ಕಮಲ್ ಹಾಸನ್ ವಿರುದ್ಧದ ದೂರು ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಕಮಲ್ ಹಾಸನ್ ವಿರುದ್ಧದ ದೂರು ತಿರಸ್ಕರಿಸಿದ ದೆಹಲಿ ಹೈಕೋರ್ಟ್

ದೆಹಲಿ : ನಟ ಹಾಗೂ ರಾಜಕಾರಣಿ ಕಮಲ್‍ ಹಾಸನ್‍ ಅವರು ಧರ್ಮದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿ.ಜೆ.ಪಿ ನಾಯಕರೊಬ್ಬರು ಮಾಡಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಬಿ.ಜೆ.ಪಿ ನಾಯಕ ಅಶ್ವಿನ್‍ ಕುಮಾರ್ ಉಪಾಧ್ಯಯ ಎನ್ನುವವರು ‘ ಕಮಲ್‍ ಹಾಸನ್‍ ಮೇ 13 ರ ಚುನಾವಣಾ ಪ್ರಚಾರದಲ್ಲಿ ಭಾರತದ ಮೊದಲ ಭಯೋತ್ಟಾದಕ ಓರ್ವ ಹಿಂದೂ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಧಾರ್ಮಿಕ ಅವಹೇಳನ ಮಾಡಿರುವ ಕಮಲ್‍ ಹಾಸನ್‍ ಅಧ್ಯಕ್ಷತೆಯ ‘ಮಕ್ಕಳ್ ನೀಧಿ ಮಯ್ಯಮ್‍’ ಪಕ್ಷದ ನೋಂದಣಿ ರದ್ದು ಪಡಿಸಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕು’ ಎಂದು ದೆಹಲಿ ಹೈಕೋರ್ಟ್‍ಗೆ ಮನವಿ ಮಾಡಿದ್ದರು.

ಅಶ್ವಿನ್‍ ದೂರಿಗೆ ಪ್ರತಿಕ್ರಿಯಿಸಿಸಿರು ದೆಹಲಿ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ ‘ ಈ ದೂರಿನ ವಿಚಾರಣೆಯನ್ನು ಸಂಬಂಧಪಟ್ಟ ಆಯೋಗವೇ ವಿಚಾರಣೆ ಮಾಡಬೇಕು ಹಾಗೂ ಈ ಘಟನೆ ದೆಹಲಿಯಲ್ಲಿ ನಡೆದಿಲ್ಲ’ ಎಂದು ಹೇಳಿದೆ.

ಅಶ್ವಿನ್‍ ತಮ್ಮ ದೂರಿನಲ್ಲಿ ‘ ಕಮಲ್‍ ಹಾಸನ್ ಅವರು ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಹಿಂದೂಗಳ ವಿರುದ್ಧ ಮಾತನಾಡಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನ ಮಾಡಿದ್ದಾರೆ. ಹೀಗಾಗಿ ಕಮಲ್‍ ಹಾಸನ್‍ ಚುನಾವಣಾ ನೀತಿ ಸಂಹಿತಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ’ ಎಂದು ಹೇಳಿದ್ದರು.

ದೆಹಲಿ ಹೈಕೋರ್ಟ್‍ ಈ ದೂರನ್ನು ಮದ್ರಾಸ್‍ ಹೈಕೋರ್ಟ್‍ಗೆ ಯಾಕೆ ಸಲ್ಲಿಸಿಲ್ಲ ಎಂದು ಅಶ್ವಿನ್‍ ಅವರನ್ನು ಪ್ರಶ್ನಿಸಿದೆ. ಹೀಗಾಗಿ ವಿಚಾರಣೆಯನ್ನು ಮುಂದವರಿಸಲು ನಿರಾಕರಿಸಿರುವ ಹೈಕೋರ್ಟ್‍ ಸಂಬಂಧಪಟ್ಟ ವಿಚಾರಣಾ ಸಮಿತಿಯೇ ನಿಮ್ಮ ದೂರನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.

ಮೇ 13 ರಂದು ತಮಿಳುನಾಡಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಮಲ್‍ ಹಾಸನ್‍ ಅವರು ನಾಥೂರಾಮ್‍ ಗೋಡ್ಸೆಯ ಕುರಿತು ‘ದೇಶದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ’ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿ.ಜೆ.ಪಿ ಸೇರಿದಂತೆ ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು.