ದೇವದಾಸಿಯರಿಗೆ ನಿಜದ ಬದುಕು ಬೇಕು

ದೇವದಾಸಿಯರಿಗೆ ನಿಜದ ಬದುಕು ಬೇಕು

ಬದುಕೇ ಅಲ್ಲದ ಬದುಕನ್ನು ಬದುಕುತ್ತಿರುವ ದೇವದಾಸಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಲಕ್ಷ್ಮೀ ಮ. ಕುಂಬಾರ.

‘ಎಲ್ಲಮ್ಮನ ಜೋಗತಿಯರು ಬಂದಾರ..! ಜೋಗ ತಗೊಂದು ಬಾರವ್ವ..! ಇದು ಜೋಗತಿಯರ ಕೂಗು. ಹೀಗೆ ಹೇಳುತ್ತಾ ಮನೆ ಮನೆಗೂ ಹೋಗಿ ದವಸ, ಧಾನ್ಯಗಳನ್ನು ಪಡೆದು ಬದುಕು ನಡೆಸುತ್ತಿರುವವರು ಈ ಜೋಗತಿಯರು.

ತಲೆ ಮೇಲೆ ಬಿದುರು ಬುಟ್ಟಿ. ಅದರಲ್ಲಿ ತಾಮ್ರದ ಬಿಂದಿಗೆಗೆ ಎಲ್ಲಮ್ಮನ ಮುಖ. ಬುಟ್ಟಿಯ ಸುತ್ತಲೂ ಕಳಸ. ಹೂವು, ಅರಿಸಿನ ಕುಂಕುಮದಿಂದ ಅಲಂಕರಿಸಿರುತ್ತಾರೆ. ಇವರನ್ನು ಜೋಗಮ್ಮ, ಜೋಗಪ್ಪ ಎಂತಲೂ ಕರೆಯುತ್ತಾರೆ. ಹಿಂದಿನ ಕಾಲದಿಂದಲೂ ಇದೊಂದು ಮೂಢನಂಬಿಕೆ ಮತ್ತು ಸಂಪ್ರದಾಯವಾಗಿದೆ. ಇದು ಮುಂದುವರೆದಂತೆ ಅನೈತಿಕ ಚಟುವಟಿಕೆಗಳಿಗೆ ದಾರಿಯಾಯಿತು. 
ಎಲ್ಲಮ್ಮನ ಚರಿತ್ರೆ

`ರೇಣುಕಾ ಎಲ್ಲಮ್ಮ’ ಪತಿಯ ಶಾಪದಿಂದ ಕುಷ್ಠ ರೋಗಕ್ಕೆ ಗುರಿಯಾಗಿ ಗುಡ್ಡಗಾಡು ಅಲೆಯುತ್ತಿರುವಾಗ ಸಿದ್ದಿ ಪುರುಷರ ದರ್ಶನವಾಯಿತಂತೆ. ಆಗ ಜೋಗಳ ಬಾವಿಯಲ್ಲಿ ಸ್ನಾನಮಾಡಿ ಭಂಡಾರ ಹಚ್ಚಿಕೊಳ್ಳುವಂತೆ ಆದೇಶಿಸಿ ಮಾಯವಾದರಂತೆ. ಆಕೆ ಅವರ ಹೇಳಿಕೆಯಂತೆಯೇ ಮಾಡಿದಾಗ ಬೆಂಕಿಗೆ ಬಿದ್ದ ಬಂಗಾರದಂತಾದಳು. ‘ಎಕ್ಕಯ್ಯ, ಜೋಗಯ್ಯ’ ಎಂದು ಅವರ ಜಪ ಮಾಡತೊಡಗಿದಳು. ಜಮದಗ್ನಿಗೆ ಇದು ತಿಳಿದು ಕೋಪೋದ್ರಿಕ್ತನಾಗಿ ‘ಅವರು ನಪುಂಸಕರಾಗಲಿ’ ಎಂದು ಶಪಿಸಿದ. ಇದರಿಂದ ಜೋಗಪ್ಪಗಳು ಹುಟ್ಟಿದರು.

ಇನ್ನೊಂದು ಕಥೆಯ ಪ್ರಕಾರ ತಂದೆಯ ಅಣತಿಯನ್ನು ಪಾಲಿಸದ ತನ್ನ ನಾಲ್ಕು ಮಕ್ಕಳನ್ನು ಷಂಡರಾಗುವಂತೆ ಜಮದಗ್ನಿ ಮುನಿ ಶಪಿಸಿದನಂತೆ. ಆದ್ದರಿಂದ ಎಲ್ಲಮ್ಮನ ಬಳಿ ಗಂಡು ಜೋಗಪ್ಪಗಳಿರುವುದು. ‘ನಿಂಗೆ ನಾಲಕ್ಕುಧೋ’ ಎಂದು ಭಕ್ತರ ಉದ್ಘೋಷ, ಎಲ್ಲಮ್ಮನ ಆ ನಾಲ್ವರು ಮಕ್ಕಳನ್ನೇ ಕುರಿತಿದ್ದು ಎಂಬುದು ತಿಳಿಯುತ್ತದೆ.

ಸವದತ್ತಿಯ ಜೋಗಳ ಬಾವಿಯಲ್ಲಿ ಸತ್ಯವ್ವನ ಗುಡಿಯಿದೆ. ಸತ್ಯಕ್ಕ ಮತ್ತು ಎಲ್ಲಮ್ಮರು ಬಾಣಂತಿ ಯಾಗಿದ್ದಾಗಿನ ಸ್ಥಿತಿಯಲ್ಲಿದ್ದವಳು ಎಂದು ಮತಿಘಟ್ಟ ಕೃಷ್ಣಮೂರ್ತಿಯವರು ತಮ್ಮ ‘ಏಳುಕೊಳ್ಳದೆಲ್ಲಮ್ಮ’ ಕೃತಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. 

ಸವದತ್ತಿ ಎಲ್ಲವ್ವನನ್ನು ‘ರೇಣುಕೆ’ ಎಂದೇ ಕರೆಯುತ್ತಾರೆ. ಇದಕ್ಕೊಂದು ಐತಿಹಾಸಿಕ ಹಿನ್ನೆಲೆಯೂ ಇದೆ. ಪುರಾಣಗಳು ಹೇಳುವ ಪ್ರಕಾರ-ರೇಣುಕೆ, ರೇಣುಕ ರಾಜನ ಮಗಳು. ಇತ ಇಕ್ಷ್ವಾಕು ವಂಶದ ಅರಸನಾಗಿದ್ದನು. ಮುಂದೆ ರೇಣುಕೆಯನ್ನು ಭೃಗು ವಂಶದ ಜಮದಗ್ನಿ ಮುನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿದನು.

ಒಂದು ದಿನ ರೇಣುಕೆಯು ಗಂಗಾನದಿಗೆ ನೀರು ತರಲು ಹೋಗಿರುತ್ತಾಳೆ. ಮರಳಿನಿಂದ ಮಾಡಿದ ಕೊಡದಲ್ಲಿ ನೀರು ತುಂಬಿ, ಹಾವಿನ ಸಿಂಬೆ ಮಾಡಿಕೊಂಡು ನೀರು ತರುತ್ತಿರುತ್ತಾಳೆ. ಆದರೆ, ಅಂದು ಚಿತ್ರರಥನೆಂಬ ಗಂಧರ್ವನ ಜಲ ಕ್ರೀಡೆಯನ್ನು ನೋಡುತ್ತಾ ಮೈಮರೆಯುತ್ತಾಳೆ. ಇತ್ತ ಋಷಿಮುನಿ ಕೋಪಗೊಂಡಿರುತ್ತಾನೆ. ರೇಣುಕೆ ಕಾಲಿ ಕೈಯಿಂದ ಮರಳಿ ಬಂದಿರುವದನ್ನು ನೋಡಿ ಸಿಟ್ಟಾಗಿ ಪಾತಿವ್ರತೆ ಭಂಗವಾಯಿತೆಂದು ತಲೆಕಡಿಯಲು ಮಕ್ಕಳಿಗೆ ಆಜ್ಞಾಪಿಸುತ್ತಾನೆ. ಅವರು ನಿರಾಕರಿಸಿದ್ದರಿಂದ ಅವರನ್ನು ಸುಟ್ಟು ಹಾಕುತ್ತಾನೆ. ಕೊನೆಗೆ 4ನೇ ಮಗ ಪರುಶುರಾಮ ತಾಯಿಯ ತಲೆ ಕಡಿದು ತಂದೆಯ ಆಜ್ಞೆಯನ್ನು ಪಾಲಿಸುತ್ತಾನೆ. 

ಸಂತುಷ್ಟನಾದ  ತಂದೆ ಜಮದಗ್ನಿಯು ನೀನಗೇನು ವರಬೇಕು ಕೇಳು ಎಂದಾಗ, ಮೊದಲ ವರವನ್ನು “ನನ್ನ ಸಹೋದರು ಮತ್ತೆ ಬದುಕಿ ಬರಬೇಕು” ಎನ್ನುತ್ತಾನೆ. ಅದರಂತೆ ಮರಣ ಹೊಂದಿದ ತನ್ನ ಸಹೋದರರನ್ನು ಮರಳಿ ಪಡೆಯುತ್ತಾನೆ.  ಎರಡೇ ವರ “ನಿಮ್ಮ ಈ ಕೋಪ ನಾಶವಾಗಬೇಕು” ಎನ್ನುತ್ತಾನೆ. ಆಗ ಜಮದಗ್ನಿ ಸಿಟ್ಟಿನಿಂದ ಪರುಶುರಾಮನಿಗೆ ಇದು ಆಗದು ಎನ್ನುತ್ತಾನೆ. ಹಾಗಿದ್ದರೆ ನೀವು ಮಾತಿಗೆ ಕೊಟ್ಟ ಮಾತಿಗೆ ತಪ್ಪಿದ್ದೀರಿ...! ಎಂದಾಗ ಋಷಿ ಮುನಿ ಎರಡನೇ ವರವನ್ನು ಪೂರೈಸುತ್ತಾನೆ. 

ಆದರೆ, ಮೂರನೇ ವರವನ್ನು ಕೇಳುವಲ್ಲಿ ಪರುಶುರಾಮ ದುಡುಕುತ್ತಾನೆ. ತನ್ನ ಎರಡು ವರಗಳು ನೇರವೇರಿದ್ದಕ್ಕೆ  ಸಂತೋಷದಲ್ಲಿ “ನನ್ನ ತಾಯಿಯ ತಲೆಗೆ ಜೀವ ಬರಬೇಕು ಎಂದು” ಬೀಡುತ್ತಾನೆ. ಅದಕ್ಕೂ ತಂದೆ ಆಗಲಿ ತಥಾಸ್ತು...! ಎನ್ನುತ್ತಾನೆ. ಪರುಶುರಾಮ ತಾಯಿಯ ತಲೆಗೆ ದೇಹವನ್ನು ಕೂಡಿಸಲು ಹೋದಾಗ ಅದಕ್ಕೆ ಜೀವ ಬರುವುದಿಲ್ಲಾ. ಕಾರಣ ಅವನು ಕೇಳಿದ್ದು ತಲೆಗೆ ಜೀವ ಬರಲೆಂದು ಮಾತ್ರ ಆಗಿತ್ತು. 

ವಿಶೇಷ ಸಂಪ್ರದಾಯಗಳು

ಮಂಗಳವಾರ ಮತ್ತು ಶುಕ್ರವಾರ ಎಲ್ಲಮ್ಮನ ವಾರಗಳು. ಮಂಗಳವಾರ ರೋಗ ರುಜಿನಗಳ ನಿವಾರಕವೆಂದೂ ಮತ್ತು ಶುಕ್ರವಾರ ಸಂಪತ್ ವೃದ್ದಿಯ ವಾರವೆಂದು ಆಚರಿಸುವರು. ಬೇವು ಮತ್ತು ಲಕ್ಕಿ ಸೊಪ್ಪಿನಿಂದ ಮಾಡಿದ ಉಡುಗೆ ಧರಿಸುತ್ತಾರೆ. ಇದಕ್ಕೆ ಉಟಗಿ ಉಡುವುದು ಎನ್ನುತ್ತಾರೆ. 

ಎಲ್ಲಮ್ಮನ ವಿಶೇಷ ಪೂಜೆಯಲ್ಲಿ ಹಡ್ಲಗಿ ತುಂಬಿಸುವುದು ಒಂದಾಗಿದೆ. ಉಂಡೆ, ಹೋಳಿಗೆ, ಬಜಿ, ಬದನೆಕಾಯಿ, ಜುಟ್ಟಿರುವ ಗಜ್ಜರಿ, ಹಸಿ ತಪ್ಪಲು ಈರುಳ್ಳಿ, ಮುದ್ದೆ ಮುಂತಾದವುಗಳನ್ನು ಬಿದಿರಿನ ತಟ್ಟೆಯಲ್ಲಿ ತುಂಬಿಸುವುದೇ ‘ಹಡ್ಲಗಿ ತುಂಬಿಸುವ ಪೂಜೆ. ‘ಪಡಲಿ ತುಂಬಿಸುವುದು’ ಎಂತಲೂ ಕರೆಯುತ್ತಾರೆ. 

ಎಲ್ಲಮ್ಮನ ಮುಖವನ್ನು ಫಲೋತ್ಪತ್ತಿ ಸೂಚಕವಾದ ತಾಮ್ರದ ಕೊಡದಲ್ಲಿಟ್ಟು ಮೆರೆಸುವರು. ಮುಚ್ಚಳವಿಲ್ಲದ ಬಿದಿರಿನ ಬುಟ್ಟಿಯಲ್ಲಿ ದೇವಿಯ ‘ಮುಖವನ್ನಿಟ್ಟು ಜಗ ಹೊರುತ್ತಾರೆ’. ಮರಗಮ್ಮ, ದುರಗಮ್ಮ, ಪಾಲಕಮ್ಮರಂತೆ ಈಕೆ ಭಂಡಾರದ ದೇವತೆ, ಭಂಡಾರ ಸಮೃದ್ದಿಯ ಸಂಕೇತ. ನಿತ್ಯ ಸುಮಂಗಲತ್ವವನ್ನು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಅರಿಶಿಣ ಪುಡಿಗೆ ಹಣದ ಸಂಗ್ರಹಕ್ಕಿರುವ ಹೆಸರೇ `ಭಂಡಾರ’ !

ಮುತ್ತು ಕಟ್ಟುವುದು 

ಇದೊಂದು ಅನಿಷ್ಟ ಪದ್ದತಿ. ಪ್ರತಿ ವರ್ಷದ ‘ಭರತ ಹುಣ್ಣಿಮೆ’ಯಂದು ಸೌದತ್ತಿ ಎಲ್ಲಮ್ಮ, ಉಚ್ಚಂಗಿದುರ್ಗದ ಉತ್ಸವಾಂಬೆ ಮತ್ತಿತರ ದೇಗುಲಗಳಲ್ಲಿ ಋತುಮತಿ ಆಗುವ ಮುನ್ನವೇ ಅಪ್ರಾಪ್ತ ಬಾಲಕಿಯರಿಗೆ ‘ಮುತ್ತು’ ಕಟ್ಟುತ್ತಾರೆ. ಮುಂದೆ ಅವಳು ವಿವಾಹವಾಗುವಂತಿಲ್ಲಾ. ಜೀವನ ಪೂರ್ತಿ ಅವಳು ಕನ್ಯೆಯಾಗಿಯೇ ಉಳಿಯಬೇಕು. ಊರ ಜನರ, ದೇವರ ಸೇವೆ ಮಾಡುತ್ತಾ, ದೇವಾಲಯದಲ್ಲಿ ಇಲ್ಲವೇ ಮನೆಯಿಂದ ಹೊರ ಬಂದು ಬೇರೊಂದು ಮನೆಮಾಡಿ ವಾಸಿಸಬೇಕು ! 

ಮುಂದೆ ಇವಳು ‘ಭೋಗ’ದ ವಸ್ತುವಂತಾಗಿ ಬಿಡುತ್ತಾಳೆ. ಊರ ಪುರುಷರು ಇವಳಿಗೆ ಆಸೆ, ಆಮೀಷಗಳನ್ನೊಡ್ಡಿ ವೇಶ್ಯೆಯನ್ನಾಗಿ ಮಾಡುತ್ತಾರೆ. ಈಗೀದು `ದೇವದಾಸಿ’ ಎಂಬ ಅನಿಷ್ಟ ಪದ್ದತಿಯಾಗಿ ಬದಲಾಗಿದೆ. ದೇಶ ವೈಜ್ಞಾನಿಕ ಹಾಗೂ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದೇ ಸಾಗಿದ್ದರೂ, ಮೂಢನಂಬಿಕೆ, ‘ದೇವದಾಸಿ’ ಪದ್ದತಿ ಇಂದಿಗೂ ಜೀವಂತ ಇರುವುದು ದೊಡ್ಡ ದುರಂತವೇ ಸರಿ. ದೇಶದಲ್ಲಿ ಸರಿ ಸುಮಾರು 39 ಸಾವಿರ ದೇವದಾಸಿ ಮಹಿಳೆಯರು ಸಾಮಾಜಿಕ ಶೋಷಣೆಗೆ ಒಳಗಾಗಿದ್ದಾರೆಂದು ಅಂದಾಜಿಸಲಾಗಿದೆ.
 
ಸಮಸ್ಯೆಗಳ ಸರಮಾಲೆ  

ದೇವದಾಸಿಯರ ನೆತ್ತಿಗೊಂದು ಸೂರಿಲ್ಲ. ಭಾರತಿಯ ಎನ್ನಲು ಗುರುತಿನ ಚೀಟಿಯಿಲ್ಲಾ. ಪಡಿತರ ಚೀಟಿಯೂ ಇಲ್ಲ. ಒಪ್ಪತ್ತಿನ ಊಟಕ್ಕೂ ಗತಿ ಇಲ್ಲ. ಮೂಲಭೂತ ಸೌಕರ್ಯಗಳಂತೂ ಇಲ್ಲವೇ ಇಲ್ಲ. ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್ ಸಾಲ ನೀಡುವುದಿಲ್ಲಾ. ಜನರ ಮಧ್ಯೆ ಇರಲು ಯಾರೂ ಸೇರಿಸುವುದಿಲ್ಲಾ. ದುಡಿದು ತಿನ್ನಲು ಯಾರೊಬ್ಬರೂ ಕೆಲಸ ಕೊಡುವುದಿಲ್ಲಾ.

ಸರ್ಕಾರ ನೀಡುವ ಮಾಶಾಸನ ಯಾವುದಕ್ಕೂ ಸಾಲದು. ಅನಾರೋಗ್ಯಕ್ಕೆ ತುತ್ತಾದರೆ ಸಹಾಯಕ್ಕೆ ಯಾರೂ ಬರುವುದಿಲ್ಲ. ಊರ ಸೇವೆ ಮಾಡುವವಳಿಗೆ ಕೊನೆಗಾಲದಲ್ಲಿ ಬಾಯಿಗೆ ಗಂಗಾ ಜಲ ಬಿಡಲು ಮಕ್ಕಳೂ ಇರಲ್ಲ. ಹೀಗೆ ದೇವದಾಸಿಯರು ಇಂದು ಸಮಸ್ಯೆಗಳ ಸರಮಾಲೆಯನ್ನೇ ಹೊತ್ತಿದ್ದಾರೆ. 

ಮಂಗಳ ಹಾಡುವದೇ ಸರ್ಕಾರ?

ಕದ್ದು ಮುಚ್ಚಿ ವೇಶ್ಯಾವಾಟಿಕೆ ನಡೆಯುತ್ತಿರುವ ಈ ಹೇಯ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಪಾಪದ ಕೂಪದಿಂದ ಪಾರು ಮಾಡಬೇಕಿದೆ. ಇವರು ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸುವ ಅಗತ್ಯವಿದೆ. 

ದೇವದಾಸಿಯರ ಮಕ್ಕಳಿಗೆ ಶಾಲೆಯಲ್ಲಿ ಸಮಾನ ಸ್ಥಾನಮಾನ ಕಲ್ಪಿಸಬೇಕು. ಕಡ್ಡಾಯ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಸ್ವಯಂ ಉದ್ಯೋಗಕ್ಕೆ ಪ್ರೇರಣೆ ತುಂಬಬೇಕು. ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ. ತನ್ಮೂಲಕ ಅನಾದಿ ಕಾಲದ `ಜೋಗ’ ಬೇಡುವ, ದೇವದಾಸಿ ಅನಿಷ್ಠ ಪದ್ದತಿಗೆ ಸರ್ಕಾರ ಮಂಗಳ ಹಾಡಬೇಕಿದೆ. 

                                                                                                                                                                  -ಲಕ್ಷ್ಮೀ ಮ.ಕುಂಬಾರ,