ಗೌಡ್ರು-ಸಿದ್ದ್ರಾಮಣ್ಣ ಒಬ್ಬರಿಗೊಬ್ಬ್ರೂ ಪಂಜಿ ಕಿತ್ಗೊಂಡು ಹೊಡ್ದಾಡದಂಗ್ ಇದ್ರ ಅದ ನಮ್ಮ ಪುಣ್ಯಾ

ಗೌಡ್ರು-ಸಿದ್ದ್ರಾಮಣ್ಣ   ಒಬ್ಬರಿಗೊಬ್ಬ್ರೂ ಪಂಜಿ ಕಿತ್ಗೊಂಡು ಹೊಡ್ದಾಡದಂಗ್ ಇದ್ರ ಅದ ನಮ್ಮ ಪುಣ್ಯಾ

ಯಾಕೋ ಬಸ್ಯಾ ಹಿಂಗಾಕ್ ಗಡ್ಡಾ ಬಿಟಗಂಡಿದಿ..? ತಲ್ಯಾಗ ಇರೋ ನಾಲ್ಕ್ ಕುದ್ಲಾನ್ ನೆಟ್ಗ್ ಬಾಚ್ಕೋಬೇಕಿಲ್ಲ!. ಕುದ್ಲಾ ಎತ್ಲಾಗ್‍ಬೇಕ್ ಅತ್ಲಾಗ್ ಜೋತಬಿದ್ದಾವು.... ಹಿಮಾಲಯದ ಸಾದುಗಳು ಕಂಡಂಗ್ ಕಾಣಾಕ ಹತ್ತೀ..... ಏನ್ಲೇ ನಿನ್ನ ಹಕಿಕತ್ತು..?. "ನಮ್ಮ ಸರ್ಕಾರ ಬರ್ಲೀ ತಡ್ರೀ... ,  ನಮ್ಮ ಸರ್ಕಾರ ಬರ್ಲೀ ತಡ್ರೀ ಅಂತ್ ಹೋಳಿ ಹಬ್ಬದಾಗ ಹೋಯ್ಯಕಳಂಗ್ ಹೊಯ್ಯಕಳ್ಳತಿದ್ದೀ"...  "ಈಗ ನೋಡಿದ್ರ ನಿಮ್ಮ ಸರ್ಕಾರ ಬಂದು ತಿಂಗ್ಳಾಗ್ತಾ ಬಂತು, ಇನ್ನು ಬರೇ ಖಾತೆ ಹಂಚ್ಕಿ ಕ್ಯಾತೆದೊಳ್ಗ ನಿಮ್ಮ ಸಿಎಂ ಅದಾನ"!. ಅಂತಾದ್ರಾಗ "ನಿಂದೇನ್ಲೇ ಮುಸ್ಯಾನಹಂಗ್ ಮುಸ್ಡಿಮಾಡಿಕೊಂಡು" ಏನಾತ್ಲೇ ಮಗ್ನ?. ಒಂದ್‍ವಾರಾತಲ್ಲ... ಭೇಟ್ಟಿ ಆಗಲಿಲ್ದ್ ಎಲ್ಲೆ ಹಾಳಾಗಿ ಹೋಗಿದ್ದೆ ಸುಡಗಾಡ್ಕ?.

"ಬಗಸಿ ಬಾಳಿಹಣ್ಣ ತಿಂದ್ರ ಬಾಯಿತುಂಬಾ  ಕುದ್ಲಾ" ಅನ್ನೋಹಂಗ್ ಆಗೇತಿ ನೋಡ್ರೀ. ನಮ್ಮ ಸರ್ಕಾರದ ಬಾಳೇವು!.

ಯಾಕೋ ಅಂತಾದ್ದು ಏನಾಗೇತಿ....?

ಅವನವ್ನ ಆ "ಜ್ಯೋತಿಷಿಗಳು ಚಲೋ ಮಹೂರ್ತಾ ನೋಡಿ ಕೋಡಲಿಲ್ಲಾ ಅಂತ್ ಕಾಣತೈತಿ ನೋಡ್ರೀ"....ಯಾವ್ದೋ ಅಡ್ನಾಡಿ ಮಹೂರ್ತ ಕೊಟ್ಟಾರೋ ಎನೋ?. ಈಗ ನೋಡಿದ್ರ ಯಾವ್ದು ಸುಸೂತ್ರ ನಡೆವಲ್ವು.? ನಮ್ಮ "ರಾಜಾಹುಲಿ  ಸಿಎಂ ಆಗಿದ್ದ ತಡಾ ಒಂದಂದ್ ಎಡವಟ್ಟಗಳು ವಕ್ಕರ್ಸಾಕ ಹತ್ಯಾವು"...?. 

"ಲೇ.... ಲೇ... ಆರ್‍ತಿಂಗಳ್ಗೆ ಹುಟ್ಟಿದ್ವನ್!. ತಡ್ಕೋಳ್ಳಲೇ.... ಈಗರ ನಿಮ್ಮ ಯಡೆಯೂರ್ಸ್ ಸಿಎಂ ಆಗಿ ತಿಂಗ್ಳಾಗೇತಿ..., ಇನ್ನೊಂದ್ ಆರತಿಂಗ್ಳಾಗ್ಲಿ ತಡಿ"....?.

ಯಾಕ್ "ಒಂಬತ್ತ್ ತಿಂಗ್ಳಮಟಾ ತಡಿ ಅನ್ನಲಿಲ್ಲ, ನನ್ನ ಪುಣ್ಯಾ"!. "ಒಂಬತ್ತ ತಿಂಗ್ಳಾ ತುಂಬಿದ್ರ ಅಲ್ಗೆ ಕತೀನ ಮುಗಿತೀತೂ"್ತ....?

ಅಲ್ಲೋ ಅಷ್ಟ್ಯಾಕ ಅವಸ್ರಾ... ತಡ್ಕಾಬೇಕ್ಪಾ...? 

"ತಡೆಂಗಿಲ್ಲ್ರೀ ನಮ್ಮ ಎಂಎಲ್‍ಎಗಳು, ಅವಸರ್ದಾಗ್ ಅದಾರ. ಅವ್ರೀಗೆ ಅರ್ಜಂಟಾಗಿ ಗೂಟದ ಕಾರು ಬೇಕಾಗೇತಿ"......!

ಅಲ್ಲೋ ನಿಮ್ಮ "ಸಿಎಮ್  ಖಾತೆ ಹಂಚಾಕ್ ಇಷ್ಟದಿನಾ ತಗೊಂಡೈತಿ"!.  ಇನ್ನ  "ರವ್ದಿಗೆ ಯಾಕ ಮತ್ರಿಮಾಡೀರಿ?,  ನನ್ನ ಯಾಕ ಕೈಬಿಟ್ಟೀರಿ..?, ಅಂತ್ ಈ ಕತ್ತಿ ಬ್ಯಾರೆ ಕತ್ತಿ ಮಸ್ಯಾಕ ಹತ್ತೇತಿ"...."ಇದ್ರಾಗ ಉರೆ ಬೆಂಕಿಗೆ ತುಪ್ಪಾ ಸುರ್ದಂಗ್ ರೇಣುಕಾಚಾರಿ, ತಿಪ್ಪಾರೆಡ್ಡಿ, ಲಿಂಬಿಹುಳಿ, ರಾಜುಗೌಡ, ಈ ರಾವಣದಾಸ್ ಹಿಂಗ್ ಹತ್ತಮಂದಿ ನಮ್ಗು ಮಂತ್ರಿ ಪಟ್ಟಾಕೊಡ್ರೀ ಅಂತ್ ಪಟ್ಟ ಹಿಡ್ದ ಕುಂತಾವು"?. "ಇದ್ರಾಗ್ ಬ್ಯಾರೆ ರವ್ದಿಗೆ, ಗೋವಿಂದಪ್ಪ್ಗ, ಈಅಶ್ವಥ್‍ನಾರಾಯಣ್ಗ ನಿಮ್ಮ ಸಿಎಂ ಡಿಸಿಎಂ ಅಂಥ್ ಹೆಚ್ಚುವರಿಯಾಗಿ ಖಾತೆ ಕೊಟ್ಟಾರ್. ಬರೆ ಮಂತ್ರಿಗಿರಿ ಸಾಕಂದೋರ್ಗೆ ಉಪಮುಖ್ಯಮಂತ್ರಿ ಹುದ್ದೆಕೊಟ್ಟ ಅವರ್ನ ಮ್ಯಾಲೇ ಏರ್ಸಿ ಮಜಾ ನೋಡಾಕ ಹತ್ಯಾರ್ ನಿಮ್ಮ ಶಾ ಸಾಹೇಬ್ರು, ಈಸಂತೋಷು"...

ಮಂತ್ರಿ ಆಗಿ ಗುಟ್ ಕಾರಬೇಕನ್ನವಕ್ " ಅಷ್ಟ ಅರ್ಜಂಟಾಗಿ ಗೂಟದ ಲೈಟ್ ಬೇಕಂದ್ರ ಪ್ಯಾಟ್ಯಾಗ್ ಮಾರಾಕ ಗೂಟದ ಲೈಟ್ ಸಿಗ್ತಾವಲ್ಲ!,  ಅವನ್ ತಗೋಂಡು ತಮ್ಮಕಾರಿನ್ ಮ್ಯಾಗ್ ಹಾಕ್ಕೋಳ್ಳಾಕ ಹೇಳು....!.

"ಬಕ್ಣದಾಗಿನ ರೊಕ್ಕ ಖರ್ಚಮಾಡಿಕೊಂಡು ಗೂಟದ ಲೈಟ್ ಹಾಕ್ಕೋಳದ್ ಬ್ಯಾರೇರಿ....! ಸರ್ಕಾರರೊಕ್ಕಾದಾಗ್ ಹಾಕ್ಸಿಕೊಳ್ಳೋದು ಬ್ಯಾರೇ"?. "ಏಳೆಂಟ್ ವರ್ಷಾತೂ ನಮ್ಮ   ಮಂತ್ರಿಗಳು ಗೂಟದಕಾರಿನ್ಯಾಗ ಮೆರಿಲಿಲ್ಲ!. ಅದ್ಕ "ಅವ್ರು ಗೂಟದಕಾರ್ ಹತ್ತಾಕ ಅವ್ಸ್ರಾ ಮಾಡಾಕ ಹತ್ಯಾರ್"!. ಹೆಂಗ್ಯ ಬೇಕಹಂಗ ಈ ಗೂಟದ ಲೈಟ್ ಹಾಕ್ಕೊಂಡ್ ಓಡಾಡಾಕ ಈಪೊಲೀಸ್ರು, ಆರ್‍ಟಿಓಗಳು ಬಿಡಬೇಕಲ್ಲ...?

"ಅಲ್ಲೋ ಹಾವೇರ್ಯಾಗ್ ಈರೈತ ಸಂಘದ ಅಧ್ಯಕ್ಷರು ಹಸ್ರಗೂಟದ ಲೈಟ್ ಹಾಕ್ಕೊಂಡು ಕಾರು, ಚೀಪನ್ಯಾಗ್ ಓಡಾಡ್ತಾರಲ್ಲ ಅವ್ರನ್ ಹಂಗ್ ಓಡ್ಯಾಡಾಕ ಬಿಟ್ಟಾರಲ್ಲ ಈ ಪೊಲೀಸ್ರು, ಆರ್‍ಟಿಓಗಳು"..?

"ಅದೇಲ್ಲ ಟಾಪ್ ಸಿಕ್ರೇಟ್. ಅದ್ನೆಲ್ಲಾ ಬಹಿರಂಗ್ ಮಾಡಬಾರ್ದ್ರೀ..? ಅದೇಲ್ಲಾ ಟಾಪ್ ಸಿಕ್ರೇಟ್"..?

"ಸಿಗರೇಟು.... ಇಲ್ಲಾ,  ಚುಟ್ಟಾನು ಇಲ್ಲಾ.... ಅವ್ರಿಗೊಂದು ನ್ಯಾಯ..? ಇವ್ರಗೊಂದ್ ನ್ಯಾಯ ಅಂದ್ರ ಹೆಂಗ್ಯರೀ".. "ಪಾಪಾ ಪೊಲೀಸ್ ಅಧಿಕಾರಿಗಳು ಕೆಂಪ್‍ಗೂಟ್‍ದ ಲೈಟ್ ಬಿಚ್ಚಿಟ್ಟ ಹಂಗ್ ಚೀಪನ್ಯಾಗ ಹೊಕ್ಕಾರ್, ಅಂತಾದ್ರಾಗ್ ಇವ್ರಿಗೆ ಯಾಕಬೇಕ್ರೀ ಗೂಟದ ಲೈಟು"....? 

"ಗೂಟಲೆಸ್ ಲೈಟ್ ಇರೋದಿಲ್ಲ ನೋಡು ಅದ್ಕ"..! "ಅವ್ರ್ವ ಜೀಪು, ಅವ್ರ ರೊಕ್ಕ ಅವ್ರು ಯಾವ್ ಕಲರಿಂದ್ ಬೇಕಾದ್ರು ಗೂಟದ ಲೈಟ್ ಹಾಕ್ಕೋಂಡು ಓಡಾಡ್ಲಿ ಬಿಡು"....!. ಎಲ್ಗೆ ಬಂತ್ಪಾ ನಿಮ್ಮ ಪ್ಯಾಂಟ್‍ಲೈಸ್ ಪಕ್ಷದವ್ರು ಕತಿ"...? ಅದ್ನ ಮೊದ್ಲ ಹೇಳು.

"ನೋಡ್ರೀ ಯಾರ ಎಷ್ಟ ಬೇಕಾದ್ರು ಹೊಯ್ಯಕಳ್ಳ್ಲಿ", "ಹೈ ಕಮಾಂಡು ನಮ್ಮ ಸಿಎಮ್ಮನ್ ಬೆಂಬಲಕ್ ನಿಂತತೈ". "ನಿಮ್ಗ ಯಾರಬೇಕೋ ಅವ್ರ್ನ ಮಂತ್ರಿ ಮಾಡ್ರೀ"...,ನಿಮ್ಗ ಯಾರೋ ಬೇಕೋ ಅವ್ರಿಗೆ ಖಾತೆಕೊಡ್ರೀ".....ಹಗಲೆಲ್ಲಾ ಇಲ್ಗೇ ಅಂದ್ರ "ದಿಲ್ಲಿಗೆ ಬರಬ್ಯಾಡ್ರೀ", "ಜನ್ರು ನಮ್ಮ ಬಗ್ಗೆ ತಪ್ಪತಿಳಕೊಳ್ಳತಾರ್ ಅಂತ ಹೇಳಿ ಕಳಿಸ್ಯಾರ್". 

ಅಲ್ಲೋ ನಿಮ್ಮ "ಯಡೆಯೂರ್ಸಗ ಮೊದ್ಲ ವಯಸ್ಸಾಗೇತಿ"!.  "ಇಲ್ಲೆ ನೂರಾಎಂಟ್ ಸಮಸ್ಯೆ ಅದಾವು.... ಅವ್ನ ಬಗಿಹರ್ಸಾಕ ವೇಳ್ಯಾ ಸಾಲಂಗಿಲ್ಲ"....! ಅಂತಾದ್ರಾಗ್ "ವಾರದಾಗ ಮೂರು ಸರ್ತೀ ದಿಲ್ಲಿಗೆ ಹೋದ್ರ ಹೆಂಗ್ಯ"?.  "ಇಲ್ಲೆ ನೋಡಿದ್ರ ಪ್ರವಾಹದಿಂದಾ ಜನ ಇನ್ನು ಸುದಾರ್ಸಿಕೊಂಡಿಲ್ಲ"!. "ಬಿದ್ದ ಮನಿ-ಮಠ ಕಟಿಗೊಳ್ಳಾಕ ಕಣ್ಣು-ಬಾಯಿ ಬಿಡಾಕ ಹತ್ಯಾರ್"!. "ದಿಲ್ಲಿಮಂದಿ ನೋಡಿದ್ರ ರಾಜ್ಯಕ್ಕ ಒಂದ್ ನಯಾಪೈಸೇನು ಪರಿಹಾರ  ಅಂತ್ ಕೊಟ್ಟಿಲ್ಲ".! "ಇಂತಾದ್ರಾಗ ವಯಸ್ಸಾಗಿರೋ ನಿಮ್ಮ ಸಿಎಂ ಪದೇ ಪದೆ ದಿಲ್ಲಿಗೆ ಹೋದ್ರ ಇಲ್ಲಿ ಜನ್ರ ಗತಿ ಏನೂ" ?. "ಈ ಅಧಿಕಾರಿಗಳು ನೋಡಿದ್ರ... ಸರಿಯಾಗಿ ಕೆಲ್ಸಾಮಾಡವಲ್ರು" ಅಂತ್ "ಮಂತ್ರಿಗಳು ಮೊನ್ನೆ ನೆರೆಹಾನಿ ಪ್ರದೇಶಕ್ಕ ಭೇಟ್ಟಿ ಕೊಟ್ಟಹೊತ್ತಿನ್ಯಾಗ್ ಜನ್ರು ತಮ್ಮ ಕಷ್ಟಾನ ಹೇಳಿಕೊಂಡಾರ್". ಈ ಮಂತ್ರಿ "ಬೊಮ್ಮಾಯಿ ಲಗೂನ ಪರಿಹಾರ ಕೊಡ್ಲಿಲ್ಲಾಂದ್ರ ಸಸ್ಪೆಂಡ್ ಮಾಡಬೇಕಾಕ್ಕೇತಿ ಅಂತ್ ಹಾವೇರಿ ತಹಶೀಲ್ದಾರ್ಗ   ಎಚ್ಚರಿಕೆ ಕೊಟ್ಟೈತಿ". "ಇದ್ರ ಮ್ಯಾಗ್ ಈ ತಹಶೀಲ್ದಾರ್ಗ, ಹಾವೇರಿ ಡಿಸಿ ನೀವು ನೆರೆ ಸಂತ್ರಸ್ತ ಜನ್ರಿಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ, ಅದ್ಕ ನಿಮ್ಮನ್ ಯಾಕ್ ಸಸ್ಪಂಡ್ ಮಾಡಬಾರ್ದು ಅಂತ್ ನೋಟಿಸ್ ಬ್ಯಾರೆ ಕೊಟ್ಟಾರಂತ್" ...!

ಕಾಕಾರ...,  "ನಿಮ್ಮ ಕೇಳೋರೆ ಇಲ"್ಲ ಪಕ್ಷಾ ಅಧಿಕಾರ್ದಾಗ್ ಇದ್ದಾಗ. ಆವಾಗಿದ್ರಲ್ಲ ಸಿಎಂ... ನಿಮ್ಮ ಸಿದ್ದ್ರಾಮಣ್ಣ, ಅವ್ರು ಹಂಗ್ ದಿಲ್ಲಿಗೆ ಹೊಕ್ಕಿದ್ದೀಲ್ಲೇನ್ರೀ..? 

"ಸಿದ್ದ್ರಾಮಣ್ಣ ವೇಳ್ಯಾ ಸಿಕ್ಕಾಗ್ ದಿಲ್ಲಿಗೆ ಹೊಕ್ಕಿದ್ರು"......, ಹೈಕಮಾಂಡ್ ಭೇಟ್ಯಾಕಿದ್ರು, ಇದು ಹಂಗ್.....ನಮ್ಮ ಸಿಎಂ ದಿಲ್ಲಿಗೆ ಅವಾಗ, ಅವಾಗ ಹೋಗಿ ಬರ್ತೀರ್ತಾರ್!. "ಅಲ್ಲೆ ಅವ್ರಿಗೆ ನೋರಾಎಂಟ್ ಕೆಲ್ಸ ಇರ್ತಾವು"..... "ಅವ್ರು ಅಲ್ಲಿಗೆ ತಮ್ಗ್ ಬೇಕ ಬೇಕಾದವ್ರನ್ ಭಟ್ಟಿ ಆಗಿ ಬರ್ತಾರ" ಹೂವು ಗುಚ್ಚಾ, ಅದು-ಇದು ಅಂತ್ ಕೊಟ್ಟ ಬರ್ತಾರ್"...ಇವೇಲ್ಲಾ ರಾಜಕಾರ್ಣದಾಗ ಇರೋವ ಬಿಡ್ರೀ.. ಇನ್ನ "ಪದೇ ಪದೆ ನಮ್ಮ ಯಡೆಯೂರಪ್ಪನವರ್ಗೆ ವಯಸ್ಸಾಗೇತಿ ಅಂತ್ ಟೀಕಾ ಮಡಾಬ್ಯಾಡ್ರೀ"?...... ಏನ್ರೀ ಅಂತ್ ವಯಸ್ಸಾಗಿರೋದು. ಅವ್ರ್ಗೇ.....? "ಈಗ ಅವ್ರಿಗೆ ಎಪ್ಪತ್ತೇರ್ಡು  ವಯಸ್ಸು", "ಇನ್ನು ಹೆಂಗ್ ಅದಾರ ನೋಡ್ರೀ... ಇನ್ನು ಹುಡ್ಗ ಇದ್ದಂಗ್ ಅದಾರ್.! ಈವಸ್ನಾಗೂ ಹೆಂಗ್ ಓಡ್ಯಾಡ್ತಾರ್, ಎಷ್ಟ ಚುರ್ಕಿನಿಂದಾ ಕೆಲ್ಸಾಮಾಡ್ತಾರ್" ಏನ್‍ತಾನ. 

"ಹೌದೋ ಓಡಾಡ್ತಾರ್ , ಕೆಲ್ಸಾನು ಮಾಡ್ತಾರ್. ಆದ್ರ, ಅವ್ರು ಎಷ್ಟು ಅಂತ್ ಒತ್ತ್ಡಾ ತಡ್ಕೋಳ್ಳತಾರ್.....?. "ಆ ಕೆಲ್ಸಾನೆಲ್ಲಾ ಅವ್ರ ಮಕ್ಕಳು, ಅಳಿಯಂದ್ರು, ಸೊಸೆಂದ್ರು ನೋಡ್ಕೋಳ್ಳತಾರ್ ಬಿಡೂ!" . "ಈ ಹಿಂದ್ ಹೆಂಗೂ ನಿಮ್ಮ ಯಡೆಯೂರ್ಸ್ ಸಿಎಂ ಆಗಿ ಕೆಲಸಾ ಮಾಡಿದವ್ರ"....! "ಅವಾಗೇಲ್ಲಾ ಅವ್ರ ಮಕ್ಳು, ಅಳಿಯಂದ್ರು, ಸೊಸೆಂದ್ರಿಗೆ ಎಲ್ಲಾ ರೀತಿ ಅನುಭವಾ ಹೆಂಗೂ ಐತಿ"....!  

"ಅಧಿಕಾರ ಬಂದ್ ಮ್ಯಾಕ್ ಬಂಧು-ಬಳ್ಗದವ್ರು ಮನ್ಯಾಗ ಸೇರ್ಕೋಳ್ಳೋದು ಕಾಮನ್" . ಏನೋ ಸಣ್ಣ-ಪುಟ್ಟ ಕೆಲ್ಸಾನ್ ಅವ್ರು ಮಾಡಿಕ್ಕೊಂಡು ಓಡಾಡ್ತಿರ್ತಾರ್.  

"ಹೌದು ಬಿಡೋ ವಯಸ್ಸಾದಮ್ಯಾಗ್ ಎಲ್ಲಾ ಕೆಲ್ಸಾನ ಮಾಡಿಕೊಳ್ಳಾಕ ಆಗೋದಿಲ್ಲ"!. ಸಹಾಯಕ್ಕ ಯಾರಾದ್ರು ಬೇಕ ಬೇಕು..?

"ಮತ್ತ ವಯಸ್ಸಿನ ಸುದ್ದಿಗೆ ಬಂದ್ಯ್ರಾ ನೀವೂ"!. ನಾ...ಮದ್ಲ ಹೇಳೇನಿ ನಿಮ್ಗ!. "ಅಲ್ಲ್ರೀ ನಿಮ್ಮ ಸಿದ್ದ್ರಾಮಣ್ಣಗ್ ವಯಸ್ಸಾಗಿಲ್ಲೇನ್ರೀ.? ಎಪ್ಪತ್ತರ ಸನ್ಯಾಕ ಅಗಿರಬೇಕು?,  ಇನ್ನ  ಕುಮಾರಣ್ಣ ಆರವತ್ತರ ಸನ್ಯಾಕ  ಇರ್ಬೇಕು"...? "ಈ ಇಬ್ರು ವಯಸ್ಸು ನಿಮ್ಮ ಕಣ್ಣ್ಗೆ ಕಾಣಂಗಿಲ್ಲ!. ನಮ್ಮ ಯಡೆಯೂರಪ್ಪನ್ ಸುದ್ದಿ ಮಾತಾಡಲಿಲ್ಲಾಂದ್ರ ನಿಮ್ಗ ತಿಂದ್ ಕೂಳು ಮೈಗೆ ಹತ್ತಂಗಿಲ್ಲ ಕಾಣತ್ಯತಿ"?.

ಲೇ ಲೇ ತಮ್ಮ "ಅಭಿಮಾನ ಇರ್ಬೇಕು, ಆದ್ರ ಅಂಧಾಭಿಮಾನ ಇರಬಾರ್ದೋ"!. "ಸಿದ್ದ್ರಾಮಣ್ಣಗ , ಕುಮಾರಣ್ಣಗ್ ವಯಸ್ಸಾಗೇತಿ ನಿಜಾ!. ಅವ್ರೂ ವಯಸ್ಸಿಗೆ ತಕ್ಕಂಗ್ ನಡ್ಕಾಬೇಕೂ" ನಾ ಎಲ್ಲೆ ಇಲ್ಲಾ ಅಂದನಿ?...."ಆದ್ರ ದೊಡ್ಡಗೌಡ್ರು ಈ ಸಿದ್ದ್ರಾಮಣ್ಣ ಜಿದ್ದಿಗೆ ಬಿದ್ದೋರಂಗ್ ಇಬ್ರು ಕಾಲಕೆದ್ರಿ ಜಗ್ಳಾ ಆಡಾಕ ಹತ್ತಾರ್"?. "ಗೌಡ್ರ ಬೆಂಬಲಕ್ ಕುಮಾರಣ್ಣ ನಿತ್ಗೊಂಡಿದ್ರ, ಸಿದ್ದ್ರಾಮಣ್ಣಗ್ ಉಗ್ರಪ್ಪ ಕೈಜೋಡಿಸೇತಿ. ಈ ಕಾಗಿ-ಕೋಳಿ ಜಗ್ಳಾ ಎಲ್ಲಿಗೆ ಹೋಗಿ ನಿಲ್ಲತೈತೋ ಗೊತ್ತಾಗವಲ್ದು"?

ನೋಡ್ರೀ "ಏಟಆಗ್ಲೀ ಈ ಸಿದ್ದ್ರಾಮಣ್ಣ ಗೌಡ್ರ ಕ್ವಾಟಿಯೋಳ್ಗ ಪಳ್ಗಿ ಬಂದೋರು"!... "ಹೀಗಾಗಿ ಗೌಡ್ರ ಹಿಡ್ತಾ-ಹೊಡ್ತಾ ಎಲ್ಲಾನು ಇವ್ರಿಗೆ ಗೊತ್ತಿರ್ತಾವು" ಇಬ್ರೊಳಗ್ಗ ಯಾರ್ ಸೋಲಲಿ....ಯಾರರ್ ಗಲ್ಲಲಿ"...!  ಆದ್ರ "ಇಬ್ರು ಒಬ್ಬರಿಗೊಬ್ಬರು ಪಂಜಿ ಕಿತ್ಗೊಂಡು ಹೊಡ್ದಾಡಂಗ್ ಇದ್ರ ಅದ ನಮ್ಮ ಪುಣ್ಯಾ"!. "ಸಾಕ ಬಿಡ್ರೇಪಾ ನಾ ಅರ್ಜಂಟಾಗಿ ರೇಣುಕಾಚಾರಿ ಹತ್ರಾ ಹೋಗಬೇಕು"?. "ಈ ಹವಾಮಾನ ಇಲಾಖೆಯವ್ರೂ ಮತ್ತ ಒಂದ್ ವಾರ್ ಹೆಚ್ಗಿ ಮಳಿ ಬರತೈತಿ ಅಂತ್ ಹೇಳ್ಯಾರ್...!.  "ಮತ್ತ  ಪ್ರವಾಹ ಬಂದ್ರ ನಮ್ಮನ್ ಕಾಪಾಡಾಕ್ ಅವ್ರಿಂದಾ ಮಾತ್ರ ಸಾಧ್ಯ!". ಮೊನ್ನೆ ಟಿವ್ಯಾಗ್ ತೋರ್ಸಾಕ ಹತ್ತಿದ್ರೂ... "ಎಲ್ಲಾರೂ ತೆಪ್ಪದಾಗ ಕುತುಗಂಡ್ ಹುಟ್ಟುಹಾಕಿದ್ರ... ಈ ಮನ್ಷ್ಯಾ  ನಿತ್ಗೊಂಡು ಹುಟ್ಟಹಾಕಿ ನೂರಾರ ಮಂದಿ ಜೀವಾ ಉಳ್ಸಾರ್" ಅಂತ್, ಈ ವಿಡಿಯೋ ಮೊನ್ನೆ ವಾಟ್ಪಪ್ನಾಗ ಬಂದಿತ್ತು, ಅದ್ಕ ಅವ್ರ ಹತ್ರಾ ಹೊಂಟೇನಿ... ಮಳಿ ಬಂದ್ ಮತ್ತ ಪ್ರವಾಹ್ ಬರ್ತತೈತಿ ಅಂತ್ ಹೇಳ್ಯಾರ್...! "ಯಾವ್ದಕ್ಕೂ  ನೀವು ನಮ್ಮ ಊರಿಗೆ ಬರ್ರೀ ಸಾಹೇಬ್ರ ಅಂತ್ ಅವ್ರನ್ ಕರಾಕ ಹೊಂಟೇನಿ...!  ಮತ್ತ "ಅವ್ರೂ ಎಲ್ಲಗರ್ ಹೋದ್ರ ಅವ್ರನ್ ಹುಡ್ಕೋದು ಬಾಳಾ ಕಷ್ಟಾದ ಕೆಲ್ಸಾ"? ನಾ ಬರ್ಲಾರೀ ಕಾಕಾ ಎನ್ನುತ್ತಾ ಬಸ್ಯಾ ಹೊನ್ನಾಳಿಗೆ ಹೋಗುವ ಬಸ್ ಏರಿದಾ....