ತಮಾಷೆಯ ಸಂಗತಿಯಾದ ದಲಿತ ಮುಖ್ಯಮಂತ್ರಿ ಬೇಡಿಕೆ !

ತಮಾಷೆಯ ಸಂಗತಿಯಾದ ದಲಿತ ಮುಖ್ಯಮಂತ್ರಿ ಬೇಡಿಕೆ !

ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ವಂಚಿಸಲಾಗಿದೆ; ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ಮುಖ್ಯಮಂತ್ರಿ ಆಗಬೇಕಿತ್ತು; ಪರಮೇಶ್ವರ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದೇ 2014ರ ಚುನಾವಣೆಯಲ್ಲಿ “ಕಾಂಗ್ರೆಸ್ಸಿನವರೇ ಸೋಲಿಸಿದರು” ಎಂಬ ಆರೋಪ ವಿರೋಧ ಪಕ್ಷಗಳ ನಾಯಕರಿಂದ ಕೇಳಿ ಬರುತ್ತಲೆ ಇದೆ.


ಅದೇ ರೀತಿ ಕಾಂಗ್ರೆಸ್ ಮುಖಂಡರಿಂದ “ಖರ್ಗೆ ಅವರನ್ನು ಮುಖ್ಯಮಂತ್ರಿ ಆಗದಂತೆ ಯಾರೂ ತಡೆದಿಲ್ಲ.” ಎನ್ನುವ ಪ್ರತಿಕ್ರಿಯೆಗಳೂ ಕೇಳಿ ಬರುತ್ತಿವೆ.
ಈಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಏಳು ಮೀಸಲು ಕ್ಷೇತ್ರಗಳೂ ಬಿಜೆಪಿಯ ಪಾಲಾಗಿವೆ. ಆದರೂ ಬಿಜೆಪಿ (ಪ್ರಧಾನಿ ಮೋದಿ)  ಅವರು ದಲಿತರೊಬ್ಬರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲಾಗಿಲ್ಲ.ಇದರಿಂದ ಗೊತ್ತಾಗುತ್ತದೆ ಬಿಜೆಪಿ ದಲಿತರ ಬಗೆಗೆ ಎಂತಹ ಮನೋಭಾವವನ್ನು ಹೊಂದಿದೆ ಎಂದು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವರು ಬಿಜೆಪಿಯನ್ನು ಟೀಕಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು “ದಲಿತರ ಮೇಲೆ ಪ್ರೀತಿ ಇದ್ದರೆ ಖರ್ಗೆ ಅಥವಾ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಿ” ಎಂಬ ಸವಾಲನ್ನು ಕಾಂಗ್ರೆಸ್ಸಿನತ್ತ ಎಸೆದರು.


ದಲಿತ ವರ್ಗದ ಕೆಲವು ಸಂಘಟನೆಗಳ ನಾಯಕರಂತು ಕಳೆದ ಐದಾರು ವರ್ಷಗಳಿಂದ “ದಲಿತರನ್ನು ಮುಖ್ಯಮಂತ್ರಿ ಮಾಡಿ” ಎಂದು ಪತ್ರಿಕಾ ಹೇಳಿಕೆಗಳ ಮೂಲಕ ದುಂಬಾಲು ಬಿದ್ದವರಂತೆ ಕಾಡಿಬೇಡುತ್ತಿದ್ದಾರೆ. ಪದೇ ಪದೇ ಮಾತಿನ ಸಮರಕ್ಕೆ ಎಡೆಕೊಡುತ್ತಿರುವ ಈ ಸಂಗತಿ ಈಗ ಒಂದು ತಮಾಷೆಯ ವಿಷಯವಾಗಿರುವುದು ದುರದೃಷ್ಟಕರ.


ವಾಸ್ತವವಾಗಿ ಯಾರೂ ಯಾವ ಪಕ್ಷವೂ ದಲಿತರಿಗೆಂದು ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಲಿ ಅಥವಾ ಬಿಟ್ಟುಕೊಡುವುದಾಗಲಿ ಸಾಧ್ಯವಿಲ್ಲದ ಮಾತು. ಮುಖ್ಯಮಂತ್ರಿ ಸ್ಥಾನ ಬಯಸಿರುವ ದಲಿತರು ಆ ಸ್ಥಾನವನ್ನು ಕಾಡಿ ಬೇಡಿ ಪಡೆಯುವುದಕ್ಕಿಂತ ಕಿತ್ತುಕೊಳ್ಳಬೇಕೆನ್ನುವ ರಾಜಕೀಯ ಇಚ್ಛಾಶಕ್ತಿ ಅಥವಾ ಜನಶಕ್ತಿಯನ್ನು ಪ್ರದರ್ಶನ ಮಾಡಿದ ಉದಾಹರಣೆಯೂ ಇಲ್ಲ.


ಯಾರೇ ಆಗಲಿ ಒಂದು ರಾಜ್ಯದ ಅಧಿಕಾರ ಹಿಡಿಯುವುದು ಅಷ್ಟು ಸುಲಭ ಅಲ್ಲ. 1970 ರಿಂದೀಚೆಗೆ ಕರ್ನಾಟಕದಲ್ಲಿ ಯಾರಿಗೆ ಹೇಗೆ ಅಧಿಕಾರ ಸಿಕ್ಕಿತು ಎನ್ನುವ ಒಂದು ರಾಜಕೀಯ ನೋಟವನ್ನು ನೋಡೋಣ.


ಈ ರಾಜಕೀಯ ಅಧಿಕಾರವನ್ನು ಪಡೆಯುವ ಅದನ್ನು ಪಡೆಯಲು ಸ್ವಜಾತಿಯ ಶಕ್ತಿ ಬೆನ್ನಿಗಿರಬೇಕು. 1970 ರ ನಂತರ ಕಾಂಗ್ರೆಸ್ ಒಡೆದು ಹೋಳಾಯಿತು. ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ (ಆರ್), ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಓ) ಆಯಿತು. ಇಂದಿರಾ ಗಾಂಧಿ ಅವರು ಪಕ್ಷ ಹೋಳಾದ ಮೇಲೆ ದಲಿತರು ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ಉದ್ಧಾರಕ್ಕೆ ಎನ್ನುವಂತೆ ಧುತ್ತನೆ ರಾಜಕೀಯ ಶಕ್ತಿ ಬೆಳೆಸಿಕೊಂಡರು. “ಗರೀಬಿ ಹಠಾವೋ” ಎನ್ನುವ ಘೋಷಣೆಯಿಂದ ಈ ಅಸಹಾಯಕ ವರ್ಗಗಳ ಬೆಂಬಲ ಪಡೆದರು. ದೇಶದಾದ್ಯಂತ ರಾಜಕೀಯ ಶಕ್ತಿ ಬೆಳೆಸಿಕೊಂಡರು. ಹಾಗಾಗಿ ತಮಗೆ ಬೇಕಾದವರನ್ನು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನಾಗಿ ಮಾಡುವ ಶಕ್ತಿ ಪಡೆದರು.


ಹಾಗಾಗಿ ಡಿ. ದೇವರಾಜ ಅರಸು ಅವರನ್ನು ರಾಜ್ಯದಲ್ಲಿ ಕಾಂಗ್ರೆಸ್ (ಆರ್) ಅಧ್ಯಕ್ಷರನ್ನಾಗಿ ಮಾಡಿ 1971ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು. ಇಂದಿರಾ ಗಾಂಧಿ ಅವರು ಅರಸು ಅವರನ್ನು ಅಧಿಕಾರಕ್ಕೆ ಕೂರಿಸಿದರು. ನಂತರ ಆರ್. ಗುಂಡೂರಾವ್ ಅವರನ್ನು ಅರಸು ಉತ್ತರಾಧಿಕಾರಿಯನ್ನಾಗಿ ಮಾಡಿದರು. ಗುಂಡೂರಾವ್ ಆಡಳಿತದಿಂದ ರೋಸಿಹೋದ ಮೇಲೆ ಜನತಾ ಪಕ್ಷ ಮತ್ತು ಬಂಗಾರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತು. ಆದರೆ ಸ್ಥಳೀಯವಾಗಿ ಬಂಗಾರಪ್ಪ, ಎಚ್.ಡಿ. ದೇವೇಗೌಡ ಮತ್ತು ಎಸ್. ಆರ್ ಬೊಮ್ಮಾಯಿ ಅವರ ನಡುವೆ ಹೊಂದಾಣಿಕೆ ಇಲ್ಲದೆ ದೆಹಲಿಯಿಂದ ರಾಮಕೃಷ್ಣ ಹೆಗಡೆ ಬಂದು ಮುಖ್ಯಮಂತ್ರಿ ಆದರು. 1985 ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಹೆಗಡೆ ಅವರು ಸ್ವಂತ ಬಲದಿಂದ ಆ ಸ್ಥಾನ ಪಡೆದರು.


ರಾಜ್ಯದ ರಾಜಕೀಯ ಇತಿಹಾಸವನ್ನು ನೋಡಿದಾಗ ಜಾತಿಬಲದಿಂದ ಬೆಳೆದ ವೀರೇಂದ್ರ ಪಾಟೀಲ್, ಎಸ್. ಆರ್ ಬೊಮ್ಮಾಯಿ, ಎಚ್.ಡಿ ದೇವೇಗೌಡರು ಮುಖ್ಯಮಂತ್ರಿ ಆದರು. ಬಂಗಾರಪ್ಪ ಅಬ್ಕಾರಿದೊರೆಗಳ ಹಣಬಲದಿಂದ ಕಾಂಗ್ರೆಸ್ ಹೈಕಮಾಂಡ್ ವಿಶ್ವಾಸಗಳಿಸಿ ಮುಖ್ಯಮಂತ್ರಿ ಆದರು. ವೀರಪ್ಪ ಮೊಯಿಲಿ ಅವರಿಗೆ ಜಾತಿ ಬಲ ಇಲ್ಲದಿದ್ದರೂ ಹೈಕಮಾಂಡಿನ ಬೆಂಬಲದಿಂದ ಮುಖ್ಯಮಂತ್ರಿ ಆದರು. ಜೆ.ಎಚ್. ಪಟೇಲರಿಗೂ ಜಾತಿ ಬೆಂಬಲ ಇದ್ದುದರಿಂದ ಅಧಿಕಾರ ಪಡೆದರು. ಅದೇ ಸಂಪ್ರದಾಯದಂತೆ ಇತ್ತೀಚಿನ ವರ್ಷಗಳಲ್ಲಿ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದರು. ದೇವೇಗೌಡರ ಕೃಪಾಕಟಾಕ್ಷದಿಂದ ಧರ್ಮಸಿಂಗ್ ಅಧಿಕಾರ ಪಡೆದರು. ಇದು ರಾಜ್ಯದ ವಾಸ್ತವ ಚಿತ್ರ.


ಪರಿಸ್ಥಿತಿ ಹೀಗಿರುವಾಗ ಜಾತಿಬೆಂಬಲ ಗಳಿಸದ ಮಲ್ಲಿಕಾರ್ಜುನ ಖರ್ಗೆ ಅವರಾಗಲಿ ಡಾ. ಜಿ. ಪರಮೇಶ್ವರ್ ಅವರಾಗಲಿ ಮುಖ್ಯಮಂತ್ರಿ ಆಗುವ ಕನಸು ಕನಸಾಗಿಯೇ ಉಳಿದಿದೆ. ಇವರನ್ನು ಮೇಲಿನಿಂದ ಕುಳ್ಳಿರಿಸಲು ಕಾಂಗ್ರೆಸ್ ಹೈಕಮಾಂಡ್ ಶಕ್ತವಾಗಿಲ್ಲ. ಸ್ಥಳೀಯ ನಾಯಕರೇ ಹೈಕಮಾಂಡ್ ಗಿಂತ ಬಲಿಷ್ಠರು.


ಈ ಮುಖ್ಯಮಂತ್ರಿ ಸ್ಥಾನ ದಲಿತ ವರ್ಗಕ್ಕೆ ಏಕೆ ದಕ್ಕುತ್ತಿಲ್ಲ ಎನ್ನುವ ಬಗೆಗೆ ಇಲ್ಲಿದೆ ಒಂದು ನೋಟ:


ಕರ್ನಾಟಕದಲ್ಲಿ ಹಿಂದಿನ ಸಲದ ಅಂದರೆ 2014 ರ ವಿಧಾನ ಸಭೆ ಚುನಾವಣೆಯ ದಿನಗಳಲ್ಲಿ ಒಂದು ದಿನ ರಾತ್ರಿ ಮಿತ್ರರೊಬ್ಬರು ನನ್ನನ್ನು ತಮ್ಮ ಮನೆಗೆ ಊಟಕ್ಕೆ ಆಮಂತ್ರಿಸಿದ್ದರು. ಆ ಭೋಜನ ಕೂಟದಲ್ಲಿದ್ದ ನಾಲ್ಕು ಮಂದಿಯಲ್ಲಿ ಅವರ ಆಪ್ತರಾದ ಇನ್ನಿಬ್ಬರನ್ನೂ (ಇಬ್ಬರೂ ಲಿಂಗಾಯಿತರು) ಊಟಕ್ಕೆ ಆಮಂತ್ರಿಸಿದ್ದರು. ಚುನಾವಣೆ ವೇಳೆ ಸಹಜವಾಗಿಯೇ ಟಿವಿ ನೋಡುತ್ತಾ ರಾಜಕೀಯ ಚರ್ಚೆ ನಡೆದಿತ್ತು. ಆ ವೇಳೆಗೆ ಚುನಾವಣಾ ಸುದ್ದಿ ಪ್ರಸಾರ ಮಾಡುತ್ತಿದ್ದ ಟಿವಿ ವಾಹಿನಿಯೊಂದರಲ್ಲಿ ಯಡಿಯೂರಪ್ಪ ಕಾಣಿಸಿಕೊಂಡರು. ‘ನಾಯಕ ಎಂದರೆ ಯಡಿಯೂರಪ್ಪ ಸರ್. ಇವರು ಮತ್ತೆ ಮುಖ್ಯಮಂತ್ರಿ ಆಗಬೇಕು’ ಎಂದು ಲಿಂಗಾಯಿತ ಗೆಳೆಯರೊಬ್ಬರು ತಮ್ಮ ಮನದಾಳದ ಆಸೆಯನ್ನು ಹೊರಹಾಕಿದರು. ‘ಅಯ್ಯೋ ಕೆಜೆಪಿ ಎಲ್ಲಿ ಅಧಿಕಾರಕ್ಕೆ ಬರುತ್ತೆ ಬಿಡೋ ಮಾರಾಯ’ ಎಂದು ಇನ್ನೊಬ್ಬ ಲಿಂಗಾಯಿತ ಗೆಳೆಯ ಹೇಳುತ್ತಾ, ‘ಈ ಬಾರಿ ಮುಖ್ಯಮಂತ್ರಿ ಆಗೋದು ಡಿಕೆಸಿ’ ಎಂದು ತಮ್ಮ ರಾಜಕೀಯ ಪಾಂಡಿತ್ಯವನ್ನು ಹರಿಯ ಬಿಟ್ಟರು. ಆಗ ನಾನು ಈ ಬಾರಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುವುದು. ಆಗ ಡಾ. ಜಿ. ಪರಮೇಶ್ವರ್ ಇಲ್ಲವೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಹುದು. ಇದಕ್ಕಿಂತ ಬೇರೇನು ಆಗುವ ಸಾಧ್ಯತೆ ಕಾಣುತ್ತಿಲ್ಲ ಎಂದೆ.


ಆಗ ಡಿಕೆಸಿ ಪರ ಮಾತನಾಡಿದ್ದ ವ್ಯಕ್ತಿ ‘ ಎಸ್ ಸಿ ಯವರು ಮಾತ್ರ ಸಿಎಂ ಆಗ್ ಬಾರ್ದು ಸರ್’ ಎಂದು ಪದೇ ಪದೇ  ಹೇಳಿದರು. ಆಗ ನಾನು “ಯಾಕೆ ದಲಿತರು ಮುಖ್ಯಮಂತ್ರಿ ಆಗಬಾರದು?’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರಿಂದ ಬಂದ ಉತ್ತರ ಎಸ್ ಸಿ ಯವರು ಆಗಬಾರ್ದು ಸರ್’ ಎಂದು ಪದೇ ಪದೇ ಹೇಳಿದ್ದನ್ನು ಬಿಟ್ಟರೆ ಅವರ ಮನಸ್ಸಿನಲ್ಲಿದ್ದ ನಿಜವಾದ ಕಾರಣವನ್ನು ಹೊರಹಾಕಲು ಇಷ್ಟಪಡಲಿಲ್ಲ. ಇದು ದಲಿತರ ಬಗೆಗೆ ಕರ್ನಾಟಕದ ಬಹುತೇಕ ಜನರ ಮನಃಸ್ಥಿತಿ. ಇದು ಪ್ರತಿಯೊಂದು ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಮುಖಂಡರ ಮನಃಸ್ಥಿತಿಯೂ ಹೌದು. ಅಂದ ಮಾತ್ರಕ್ಕೆ ಎಲ್ಲರ ದೃಷ್ಟಿಕೋನವೂ ಇದೇ ಆಗಿರುತ್ತದೆ ಎನ್ನುವ ತೀರ್ಮಾನಕ್ಕೆ ಬರಲಾಗದು. ಭಾರತೀಯರ ಜಾತಿ ಮನಸ್ಸನ್ನು ಚೆನ್ನಾಗಿ ಅಧ್ಯಯನ ಮಾಡಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳುವುದು “Caste is a State of Mind it is Disease of Mind"


ಈ ಚರ್ಚೆಯ ಕೆಲ ದಿನಗಳ ನಂತರ ಚುನಾವಣೆ ನಡೆದು ಫಲಿತಾಂಶವೂ ಬಂದಿತು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಪರಮೇಶ್ವರ್ ಮುಖ್ಯಮಂತ್ರಿ ಆಗುವ ಕನಸ್ಸನ್ನು ಜನರೇ ನುಚ್ಚು ನೂರು ಮಾಡಿದ್ದರು. ಪರಮೇಶ್ವರ್ ಅವರು ಮುಖ್ಯಮಂತ್ರಿ ಆಕಾಂಕ್ಷಿ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಕಾರಣ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದ್ದರೂ ಅದು ನನಸಾಗಲು ಜನರೇ ಬಿಡಲಿಲ್ಲ. ಕೊರಟಗೆರೆ ಕ್ಷೇತ್ರದ ಜನರು ಹೀನಾಯವಾಗಿ ಅವರಿಗೆ ಸೋಲಿನ ನೋವು  ನೀಡಿದ್ದರು. ಸ್ವಜಾತಿಯ ಬೆಂಬಲದಿಂದ ಒಬ್ಬ ನಾಯಕನಾಗಿ ವರ್ಚಸ್ಸು ಬೆಳೆಸಿಕೊಂಡು  ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿದ್ದರೂ ಕೆಲವು ಮಾಧ್ಯಮಗಳು ಚುನಾವಣೆ ಕಾಲದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಪ್ರತಿಬಿಂಬಿಸಿದ್ದೂ ಕೂಡ ಅವರಿಗೆ ಅನುಕೂಲಕರ ಸ್ಥಿತಿ ಒದಗಿದ್ದೂ ನಿಜ.


ಹಿರಿಯ ಕಾಂಗ್ರೆಸ್ಸಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು 2006 ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಜನರೇ ಪಕ್ಷ ಅಧಿಕಾರಕ್ಕೆ ಬಾರದಂತೆ ಮಾಡಿದ್ದರು. ದಲಿತ ವರ್ಗಕ್ಕೆ ಸೇರಿದ ಪರಮೇಶ್ವರ್ ಅವರು ಅಧ್ಯಕ್ಷರಾದಾಗಲೂ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯೇ ಆಗದಂತೆ ಜನರು ಅವರನ್ನು ಸೋಲಿಸುವ ಮೂಲಕ ಅವಮಾನಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ಪಕ್ಷದ ಅನುಮತಿ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಸೋಲುಂಡರು. ಆದರೆ ಚುನಾಯಿತ ಕಾಂಗ್ರೆಸ್ಸಿಗರು, ಖರ್ಗೆ ಅವರನ್ನು ಮೇಲ್ನೊಟಕ್ಕೆ ಹಿರಿಯರೆಂದು ಗೌರವದಿಂದ ನಡೆದುಕೊಂಡರೂ, ಅವಕಾಶ ಬಂದಾಗ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ! ನಲವತ್ತೇಳು ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದು ಒಮ್ಮೆಯೂ ಸೋಲರಿಯದೆ ಕೇವಲ ಆರೇಳು ವರ್ಷಗಳ ಹಿಂದೆ ಕಾಂಗ್ರೆಸ್ಸಿಗೆ ಬಂದ ಸಿದ್ದರಾಮಯ್ಯನವರ ಮುಂದೆ ಖರ್ಗೆ ಅವರು ಪರಾಭವಗೊಂಡು ಅನವಶ್ಯಕವಾಗಿ ಮುಖಭಂಗಕ್ಕೆ ಒಳಗಾದದ್ದು ಇತಿಹಾಸದ ವ್ಯಂಗ್ಯ.


ಪಕ್ಷದ ಸಾರಥ್ಯವನ್ನು ಹಿಡಿದು ಪಕ್ಷ ಅಧಿಕಾರಕ್ಕೆ ಬರಲು ತಮ್ಮ ಪಾತ್ರವಿದ್ದರೂ ಸೋತ ಪರಮೇಶ್ವರ್ ‘ಊರೆಲ್ಲ ಹಬ್ಬ ಆಚರಿಸುವಾಗ ಸೂತಕದ ಮನೆಯವರಂತೆ’ ದುಃಖಿತರಾಗಿ ಮನೆಯಲ್ಲಿರಬೇಕಾಯಿತು! ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಪಕ್ಷದ ಅಧ್ಯಕ್ಷರು ಚುನಾವಣೆಯಲ್ಲಿ ವ್ಯಯಕ್ತಿಕವಾಗಿ ಸೋತಿದ್ದರೂ ಅವರನ್ನು ಉಪಮುಖ್ಯಮಂತ್ರಿ ಇಲ್ಲವೇ ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಆಗಲಿ ಅಥವಾ ಮುಖ್ಯಮಂತ್ರಿ ಸ್ಥಾನದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರಾಗಲಿ ‘ದೊಡ್ಡತನ’ ಮೆರೆಯಲಿಲ್ಲ.


ಆನಂತರದ ದಿನಗಳಲ್ಲಿ ಪರಮೇಶ್ವರ್ ಅವರು ಪರೋಕ್ಷವಾಗಿ ಮತ್ತು ಕೆಲವೊಮ್ಮೆ ಪ್ರತ್ಯಕ್ಷವಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟರೂ ಎರಡು ವರ್ಷಗಳ ನಂತರ ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಿ ಕೊನೆಗೆ ಗೃಹ ಸಚಿವ ಸ್ಥಾನಕ್ಷಷ್ಟೇ ತೃಪ್ತಿಪಡಿಸಲಾಗಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳಿಂದ ಮತ್ತು ಬೇರೆ ಬೇರೆ ಮೂಲಗಳಿಂದ ದಲಿತ ವರ್ಗದವರೊಬ್ಬರನ್ನು ಕಾಂಗ್ರೆಸ್ ಪಕ್ಷವು, ಮುಖ್ಯಮಂತ್ರಿಯನ್ನಾಗಿ ಮಾಡಬೇಕೆನ್ನುವ ಒತ್ತಾಯ ಆಗಿಂದ್ದಾಗ್ಗೆ ಕೇಳಿ ಬರುತ್ತಲೇ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಲಿತರ ಪಾತ್ರ ಸಿಂಹಪಾಲು ಇದೆ ಎನ್ನುವುದನ್ನು ತಳ್ಳಿಹಾಕಲಾಗದು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸನ್ನು ನಿರಂಗರವಾಗಿ ಬೆಂಬಲಿಸಿಕೊಂಡೇ ಬಂದ ದಲಿತರು ಮತ್ತು ಆ ವರ್ಗದ ಪ್ರಭಾವಿ ನಾಯಕರಿದ್ದರೂ ಮುಖ್ಯಮಂತ್ರಿ ಸ್ಥಾನದಿಂದ ದಲಿತರು ಪದೇ ಪದೇ ವಂಚಿತರಾಗುತ್ತಿದ್ದಾರೆನ್ನುವ ನೋವಿನ ಕೂಗು ಧ್ವನಿಸುತ್ತಲೇ ಇದೆ.


ವಾಸ್ತವವಾಗಿ ಮುಖ್ಯಮಂತ್ರಿ ಸ್ಥಾನ ಈಗ ಖಾಲಿ ಇಲ್ಲ ಎನ್ನುವುದು ನಿಜ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗೆಗೆ ಕೆಲವರಿಗೆ ಅಸಮಾಧಾನವಿದ್ದರೂ ಅವರ ವಿರುದ್ಧ ಭಿನ್ನಮತೀಯ ಚಟುವಟಿಕೆಯೇನೂ ನಡೆಯುತ್ತಿಲ್ಲ. ಹಾಗಿದ್ದರೂ ದಲಿತ ಮುಖ್ಯಮಂತ್ರಿಯ ಬೇಡಿಕೆಯಂತು ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಈ ಬೇಡಿಕೆ ಪಕ್ಷದೊಳಗಿನ ಒತ್ತಾಯಕ್ಕಿಂತ ಹೊರಗಿನಿಂದ ಮಾತ್ರ ಕೇಳಿ ಬರುತ್ತಿರುವುದರಿಂದ ಸಿದ್ದರಾಮಯ್ಯನವರ ಖುರ್ಚಿ ಅಲುಗಾಡುತ್ತಿಲ್ಲ. ಹೊರಗಿನಿಂದ ಕೇಳಿಬರುತ್ತಿರುವ ಈ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಮುಜುಗರ ಎದುರಿಸುತ್ತಲೇ ಈ ಪೂರ್ಣ ಅವಧಿಗೆ ನಾನೇ ಮುಖ್ಯಮಂತ್ರಿ ಎಂದು ಉತ್ತರಿಸುತ್ತಲೇ ಬಂದಿದ್ದಾರೆ.


ದಲಿತ ವರ್ಗದಿಂದ ಕೇಳಿ ಬರುತ್ತಿರುವ ಈ ಹಕ್ಕೊತ್ತಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಯಾವ ಕಿಮ್ಮತ್ತೂ ಸಿಗುತ್ತಿಲ್ಲ. ಹಿರಿಯ ಪತ್ರಕರ್ತ 92 ರ ವಯೋವೃದ್ಧ ಪಾಟೀಲ ಪುಟ್ಟಪ್ಪ ಕೆಲವು ತಿಂಗಳ ಹಿಂದೆ ದಲಿತರ ಈ ಬೇಡಿಕೆಯನ್ನು ‘ತಿರುಕನ ಕನಸು’ ಎಂದು ಗೇಲಿ ಮಾಡುವ ಮೂಲಕ ಕರ್ನಾಟಕದ ಜನರ ಮನಃಸ್ಥಿತಿ ಏನೆಂಬುದನ್ನು ತಮ್ಮ ಮಾತಿನಲ್ಲಿ ಸಾಬೀತುಪಡಿಸಿದರು. ಆದರೆ ಕಾಂಗ್ರೆಸ್ಸಿನ ಸಂಪ್ರದಾಯ ಮತಗಳ ದಲಿತರು ಇಂತಹ ಹಕ್ಕೊತ್ತಾಯ ಮಾಡುತ್ತಿರುವುದು ಅಸಹಾಯಕ ಸ್ಥಿತಿಯ ಪ್ರತೀಕ. ಈ ಅಸಹಾಯಕತೆಯ ಹಿಂದೆ ಇರುವ ತರ್ಕವನ್ನು ಗಮನಿಸಬೇಕು. ಈ 69 ವರ್ಷಗಳಲ್ಲಿ ಎಂಟು ಮಂದಿ ಲಿಂಗಾಯಿತರು, ಏಳು ಮಂದಿ ಒಕ್ಕಲಿಗರು, ಇಬ್ಬರು ಬ್ರಾಹ್ಮಣರು, ತಲಾ ಒಬ್ಬರಂತೆ ಅರಸು, ಈಡಿಗ, ರಜಪೂತ ಮತ್ತು ಕುರುಬರು ಮುಖ್ಯಮಂತ್ರಿ ಆಗಿರುವುದರಿಂದ ದಲಿತರು ಪ್ರಜಾ ಪ್ರಭುತ್ವದಲ್ಲಿ ಸಿಗದ ತಮ್ಮ ಪಾಲನ್ನು ಕೇಳಲು ಆರಂಭಿಸಿದ್ದಾರಷ್ಟೆ. 


ಜನತಂತ್ರದಲ್ಲಿನ ರಾಜಕೀಯ ಸಿದ್ಧಾಂತ ಏನೇ ಹೇಳಲಿ ಒಂದು ರಾಜಕೀಯ ಪಕ್ಷ ಅಧಿಕಾರ ರಾಜಕಾರಣದಲ್ಲಿ ಅನುಸರಿಸುವ ರಾಜಕೀಯ ಮಾನದಂಡ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೇರುವ ‘ನಾಯಕ’ ವಾಸ್ತವವಾಗಿ ನಡೆಸುವ ಕಸರತ್ತೇ ಬೇರೆ. ಇದುವರೆಗೆ ಕಾಂಗ್ರೆಸ್ ಅಥವಾ ಜನತಾದಳ ಹಾಗು ಬಿಜೆಪಿ ಅನುಸರಿಸಿಕೊಂಡು ಬಂದಿರುವ ದಾರಿಯನ್ನು ನೋಡಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವ ವ್ಯಕ್ತಿಯ ಬೆನ್ನಹಿಂದೆ ಇರುವ ಸ್ವಜಾತಿಬಲ ಮತ್ತು ಹಣಬಲ ಮತ್ತು ಆತನಿಗೆ ಶಾಸಕಾಂಗ ಪಕ್ಷದಲ್ಲಿ ಇರುವ ಬೆಂಬಲವೇ ಮುಖ್ಯ ಅಳತೆಗೋಲಾಗಿದೆ. ಪಕ್ಷದ ನಾಯಕತ್ವ  (ಹೈಕಮಾಂಡ್) ಬಲವಾಗಿದ್ದು, ಆ ನಾಯಕತ್ವದ ವರ್ಚಸ್ಸಿನಿಂದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿಕೊಡುವ ಶಕ್ತಿ ಇದ್ದರೆ ತನಗೆ ಬೇಕಾದವರನ್ನು ಕೂರಿಸಿ ಆತನಿಗೆ ತನ್ನ ಶಕ್ತಿ ತುಂಬುತ್ತದೆ. ಆದರೆ ಸದ್ಯ ಕಾಂಗ್ರೆಸ್ಸಿನ ಪರಿಸ್ಥಿತಿ ಹಾಗಿಲ್ಲ. ಇಲ್ಲೀಗ ಸ್ಥಳೀಯ ನಾಯಕತ್ವವೇ ಬಲಶಾಲಿ. ಇದರ ಪರಿಣಾಮ ಪಕ್ಷದ ಹೈಕಮಾಂಡ್ ನಿಷ್ಕ್ರಿಯ ಮತ್ತು ಅಸಹಾಯಕವಾಗುವುದು ರಾಜಕೀಯ ಆಳ ಅಗಲವನ್ನು ಬಲ್ಲವರಿಗೆ ತಿಳಿಯದ ಸಂಗತಿಯೇನಲ್ಲ.


ರಾಜ್ಯದಲ್ಲಿ ಹೆಸರಿಗೆ ಕಾಂಗ್ರೆಸ್ಸ್ ಹೆಸರಿನ ಸರ್ಕಾರವಿದ್ದರೂ ಅದು ‘ಜನತಾ ಕಾಂಗ್ರೆಸ್’ ಸರ್ಕಾರ’ ಮತ್ತು ‘ಸಿದ್ದರಾಮಯ್ಯನವರ ಸರ್ಕಾರ’ ಎಂದು ಹೇಳುವವರು ಸಂಪುಟದಲ್ಲೇ ಇದ್ದಾರೆ. ಅಂದರೆ ಸಿದ್ದರಾಮಯ್ಯನವರಿಗೆ ತಮ್ಮ ಪೂರ್ವಾಶ್ರಮದ ಜನತಾ ಪರಿವಾರದಿಂದ ಬಂದಿರುವ ಶಾಸಕರ ಬೆಂಬಲ ಮತ್ತು ಅವರ ಜಾತಿ ಬಲದಿಂದ ಪಕ್ಷವನ್ನು ಅಧಿಕಾರಕ್ಕೆ ತಂದವರು ಎನ್ನುವ ಕೃತಾರ್ಥಭಾವ ಹಲವು ಕಾಂಗ್ರೆಸ್ಸಿಗರಲ್ಲಿದೆ. ಹಾಗಾಗಿ ಅನೇಕ ವಿಷಯಗಳಲ್ಲಿ ದುರ್ಬಲಗೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಕಣ್ಣಿದ್ದೂ ಕುರುಡಾಗಿದೆ. ಕಿವಿ ಇದ್ದೂ ಕಿವುಡಾಗಿದೆ.


ಸದ್ಯದ ರಾಜಕೀಯ ಸ್ಥಿತಿಗತಿಯನ್ನು ಅವಲೋಕಿಸಿದರೆ ನಾಯಕತ್ವ ಬದಲಾವಣೆ ಮಾಡುವ ಸಾಧ್ಯತೆಗಳು ಪ್ರಶ್ನಾರ್ಥಕವಾಗಿವೆ. ಅಂದರೆ ಮೇಲ್ನೋಟಕ್ಕೆ ಎಲ್ಲ ಸಾಧ್ಯತೆಗಳೂ ಮುಕ್ತವಾಗಿವೆ. ಈಗ ಉಳಿದಿರುವ ಈ ಎರಡು ವರ್ಷಗಳ ಅವಧಿಗಾದರೂ ಕಾಂಗ್ರೆಸ್ ಪಕ್ಷವು ದಲಿತ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆನ್ನುವ ಆಶಯವನ್ನಿಟ್ಟುಕೊಂಡಿರುವವರ ಒತ್ತಾಯವಾಗಿದೆ. ಅಂದರೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ದಲಿತ ವರ್ಗದ ನಾಯಕರೊಬ್ಬರನ್ನು ಆ ಸ್ಥಾನಕ್ಕೆ ಕೂರಿಸಬೇಕೆನ್ನುವ ಬಯಕೆ ಸ್ವಷ್ಟವಾಗಿದೆ. ಆದರೆ ಇಂತಹ ಒಂದು ಒತ್ತಡ ಕಾಂಗ್ರೆಸ್ ಶಾಸಕಾಂಗ ಪಕ್ಷದೊಳಗೆ ಕೇಳಿಬರುತ್ತಿಲ್ಲದಿರುವುದು ಸಿದ್ದರಾಮಯ್ಯ ಅವರಿಗೆ ಶ್ರೀರಕ್ಷೆಯಾಗಿದೆ. ಶಾಸಕಾಂಗ ಪಕ್ಷದೊಳಗೆ ಇಂತಹ ಬೇಡಿಕೆ ಬಂದಿದ್ದರೆ ಪರಿಸ್ಥಿತಿಯೇ ಬೇರೆ ಆಗುತ್ತಿತ್ತು. ಅಂತಹವೊಂದು ಪರಿಸ್ಥಿತಿ ಉಂಟುಮಾಡಲು ಅಲ್ಲೊಬ್ಬ ಸಮರ್ಥ ಭಿನ್ನಮತೀಯ ದಲಿತ ನಾಯಕರೊಬ್ಬರು ಹುಟ್ಟಿಕೊಳ್ಳಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. ಆಗುವ ಸಾಧ್ಯತೆಯೂ ಕಾಣುತ್ತಿಲ್ಲ. 


ಮುಖ್ಯಮಂತ್ರಿಯ ನಾಯಕತ್ವವನ್ನು ಪ್ರಶ್ನಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಶಕ್ತಿಯುತ ನಾಯಕನೊಬ್ಬ ಸೆಡ್ಡುಹೊಡೆದು ನಿಂತು, ಶಾಸಕರನ್ನು ತನ್ನತ್ತ ಸೆಳೆಯುವ ದುರೀಣನ ಕೊರತೆ ಕಾಣುತ್ತಿದೆ. ಮುಖ್ಯಮಂತ್ರಿ ಸ್ಥಾನದ ಆಸೆ ಇಟ್ಟುಕೊಂಡಿರುವ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಅಸಹಾಯಕರಾಗಿ ಎಲ್ಲದಕ್ಕೂ ಪಕ್ಷದ ಹೈಕಮಾಂಡ್ ನತ್ತ ನೋಡುತ್ತಿದ್ದಾರೆ. ಹೈಕಮಾಂಡ್ ಮಾತ್ರ ಮೌನಕ್ಕೆ ಶರಣಾಗಿದೆ. ಪಕ್ಷದ ಶಿಸ್ತಿನ ಸಿಪಾಯಿಗಳೆನಿಸಿಕೊಂಡ ಈ ಇಬ್ಬರು ನಾಯಕರಿಂದ ಅಧಿಕಾರಕ್ಕಾಗಿ ವಾಮಮಾರ್ಗವನ್ನು ಅನುಸರಿಸುತ್ತಾರೆನ್ನಲಾಗದು.


ರಾಜ್ಯದ ರಾಜಕೀಯ ಇತಿಹಾಸವನ್ನೇ ನೋಡಿದರೆ, ಬಹುತೇಕ ಮಟ್ಟಿಗೆ ನಾಯಕತ್ವದ ವಿರುದ್ಧ ಬಂಡೆದ್ದವರೇ ಕೆಲವೊಮ್ಮೆ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ದಲಿತ ನಾಯಕರು ನಡೆದುಕೊಂಡು ಬಂದ ಇತಿಹಾಸವನ್ನು ಗಮನಿಸಿದರೆ, ಈ ಹಿಂದೆ ಬಿ. ಬಸವಲಿಂಗಪ್ಪ ಮತ್ತು ಕೆ.ಎಚ್. ರಂಗನಾಥ್ ಪ್ರಭಾವಿ ನಾಯಕರಾಗಿದ್ದರು. 1974ರಲ್ಲಿ ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಪಕ್ಷ ಮತ್ತು ಹೊರಗಿನವರ ಒತ್ತಡಕ್ಕೆ ಮಣಿದು ಬಸವಲಿಂಗಪ್ಪನವರನ್ನು ಸಂಪುಟದಿಂದ ಕೈಬಿಟ್ಟಿದ್ದರು. ಬೂಸಾ ಚಳವಳಿಯ ಸಂದರ್ಭದಲ್ಲಿ ರಾಜ್ಯದಲ್ಲಿ ದಲಿತ ವರ್ಗದ ಜನಸಾಮಾನ್ಯರು ಬಸವಲಿಂಗಪ್ಪನವರ ಬೆಂಬಲಕ್ಕೆ  ನಿಂತಿದ್ದರೂ, ಆ ಜನಶಕ್ತಿಯನ್ನು ಬಸವಲಿಂಗಪ್ಪ ತಮ್ಮ ರಾಜಕೀಯ ಅಧಿಕಾರಕ್ಕೆ ಬಳಸಿಕೊಳ್ಳದೆ ‘ಮೌನ’ಕ್ಕೆ ಶರಣಾದರು. ಮುಂದೆ ಅವರಿಗಿಂತಲೂ ಕಿರಿಯರಾದ ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿ ಅವರು ತಮ್ಮನ್ನು ನಿರ್ಲಕ್ಷಿಸಿದರೂ ಅವರು ‘ಬಂಡಾಯ’ ಮನೋಭಾವವನ್ನು ಪ್ರದರ್ಶಿಸದೆ ಅವಮಾನಿತರಾದವರಂತೆ ಇದ್ದರು. ಇದೇ ಜಾಯಮಾನ ಈಗ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ. ಜಿ. ಪರಮೇಶ್ವರ ಅವರದ್ದು. 


ಸಿದ್ದರಾಮಯ್ಯನವರ ಆಡಳಿತ ವೈಖರಿಗೆ ಬೇಸತ್ತು ಹೋಗಿ ನಾಯಕತ್ವ ಬದಲಾವಣೆ ಬಯಸಿರುವವರೂ ಶಾಸಕಾಂಗ ಪಕ್ಷದ ಒಳಗೂ ಮತ್ತು ಹೊರಗೂ ಇದ್ದಾರೆ. ದುಬಾರಿ ಗಿಫ್ಟ್ ವಾಚ್ ಹಗರಣ, ಲೋಕಾಯುಕ್ತವನ್ನು ದುರ್ಬಲಗೊಳಿಸಿ ಸಾರ್ವಜನಿಕವಾಗಿ ಟೀಕೆಗೆ ಒಳಗಾಗಿರುವುದು ಮತ್ತು ಮಗನ ಸಂಸ್ಥೆಗೆ ಆರೋಗ್ಯ ಇಲಾಖೆಯ ಟೆಂಡರ್ ಪ್ರಕರಣ ಮತ್ತು ನಿಧಾನಗತಿಯ ಉದಾಸೀನ ಆಡಳಿತ ವೈಖರಿ ಇತ್ಯಾದಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಾರದು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸಿ ಈಗಲೇ ಪರ್ಯಾಯ ಶಕ್ತಿಯನ್ನು ಕಂಡುಕೊಳ್ಳಬೇಕು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಈ ಪರಿಸ್ಥಿತಿಯನ್ನು ನೋಡಿದಾಗ ಸಿದ್ದರಾಮಯ್ಯ ಅವರ ನಿದ್ರಾ ಭಂಗವಾಗಿರುವುದಂತು ನಿಜ.