ದೆಹಲಿಯ ಟಿಕ್‌ಟಾಕ್‌ ಹೀರೋ ಮೋಹಿತ್‌ ಕೊಲೆ

ದೆಹಲಿಯ ಟಿಕ್‌ಟಾಕ್‌ ಹೀರೋ ಮೋಹಿತ್‌ ಕೊಲೆ

ದೆಹಲಿ: ಟಿಕ್‌ಟಾಕ್‌ ಮತ್ತು ಇನ್ಸ್ಟಾಗ್ರಾಂನಲ್ಲಿ ಹೀರೋ ಆಗಿ ಮಿಂಚುತ್ತಿದ್ದ ಮೋಹಿತ್‌ ಮೋರ್‌ ಎಂಬ ಯುವಕನನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ದೆಹಲಿಯ ನಜಫ್ಗರ್‌ನಲ್ಲಿ ಈ ಘಟನೆ ನಡೆದಿದೆ.

27 ವರ್ಷದ ಮೋಹಿತ್‌ ಮೋರ್‌ ವೃತ್ತಿಯಲ್ಲಿ ಜಿಮ್‌ ಟ್ರೈನರ್‌. ಟಿಕ್‌ಟಾಕ್‌, ಇನ್ಸ್ಟಾಗ್ರಾಂನಂಥಹ ಸಮಾಜಿಕ ಜಾಲಾತಾಣಗಳಲ್ಲಿ ಹೆಚ್ಚು ಸಕ್ರಿಯನಾಗಿದ್ದ ಆತ ಗೆಳೆಯನನ್ನು ಭೇಟಿ ಮಾಡಲೆಂದು ಗೆಳೆಯನ ಅಂಗಡಿಗೆ ಬಂದಿದ್ದ. ಇದೇ ಸಂದರ್ಭದಲ್ಲಿ ದಾಳಿ ನಡೆಸಿರುವ ಮೂವರು ದುಷ್ಕರ್ಮಿಗಳು ಮೋಹಿತ್‌ನ ಮೇಲೆ 13 ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ 7 ಗುಂಡು ಮೋಹಿತ್‌ ದೇಹದೊಳಗೆ ಹೊಕ್ಕಿರುವುದರಿಂದಾಗಿ ಸ್ಥಳದಲ್ಲೇ ಆತ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

“ಮೂರೂ ದುಷ್ಕರ್ಮಿಗಳು ಸ್ಕೂಟರ್‌ನಲ್ಲಿ ಬಂದಿದ್ದರು. ಅದರಲ್ಲಿ ಒಬ್ಬ ಕಪ್ಪು ಹೆಲ್ಮೆಟ್‌ ಧರಿಸಿದ್ದ. ಸಿಸಿಟಿವಿ ಕ್ಯಾಮೆರಾದಲ್ಲಿ ಅವರು ರಸ್ತೆಯಲ್ಲಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ನಾವು ಅಪರಾಧಿಗಳನ್ನು ಗುರುತಿಸಲು ಪ್ರಯತ್ನ ಮಾಡುತ್ತಿದ್ದೇವೆ. ಮೇಲ್ನೋಟಕ್ಕೆ ಇದು ವೈಯಕ್ತಿಕ ವೈರತ್ವ ಮತ್ತು ಹಣದ ವಿವಾದದಿಂದಾಗಿ ನಡೆದ ಕೃತ್ಯ ಎಂದು ಕಾಣುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಮೋಹಿತ್‌ಗೆ ಟಿಕ್‌ಟಾಕ್‌ನಲ್ಲಿ 5 ಲಕ್ಷ ಸಬ್‌ಸ್ಕ್ರೈಬರ್ಸ್‌ ಇದ್ದು, ಇನ್ಸ್ಟಾಗ್ರಾಂನಲ್ಲಿ 3 ಸಾವಿರ ಹಿಂಬಾಲಕರಿದ್ದಾರೆ. ತನಿಖೆ ದೃಷ್ಟಿಯಿಂದ ಟಿಕ್‌ಟಾಕ್‌, ಇನ್ಸ್ಟಾಗ್ರಾಂ ನ ಕಮೆಂಟ್‌ಗಳು ಮತ್ತು ಫೋನಿನ ಕರೆಯ ಮುದ್ರಣಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.