ಯಾವುದೇ ಸೂತ್ರಕ್ಕೆ ಸಿಲುಕದೇ ಸುಸೂತ್ರವಾಗಿ ನೋಡಿಸಿಕೊಂಡು ಹೋಗುವ ಚಿತ್ರ ‘ದೇವಕಿ’

ಯಾವುದೇ ಸೂತ್ರಕ್ಕೆ ಸಿಲುಕದೇ ಸುಸೂತ್ರವಾಗಿ ನೋಡಿಸಿಕೊಂಡು ಹೋಗುವ ಚಿತ್ರ ‘ದೇವಕಿ’

ಸಿನಿಮಾ ಅಂದ್ರೆ ಒಬ್ಬ ಹೀರೋ, ಹೀರೋಯಿನ್, ವಿಲನ್ಸ್, ಕಾಮಿಡಿ, ಫೈಟ್ಸ್, ಲವ್ , ಡ್ಯಾನ್ಸ್ ಸೀನ್ ಗಳು ಕಣ್ಮುಂದೆ ಬರತ್ತೆ. ಆದ್ರೆ ಈ ಸಾಂಪ್ರದಾಯಿಕ ನಿಯಮ ಅನುಸರಿಸದೇ ಯಂಗ್ ಡೈರೆಕ್ಟರ್ ಲೋಹಿತ್, ಕಂಟೆಂಟ್ ಹಾಗೂ ಪಾತ್ರಗಳ ಮೂಲಕ ವಿಭಿನ್ನ ಸಿನಿಮಾ ಮಾಡಿದ್ದಾರೆ ಅದೇ ದೇವಕಿ.  ಪ್ರತಿ ವಾರ ಒಂದೊಂದು ಸಿನಿಮಾ ನೋಡಿದಾಗಲೂ ಅಯ್ಯೋ ಕಾಮಿಡಿನೇ ಇಲ್ಲ. ಕಾಮಿಡಿ ಇದ್ರು ನಗು ಬರ್ತಿಲ್ಲ ಒಂದು ಡ್ಯಾನ್ಸ್ ಇಲ್ಲ ಈ ಥರ ಎಲ್ಲಾ ಅನಿಸ್ತಿತ್ತು. ಆದ್ರೆ ಈ ದೇವಕಿ ಸಿನಿಮಾದಲ್ಲಿ ಕಾಮಿಡಿ, ಡ್ಯಾನ್ಸ್, ಇನ್ಯಾವುದೇ ಫನ್ ಎಲಿಮೆಂಟ್ಸ್ ಇಲ್ಲದೇ ಹೋದ್ರು ಎಲ್ಲೂ ಸಿನಿಮಾ ಬೋರ್ ಅನಿಸಲ್ಲ. ಅಂಥ ಕಥೆ, ಗಟ್ಟಿತನದ ನಿರ್ದೇಶನ ದೇವಕಿ ಸಿನಿಮಾದಲ್ಲಿದೆ. ಈಗಾಗ್ಲೇ ಟ್ರೇಲರ್ ಪೋಸ್ಟರ್ ನೋಡಿರುವ ನಮಗೆ ದೇವಕಿ ಒಂದು ಕ್ರೈಂ, ಥ್ರಿಲ್ಲರ್ ಸಿನಿಮಾ ಅಂತಲೋ, ಚೈಲ್ಡ್ ಟ್ರಾಫಿಕಿಂಗ್ ದಂಧೆಯ ಕಥಾಹಂದರವಂತಲೋ ಅನಿಸಿರತ್ತೆ ಆದ್ರೆ ಇದಕ್ಕೂ ಮೀರಿ ಸಿನಿಮಾದಲ್ಲಿ ಬೇರೆ ಏನೋ ಇದೆ. 

ಕಥೆ ಆರಂಭವಾಗೋದೆ ದೂರದ ಕೊಲ್ಕತ್ತಾದಲ್ಲಿ. ದೇವಕಿ ಹಾಗೂ ಆರಾಧ್ಯ ಯಾರ ಹಂಗಿಲ್ಲದೇ ಸ್ವತಂತ್ರರಾಗಿ ಬದುಕ್ತಿರ್ತಾರೆ. ಗಂಡನಿದ್ರೂ ಇಲ್ಲ ಅನ್ನೋ ಮನೋಭಾವನೆಯಲ್ಲಿ ದೇವಕಿ ಜೀವನ ನಡೆಸ್ತಿದ್ರೆ, ಮಗಳಿಗೆ ಅಪ್ಪನ ಪ್ರೀತಿಯ ಹಂಬಲ ಇರತ್ತೆ. ಒಂದು ದಿನ ರೇಡಿಯೋ ಸ್ಟೇಷನ್ ಗೆ ಆಡಿಷನ್ ಕೊಡೋಕೆ ಮಗಳು ಐಶ್ವರ್ಯನ್ನ ದೇವಕಿ ನೆರೆಮನೆಯ ಶಂಕ್ರಣ್ಣನ ಜತೆ ಕಳಿಸ್ತಾಳೆ. ಆರಾಧ್ಯ ತಾಯಿ ದೇವಕಿಗೆ ಆಡಿಷನ್ ಹೋಗೋ ಮೊದಲು, ಅಮ್ಮಾ ನಾನು ಆಡಿಷನ್ ನಲ್ಲಿ ಸೆಲೆಕ್ಟ್ ಆದ್ರೆ ಕೇಸರಿ ಬಾತ್ ಮಾಡ್ಕೊಡಬೇಕು ಅಂತ ಕೇಳಿರ್ತಾಳೆ. ಇನ್ನೇನು ಸಂಜೆ ಆಯ್ತು ಮನೆಗೆ ಮಗಳು ಬರ್ತಾಳೆ ಅಂತ ದೇವಕಿ ಮಗಳು ಕೇಳಿದ ಖಾರಬಾತ್ ತಯಾರಿ ಮಾಡೋಕೆ ಆರಂಭಿಸ್ತಾಳೆ. ಆದ್ರೆ ಗ್ಯಾಸ್ ಆನ್ ಮಾಡಿ ಹಾಗೆಯೇ ಮರೆತು ನಿದ್ರಿಸ್ತಾಳೆ. ಎದ್ದು ನೋಡಿದ್ರೆ ಸಮಯ ಜಾಸ್ತಿ ಆಗಿರತ್ತೆ. ಅಷ್ಟೊತ್ತಾದ್ರೂ ರೇಡಿಯೋ ಸ್ಟೇಷನ್ ಗೆ ಹೋದ ಮಗಳು ಮನೆಗೆ ಬಂದಿರಲ್ಲ. ಮಗಳು ಮನೆಗೆ ಬಂದಿಲ್ಲ ಅಂತ ಶಂಕ್ರಣ್ಣನ ಮನೆ ಹತ್ರ ಹೋಗಿ ಎಲ್ಲಿ ನನ್ ಮಗಳು ಅಂತ ಕೇಳಿದ್ರು ಅಲ್ಲೂ ಮಗಳಿರಲ್ಲ. ಆಗ ಗೊತ್ತಾಗತ್ತೆ ಆರಾಧ್ಯ ಕಾಣೆಯಾಗಿದ್ದಾಳೆ ಅಂತ. ಹೇಳಿ ಕೇಳಿ ಕೊಲ್ಕತ್ತಾ ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಕಿಡ್ನ್ಯಾಪ್ ಮಾಡಿ, ವೇಶ್ಯಾವಾಟಿಕೆ, ಭಿಕ್ಷಾಟನೆಗೆ ತಳ್ಳೋ ದೊಡ್ಡ ಜಾಲವೇ ಅಲ್ಲಿರತ್ತೆ. ಎಷ್ಟೇ ಹುಡುಕಿದ್ರೂ ದೇವಕಿ ಮಗಳು ಸಿಗೋದೆ ಇಲ್ಲ. ಮಗಳನ್ನು ಹುಡುಕೋ ಭರದಲ್ಲಿ ಅನಿರೀಕ್ಷಿತವಾಗಿ ದೇವಕಿಯೇ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗತ್ತೆ. ಅಲ್ಲಿ ಈಕೆಯನ್ನು ವೇಶ್ಯೆಯಂತ ಅವಮಾನಿಸಲಾಗತ್ತೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬರೋ ಹಿರಿಯ ಪೊಲೀಸ್ ಅಧಿಕಾರಿ ಬಳಿ, ತಾನು ಆ ರೀತಿ ಅಲ್ಲ. ನನ್ನ ಮಗಳನ್ನು ಕಳೆದುಕೊಂಡಿದ್ದೀನಿ. ದಯವಿಟ್ಟು ಆಕೆಯನ್ನು ಹುಡುಕಿಕೊಡಿ ಅಂತ ಕೇಳ್ತಾಳೆ. ಬರೀ ಬೆಂಗಾಲಿ ಮಾತಾಡೋ ಜನರ ನಡುವೆ ಒಬ್ಬ ಸಭ್ಯ ಪೊಲೀಸ್ ಅಧಿಕಾರಿ ದೇವಕಿಯ ನೆರವಿಗೆ ನಿಂತು ಮಗಳನ್ನು ಹುಡುಕೋಕೆ ಸಹಾಯ ಮಾಡ್ತಾರೆ. ಎಷ್ಟೇ ಸೆಕ್ಸ್ ದಂಧೆಗಳ ಅಡ್ಡ, ಕಿಡ್ನ್ಯಾಪರ್ಸ್ ನ ವಿಚಾರಿಸಿದ್ರು ಆರಾಧ್ಯ ಸಿಗೋದೆ ಇಲ್ಲ.  ಹಾಗಾದ್ರೆ ಆರಾಧ್ಯಳನ್ನು ಕಿಡ್ನ್ಯಾಪ್ ಮಾಡಿದ್ಯಾರು..? ಶಂಕ್ರಣ್ಣ ಯಾಕೆ ಆರಾಧ್ಯಳನ್ನು ಮನೆಗೆ ಕರ್ಕೊಂಡು ಬರಲಿಲ್ಲ..? ಮಗಳು ಕೇಳಿದ ಕೇಸರಿಬಾತ್ ಬದಲು ದೇವಕಿ ಖಾರಬಾತ್ ತಯಾರು ಮಾಡೋಕೆ ಯಾಕೆ ಮುಂದಾಗ್ತಾಳೆ..? ಈ ಎಲ್ಲಾ ವಿಚಾರಗಳನ್ನು ತಿಳ್ಕೋಬೇಕು ಅಂದ್ರೆ ದೇವಕಿ ಸಿನಿಮಾನಾ ನೀವೆಲ್ಲಾ ಮಿಸ್ ಮಾಡದೇ ನೋಡಲೇಬೇಕು.

ಇನ್ನು ಇಡೀ ಸಿನಿಮಾದಲ್ಲಿ ಹೆಣ್ಣುಮಕ್ಕಳನ್ನು ಅಪಹರಿಸಿ ಹೇಗೆಲ್ಲಾ ದಂಧೆ ಮಾಡ್ತಾರೆ..? ಅಲ್ಲಿ ಅವರುಗಳು ಅನುಭವಿಸೋ ಕಷ್ಟಗಳೇನು..? ಎಂತವ್ರನ್ನು ಟಾರ್ಗೆಟ್ ಮಾಡಿ ಈ ರೀತಿ ದಂಧೆ ಮಾಡಲಾಗತ್ತೆ ಅನ್ನೋ ಪ್ರತಿಯೊಂದು ಅಂಶಗಳನ್ನು ನಿರ್ದೇಶಕ ಲೋಹಿತ್ ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದಲ್ಲಿ ದೇವಕಿಯಾಗಿ ಪ್ರಿಯಾಂಕ ಉಪೇಂದ್ರ, ಪೊಲೀಸ್ ಆಫೀಸರ್ ಆಗಿ ಕಿಶೋರ್ , ಆರಾಧ್ಯ ಆಗಿ ಐಶ್ವರ್ಯಾ ಉಪೇಂದ್ರ ಅಭಿನಯಿಸಿದ್ದಾರೆ. ಮಗಳನ್ನು ಕಳೆದುಕೊಂಡ ನೋವು, ಅಸಹಾಯಕತೆ, ದುಖಃ ಈ ಎಲ್ಲ ಸನ್ನಿವೇಶಗಳನ್ನು ಪ್ರಿಯಾಂಕ ಉಪೇಂದ್ರ ಅದ್ಭುತವಾಗಿ ಅಭಿನಯಿಸಿದ್ದಾರೆ. ಮೊದಲ ಸಿನಿಮಾವಾದ್ರೂ ಐಶ್ವರ್ಯಾ ಉಪೇಂದ್ರ ಅಭಿನಯ ಮೆಚ್ಚಿಕೊಳ್ಳುವಂತಿದೆ. ಇನ್ನು ಪೊಲೀಸ್ ಆಫಿಸರ್ ಆಗಿ ಕಾಣಸಿಕೊಂಡಿರೋ ಕಿಶೋರ್ ಅವ್ರು ಎಂದಿನಂತೆ ಈ ಸಿನಿಮಾದಲ್ಲೂ ಖಡಕ್ ಆಗಿ ಅಲ್ಲಲ್ಲಿ ಎಮೋಷನಲ್ ಆಗಿಯೂ ಅಭಿನಯಿಸಿದ್ದಾರೆ.  ಕಿಡ್ನಾಪರ್ಸ್ ಆಗಿ ಅಭಿನಯಿಸಿರೋ ಎಲ್ಲಾ ಕಲಾವಿದರು, ಬೇರೆ ಭಾಷೆಯ ಕಲಾವಿದರು ಕೂಡ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ನೊಬಿನ್ ಪೌಲ್ ಅವ್ರ ಹಿನ್ನೆಲೆ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದು. ಅದ್ಭುತವಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅನ್ನು ದೇವಕಿ ಸಿನಿಮಾಕ್ಕೆ ನೀಡಿದ್ದಾರೆ. ಉತ್ತಮ ಸಿನಿಮ್ಯಾಟೋಗ್ರಾಫಿ ಹಾಗೂ ಸಂಕಲನ ದೇವಕಿ ಸಿನಿಮಾದಲ್ಲಿದೆ. ಹೌರಾ ಬ್ರಿಡ್ಜ್ ಸುತ್ತಮುತ್ತಲ ಸ್ಥಳಗಳಲ್ಲಿ ಶೂಟ್ ಮಾಡಿರೋ ದೃಶ್ಯಗಳು ಕೂಡ ಚೆನ್ನಾಗಿವೆ

ಸಿನಿಮಾದಲ್ಲಿ ನೆಗೆಟಿವ್ ಅಂಶಗಳು ಹೆಚ್ಚೇನು ಇಲ್ಲದಿದ್ರೂ ಕೆಲ ದೃಶ್ಯಗಳಲ್ಲಿ ಡಬ್ಬಿಂಗ್ ಹಾಗೂ ಲಿಪ್ ಸಿಂಕ್ ಎರಡೂ ಮ್ಯಾಚ್ ಆಗಿಲ್ಲ. ಇದನ್ನು ಹೊರತು ಪಡೆಸಿದ್ರೆ ದೇವಕಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ.  ಪ್ರತಿಯೊಬ್ಬ ತಾಯಂದಿರು ಹಾಗೂ ಹೆಣ್ಣು ಮಕ್ಕಳಿಗೆ ಈ ಸಿನಿಮಾ ಕಂಪ್ಲೀಟ್ ಆಗಿ ಕನೆಕ್ಟ್‌ ಆಗತ್ತೆ.