ನಿರ್ಭಯಾರ ನ್ಯಾಯದ ತಕ್ಕಡಿಯಲ್ಲಿ ….

ನಿರ್ಭಯಾ ಕೇಸಿನ ನಂತರ ಲೈಂಗಿಕ ಅತ್ಯಾಚಾರಗಳ ಸಂಖ್ಯೆಯಲ್ಲಾಗಲಿ, ಅತ್ಯಾಚಾರಿಗಳ ಬಂಧನ ಮತ್ತು ಶಿಕ್ಷೆಯ ವಿಧಿಯಲ್ಲಾಗಲಿ ಯಾವ ಸುಧಾರಣೆಯೂ ಕಂಡುಬಂದಿಲ್ಲ. ಈ ಘಟನೆಯ ನಂತರ ಕಾನೂನು ಮತ್ತು ಆಡಳಿತಾತ್ಮಕ ನೀತಿಯಲ್ಲಿ ಬದಲಾವಣೆಯ ಸಂಚಲನ ಉಂಟಾದರೂ ಆರೋಪಿಗಳ ಬಂಧನ ಮತ್ತು ಶಿಕ್ಷೆಯ ಸ್ವರೂಪಗಳಲ್ಲಿ ಯಾವ ಜಾದೂವನ್ನೂ ಸೃಷ್ಟಿಸಲಾಗಿಲ್ಲ.

ನಿರ್ಭಯಾರ ನ್ಯಾಯದ ತಕ್ಕಡಿಯಲ್ಲಿ ….

ಡಿಸೆಂಬರ್ 16 ರಿಂದಲೇ ಉತ್ತರಭಾರತದಲ್ಲಿ ಚಳಿ ಹೆಚ್ಚಿದೆ. ಬಿಸಿಲೇ ಇರದ ಸೂರ್ಯಸತ್ತ ಹಗಲು. ಹೊರಗೆ ಎಲಬು ಸೀಳುವ ಕಟುಚಳಿ. ಥಂಡಿಗಾಳಿ ಒಡಲನ್ನು ನಡುಗಿಸುತ್ತಿದೆ. ಇಂಥದೇ ಕಡುಚಳಿಯ ಒಂದಿರುಳು ಆರುಜನ ರಾಕ್ಷಸರ ಬರ್ಬರತೆಗೆ ಬಲಿಯಾದ ಹೂವಂಥ ಮಗಳನ್ನು ದುರುಳರು ಸತ್ತುಹೋಗಿದ್ದಾಳೆಂದೇ ಭಾವಿಸಿ ಬೀದಿಗೆಸೆದು ಹೋಗಿದ್ದರು. ರಸ್ತೆಯಂಚಿನ ಬಟ್ಟಬಯಲಲ್ಲಿ ಬೆತ್ತಲಾಗಿ ಅರೆಜೀವವಾಗಿದ್ದ ಎರಡು ಜೀವಗಳನ್ನು ಬೇಡ್ ಶೀಟಿನಲ್ಲಿ ಸುತ್ತಿ ದಿಲ್ಲಿ ಪೋಲಿಸರು ಸಫ್ದರ್ಜಂಗ್ ಆಸ್ಪತ್ರೆ ತಲುಪಿಸಿದ್ದರು. ಇಡೀ ದೇಶದ ಆತ್ಮವನ್ನೇ ಅಲುಗಿಸಿದ ನಿರ್ಭಯಾ ನೆನಪಾಗುತ್ತಿದ್ದಾಳೆ ಇಂದು.

ಇದೇ ಡಿ.16ರ ಮತ್ತೊಂದು ವಿಶೇಷ ಉನ್ನಾವದ ನಿರ್ಭಯಾಳ ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪಿ ಉಚ್ಛಾಟಿತ ಬಿಜೆಪಿ ಸಂಸದ ಕುಲದೀಪ್ ಸೆಂಗರನ ಆರೋಪ ಸಾಬೀತಾಗಿದ್ದು. ದೆಹಲಿಯ ತೀಸ್ ಹಜಾರಿ ಕೊರ್ಟ್ ಸೆಂಗರನನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಡಿ.19ರಂದು ಘೋಷಿಸಲಿದೆ. ಉನ್ನಾವ್ ಗ್ರಾಮದ ಈ ಬಹದ್ದೂರ್ ಮಗಳು ನಿರ್ಭಯಾಳ ಸಂಘರ್ಷವನ್ನು ನೆನೆದರೆ ಯಾರಿಗಾದರೂ ಎದೆನಡುಗದಿರಲಾರದು. ತನ್ನ ಇಬ್ಬರು ಚಿಕ್ಕಮ್ಮಂದಿರನ್ನು, ತಂದೆಯನ್ನು ಕಳೆದುಕೊಂಡ ಉನ್ನಾವಿನ ಈ ಮಗಳ ಧೈರ್ಯ ಮತ್ತು ಸಾಹಸವನ್ನು ಮೆಚ್ಚತಕ್ಕದ್ದೇ. ಅವಳ ಹೋರಾಟಕ್ಕೆ ತಕ್ಕುದಾದ ನ್ಯಾಯ ದೊರೆಯಬೇಕು. ಅವಳು ಅನುಭವಿಸಿದ ನರಕಯಾತನೆಯನ್ನು ಮರೆಸುವಂತಹ  ನ್ಯಾಯ ಸಿಗಬೇಕಾದದ್ದು ಆಕೆಯ ಹಕ್ಕುಕೂಡ. ಆರೋಪಿ ಎಷ್ಟೇ ಪ್ರಭಾವಿಯಾಗಿರಲಿ ಅವನು ಕಾನೂನಿನಿಂದ ಬಚಾವಾಗಲಾರ,  ಶಿಕ್ಷೆ ಸಿಕ್ಕೇ ಸಿಗುತ್ತದೆ  ಎನ್ನುವ ಭರವಸೆಯನ್ನು ಕೋರ್ಟ್ ತೀರ್ಪು ಹುಟ್ಟಿಸಿದೆ.      

ಇನ್ನು ಮತ್ತೆ ದೆಹಲಿಯ ನಿರ್ಭಯಾ ಪ್ರಕರಣದತ್ತ ಬಂದರೆ  ಒಂದು ವಾರದಿಂದಲೂ ಪತ್ರಿಕೆಗಳಲ್ಲಿ ನಿರ್ಭಯಾ ಹತ್ಯೆಯ ಆತ್ಯಾಚಾರಿ ನಾಲ್ವರು ಆರೋಪಿಗಳಿಗೆ ಮರಣದಂಡನೆ ಆಗಬಹುದು ಆಗುವ ಎಲ್ಲ ತಯಾರಿಗಳು ನಡೆಯುತ್ತಿವೆ ಎನ್ನುವಂಥ ಸುದ್ದಿಗಳು ಬರುತ್ತಿವೆ. ಅದರಲ್ಲೊಬ್ಬ ಆರೋಪಿಯ ಯಾಚಿಕಾ ಅರ್ಜಿ ಸುಪ್ರಿಂ ಕೋರ್ಟಿನ ಬಾಗಿಲನ್ನು ಬಡಿದಿದ್ದು ಆ ವಿಚಾರಣೆಯ ತನಕ ಉಳಿದವರ ಶಿಕ್ಷೆಯ ಕುರಿತು ಯಾವ ತೀರ್ಪನ್ನೂ ಬಹಿರಂಗಪಡಿಸಿವುದಿಲ್ಲವೆಂದು ನ್ಯಾಯಾಲಯ ಹೇಳಿದೆ. 

ನಿರ್ಭಯಾಳ ತಾಯಿಯಂತೆಯೇ ದೇಶವೂ ಕಾಯುತ್ತಿದೆ. ಕ್ಷಣ ಕ್ಷಣವನ್ನೂ ಮುಳ್ಳುತಂತಿಯ ಮೇಲೆ ನಿಂತಂಥ ತಳಮಳ ಹಲವಾರು ತಾಯಂದಿರ ಒಡಲಲ್ಲಿ ಮುಳ್ಳಾಡುತ್ತಿರಬಹುದು.  ಈಗಲೂ ಜನರು ಹೈದರಾಬಾದ್ ನ ಶೂರ ಪೋಲಿಸರು  ಎನ್ಕೌಂಟರ್ ಮಾಡಿದಂತೆ ಈ ನಾಲ್ವರನ್ನು ಕೊಂದುಹಾಕಬೇಕು, ಈ ಹೈವಾನರನ್ನು ಸಾಯಿಸಿಬಿಡಲಿ ಎನ್ನುತ್ತಿದ್ದಾರೆ. ಇತ್ತೀಚಿನ ನಿರಂತರ ಅತ್ಯಾಚಾರ ಮತ್ತು ಜೀವಂತ ಸುಟ್ಟುಹಾಕುವ ಪ್ರಕರಣಗಳಿಂದ ಜನರಲ್ಲಿ ಆಕ್ರೋಶ ಮತ್ತೆ ತೀವ್ರವಾಗಿದೆ. ಒಡಲ ಕಿಚ್ಚು ದಹಿಸುತ್ತಿದೆ. ಹೈದರಾಬಾದ್ ಪ್ರಕರಣದ ನಂತರ, ಮತ್ತು ಉನ್ನಾವಿನ ಮತ್ತೊಬ್ಬ ನತದೃಷ್ಟ ಯುವತಿಯನ್ನು ದುಷ್ಟರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಿದ ನಂತರ ದೇಶಾದಾದ್ಯಂತ ಆಕ್ರೋಶ ಮತ್ತಷ್ಟು ಭುಗಿಲೆದ್ದಿದೆ.

ಇದೇ ತಿಂಗಳ ಕರಾಳ 16ನೇ ತಾರೀಖೀನಂದು ಉತ್ತರಪ್ರದೇಶದ ಮುಜಫ್ಪರ್ ಪುರದ ಮತ್ತೊಬ್ಬ ಯುವತಿ ತಾನೇ ಪೋಲಿಸ್ ಠಾಣೆಯೆದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ  ಯತ್ನಿಸಿದಳು. ಕಾರಣ ವರ್ಷಾನುಗಟ್ತಲೆ ಆಕೆಯನ್ನು ಪೀಡಿಸಿ ಅತ್ಯಾಚಾರವೆಸಗಿದ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾನೆ.  ಜೈಲಿನಿಂದ ಹೊರಬಿದ್ದ ಗೂಳಿಗಳು ಸಂತ್ರಸ್ತೆಯರನ್ನೇ ಕೊಲ್ಲಲು ತಮಗೆ ಸಿಕ್ಕ ಸುವರ್ಣ ಅವಕಾಶ ಅಂದುಕೊಂಡಿರುವಾಗ ಕಾನೂನಿನ ಭಯ ಯಾರಲ್ಲಿದೆ ?  ಇಂಥವರಿಗೆ  ಕೋರ್ಟ್ ಜಾಮೀನು ನೀಡಲೇಬಾರದು.  ಅಥವಾ ಆರೋಪಿಗೆ ಜಾಮೀನು ನೀಡುವ ಮುನ್ನ ಅವನಿಂದ ಅತ್ಯಾಚಾರಕ್ಕೊಳಪಟ್ಟ ಪೀಡಿತಳಿಗೆ ಸುರಕ್ಷತೆ ಒದಗಿಸಬೇಕಾದ ಅಗತ್ಯವಿದೆ. ಕೋರ್ಟ ಕಡ್ಡಾಯವಾಗಿ ಪೀಡಿತಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಜಾಮೀನು ಕೊಡಬೇಕು.     

ಇನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ವಿಚಾರಣೆ ನಂತರವೂ  ನಿರ್ಭಯಾಳ ಆರೋಪಿಗಳಿಗೆ ಶಿಕ್ಷೆಯಾಗಲು ಏಳುವರ್ಷಗಳ ಕಾಲ ಕಾದಿದ್ದಾಗಿದೆ. ಈಗಲೂ ಗೊತ್ತಿಲ್ಲ ಪರಿಣಾಮವೇನಾಗಬಹುದು ಎಂದು.

ಆರೋಪಿಗಳ  ಪರ ವಕೀಲ ಎಂ ಎಲ್ ಶರ್ಮಾನ ವಿಚಾರಗಳು ಅವತ್ತು ಹೇಗಿದ್ದವೋ ಇವತ್ತಿಗೂ ಹಾಗೇ ಇವೆ.  “ ನನ್ನ ಸ್ವಂತ ಮಗಳೇನಾದರೂ ಈ ರೀತಿ ರಾತ್ರಿ ಒಂಭತ್ತರ ತನಕ ಬಾಯ್ ಫ್ರೆಂಡ್ ಜೊತೆ  ಓಡಾಡಿಕೊಂಡು ಮನೆಗೆ ಬಂದಿದ್ದರೆ ನಾನೇ ಗುಂಡಿಟ್ಟು ಕೊಲ್ಲುತ್ತಿದ್ದೆ”  ಹೆಣ್ಣುಮಕ್ಕಳು ಸಂಜೆ ಆರರ ನಂತರ ಮನೆ ಹೊರಗೆ ಹೋಗುವುದೇನಿರುತ್ತೆ ? ಎಂದ ಶರ್ಮಾ ಇಂದು ಆರೋಪಿಗಳನ್ನು ಗಲ್ಲಿಗೇರಿಸುದರಿಂದ ಬಲಾತ್ಕಾರಗಳೇನು ಕಡಿಮೆ ಆಗುತ್ತವೆಯೇ ? ಎಂದು ಪ್ರಶ್ನಿಸುತ್ತಿದ್ದಾನೆ. 

ಇಂತಹ ಪುರುಷಾಹಂಕಾರದ ಪ್ರತಿಮೆಗಳಂತಿರುವ ವಕೀಲರು  ಮಹಾನ್ ಪುರುಷರು ಗಣ್ಯಾತಿಗಣ್ಯರು ನಮ್ಮ ನಡುವೆ ಇದ್ದಾರೆ.   ಇವರ ಕೊಳಕು ಮನಸ್ಥಿತಿಗಳಿಗೆ, ವಕ್ರ ಬುದ್ಧಿಗೆ, ತರ್ಕರಹಿತ ಚಿಂತನೆಗಳಿಗೆ ಯಾವ ಉತ್ತರಗಳೂ ಮೆದುಳಿಗೆ ಮೆತ್ತಿದ ಜಿಡ್ಡನ್ನು ತೊಳೆಯುವುದಿಲ್ಲ. ಮೋಹನ್ ಭಾಗವತರಂಥವರ  ಕಣ್ಣಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿದ್ದು ಅಡುಗೆ ಮಾಡಿಕೊಂಡಿರಬೇಕು.  ಹೊರಗಿನ ವ್ಯವಹಾರ, ಅಂದರೆ ಆಕೆಗೆ ದುಡಿದು ತಂದು ಬೇಕು ಬೇಡಗಳನ್ನೆಲ್ಲ ಪೂರೈಸಲು ಗಂಡಸಿದ್ದಾನಂತೆ. ಆರೆಸ್ಸೆಸ್ ಪೋಷಿತ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ದೇಶವನ್ನು ಹಿಂದಕ್ಕೆ ತ್ರೇತಾಯುಗದತ್ತ ನೂಕುವ ಮನುವಾದಿ ಮನಸ್ಥಿತಿಗಳು ಮುಖವಾಡ ಕಳಚಿ ಕುಣಿಯುತ್ತಿವೆ.  ಇನ್ನು ಶರ್ಮಾ ಹೇಳುವ ಮಾತು ( ಗಲ್ಲಿಗೇರಿಸುವ ಸಂಬಂಧ) ತಾರ್ಕಿಕವಾಗಿ ಸರಿಯಿದ್ದರೂ ಆ ಕೇಸಿನ ವಿಷಯದಲ್ಲಿ ಅದು ಸರಿಯಾಗಿಯೇ ಇದೆ ಎನ್ನುವ ಉತ್ತರ ಬರಬಹುದು.  

ನಿರ್ಭಯಾ ಕೇಸಿನ ನಂತರ ಲೈಂಗಿಕ ಅತ್ಯಾಚಾರಗಳ ಸಂಖ್ಯೆಯಲ್ಲಾಗಲಿ, ಅತ್ಯಾಚಾರಿಗಳ ಬಂಧನ ಮತ್ತು ಶಿಕ್ಷೆಯ ವಿಧಿಯಲ್ಲಾಗಲಿ ಯಾವ  ಸುಧಾರಣೆಯೂ ಕಂಡುಬಂದಿಲ್ಲ. ಈ ಘಟನೆಯ ನಂತರ ಕಾನೂನು ಮತ್ತು ಆಡಳಿತಾತ್ಮಕ ನೀತಿಯಲ್ಲಿ ಬದಲಾವಣೆಯ ಸಂಚಲನ ಉಂಟಾದರೂ ಆರೋಪಿಗಳ ಬಂಧನ  ಮತ್ತು ಶಿಕ್ಷೆಯ ಸ್ವರೂಪಗಳಲ್ಲಿ ಯಾವ ಜಾದೂವನ್ನೂ ಸೃಷ್ಟಿಸಲಾಗಿಲ್ಲ.  2012ರಿಂದ  ಇದುವರೆಗೂ ಶಿಕ್ಷೆಗೊಳಗಾದವರ ಪ್ರಮಾಣ ಕೇವಲ 32.2% ರಷ್ಟಿದೆ.  2017ಕ್ಕೆ ಲಭ್ಯವಿರುವ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶದ ಪ್ರಕಾರ, ಆ ವರ್ಷದಲ್ಲಿ ವಿಚಾರಣೆಗೆ ಬಂದ ಒಟ್ಟು ಅತ್ಯಾಚಾರ ಪ್ರಕರಣಗಳ ಸಂಖ್ಯೆ 1,46,201 ಆದರೆ ಅವುಗಳಲ್ಲಿ 5,822 ಮಾತ್ರ ಅಪರಾಧ ಸಾಬೀತಾಗಿದೆ.

ಭಾರತೀಯ ಸಮಾಜ ಮಹಿಳೆಯರು ತಮ್ಮ ಮೇಲಾದ ದೌರ್ಜನ್ಯ ಮತ್ತು ಲೈಂಗಿಕ ಅತ್ಯಾಚಾರಗಳನ್ನು ವರದಿ ಮಾಡದಂತೆ ಅವರ ತಲೆಯಲ್ಲಿ ದೇಹದ ಪವಿತ್ರ ಅಪವಿತ್ರದಂಥ ಭಾವನೆಗಳನ್ನು ತುಂಬಿ ಆದುದಕ್ಕೆಲ್ಲ ಅವಳೇ ಕಾರಣಳು ಎನ್ನುವಂತೆ ಮತ್ತು ಆಕೆ ಹೀನಭಾವನೆಯಲ್ಲಿಯೇ ಕೊರಗಿ ಸಾಯುವಂತೆ ನೋಡಿಕೊಳ್ಳುತ್ತಿತ್ತು.  ಆದರೆ ಇಂದು ಬದಲಾದ ಸಾಮಾಜಿಕ ಪರಿಸರದಲ್ಲಿ ಹೆಣ್ಣು ಮುಂದೆ ಬಂದು ಅಪರಾಧಗಳನ್ನು ವರದಿ ಮಾಡುತ್ತಾರೆ. ವರದಿಯನ್ನು ದಾಖಲಿಸಿಕೊಳ್ಳುವ ಪೋಲೀಸರು ಗಂಡುಗಳೇ. ಇಲ್ಲಿ ಆಕೆ ಮತ್ತೆ ಇದೇ ಗಂಡಾಳಿಕೆಯ ಕಪಿಮುಷ್ಟಿಯಲ್ಲಿ ಹಿಂಸೆಪಡಬೇಕಾಗುತ್ತದೆ. ಪೋಲೀಸರ ಸಂವೇದನರಹಿತ ನಿರ್ಲಕ್ಷದಿಂದಾಗಿಯೇ ಉನ್ನಾವಿನ ಯುವತಿಯರು ಜೀವತೆತ್ತಿದ್ದಾರೆ. ಪೋಲೀಸರ ಈ ನಿರ್ಲಕ್ಷವನ್ನು, ಬೇಜವಾಬ್ದಾರಿತನವನ್ನೂ ತನಿಖೆಗೆ ಒಳಪಡಿಸಬೇಕು. ಸಮವಸ್ತ್ರ ತೊಟ್ಟ ಸಮಾಜದ ಹಿತಕ್ಷಣೆಯ ಮತ್ತು ಕಾನೂನು ಪಾಲನೆಯ ಹೊಣೆಹೊತ್ತ ಹೊಣೆಗೇಡಿಗಳ ಅಸಹ್ಯವಾದ ಟೀಕೆಗಳು, ಉಡಾಫೆಯ ನಡತೆಯಿಂದ ಮಾನಸಿಕ ಹಿಂಸೆಗೆ ಬಲಿಯಾಗುವ ಮಹಿಳೆಯ ಪಾಡು ಹೇಗಿರಬಹುದು ಎಂದು ಊಹಿಸಲೂ ಅಸಾಧ್ಯ.

ಭಾರತ ಸರ್ಕಾರ 2012ರ ಡಿಸೆಂಬರ್ 22ರಂದು ಜಸ್ಟಿಸ್ ವರ್ಮಾ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯ ನೇತೃತ್ವವನ್ನು ಭಾರತದ ಮಾಜಿ ಉಚ್ಚ ನ್ಯಾಯಾಧೀಶರಾದ ಜಸ್ಟಿಸ್ ಜೆ.ಎಸ್.ವರ್ಮ ವಹಿಸಿದ್ದರು. ಆಸ್ಟಿಸ್ ಲೈಲ ಸೇಟ್ ಮತ್ತು ಗೋಪಾಲ ಸುಬ್ರಮಣಿಯಂ ಈ ಸಮಿತಿಯ ಸದಸ್ಯರಾಗಿದ್ದರು. ಲೈಂಗಿಕ ಹಿಂಸೆಯನ್ನು ಕುರಿತಂತೆ ಚಾಲ್ತಿಯಲ್ಲಿರುವ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿಯನ್ನು ಸೂಚಿಸುವ ವರದಿಯನ್ನು 30 ದಿನಗಳೊಳಗೆ ಸಲ್ಲಿಸಲು ಕೋರಲಾಗಿತ್ತು.  ಈ ಮುಂಚೆಯೂ ಲೈಂಗಿಕ ದೌರ್ಜನ್ಯವನ್ನು ಕುರಿತಂತೆ ಕಾನೂನು ರೂಪಿಸಲು ಹಲವಾರು ಸಮಿತಿಗಳು ನೇಮಕವಾಗಿದ್ದರೂ ಈ ಸಮಿತಿ ಅವೆಲ್ಲಕ್ಕಿಂತ ಭಿನ್ನವೂ, ವಿಶಿಷ್ಟವೂ ಆಗಿತ್ತು. ಮೊದಲ ಬಾರಿಗೆ ಇದೊಂದು ಸಮಸ್ತ ನಾಗರಿಕರ ಅಭಿಪ್ರಾಯ ಸಲಹೆ ಸೂಚನೆಗಳಿಗೆ ಮುಕ್ತವಾಗಿ ತೆರೆದುಕೊಂಡ ಸಮಿತಿಯಾಗಿತ್ತು

ನ್ಯಾಯಮೂರ್ತಿ ವರ್ಮಾ ಸಮಿತಿಯ ವರದಿಯನ್ನು ಸಾರ್ವಜನಿಕರು ಮತ್ತು ಮಹಿಳಾ ಸಂಘಗಳು ಮೆಚ್ಚಿಕೊಂಡವಾದರೂ ಅದು ಪಾರ್ಲಿಮೆಂಟಿನಲ್ಲಿ ಚರ್ಚೆಗೆ ಮಂಡಿತವಾದಾಗ, ಸರ್ಕಾರವೇ ಅದರ ಕೆಲವು ಶಿಫಾರಸ್ಸುಗಳನ್ನು ತೆಗೆದು ಹಾಕಿತು. “ಲೈಂಗಿಕ ಅಪರಾಧಗಳನ್ನು ಎಸಗಿದವರು ಚುನಾವಣೆಗೆ ಸ್ಪರ್ಧಿಸಬಾರದೆಂಬುದನ್ನು ಚುನಾವಣಾ ನೀತಿಯನ್ನಾಗಿ ಮಾಡಲು ಹಿಂದೆಗೆಯಲಾಯಿತು. ಪೊಲೀಸರ ಸುಧಾರಣೆ ಮತ್ತು ಅವರನ್ನು ಬಾಧ್ಯಸ್ಥರನ್ನಾಗಿಸುವುದು, ಲೈಂಗಿಕ ಶಿಕ್ಷಣ ಮತ್ತು ಶಸ್ತ್ರಾಸ್ತ್ರ ಸೇನಾಪಡೆಗಳಲ್ಲಿ ಕೆಳಗಿನ ಹಂತದ ಸೈನಿಕರು ನಡೆಸುವ ಲೈಂಗಿಕ ಹಿಂಸೆಗೆ ಅವರ ಅಧಿಕಾರಿಯನ್ನು ಹೊಣೆಯಾಗಿಸುವುದು, ಮುನ್ನೆಚ್ಚರಿಕಾ ಕ್ರಮಗಳು ಮತ್ತು ಬಹುಮುಖ್ಯವಾಗಿ ‘ಮಹಿಳಾ ಹಕ್ಕುಗಳ ಮಸೂದೆ’- ಇವುಗಳನ್ನು ಒಪ್ಪಿಕೊಳ್ಳಲು ಸರ್ಕಾರ ಹಿಂದೇಟು ಹಾಕಿತು.

ಸಮಿತಿಯಲ್ಲಿನ ವರದಿಯ ಕೆಲವು ಅಂಶಗಳನ್ನು ಮತ್ತೊಮ್ಮೆ ಗಮನಿಸಿ.

* ರಾಜಕಾರಣಿ ಆರೋಪ ಹೊತ್ತಿದ್ದರೆ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು.

* ಅತ್ಯಾಚಾರ ಅಥವಾ ಯತ್ನ ನಡೆದಾಗ ಮಹಿಳೆಯಿಂದ ಕೊಲೆಯಾದರೆ ಆತ್ಮರಕ್ಷಣೆಗಾಗಿ ನಡೆದ ಕೊಲೆ ಎಂದು ಪರಿಗಣಿಸಬೇಕು.

* ಅತ್ಯಾಚಾರ ಪ್ರಕರಣ ದಾಖಲಿಸದಿರುವುದು ಅಪರಾಧ.

* ಆಸಿಡ್ ದಾಳಿಗೆ ಹೊಸ ಕಾನೂನು ರೂಪಿಸಬೇಕು.

* ಉದ್ದೇಶಪೂರ್ವಕವಾಗಿ ಹೆಂಗಸರನ್ನು ಮುಟ್ಟುವುದನ್ನು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ತರಬೇಕು. ಮಹಿಳೆಯ ವಸ್ತ್ರಾಪಹರಣ ಮಾಡುವುದಕ್ಕೆ ಹೊಸ ನಿಮಯ ರೂಪಿಸಬೇಕು.

* ರೋಗದಿಂದ ನರಳುತ್ತಿರುವ ಹೆಂಗಸು, ಗರ್ಭಿಣಿಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ಹೆಚ್ಚಿನ ಶಿಕ್ಷೆ.

* ಸಾಮೂಹಿಕ ಅತ್ಯಾಚಾರ, ಪೊಲೀಸರು, ಸೇನಾ ಸಿಬ್ಬಂದಿಯಿಂದ ಮತ್ತು ಸರಕಾರಿ ಅಧಿಕಾರಿಗಳಿಂದ ಬಲಾತ್ಕಾರ ನಡೆದರೆ ಹೆಚ್ಚಿನ ಶಿಕ್ಷೆ.

* ಅತ್ಯಾಚಾರಕ್ಕೊಳಗಾದ ಮಹಿಳೆಯ ಬಗ್ಗೆ ಪೊಲೀಸರು ಹೆಚ್ಚು ಸಂವೇದಿಯಾಗಿರಬೇಕು. ಕಾನೂನಿನ ಭಯವಿಲ್ಲದೇ  ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ಇರುತ್ತದೆ, ಆದರೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

* ಕಾಣೆಯಾಗುತ್ತಿರುವ ಮಕ್ಕಳ ಬಗ್ಗೆ ನಿಗಾ ಇಟ್ಟರೆ ಅತ್ಯಾಚಾರದಂತಹ ಘಟನೆಗಳು ಸಾಕಷ್ಟು ಕಡಿಮೆಯಾಗುತ್ತವೆ.

* ಸಾರ್ವಜನಿಕ ಸಾರಿಗೆ ಹೆಚ್ಚು ಭದ್ರತೆ ಒದಗಿಸಬೇಕು ಮತ್ತು ಬೀದಿ ದೀಪಗಳು ಉತ್ತಮ ಸ್ಥಿತಿಯಲ್ಲಿರಬೇಕು.

ಇಂಥ ಅನೇಕ ಸಂಗತಿಗಳನ್ನು ವರ್ಮಾ ಸಮಿತಿ ವರದಿಯಲ್ಲಿ ಉಲ್ಲೇಖಿಸಿತ್ತು. ಆದರೆ ಇಂದು ಮಹಿಳೆಯ ದೂರನ್ನು ದಾಖಲಿಸಿಕೊಳ್ಳದ ಎಷ್ಟು ಪೋಲೀಸರ ಮೇಲೆ ಕಾನೂನಿನ ಕ್ರಮ ಕೈಗೊಂಡಿದ್ದಾರೆ ?

ಸಂತ್ರಸ್ತೆಯ ಪ್ರತಿ ಪೋಲಿಸರು ಸಂವೇದನಶೀಲರಾಗಿ ವರ್ತಿಸುತ್ತಾರೆಯೇ ?  ಎಷ್ಟು ಗ್ರಾಮಗಳಲ್ಲಿ ನಗರಗಳಲಿ ರಾತ್ರಿಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸುಭದ್ರತೆ ಒದಗಿಸಿದೆ ಸರ್ಕಾರ?  ದಿಲ್ಲಿಯಲ್ಲಿ ಕೇಜ್ರೀವಾಲ್ ಸರ್ಕಾರ ಉಚಿತ ಸಾರಿಗೆಯನ್ನು ಒದಗಿಸಿರಬಹುದು. ಆದರೆ ಎಷ್ಟು ಬಸ್ಸಿನ ಯಾವ ಯಾವ ರೂಟ್ ಗಳಲ್ಲಿ ಯಾವ ಯಾವ ಬಸ್ಸುಗಳಲ್ಲಿ  ಮಹಿಳೆಯರ ಸುರಕ್ಷತೆವಹಿಸಿಕೊಳ್ಳುವ ಮಾರ್ಶಲ್ಸ್‍ಗಳಿದ್ದಾರೆ?  ಎಷ್ಟೋ ಪಾಶ್ ಕಾಲೋನಿಗಳ, ಪ್ರಮುಖ ಬಡಾವಣೆಗಳ  ಸುತ್ತಲಿನ ರಸ್ತೆಗಳಲ್ಲಿ  ದೀಪಗಳಿವೆ ? ಉತ್ತರ ಭಯಹುಟ್ಟಿಸುತ್ತದೆ.

ಇನ್ನು ಚಳಿಗಾಲದಲ್ಲಿ ಬೀದಿ ದೀಪಗಳು ಉರಿಯುತ್ತಿರುವಂತೆ ನೋಡಿಕೊಳ್ಳಬೇಕಾದವರೇ ಮಲಗಿದ್ದರೆ ಹೇಗೆ?  ಕತ್ತಲಿನ ನೆಪದಿಂದ ಪೋಲಿಸ್ ಪೇದೆಗಳು ಸಿಕ್ಕ ಸಿಕ್ಕ ಯುವಕ-ಯುವತಿಯರನ್ನು ಬೆದರಿಸಿ ಅವರೇನೋ ಮಾಡಬಾರದ್ದೇನನ್ನೋ  ಕಳ್ಳಧಂಧೆ ನಡೆಸುತ್ತಿದ್ದರೆಂದೋ ಸುಳ್ಳು ಕತೆ ಸೃಷ್ಟಿಸಿ ಅವರಿಂದ ಹಣ್ಣ ದೋಚುವ ನೀಚತನದ ಧಂಧೆಯನ್ನು ಈ ಪೋಲೀಸರೇ  ನಡೆಸುವುದು ಇಲ್ಲಿನ ನಿವಾಸಿಗಳು ಬಲ್ಲರು.

ಈಗ ಹೇಳಿ ಸುರಕ್ಷೆಯನ್ನು ಯಾರಿಂದ ನಿರೀಕ್ಷಿಸಬೇಕು ? ಈ ದೇಶದ ನಿರ್ಭಯಾರಿಗೆ ನ್ಯಾಯ ಒದಗಿಸುವವರು ಯಾರು ?  ನ್ಯಾಯದ ನಾಣ್ಯ ಕೈಗೆ ಸಿಗುವುದೋ ಇಲ್ಲಾ ಅವ್ಯವಸ್ಥೆಯ ಬಿರುಕಿನಲ್ಲಿ ಬಿದ್ದು ಕಳೆದುಹೋಗುತ್ತದೋ ?