ದರ್ಶನ್ ನಿಜ ಜೀವನದಲ್ಲಿ ಮುಷ್ಟಿ ಯುದ್ದ  ಸ್ಪಷ್ಟನೆ ಕೊಟ್ಟರೂ, ನಿಲ್ಲದ ಗಾಳಿ ಸುದ್ದಿ

ದರ್ಶನ್ ನಿಜ ಜೀವನದಲ್ಲಿ ಮುಷ್ಟಿ ಯುದ್ದ   ಸ್ಪಷ್ಟನೆ ಕೊಟ್ಟರೂ, ನಿಲ್ಲದ  ಗಾಳಿ  ಸುದ್ದಿ

ಮೂರು ತಾಸಿನಷ್ಟು ಸುಧೀರ್ಘಾವಧಿಯ ಗ್ರಾಫಿಕ್ ಅಳವಡಿಕೆಯ ಸಿನಿಮಾ ಎಂದು ಇಡೀ ವಿಶ್ವದ ಚಿತ್ರಜಗತ್ತಿನಲ್ಲೇ ಖ್ಯಾತಿಗೆ ಪಾತ್ರವಾಗಿರುವ 'ಕುರುಕ್ಷೇತ್ರ'ಕ್ಕೂ ವಿವಾದಗಳಿಗೂ ಬಿಡಲಾರದ ನೆಂಟಸ್ಥಿಕೆ ಉಂಟು.

ಟೀಸರ್ ಗಳಲ್ಲಿ ನನಗೆ ಆದ್ಯತೆ ಇಲ್ಲ, ಪಾತ್ರವನ್ನ ಬೇಕಾಗಿಯೇ ವಿಸ್ತರಿಸಲಾಗಿದೆ, ಚುನಾವಣೆ ವಿಚಾರದಿಂದ ಡಬ್ಬಿಂಗ್‍ಗೆ ಹೋಗದೆ ಚಕ್ಕರ್ ಹೊಡೆದಿದ್ದು ಇವೆಲ್ಲ ಆಗಿಹೋಗಿದ್ದಾದರೂ, ಮಹಾಭಾರತ ಸರ್ವೇಸಾಮಾನ್ಯವಾಗಿ ಎಲ್ಲರಿಗೂ ತಿಳಿದಂಥದ್ದೇ ಆದರೂ, ಮುನಿರತ್ನ ತನ್ನದೇ ಕತೆ ಟೈಟಲ್ ಕಾರ್ಡಿನಲ್ಲೆಲ್ಲ ಹಾಕಿಕೊಂಡು ಮೆರೆಯುತ್ತಿರುವುದರಿಂದ, ಮಹಾಭಾರತದ ಮೂಲ ಕರ್ತೃ ವ್ಯಾಸರು ಕೃತಾರ್ಥರಾಗಿದ್ದಾರೆ, ಇದು ಎನ್‍ಟಿಆರ್ ಸಿನಿಮಾದ ದೃಶ್ಯಾವಳಿಯನ್ನಾಧರಿಸಿ ಪೋಣಿಸಿರುವ ಮತ್ತೊಂದು ಸಿನಿಮಾ ಎಂಬಿತ್ಯಾದಿ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಗಿಯೇ ಇವೆ.

ಇದರ ನಡುವೆಯೇ ದುರ್ಯೋಧನ ಪಾತ್ರಧಾರಿ ದರ್ಶನ್, ನಿಜಜೀವನದಲ್ಲಿ ತನ್ನ ಪತ್ನಿ ವಿಜಯಲಕ್ಷ್ಮಿ ಮತ್ತು ಅತ್ತೆ ಮೇಲೆ ಮುಷ್ಟಿಯುದ್ದ ಗೈದಿದ್ದಾರೆ, ಇದು ಮಹಿಳಾ ಆಯೋಗ, ಆರಕ್ಷಕ ಠಾಣೆ ಮೆಟ್ಟಿಲೇರಿದೆ ಎಂಬ ಸುದ್ದಿಗಳು ವೈರಲ್ ಆದವು. ಜತೆಗೆ ವಿಜಯಲಕ್ಷ್ಮಿ ತಮ್ಮ ಹೆಸರಿನ ಜತೆಯಿದ್ದ ದರ್ಶನ್ ಎಂಬ ಹೆಸರನ್ನ ಸಾಮಾಜಿಕ ಜಾಲತಾಣಗಳಲ್ಲಿ ತೆಗೆದಿದ್ದಾರೆ ಎಂಬುವ ಸ್ಕ್ರೀನ್‍ಶಾಟ್ ಸಮೇತ ಮೆರೆದಾಡಿದವು

ಹಿಂದೆಲ್ಲ ಕೌಟುಂಬಿಕವಾಗಿ ಅಷ್ಟೇನು ಸನ್ನಡತೆಯಿಂದಿರದ ದರ್ಶನ್ ಈಗ ಅಂಥ ತಪ್ಪನ್ನೆಲ್ಲ ತಿದ್ದುಕೊಂಡಿದ್ದಾರೆ. ಆದರೆ ದುರ್ಯೋಧನನ ಪಾತ್ರ ನಿರ್ವಹಣೆ ಸರಿಯಾಗಿಲ್ಲ, ಸಿನಿಮಾ ಅಂದುಕೊಂಡಂಗಿಲ್ಲ ಎಂಬ ಬೇಸರವನ್ನ ಹೆಂಡತಿ ಮತ್ತು ಅತ್ತೆ ಮೇಲೆ ತೀರಿಸಿಕೊಂಡಿದ್ದಾರೆ ಎಂಬ ಬಾಲಂಗೋಚಿಗಳನ್ನ ಕಟ್ಟಿ, ಹರಿಯಬಿಡಲಾಗಿದೆ.

ಅಂಥದ್ದೇನು ಆಗಿಲ್ಲ, ನಾವು ಚನ್ನಾಗಿದ್ದೇವೆ, ಇದೆಲ್ಲ ಗಾಳಿ ಸುದ್ದಿ ಎಂದು ಖುದ್ದಾಗಿ ವಿಜಯಲಕ್ಷ್ಮಿಯೇ ಸಮಜಾಯಿಷಿಗಳನ್ನ ಪೋಸ್ಟ್ ಮಾಡುತ್ತಿದ್ದರೂ, ಒಂದಷ್ಟು  ಜನ ನಂಬುತ್ತಿಲ್ಲ. ಏನೋ ಆಗಿದೆ ಮುಚ್ಚಿಡುತ್ತಿದ್ದಾರೆ ಎಂದೇ ವಾದಿಸಿಕೊಂಡು ಕೂತಿದ್ದಾರೆ. ಇಂಥ ಎಡವಟ್ಟು ಗಾಳಿಸುದ್ದಿಗಳಿಂದಾಗಿ ನಿಜಕ್ಕೂ ಬೇಸರಗೊಂಡಿರುವವರು ದರ್ಶನ್ ಅಭಿಮಾನಿಗಳು.