ವಿಕೇಂದ್ರೀಕರಣ ಗುರಿ ಹೊತ್ತ ಕೈಗಾರಿಕೆ ವಿಕಾಸ ಯೋಜನೆ ಫ್ಲಾಪ್ 

ಕೈಗಾರಿಕೆಗಳನ್ನು ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಜಾರಿಯಾಗಿದ್ದ ಕೈಗಾರಿಕೆ ವಿಕಾಸ ಯೋಜನೆ ಪ್ರಮುಖ ಉದ್ಯಮ ಘಟಕಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. 

ವಿಕೇಂದ್ರೀಕರಣ ಗುರಿ ಹೊತ್ತ ಕೈಗಾರಿಕೆ ವಿಕಾಸ ಯೋಜನೆ ಫ್ಲಾಪ್ 

ರಾಜ್ಯದ ಅತ್ಯಂತ ಹಿಂದುಳಿದ 39 ತಾಲೂಕುಗಳಲ್ಲಿ ಕೈಗಾರಿಕೀಕರಣ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ  ಉದ್ದೇಶದಿಂದ ಜಾರಿಗೊಂಡಿದ್ದ 'ಕೈಗಾರಿಕೆ ವಿಕಾಸ' ಹೆಸರಿನ ವಿಶಿಷ್ಟ ಯೋಜನೆ ಮಕಾಡೆ ಮಲಗಿದೆ.

ಈ ಯೋಜನೆಯಡಿ ಬೃಹತ್ ಮತ್ತು ಮಧ್ಯಮ ಪ್ರಮಾಣದ ಉದ್ಯೋಗ ಘಟಕಗಳ ಸಂಖ್ಯೆ ಏರಿಕೆಯಾಗಿಲ್ಲ. ಅಲ್ಲದೆ, ಈ ಯೋಜನೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ್ದ ಕೈಗಾರಿಕೆ ಪ್ರದೇಶಗಳು ಯಾವುದೇ ಪ್ರಮುಖ ಉದ್ಯಮ ಘಟಕಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.

'ಕೆಳಮಟ್ಟದ ಸಾಮರ್ಥ್ಯ, ಕೌಶಲ್ಯವುಳ್ಳ ಮಾನವ ಸಂಪನ್ಮೂಲ ಅಲಭ್ಯತೆ, ಪ್ರಮುಖ ನಗರಗಳಿಂದ ದೂರ ಮತ್ತು ಜನಜೀವನ ಗುಣಮಟ್ಟದ ಅಂಶಗಳು ಇದಕ್ಕೆ ಕಾರಣ,'  ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಅಧ್ಯಯನ ನಡೆಸಿದ್ದ  ಬಾಹ್ಯ ಸಂಸ್ಥೆ ಅರ್ನಸ್ಟ್ ಯಂಗ್ ಎಲ್ ಎಲ್ ಪಿ ಸಂಸ್ಥೆ ನಡೆಸಿದ್ದ ವರದಿಯಿಂದ ತಿಳಿದು ಬಂದಿದೆ.

ಕೈಗಾರಿಕೆ ವಿಕಾಸ ಯೋಜನೆ ತನ್ನ ಮೂಲ ಉದ್ದೇಶಗಳು ಸಾಕಾರಗೊಂಡಿಲ್ಲ ಎಂದು ಅಧ್ಯಯನ ವರದಿ ಎತ್ತಿ ಹಿಡಿದಿದೆ. ರಾಜ್ಯದಲ್ಲಿ ಸಂಭವಿಸಿರುವ ಉದ್ಯೋಗ ನಷ್ಟದ ಬೆನ್ನಲ್ಲೇ ಹೊರಬಿದ್ದಿರುವ ಕೈಗಾರಿಕೆ ವಿಕಾಸ ಯೋಜನೆಯ ಫಲಿತಾಂಶಗಳು ಆತಂಕಕ್ಕೀಡು ಮಾಡಿವೆ.

ರಾಜ್ಯದ ಒಟ್ಟು 39 ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕೆ ವಿಕಾಸ ಯೋಜನೆ ಜಾರಿಗೊಂಡಿತ್ತು. ವಿಪರ್ಯಾಸದ ಸಂಗತಿ ಎಂದರೆ  ಯೋಜನೆ ಅನುಷ್ಠಾನದಿಂದ ಈ ತಾಲೂಕುಗಳಲ್ಲಿನ ಆದಾಯ, ಜೀವನಮಟ್ಟ, ಖಾಸಗಿ ಉದ್ಯೋಗಗಳ ದೊರೆಯುವಿಕೆ, ಆರೋಗ್ಯ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

ಸ್ಥಳೀಯ ಸಂಪನ್ಮೂಲ ಆಧರಿತ, ಸ್ಥಳೀಯ ಕುಶಲತೆ, ಅವಶ್ಯಕತೆಗನುಗುಣವಾಗಿ ಕೈಗಾರಿಕೆ ಪ್ರದೇಶ, ಮಳಿಗೆ, ಅಡಚಣೆ ಇಲ್ಲದೆ ವಿದ್ಯುಚ್ಛಕ್ತಿ, ತರಬೇತಿ, ಸೌಲಭ್ಯಗಳು, ಗುಂಪು ಕೈಗಾರಿಕೆ ಅಭಿವೃದ್ಧಿಗಳಿಗೆ ಪ್ರೋತ್ಸಾಹ, ಮಾರುಕಟ್ಟೆ ಸೌಲಭ್ಯಗಳು ಇದ್ದಾಗಿಯೂ ಈ ಪ್ರದೇಶಗಳಲ್ಲಿ ಪ್ರಮುಖ ಉದ್ಯಮ ಘಟಕಗಳು ನೆಲೆಗೊಳ್ಳದಿರುವುದು ವರದಿಯಿಂದ ಗೊತ್ತಾಗಿದೆ.

ಯೋಜನೆ ಪ್ರದೇಶದಲ್ಲಿ ನೀಡಲಾಗಿದ್ದ ತರಬೇತಿ ಕಾರ್ಯಕ್ರಮಗಳು ಕೌಶಲ್ಯಯುಕ್ತ ಕಾರ್ಮಿಕರ ಸೃಷ್ಟಿಗೆ ಒತ್ತು ನೀಡಿಲ್ಲ. ಉದ್ಯಮಶೀಲತೆ ಬೆಳವಣಿಗೆ ಹಾಗೂ ಅರಿವು ಮೂಡಿಸುವುದಕ್ಕಷ್ಟೇ ಕೇಂದ್ರೀಕೃತವಾಗಿತ್ತು ಎಂದು ಹೇಳಲಾಗಿದೆಯಾದರೂ ಉದ್ಯಮಶೀಲರನ್ನೂ ಸೃಷ್ಟಿಸುವಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ಕೈಗಾರಿಕೆ ಚಟುವಟಿಕೆ ಬೆಳವಣಿಗೆ ಮತ್ತು ಬಂಡವಾಳ ಹೂಡಿಕೆ ಫಲಾನುಭವಿಗಳ ಮೇಲೆ ಕೈಗಾರಿಕೆ ವಿಕಾಸ ಯೋಜನೆ ಮಹತ್ವದ ಪರಿಣಾಮ ಬೀರಲಿಲ್ಲ.

ಯೋಜನೆಯಡಿ ಬಾಗಲಕೋಟೆ, ಬೀದರ್ ಸೇರಿದಂತೆ 15 ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಟ್ಟು 59 ಕೈಗಾರಿಕೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 18 ಕೈಗಾರಿಕೆ ಪ್ರದೇಶಗಳು ವ್ಯಾಪ್ತಿ ಪ್ರದೇಶದೊಳಗಿದ್ದರೆ, ಇನ್ನುಳಿದ 41 ಕೈಗಾರಿಕೆ ಪ್ರದೇಶಗಳು ವ್ಯಾಪ್ತಿಯಿಂದಲೇ ಹೊರಗಿದ್ದವು. ಕರ್ನಾಟಕದಲ್ಲಿನ ಕೈಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ 66 ತಾಲೂಕುಗಳು ಮತ್ತು ದಕ್ಷಿಣ ಕರ್ನಾಟಕದ 62 ತಾಲೂಕುಗಳು ಕೈಗಾರಿಕೆ ಅಭಿವೃದ್ಧಿಯಲ್ಲಿ ರಾಜ್ಯದ ಸರಾಸರಿಗಿಂತ ಹಿಂದಿದೆ.

ಅದೇ ರೀತಿ ಉತ್ತರ ಕರ್ನಾಟಕದಲ್ಲಿ 53 ತಾಲೂಕುಗಳು ಮತ್ತು ದಕ್ಷಿಣ ಕರ್ನಾಟಕದಲ್ಲಿ 42 ತಾಲೂಕುಗಳು ಕೈಗಾರಿಕೆ ಮೂಲಸೌಕರ್ಯ ಹಾಗೂ ಕೈಗಾರಿಕೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯಮಟ್ಟಕ್ಕಿಂತ ಬಹಳಷ್ಟು ಹಿಂದುಳಿದಿದೆ.

ಈ 15 ಜಿಲ್ಲೆಗಳ ವ್ಯಾಪ್ತಿ ಪ್ರದೇಶದಲ್ಲಿ 2004-05ರಲ್ಲಿ 1,535 ಕಾರ್ಖಾನೆಗಳಿದ್ದರೆ, 2011-12ರಲ್ಲಿ 2,207ಕ್ಕೇರಿವೆಯಾದರೂ ಇದರ ಬೆಳವಣಿಗೆ ದರ ಶೇ.43.77ರಷ್ಟು ಮಾತ್ರ ಇದೆ. ವರದಿಯ ಪ್ರಕಾರ ರಾಯಚೂರು, ಮೈಸೂರು, ತುಮಕೂರು, ಚಿತ್ರದುರ್ಗ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ 2004-05ರಿಂದ 2011-12ರ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗಳದ್ದವು.

ಹಾಗೆಯೇ 2004-05ರಲ್ಲಿ 50,110 ಕಾರ್ಮಿಕರಿದ್ದರೆ, 2011-12ರಲ್ಲಿ 1,07,302 ಸಂಖ್ಯೆಗೆ ಏರಿಕೆಯಾಗಿದೆ. 2010-11ರಲ್ಲಿ 197 ದೊಡ್ಡ ಪ್ರಮಾಣದ ಕೈಗಾರಿಕೆಗಳಿದ್ದರೆ, 2014-15ರ ಹೊತ್ತಿಗೆ 193ಕ್ಕಿಳಿದಿದೆ. ಪ್ರತಿ ವರ್ಷ ಮುಚ್ಚಿರುವ ಘಟಕಗಳ ಸಂಖ್ಯೆಯೂ 2010-11ರಲ್ಲಿ 4 ಕೈಗಾರಿಕೆ ಘಟಕಗಳಿಂದ 30 ಘಟಕಗಳಿಗೆ ಹೆಚ್ಚಿತ್ತು. 2014-15ರಲ್ಲಿಯೂ ಘಟಕಗಳು ಮುಚ್ಚಿವೆಯಲ್ಲದೆ, ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಘಟಕಗಳು ಬಾಗಿಲೆಳೆದುಕೊಂಡಿರುವುದು ವರದಿಯಿಂದ ಗೊತ್ತಾಗಿದೆ.