ರಕ್ಷಣಾ ಕೈಗಾರಿಕೆ ಕಾರ್ಪೊರೇಟ್ ಪಾಲು :  ಮೋದಿ ನೀತಿಗೆ ಕಂಗಾಲು

ರಕ್ಷಣಾ ಕೈಗಾರಿಕೆ ಕಾರ್ಪೊರೇಟ್ ಪಾಲು :  ಮೋದಿ ನೀತಿಗೆ ಕಂಗಾಲು

ರಾಷ್ಟ್ರೀಯ ಭದ್ರತೆ ಬಗ್ಗೆ ಮಾತಾಡುವ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ದೃಷ್ಟಿಯಿಂದಲೂ ಮಹತ್ವವಿರುವ ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿರುವ ಕಾರ್ಖಾನೆಗಳನ್ನು ಸಾರ್ವಜನಿಕ ವಲಯಕ್ಕೆ ತಂದು ಖಾಸಗಿ ಸಹಭಾಗಿತ್ವಕ್ಕೆ ಪ್ರಯತ್ನಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಜಿ.ಆರ್.ಸತ್ಯಲಿಂಗರಾಜು ವಿಶೇಷ ವರದಿ .

ಕಳೆದ ಆರು ತಿಂಗಳಲ್ಲೇ ಅತಿ ದುರ್ಬಲ ಮಟ್ಟಕ್ಕೆ ರುಪಾಯಿ ಮೌಲ್ಯ ಕುಸಿದಿದೆ, ಕೈಗಾರಿಕಾ ವಲಯ ಬಾಗಿಲು ಮುಚ್ಚುತ್ತಿವೆ, ಏಷ್ಯಾ ರಾಷ್ಟ್ರಗಳ ಮೇಲೆ ವಿಶ್ವ ಬ್ಯಾಂಕ್‍ನಂಥವುಗಳ ಒತ್ತಡ ಏರಿಕೆಯಾಗುತ್ತಿದೆ, ಅಮೆರಿಕ-ಚೀನಾ ನಡುವಣ ಆರ್ಥಿಕ ಸಮರದಲ್ಲಿ ಭಾರತದ ಆರ್ಥಿಕತೆಯೂ ನಜ್ಜುಗುಜ್ಜಾಗುತ್ತಿದೆ.

ಇದರ ನಡುವೆಯೇ ಯುದ್ದೋನ್ಮಾದದ ಭೀತಿ ಹರಡುತ್ತಾ, ಸರ್ಜಿಕಲ್ ಸ್ಟೈಕ್  ಇನ್ನಿತ್ಯಾದಿಯಂತದ್ದರ ಹಿನ್ನಲೆಯಲ್ಲಿ ಸೇನೆಗೆ ಇಷ್ಟೊಂದು  ಬಲ ಇನ್ನು ಯಾವ ಸರ್ಕಾರವೂ ತುಂಬಿರಲಿಲ್ಲ ಎಂದು ಬಿಂಬಿಸಲಾಗುತ್ತಿರುವ  ಸತ್ಯಸಂಗತಿಯ ಮತ್ತೊಂದು ಮಗ್ಗಲಲ್ಲೇ, ಸೇನಾಪಡೆ, ಅರೆಸೇನಾಪಡೆ, ಪೊಲೀಸ್ ಇಲಾಖೆ ಹಾಗು ಇತರ ರಕ್ಷಣಾ ಪಡೆಗಳಿಗೆ ಶಸ್ತ್ರಾಸ್ತ್ರಗಳು, ಸಂಬಂಧಿತ ಉಪಕರಣಗಳನ್ನ ತಯಾರಿಸಿಕೊಡುವ ಉದ್ಯಮಗಳ ಕಾರ್ಮಿಕರೇ ಕೇಂದ್ರದ ನೀತಿ ವಿರೋಧಿಸಿ ಒಂದು ತಿಂಗಳ ಮುಷ್ಕರ ನಡೆಸುತ್ತಿರುವುದು ಸುದ್ದಿಯೇ ಆಗಿಲ್ಲ.

ಸ್ವಲ್ಪ ಇತಿಹಾಸ

ಡಚ್ಚರು ಭಾರತಕ್ಕೆ ಬಂದಾಗ 1712 ರಲ್ಲಿ ಬಂಗಾಳದ ಇಚಾಪುರದಲ್ಲಿ ಗನ್ ಪೌಡರ್ ಕಾರ್ಖಾನೆ(ಒಸ್ಟೆಂಡ್) ಸ್ಥಾಪಿಸಿದರು. 1787 ರಲ್ಲಿ ಮತ್ತೊಂದು, 1791 ಮಗದೊಂದು ಆರಂಭಿಸಿ, ಇಲ್ಲಿಯೇ ರೈಫಲ್‍ಗಳ ತಯಾರಿಕೆಯೂ ಆರಂಭಗೊಂಡಿತ್ತು. ಇಂಥದ್ದೇ ಇಂಗ್ಲಿಷರ  ಆಡಳಿತಾವಧಿಯಲ್ಲೂ ಆಗಿ, ಸ್ವಾತಂತ್ರ್ಯಾ ನಂತರ 1948 ರಲ್ಲಿ ಸೈನ್ಯಕ್ಕೆ ಸಂಬಂಧಿಸಿ ಶಸ್ತ್ರಾಸ್ತ್ರ ಹಾಗು ಇತರ ಸಾಧನಗಳನ್ನು ತಯಾರಿಸುವ ಉದ್ಯಮಗಳನ್ನ ರಕ್ಷಣಾ ಸಚಿವಾಲಯದಡಿ ತರಲಾಯಿತು.

1954 ರಲ್ಲಿ ಇಂಥ ಉದ್ಯಮಗಳಲ್ಲಿ ನೌಕರಿಗಾಗಿಯೇ ಭಾರತೀಯ ಆರ್ಡನೆನ್ಸ್ ಫ್ಯಾಕ್ಟರಿ ಸರ್ವಿಸ್(ಐಒಎಫ್‍ಎಸ್) ಆರಂಭಿಸಲಾಗಿದೆ. ಯುಪಿಎಸ್‍ಸಿ ಮುಖಾಂತರ, ವಿವಿಧ ವಿಭಾಗದ ಇಂಜಿನಿಯರಿಂಗ್, ಆರೋಗ್ಯ ಇತರ ಶೈಕ್ಷಣಿಕ ಅರ್ಹತೆ ಇರುವವರನ್ನ ತುಂಬಿಕೊಳ್ಳಲಾಗುತ್ತಿದೆ. 1979 ರಲ್ಲಿ ಇಂಥ ಉದ್ಯಮಗಳೆಲ್ಲದಕ್ಕೂ ಮಂಡಳಿ ರಚಿಸಲಾಗಿದೆ. ಈ ಎಲ್ಲ ಕಾರ್ಖಾನೆಗಳು ರಕ್ಷಣಾ ಸಚಿವಾಲಯ ವ್ಯಾಪ್ತಿಯಲ್ಲಿದೆ. 

ತಮಿಳುನಾಡು, ತೆಲಂಗಾಣ, ಒಡಿಶಾ, ಮಧ್ಯಪ್ರದೇಶದ ಜಬಲ್‍ಪುರ, ಕಂಟಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಖಂಡ, ಬಿಹಾರ, ಚಂಡೀಗಡದಲ್ಲಿ ಒಟ್ಟು 41 ಕಾರ್ಖಾನೆಗಳಿದ್ದು, ಕೇಂದ್ರ ಕಚೇರಿ ಕೊಲ್ಕತ್ತಾದಲ್ಲಿದೆ. ಬಂದೂಕುಗಳು, ಪ್ಯಾರಾಶೂಟ್, ಕ್ಷಿಪಣಿ ಉಡಾವಣೆ ಸಾಧನ, ವಿಮಾನ, ಜಲಾಂತರ್ಗಾಮಿಗಳಿಗೆ ಬೇಕಾದಂಥವು, ಸೈನಿಕರ ಸಮವಸ್ತ್ರ, ಟಿ-72, ಟಿ-90, ಅರ್ಜುನ್ ಟ್ಯಾಂಕರ್ ಗಳು, ಸೇನಾ ವಾಹನಗಳು, ಟ್ರಕ್‍ಗಳು, ರಾತ್ರಿ ವೇಳೆ ಕಾರ್ಯಾಚರಣೆಗಾಗಿ ಬೆಳಕಿನ ವ್ಯವಸ್ಥೆಯ ಸಾಧನ ಇತ್ಯಾದಿ ಇತ್ಯಾದಿಯಂಥವನ್ನೆಲ್ಲ ಈ ಕಾರ್ಖಾನೆಗಳು ತಯಾರಿಸುತ್ತಿವೆ. 1 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಸಿಬ್ಬಂದಿಗಳಿದ್ದಾರೆ. ಇಡೀ ವಿಶ್ವದಲ್ಲೇ 37 ನೇ, ಏಷ್ಯಾದಲ್ಲೇ 2 ನೇ ಸ್ಥಾನದಲ್ಲಿದೆ.

ಸೇನೆ, ಪೊಲೀಸ್ ಇಲಾಖೆ, ರಕ್ಷಣೆಗೆ ಸಂಬಂಧಿಸಿದ ಇತರ ಪಡೆಗಳು, ಇಸ್ರೋದಂಥವುಗಳು ಇಲ್ಲಿನ ಉತ್ಪಾದನೆಯನ್ನ ಖರೀದಿಸುತ್ತವೆ. ಇದಕ್ಕಾಗಿಯೇ 3 ಮಾರುಕಟ್ಟೆ ಕೇಂದ್ರಗಳೂ ಇದ್ದು, ಯುರೋಪ್, ಏಷ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕಾ, ಅರಬ್ ರಾಷ್ಟ್ರಗಳೂ ಕೂಡ ಖರೀದಿದಾರರಾಗಿದ್ದು ಕಳೆದ ವರ್ಷ 3.5 ಬಿಲಿಯನ್ ಡಾಲರ್(23867.22 ಕೋಟಿ ರು) ವಹಿವಾಟು ನಡೆಸಿದ್ದು, 2024 ರ ವೇಳೆಗೆ 30ಸಾವಿರ ಕೋಟಿ ವ್ಯವಹಾರದ ಗುರಿ ಹೊಂದಿದೆ.

ಮುಷ್ಕರ ಏಕೆ?

ರಾಷ್ಟ್ರೀಯ ಭದ್ರತೆ ಬಗ್ಗೆ ಮಾತಾಡುವ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ದೃಷ್ಟಿಯಿಂದಲೂ ಮಹತ್ವವಿರುವ ಈ ಕಾರ್ಖಾನೆಗಳನ್ನು ಸಾರ್ವಜನಿಕ ವಲಯದ ಉದ್ಯಮವಾಗಿಸಿ ಖಾಸಗಿ ಸಹಭಾಗಿತ್ವ ಪಡೆಯಲು ಮುಂದಾಗಿದ್ದಾರೆ. ಖಾಸಗಿಯವರ ಸಹಭಾಗಿತ್ವವೂ ದೊರೆತು,ಹೊಸಾಹೊಸಾ ತಂತ್ರಜ್ಞಾನಗಳು ಲಭಿಸುತ್ತವೆ, ಶಸ್ತ್ರಾಸ್ತ್ರಗಳು ಮತ್ತಷ್ಟು ತೀಕ್ಷ್ಣತೆ ಪಡೆಯುತ್ತವೆ ಎಂಬ ಸಮರ್ಥನೆ ಸರ್ಕಾರದ್ದಾಗಿದೆ.

ಇದನ್ನ ಸಾರ್ವಜನಿಕ ವಲಯದ ಕೈಗಾರಿಕೆ ಮಾಡುವುದಕ್ಕೆ ಎರಡು ದಶಕಗಳ ಹಿಂದೆಯೇ ಸಮಿತಿ ಮಾಡಿದ್ದ ಶಿಫಾರಸನ್ನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್, ಪ್ರಣಬ್ ಮುಖರ್ಜಿ, ಎ.ಕೆ.ಆಂಟನಿ, ಮನೋಹರ ಪರಿಕ್ಕರ್ ತಿರಸ್ಕರಿಸಿದ್ದರು.

ಆದರೀಗ ಈ ಉದ್ದಿಮೆಗಳನ್ನ ಸಾರ್ವಜನಿಕ ವಲಯವನ್ನಾಗಿಸಲು ಕೇಂದ್ರ ಮುಂದಾಗಿದೆ. ಕಾರ್ಗಿಲ್ ಯುದ್ದ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಈ ಉದ್ದಿಮೆಯವರು ದೇಶಭಕ್ತಿ ಪರಾಕಾಷ್ಠೆ ಮೆರೆದು, ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರದ ಸುರಕ್ಷತೆ ಬಗ್ಗೆ ಮಾತಾಡುವ ಮೋದಿ ಈಗ ಇದನ್ನೇ ಲಾಭದ ದೃಷ್ಟಿಯಿಂದ ನೋಡುತ್ತಿದ್ದಾರೆ, ಸಾರ್ವಜನಿಕ ವಲಯವಾಗಿಸಿ, ವಿದೇಶಿ ಬಂಡವಾಳಿಗರ ಕೈಗೆ ಇದನ್ನ ಕೊಡುತ್ತಾರೆ ಎಂದು ಈ ಉದ್ದಿಮೆಗಳ ಪ್ರಮುಖ ಮೂರು ಕಾರ್ಮಿಕ ಸಂಘಟನೆಗಳವರು ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಉದ್ದಿಮೆ ಮಾಡುವುದು ಬೇಡ, ಬೇಕಿದ್ದರೆ ಇಸ್ರೋ, ರೈಲ್ವೆ ಕೇಂದ್ರ ಸರ್ಕಾರದಡಿಯ ಇಲಾಖೆಯಾಗಿರಲಿ ಎಂಬ ವಾದ ಮುಂದಿಟ್ಟಿವೆ. ಮಾತುಕತೆಗಳು ಮುರಿದು ಬಿದ್ದಿರುವುದರಿಂದಾಗಿ ನಿನ್ನೆ(20.8.19)ಯಿಂದ ನೂರು ದಿನಗಳ ಮುಷ್ಕರ ನಡೆಸುವುದಕ್ಕೆ ಚಾಲನೆ ಕೊಟ್ಟಿವೆ.

ರಕ್ಷಣಾ ಕೈಗಾರಿಕೆಗಳನ್ನ ಕಾರ್ಪೊರೇಟ್ ಕಂಪನಿ ಮಾಡಬೇಡಿ, ರಾಷ್ಟ್ರದ ಸುರಕ್ಷತೆಯನ್ನ ಒತ್ತೆ ಇಡಬೇಡಿ ಎಂಬ ಆಗ್ರಹ ಮಾಡುತ್ತಿದ್ದಾರೆ.