ಆರೆ ಕಾಡು ಸಂರಕ್ಷಣೆ ಹೋರಾಟಗಾಥೆ

"ಅಭಿವೃದ್ಧಿ" ಎಂಬ ಬೆಳವಣಿಗೆಯಿಂದ ತನ್ನ ನೈಸರ್ಗಿಕ ಪರಿಸರವನ್ನು ರಕ್ಷಿಸುವಲ್ಲಿ ಭಾರತವು ಕಳಪೆ ಪ್ರದರ್ಶನ ತೋರಿದೆ.

ಆರೆ ಕಾಡು ಸಂರಕ್ಷಣೆ ಹೋರಾಟಗಾಥೆ

ಅಕ್ಟೋಬರ್ 4 ರ ರಾತ್ರಿ ಮುಂಬೈನ ಆರೆ ಕಾಲೊನಿಯನ್ನು ಸಂರಕ್ಷಿತ ಅರಣ್ಯವೆಂದು ಘೋಷಿಸಬೇಕೆಂಬ ಕಾರ್ಯಕರ್ತರ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ, ಅಧಿಕಾರಿಗಳು ಮೆಟ್ರೊ ಕಾರ್ ಶೆಡ್‌ ನಿರ್ಮಾಣಕ್ಕಾಗಿ 2,185 ಮರಗಳನ್ನು ಕತ್ತರಿಸಲು ಪ್ರಾರಂಭಿಸಿದರು. ಮರ ಕಡಿಯುವುದಕ್ಕೆ ಸ್ಥಳೀಯರು ಮತ್ತು ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಸೋಮವಾರ ಬೆಳಿಗ್ಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ಆರೆಯಲ್ಲಿ ಯಾವುದೇ ಒಂದು ಮರವನ್ನೂ ಕತ್ತರಿಸದಂತೆ ಮುಂಬೈ ಮೆಟ್ರೋ ರೈಲು ನಿಗಮಕ್ಕೆ ಆದೇಶ ನೀಡಿತು. ಆದರೆ ಆ ವೇಳೆಗಾಗಲೇ ಅಧಿಕಾರಿಗಳು 2,141 ಮರಗಳನ್ನು ಕತ್ತರಿಸಿ ಬಿಟ್ಟಿದ್ದರು.

ಹಲವಾರು ವರ್ಷಗಳಿಂದ ಆರೆ ಕಾಲೋನಿಯ 30 ಹೆಕ್ಟೇರ್ ಪ್ರದೇಶದಲ್ಲಿ ಮೆಟ್ರೋ ರೈಲು ಕಾರ್ ಶೆಡ್ ಕಾಮಗಾರಿಗೆ ಸಂಬಂಧಪಟ್ಟ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸೆಪ್ಟಂಬರ್‍ ನಲ್ಲಿ ಮರ ಪ್ರಾಧಿಕಾರವು  2,000 ಕ್ಕೂ ಹೆಚ್ಚು ಆರೆ ಕಾಲೋನಿ ಮರಗಳನ್ನು ಕತ್ತರಿಸಲು ಅನುಮೋದಿಸಿದ ನಂತರ, ದೊಡ್ಡ ಪ್ರಮಾಣದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಅಂದಿನಿಂದ ಆರೆ ಕಾರ್ ಶೆಡ್ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

1996ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ನಿಘಂಟಿನ ಪ್ರಕಾರ, ಮರಗಳನ್ನು ಹೊಂದಿರುವ ದೊಡ್ಡ ಭೂಪ್ರದೇಶವನ್ನು ಕಾಡುಗಳೆಂದು ಅರ್ಥೈಸಿಕೊಳ್ಳಬೇಕು ಮತ್ತು ಭಾರತೀಯ ಸರ್ಕಾರದ ದಾಖಲೆಗಳಲ್ಲಿ ಕಾಡುಗಳೆಂದು ವರ್ಗೀಕರಿಸಲ್ಪಟ್ಟ ಎಲ್ಲಾ ಪ್ರದೇಶಗಳು ಒಳಗೊಂಡಿರುತ್ತದೆ ಎಂದು ಹೇಳಿದೆ. ಆದರೆ ಕೇಂದ್ರ ಸರ್ಕಾರವು ವಿವಿಧ ಕಾನೂನುಗಳಲ್ಲಿ ಕಾಡುಗಳ ಬಗ್ಗೆ ಸ್ಪಷ್ಟ ಕಾನೂನು ವ್ಯಾಖ್ಯಾನವನ್ನು ಇನ್ನೂ ರೂಪಿಸಿಲ್ಲ. ಇದು ಭಾರತದಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಒಂದು ಲೋಪವಾಗಿದೆ. ಕಳೆದ ಮೂರು ದಶಕಗಳಲ್ಲಿ 15,000 ಚದರ ಕಿ.ಮೀ.ಗಿಂತ ಹೆಚ್ಚಿನ ಅರಣ್ಯ ಭೂಮಿಯನ್ನು ಕೈಗಾರಿಕಾ ಯೋಜನೆಗಳಿಗಾಗಿ ಬಳಸಲಾಗಿದೆ.

"ಅಭಿವೃದ್ಧಿ" ಎಂಬ ಬೆಳವಣಿಗೆಯಿಂದ ತನ್ನ ನೈಸರ್ಗಿಕ ಪರಿಸರವನ್ನು ರಕ್ಷಿಸುವಲ್ಲಿ ಭಾರತವು ಕಳಪೆ ಪ್ರದರ್ಶನ ತೋರಿದೆ. ಗಣಿಗಾರಿಕೆ ಮತ್ತು ಕೈಗಾರಿಕಾ ಯೋಜನೆಗಳಿಗೆ ತುಂಬಾ ಸುಲಭವಾಗಿ ಅನುಮತಿ ನೀಡುವುದು, ಸಾಕಷ್ಟು ಅಕ್ರಮ ಕೈಗಾರಿಕಾ ಚಟುವಟಿಕೆಗಳು ಅಭಿವೃದ್ಧಿ ಹೊಂದುವುದಕ್ಕೂ ಅವಕಾಶ ನೀಡುತ್ತಿರುವುದು ಈ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ.

ಉದಾಹರಣೆಗೆ, ಗೋವಾದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಪದೇ ಪದೇ ಆದೇಶಿಸಿದೆ. ಆದರೆ ಷಾ ಆಯೋಗದ 2013ರ ವರದಿಯಲ್ಲಿ, ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆಗಾಗಿ 11,000 ಹೆಕ್ಟೇರ್ ಕಾಡುಗಳನ್ನು ಅತಿಕ್ರಮಿಸಿದೆ ಎಂದು ಉಲ್ಲೇಖಿಸಲಾಗಿದೆ. ಇದು ಕಾಯ್ದಿರಿಸಿದ ಕಾಡುಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿನ ಭೂಮಿಯನ್ನು ಒಳಗೊಂಡಿದೆ.

ಶ್ರೀಮಂತ ಜೀವ ವೈವಿಧ್ಯತೆಗೆ ಹೆಸರುವಾಸಿಯಾದ ಪಶ್ಚಿಮ ಘಟ್ಟಗಳ ಪರಿಸರ ಸುರಕ್ಷತೆಯೂ ಇತ್ತೀಚಿನ ವರ್ಷಗಳಲ್ಲಿ ಆತಂಕ ಹುಟ್ಟಿಸುವಂತಿದೆ.  2012ರ ಕಸ್ತೂರಿರಂಗನ್ ವರದಿಯು ಪಶ್ಚಿಮ ಘಟ್ಟದ ​​60,000 ಚದರ ಕಿ.ಮೀ ಪರಿಸರವನ್ನು ಸೂಕ್ಷ್ಮ ಪ್ರದೇಶ ಎಂದು ವರ್ಗೀಕರಿಸಲು ಶಿಫಾರಸು ಮಾಡಿದೆ. ಆದರೆ ಈ ವರ್ಷದ ವೇಳೆಗೆ ಕೇವಲ 31,000 ಚದರ ಕಿ.ಮೀ. ಆರಣ್ಯ ಹೊಂದಿದ್ದು, ರಾಜ್ಯ ಸರ್ಕಾರಗಳು ಉಳಿದ ಅರಣ್ಯ ಭೂಮಿಯನ್ನು ಸುಲಭವಾಗಿ ಕಲ್ಲುಗಣಿಗಾರಿಕೆ, ಗಣಿಗಾರಿಕೆ ಮತ್ತು ಇತರ ಕೈಗಾರಿಕೆಗಳಿಗೆ ನೀಡಿವೆ.

ಕೆಲವು ಸಂದರ್ಭಗಳಲ್ಲಿ, ಅರವಳ್ಳಿ ವನ್ಯಜೀವಿ ಕಾರಿಡಾರ್‌ನ ಮಧ್ಯದಲ್ಲಿ ಎರಡು ಪೊಲೀಸ್ ತರಬೇತಿ ಕೇಂದ್ರಗಳನ್ನು ನಿರ್ಮಿಸಲು ಸಂರಕ್ಷಿತ ಅರಣ್ಯ ಭೂಮಿಯಲ್ಲಿ 20,500 ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲಾಗಿದೆ. ಹರಿಯಾಣ ಪೊಲೀಸ್ ಇಲಾಖೆಯಂತೆ ಸರ್ಕಾರಿ ಸಂಸ್ಥೆಗಳು ಸಹ ಅರಣ್ಯ ಭೂಮಿಯನ್ನು ಅತಿಕ್ರಮಿಸಿವೆ.

ಅರಣ್ಯ ದುರುಪಯೋಗವು ವನ್ಯಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜುಲೈನಲ್ಲಿ, ಭಾರತದಲ್ಲಿ ಹುಲಿಗಳ ಸ್ಥಿತಿಗತಿಯ ಕುರಿತಾದ ವರದಿಯಲ್ಲಿ ಛತ್ತೀಸ್‌ಗಡ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಹುಲಿಗಳ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಕುಸಿತ ಕಂಡುಬಂದಿದೆ. 2015 ರಿಂದ ಗಣಿಗಾರಿಕೆಗಾಗಿ ಹೆಚ್ಚಿನ ಅರಣ್ಯ ಭೂಮಿಯನ್ನು ನೀಡಿದ ಪರಿಣಾಮ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.  

ಆದಿವಾಸಿ ಮತ್ತು ಅರಣ್ಯದಲ್ಲಿ ವಾಸಿಸುವ ಸಮುದಾಯಗಳು ಅತಿಕ್ರಮಣ ಮತ್ತು ಶೋಷಣೆಯ ಭೀತಿಯನ್ನು ಯಾವಾಗಲೂ ಭರಿಸುತ್ತವೆ. ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಕಾಡಿನಿಂದ ಹೊರಹಾಕಲು ಹಿಂಸಾಚಾರ ಮಾಡಿರುವ ಇತಿಹಾಸ ಭಾರತದಲ್ಲಿದೆ. ಕೈಗಾರಿಕೆಗಾಗಿ ಅರಣ್ಯ ಭೂಮಿಯನ್ನು ದೊಡ್ಡ ಪ್ರಮಾಣ ಕೊಟ್ಟ ನಂತರ, ರಾಜ್ಯ ಸರ್ಕಾರಗಳು ಆದಿವಾಸಿಗಳನ್ನು ಅರಣ್ಯ ಭೂಮಿಯ “ಅತಿಕ್ರಮಣಕಾರರು” ಎಂದು ಹಣೆಪಟ್ಟಿ ಕಟ್ಟಿದೆ.

2006ರ ಅರಣ್ಯ ಹಕ್ಕುಗಳ ಕಾಯ್ದೆಯು ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯಲ್ಲಿ ವಾಸಿಸಲು ಮತ್ತು ಕೃಷಿ ಮಾಡಲು ಇರುವ ಹಕ್ಕುಗಳ ಬಗ್ಗೆ ಹೇಳುತ್ತದೆ. ಆದರೆ ಕಳೆದ ದಶಕದಲ್ಲಿ ಅರಣ್ಯ ಪ್ರದೇಶದ ಮೇಲಿನ ಲಕ್ಷಾಂತರ ಆದಿವಾಸಿ ಹಕ್ಕುಗಳನ್ನು ತಿರಸ್ಕರಿಸಲಾಗಿದೆ. ಫೆಬ್ರವರಿಯಲ್ಲಿ, ಅರಣ್ಯ ಹಕ್ಕುಗಳ ಕಾಯ್ದೆ(ಎಫ್‌ಆರ್‌ಎ) ಅಡಿಯಲ್ಲಿ ಭೂ ಹಕ್ಕುಗಳನ್ನು ತಿರಸ್ಕರಿಸಿದ ಎಲ್ಲ ಅರಣ್ಯವಾಸಿಗಳನ್ನು ಹೊರಹಾಕಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದರಿಂದಾಗಿ ಭಾರತದಾದ್ಯಂತ 1.89 ದಶಲಕ್ಷಕ್ಕೂ ಹೆಚ್ಚು ಅರಣ್ಯದಲ್ಲಿ ವಾಸಿಸುವ ಕುಟುಂಬಗಳನ್ನು ಆರಣ್ಯದಿಂದ ಹೊರ ಹಾಕಬಹುದು. ಹಲವಾರು ರಾಜ್ಯ ಸರ್ಕಾರಗಳು ಈಗ ಈ ಅನೇಕ ಹಕ್ಕುಗಳನ್ನು ಮರುಪರಿಶೀಲಿಸುತ್ತಿವೆ.

ಸುಪ್ರೀಂಕೋರ್ಟ್ ಆರೆನಲ್ಲಿ ಅರಣ್ಯವನ್ನು ಸಂರಕ್ಷಿಸಲು ಹೋರಾಡುವವರಿಗೆ ತಡವಾಗಿ ಜಯ ತಂದಿರಬಹುದು. ಆದರೆ ಪರಿಸರವನ್ನು ರಕ್ಷಿಸುವ ವಿಷಯ ಬಂದಾಗ ಭಾರತವು ದೊಡ್ಡ ಯುದ್ಧವನ್ನು ಕಳೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ.