ಬಾಯುಪಚಾರದ ದಲಿತೋದ್ಧಾರ !!

ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿರಿಸಿರುವ ಹಣ ಸಮರ್ಪಕವಾಗಿ ಬಳಕೆಯಾಗದೇ ಇತರ ಇಲಾಖೆಗಳಿಗೆ ವರ್ಗಾವಣೆ ಮಾಡುವ ಪ್ರವೃತ್ತಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಬಾಯುಪಚಾರದ ದಲಿತೋದ್ಧಾರ !!

ಪರಿಶಿಷ್ಟರ ಅಭಿವೃದ್ಧಿಗೆ ಇಟ್ಟ 27 ಸಾವಿರ ಕೋಟಿಯಲ್ಲಿ 19 ಸಾವಿರ ಕೋಟಿ ವರ್ಗಾವಣೆ!

ಈ ಮಾಹಿತಿ ನೀಡಿರುವ ದಲಿತ ವರ್ಗದ ಪ್ರತಿನಿಧಿಯಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಣ ಖರ್ಚಾಗದಿರಲು ಕಾರಣ ಕೇಳದೆ, ತನಿಖೆ ಮಾಡಿಸದೆ ಸುಲಭವಾಗಿ ಬೇರೆ ಇಲಾಖೆಗಳಿಗೆ ನೀಡುವ ಮಾತಾಡಿರುವುದು ನಾಚಿಕೆಗೇಡಿನ ಸಂಗತಿ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಯಾವುದೇ ಪಕ್ಷದ ಸರ್ಕಾರ ಬಂದರೂ ಬಜೆಟ್ಟಿನಲ್ಲಿ ಹೆಚ್ಚಿಗೆ ಹಣ ಮೀಸಲಿಡಬೇಕೆನ್ನುವ ಬೇಡಿಕೆ ಈ ವರ್ಗಗಳ ಶಾಸಕರಿಂದ ನಿರಂತರವಾಗಿ ಕೇಳಿಬರುತ್ತದೆ. ಸರ್ಕಾರ ಕೂಡ ಈ ವರ್ಗದ ಜನರನ್ನು ಮೆಚ್ಚಿಸಲು ಮತ್ತು ತಾನು ದಲಿತ ವರ್ಗದ ವಿರೋಧಿಯಲ್ಲ ಎಂದು ತೋರಿಸಿಕೊಳ್ಳಲು ಪ್ರತಿ ವರ್ಷವೂ ಹೆಚ್ಚು ಹಣವನ್ನು ನಿಗದಿಪಡಿಸುತ್ತಾ ಹೋಗುತ್ತದೆ.

ದಲಿತ ವರ್ಗದ ಬಡವರಿಗೆ ಬದುಕು ಕಟ್ಟಿಕೊಡುವ ಸಂವಿಧಾನಬದ್ಧ ಕರ್ತವ್ಯವನ್ನು ಆಡಳಿತ ವ್ಯವಸ್ಥೆ ಮಾಡಬೇಕು. ಅದರಂತೆ ಸರ್ಕಾರ ಈ ವರ್ಗದ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಈ ಹಿಂದೆ ವಿಶೇಷ ಘಟಕ ಯೋಜನೆ ಎಂದಿತ್ತು. ಈಗ ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಮತ್ತು ಬುಡಕಟ್ಟು ಉಪಯೋಜನೆ ರೂಪದಲ್ಲಿ ಬಂದಿದೆ.

ಈ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಶೇ 18ರಷ್ಟು ಹಣವನ್ನು ಎಲ್ಲ ಇಲಾಖೆಗಳೂ ಕಾಯ್ದಿರಿಸುತ್ತವೆ. ಪ್ರತಿಯೊಂದು ಇಲಾಖೆಯೂ ತನ್ನ ಇಲಾಖೆಯಲ್ಲಿ ಈ ವರ್ಗಗಳ ಅಭಿವೃದ್ಧಿಗೆ ಏನು ಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿ ಅವುಗಳಿಗೆ ಬಜೆಟ್ ನಲ್ಲಿ ಮಂಜೂರಾತಿ ಪಡೆದು ಜಾರಿಗೆ ತರುವುದು ನಿಜವಾದ ಉದ್ದೇಶ.

ಆದರೆ ವಾಸ್ತವದಲ್ಲಿ ಈ ಕಾರ್ಯಕ್ರಮಗಳು ಜಾರಿಗೆ ಬರುತ್ತಿವೆಯೇ ಎನ್ನುವುದನ್ನು ಗಮನಿಸಿದಾಗ ನಿರಾಶೆ ಕಾಡುತ್ತದೆ. ಸಮಾಜ ಕಲ್ಯಾಣ ಇಲಾಖೆ, ಅದರ ಅಡಿಯಲ್ಲಿ ಬರುವ ಡಾ. ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಗಜೀವನರಾಂ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮ ಮತ್ತು ಬೋವಿ ಅಭಿವೃದ್ಧಿ ನಿಗಮ. ಹೀಗೆ ಹತ್ತು ಹಲವಾರು ನಿಗಮಗಳು ಪರಿಶಿಷ್ಟರ ಅಭಿವೃದ್ಧಿ ಹೆಸರಿನಲ್ಲಿ ತಲೆ ಎತ್ತಿವೆ.

ಅಚ್ಚರಿ ಎಂದರೆ ಸರ್ಕಾರ ತನ್ನ ಬಜೆಟ್ಟಿನಲ್ಲಿ ಇಡುವ ಹಣದಲ್ಲಿ ಶೇಕಡಾ ಅರ್ಧ ಭಾಗದಷ್ಟೂ ಹಣ ಖರ್ಚು ಮಾಡಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತಂದದ್ದು ಇಲ್ಲ. ಆದರೂ ಪರಿಶಿಷ್ಟ ಜನರ ಕಣ್ಣೊರೆಸಲು ಬಜೆಟ್ಟಿನಲ್ಲಿ  ಮೀಸಲಿಟ್ಟ ಹಣವನ್ನು ಖರ್ಚು ಮಾಡಲೇಬೇಕು. ಖರ್ಚು ಮಾಡಬೇಕೆಂದು ಸಂಬಂಧಿಸಿದ ಕಾಯ್ದೆಗೆ ಕರ್ನಾಟಕ ಸರ್ಕಾರ ತಿದ್ದುಪಡಿಯನ್ನೂ ತಂದಿದೆ. ಈ ವರ್ಗದ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಖರ್ಚು ಮಾಡದಿರುವ ಅಧಿಕಾರಿಗೆ ಶಿಕ್ಷೆ ನೀಡುವ ನಿಯಮವನ್ನೂ ರೂಪಿಸಲಾಗಿದೆ.

ಯಾವ ಮುಖ್ಯಮಂತ್ರಿ ಇರಲಿ ಅಥವಾ ಸಮಾಜ ಕಲ್ಯಾಣ ಸಚಿವರಿರಲಿ, ಈ ವರ್ಗದ ಜನರಿಗೆ ಕಾಯ್ದಿರಿಸಿರುವ ಹಣವನ್ನು ಖರ್ಚು ಮಾಡಿ ಎಂದು ನಿಂತಲ್ಲಿ ಕುಂತಲ್ಲಿ ಕರೆ ನೀಡುತ್ತಲೇ ಇರುತ್ತಾರೆ. ಹಣವನ್ನು ಖರ್ಚು ಮಾಡಿ ಎನ್ನುತ್ತಾರೆಯೇ ಹೊರತು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಹಣವನ್ನು ಖರ್ಚು ಮಾಡಿ ಎಂದು ಯಾರೂ ಹೇಳಿದ ಉದಾಹರಣೆ ಸಿಗುವುದಿಲ್ಲ. ಕೇವಲ ಹಣವನ್ನು ಖರ್ಚು ಮಾಡಿ ಎಂದರೆ ಯಾವುದೋ ಕಾರಣಗಳಿಗಾಗಿ ಖರ್ಚು ಮಾಡಲು ನಮ್ಮ ಅಧಿಕಾರಿ ವರ್ಗ ತುದಿಗಾಲಲ್ಲಿ ನಿಂತೇ ಇರುತ್ತಾರೆ. ಆದರೆ ಪರಿಶಿಷ್ಟರ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಆ ಉದ್ದೇಶಕ್ಕಾಗಿ ಹಣ ಖರ್ಚು ಮಾಡಿ ಎಂದರೆ ಮೂಗು ಮುರಿಯುತ್ತಾರೆ.

ಸರ್ಕಾರ ಏನೇ ಕಾನೂನು ಮತ್ತು ಕಾಯ್ದೆ ಜಾರಿಗೆ ತಂದರೂ ಅದನ್ನು ಪಕ್ಕಕ್ಕಿಟ್ಟು ಪರ್ಯಾಯ ಮಾರ್ಗ ಹುಡುಕಿ ತನಗೆ ಬರಬೇಕಾದ ಹಣ (ಲಂಚ- ಭ್ರಷ್ಟಾಚಾರ) ವನ್ನು ಪಡೆದುಕೊಳ್ಳುವಲ್ಲಿ ನಮ್ಮ ಅಧಿಕಾರಿ ವರ್ಗ ಎತ್ತಿದ ಕೈ. ಹಣ ಖರ್ಚು ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಜೈಲಿಗೆ ಕಳುಹಿಸುವ ಮಾತನಾಡುವಲ್ಲಿ ನಮ್ಮ ಸಚಿವರು ಕಡಿಮೆ ಏನಿಲ್ಲ. ಆದರೂ ಕರ್ತವ್ಯ ಪಾಲಿಸದ ಪರಿಶಿಷ್ಟರ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರದೆ ತನಗೆ ಬೇಕಾದ ಮಧ್ಯವರ್ತಿಗಳ ಮೂಲಕ ಲಕ್ಷಾಂತರ ಮತ್ತು ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡುವ ಯಾವ ಅಧಿಕಾರಿಯನ್ನೂ ಯಾವ ಸರ್ಕಾರವೂ ಜೈಲಿಗೆ ಕಳುಸಹಿಸಿದ ಉದಾಹರಣೆ ಇಲ್ಲ.

ಮುಖ್ಯವಾಗಿ ಬಡವರಿಗೆ ಮೀಸಲಿಟ್ಟ ಹಣ ಆ ಜನರಿಗೆ ಕೇವಲ ದಾಖಲೆಗಳಲ್ಲಿ ಮಾತ್ರ ತಲುಪುವಂತೆ ಮಾಡಿ ಎಲ್ಲವನ್ನೂ ಗುಳುಂ ಮಾಡುವ ಅಧಿಕಾರಿಗಳಿಗೇನೂ ಕಡಿಮೆ ಇಲ್ಲ. ಇಂತಹವರಿಂದ ಸಂಬಂಧಿಸಿದ ಶಾಸಕರು ಮತ್ತು ಸಚಿವರು ಶೇಕಡಾವಾರು ಲಂಚ ಪಡೆಯುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೂ ಬಾಯುಪಚಾರದ ಮಾತಾಗಿ ಎಲ್ಲ ಸರ್ಕಾರ ಮತ್ತು ಸಚಿವರು ಪರಿಶಿಷ್ಟರ ಜಪ ಮಾಡುವುದು ಮಾತ್ರ ತಪ್ಪಿಲ್ಲ. ಹಾಗೆಯೇ ಅನೇಕ ಕಡೆಗಳಲ್ಲಿ ಈ ವರ್ಗದ ಜನರು ಎಲ್ಲದಕ್ಕೂ ಸರ್ಕಾರದತ್ತ ಕೈ ಚಾಚಿ ಅಂಗಲಾಚುವುದೂ ತಪ್ಪಿಲ್ಲ!!

ಸಮಾಜ ಕಲ್ಯಾಣ ಇಲಾಖೆ, ಡಾ. ಅಂಬೇಡ್ಕರ್ ಮತ್ತು ಜಗಜೀವನರಾಂ ಅಭಿವೃದ್ಧಿ ನಿಗಮಗಳ ಕಾರ್ಯಾಲಯದ ಬಳಿ ಧಂದೆ ಮಾಡುವವರು ಮತ್ತು ಮಧ್ಯವರ್ತಿಗಳ ಕಾಟ ಕಣ್ಣಿಗೆ ರಾಚುವಂತೆ ಕಾಣುತ್ತದೆ. ಅಮಾಯಕರ ಹೆಸರಿನಲ್ಲಿ ಅರ್ಜಿ ಗುಜರಾಯಿಸಿ ಹಣವನ್ನು ಮಂಜೂರು ಮಾಡಿಸಿಕೊಂಡು ಬಡಪಾಯಿ ಫಲಾನುಭವಿಗೆ ಒಂದಿಷ್ಟು ಕೊಟ್ಟು ಉಳಿದ ಬಹುಪಾಲು ಹಣವನ್ನೆಲ್ಲ ತಾವೇ ಗುಳುಂ ಮಾಡುವವರಿಗೇನೂ ಕಡಿಮೆ ಇಲ್ಲ. ಇದರಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಹಕಾರ ಮತ್ತು ಪಾಲು ಇಲ್ಲದೆ ಯಾವುದೂ ನಡೆಯುವುದಿಲ್ಲ. ಇದು ನಮ್ಮ ದಲಿತೋದ್ಧಾರ !

ಕಳೆದ ವಾರ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿಕೆಯೊಂದನ್ನು ನೀಡಿ 2019-20ರ ಸಾಲಿನಲ್ಲಿ ಮೀಸಲಿರಿಸಿದ 27 ಸಾವಿರ ಕೋಟಿ ಹಣದಲ್ಲಿ ಕೇವಲ ಹನ್ನೊಂದು ಕೋಟಿ ಮಾತ್ರ ಖರ್ಚು ಆಗಿ, ಹತ್ತೊಂಬತ್ತು ಸಾವಿರ ಕೋಟಿ ಹಣ ಉಳಿದಿದೆ. ಈ ಭಾರೀ ಮೊತ್ತದ ಹಣವನ್ನು ಕೊರತೆ ಇರುವ ಇಲಾಖೆಗಳಿಗೆ ವಾಪಸ್ ನೀಡುವುದಾಗಿ ಹೇಳಿದ್ದಾರೆ.

ಪರಿಶಿಷ್ಟ ಜಾತಿಯ ಪ್ರತಿನಿಧಿಯಾಗಿ ಈ ಭಾರಿ ಮೊತ್ತದ ಹಣವನ್ನು ಸಂಬಂಧಿಸಿದ ಕಾರ್ಯಕ್ರಮಗಳಿಗೆ ಯಾಕೆ ಖರ್ಚು ಮಾಡಿಲ್ಲ? ಇಷ್ಟು ಹಣ ಖರ್ಚಾಗದಿರಲು ಕಾರಣವೇನು? ಈ ಬಗ್ಗೆ ಇಲಾಖಾ ಮಟ್ಟದಲ್ಲಿಯಾದರೂ ತನಿಖೆ ಮಾಡಿಸಬೇಕು. ಇದಾವ ಪ್ರಯತ್ನವನ್ನೂ ಮಾಡದೇ ವಿವೇಚನಾರಹಿತವಾಗಿ ಉಳಿದಿರುವ ಈ ಹಣವನ್ನು ಬೇರೆಡೆಗೆ ವರ್ಗಾಯಿಸುವ ಮಾತನ್ನಾಡಿರುವುದು ಇವರ ನಿಜವಾದ ಕಾಳಜಿಗೆ ಹಿಡಿದ ಕೈಗನ್ನಡಿ.

ವಾಸ್ತವವಾಗಿ ಬಜೆಟ್ಟನ್ನು ಫೆಬ್ರುವರಿಯಲ್ಲಿ ಮಂಡಿಸುವ ವಾಡಿಕೆ ಇದೆ. ಹೊಸ ಆರ್ಥಿಕ ವರ್ಷ ಶುರುವಾಗುವುದು ಏಪ್ರಿಲ್‍ನಲ್ಲಿ. ಈ ಏಪ್ರಿಲ್‍ನಿಂದ ಜೂನ್ ವರೆಗೆ ಮೂರು ತಿಂಗಳನ್ನು ತ್ರೈಮಾಸಿಕ ಅವಧಿಯನ್ನಾಗಿ ಪರಿಗಣಿಸಲಾಗುತ್ತದೆ. ಬಹುತೇಕವಾಗಿ ಈ ಅವಧಿಯಲ್ಲಿ ಹೊಸ ಕಾರ್ಯಕ್ರಮಗಳ ಸಿದ್ಧತೆ ಮಾತ್ರ ಇರುತ್ತದೆ. ಅರ್ಜಿ ಕರೆಯುವ ಪ್ರಕ್ರಿಯೆ ನಡೆದಿರುತ್ತದೆ. ಇಷ್ಟರಲ್ಲಿಯೇ ಆ ಮೂರು ತಿಂಗಳು ಮುಗಿದೇ ಹೋಗುತ್ತದೆ. ಇನ್ನು ಹಣ ಬಿಡುಗಡೆ ಆಗುವ ಪ್ರಶ್ನೆಯೇ  ಇಲ್ಲ ಎನ್ನುವುದು ಅಧಿಕಾರಿಗಳ ಅನುಭವದ ಮಾತುಗಳು.

ಇದರಲ್ಲಿ ನಿಜ ಇರಬಹುದು. ನಂತರದ ತ್ರೈಮಾಸಿಕ ಅವಧಿಗೆ ಕಂತು ಕಂತಾಗಿ ಹಣ ಮಂಜೂರಾಗಿ ಬರುತ್ತದೆ. ಅಲ್ಲಿಗೆ ಅರ್ಧ ವರ್ಷ ಮುಗಿದೇ ಹೋಗುತ್ತದೆ. ಈ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗಿಂತ ಮುಖ್ಯಮಂತ್ರಿ ಮತ್ತು ಸಚಿವರು ಬಂದು ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಕೆಲವು ಜಯಂತಿಗಳ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಯಥೇಚ್ಚವಾಗಿ ಖರ್ಚು ಮಾಡುತ್ತಾರೆ. ಹೀಗೆ ಯೋಜನಾರಹಿತ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡುವುದರಿಂದ ಅಧಿಕಾರಿಗಳು ಸಚಿವರು ಮತ್ತು ಶಾಸಕರನ್ನು ಮೆಚ್ಚಿಸಲು ಮಾಡುವ ಖರ್ಚಿನಲ್ಲಿ ಸಾಕಷ್ಟು ತಿಂದು ತೇಗಿಬಿಡುತ್ತಾರೆ.

ಇನ್ನು ಕೊನೆಯ ತ್ರೈಮಾಸಿಕದಲ್ಲಿ ಸರ್ಕಾರದ ಬಳಿ ಹಣವೇ ಇರುವುದಿಲ್ಲ. ತೆರಿಗೆ ಮತ್ತು ಕೇಂದ್ರದಿಂದ ಬರುವ ಹಣದಲ್ಲಿ ತಮಗೆ ಬೇಕಾದ ಇತರ ಆದ್ಯತಾ ಕ್ಷೇತ್ರಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ. ಅಲ್ಲಿಗೆ ಮುಗಿಯಿತು ದಲಿತೋದ್ಧಾರ! ಇದು ಸಾಮಾನ್ಯವಾಗಿ ಸರ್ಕಾರದ ಮಟ್ಟದಲ್ಲಿ ನಡೆಯುವ ಕಾರ್ಯಗಳು.

ದಲಿತರ ಮೇಲಿನ ದೌರ್ಜನ್ಯ: ಕರ್ನಾಟಕ ಎಂದರೆ ಸುಸಂಸ್ಕೃತ ಮತ್ತು ಅಭಿವೃದ್ಧಿ ಪಥದಲ್ಲಿರುವ ರಾಜ್ಯ ಎಂದು ನಾವು ಕೊಚ್ಚಿಕೊಳ್ಳುತ್ತೇವೆ. ಹಾಗೆಯೇ ಇನ್ನೂ ಊಳಿಗಮಾನ್ಯ ಸಾಮಾಜಿಕ ಆರ್ಥಿಕ ಸ್ಥಿತಿಯಲ್ಲಿರುವ ಉತ್ತರ ಭಾರತದ ರಾಜ್ಯಗಳ ರಾಜಕೀಯ ನಾಯಕರು ಮತ್ತು ಸಾಮಾಜಿಕ ಹೋರಾಟಗಾರರು ಸಹಾ ಕರ್ನಾಟಕದ ಸಾಧನೆಯನ್ನು ಹೊಗಳುತ್ತಾರೆ. ಆದರೆ ಕರ್ನಾಟಕದ ಮತ್ತೊಂದು ಮುಖದ ಪರಿಚಯ ಹಲವರಿಗೆ ತಿಳಿದಿರುವುದಿಲ್ಲ.

ದಲಿತರಲ್ಲಿ ಕಾಣುತ್ತಿರುವ ಶಿಕ್ಷಣ ಪ್ರಗತಿ, ಸ್ವಯಂ ಸಾಧನೆ ಮತ್ತು ತಮ್ಮ ಬದುಕನ್ನು  ತಾವು ಕಟ್ಟಿಕೊಳ್ಳಬೇಕೆನ್ನುವ ತಿಳಿವಳಿಕೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪರವಾಯಿಲ್ಲ ಎನ್ನುವ ಸಮಾಧಾನ ಕಾಣುತ್ತದೆ. ಜೊತೆಗೆ ನಾಲ್ಕು ದಶಕಗಳಿಂದ ನಡೆದಿರುವ ದಲಿತ ಸಂಘಟನೆಯ ಚಳವಳಿಯಿಂದ ಬಂದಿರುವ ಅರಿವನ್ನು ಬೇರೆ ಜಾತಿಯ ಜನರು ಸಹಿಸುತ್ತಿಲ್ಲ. ಅಸ್ಪೃಶ್ಯತೆ ಕಡಿಮೆ ಆಗಿರಬಹುದು. ಆದರೆ ಪರಿಶಿಷ್ಟರಲ್ಲಿನ ಅರಿವು ಮತ್ತು ಏಳಿಗೆಯನ್ನು ಸಹಿಸುವ ದೊಡ್ಡ ಮನಸ್ಸು ಬೇರೆ ಜಾತಿಗಳ ಜನರಲ್ಲಿ ಕಾಣುತ್ತಿಲ್ಲ. ಇದು ಕೇವಲ ಬ್ರಾಹ್ಮಣರು ಮಾತ್ರವಲ್ಲ ಹಳ್ಳಿಗಾಡಿನಲ್ಲಿ ದಲಿತರ ಮನೆಯ ಪಕ್ಕದಲ್ಲೇ ಇರುವ ಹಿಂದುಳಿದ ಜಾತಿಗಳು, ಒಕ್ಕಲಿಗರು ಮತ್ತು ಲಿಂಗಾಯಿತರೂ ದಲಿತರ ಅಭಿವೃದ್ಧಿಯನ್ನು ಸಹಿಸುತ್ತಿಲ್ಲ. ಅಸೂಯೆ ಎನ್ನುವುದು ಅವರಲ್ಲಿ ಮನೆ ಮಾಡಿದೆ.

ಹೀಗಾಗಿ ಸಣ್ಣಪುಟ್ಟ ಮತ್ತು ಸಕಾರಣವಿಲ್ಲದೆ ದಲಿತರ ಮೇಲೆ ದೌರ್ಜನ್ಯ ನಡೆಸುವ ಮೂಲಕ ತಮ್ಮ ಕೋಪತಾಪಗಳನ್ನು ಈ ವರ್ಗಗಳ ಜನರ ವಿರುದ್ಧ ತೀರಿಸಿಕೊಳ್ಳುತ್ತಿದ್ದಾರೆ. ಈ ಜಾತಿಗಳ ದರ್ಪ ದೌರ್ಜನ್ಯಗಳಿಗೆ ಹೆದರಿ ಬಹುತೇಕ ದಲಿತರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳಿಗೆ ಪ್ರತಿರೋಧ ತೋರುವುದಿಲ್ಲ. ಜೊತೆಗೆ ಪೊಲೀಸು ಠಾಣೆಗಳಿಗೂ ದೂರು ಕೊಡುವುದಿಲ್ಲ. ಆದರೂ ಪ್ರತಿ ನಿತ್ಯ ಮತ್ತು ಪ್ರತಿ ವರ್ಷ ಈ ಅಸಹಾಯಕ ಜನರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ನೋಡಿದರೆ ಅಚ್ಚರಿ ಆಗುತ್ತದೆ. ಕರ್ನಾಟಕ ನಿಜಕ್ಕೂ ಸುಸಂಸ್ಕೃತ ರಾಜ್ಯವೇ ಎಂದು ಅನುಮಾನ ಪಡುವಂತಾಗಿದೆ.

1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿರ್ಬಂಧ ಕಾಯ್ದೆಯಂತೆ ಕರ್ನಾಟಕದ ಪೊಲೀಸು ಠಾಣೆಗಳಲ್ಲಿ 2018ರಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ನೋಡಿದರೆ ಬೆಚ್ಚಿ ಬೀಳುವಂತಿದೆ. ಸರ್ಕಾರವೇ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳ ಪ್ರಕಾರ ಈ ಅವಧಿಯಲ್ಲಿ 164 ಅತ್ಯಾಚಾರ ಪ್ರಕರಣಗಳು ನಡೆದಿವೆ. ಹತ್ಯೆ ಯತ್ನ ಮತ್ತು ಹತ್ಯೆ ಆಗಿರುವ ಸಂಖ್ಯೆ 122 ಮತ್ತು ಇತರ ಪ್ರಕರಣಗಳು ಸೇರಿದಂತೆ ಒಟ್ಟು ಅಪರಾಧಗಳ ಪ್ರಮಾಣ 2,140. ಇದರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಹೆಚ್ಚಿನ ಪ್ರಕರಣಗಳು ನಡೆದಿರುವುದು. ನಾಗರಿಕರು, ಸುಶಿಕ್ಷಿತರು ನಗರೀಕರಣಗೊಂಡ ಪ್ರದೇಶದಲ್ಲೇ ಎಂತಹ ಕೌರ್ಯ ಮನೆ ಮಾಡಿದೆ ಎಂದು ಅರ್ಥವಾಗುತ್ತದೆ. ಇದರ ನಂತರ ಮೈಸೂರು ಮತ್ತು ಬೆಳಗಾವಿ ಜಿಲೆಗಳಲ್ಲಿ ಹೆಚ್ಚು ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ನಡೆದಿವೆ. ಅಂದರೆ ದಲಿತರ ಬಗೆಗೆ ಇರುವ ಅಸಹನೆ ಮತ್ತು ಅಸೂಯೆ ಇಲ್ಲಿ ಎದ್ದು ಕಾಣುತ್ತದೆ. ಇದಿಷ್ಟು ಪ್ರಕರಣದಲ್ಲಿ ಶೇ. 4.23 ಮಂದಿಗೆ ಶಿಕ್ಷೆ ಆಗಿದ್ದರೆ ಶೇ. 80.4 ರಷ್ಟು ಮಂದಿ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ. ಇದಲ್ಲದೆ ಶೇ. 33.12ರಷ್ಟು ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಉಳಿದಿವೆ. ಇದು ನಿಜಕ್ಕೂ ದುರಂತ.

ಒಂದು ಕಡೆ ದಲಿತರ ಅಭಿವೃದ್ಧಿಗೆಂದು ಮೀಸಲಿಟ್ಟ ಹಣ ಆ ಜನರಿಗೆ ತಲುಪಿಸುತ್ತಿಲ್ಲ. ಮತ್ತೊಂದು ಕಡೆ ಆ ಅಮಾಯಕ ಜನರು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದು ನಮ್ಮ ಸುಸಂಸ್ಕೃತ ಕರ್ನಾಟಕ !!!