‘ಡೆಕ್ಕನ್ ನ್ಯೂಸ್’ ತನಿಖೆ ಫಲಶೃತಿ : ವಿಧಾನಸಭಾ ಸಚಿವಾಲಯದಲ್ಲಿ ಅಕ್ರಮ ಗೌರವ ಧನ ಕಕ್ಕಿಸಲು ಮುಂದಾದ ಸ್ಪೀಕರ್

‘ಡೆಕ್ಕನ್ ನ್ಯೂಸ್’ ತನಿಖೆ ಫಲಶೃತಿ : ವಿಧಾನಸಭಾ ಸಚಿವಾಲಯದಲ್ಲಿ ಅಕ್ರಮ ಗೌರವ ಧನ ಕಕ್ಕಿಸಲು ಮುಂದಾದ ಸ್ಪೀಕರ್

ವಿಧಾನಸಭೆ ಸಚಿವಾಲಯಕ್ಕೆ ನೌಕರರ ನೇಮಕಾತಿ ಸಂಬಂಧ ನಡೆದಿದ್ದ  ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿ,  ಸಿಬ್ಬಂದಿಗೆ ಗೌರವ ಧನ ಮತ್ತು ಊಟೋಪಚಾರದ ಹೆಸರಿನಲ್ಲಿ  ಲಕ್ಷಾಂತರ ರು. ಮೊತ್ತದ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವ ಪ್ರಕರಣವನ್ನು 'ಡೆಕ್ಕನ್ ನ್ಯೂಸ್’ ದಾಖಲೆ ಸಮೇತ 2 ತಿಂಗಳ ಹಿಂದೆಯಷ್ಟೆ ಹೊರಗೆಡವಿತ್ತು. ಈ ಬಗ್ಗೆ ಸಚಿವಾಲಯದ ಅಧಿಕಾರಿಗಳ ತಂಡ ನಡೆಸಿದ್ದ ಆಂತರಿಕ ತನಿಖೆಯಲ್ಲಿಯೂ ಅಕ್ರಮ ದೃಢಪಟ್ಟಿತ್ತು.  ವರದಿ ಆಧರಿಸಿ ಸ್ಪೀಕರ್ ರಮೇಶ್ ಕುಮಾರ್ ಹಣ ವಸೂಲು ಮಾಡಲು ಇದೀಗ ಆದೇಶಿಸುವ ಮೂಲಕ ನಿಯಮಬಾಹಿರವಾಗಿ ಪಡೆದಿದ್ದ ಗೌರವ ಧನವನ್ನು ಕಕ್ಕಿಸಿದ್ದಾರೆ.ಈ ಕುರಿತು ಜಿ.ಮಹಂತೇಶ್ ವರದಿ

ವಿಧಾನಸಭೆ ಸಚಿವಾಲಯದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು ನಿಯೋಜನೆಗೊಂಡಿದ್ದ ಹಿಂದಿನ ಕಾರ್ಯದರ್ಶಿ ಎಸ್ ಮೂರ್ತಿ (ಸದ್ಯ ಅಮಾನತ್ತಿಲ್ಲಿದ್ದಾರೆ) ಅವರೂ ಸೇರಿದಂತೆ ಇನ್ನಿತರೆ ಅಧಿಕಾರಿಗಳು, ನೌಕರರಿಗೆ ಪಾವತಿಯಾಗಿದ್ದ 'ಗೌರವ ಧನ' ವಸೂಲಿ ಮಾಡಲು ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಆದೇಶಿಸಿದ್ದಾರೆ. ಗೌರವ ಧನ ಸ್ವೀಕರಿಸಿರುವ ಅಧಿಕಾರಿ, ನೌಕರರ ವೇತನದಿಂದಲೇ ಈ ಹಣವನ್ನು ಕಟಾಯಿಸಿಕೊಂಡು ವಸೂಲು ಮಾಡಬೇಕು ಎಂದು ಸೂಚಿಸಿದ್ದಾರೆ. 

ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸ್ಪೀಕರ್ ಕೋಳಿವಾಡ ಅವರನ್ನು ದಾರಿತಪ್ಪಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿ ಎಸ್ ಮೂರ್ತಿ ಅವರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲು ಸ್ಪೀಕರ್ ಸೂಚಿಸಿದ್ದಾರೆ. ಗೌರವ ಧನ ವಸೂಲು ಮಾಡುವ ಸಂಬಂಧ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ. 

ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಧಿಕಾರಿ,  ನೌಕರರಿಗೆ ದಿನವೊಂದಕ್ಕೆ 500 ರು.ಗಳಂತೆ ಒಟ್ಟಾರೆಯಾಗಿ 21 ಲಕ್ಷ ರು.ಗಳಿಗೂ ಅಧಿಕ ಮೊತ್ತವನ್ನು ನಿಯಮಬಾಹಿರವಾಗಿ ವಿವಿಧ ದಿನಾಂಕಗಳಂದು ಅಧಿಕಾರಿ, ನೌಕರರಿಗೆ ಪಾವತಿಸಿರುವುದನ್ನು ಪತ್ತೆ ಹಚ್ಚಿದ್ದ 'ಡೆಕ್ಕನ್ ನ್ಯೂಸ್’ ಈ ಬಗ್ಗೆ 2019ರ ಮೇ 6ರಂದು ದಾಖಲೆ ಸಮೇತ ವರದಿ ಪ್ರಕಟಿಸಿತ್ತು. 

ವರದಿ ಪ್ರಕಟಗೊಳ್ಳುತ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತಗಳನ್ನು ಪರಿಶೀಲನೆಗೊಳಪಡಿಸಿದ್ದರಲ್ಲದೆ, ಆಂತರಿಕ ತನಿಖೆ ನಡೆಸಿದ್ದರು. ಗೌರವಧನ ಹೆಸರಿನಲ್ಲಿ ಸರ್ಕಾರದ ಹಣ ದುರುಪಯೋಗವಾಗಿದೆ ಎಂಬುದು ತನಿಖೆಯಿಂದ ದೃಢಪಟ್ಟ ನಂತರ ಗೌರವ ಧನದ ಹೆಸರಿನಲ್ಲಿ ಪಾವತಿಯಾಗಿರುವ 21 ಲಕ್ಷ ರು.ಗಳನ್ನು ವಸೂಲು ಮಾಡಲು ಆದೇಶಿಸಿದ್ದಾರೆ ಎಂದು ವಿಧಾನಸಭೆ ಸಚಿವಾಲಯದ ಉನ್ನತ ಮೂಲಗಳು 'ಡೆಕ್ಕನ್'ನ್ಯೂಸ್' ಗೆ ಖಚಿತಪಡಿಸಿವೆ.

ಊಟೋಪಚಾರದ ವ್ಯವಸ್ಥೆ/ಸೌಲಭ್ಯಗಳನ್ನು ನೀಡಿದ್ದರೂ ಪ್ರತಿ ದಿನವೊಂದಕ್ಕೆ 500 ರು.ಗಳಂತೆ ಅಧಿಕಾರಿ, ನೌಕರರು ಕಾರ್ಯನಿರ್ವಹಿಸಿರುವ ದಿನಗಳ ಲೆಕ್ಕದಲ್ಲಿ ಗೌರವ ಧನ ಪಾವತಿಸಿರುವ ಸಚಿವಾಲಯದ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿರುವುದು ಕೂಡ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. 

ಸಿಸಿಎ ನಿಯಮಾವಳಿಗಳು 1957 ರ ನಿಯಮ  8ರ ಅನ್ವಯ ಗೌರವ ಧನ ಪಡೆದವರ ವಿರುದ್ಧ ದಂಡನೆ ವಿಧಿಸಬಹುದಲ್ಲದೆ, ಇದೇ ನಿಯಮ 8ರ ಪ್ರಕಾರ ಸರ್ಕಾರಕ್ಕೆ ಆಗಿರುವ ಹಣಕಾಸಿನ ನಷ್ಟವನ್ನು ವೇತನದಿಂದ  ವಸೂಲು ಮಾಡುವ ಇದ್ದ ಅವಕಾಶವನ್ನು ಬಳಸಿಕೊಂಡು ಈ ಆದೇಶ ಹೊರಡಿಸಲಾಗಿದೆ. ಆದರೆ ಗೌರವ ಧನ ಪಡೆದವರನ್ನು ದಂಡನೆಗೆ ಗುರಿಪಡಿಸಿಲ್ಲ ಎಂದು ಗೊತ್ತಾಗಿದೆ. 

'ಈಗಾಗಲೇ ಗೌರವಧನವನ್ನು ಸ್ವೀಕರಿಸಿರುವ ಅಧಿಕಾರಿ, ನೌಕರರ ವೇತನದಿಂದಲೇ ಈ ಹಣವನ್ನು ಕಟಾಯಿಸಲು ಸ್ಪೀಕರ್ ಸೂಚಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ನಡೆದ ದಿನಗಳಲ್ಲಿ ಬೆಳಗ್ಗೆ ಮತ್ತು ರಾತ್ರಿಯವರೆಗೂ ಕರ್ತವ್ಯ ನಿರ್ವಹಿಸಲಾಗಿದ್ದರಿಂದ ಗೌರವ ಧನ ನೀಡಲಾಗಿತ್ತು ಎಂದು ಅಧಿಕಾರಿ, ನೌಕರರು ಮಂಡಿಸಿದ್ದ ಸಮರ್ಥನೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ತಳ್ಳಿ ಹಾಕಿದ್ದಾರೆ,' ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿ, ನೌಕರರಿಗೆ ಊಟೋಪಚಾರ ವ್ಯವಸ್ಥೆಗೆ ಸಚಿವಾಲಯವೇ ಲಕ್ಷಾಂತರ ರುಪಾಯಿ ಖರ್ಚು ಮಾಡಿತ್ತು. ಊಟೋಪಚಾರ ಭತ್ಯೆ ಮತ್ತು ವಾಹನ ಸೌಲಭ್ಯ ಪಡೆದ ನಂತರ ಯಾವುದೇ ರೀತಿಯಲ್ಲೂ ಗೌರವ ಧನ ಪಾವತಿಸಲು ಅವಕಾಶಗಳಿಲ್ಲ. ಪ್ರಭಾರ ಕಾರ್ಯದರ್ಶಿಯೂ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಸಚಿವಾಲಯದ ವಾಹನ ಸೌಲಭ್ಯ ಪಡೆದಿದ್ದರೂ ಗೌರವ ಧನ ಪಾವತಿಸಿರುವುದನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಿದ್ದರು. 

ಪ್ರಕರಣದ ಹಿನ್ನೆಲೆ

ಕರ್ನಾಟಕ  ವಿಧಾನಸಭೆ ಸಚಿವಾಲಯದ 2017-18 ನೇ ಸಾಲಿನ ನೇರ  ನೇಮಕಾತಿ ಕಾರ್ಯಗಳಿಗೆ ಅಧಿಕಾರಿ, ನೌಕರರನ್ನು ಪ್ರತ್ಯೇಕವಾಗಿ 2018ರ ಜನವರಿ 3 ಮತ್ತು 6, ಫೆ. 16ರ ಆದೇಶಗಳ ಮೂಲಕ ನಿಯೋಜಿಸಲಾಗಿತ್ತು. ವಿವಿಧ ಹುದ್ದೆಗಳಿಗೆ ಸಲ್ಲಿಕೆಯಾಗಿದ್ದ ಹದಿನೈದು ಸಾವಿರ ಅರ್ಜಿಗಳ ಪರಿಶೀಲನೆ, ವರ್ಗೀಕರಣ, ಗಣಕ  ಯಂತ್ರದಲ್ಲಿ  ದಾಖಲು, ಸಂದರ್ಶನ ಪತ್ರ ರವಾನೆ, ಮೂಲ ದಾಖಲಾತಿಗಳ ಪರಿಶೀಲನೆ, ನೇಮಕಾತಿ ಪತ್ರ ರವಾನಿಸುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಅತಿವೇಗದಲ್ಲಿ ಕೈಗೊಳ್ಳಲು  ಅಧಿಕಾರಿ, ನೌಕರರನ್ನು ನಿಯೋಜಿಸಲಾಗಿತ್ತು. 

ನಿಯಮಬಾಹಿರವಾಗಿ ಗೌರವ ಧನ  ಪಾವತಿ

ಕೆಸಿಎಸ್ಆರ್ ನಿಯಮ 28(b) 1(b)ರಂತೆ ವಿಧಾನಸಭೆ  ಸಚಿವಾಲಯದ ನೇರ ನೇಮಕಾತಿ ಸಂದರ್ಭದಲ್ಲಿ ಅಧಿಕಾರಿ,  ನೌಕರರಿಗೆ  ಗೌರವ ಧನ ಪಾವತಿಸಲು ಅವಕಾಶವಿಲ್ಲ. ಆದರೂ ಗೌರವ ಧನದ ಹೆಸರಿನಲ್ಲಿ ಹೆಚ್ಚುವರಿಯಾಗಿ ವೇತನ ಪಾವತಿಸಲಾಗಿತ್ತು.  ಸರ್ಕಾರಕ್ಕೆ  ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರದ ಹಣ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಿಸಿಎ ನಿಯಮಾವಳಿಗಳ 1957ರ ನಿಯಮ 8ರ ಪ್ರಕಾರ ಅಪರಾಧ ಎಸಗಿರುವುದನ್ನು 'ಡೆಕ್ಕನ್ ನ್ಯೂಸ್' ಹೊರಗೆಡವಿತ್ತು. ಆ ನಂತರ ಆಂತರಿಕ ತನಿಖೆಯಿಂದಲೂ ಅದು ದೃಢಪಟ್ಟಿತ್ತು.

ಜಮೇದಾರ್, ಸ್ವಾಗತಕಾರ, ಚಾಲಕ ಸೇರಿದಂತೆ ಒಟ್ಟು 12 ಮಂದಿ ಸಿಬ್ಬಂದಿಗೆ  3,72,000 ರು., ಅಧೀನ ಕಾರ್ಯದರ್ಶಿ, ಡಾಟಾ ಎಂಟ್ರಿ  ಆಪರೇಟರ್, ಶಾಖಾಧಿಕಾರಿ, ಟೈಪಿಸ್ಟ್,  ಉಪ ಕಾರ್ಯದರ್ಶಿ, ದಲಾಯತ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಒಟ್ಟು 82 ಸಿಬ್ಬಂದಿಗೆ ಗೌರವ ಧನ ಹೆಸರಿನಲ್ಲಿ ಮೇ 2018 ರಂದು 16,57,000 ರು ಪಾವತಿಯಾಗಿತ್ತು. 

ವಿಶೇಷವೆಂದರೆ ಜಮೆದಾರರೊಬ್ಬರಿಗೆ 38,000 ರು, ಚಾಲಕರಿಗೆ 44,000 ಸ್ವಾಗತಕಾರರಿಗೆ 30,500 ರು.ಗಳಂತೆ ಗೌರವ ಧನ ಪಾವತಿಯಾಗಿದೆ. ಇನ್ನು ಡಾಟಾ ಎಂಟ್ರಿ ಸೂಪರ್ವೈಸರ್ ಒಬ್ಬರಿಗೆ 43,000, ಟೈಪಿಸ್ಟ್ ಗೆ  44,000, ಕಿರಿಯ ಸಹಾಯಕರಿಗೆ  44,000, ದಲಾಯತ್ ಗಳಿಗೆ 44,000 ರು.ಗಳಂತೆ ಪಾವತಿಯಾಗಿತ್ತು. 

ಎಸ್ ಮೂರ್ತಿ ಅವರಿಗೂ 44,000  ಪಾವತಿ

ಇನ್ನು, ವಿಧಾನಸಭೆ  ಸಚಿವಾಲಯದ ಪ್ರಭಾರ ಕಾರ್ಯದರ್ಶಿಯಾಗಿದ್ದ(ಸದ್ಯ ಅಮಾನತುಗೊಂಡಿದ್ದಾರೆ) ಎಸ್ ಮೂರ್ತಿ ಅವರಿಗೂ ಗೌರವ ಧನ ಹೆಸರಿನಲ್ಲಿ 44,000( 88 ದಿನಗಳು) ರು.ಪಾವತಿಯಾಗಿತ್ತು. ಮೂರ್ತಿ ಅವರೂ ಸೇರಿದಂತೆ 94 ಮಂದಿ ಅಧಿಕಾರಿ, ನೌಕರರಿಗೆ ದಿನವೊಂದಕ್ಕೆ 500 ರು.ನಂತೆ ಒಟ್ಟು 20,31,000 ಗೌರವ ಧನ ನೀಡಲಾಗಿತ್ತು. 

ಈ ಪೈಕಿ ಸೀನಿಯರ್ ಪ್ರೋಗ್ರಾಮರ್ ನವೀನಾ ಷರೀಫ್ ಅವರಿಗೆ 44,000,ಕಾರ್ಯದರ್ಶಿ ಎಸ್ ಮೂರ್ತಿ ಅವರ  ಅಪ್ತ ಕಾರ್ಯದರ್ಶಿ ಎಂ ಶಶಿಕಾಂತ್ ಅವರಿಗೆ 44,000 , ಶೀಘ್ರಲಿಪಿಗಾರ ಶಿವರಾಮು ಎಂಬುವರಿಗೆ 43,000, ಟೈಪಿಸ್ಟ್ ರೂಪರಾಣಿ ಎಂಬುವರಿಗೆ 44,000,ವಾಹನ ಚಾಲಕ ವಾಸದೇವಸಿಂಗ್ ಎಂಬುವರಿಗೆ 44,000,ದಲಾಯತ್ ಆಕಾಶ್ ಗೌಡ ಎಂಬುವರಿಗೆ 44,000 ರು.ಗೌರವ ಧನ ಪಾವತಿಯಾಗಿತ್ತು. 

ಅಲ್ಲದೆ, ಇದೇ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಧಿಕಾರಿ, ನೌಕರರಿಗೆ ಲಘು ಉಪಹಾರ, ಊಟ, ಕಾಫಿ, ಟೀ, ನೀರು ಸರಬರಾಜು ಮಾಡಿರುವ ಸಂಬಂಧ ಒಟ್ಟು 4,51,110 ರು.ಖರ್ಚಾಗಿತ್ತು. 

ಸಾಮಾನ್ಯ ನಿಯಮಾವಳಿಗಳ ಪ್ರಕಾರ "ಸಂಬಂಧಪಟ್ಟ ಸರ್ಕಾರಿ ನೌಕರರ ವಿಧಿಬದ್ಧ ಕರ್ತವ್ಯವೆಂದೂ ನಿಜವಾಗಿಯೂ ಪರಿಗಣಿಸಬಹುದಾದ ಯಾವುದೇ ಕೆಲಸದ ಬಗ್ಗೆ ಯಾವ ಬಗೆಯ ಗೌರವ ಧನವನ್ನೂ ಕೊಡತಕ್ಕದ್ದಲ್ಲ. ವಿಶೇಷ ಕಾಲಗಳಲ್ಲಿ ಮತ್ತು ಸನ್ನಿವೇಶಗಳಲ್ಲಿ ಸರ್ಕಾರಿ ಕೆಲಸದ ವೇಳೆಯಾಚೆಗೆ ಹೆಚ್ಚು ಹೊತ್ತು ಕೆಲಸ ಮಾಡುವುದು ಸರ್ಕಾರಿ ನೌಕರನ ಹೊಣೆಯಾಗಿದೆ. ಈ ಕಾರಣದಿಂದಾಗಿ ಸಾಮಾನ್ಯವಾಗಿ ಯಾವ ಗೌರವ ಧನವನ್ನೂ ಕೊಡತಕ್ಕದ್ದಲ್ಲ," ಎಂಬ  ಅಂಶ ನಿಯಾಮಾವಳಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಗೊಂಡಿದ್ದರೂ ಗೌರವ ಧನ ಪಾವತಿಸಿದ್ದರ ಹಿಂದೆ ಅಕ್ರಮದ ವಾಸನೆ ಬಡಿದಿತ್ತು.