ಧೋನಿ ಕೈಗವಸಿಗೆ ಆಕ್ಷೇಪ : ಕ್ರಿಕೆಟ್ ಲೋಕದಲ್ಲೊಂದು ಸುತ್ತು

ಧೋನಿ ಕೈಗವಸಿಗೆ ಆಕ್ಷೇಪ : ಕ್ರಿಕೆಟ್ ಲೋಕದಲ್ಲೊಂದು ಸುತ್ತು

ಮಹೇಂದ್ರ ಸಿಂಗ್ ಧೋನಿ ಕೈಗವಸು ವಿವಾದ ಉಂಟುಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ಕ್ರಿಕೆಟ್ ಇತಿಹಾಸದ ರೋಚಕ ಸಂಗತಿಗಳನ್ನು ಜಿ.ಆರ್.ಸತ್ಯಲಿಂಗರಾಜು ಇಲ್ಲಿ ನೆನಪಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಕೈಗವಸಿನಲ್ಲಿ ಭಾರತೀಯ ಸೈನ್ಯಕ್ಕೆ ಕೃತಜ್ಞತೆ ಅರ್ಪಿಸುವಂಥ ಚಿತ್ರಿವಿದೆ ಎಂಬುದು ಈಗ ವಿವಾದಕ್ಕೀಡಾಗಿ, ಕ್ರೀಡೆಯಲ್ಲಿ ದೇಶಪ್ರೇಮ ಮೆರೆವುದು ತಪ್ಪೇ ಎಂಬ ಪರ ವಿರೋಧ ಚರ್ಚೆಗಳಾಗುತ್ತಿವೆ.


ಕ್ರಿಕೆಟ್ ಇತಿಹಾಸ ನೋಡಿದರೆ ಇದು ಬರೀ ಕ್ರೀಡೆಯಲ್ಲ, ವರ್ಣಬೇಧ ನೀತಿ, ಸಿರಿವಂತ ಗುಲಾಮ  ತಾರತಮ್ಯ, ರಾಷ್ಟ್ರಭಕ್ತಿ, ಸ್ವಾತಂತ್ರ್ಯ ಹೋರಾಟ, ಗೌರವ ಪ್ರತಿಷ್ಠೆಯ ಮಾಧ್ಯಮವಾಗಿಯೂ ಬೆಳೆದುಬಂದಿರುವ ರೋಚಕತೆಯಿದೆ.


ವಿಕ್ಟೋರಿಯಾ ಇಂಗ್ಲೆಂಡಲ್ಲಿ ಕೃಷಿ ಇಲ್ಲದ ಋತುವಿನಲ್ಲಿ ಸಿರಿವಂತರು ತಮ್ಮ ಆಳುಗಳನ್ನ ಸೇರಿಸಿಕೊಂಡು ಆಡುತ್ತಿದ್ದ ಆಟ ಕ್ರಿಕೆಟ್ ಎಂದಾಗಿ, ಅದಕ್ಕೊಂದಷ್ಟು ನಿಯಮಾವಳಿಗಳು ರೂಪುರೇಷೆಗಳು ಧಿರಿಸುಗಳು ಬರುವುದಕ್ಕೆ ಶತಶತಮಾನಗಳೇ  ಹಿಡಿದಿವೆ. ಆದರೆ ಈಗಿನ ರಾಷ್ಟ್ರಭಕ್ತಿ-ಸೇನೆಗೆ ಗೌರವದ ವಿಚಾರಕ್ಕೆ ಸೀಮಿತವಾಗಿ ಅವಲೋಕಿಸುವುದಾದರೆ, ಈಗೇನು ಕೈಗವಸು ವಿವಾದಕ್ಕೀಡಾಗಿದೆಯೋ, ಆ ರೀತಿ ಕ್ರಿಕೆಟ್ ಸಲಕರಣೆಗಳು ರೂಪಿತವಾದುದೇ ಬೇರೆ ಬೇರೆ ಹಿನ್ನೆಲೆ ಹೊಂದಿದೆ.


ಮೂಲತ: ಹಳ್ಳಿಯ ಕ್ರೀಡೆಯಾಗಿದ್ದರಿಂದ, ಮರದಿಂದಲೇ ಬ್ಯಾಟು, ಸ್ಟಂಪು, ಬೇಲ್‍ಗಳು ತಯಾರಾಗುತ್ತಿದ್ದವು. ಚರ್ಮ, ಟ್ವೈನ್ ಮತ್ತು ಕಾರ್ಕ್‍ನಿಂದ ಚೆಂಡು ಮಾಡಿಕೊಳ್ಳಲಾಗುತ್ತಿತ್ತು. (ಈಗಲೂ ಕೈಯಿಂದಲೇ ಚೆಂಡು ಮಾಡಲಾಗುತ್ತೆ) ಬ್ಯಾಟು ಮೊದಲು ಒಂದೇ ತುಂಡಿನದ್ದಾಗಿತ್ತು, ಈಗ ಎರಡು ತುಂಡಿನದ್ದಾಗಿದೆ. ಅಲಗು ಅಥವಾ ಬ್ಲೇಡ್‍ಗಳು ವಿಲ್ಲೋ ಮರದ್ದು, ಹಿಡಿಕೆ ಬೆತ್ತದ್ದು. ಇಂಥ ಮರ ಯುರೋಪಿನ ವಸಾಹತುಗಳಲ್ಲಿ ಸುಲಭವಾಗಿ ಲಭ್ಯವಾಗುತ್ತಿತ್ತು. 


ಇದಾದ ನಂತರದಲ್ಲಿ ಪ್ಲಾಸ್ಟಿಕ್, ಫೈಬರ್ ಗ್ಲಾಸ್, ಲೋಹದಿಂದ ಸಾಧನಗಳನ್ನ ಮಾಡಲಾಗಿತ್ತಾದರೂ, ಅದನ್ನ ಪುರಸ್ಕರಿಸಲಿಲ್ಲ. ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ ಅಲ್ಯುಮಿನಿಯಂ ಬ್ಯಾಟ್ ನಿಂದ ಒಂದು ಇನ್ನಿಂಗ್ಸ್ ಆಡಿದ್ದ ದಾಖಲೆಯೂ ಇದೆ. 


ತಂತ್ರಜ್ಞಾನದ ಸುಧಾರಣೆಯಾದಂತೆಲ್ಲ ವಲ್ಕನೈಸ್ಡ್ ರಬ್ಬರ್ ಆವಿಷ್ಕಾರವಾಗಿ 1848 ರಲ್ಲಿ ಪ್ಯಾಡು, ಗ್ಲೋವ್ಸ್‍ಗಳು  ಬಂದವು. ನಂತರ ಹಗುರ ಲೋಹ ಮತ್ತು ಸಿಂಥೆಟಿಕ್ ಶಿರಸ್ತ್ರಾಣಗಳು ಬಂದವು. 


ಕ್ರಿಕೆಟ್‍ಗೆ ಈಗ ಒಂದು ದಿನ, ಇಪ್ಪತ್ತು ಓವರ್, ಟೆಸ್ಟ್ ಎಂಬಿತ್ಯಾದಿ ಸಮಯಾವಧಿ ಇದೆ. ಶುರುವಿನಲ್ಲಿ ಹೀಗೆ ಸಮಯದ ಮಿತಿ ಇರಲಿಲ್ಲ. ಕೈಗಾರಿಕಾ ಕ್ರಾಂತಿಯ ನಂತರವೇ ಇದಕ್ಕೆ ಸಮಯ ನಿಗದಿಯಾಗಿದ್ದು.


ಕ್ರಿಕೆಟ್ ರಾಷ್ಟ್ರಪ್ರೇಮದ ಪ್ರತೀಕ ಎನಿಸಿಕೊಂಡಿದ್ದಂತೆಯೇ ಶಿಸ್ತು, ಸಂಯಮ, ನಾಯಕತ್ವ, ಗೌರವ, ಪ್ರತಿಷ್ಠೆಯನ್ನ ಪ್ರತಿಬಿಂಬಿಸುತ್ತೆ ಎಂದು ಇಂಗ್ಲೆಂಡ್‍ನ ಶಾಲೆಗಳಲ್ಲಿ ಕ್ರಿಕೆಟ್ ಕಡ್ಡಾಯವಾಗಿತ್ತು(ಹುಡುಗರಿಗೆ ಮಾತ್ರ). ವಾಟರ್ ಲೂ ಯದ್ದದಲ್ಲಿ ಗೆಲ್ಲಲು ಪಬ್ಲಿಕ್ ಶಾಲೆಯಲ್ಲಿ ಕ್ರಿಕೆಟ್ ಕಲಿಸಿಕೊಟ್ಟಿದ್ದೇ ಕಾರಣ ಎಂದೂ ಹೇಳಲಾಗಿತ್ತು.


ಇಂಗ್ಲಿಷರು ತಮ್ಮ ವಸಾಹತುಗಳಲ್ಲೆಲ್ಲ ಕ್ರಿಕೆಟ್ ಆಡುತ್ತಾ, ತಾವೇ ಶ್ರೇಷ್ಠರು, ಮೂಲ ನಿವಾಸಿಗಳಿಗೆ ಇದು ಬರಲ್ಲ, ಇದನ್ನ ಕಲಿಯಲಾಗದ ನಾಲಾಯಕ್‍ಗಳು ಎಂಬಂತೆ ವರ್ತಿಸುತ್ತಿದ್ದರು. ಇದಕ್ಕೆ ಮೊದಲು ಪ್ರತಿರೋಧ ವ್ಯಕ್ತಪಡಿಸಿದ್ದು ವೆಸ್ಟ್ ಇಂಡೀಸರು. ಕೆರಿಬಿಯನ್ ರಾಜಕೀಯ ಮುಖಂಡರಾದ ಫೋರ್ಬ್ಸ್ ಬರ್ನಾಮ್, ಎರಿಕ್ ವಿಲಿಯಂ ರಂಥವರು ಸ್ವಾಭಿಮಾನ ಸಂಕೇತವಾಗಿಸಿಕೊಂಡು, ಕ್ರಿಕೆಟ್ ಕಲಿತು ಮೊಟ್ಟಮೊದಲಿಗೆ 1950 ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿದರು. ಈ ಗೆಲುವು ಇಂಗ್ಲಿಷರಿಗೆ ತಾವು ಕೂಡ ಸಮನಾಗಿದ್ದು ಅವರ ವಿರುದ್ದ ಹೋರಾಡಿ ಗೆಲ್ಲಬಹುದು ಎಂಬುದಾಗಿ ಮೂಲ ನಿವಾಸಿಗಳಲ್ಲಿ ಧೈರ್ಯ ತುಂಬಿ, ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸಿದರು.


ಭಾರತಕ್ಕೆ 1721 ರಲ್ಲಿ ನಾವಿಕರು ಪರಿಚಯಿಸಿದ ಕ್ರಿಕೆಟ್, ತದನಂತರಲ್ಲಿ ಇಂಗ್ಲಿಷರಿಗೆ ವ್ಯಾಪಾರ ಉದ್ದೇಶದಿಂದ ಹತ್ತಿರವಾಗಿದ್ದ ಪಾರ್ಸಿಗಳು ಕಲಿತು 1848 ರಲ್ಲಿ ಬಾಂಬೆಯಲ್ಲಿ ಮೊಟ್ಟಮೊದಲ ಭಾರತೀಯ ಕ್ರಿಕೆಟ್ ಕ್ಲಬ್ ಆರಂಭಿಸಿದರು. ಇದಕ್ಕೆ ಇದೇ ಸಮುದಾಯದ ಟಾಟಾ, ವಾಡಿಯಾರ ಪ್ರಾಯೋಜಕತ್ವ ಇತ್ತು, ಕಾಲಾನಂತರದಲ್ಲಿ ಇಂಗ್ಲಿಷರು ಮತ್ತು ಪಾರ್ಸಿಗಳ ನಡುವೆ ಕ್ರಿಕೆಟ್ ಕಾರಣಕ್ಕಾಗಿಯೇ ವೈಷಮ್ಯ ಬಂದು, ಪಾರ್ಸಿಗಳು ಪ್ರತ್ಯೇಕ ಜಿಮ್ಖಾನ ಕಟ್ಟಿಕೊಂಡರು. ಮುಂದುವರೆದ ಕಾಲಮಾನದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ  ಎಂಬ ಧರ್ಮಾಧಾರದಲ್ಲಿಯೇ ಕ್ರಿಕೆಟ್ ಕ್ಲಬ್ ಗಳು ಸ್ಥಾಪನೆಯಾದವು.


1930-40 ಅವಧಿಯಲ್ಲಿ ಧರ್ಮಾಧಾರಿತ ಕ್ರಿಕೆಟ್‍ಗೆ ಮಾಧ್ಯಮದವರು, ರಾಜಕೀಯ ಮುಖಂಡರು ತಿರುಗಿಬಿದ್ದರು. ಮಹಾತ್ಮಾ ಗಾಂಧಿ ಬೆಂಬಲವೂ ದೊರೆಯಿತು. ಹಿಂದು ತಂಡದಲ್ಲಿಯೇ ನಿಮ್ನ ವರ್ಗದವರಿಗೆ ತುಳಿಯುತ್ತಿದ್ದ ಉದಾಹರಣೆಗಳೂ ಆಗಲೇ ಇದ್ದವು. ಉದಾಹರಣೆಗೆ ಪೂನಾದ ವಲ್ವಂಕರ್ ಬಾಲೂ ನಿಧಾನಗತಿಯ ಬೌಲರ್ ಆಗಿ, ಹಿಂದು ತಂಡದಲ್ಲಿ ಆಡುತ್ತಿದ್ದರು. ದಲಿತ ಎಂಬ ಕಾರಣದಿಂದ ಇವರಿಗೆ ನಾಯಕತ್ವ ಕೊಟ್ಟಿರಲೇ ಇಲ್ಲ. ನಂತರ  ಇವರ ಸೋದರ ಖ್ಯಾತ ಬ್ಯಾಟ್‍ಮ್ಯಾನ್ ವಿತ್ತಲ್ 1923 ರಲ್ಲಿ ಹಿಂದು ತಂಡದ ನಾಯಕರಾಗಿ ಇಂಗ್ಲಿಷ್ ತಂಡದ ವಿರುದ್ದ ಗೆದ್ದಿದ್ದರು. ಅದನ್ನ ಗಾಂಧೀಜಿ ಅಸ್ಪøಶ್ಯತತೆ ವಿರುದ್ದದ ಹೋರಾಟದ ಗೆಲುವೆಂದು ಬಣ್ಣಿಸಿದ್ದರು.


ಜಾತಿ-ಧರ್ಮದ ಆಧಾರಿತ ಕ್ರಿಕೆಟ್‍ಗೆ ಇಂಗ್ಲಿಷರು ಪ್ರೋತ್ಸಾಹಿಸಿದ್ದರು, ಗಾಂಧೀ ಸೇರಿದಂತೆ ನಮ್ಮವರು ತೀವ್ರವಾಗಿ ಪ್ರತಿರೋಧಿಸಿ ಕ್ರಿಕೆಟ್ಟೇ ಒಂದು ಧರ್ಮವಾಗಿರಬೇಕು ಎಂಬಂತೆ ಪ್ರತಿಪಾದಿಸಿದರು. ಭಾರತೀಯ ತಂಡಗಳ ಗೆಲುವು ಇಂಗ್ಲಿಷರ ವಿರುದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಗೆಲ್ಲಬಹುದು ಎಂಬುದಕ್ಕೆ ಮಾದರಿಯಾಗಿ ಪ್ರತಿಬಿಂಬಿಸುವಲ್ಲಿಯೂ ನಮ್ಮವರು ಸಫಲರಾಗಿದ್ದರಿಂದ, ಕ್ರಿಕೆಟ್ ಪಾತ್ರ ಸ್ವಾತಂತ್ರ್ಯ ಹೋರಾಟದಲ್ಲೂ ಇದೆ.


ಈ  ಸಂಕ್ಷಿಪ್ತ ಇತಿಹಾಸ ನೋಡಿದರೆ, ರಾಷ್ಟ್ರಭಕ್ತಿಯ ಪ್ರತೀಕವಾಗಿ ಬೆಳೆಯುತ್ತಾ ಬಂದ ಕ್ರಿಕೆಟ್ ಈಗ, ರಾಷ್ಟ್ರದ ಸೈನಿಕರ ಬಗ್ಗೆ ಮೆಚ್ಚುಗೆ ಅರ್ಪಿಸುವ ಲೋಗೋವುಳ್ಳ ಕೈಗವಸು ತೊಟ್ಟಿದ್ದು ವಿವಾದವಾಗಿ ಬೆಳೆಯುವವರೆಗೆ ಬಂದು ತಲುಪಿಕೊಂಡಿದೆ.  ಅಂತರರಾಷ್ಟ್ರೀಯ ಕ್ರಿಕೆಟ್ ಕ್ಲಬ್(ಐಸಿಸಿ) 1965 ವರೆಗೂ ವಿಶ್ವದ ಬಹುತೇಕ  ರಾಷ್ಟ್ರಗಳ ಕ್ರಿಕೆಟ್ ಮೇಲೆ ಹಿಡಿತ ಹೊಂದಿತ್ತಾದರೂ, ಆಯಾರಾಷ್ಟಗಳ ಕ್ರಿಕೆಟ್ ಕ್ಲಬ್‍ಗಳೇ ಈಗ ಹಿಡಿತ ಹೊಂದಿವೆ. ಇದರ ಪ್ರತೀಕವಾಗಿಯೇ ಆ ರೀತಿಯ ಕೈಗವಸು ತೊಡಬಾರದೆಂದು ಧೋನಿಗೆ ಐಸಿಸಿ ಹೇಳಿದರೆ, ಅದರಲ್ಲಿ ತಪ್ಪೇನಿದೆ ಎಂದು ಬಿಸಿಸಿಐ ಪ್ರಶ್ನಿಸಿದೆ.