ಸಾವು ನನ್ನನ್ನು ಕಾಡುತ್ತಿತ್ತು, ದೇವರು ನನ್ನನ್ನು ಕಾಡುತ್ತಿದ್ದ!

ನಿನ್ನೆ ನಿಧನರಾದ ಅಂತಾರಾಷ್ಟ್ರೀಯ ಮಟ್ಟದ ರಂಗಪ್ರತಿಭೆ ಎಸ್.ಮಾಲತಿ ‘ದಿ ಡೆಕ್ಕನ್ ನ್ಯೂಸ್’ ಗಾಗಿ ತಮ್ಮ ಆತ್ಮಕತೆ ಬರೆಯಲು ಆರಂಭಿಸಿದ್ದರು. ಮೊದಲ ಎರಡು ಕಂತುಗಳನ್ನು ಕಳಿಸಿದ ನಂತರ ಅನಾರೋಗ್ಯಕ್ಕೀಡಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ತಿಂಗಳೇ ಅವರ ಆತ್ಮಕತೆಯ ಮೊದಲೆರಡು ಕಂತುಗಳನ್ನು ಕಳಿಸಿದ್ದರೂ ಅವರು ಅನಾರೋಗ್ಯದಿಂದಿರುವ ಕಾರಣ ಸಂಪೂರ್ಣ ಗುಣಮುಖರಾದ ನಂತರ ಆರಂಭಿಸಬೇಕೆಂದು ತೀರ್ಮಾನಿಸಿದ್ದೆವು. ಆದರೆ ಕಾಲನ ನಿರ್ಧಾರದ ಎದುರು ಏನೂ ತೋಚದ ಸ್ಥಿತಿ ನಮ್ಮದಾಗಿದೆ. ಮೊದಲ ಕಂತನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಅವರನ್ನು ಕಳೆದುಕೊಂಡ ನೋವು ನಮ್ಮ ಬಳಗವನ್ನೂ ತೀವ್ರವಾಗಿ ಕಾಡುತ್ತಿದೆ. ಇದು ಅವರಿಗೆ ಸಲ್ಲಿಸುತ್ತಿರುವ ಅಂತಿಮ ನಮನ.

ಸಾವು ನನ್ನನ್ನು ಕಾಡುತ್ತಿತ್ತು, ದೇವರು ನನ್ನನ್ನು ಕಾಡುತ್ತಿದ್ದ!


ನಿನ್ನೆ ನಿಧನರಾದ ಅಂತಾರಾಷ್ಟ್ರೀಯ ಮಟ್ಟದ ರಂಗಪ್ರತಿಭೆ ಎಸ್.ಮಾಲತಿ ‘ದಿ ಡೆಕ್ಕನ್ ನ್ಯೂಸ್’ ಗಾಗಿ ತಮ್ಮ ಆತ್ಮಕತೆ ಬರೆಯಲು ಆರಂಭಿಸಿದ್ದರು. ಮೊದಲ ಎರಡು ಕಂತುಗಳನ್ನು ಕಳಿಸಿದ ನಂತರ ಅನಾರೋಗ್ಯಕ್ಕೀಡಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ತಿಂಗಳೇ ಅವರ ಆತ್ಮಕತೆಯ ಮೊದಲೆರಡು ಕಂತುಗಳನ್ನು ಕಳಿಸಿದ್ದರೂ ಅವರು ಅನಾರೋಗ್ಯದಿಂದಿರುವ ಕಾರಣ ಸಂಪೂರ್ಣ ಗುಣಮುಖರಾದ ನಂತರ ಆರಂಭಿಸಬೇಕೆಂದು ತೀರ್ಮಾನಿಸಿದ್ದೆವು. ಆದರೆ ಕಾಲನ ನಿರ್ಧಾರದ ಎದುರು ಏನೂ ತೋಚದ ಸ್ಥಿತಿ ನಮ್ಮದಾಗಿದೆ. ಮೊದಲ ಕಂತನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಅವರನ್ನು ಕಳೆದುಕೊಂಡ ನೋವು ನಮ್ಮ ಬಳಗವನ್ನೂ ತೀವ್ರವಾಗಿ ಕಾಡುತ್ತಿದೆ. ಇದು ಅವರಿಗೆ ಸಲ್ಲಿಸುತ್ತಿರುವ ಅಂತಿಮ ನಮನ.

 

ನಾನು ಒಂಟಿ
ಬಂಧು ಬಾಂಧವರಿದ್ದರೂ, ಮದುವೆಯಾಗಿದ್ದರೂ, ಸ್ನೇಹಿತರಿದ್ದರೂ ನಾನು ಮಾತ್ರ ಒಂಟಿ.
ಅಂದೂ… ಇಂದು… ಮುಂದೆಂದೂ…..
ನನಗೆ ಈ ಜಗತ್ತಿನ ವ್ಯವಹಾರಗಳಲ್ಲಿ ಹೆಚ್ಚು ಪಾಲು ಸುಳ್ಳು, ಕಪಟ, ಭ್ರಷ್ಟಾಚಾರ, ಅಸಮಾನತೆ, ಹಿಂಸೆಗಳೇ ಎದ್ದು ಕಾಣುತ್ತವೆ. ಹಾಗಾಗಿ ಮನಬಿಚ್ಚಿ  ನಕ್ಕಿದ್ದು ಕಡಿಮೆ, ಒಂಟಿಯಾಗಿ ನೊಂದಿದ್ದೇ ಹೆಚ್ಚು.
ತುಂಬು ಕುಟುಂಬದಲ್ಲಿ ಜನಿಸಿದ್ದೆ. ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದೆ. ಹತ್ತು ವರ್ಷ ವಯಸ್ಸಿನಲ್ಲೇ ದೇವರಲ್ಲಿ ನಂಬಿಕೆ ಕಳೆದುಕೊಂಡಿದ್ದೆ. ದೇವರು ಇದ್ದಾನೆಯೇ? ಸಾವು ಯಾಕೆ  ಬರುತ್ತದೆ? ಎಂಬೆಲ್ಲ ಪ್ರಶ್ನೆಗಳು ಗಾಢವಾಗಿ ಕಾಡುತ್ತಿದ್ದವು.
ನಾನು ಹುಟ್ಟಿದ್ದು ಗೌಡ ಸಾರಸ್ವತ ಕೊಂಕಣಿ ಕುಟುಂಬದಲ್ಲಿ. ದೇವಸ್ಥಾನದಲ್ಲಿ ಧರ್ಮಗುರುಗಳು ಬಂದು ಪಾದಪೂಜೆ ಮಾಡಿಸಿಕೊಳ್ಳುವುದು, ಫಲಮಂತ್ರಾಕ್ಷತೆ ಕೊಡುವಾಗ ಬಡವರ ಮಕ್ಕಳಿಗೆ ಸೇಬು ಹಣ್ಣನ್ನೂ ಕೊಡುವುದು ನನ್ನನ್ನು ಕಾಡಿತ್ತು.
ಭಜನೆ ಮಾಡುವಾಗ ಕಟ್ಟುವ ತಾಳಗಳೂ ಕೂಡ ಶ್ರೀಮಂತರ ಪಾಲಾಗುತ್ತಿತ್ತು. ನನ್ನ ತಂದೆ-ತಾಯಿ ದೇವರ ಕಾಣಿಕೆ ಡಬ್ಬಕ್ಕೆ ಹಣ ಹಾಕೆಂದು ಕೊಟ್ಟರೆ, ನಾನು ಹಾಗೆ ಮಾಡದೆ ಪೂರ್ತಿ ಹಣವನ್ನು ಪೂಜಾರಿಯ ತಟ್ಟೆಗೆ ಹಾಕುತ್ತಿದ್ದೆ. ಸುಮ್ಮನೆ ಕುಳಿತಿರುವ ದೇವರಿಗೇಕೆ ದುಡ್ಡು? ಪೂಜಾರಿಯಾದರೆ ಕೆಲಸ ಮಾಡುತ್ತಾನೆ, ಅವನಿಗೆ ಸಾಕಲು ಸಂಸಾರವೂ ಇದೆ ಎಂಬ ತರ್ಕ ನನ್ನದಾಗಿತ್ತು.
ಕ್ರಮೇಣ ದೇವರಲ್ಲೇ ನಂಬಿಕೆ ಕಳೆದುಕೊಂಡ ನಾನು ಪುಸ್ತಕಗಳ ದಾಸಳಾದೆ. ಯಾವ ಪುಸ್ತಕ ಸಿಕ್ಕರೂ ಓದುವುದು. ಹುಡುಕಿ ಹುಡುಕಿ ಓದುವುದು. ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಬೆಳೆಯಿತು. ನನ್ನ ಹತ್ತನೆ ವಯಸ್ಸಿಗೆ ನಾನು ನನ್ನ ಮೊದಲ ಕವನ ಬರೆದೆ. ಚಿತ್ರಕಲೆಯನ್ನು ಅಭ್ಯಾಸ ಮಾಡಿದೆ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಮ್ಮ ಹೆಡ್ ಸಿಸ್ಟರ್ ಬರ್ತಾ ನನ್ನನ್ನು ‘ಕಲಾವತಿ’ ಎಂದು ಕರೆಯುತ್ತಿದ್ದರು.
ಹೈಸ್ಕೂಲಿಗೆ ಹೋದರೂ ‘ಸಾವು’ ನನ್ನನ್ನು ಕಾಡುತ್ತಿತ್ತು. ‘ ದೇವರು’ ನನ್ನನ್ನು ಕಾಡುತ್ತಿದ್ದ. ಲಾಲಬಹಾದ್ದೂರ್ ಶಾಸ್ತ್ರಿ , ನೆಹರು, ಜಾನ್ ಆಫ್ ಕೆನಡಿ ಸತ್ತಾಗ ಭರಪೂರ ಅತ್ತಿದ್ದೆ. ಕವನಗಳನ್ನೂ ಬರೆದಿದ್ದೆ. ಕಾಲೇಜಿಗೆ ಬಂದಾಗ, ದೇವರು ಇರುವುದಾದರೇ ಜಗತ್ತಿನಲ್ಲಿ ಇಷ್ಟೊಂದು ಅಸಮಾನತೆ , ಬಡತನ ಹೇಗೆ ಇರುತ್ತಿತ್ತು ಎಂಬ ಪ್ರಶ್ನೆ ಎದ್ದು ಡಾ. ಶಿವರಾಮ ಕಾರಂತರಿಗೆ ‘ ದೇವರು ಇದ್ದಾನೋ ಇಲ್ಲವೋ’ ಎಂದು ಪ್ರಶ್ನಿಸಿದಾಗ ನಂಬುವವರಿಗೆ ದೇವರು ಇದ್ದಾನೆ, ನಂಬದವರಿಗೆ ಅವನಿಲ್ಲ’ ಎಂಬ ಉತ್ತರ ಅವರಿಂದ ಬಂತು.
ಎಸ್. ಎಸ್. ಎಲ್.ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದೆ. ಕನ್ನಡದಲ್ಲಿ ಜಿಲ್ಲೆಗೆ ಪ್ರಥಮ. ಆದರೆ ಕಾಲೇಜಿಗೆ ಸೇರುವುದು ಅಷ್ಟು ಸುಲಭವಾಗಿರಲಿಲ್ಲ. ಹೆಣ್ಣು ಮಕ್ಕಳಿಗೆ ಓದು? ಮದುವೆಯೇ ಮುಖ್ಯ ಎಂಬುದು ತಂದೆಯ ವಾದ. ನನ್ನ ಅಕ್ಕ ಎಸ್.ಎಸ್.ಎಲ್.ಸಿಗೇ ಓದು ಮುಗಿಸಿ ಮನೆಯಲ್ಲಿದ್ದಳು. ನಾನು ಕಾಲೇಜಿಗೆ ಹೋಗುತ್ತೇನೆಂದು ಹಠ ಹಿಡಿದೆ, ಊಟ ಬಿಟ್ಟೆ. ಅಂತೂ ಕಾಲೇಜಿಗೆ ಸೇರಿಸಿದರು. ಚೆನ್ನಾಗಿ  ಓದಿದೆ. ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದೆ. ಪದವಿಯಲ್ಲಿ ನಾನು ಬಿ.ಕಾಂ.ಗೆ ಸೇರಿದೆ. ಕಾರಣ- ಮುಂದೆ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಬೇಕೆಂಬ ಇರಾದೆ ನನ್ನದಾಗಿತ್ತು. ನನ್ನ ಸಂಬಂಧಿ, ನನಗೆ ಚಿಕ್ಕಮ್ಮ ಆಗಬೇಕಾದವರು ಬೆಂಗಳೂರಿನಲ್ಲಿ ಬ್ಯಾಂಕ್ ಒಂದರಲ್ಲಿ ಆಫೀಸರ್ ಆಗಿದ್ದುದು ನನಗೆ ಪ್ರೇರಣೆಯಾಗಿತ್ತು. ಆದರೆ, ಬಿಕಾಂ. ನಲ್ಲಿ ಎಷ್ಟು ಕಷ್ಟ ಪಟ್ಟೆನೆಂದರೆ ಆ ಅಕೌಂಟೆನ್ಸಿ, ಇನ್ಕಂ ಟ್ಯಾಕ್ಸ್, ಮಾರ್ಕೆಟಿಂಗ್ ಲಾ  ಎಲ್ಲ ತಲೇಗೆ ಹೋಗುತ್ತಿರಲಿಲ್ಲ. ಆದರೂ, ಕಷ್ಟಪಟ್ಟು ಓದಿ ಬಿ.ಕಾಂ ಪದವಿ ಪಡೆದೆ. ಆದರೂ, ಕನ್ನಡದ  ಒಂದು ಪೇಪರ್ ನಲ್ಲಿ ನನಗೆ ರ್ಯಾಂಕ್ ಬಂದಿತ್ತು. ಮುಂದೆ ಕನ್ನಡ ಎಂ.ಎ ಓದಬೇಕೆಂದು, ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಹಾ.ಮಾ. ನಾಯಕರಿಗೆ ಒಂದರ ಮೇಲೊಂದರಂತೆ ಹಲವಾರು ಪತ್ರಗಳನ್ನು ಬರೆದೆ. ಆಗ, ಮಂಗಳೂರಿನಲ್ಲಿ ಒಂದು ಸ್ನಾತಕೋತ್ತರ ಕೇಂದ್ರ ಆರಂಭವಾಗಿತ್ತು. ಅಲ್ಲಿ ನನಗೆ ಸೀಟು ಕೊಟ್ಟರು. ‘ನೀವು ಬಿ.ಕಾಂ. ಮಾಡಿದ್ದೀರಿ. ನಿಯಮದ ಪ್ರಕಾರ ನಿಮಗೆ ಕನ್ನಡ ಎಂ.ಎ. ಗೆ ಸೀಟು ಕೊಡುವಂತಿಲ್ಲ. ಯಾರಾದರೂ ನಿಮ್ಮ ವಿರುದ್ಧ ಕೋರ್ಟಿಗೆ ಹೋದರೆ ನೀವು ಬಿಟ್ಟು ಹೋಗಬೇಕಾಗುತ್ತದೆ’ ಎಂಬ ಕಂಡೀಷನ್ ನೊಂದಿಗೆ ಅಲ್ಲಿನ ನಿರ್ದೇಶಕರಾಗಿದ್ದ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರು ನನ್ನನ್ನು ಎಂ.ಎ.ಗೆ ಸೇರಿಸಿಕೊಂಡರು.
ಸೀಟೇನೋ ಸಿಕ್ಕಿತು. ಆದರೆ, ಇದಕ್ಕೆ ತಂದೆಯ ಒಪ್ಪಿಗೆಯಿರಲಿಲ್ಲ. ಆಗ, ಮತ್ತೆ ಊಟ ಬಿಟ್ಟೆ, ಹಠ ಮಾಡಿದೆ. ಸಾಗರದ  ಎಲ್.ಬಿ. ಕಾಲೇಜಿನ ನನ್ನ ಅಧ್ಯಾಪಕರುಗಳೆಲ್ಲ ನನ್ನ ತಂದೆಗೆ ಬುದ್ಧಿ ಹೇಳಿದರು. ಅಂತೂ ಮಂಗಳೂರಿನ ಸ್ಕಾತಕೋತ್ತರ ಕೇಂದ್ರ ಸೇರಿ ಅಲ್ಲಿಯೂ ಮೊದಲ ಶ್ರೇಯಾಂಕ ಪಡೆದು ಪಾಸಾದೆ.
ಮರಳಿ ಮನೆಗೆ ಬಂದೆ. ‘ಸಾಕಷ್ಟು ಕೀರ್ತಿ ಗಳಿಸಿದೆ. ಇನ್ನು ಸಾಕು, ಮದುವೆ ಮಾಡಿಕೋ’ ಎಂದರು ತಂದೆ. ನಾನು ಗುಟ್ಟಾಗಿ ಕಾಲೇಜು ಉಪನ್ಯಾಸಕಿಯ ಕೆಲಸಕ್ಕೆ ಅರ್ಜಿ ಹಾಕಲಾರಂಭಿಸಿದೆ. ಅಷ್ಟರಲ್ಲೆ ಬಂತು ಹಾ.ಮಾ. ನಾಯಕರ ಪತ್ರ. ‘ನೀನು ಸುಮ್ಮನೆ ಕೂರಬಾರದು ಪಿ.ಹೆಚ್.ಡಿ ಮಾಡು, ಇಲ್ಲವೆ ಮೈಸೂರು ವಿವಿಯಲ್ಲಿ ಕೆಲಸ ಕೊಡುತ್ತೇನೆ’ ಎಂದರು. ನಾನು ಮತ್ತೆ ಹಠ ಮಾಡಿ ಮೈಸೂರಿಗೆ ಹೋದೆ. ಕೆಲಸಕ್ಕೆ ಸೇರಿದರೆ ತಂದೆಗೆ ಸಿಟ್ಟು ಬರುತ್ತದೆಂದು, ಪಿ.ಹೆಚ್.ಡಿ ಮಾಡುವೆನೆಂದು ಹಾ.ಮಾ. ನಾಯಕರಿಗೆ ಹೇಳಿ, ರಿಸರ್ಚ್ ಸ್ಕಾಲರ್ ಆಗಿ ಕನ್ನಡ ಅಧ್ಯಯನ ಸಂಸ್ಥೆ ಸೇರಿದೆ. ಓದು…ಓದು…. ಓದು… ಗ್ರಂಥಾಲಯದ ಪುಸ್ತಕಗಳನ್ನೆಲ್ಲ ಓದುವಾಗ ಅದೆಂತಹ ಸಂತೋಷ !
ಬಾಲ್ಯದಲ್ಲಿ, ಕಾಲೇಜಿನಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದೆ. ಆ ರಂಗಭೂಮಿಯ ಆಸಕ್ತಿ ಮೈಸೂರಿನಲ್ಲಿ ಮತ್ತೆ ಚಿಗುರೊಡೆಯಿತು. ಹಲವಾರು ನಾಟಕಗಳಲ್ಲಿ ಅಭಿನಯಿಸಿದೆ. ರಂಗ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದೆ. ಮಂಗಳೂರಿನಲ್ಲಿ ಎಂ.ಎ ಮಾಡುತ್ತಿರುವಾಗ ಹಲವು ಪದ್ಯಗಳನ್ನು ಬರೆದು, ‘ಉದಯವಾಣಿ’ಯಲ್ಲಿ ಪ್ರಕಟಿಸಿದ್ದೆ. ಜೀವನೋತ್ಸಾಹದ ದಿನಗಳು ಅವು!
ನನಗಾಗ 25-26 ವಯಸ್ಸು. ತಂದೆ-ತಾಯಿ ಗಂಡೊಂದನ್ನು ಹುಡುಕೇಬಿಟ್ಟರು. ಆತ ರಾಧಾಕೃಷ್ಣಪ್ರಭು. ಇಂಗ್ಲೆಂಡಿನಲ್ಲಿ ವೈದ್ಯ. ಪಾಂಡಿಚೇರಿಯಲ್ಲಿ ಎಂ.ಬಿ.ಬಿ.ಎಸ್ ಮೊದಲ ಶ್ರೇಯಾಂಕ  ಪಡೆದವನು. ಆತ, ನನ್ನ ತಂದೆ ಕಳುಹಿಸಿದ ನನ್ನ ಫೋಟೋ ನೋಡಿ ಒಪ್ಪಿ, ನನ್ನನ್ನು ಮಾತನಾಡಿಸಲು ಮೈಸೂರಿನ ಮಾನಸಗಂಗೋತ್ರಿಗೆ ಬಂದ. ಚಾಮುಂಡಿ ಬೆಟ್ಟಕ್ಕೆ ಹೋದೆವು. ನಾನು ‘ನೀವು ರೆಜಿಸ್ಟರ್ಡ್ ಮ್ಯಾರೇಜ್ ಗೆ ಒಪ್ಪುತ್ತೀರಾ? ಎಂದು ಪ್ರಶ್ನಿಸಿದೆ. ಆತ ಒಪ್ಪಲಿಲ್ಲ. ನಂತರ ‘ಭಾರತಕ್ಕೆ ಬಂದು ಕೆಲಸ ಮಾಡಲು ಒಪ್ಪುತ್ತೀರಾ?ʼ ಎಂದು ಕೇಳಿದೆ. ಅದಕ್ಕೆ ಆತ ಒಪ್ಪಿದ. ಆದರೆ, ವಿಜೃಂಭಣೆಯ ವಿವಾಹ ನನಗಿಷ್ಟವಿರಲಿಲ್ಲ. ’ನೀವು ಯಾರಾದರೂ ವೈದ್ಯೆಯನ್ನೇ ಮದುವೆಯಾಗಿ ಎಂದೆ. ನಮ್ಮ ಮದುವೆ ನಡೆಯಲಿಲ್ಲ. ಈಗ, ರಾಧಾಕೃಷ್ಣಪ್ರಭು, ಲಕ್ಷ್ಮಿ ಎಂಬ ವೈದ್ಯೆಯನ್ನು ಮದುವೆಯಾಗಿ ಎರಡು ಮಕ್ಕಳೊಂದಿಗೆ ಇಂಗ್ಲೆಂಡಿನಲ್ಲಿ ಸುಖವಾಗಿದ್ದಾರೆ.
ತಂದೆ-ತಾಯಿ ಕಂಗಾಲಾಗಿದ್ದರು.  ತಂದೆ-ತಾಯಿಯರ ಮನಸ್ಸು ನೋಯಿಸುವುದು ನನಗೇನೋ ಸುಲಭವಾಗಿರಲಿಲ್ಲ. ಹಲವು ದಿನ ನಿದ್ದೆ ಬಿಟ್ಟು ಬಳಲಿದೆ. ಆದರೆ, ಇಂಗ್ಲೆಂಡಿಗೆ ಹೋಗುವುದು ನನಗಿಷ್ಟವಿರಲಿಲ್ಲ. ಆಗ ತುರ್ತು ಪರಿಸ್ಥಿತಿಯ ಕಾಲ. ನನ್ನಲ್ಲಿ ದೇಶಪ್ರೇಮ ಉಜ್ವಲವಾಗಿತ್ತು. ತಂದೆ ಕಷ್ಟಪಟ್ಟು ದುಡಿದದ್ಧನ್ನೆಲ್ಲ ನನ್ನ ವರದಕ್ಷಿಣೆಗಾಗಿ, ವಿಜೃಂಭಣೆಯ ಮದುವೆಗಾಗಿ ಖರ್ಚು ಮಾಡುವುದು ನನಗೆ ಬೇಡದ ಸಂಗತಿಯಾಗಿತ್ತು.

ಇದನ್ನೂ ಓದಿ: ಆರಂಭಕ್ಕೂ ಮುನ್ನ ಅಂತ್ಯ ಕಂಡ ಆತ್ಮಕಥಾನಕ


ಮೈಸೂರಿನ ಮಾನಸ ಗಂಗೋತ್ರಿಯ ಪಕ್ಕದಲ್ಲೇ  ಕುಕ್ಕರಕಳ್ಳಿ ಕೆರೆಯ ಏರಿ ಮೇಲೆ ಒಂದು ಸಣ್ಣ ಮನೆಯಲ್ಲಿ ಸಸ್ಯಶಾಸ್ತ್ರ ವಿಭಾಗದ ಪ್ರೊ.ರಾಮಲಿಂಗಂ, ಡಾ. ರತಿರಾವ್, ಡಾ.ವಿ.ಎನ್. ಲಕ್ಷ್ಮಿನಾರಾಯಣ ಮತ್ತಿತರರು ಸೇರಿ ಮಾರ್ಕ್ಸಿಸ್ಟ್ ಲೈಬ್ರರಿ ಆರಂಭಿಸಿದ್ದರು. ಅಲ್ಲಿಗೆ ನಾನು ನಿತ್ಯವೂ ಹೋಗುತ್ತಿದ್ದೆ. ಮಾರ್ಕ್ಸ್ ನ ಬರಹಗಳನ್ನು ಅಧ್ಯಯನ ಮಾಡುತ್ತಿದ್ದೆವು. ನಾನು ಗಾರೆ ಕೆಲಸದವರೆಗೆ ಪಾಠ ಹೇಳುತ್ತಿದ್ದೆ.
ಮೈಸೂರಿನ ಶ್ರೀಮತಿ ರಾಮೇಶ್ವರಿ ವರ್ಮಾ, ಬಾಲಗೋಪಾಲ ವರ್ಮಾ, ವಿಶ್ವನಾಥ ಮಿರ್ಲೆ, ಚ.ಸರ್ವಮಂಗಳ, ನ.ರತ್ನ ಇವರೆಲ್ಲ ಖ್ಯಾತ ರಂಗಕರ್ಮಿಗಳು. ಇವರು, ಆಗಲೇ ದೆಹಲಿಯಿಂದ ಬಂದು, ಬೆಂಗಳೂರಿನಲ್ಲೇ ಖ್ಯಾತರಾಗಿದ್ದ ಪ್ರಸನ್ನ ಅವರನ್ನು ನಾಟಕವೊಂದನ್ನು ನಿರ್ದೇಶಿಸಲು ಮೈಸೂರಿಗೆ ಆಹ್ವಾನಿಸಿತ್ತು. ಮೈಸೂರಿನಲ್ಲಿ, ಸಿ.ವೀರಣ್ಣ ಅನುವಾದಿಸಿರುವ ಬ್ರೆಕ್ಟನ ‘ಮದರ್’ (ತಾಯಿ) ನಾಟಕದ ತಾಲೀಮು ಆರಂಭವಾಯಿತು. ನಾನೂ ಆ ನಾಟಕದಲ್ಲಿ ಪಾತ್ರ ಮಾಡಿದೆ. ನಾಟಕ ನನಗಿಷ್ಟವಾಗಿತ್ತು. ನಾಟಕದ ನಿರ್ದೇಶಕರ ಕಷ್ಟದ ದುಡಿಮೆ ನನ್ನನ್ನು ಆಕರ್ಷಿಸಿತ್ತು. ನನಗಿಷ್ಟವಾದದ್ದು ಬ್ರೆಕ್ಟನ ನಾಟಕ! ಆದರೆ, ಅದನ್ನು ಪ್ರಸನ್ನನ ಬಗ್ಗೆ ಆರೋಪಿಸಿಕೊಂಡು ಅನನನ್ನೇ ಮದುವೆಯಾದೆ. ಮದುವೆಯಾದ  ಒಂದೆರಡು ತಿಂಗಳಲ್ಲೇ ನಿರಾಸೆಯಾಗಿತ್ತು. ಆದರೆ, ಸಮುದಾಯ ಸಂಘಟನೆಯ ಕೆಲಸ ಹಗಲಿರುಳೂ ನನ್ನನ್ನೇ ಆವರಿಸುತ್ತಿತ್ತು.

ಅಂಕಣ ಬರೆಯಲಾರಂಭಿಸೋಣವೆಂದರೆ ನನ್ನಿಂದ ಹೊಮ್ಮಿದ್ದು ಒಂದು ಪದ್ಯ-

ಕಹಿನೆನಪುಗಳ ಸಮಾಧಿ ಮಾಡಿ
ಅದರ ಮೇಲೆ ಗಡದ್ದು ನಿದ್ದೆ ಮಾಡುವುದೇ ಚೆಂದ ಇಲ್ಲದಿದ್ದರೆ,
ನೆನಪುಗಳು
ಒಂದರ ಹಿಂದೆ ಒಂದು ಬಂದು
ಅಸಂಖ್ಯಾತ ರೀಲುಗಳು ಬಿಚ್ಚಿ ನಿದ್ದೆ ದೂರ, ತಲೆಭಾರ,
 ಬವಳಿ ನೆನಪುಗಳಿಗಿಲ್ಲ ಒಂದಿಷ್ಟು ಕರುಣೆ!
ಕಾರಣರಾದವರಿಗೇಕೆ ಈಗ ಮನ್ನಣೆ? ಆದರೂ ಬರೆಯಲು ಬೇಕು
ನನಗಾದದ್ದು ನಿಮಗಾಗದಿರಲಿ ಎಂದು ಮುಂದಿನ ದಿನಗಳಲ್ಲಿ ನನ್ನನು
ಭವದ ಬೆಳಕಿನಲ್ಲಿ ನಾನೇ ಮುಂದೆ ನಡೆಯಲಿ ಎಂದು
ಬರೆಯುತ್ತೇನೆ ಬರೆದು ಹಗುರಾಗುತ್ತೇನೆ…..
ನಿಶ್ಚಯ ಮಾಡಿದ್ದೇನೆ, ಬರೆದು ಮುಗಿಸುತ್ತೇನೆ.


ಈಗ ನನ್ನ ಉದ್ಯೋಗವೇ ರಂಗಭೂಮಿ. ಈ ರಂಗಭೂಮಿಯ ದಾಸಳಾಗಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಾಲ್ಯದಲ್ಲಿ 3ನೇ ತರಗತಿಯಲ್ಲಿದ್ದಾಗ ನಮ್ಮ ಸತ್ಯವತಿ ಮೇಡಂ ನನ್ನನ್ನು ಬುದ್ಧನಾಗಿಸಿದ್ದರು. ‘ಕಿಸಾ ಗೌತಮಿ’ ನಾಟಕದಲ್ಲಿ ನನ್ನದು ಬುದ್ಧನ ಪಾತ್ರ, ಮೇಡಂ ನಮ್ಮ ಮನೆಗೆ ಬಂದು ನನ್ನಮ್ಮನ ಹತ್ತಿರ ಮೂರು ಮೀಟರ್ ಕಾವಿ ಬಟ್ಟೆಗೆ ಹಣ ತೆಗೆದುಕೊಂಡೂ ಹೋಗಿದ್ದರು. ಆ ನಂತರ, ಐದನೇ ತರಗತಿಯಲ್ಲಿ ‘ಸತ್ಯಹರಿಶ್ಚಂದ್ರ’ ನಾಟಕದಲ್ಲಿ ನನ್ನದು ಹರಿಶ್ಚಂದ್ರನ ಪಾತ್ರ. ಆ ನಂತರ, ಕಾಲೇಜು ಸೇರಿದಾಗ ಪ್ರಮೋದ ಮತ್ತಿಹಳ್ಳಿ ಎಂಬ ಅಧ್ಯಾಪಕಿ ವಿದ್ಯಾರ್ಥಿನಿಯರಿಗೆ ಕೆ. ಗುಂಡಣ್ಣನವರ ‘ಯಾರ ಹೆಂಡ್ತಿ?ʼ ನಾಟಕವನ್ನು ಆಡಿಸಿದರು. ಈ ನಾಟಕದ ತಾಲೀಮಿಗೆ ಹೋಗಬಾರದೆಂದು ಮನೆಯಲ್ಲಿ ತಂದೆಯವರ ಪ್ರಭಲ ವಿರೋಧ ಆರಂಭವಾಗಿತ್ತು. ನಾನು ಗುಟ್ಟಾಗಿ ತಾಲೀಮಿಗೆ ಹೋದೆ. ಪ್ರದರ್ಶನವೂ ಆಯಿತು. ನನಗೆ ಅಭಿನಯಕ್ಕೆ ಬಹುಮಾನ ಬಂದು, ಪ್ರಚಾರವಾಗಿ ನನ್ನ ತಂದೆಗೆ ತಿಳಿದು ಕಿಡಿಕಿಡಿಯಾಗಿದ್ದರು.
ಆನಂತರ ಮೈಸೂರಿನಲ್ಲಿ ಪಿ,ಎಚ್.ಡಿ ಮಾಡುತ್ತಿರುವಾಗಲೇ ನಾನು ಸ್ವತಂತ್ರವಾಗಿ ನಾಟಕಗಳಲ್ಲಿ ಪಾತ್ರವಹಿಸಲು ಆರಂಭಿಸಿದ್ದು, ಅಲ್ಲಿಯೇ ಪ್ರಸನ್ನನ ಪರಿಚಯವಾದದ್ದು. ರಂಗಭೂಮಿಯ ವ್ಯಕ್ತಿ, ಎಡಪಂಥೀಯ ಎಂಬ ಆರ್ಕಷಣೆಯಿಂದಲೇ ಮದುವೆಯಾದದ್ದು. ಆದರೆ ಮದುವೆಯಾದ ಮೇಲೆ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಎಲ್ಲಾ ಕೆಲಸಗಳ ಜವಾಬ್ದಾರಿ ನನ್ನ ಮೇಲೆ ಬಿತ್ತು.


(ವಿವಿಧ ಕಾಲಘಟ್ಟಗಳಲ್ಲಿ ಮಾಲತಿ ಅವರು ಅನುಭವಿಸಿದ ನೋವು, ಹಿಂಸೆ, ಅವಮಾನ, ಹಿಂಸೆ ಮೊದಲಾದ ಸಂಗತಿಗಳನ್ನು ದಾಖಲಿಸಿದ್ದಾರೆ. ಆದರೆ ಅವರು ಈಗ ನಮ್ಮೊಂದಿಗೆ ಇಲ್ಲದ ಕಾರಣ ಅದನ್ನು ಪ್ರಕಟಿಸದಿರುವ ನಿರ್ಧಾರ ಕೈಗೊಂಡಿದ್ದೇವೆ)