಅಮವಾಸ್ಯೆ-ಹುಣ್ಣಿಮೆಯ ಸಂಜೆ ಮನೆ ಬಾಗಿಲಿಗೆ ಬರುತ್ತಿದ್ದ. ಅವ್ವ ಅಂದು ಮಾಡಿದ ಹೋಳಿಗೆ-ಕಡುಬು.. ಮುಂತಾದ ಸಿಹಿ ಅಡುಗೆಯನ್ನು ಇಷ್ಟು ಎತ್ತರದಿಂದ ‘ತಪ್’ ಅಂತ ಹಾಕುತ್ತಿದ್ದಳು. ಆತ ಅದನ್ನು ಪಡೆದು ಧನ್ಯತಾ ಭಾವದಿಂದ “ಬರ್ತೀನವ್ವಾ” ಎಂದು ಹೇಳಿ ಹೊರಟು ಹೋಗುತ್ತಿದ್ದ. ಹನುಮಣ್ಣನಿಗೆ ಎತ್ತರಿಸಿ ನೀಡುವುದನ್ನು ಕಂಡ ಅಪ್ಪ ಕೆಂಡಾಮಂಡಲವಾಗುತ್ತಿದ್ದ. “ಅಂವ ನಿನ್ನ ಕಣ್ಣಿಗೆ ಹ್ಯಾಂಗ್ ಕಾಣ್ತಾನಾ? ಮನಶ್ಯಾ ರಂಗೋ, ದನದ್ಹಂಗೋ? ಅಲ್ಲೆ ಮಠಕ್ಕ ಬಸವಪುರಾಣಾ ಕೇಳಾಕ ಹೋಕ್ಕಿಯಲ್ಲ, ಕಿವ್ಯಾಗೇನ್ಹತ್ತಿ ಇಟ್ಕೊಂಡು ಹೋಗಿರ್ತಿಯನ? ”ಹೀಗೆ ಸಾಗುತ್ತಿತ್ತು ಅಪ್ಪನ ಮಾತಿನ ದಾಳಿ! ಕೊನೆಗೆ ಹನುಮಣ್ಣನಿಗೇ ರೋಸಿ ಬಂದು “ಹೋಗ್ಲಿಬಿಡ್ರಿ ಧಣಿ, ಅವ್ವಾರು ಮಾಡೂದ್ರಾಗ ತಪ್ಪೇನೈತಿ? ಇದು ಅನಾದಿ ಕಾಲ್ದಾಗಿಂದ ನಡ್ಕೊಂಡ ಬಂದ ಪದ್ಧತಿ. ಬಿಡಾಕಾಕ್ತೈತಾ?”ಎನ್ನುತ್ತಿದ್ದ. ಹನುಮಣ್ಣನ ಮಾತಿನಿಂದ ಅಪ್ಪನ ಸಿಟ್ಟು ಹತಾಶೆಗೆ ತಿರುಗಿ “ಈ ಜಲ್ಮದಾಗ ನಿಮಗ ಬುದ್ಧಿ ಬರೂದಿಲ್ಲ, ಏನಾರ ಮಾಡ್ಕೊಂಡು ಹಾಳಾಗಿ ಹೋಗ್ರಿ” ಎನ್ನುತ್ತ ಹೊರ ನಡೆಯುತ್ತಿದ್ದ. ಇದರಿಂದ ಅವ್ವನಿಗೆ ಇರುಸುಮುರುಸಾಗುತ್ತಿತ್ತು. ಹನುಮಣ್ಣನ ಮೇಲೆ ಅವಳಿಗೇನೂ ಸಿಟ್ಟಿರಲಿಲ್ಲ, ದ್ವೇಷವೂ ಇರಲಿಲ್ಲ. ಬದಲಿಗೆ ಅವಳು ಮಾತ್ರವಲ್ಲ ಅಜ್ಜಿಯೂ ಸಹ ಹನುಮಣ್ಣನ ಜೊತೆ ಚೆನ್ನಾಗಿಯೇ ಮಾತನಾಡುತ್ತಿದ್ದರು. ಮನೆಯಲ್ಲಿ ತಿಂಡಿ ಮಾಡಿದರೆ ‘ಮಕ್ಕಳಿಗೆ ಕೊಡು’ ಎಂದು ಕಟ್ಟಿಕೊಡುತ್ತಿದ್ದರು. ಅಜ್ಜಿ ಒಂದೊಂದು ಬಾರಿ ಮಕ್ಕಳಿಗೆ ಬಟ್ಟೆ ಹೊಲಿಸಲು ಹನುಮಣ್ಣನಿಗೆ ದುಡ್ಡು ಕೊಡುತ್ತಿದ್ದಳು. ಕೊಡುವಾಗ “ಇದನ್ನ ಸೀದಾ ಒಯ್ದು ನಿನ್ನ ಹೆಂಡ್ತಿ ಕೈಯಾಗ ಕೊಡು, ಹೆಂಡದ ಅಂಗಡಿಗೆ ಹಾಕಬ್ಯಾಡಾ” ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ. ಹೀಗಿದ್ದರೂ ಈ ಮುಟ್ಟಿಸಿಕೊಳ್ಳುವ ದೆಸೆಯಿಂದ ಅವ್ವ ಅಪ್ಪನಿಂದ ಬೈಸಿಕೊಳ್ಳುತ್ತಿದ್ದಳು! ಕೊನೆಗೆ ಅವ್ವ ಇದಕ್ಕೆ ತನ್ನದೇ ಆದ ಅದ್ಬುತ ಪರಿಹಾರ ಕಂಡುಕೊಂಡಳು. ಅದೇನೆಂದರೆ ಅಪ್ಪ ಎದುರಿಗಿದ್ದಾಗ ಹನುಮಣ್ಣನಿಗೆ ಸಹಜವಾಗಿ ನೀಡುವುದು, ಆತ ಎದುರಿಗಿಲ್ಲದಾಗ ತನ್ನ ಮೊದಲಿನ ಶೈಲಿಯಲ್ಲೇ ಎತ್ತರಿಸಿ ‘ತಪ್’ ಅಂತ ಹಾಕುವುದು!! 

ಮುಟ್ಟಿಸಿಕೊಳ್ಳುವ ವಿಷಯದಲ್ಲಿ ಅವ್ವನ ಇರುಸುಮುರುಸು, ಅವಮಾನ, ದ್ವಂದ್ವಗಳು ನನ್ನ ತಲೆಯನ್ನು ಗುಂಗೀ ಹುಳವಾಗಿ ಕೊರೆಯ ತೊಡಗಿದವು. ಅಪ್ಪನಿಗೆ ಕೇಳಿದರೆ ಎಲ್ಲಿ ಅವ್ವನನ್ನು ಬೈದಂತೆ ನನ್ನನ್ನೂ ಬೈಯ್ಯುತ್ತಾನೋ ಎಂಬ ಅಳುಕು ಕಾಡಿದರೂ ತಡೆಯದೇ ಒಂದು ದಿನ ಕೇಳಿಯೇ ಬಿಟ್ಟೆ
“ಅಪ್ಪಾ, ಹನಮಣ್ಣನ್ನ ಅವ್ವ -ಅಜ್ಜಿ ಎಷ್ಟ ಚೊಲೋತೆಂಗ ಮಾತಾಡ್ಸತ್ತಾರಾ, ಆದ್ರೂ ಯಾಕಪ್ಪ ಅಂವ್ನ ಮುಟ್ಟಿಸ್ಕೊಳ್ಳಂಗಿಲ್ಲ, ಮನಿಯೊಳ್ಗೂ ಕರ್ಕೊಳ್ಳಂಗಿಲ್ಲಾ? ”ನನ್ನ ಮಾತಿಗೆ ಅಪ್ಪ ಶುಷ್ಕವಾಗಿ ನಕ್ಕು ನುಡಿದ“ಚೊಲೋತೆಂಗ ಮಾತಾಡ್ಸದ ಏನ್ಮಾಡ್ಯಾರು? ಎಷ್ಟಾದ್ರೂ ಕಳ್ಳ ಸಂಬಂಧ ಅಲ್ಲ? ಹ್ಯಾಂಗ ಬಿಡತೈತಿ?”

ಅಪ್ಪನ ಮಾತು ಕೇಳಿ ನಾನು ಚಕಿತಗೊಂಡೆ! ನಮಗೂ ಹನುಮಣ್ಣನಿಗೂ ಕಳ್ಳುಸಂಬಂಧವೆ? ! ಎಂದು ಅಚ್ಚರಿಪಡುತ್ತ“ದೊಡ್ಡಮ್ಮಾರು, ಮಾಮಾ, ಮತ್ತ ಸವಣೂರು ದೊಡ್ಡಪ್ಪಾರು, ಕಾಕಾಗೋಳು, ಅತ್ತಿ.. ಇವ್ರೆಲ್ಲಾ ನಮ್ಮ ಕಳ್ಳಬಳ್ಳಿ ಖರೆ. 

ಆದ್ರ ಹನಮಣ್ಣ ಹ್ಯಾಂಗಪ್ಪ ನಮ್ಗ ಕಳ್ಳಸಂಬಂಧ? ”ಎಂದು ಕೇಳಿದೆ. ನನ್ನ ಮಾತಿಗೆ ಅಪ್ಪ ಕಿರುನಗೆ ನಕ್ಕು ನುಡಿದ “ನೀ ಹೇಳಾಕತ್ತಿರೋ ಸಂಬಂಧ ನಿನ್ನೆ-ಇವತ್ತಿಂದು ಪುಟ್ಟಾ, ಆದ್ರ ಹನಮಣ್ಣನ ಕೇರಿ ಜನ ಮತ್ತ ನಮ್ಮ ಸಂಬಂಧ ಅನಾದಿ ಕಾಲದ್ದು”ನನಗೆ ಅರ್ಥವಾಗದೇ ಅಪ್ಪ ನನ್ನೇ ಮಿಕಮಿಕನೇ ನೋಡಿದೆ. ಅಪ್ಪ ಮುಂದುವರಿಸಿದ..

“ಹಿಂದೊಂದು ಕಾಲ್ದಾಗ ಹನಮಣ್ಣನ ಕೇರಿ ಜನ ಮತ್ತ ಇಲ್ಲಿರೋ ನಾವೆಲ್ಲಾ ಒಂದ ಕುಲಸ್ತರು ಆಗಿದ್ವಿ ಪುಟ್ಟಾ, ಕಾಡಿನ ಮಕ್ಕಳಾಗಿ ಬದುಕಿದ್ವಿ. ಬರ್ತಾಬರ್ತಾ ಕಾಡಿನ ಮಕ್ಕಳು ನಾಡಿಗೆ ಬಂದ್ರು. ಚಕ್ರ ಕಂಡಹಿಡದ್ರು. ವ್ಯವಸಾಯ, ವ್ಯಾಪಾರ.. ಅದೂ ಇದೂ ಅಂತ ಹತ್ತಾರು ಕಸುಬುಗಳನ್ನು ಶುರು ಹಚ್ಕೊಂಡ್ರು. ನಾಗರಿಕ ಸಮಾಜ ಕಟ್ಟೀದ್ರು. ಸಾಮ್ರಾಜ್ಯ ಕಟ್ಟಿ ಆಳಾಕುಂತ್ರು. ಅಕಲಿದ್ದೊರು ದೊರೆಯಾಗಿ ಆಳಿದ್ರು. ಅದು ಇಲ್ದೋರು ಅವ್ರ ಅಡಿಯಾಳಾದ್ರು. ಕ್ರಮೇಣ ಅವ್ರ ಮಾಡೂ ಕೆಲ್ಸ ‘ಕುಲಕಸುಬು’ ಅನಿಸಿ ಅವ ನೂರೆಂಟು ಜಾತಿ- ಪಂಗಡ ಆಗಿ ಒಡದು ಹೋದ್ವು. ಮತ್ತ ಅದ್ರ ಜೋತಿಗೇ ನೂರೆಂಟು ದೇವ್ರಸೈತ ಸೃಷ್ಟಿಯಾದ್ವು. ಅಲ್ಲಿಂದ ಮೇಲು-ಕೀಳು, ತಾರತಮ್ಯ ಶುರುವಾಗಿ, ಹೆಚ್ಚಿನ ಜಾತಿ, ಕಡಿಮಿ ಜಾತಿ ಅಂತಾಗಿ ಇಂಥಾ ಜಾತಿಯವ್ರು ಇದಕೆಲ್ಸಾ ಮಾಡ್ಬೇಕಂತ ನಿರ್ಬಂಧಾನೂ ಹಾಕಿದ್ರು. ಆಗ ಕೆಳಜಾತಿಯವ್ರ ಪಾಡು ಹೆಳಂಗಿಲ್ಲ, ಕೆಳಂಗಿಲ್ಲ ಹಂಗಾತು. ಅದವ್ಯಾಳೇಕ ನಮ್ಮ ಬಸವಾದಿ ಶರಣ್ರು ಬಂದು ಹಿಂಗ ಜಾತಿಭೇದ ಮಾಡಬ್ಯಾಡ್ರಿ, ಎಲ್ಲಾ ಮನಷ್ಯಾರು ಒಂದ, ದೇವ್ರು ಎಲ್ಲಾರ್ಗೂ ಒಂದ ಅಂತ ಮನದಟ್ಟು ಮಾಡಿ ಲಿಂಗವಂತ ಸಮಾಜ ಕಟ್ಟಿದ್ರು. ಆಗ ಕೆಳಜಾತಿ ಎಷ್ಟೋ ಜನ ಆ ಸಮಾಜಕ್ಕ ಸೇರಿದ್ರು. ಲಿಂಗವಂತರಾದ್ರು.”ಅಪ್ಪನ ದೀರ್ಘ ವಿವರಣೆ ನನ್ನಲ್ಲಿ ಅಚ್ಚರಿಯೊಂದಿಗೆ ಕುತೂಹಲವನ್ನೂ ಹುಟ್ಟು ಹಾಕಿತು.

“ಮತ್ತ ಹನಮಂತಣ್ಣನ ಕೇರಿಯೋರು ಯಾಕ ಹೊರಗುಳುದ್ರು? ಅವ್ರೂ ಬರಬೇಕಿತ್ತಲ್ಲ ಆವಾಗ್ಲೇ ”“ಹೂಂ, ಅವ್ರೂ ಬರ್ತಿದ್ರೋ ಏನೋ, ಆದ್ರ ಅಷ್ಟರೊಳ್ಗ ಈ ಬಸವಣ್ಣ ಎಲ್ಲಾನೂ ಅರ್ಧಕ್ಕ ಬಿಟ್ಟು ಕೂಡಲಸಂಗಮದಾಗ ಐಕ್ಯಾದ.”“ಕೂಡಲಸಂಗಮ ಅಂದ್ರೇನಪ್ಪಾ? “ಅದು ಎರಡ್ಮೂರು ನದಿಗಳು ಕೂಡೂ ಜಾಗ” “ಮತ್ತ ಐಕ್ಯಾಗೂದಂದ್ರ?” ಐಕ್ಯಾಗೂದಂದ್ರ ಜಲ ಸಮಾಧಿಯಾಗೂದು. ಅಂದ್ರ ನೀರಿನ್ಯಾಗ ಜೀವಾಬಿಡೂದು”“ಅಂದ್ರ! ನೀರಿನ್ಯಾಗ ಮುಳುಗಿ ಸಾಯೂದ?” “ಒಂದ್ರೀತಿ ಹಂಗ ಅನಕೋ ”“ಬಸವಣ್ಣ ಯಾಕಪ್ಪ ನೀರಿನ್ಯಾಗ ಮುಳುಗಿ ಸಾಯಾಕೋದ?”

“ಅವನ ಮುಳುಗಿಸತ್ನೋ, ಇಲ್ಲಾ ಯಾರಾರ ಮುಳುಗಿಸಿ ಸಾಯಿಸಿದ್ರೋ ಯಾರಿ ಗ್ಗೊತ್ತು ಪುಟ್ಟಾ? ಅದು ಭೂತ ಕಾಲ್ದಾಗ ಹೂತು ಹೋದ ಕತಿ. ನಮ್ಮ ತಿಳಿವಿಗೆ ದಕ್ಕೂದಲ್ಲ.” “ಮತ್ತ ಬಸವಣ್ಣ ಲಿಂಗವಂತ ಸಮಾಜಾ ಕಟ್ಟಿದ ಕತಿ ಗೊತೈತಲ್ಲ?” “ಹೂಂ, ಅದನ್ನ ನಮ್ಮ ಹೆಣ್ಣುಮಕ್ಕಳು ಪದಾ ಕಟ್ಟಿಹಾಡಕೊಂತ ಬಂದಾರ. ರಾಜ ಮಹಾರಾಜ್ರು ಕೊರದ ನಿಲ್ಸಿದ ಶಾಸನ ಕಲ್ಲು ಒಂದವ್ಯಾಳೆ ಸುಳ್ಳ ಹೇಳ್ಬಹುದು. ಆದ್ರ ನಮ್ಮ ಹೆಣ ಮಕ್ಕಳ ಅಂತಃಕರಣದ ಹಾಡದಾವಲ್ಲ ಅವೆಂದೂ ಸುಳ್ಳಹೇಳಂಗಿಲ್ಲ.”ಎನ್ನುತ್ತ ಅಪ್ಪ ವಾಚನಾಲಯದ ಒಳ ಹೊಕ್ಕ. ಅಪ್ಪನ ಮಾತುಗಳನ್ನು ಮೆಲುಕು ಹಾಕುತ್ತಿದ್ದ ನನಗೆ ತಟ್ಟನೆ “ಜಾತಿ ಸೂತಕವಿಲ್ಲ ಮುಟ್ಟು ಮೈಲಿಗಿಯಿಲ್ಲ, ಮುಡಚಟ್ಟು ಮೊದಲೇ ಇಲ್ಲಂದಾನವ್ವ ಬಸವಣ್ಣ ನವ್ವ ನಮ್ಮಪ್ಪ ಬಸವಣ್ಣ ನಮ್ಮಮ್ಮ ನೀಲಮ್ಮ ಕೋಟಿ ಜನರ ಸಲಹಿದರವ್ವ ಬಸವಣ್ಣನವ್ವ…..”ಎಂದು ಅವ್ವ ಹಾಡುವ ಸುಧೀರ್ಘ ಹಾಡು ನೆನಪಾಯಿತು. ಇನ್ನೊಮ್ಮೆ ಅವ್ವ ಹಾಡುವಾಗ ಲಕ್ಷ್ಯಗೊಟ್ಟು ಕೇಳಿ ಬಸವಣ್ಣನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂದು ಕೊಳ್ಳುತ್ತ ನಾನು ‘ಚಂದಮಾಮ’ ತಿರುವಿ ಹಾಕ ತೊಡಗಿದೆ..

ನಮ್ಮ ಓಣಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ನೇಕಾರರಿಂದಲೇ ತುಂಬಿತ್ತು. ಬೆಳಿಗ್ಗೆ ಎದ್ದೊಡನೆಯೇ ಎಲ್ಲರ ಮನೆಗಳಿಂದ “ಚಟಲ್ ಪಟಲ್” ಎಂಬ ಲಯಬದ್ಧ ಸದ್ದು ಕಿವಿಗೆ ಬೀಳುತ್ತಿತ್ತು. ಆನೇಕಾರಲ್ಲಿ ಬಹಳಷ್ಟು ಜನ ಬಡವರು ಹಾಗೂ ಕೆಳಮಧ್ಯಮವರ್ಗದವರು. ಅಲ್ಲದೇ ನೇಕಾರ ಗಂಡಸರು ಬೆಳಿಗ್ಗೆಯಿಂದ ಸಂಜೆಯವರೆಗೂ ಮೈ ಮುರಿದು ದುಡಿಯುತ್ತಿದ್ದರೇನೋ ನಿಜ, ಆದರೆ ಅವರಲ್ಲಿ ಬಹಳಷ್ಟು ಜನ ದುಡಿದಿದ್ದನ್ನೆಲ್ಲ ಹೆಂಡಕ್ಕೇ ಸುರಿಯುತ್ತಿದ್ದರು! ಹೀಗಾಗಿ ಬಡತನ ಸದಾ ಅವರ ಸಂಗಾತಿಯಾಗಿತ್ತು. ನಮ್ಮ ಓಣಿಯ ಮಕ್ಕಳು “ಚಟಲ್ಲಪಟಲ್ಲ ಚಂಜಿಕೆಜ್ವಾಳಿಲ್ಲ, ಬೀಸಾಕ ಬಿಲ್ಲಿಲ್ಲ ತಿನ್ನಾಕ ರೊಟ್ಟಿಲ್ಲ” ಎಂದು ಹಾಡುವ ಹಾಡು ನೇಕಾರರ ಬದುಕಿನ ಕನ್ನಡಿಯಂತಿತ್ತು!

ನಮ್ಮ ಓಣಿ ನೇಕಾರರಿಂದಲೇ ತುಂಬಿದ್ದರೂ ಅವರಲ್ಲಿಯೂ ಹಲವಾರು ಒಳಪಂಗಡಗಳಿದ್ದವು. ದೇವಾಂಗ, ಪದ್ಮಸಾಲಿ, ಕುರುವಿನಶೆಟ್ಟಿ, ಸ್ವಕುಳಸಾಳಿ, ಪಟ್ಟೇಗಾರ, ಬಣಕಾರ, ಶಿವಾಚಾರದವರು, ಕರಿಮಗ್ಗದವರು, ಬಿಳಿಮಗ್ಗದವರು….,ಹೀಗೆ ಹಲವಾರು ಪಂಗಡಗಳು. ಇವರಲ್ಲಿ ದೇವಾಂಗ ಸಮುದಾಯದ ಜನರೇ ದೊಡ್ಡ ಸಂಖ್ಯೆಯಲ್ಲಿದ್ದರು. ಇವರು ಮೂಲತಃ ‘ಶೈವಪರಂಪರೆಯ’ವರೆಂದು ಇವರ ‘ದೇವಾಂಗಪುರಾಣ’ ವೇ ಹೇಳುತ್ತಿದ್ದರೂ ಇವರ ಮೇಲೆ ವೈದಿಕ ಸಂಸ್ಕೃತಿಯ ಪ್ರಭಾವ ದಟ್ಟವಾಗಿತ್ತು. ಅಪ್ಪಟ ಸಸ್ಯಾಹಾರಿಗಳಾದ ಈ ಸಮುದಾಯ ಜನನ, ಮರಣ, ಮುಟ್ಟು…., ಮುಂತಾದವುಗಳಿಗೆ ಸೂತಕ ಆಚರಿಸುತ್ತಿದ್ದರು. ಪ್ರತಿ ತಿಂಗಳು ಏಕಾದಶಿ ಉಪವಾಸ ಮಾಡುತ್ತಿದ್ದರು. ತುಳಸಿ ಲಗ್ನ….ಮುಂತಾದವನ್ನು ಆಚರಿಸುತ್ತಿದ್ದರು. ಮುಟ್ಟಾದ ಹೆಂಗಸರು ಕಡ್ಡಾಯವಾಗಿ ಮೂರುದಿನ ಹೊರಗಿರುತ್ತಿದ್ದರು. ನಮ್ಮ ಓಣಿಯ ಆಚೆ ‘ಬನಶಂಕರಿ ದೇವಿಯ’ ಗುಡಿಯಿತ್ತು. ಅಲ್ಲಿ ಶ್ರಾವಣಮಾಸದಲ್ಲಿ ‘ದೇವಾಂಗಪುರಾಣ’ ಪ್ರವಚನ ನಡೆಯುತ್ತಿತ್ತು. ನವರಾತ್ರಿಯಲ್ಲಿ ‘ದೇವೀಭಾಗವತ’ ಇರುತ್ತಿತ್ತು. ನನ್ನ ದೇವಾಂಗ ಗೆಳತಿಯರ ಜೊತೆಗೆ ನಾನೂ ಪ್ರವಚನಕ್ಕೆ ಹೋಗುತ್ತಿದ್ದೆ. ಅಲ್ಲಿ ಪ್ರವಚನಕಾರರು ಗಮಕವಾಚನ ಮಾಡುತ್ತ ಸೊಗಸಾಗಿ ಪುರಾಣ ಕಥೆ ಹೇಳುತ್ತಿದ್ದರು.

ದೇವಲ ಮಹರ್ಷಿಯು ಶಿವನ ಅಪ್ಪಣೆಯಂತೆ ತ್ರಿಲೋಕದ ದೇವ-ಮಾನವ-ಅಸುರಾದಿಗಳಿಗಾಗಿ ವಸ್ತ್ರಗಳನ್ನು ಸಿದ್ಧಪಡಿಸಲು ವಿಷ್ಣುವಿನಿಂದ‘ ತಂತು’ಗಳನ್ನು (ಎಳೆಗಳನ್ನು)  ಪಡೆದುಕೊಂಡು ಭುವಿಗೆ ಬರುವುದು, ಅಲ್ಲಿ ರಾಕ್ಷಸರು ಮಹರ್ಷಿಯನ್ನು ಅಡ್ಡಗಟ್ಟಿ ಯುದ್ಧ ಸಾರುವುದು, ಮಹರ್ಷಿ ದೇವಿಪಾರ್ವತಿಯನ್ನು ಸ್ತುತಿಸುವುದು, ಪಾರ್ವತಿ ಚಂಡಿಕೆಯಾಗಿ ಅವರನ್ನು ಸಂಹರಿಸುವುದು…ಮುಂತಾಗಿ ತುಂಬಾ ರೋಚಕವಾಗಿ ಹೇಳುತ್ತಿದ್ದರು. ಚಂಡಿಕೆಯ ವರ್ಣನೆಯಂತೂ ಭಿಭೀತ್ಸವಾಗಿರುತ್ತಿತ್ತು! ಅವಳು ಚತುರ್ಭುಜೆ, ದೀರ್ಘಜಿಹ್ವೆ, ರಕ್ತನೇತ್ರೆ, ಮಹಾಬಲಿಷ್ಠೆ, ಕಾಲರೂಪಿಣಿ, ಅವಳ ಕೈಗಳಲ್ಲಿ ಭಯಂಕರವಾದ ಆಯುಧಗಳು! ದೈತ್ಯರೊಡನೆ ಉಗ್ರವಾಗಿ ಕಾದುವಳು. ಅವರ ರುಂಡಚಂಡಾಡಿ ನೆತ್ತರಿನಲ್ಲಿ ಮೀಯುವಳು! ದೇವಲ ಮಹರ್ಷಿ ಆ ದೇವಿಯಿಂದ ಕೊಲ್ಲಲ್ಪಟ್ಟ ಐದು ಮಂದಿ ದೈತ್ಯರ ಐದು ವರ್ಣದ ರಕ್ತದಲ್ಲಿ, ತಾನು ವಿಷ್ಣುವಿನಿಂದ ಪಡೆದುಕೊಂಡು ತಂದಿದ್ದ ‘ತಂತುಗಳನ್ನು’ ಅದ್ದಿ, ಅವುಗಳನ್ನು ಪಂಚವರ್ಣದವುಗಳನ್ನಾಗಿ ಮಾಡುತ್ತಾನೆ!! ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಈ ಭೀಕರ ಚಿತ್ರಗಳು ನನ್ನೆದೆಯಲ್ಲಿ ಸಣ್ಣಗೆ ನಡುಕ ಹುಟ್ಟಿಸುತ್ತಿದ್ದವು.