ನಗರದಲ್ಲಿ ಹೆಚ್ಚುತ್ತಿವೆ ಡೆಲಿವರಿ ಬಾಯ್ಸ್ ಗಳ ಸಂಚಾರ ನಿಯಮ ಉಲ್ಲಂಘನೆ

ನಗರದಲ್ಲಿ ಹೆಚ್ಚುತ್ತಿವೆ ಡೆಲಿವರಿ ಬಾಯ್ಸ್ ಗಳ ಸಂಚಾರ ನಿಯಮ ಉಲ್ಲಂಘನೆ

ಇತ್ತೀಚಿನ ದಿನಗಳಲ್ಲಿ ಮಹಾನಗರಗಳಲ್ಲಿ ದಿನಸಿ ಸಗಟು ವ್ಯಾಪರದಲ್ಲಿ ಆನ್ಲೈನ್ ಬುಕ್ಕಿಂಗ್ ಮತ್ತು ಡೆಲಿವರಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ತತ್ಸಂಭಂಧದ ಉದ್ಯಮಗಳೂ ಸಹ ಭಾರೀ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ.

ಅಷ್ಟೇ ಪ್ರಮಾಣದಲ್ಲಿ ಅಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಂದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಕಾರಣ, ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಅವ್ರು ಬುಕ್ ಮಾಡಿರುವ ವಸ್ತುಗಳನ್ನು ತಲುಪಿಸುವ ಧಾವಂತದಲ್ಲಿ ಪ್ರತಿ ಹಂತದಲ್ಲೂ ಸಾರಿಗೆ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗುತ್ತಿದೆ, ಇದು ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನಿಗದಿತ ಅವಧಿಯಲ್ಲಿ ಸಂಚರಿಸುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಯಾಕೆಂದ್ರೆ, ಟ್ರಾಫಿಕ್ ದಟ್ಟಣೆಯು ವಾಹನ ಸವಾರರನ್ನು ಹೈರಾಣಾಗಿಸುತ್ತದೆ. ಹೀಗಿರುವಾಗ ಆನ್ಲೈನ್ ಮೂಲಕ ಆರ್ಡರ್ ಮಾಡಲಾದ ವಸ್ತುಗಳನ್ನು ತಲುಪಿಸಲು ಡೆಲಿವರಿ ಬಾಯ್ಸ್ ಮಾತ್ರ ಸಂಚಾರಿ ನಿಯಮಗಳನ್ನು ಲೆಕ್ಕಿಸದೆಯೇ ಗ್ರಾಹಕರ ಮೆಚ್ಚುಗೆಗಾಗಿ ದಿನಕ್ಕೆ ಹತ್ತಾರು ಬಾರಿ ಸಂಚಾರಿ ನಿಯಮವನ್ನು ಉಲ್ಲಂಘಿಸುತ್ತಲೇ ಇರುತ್ತಾರೆ.

ಈ ಸಗಟು ವ್ಯಾಪಾರದ ಸಿಗ್ನಲ್ ಜಂಪ್, ಸ್ಪೀಡ್ ರೈಡಿಂಗ್ ಮತ್ತು ಹೆಲ್ಮೆಟ್ ರಹಿತ ಬೈಕ್ ಸವಾರಿಯಂತಹ ಪ್ರಕರಣಗಳು ಡೆಲಿವರಿ ಬಾಯ್ಸ್‌ಗಳ ವಿರುದ್ಧ ಹೆಚ್ಚು ಕೇಳಿಬರುತ್ತಿದ್ದು, ಇದರಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದಲ್ಲದೇ ಜನಸಾಮಾನ್ಯರು ಓಡಾಡುವುದಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹೀಗೆಯೇ ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಪೊಲೀಸರಿಗೂ ಕಣ್ಣುತಪ್ಪಿಸಿ ಓಡಾಡುತ್ತಿರುವ ಡೆಲಿವರಿ ಬಾಯ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಇದುವರೆಗೆ ಹಲವಾರು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ನಿನ್ನೆಯೂ ಕೂಡಾ ನಡೆದ ಕಾರ್ಯಾಚರಣೆ ವೇಳೆ ಸುಮಾರು 53 ಬಾರಿ ನಿಯಮ ಉಲ್ಲಂಘಿಸಿದ್ದ ಡೆಲಿವರಿ ಬಾಯ್ ಒಬ್ಬ ಸಿಕ್ಕಿಬಿದ್ದಿದ್ದಾನೆ.

ಈಗಾಗಲೇ 52 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ 53ನೇ ಬಾರಿ ಸಂಚಾರಿ ನಿಯಮ ಉಲ್ಲಂಘಿಸುವಾಗ ಪೊಲೀಸರ ಕೈಗೆ 27 ವರ್ಷದ ಆನಂದ್ ಎಂಬಾತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಕೋರಮಂಗಲದ ವಾಟರ್ ಟ್ಯಾಂಕ್ ಬಳಿಯಿರುವ ಸಿಗ್ನಲ್ ಜಂಪ್ ಮಾಡುವಾಗ ಅಲ್ಲಿಯೇ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಹಳೆಯ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಮಾಹಿತಿಯನ್ನು ವೀಕ್ಷಿಸಿದಾಗ ದೊಡ್ಡ ಪಟ್ಟಿಯನ್ನೇ ನೀಡಲಾಗಿದೆ.

ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಫುಡ್ 30 ನಿಮಿಷದೊಳಗೆ ತಲುಪಿಸಲು ವಿಧಿಸಿಕೊಂಡಿರುವ ಗಡುವನ್ನು 40 ನಿಮಿಷಕ್ಕೆ ಹೆಚ್ಚಿಸಿಕೊಳ್ಳುವಂತೆ ಆನ್ಲೈನ್ ಫುಡ್ ಡೆಲಿವರಿ ಕಂಪನಿಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಬೇಕಾಗಿದೆ.