ವೇಗದ ವೃದ್ಧಿಯಲ್ಲಿ ತಾನೇ  ಘಾಸಿಗೊಳಿಸುವ ವೇಗಿ!

ವೇಗದ ವೃದ್ಧಿಯಲ್ಲಿ ತಾನೇ  ಘಾಸಿಗೊಳಿಸುವ ವೇಗಿ!

ಡೇಲ್ ವಿಲಿಯಂ ಸ್ಟೇಯ್ನ್ ರೆಸ್ಟುರಾ ಒಂದರಲ್ಲಿ ಮೊದಲ ಬಾರಿಗೆ ಕಂಡ ಜಾನ್ ಕೀಟ್ಸ್ಮನ್ಳನ್ನು ನೇರವಾಗಿ ಟೆಲಿಫೋನ್ ನಂಬರ್ ಕೇಳಿ ಪಡೆಯುವುದರಿಂದ ಅವರ ಲವ್ ಸ್ಟೋರಿ ಆರಂಭವಾಗುತ್ತದೆ. ಜಾನ್, ಹೇಳಿ ಕೇಳಿ ಮಾಡೆಲ್ ಮತ್ತು ನಟಿ. ಸ್ಟೇಯ್ನ್ ಮತ್ತವಳ ಬಾಂಧವ್ಯ ರಸವತ್ತಾಗಿರುತ್ತದೆ. ಆದರೆ, ಕಾಲಾಂತರದಲ್ಲಿ ಕಮರಿಹೋಗುತ್ತದೆ. ದಕ್ಷಿಣ ಆಫ್ರಿಕಾದ ಫಾಸ್ಟ್ ಬೌಲರ್ ಆದ ಸ್ಟೇಯ್ನ್ ಜೀವನದಲ್ಲೂ ಫಾಸ್ಟ್! ಫಾಸ್ಟ್ ಬೌಲರ್ ಗಳು ಹೆಚ್ಚು ಕಾಲ ತಮ್ಮ ವೃತ್ತಿಯಲ್ಲಿ ಮುಂದುವರಿಯುವುದಕ್ಕಾಗುವುದಿಲ್ಲ.ಸ್ಟೇಯ್ನ್ರ ಪ್ರೇಮಕಥನ ಕೂಡ ಅಕಾಲಿಕವಾಗಿ ಮುರುಟಿಹೋಗಿದ್ದು ವಿಪರ್ಯಾಸವೇ ಸರಿ. ಅವರ ಪ್ರೇಮ ಪ್ರಕರಣದ ಋಣಾತ್ಮಕ ಅಂಶವನ್ನು ಬದಿಗಿಡೋಣ. ಜಾನ್ ಸ್ಟೇಯ್ನ್ರ ಆಟದ ಮೇಲೆ ತೀವ್ರವಾಗಿ ಪರಿಣಾಮವನ್ನು ಬೀರಿದ್ದಿರಬಹುದ್ದಾದಷ್ಟು ರೂಪಸಿ. ಆದರೆ, ಅವರ ಅಪಾರ ಯಶಸ್ಸಿಗೆ ಅವಳೊಬ್ಬಳೇ ಕಾರಣಳಲ್ಲ. 

ಸ್ಟೇಯ್ನ್ ತನ್ನ ದೇಶ ಕಂಡ ಅಪ್ರತಿಮ ಬೌಲರ್. 93 ಟೆಸ್ಟ್ ಗಳಲ್ಲಿ ಆತ ಗಳಿಸಿದ 439 ವಿಕೆಟ್ ಗಳು ದಕ್ಷಿಣ ಆಫ್ರಿಕಾ ದೇಶದ ಬೌಲರ್ ಗಳ ಪಟ್ಟಿಯಲ್ಲಿ ಆತನನ್ನು ಪ್ರಥಮನನ್ನಾಗಿಸಿದೆ. ಕ್ರಿಕೆಟ್ ಜಗತ್ತು ಕಂಡ ಹತ್ತು ಸಾರ್ವಕಾಲಿಕ  ಶ್ರೇಷ್ಠ ಬೌಲರ್ ನಲ್ಲಿ ಸ್ಟೇಯ್ನ್ ಹೆಸರು ಸ್ಥಾಪಿತವಾಗಿದೆ. 200 ವಿಕೆಟ್ ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿರುವವರ ಪೈಕಿ ಸ್ಟೇಯ್ನ್ ರ ಸ್ಟ್ರೈಕ್ ರೇಟ್ ಅದ್ವಿತೀಯ. ಅವರು ಬೌಲ್ ಮಾಡಿದ ಪ್ರತೀ 42.3 ಎಸೆತಗಳಲ್ಲಿ ಒಂದು ವಿಕೆಟ್ ಉರುಳಿಸುತ್ತಿದ್ದರು.  

ಸ್ಟೇಯ್ನ್ ಆಡಿದ 48 ಟೆಸ್ಟ್ ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಜಯ ಸಾಧಿಸಿತೆಂದರೆ, ಅವರ ಪಾತ್ರದ ಮಹತ್ವ ಅರ್ಥವಾಗುತ್ತದೆ.  ಮೆಲ್ಬರ್ ನಲ್ಲಿ ಅವರು ಗಳಿಸಿದ 10 ವಿಕೆಟ್ ದಕ್ಷಿಣ ಆಫ್ರಿಕಾ ಪ್ರಥಮ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆ ದೇಶದ ವಿರುದ್ಧ ಸರಣಿ ಜಯ ಗಳಿಸಲು ಕಾರಣವಾಯಿತು. ಟೆಸ್ಟ್ ಕ್ರಿಕೆಟ್ ಆಡುವ ಎಲ್ಲಾ ದೇಶಗಳ ವಿರುದ್ಧ ಇನಿಂಗ್ಸ್ ಒಂದರಲ್ಲಿ ಕನಿಷ್ಠ ಐದು ವಿಕೆಟ್ ಗಳಿಸಿದ ದಾಖಲೆ ಸ್ಟೇಯ್ನ್ ರದ್ದು. ಒಟ್ಟು 26 ಬಾರಿ ಐದು ಅಥವಾ ಹೆಚ್ಚು ವಿಕೆಟ್ ಗಳಿಸಿದ ಪ್ರತಿಭಾವಂತ ಬೌಲರ್. 

2013 ರಲ್ಲಿ ಸ್ಟೇಯ್ನ್ ಅವರ ಬೌಲಿಂಗ್ ವೇಗವನ್ನು ಎದುರಿಸಲಾಗದ ಪಾಕಿಸ್ತಾನದ ಬ್ಯಾಟ್ಸಮನ್ ಬಿರುಗಾಳಿಗೆ ತರಗೆಲೆಗಳ ರೀತಿ ಉದುರಿ ಹೋಗಿದ್ದರು. ಆ ತಂಡ ಗಳಿಸಿದ ಮೊತ್ತ 49. ಸ್ಟೇಯ್ನ್ ಕೇವಲ ಎಂಟು ರನ್ನಿತ್ತು ಆರು ವಿಕೆಟ್ ಕಬಳಿಸಿದ್ದರು. ಭಾರತದ ವಿರುದ್ಧ 51 ರನ್ನಿತ್ತು 7 ವಿಕೆಟ್ ಪಡೆದದ್ದು ಅವರ ಜೀವನದ ಅತ್ಯುನ್ನತ ಸಾಧನೆ. 

ಸ್ವಾಭಾವಿಕವಾಗಿಯೇ ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ರಾಂಕಿಂಗ್ ನಲ್ಲಿ ಪ್ರಥಮ ಸ್ಥಾನಕ್ಕೇರಿದ ಸ್ಟೇಯ್ನ್ ಸತತವಾಗಿ 263 ವಾರಗಳ ಕಾಲ ಆ ಸ್ಥಾನವನ್ನು ಉಳಿಸಿಕೊಂಡಿದ್ದರು. ಅವರ ಸಹ-ವೇಗಿಗಳಾದ ಮಕಾಯ ಎಂಟಿನಿ ಮತ್ತು ವರ್ನನ್ ಫಿಲಾಂಡರ್ ಜತೆಗೂಡಿ ಪ್ರತಿಸ್ಪರ್ಧಿಗಳನ್ನು ಅಧೀರರನ್ನಾಗಿಸುವುದು ಆ ಮೂವರಿಗೆ ಅಭ್ಯಾಸವಾಗಿಹೋಗಿತ್ತು. ಶರವೇಗದಲ್ಲಿ ಬೌಲ್ ಮಾಡುವುದು ಸ್ಟೇಯ್ನ್ ಗೆ ಒಲಿದ ವಾರ. ವೇಗಿಗಳ ಸಾಮಾನ್ಯ ದೌರ್ಬಲ್ಯ ದಿಶೆ ಹಾಳುಮಾಡಿಕೊಳ್ಳುವುದು. ಸ್ಟೇಯ್ನ್ ಎಲ್ಲರಂತಲ್ಲ. ಅವರಿಗೆ ವೇಗ, ಗುರಿ ಎರಡೂ ಅಷ್ಟೇ ಮುಖ್ಯ. ಔಟ್ಸ್ವಿಂಗ್ ಮೇಲೆ ಗಣನೀಯವಾದ ನಿಯಂತ್ರಣ. ಬಾಲ್ ಹಳೆಯದಾದಂತೆ ರಿವರ್ಸ್ ಸ್ವಿಂಗ್ ಕಲೆ ಕೂಡ ಒಲಿದಿತ್ತು. 

ಪ್ರಥಮ ದರ್ಜೆ ಕ್ರಿಕೆಟ್ ಗೆ ಸ್ಟೇಯ್ನ್ ಪಾದಾರ್ಪಣೆ ಮಾಡಿದ್ದು 2003 ರಲ್ಲಿ. ಮರುವರ್ಷದಲ್ಲೇ, ತೌರಿನಲ್ಲಿ ಅವರ ಕಣ್ಣು ಸೆಳೆಯುವ ಸಾಧನೆಯಿಂದ ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ಆಯ್ಕೆಮಾಡಲಾಯಿತು. ಅಸಮರ್ಪಕ ಬೌಲಿಂಗ್ ಕಾರಣದಿಂದ ಕೈ ಬಿಡಲಾಯಿತು. ಎಸ್ಸೆಕ್ಸ್ ತಂಡಕ್ಕೆ ಪ್ರವೇಶ ಪಡೆದು ಮತ್ತೆ ತಮ್ಮ ಬೌಲಿಂಗನ್ನು ಕುದುರಿಸಿಕೊಂಡ ಸ್ಟೇಯ್ನ್ ಸ್ಥಳೀಯ ಪಂದ್ಯಗಳಲ್ಲಿ ತೋರಿದ ಸಾಮರ್ಥ್ಯದನ್ನು ಮತ್ತೆ ದಕ್ಷಿಣ ತಂಡಕ್ಕೆ ಆಯ್ಕೆಯಾದರು, ನ್ಯೂಜಿಲ್ಯಾಂಡ್ ತಂಡವನ್ನು ತಮ್ಮ ವೇಗದಿಂದ ತಲ್ಲಣಗೊಳಿಸಿದರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. 2007 ರಲ್ಲಿ ಅದೇ ದೇಶದ ವಿರುದ್ಧ ಅವರ ತೋರಿದ ಅಪರೂಪದ ಸಾಧನೆ ಮೂಲಕ (ಬೆಕ್ಕಸ ಬೆರಗಾಗಿಸುವ 9. 2 ಸರಾಸರಿಯಲ್ಲಿ 20 ವಿಕೆಟ್) 
ಕ್ರಿಕೆಟ್ ಜಗತ್ತಿನಲ್ಲಿ ಮನೆ ಮಾತಾದರು. 

ಸೀಮಿತ ಓವರ್ ಪಂದ್ಯಗಳಲ್ಲೂ ಸ್ಟೇಯ್ನ್ ಮಿಂಚಿದ್ದಾರೆ. ಎಂತಲೇ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡಕ್ಕೂ ಬೃಹತ್ ಮೊತ್ತದ ಸಂದಾಯದಿಂದ ಖರೀದಿಸಲ್ಪಟ್ಟರು. ಆ ನಂತರ ಹೈದರಾಬಾದ್ ತಂಡಕ್ಕೂ ಆಯ್ಕೆಯಾದರು. ಭುಜದ ತೊಂದರೆ ಮರುಕಳಿಸಿದ ಕಾರಣ ಇತ್ತೀಚಿಗೆ ನಡೆದ ವಿಶ್ವ ಕಪ್ ಕ್ರಿಕೆಟ್ ನಿಂದ  ಅವರು ದೂರ ಉಳಿಯಬೇಕಾಯಿತು. 

ಟೆಸ್ಟ್ ಕ್ರಿಕೆಟ್ ಅವರ ಮೊದಲ ಆಯ್ಕೆ. ವಿಪರ್ಯಾಸವೆಂದರೆ, ಈ ತಿಂಗಳು ಸ್ಟೇಯ್ನ್  (ಸೀಮಿತ) ನಿವೃತ್ತಿ ಘೋಷಿಸಿದ್ದು ಅವರು ಪ್ರೀತಿಸುವ ಅದೇ ಟೆಸ್ಟ್ ಕ್ರಿಕೆಟ್ ನಿಂದ. ಟೆಸ್ಟ್ ಕ್ರಿಕೆಟ್ ಗೆ ಬೇಕಾದ ಮನೋಭೂಮಿಕೆಯೇ ಬೇರೆ, ಅದಕ್ಕೆ ಬೇಕಾದ ಫಿಟ್ನೆಸ್ ಕೂಡ ಬೇರೆ. ವಿರಹ ಪ್ರೇಮಕಾವ್ಯದ ಕಹಿಬರಹ ಎಂಬ ಮಾತಿನಂತೆ ಗಾಯ ವೇಗಿಯ ಬಾಳಿನ ಶಾಪ. ಕಳೆದ ಸುಮಾರು ನಾಲ್ಕು ವರ್ಷಗಳಲ್ಲಿ ಸ್ಟೇಯ್ನ್ ಒಂದಲ ಒಂದು ದೈಹಿಕ ತೊಂದರೆಯನ್ನನುಭವಿಸುತ್ತಲೇ ಬಂದಿದ್ದಾರೆ. ಅದು ಅವರ ಆಟದ ಮೇಲೆ ಪ್ರತಿಕೂಲ ಪರಿಣಾಮವನ್ನೆಸಗಿದೆ. 

ಡಿ ವಿಲಿಯರ್ಸ್, ಹಶೀಮ್ ಆಮ್ಲ, (ಸೀಮಿತವಾಗಿ) ಡೇಲ್ ಸ್ಟೇಯ್ನ್, ಇಮ್ರಾನ್ ತಾಹಿರ್, ಜೆಪಿ ಡುಮಿನಿ ಮುಂತಾದ ಘಟಾನುಘಟಿಗಳನ್ನು ಒಂದೇ ಸೀಸನ್ ನಲ್ಲಿ ಕಳೆದುಕೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಮುಂದೆ ದೊಡ್ಡ ಸವಾಲೇ ಇದೆ. ಅದು ಸಾಲದೆಂಬಂತೆ ಆಯ್ಕೆ ಸಮಿತಿಯ ಮುಖ್ಯಸ್ಥರೂ ಬದಲಾಗಿದ್ದಾರೆ. ತಂಡದೊಂದಿಗೆ ಸ್ಟೇಯ್ನ್ ರ ಗುತ್ತಿಗೆಯ ಅವಧಿ ಇನ್ನೂ ಮುಗಿದಿಲ್ಲ, ಆದರೆ ಮುಂದಿನ ತಿಂಗಳು ಟಿ-20 ಸರಣಿಗೆ ಭಾರತಕ್ಕೆ ಬರಲಿರುವ ದಕ್ಷಿಣ ಆಫ್ರಿಕಾ ತಂಡದಿಂದ ಸ್ಟೇಯ್ನ್ ರನ್ನು ಬಿಡಲಾಗಿದೆ. ಬದಲಾದ ಆಯ್ಕೆದಾರರಿಗೆ ತಮ್ಮ ಫೋನ್ ನಂಬರ್ ಎಲ್ಲೊ ಮಿಸ್ ಆದಂತಿದೆ ಎಂದು ಸ್ಟೇಯ್ನ್ ವ್ಯಂಗ್ಯದಿಂದ ಟ್ವೀಟ್ಮಾಡಿದ್ದಾರೆ. 

ರಜೆ ನಿಮಿತ್ತ ಪೆರು ದೇಶದ ವನ್ಯಧಾಮದಲ್ಲಿ ಸುಧಾರಿಸಿಕೊಳ್ಳುತ್ತಿರುವ ಸ್ಟೇಯ್ನ್ ಅಲ್ಲಿಂದಲೇ ಮತ್ತೊಂದು ಟ್ವೀಟ್ ಮಾಡಿ ಚಿರತೆ ತನ್ನನ್ನು ಆಹುತಿ ತೆಗೆದುಕೊಳ್ಳದಿದ್ದರೋ, ಹಾವು ಕಚ್ಚದಿದ್ದರೋ ಹಿಂತಿರುಗುವೆ ಎಂದು ಮಾಡಿದ್ದಾರೆ. ಕ್ರಿಕೆಟ್ ರಸಿಕರ ಪರವಾಗಿ ಹಾರೈಸುವುದೇನೆಂದರೆ ದೈಹಿಕ ತೊಂದರೆಗಳು ಸ್ಟೇಯ್ನ್ ಒಳಗಿರುವ ಕ್ರಿಕೆಟಿಗನನ್ನು ಆಹುತಿ ತೆಗೆದುಕೊಳ್ಳದಿರಲಿ. ಅವರ ಸೇವೆ ಅವರು ಆಡುವ ತಂಡಗಳಿಗೆ ಇನ್ನೂ ಸ್ವಲ್ಪ ಕಾಲ ದೊರಕಲಿ. ದಕ್ಷಿಣ ಅಮೆರಿಕದ ಜಾಗ್ವಾರ್ನಂತೆ ಅವರು ತಮ್ಮ ಬೌಲಿಂಗ್ ತುದಿಯಿಂದ ಧಾವಿಸುವ ವಿಹಂಗಮ ನೋಟ ಪ್ರೇಕ್ಷಕರಿಗೂ, ಟಿವಿ ವೀಕ್ಷಕರಿಗೂ ಮತ್ತಷ್ಟು ಕಾಲ ದೊರಕಲಿ. ಕ್ರಿಕೆಟ್ ಪ್ರೇಮಿಗಳೊಂದಿಗೆ ಅವರ ಆತ್ಮೀಯ ಬಾಂಧವ್ಯ ಟಿ-20 ಪಂದ್ಯದಷ್ಟು ಚುಟುಕಾಗದಿರಲಿ. ತಮ್ಮ ಬೆಚ್ಚಿ ಬೀಳಿಸುವ ಎಸೆತದಿಂದ ಬ್ಯಾಟ್ಸಮನ್ನರನ್ನು ಘಾಸಿಗೊಳಿಸುವ ವೇಗದ ಬೌಲರ್ ಅಂತಹ ವೇಗವನ್ನು ಪಡೆಯುವ ತವಕದಲ್ಲಿ ತಾನೇ ದೈಹಿಕ ತೊಂದರೆಗಳನ್ನನುಭವಿಸುವುದು ವಿಪರ್ಯಾಸವೇ ಸರಿ.