ಮೀಸಲು ಕ್ಷೇತ್ರದ ಪ್ರತಿನಿಧಿಗಳಿಂದ ದಲಿತರಿಗೆ ನ್ಯಾಯ ಸಿಕ್ಕಿದೆಯೇ ?

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹತ್ತಿರವಾಗುವಂತಹ ಸಾಮರ್ಥ್ಯ ಇರುವವರು ಇದುವರೆಗೆ ಸಂಸತ್ತನ್ನು ಪ್ರವೇಶಿಸಿದ ಉದಾಹರಣೆಗೆ ಯಾರೂ ಸಿಗುವುದಿಲ್ಲ. ಈಗಿರುವ ಪ್ರತಿನಿಧಿಗಳನ್ನು ಗಮನಿಸಿದರೆ ಅದು ತೆಂಗು ತುಂಬೆ ಅಂತರ ಇದ್ದಂತೆ. ನಿಜ ನಾವು ಎಲ್ಲರಲ್ಲಿಯೂ ಅಂಬೇಡ್ಕರ್ ಅವರನ್ನು ಕಾಣಲು ಬರುವುದಿಲ್ಲ. ಅವರೊಡನೆ ಹೋಲಿಕೆ ಮಾಡುವ ಕಾಲವೂ ಬಂದಿಲ್ಲ.

ಮೀಸಲು ಕ್ಷೇತ್ರದ ಪ್ರತಿನಿಧಿಗಳಿಂದ ದಲಿತರಿಗೆ ನ್ಯಾಯ ಸಿಕ್ಕಿದೆಯೇ ?

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡುವ ಪದ್ಧತಿ ಜಾರಿಗೆ ಬಂದು ಈಗ ಎಪ್ಪತ್ತು ವರ್ಷ ತುಂಬುತ್ತಿದೆ. ದೇಶದ ಆಡಳಿತ ವ್ಯವಸ್ಥೆಯ ಕಾರ್ಯಾಂಗ ಹೇಗೆ ತನ್ನ ಕಾರ್ಯನಿರ್ವಹಿಸಬೇಕೆಂದು ಕಾಯ್ದೆ ಕಾನೂನುಗಳನ್ನು ಮಾಡುವ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ದುರ್ಬಲ ವರ್ಗಗಳ ದನಿಯೂ ಇರಲೆಂದು ಮೀಸಲಾತಿ ಜಾರಿಗೆ ತರಲಾಯಿತು. ಸಹಸ್ರಾರು ವರ್ಷಗಳಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ತುಳಿತಕ್ಕೆ ಒಳಗಾದ ಜನರ ದನಿ ಶಾಸನ ರೂಪಿಸುವ ಜಾಗದಲ್ಲಿ ಇರಬೇಕು ಎನ್ನುವುದು ಈ ಮೀಸಲಾತಿಯ ಪರಿಕಲ್ಪನೆ.

 ಮೀಸಲಾತಿ ಎನ್ನುವುದು ಇಲ್ಲಿ ನಿಜವಾದ ಅರ್ಥದಲ್ಲಿ ಪ್ರಾತಿನಿಧ್ಯ. ಶಾಸನ ಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿನಿಧಿಗಳನ್ನು ಅವರೇ ಚುನಾಯಿಸಬೇಕೆನ್ನುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೇಡಿಕೆಯನ್ನು ಮಹಾತ್ಮ ಗಾಂಧಿ ಅವರು ತಿರಸ್ಕರಿಸಿದರು. ಈ ಹಿನ್ನೆಲೆಯಲ್ಲಿ 1932ರಲ್ಲಿ ಆದ ಪೂನಾ ಒಪ್ಪಂದದ ಪರಿಣಾಮವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿನಿಧಿಗಳನ್ನು ಸಾರ್ವತ್ರಿಕವಾಗಿ ಎಲ್ಲ ಮತದಾರರೂ ಆಯ್ಕೆ ಮಾಡುವ ಚುನಾವಣಾ ಪದ್ಧತಿ ಜಾರಿಗೆ ಬಂದಿತೆ ಎನ್ನುವುದು ಈಗ ಇತಿಹಾಸ.

ಸಂವಿಧಾನವನ್ನು ಒಪ್ಪಿಕೊಂಡ ನಂತರ 1951-52ರ ಅವಧಿಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ  ಪ್ರಥಮ ಚುನಾವಣೆ ನಡೆಯಿತು. ಜನಸಂಖ್ಯಾ ಆಧಾರದ ಮೇಲೆ ಮೀಸಲು ಕ್ಷೇತ್ರಗಳನ್ನು ಕ್ಷೇತ್ರ ಪುನರ್ ವಿಂಗಡಣಾ ಸಮಿತಿ ಗೊತ್ತುಪಡಿಸಿತ್ತು. ಅದರಂತೆ ಚುನಾವಣೆ ನಡೆಯುತ್ತಾ ಬಂದಿದೆ. ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆಯ ಸಂಖ್ಯಾಬಲ 401 ಇತ್ತು. ಇದರಲ್ಲಿ 84 ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲು ಇಡಲಾಗಿತ್ತು

ಈ ರಾಜಕೀಯ ಮೀಸಲಾತಿಯನ್ನು 1950ರಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯ ಮೂಲಕ ಹತ್ತು ವರ್ಷಗಳಿಗೆ ಮೀಸಲು ಇಡಲಾಯಿತು. ನಂತರ 1960ರಲ್ಲಿ ಅದನ್ನು 1970ರವರೆಗೆ ಸಂವಿಧಾನ ತಿದ್ದುಪಡಿ ಮೂಲಕ ವಿಸ್ತರಿಸಲಾಯಿತು. ಇದನ್ನು ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ವಿಸ್ತರಿಸಿಕೊಂಡು ಬರಲಾಗುತ್ತಿದೆ. 2010ರಲ್ಲಿ ಮಾಡಲಾದ ತಿದ್ದುಪಡಿ ಬರುವ ಜನವರಿ 25ಕ್ಕೆ ಅಂತ್ಯವಾಗಲಿದೆ.

2001ರ ಜನಗಣತಿ ಆಧಾರದ ಮೇಲೆ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಮಿತಿಯಂತೆ ಈಗ ಲೋಕಸಭೆಯ ಒಟ್ಟು 543 ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಗೆ 84 ಮತ್ತು ಪರಿಶಿಷ್ಟ ಪಂಗಡಕ್ಕೆ 47 ಕ್ಷೇತ್ರಗಳನ್ನು ಮೀಸಲು ಇರಿಸಲಾಗಿದೆ.  ಒಟ್ಟು ಮೀಸಲು  ಕ್ಷೇತ್ರದ ಸದಸ್ಯರ ಸಂಖ್ಯೆ 131.

ಈಗ ಅವಧಿ ಮುಗಿಯುತ್ತಿರುವ ಮೀಸಲು ಕ್ಷೇತ್ರಗಳಿಗೆ ಮತ್ತೆ ಹತ್ತು ವರ್ಷ ಜೀವದಾನ ನೀಡಲು ಕೇಂದ್ರದ ಬಿಜೆಪಿ ಸರ್ಕಾರದ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಅದರಂತೆ ಮತ್ತೆ ಸಂವಿಧಾನ ತಿದ್ದುಪಡಿಯ ಮಸೂದೆಯನ್ನು ಸಂಸತ್ ಅಂಗೀಕರಿಸಬೇಕಿದೆ. ಈ ಅಂಗೀಕಾರದಿಂದ ಲೋಕಸಭೆಯಲ್ಲದೆ ಎಲ್ಲ ವಿಧಾನಸಭೆಗಳ 614 ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟ ಪಂಗಡಗಳ 554 ಕ್ಷೇತ್ರಗಳ ಮೀಸಲು ಅವಧಿಯನ್ನು 2030ರ ಜನವರಿ 25ರವರೆಗೆ ವಿಸ್ತರಿಸಬೇಕಿದೆ.

ಈ ಎಪ್ಪತ್ತು ವರ್ಷಗಳಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಪ್ರಾತಿನಿಧ್ಯವನ್ನು ಕಲ್ಪಿಸಿಕೊಡಲಾಗಿದೆ. ಇದು ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅದು ಒಂದು ಸಹಜ ಪ್ರಕ್ರಿಯೆಯಂತೆ ಯಾರ ವಿರೋಧವೂ ಇಲ್ಲದಂತೆ ನಡೆದು ಬಂದಿದೆ. ಬಿಜೆಪಿ ಇರಲಿ ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷದ ಸರ್ಕಾರವಿದ್ದರೂ ಇದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿದಿದೆ.

ಈಗ ಇರುವ ಪ್ರಶ್ನೆ ಈ ಎಪ್ಪತ್ತು ವರ್ಷಗಳಲ್ಲಿ ಈ ವರ್ಗಗಳಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಆಯ್ಕೆಯಾಗಿ ಬಂದ ಪ್ರತಿನಿಧಿಗಳು  ನಿಜವಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆಯೇ? ಶಾಸನ ಸಭೆಗಳಲ್ಲಿ ತಮ್ಮ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಮಾತ್ರವಲ್ಲದೆ ಅವರ ಕ್ಷೇತ್ರದ, ರಾಜ್ಯದ ಮತ್ತು ಇತರೆ ಜನರ ಏಳಿಗೆಗೆ ಪ್ರಾಮಾಣಿಕವಾಗಿ ಮತ್ತು ಸಮರ್ಥವಾಗಿ ಕೆಲಸ ಮಾಡಿದ್ದಾರೆಯೇ ಎಂದು ವಿಮರ್ಶಿಸುವ ಅವಶ್ಯಕತೆ ಇದೆ.

ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಏನು ಮಾತನಾಡಿದ್ದಾರೆ? ತಮ್ಮ ಜನರ ದುಃಖ ದುಮ್ಮಾನ, ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮುಂತಾದ ಪ್ರಕರಣಗಳ ಬಗೆಗೆ ದನಿ ಎತ್ತಿದ್ದಾರೆಯೇ? ಇಲ್ಲ ಮಾತು ಬಾರದಂತೆ ಮೌನಿಗಳಾಗಿ ಕುಳಿತು ಬಂದಿದ್ದಾರೆಯೇ? ದಲಿತರ ಅಭಿವೃದ್ಧಿಗೆ ಸಂಬಂಧಿಸಿದ ಕಾಯ್ದೆ ರಚನೆಗಳಲ್ಲಿ ಇವರ ಪಾತ್ರವೇನು? ಆ ಪಾತ್ರವನ್ನು ಇವರು ನಿರ್ವಹಿಸಿದ್ದಾರೆಯೇ? ಶಾಸನ ಸಭೆಗಳಿಗೆ ಸರಿಯಾಗಿ ಹಾಜರಾಗುತ್ತಾರೆಯೇ? ಅಲ್ಲಿ ಕಲಿತದ್ದೇನು? ಮಾಡಿದ್ದೇನು? ಶಾಸನ ಸಭೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆಯೇ? ಇಲ್ಲ ನಿದ್ದೆ ಮಾಡಿ ಮೌನಿಗಳಾಗಿ ಟಿಎ ಡಿಎಗಳಿಗಷ್ಟೇ ಸೀಮಿತವಾಗಿದ್ದಾರೆಯೇ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಇವುಗಳೆಲ್ಲವನ್ನೂ ಸೂಕ್ತ ವೇದಿಕೆಗಳಲ್ಲಿ ಚರ್ಚಿಸಬೇಕಿದೆ.

ಆದರೆ ಪರಿಶಿಷ್ಟ ಜಾತಿ ಸದಸ್ಯರ ಸಾಮರ್ಥ್ಯ ಕುರಿತಂತೆ ನನಗೆ ತಿಳಿದ ಮಟ್ಟಿಗೆ ಯಾರೂ ಯಾವುದೇ ಸಂಸ್ಥೆಯೂ ಅಧ್ಯಯನ ಮಾಡಿದಂತೆ ಇಲ್ಲ. ಹಾಗಾಗಿ ಕರಾರುವಕ್ಕಾದ ಅಧ್ಯಯನ ವರದಿ ಲಭ್ಯವಿಲ್ಲವಾದರೂ, ಮೇಲ್ನೋಟಕ್ಕೆ ಅವರ ಸಾಮರ್ಥ್ಯವನ್ನು ಅಳೆಯಲು ಬ್ರಹ್ಮಜ್ಞಾನವೇನೂ ಬೇಕಿಲ್ಲ. ಸದನಗಳಲ್ಲಿ ಅವರ ನಡೆ ನುಡಿ, ಯಾವ ವಿಷಯಗಳ ಬಗೆಗೆ ಮಾತನಾಡಿದ್ದಾರೆ? ದಲಿತರ ಮೇಲೆ ದೌರ್ಜನ್ಯ ನಡೆದಾಗ ಮತ್ತು ಅವರಿಗೆ ಸರ್ಕಾರ ಮತ್ತು ಸಮಾಜದಿಂದ ಅನ್ಯಾಯವಾದಗ ದನಿ ಎತ್ತಿದ್ದಾರೆಯೇ ಎನ್ನುವುದನ್ನು ಪತ್ರಿಕೆಗಳ ವರದಿ ಮತ್ತು ಟಿವಿ ಮಾಧ್ಯಮಗಳ ಸುದ್ದಿಗಳಿಂದಲೇ ತಿಳಿದುಕೊಳ್ಳಬಹುದು.

ಇನ್ನೂ ಹೆಚ್ಚಿನ ಆಸಕ್ತಿ ಇರುವವರು ಮತ್ತು ಆಳವಾದ ಅಧ್ಯಯನ ಮಾಡುವವರು ಲೋಕಸಭೆ ಇರಲಿ ಅಥವಾ ಸಂಬಂಧಿಸಿದ ವಿಧಾನಸಭೆಗಳ ಕಲಾಪದ ವರದಿಗಳ ಗ್ರಂಥಗಳನ್ನು ಓದಿದಾಗ ಎಲ್ಲವೂ ತಿಳಿಯಲಿದೆ.

ಲೋಕಸಭೆಗೆ ಮತ್ತು ವಿಧಾನ ಸಭೆಗಳಿಗೆ ಎಂತಹ ವ್ಯಕ್ತಿಗಳು ಆಯ್ಕೆಯಾಗುತ್ತಿದ್ದಾರೆ ಎನ್ನುವುದನ್ನು ತಿಳಿಯುವ ಮೂಲಕ ಪರಿಶಿಷ್ಟ ಜಾತಿಯ ಪ್ರತಿನಿಧಿಗಳು ಎಂತಹವರು ಎಂದು ತಿಳಿಯಬಹುದು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹತ್ತಿರವಾಗುವಂತಹ ಸಾಮರ್ಥ್ಯ ಇರುವವರು ಇದುವರೆಗೆ ಸಂಸತ್ತನ್ನು ಪ್ರವೇಶಿಸಿದ ಉದಾಹರಣೆಗೆ ಯಾರೂ ಸಿಗುವುದಿಲ್ಲ. ಈಗಿರುವ ಪ್ರತಿನಿಧಿಗಳನ್ನು ಗಮನಿಸಿದರೆ ಅದು ತೆಂಗು ತುಂಬೆ ಅಂತರ ಇದ್ದಂತೆ. ನಿಜ ನಾವು ಎಲ್ಲರಲ್ಲಿಯೂ ಅಂಬೇಡ್ಕರ್ ಅವರನ್ನು ಕಾಣಲು ಬರುವುದಿಲ್ಲ. ಅವರೊಡನೆ ಹೋಲಿಕೆ ಮಾಡುವ ಕಾಲವೂ ಬಂದಿಲ್ಲ.

ಆದರೆ ಅವರ ಆಶಯಗಳನ್ನು ಕನಿಷ್ಠ ಮಟ್ಟದವರೆಗೆ ಈಡೇರಿಸುವ ನಾಯಕತ್ವವಾದರೂ ಇದುವರೆಗೆ ಬಂದಿಲ್ಲ ಎನ್ನುವುದೇ ವಿಪರ್ಯಾಸ. ನಾಲ್ಕು ದಶಕಗಳ ಕಾಲ ಜಗಜೀವನರಾಂ ಅವರು ಕೇಂದ್ರದಲ್ಲಿ ಪರಿಶಿಷ್ಟ ಜಾತಿಯನ್ನು ಪ್ರತಿನಿಧಿಸಿದರು. ಅವರು ತಮಗೆ ದೊರೆತ ಖಾತೆಗೆ ಸಮರ್ಥ ಸಚಿವರಾಗಿ ನ್ಯಾಯ ಒದಿಗಿಸಿದ್ದಾರೆ ಎನ್ನುವುದಷ್ಟೆ ತೃಪ್ತಿ. ಆದರೆ ಅವರು ದಲಿತರು ತಮ್ಮ ವಿಮೋಚನೆಗೆ ಮತ್ತು ದೇಶದ ವಿವಿಧ ಕಡೆ ನಡೆದ ದಲಿತರ ಸಂಘಟನೆ ಮತ್ತು ಹೋರಾಟಗಳಿಗೆ ಸ್ಪಂದಿಸಲಿಲ್ಲ ಎನ್ನುವ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ.

ಅವರ ನಂತರ ಲೋಕಸಭೆಯಲ್ಲಿ ದೊಡ್ಡದನಿಯಾಗಿ ಕೇಳಿ ಬಂದುದೇ ರಾಂ ವಿಲಾಸ್ ಪಾಸ್ವಾನ್. ನಂತರ ಕಾನ್ಷಿರಾಂ ಮತ್ತು ಮಾಯಾವತಿ ಅವರು. ಉಳಿದವರ ಪಾತ್ರ ಗೌಣ. ಜೆಪಿ ಚಳುವಳಿಯಿಂದ ಬೆಳೆದು ಬಂದ ಪಾಸ್ವಾನ್ ಅವರು ವಿ.ಪಿ. ಸಿಂಗ್ ಆಡಳಿತದಲ್ಲಿ ಅವರು ಮಾಡಿದ ಸಾಧನೆ ಮರೆಯಲಾಗದು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ತಂದ ಬಿ.ಪಿ. ಮಂಡಲ್ ಆಯೋಗದ ಜಾರಿ, ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಡಾ. ಅಂಬೇಡ್ಕರ್ ಅವರ ಆಳೆತ್ತರದ ತೈಲವರ್ಣ ಚಿತ್ರ, ಹಾಕಿಸಿದ್ದು, ಭಾರತ ರತ್ನ ಪ್ರಶಸ್ತಿ, ಮುಂತಾದವುಗಳಲ್ಲಿ ಪಾಸ್ವಾನ್ ಮತ್ತು ಬೂಟಾ ಸಿಂಗ್ ಮುಂತಾದವರ ಶ್ರಮವಿದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಸತ್ ಸದಸ್ಯರ ವೇದಿಕೆ ರಚಿಸಿ ಆ ಮೂಲಕ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಆಗಬೇಕಾದ ಕೆಲಸ, ಎದುರಾದ ಸಮಸ್ಯೆಗಳ ಪರಿಹಾರಕ್ಕೆ ಆಯಾ ಕಾಲಕ್ಕೆ ಬಂದ ಪ್ರಧಾನಿ ಮತ್ತು ಸರ್ಕಾರಗಳ ಜೊತೆ ವ್ಯವಹರಿಸಿ ನ್ಯಾಯ ಒದಗಿಸಿರುವುದನ್ನು ತಳ್ಳಿಹಾಕಲಾಗದು.

ನಾನು ಗಮನಿಸಿದಂತೆ ರಾಜ್ಯಸಭೆಯಲ್ಲಿ ಎರಡು ದಶಕಗಳ ಹಿಂದೆ ಮೂರು ಬಾರಿ ಸದಸ್ಯರಾಗಿದ್ದ ಎಚ್. ಹನುಮಂತಪ್ಪ ಇಂಗ್ಲಿಷ್ ಮತ್ತು ಹಿಂದಿಯನ್ನು ಚೆನ್ನಾಗಿ ಬಲ್ಲವರಾಗಿದ್ದ ಕಾರಣ ಅಲ್ಲಿ ದೊಡ್ಡ ದನಿಯಾಗಿದ್ದರು. ಈಗ ಎಲ್ . ಹನುಮಂತಯ್ಯ ಅವರ ನಡೆಯನ್ನು ಗಮನಿಸಬಹುದಾಗಿದೆ.

ಇನ್ನು ಕಾನ್ಷಿರಾಂ ಅವರು ಬಹುಜನ ಪಕ್ಷವನ್ನು ಕಟ್ಟಿ ಕರ್ನಾಟಕಕ್ಕೆ ಹೋಲಿಸಿದರೆ ಇನ್ನೂ ಐವತ್ತು- ನೂರು ವರ್ಷ ಹಿಂದೆ ಇರುವ ಉತ್ತರ ಪ್ರದೇಶದ ದಲಿತರನ್ನು ಒಗ್ಗೂಡಿಸಿ ಅಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ ಅವರ ಶ್ರಮ ಇತಿಹಾಸದಲ್ಲಿ ದಾಖಲೆಯಾಗುವ ಕೆಲಸ. ಅವರು ದಲಿತರಲ್ಲಿ ಉಂಟುಮಾಡಿದ ಜಾಗೃತಿ ಮತ್ತು ಸಂಘಟನೆಯಿಂದ ಮಾಯಾವತಿ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗುವಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದು ಸಾಮಾನ್ಯವಾದ ಕೆಲಸವಲ್ಲ.

ಇನ್ನು ನಾವು ಕಣ್ಣಾರೆ ಕಂಡಂತೆ ಕರ್ನಾಟಕದ ರಾಜಕಾರಣವನ್ನು ಗಮನಿಸಬೇಕಿದೆ. ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಬಿ.ಬಸವಲಿಂಗಪ್ಪ ಅವರು ತೋರಿದ ಧೈರ್ಯ, ಆಡಳಿತದಲ್ಲಿನ ಸಾಧನೆ ಮತ್ತು ಜನಜಾಗೃತಿಯ ಕೆಲಸವನ್ನು ಬೇರಾರು ಇದುವರೆಗೂ ಮಾಡಲೂ ಸಾಧ್ಯವಾಗಿಲ್ಲ. ಕಾಯ್ದೆ ಕಾನೂನುಗಳ ಮೂಲಕ ಪರಿಶಿಷ್ಟ ಜನರಿಗೆ ಹತ್ತಾರು ವರ್ಷ ಸಹಾಯವಾಗುವಂತೆ ಮಾಡಿದವರಲ್ಲಿ ಬಸವಲಿಂಗಪ್ಪ ಮೊದಲಿಗರು. ಭೂ ಒಡೆತನ, ಗೇಣಿದಾರರಿಗೆ ಸರ್ಕಾರಿ ಭೂಮಿ ಹಂಚಿಕೆ, ನಿವೇಶನ ಹಂಚಿಕೆ ಇತ್ಯಾದಿ ಕಾರ್ಯಗಳಲ್ಲಿ ಮಾಡಿರುವ ಸಾಧನೆ ಮರೆಯಲಾಗದು. ಬಸವಲಿಂಗಪ್ಪನವರ ನಂತರ ಎನ್. ರಾಚಯ್ಯ, ಕೆ.ಎಚ್. ರಂಗನಾಥ್ ಮತ್ತು ಮಲ್ಲಿಕಾರ್ಜುನ ಖರ್ಗೆ ಹಾಗು ಸ್ವಲ್ಪಮಟ್ಟಿಗೆ ಬಿ. ಸೋಮಶೇಖರ್ ಅವರು ತಾವು ಹೊಂದಿದ್ದ ಸಚಿವ ಖಾತೆಗಳಲ್ಲಿ ಮಾಡಿರುವ ಕೆಲಸವನ್ನು ಉದಾಹರಿಸಬಹುದು. ಉಳಿದಂತಹವರು ಲೆಕ್ಕಕ್ಕುಂಟು ಆಟಕ್ಕಿಲ್ಲ.

ಇನ್ನು ವಿಧಾನಪರಿಷತ್ತಿನಲ್ಲಿ ಪರಿಶಿಷ್ಟ ಜಾತಿಯ ಹತ್ತಾರು ಸಮಸ್ಯೆಗಳ ಬಗೆಗೆ ಸರ್ಕಾರದ ಕಣ್ಣುತೆರೆಸಿದವರು ಡಾ. ಸಿದ್ದಲಿಂಗಯ್ಯ. ಅವರ ವೈಚಾರಿಕ ವಿಚಾರ ಮಂಡನೆಯಿಂದ ಸರ್ಕಾರದ ಕಣ್ಣುಕಿವಿ ದಲಿತರ ಸಮಸ್ಯೆಯತ್ತ ತೆರೆದುಕೊಳ್ಳುವಂತೆ ಮಾಡಿರುವುದನ್ನು ಸದನದಲ್ಲಿ ಸಿದ್ದಲಿಂಗಯ್ಯ ಅವರ ಕುರಿತ ಗ್ರಂಥದಿಂದ ತಿಳಿಯಬಹುದಾಗಿದೆ.

ಲೋಕಸಭೆ ಇರಲಿ ಅಥವಾ ವಿಧಾನಸಭೆಗಳಿರಲಿ ಅಲ್ಲಿಗೆ ಎಂತಹವರನ್ನು ನಮ್ಮ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನಾಗಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತಾರೆ ಎನ್ನುವುದರಿಂದ ಅವರ ಸಾಮರ್ಥ್ಯದ ಅಳತೆಗೋಲನ್ನು ಬಳಸಬೇಕಿದೆ. ಎಲ್ಲ ರಾಜಕೀಯ ಪಕ್ಷಗಳು ಎಲ್ಲ ರಾಜ್ಯಗಳಲ್ಲೂ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ಜಾತಿಗಳ ನಾಯಕತ್ವದಲ್ಲಿವೆ. ಹಾಗಾಗಿ ಅವರು ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ದಲಿತೇತರರ ಮುಂದೆ ತಗ್ಗಿ ಬಗ್ಗಿ ನಡೆಯುವ, ಸರಿಯಾಗಿ ಮಾತನಾಡದ ಮತ್ತು ತಾವು ಹೇಳಿದಂತೆ ಕೇಳುವ ಅಸಮರ್ಥರನ್ನು ಅಭ್ಯರ್ಥಿಗಳನ್ನಾಗಿ ನಿಲ್ಲಿಸುತ್ತಾರೆ. ಚುನಾವಣೆಯಲ್ಲಿ ಅಂತಹವರನ್ನೇ ದಲಿತೇತರ ಮತದಾರರೂ ತಮ್ಮ ಮೊದಲ ಆದ್ಯತೆಯಾಗಿ ಆಯ್ಕೆ ಮಾಡುತ್ತಾರೆ

ಈ ಕಾರಣಕ್ಕಾಗಿಯೇ ಡಾ. ಬಾಬಾ ಸಾಹೇಬರು ಪ್ರತ್ಯೇಕ ಚುನಾವಣಾ ವ್ಯವಸ್ಥೆಗಾಗಿ ದುಂಡುಮೇಜಿನ ಪರಿಷತ್ತಿನಲ್ಲಿ ವಾದ ಮಂಡಿಸಿ ಯಶಸ್ವಿಯಾಗಿದ್ದರು. ಆದರೆ ಮಹಾತ್ಮ ಗಾಂಧಿ ಅವರು ಈ ಬೇಡಿಕೆಗೆ ವಿರುದ್ಧವಾಗಿ ಆಮರಣ ಉಪವಾಸ ಮಾಡಿದ ಫಲವಾಗಿ ಅಂಬೇಡ್ಕರ್ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬಂದುದು ಇತಿಹಾಸ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮೂರಿನ ಜನರ ಬಾಯಲ್ಲಿ ಒಂದು ಮಾತು  ಗುನುಗುತ್ತಿತ್ತು. ಅದು ಮೀಸಲು ಕ್ಷೇತ್ರ. ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಒಮ್ಮೆ ಸಚಿವರೂ ಆಗಿದ್ದೂ, ಸ್ವಭಾವತಃ ಧೈರ್ಯವಂತರೂ ಮತ್ತು ಶಾಸಕರೂ ಆಗಿದ್ದರು. ಅವರೂ ಸ್ಪರ್ಧಾ ಕಣದಲ್ಲಿದ್ದರು. ಈಗ ಗೆದ್ದು ಶಾಸಕರಾಗಿರುವವರದು ಬೇರೆ ಪಕ್ಷ. ಇವರ ಪಕ್ಷದ ನಾಯಕರು ಬಲಿಷ್ಠ ಜಾತಿಗೆ ಸೇರಿದವರು. ಚುನಾವಣೆ ವೇಳೆ ತಮ್ಮ ಜಾತಿಯ ಜನರನ್ನು ಸೇರಿಸಿ ಮಾತನಾಡುವಾಗ ಹೇಳಿದ್ದು “ನೋಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡಿದರೆ ನಿಮ್ಮ ಸಮಸ್ಯೆ ಕೇಳಲು ಆತನನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸಿಕೊಡುತ್ತೇನೆ.  ಒಂದು ವೇಳೆ ಆ (ಎದುರಾಳಿ ಅಭ್ಯರ್ಥಿ) ವ್ಯಕ್ತಿಯನ್ನು ಆಯ್ಕೆ ಮಾಡಿದರೆ ನೀವು ನಿಮ್ಮ ಸಮಸ್ಯೆ ತೆಗೆದುಕೊಂಡು ಆತನ ಮನೆ ಬಾಗಿಲಿಗೆ ಹೋಗಬೇಕು. ಈಗ ಹೇಳಿ ನಿಮಗೆ ಯಾರು ಬೇಕು ಅಂತ? ಸಹಜವಾಗಿಯೇ ಆ ಜನರು ತಮ್ಮ ಜಾತಿಯ ನಾಯಕ ಹೇಳಿದಂತೆ ನಡೆದುಕೊಂಡರು. ಅವರು ಹೇಳಿದಂತೆ ಕೇಳುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡರು. ಇದು ಒಂದು ಸಣ್ಣ ಉದಹಾರಣೆ. ಕಳೆದ ಎಪ್ಪತ್ತು ವರ್ಷಗಳಿಂದ ಇಡೀ ದೇಶದಲ್ಲಿ ನಡೆದು ಬಂದಿರುವುದು ಇದೇ ರಾಜಕೀಯ. ಇಂತಹ ರಾಜಕೀಯ ಪರಿಸ್ಥಿತಿಗೆ ಪರಿಹಾರವೇನು ಎನ್ನುವ ಪ್ರಶ್ನೆಗೆ ಈಗಿನ ಪೀಳಿಗೆ ಉತ್ತರ ಕಂಡುಕೊಳ್ಳುವ ಕಾಲ ಬಂದಿದೆ.