ಕೊರೊನಾ ವೈರಸ್‌ನಿಂದ ಆರ್ಥಿಕತೆಯ ಮೇಲೆ ದಿಢೀರ್‌ ಪರಿಣಾಮ ಬೀರುವುದಿಲ್ಲ: ನಿರ್ಮಲಾ ಸೀತಾರಾಮನ್

ಮೂರುವಾರದಲ್ಲಿ ಸಾಂಕ್ರಾಮಿಕ ರೋಗವು ಬಗೆಹರಿಯದಿದ್ದರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ...

ಕೊರೊನಾ ವೈರಸ್‌ನಿಂದ ಆರ್ಥಿಕತೆಯ ಮೇಲೆ ದಿಢೀರ್‌ ಪರಿಣಾಮ ಬೀರುವುದಿಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಸಾಂಕ್ರಾಮಿಕ ರೋಗ ಕೊರೊನಾ ವೈರಸ್‌ನಿಂದಾಗಿ ಆರ್ಥಿಕತೆಯ ಕುರಿತು ಭಯಪಡುವ ಅಗತ್ಯವಿಲ್ಲ, ಆದರೆ ಮೂರು ವಾರಗಳಲ್ಲಿ ಪರಿಹರಿಸದಿದ್ದಲ್ಲಿ ಮಾತ್ರ ಕೊನೊನಾ ವೈರಸ್ ಭಾರತಕ್ಕೆ ಸವಾಲಾಗಿ ಪರಿಣಮಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಕೊರೊನಾ ವೈರಸ್‌ ಎರಡು ತಿಂಗಳಲ್ಲಿ ಮುಕ್ತವಾದರೆ ವ್ಯವಹಾರಗಳು ಮುಕ್ತವಾಗಬಹುದು. ಯಾವುದೇ ಆಮದು, ರಫ್ತುಗಳ ಮೇಲೆ  ಇರುವ ನಿರ್ಬಂಧಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ವೈರಸ್ ಕುರಿತಾದ ಭಯ ಶೀಘ್ರದಲ್ಲೇ ಕಡಿಮೆಯಾಗದಿದ್ದರೆ ತಮ್ಮ ಕಚ್ಚಾ ವಸ್ತುಗಳ ಸರಬರಾಜಿನಲ್ಲಿ ತೊಂದರೆಯಾಗುತ್ತದೆ ಎಂದು ಕೈಗಾರಿಕೆಗಳು ಭಯಪಡುತ್ತಿವೆ. ಆದರೆ, ಕಚ್ಚಾ ಸಾಮಗ್ರಿ ಸರಬರಾಜು ಅಥವಾ ರಫ್ತು ತೊಂದರೆಗೊಳಗಾಗುವ ಬಗ್ಗೆ ಅವರು ಯಾವುದೇ ಆತಂಕವನ್ನು ವ್ಯಕ್ತಪಡಿಸಲಿಲ್ಲ. ಆದಾಗ್ಯೂ, ಅವರಲ್ಲಿ ಕೆಲವರು ಎರಡು ತಿಂಗಳ ನಂತರ, ಪರಿಸ್ಥಿತಿ ಸುಧಾರಿಸದಿದ್ದರೆ ಕಚ್ಚಾ ವಸ್ತುಗಳ ಲಭ್ಯತೆಯ ಸಮಸ್ಯೆಗಳನ್ನು ಉಂಟಾಗಬಹುದು ಎಂದು ಭಾವಿಸುತ್ತಿದ್ದಾರೆ. ಆದರೇ ಇವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದೆಂಬುವುದರ ಕುರಿತು ಚಿಂತಿಸುತ್ತಿದ್ದೇವೆ ಎಂದರು.

ಕೊರೊನಾವೈರಸ್‌ನಿಂದಾಗಿ ದಿಢೀರನೆ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದೆಂಬ ಭಯದಿಂದ ಜಾಗತಿಕ ಮಾರುಕಟ್ಟೆಗಳು ಕುಸಿದಿದ್ದರಿಂದ ಭಾರತೀಯ ಷೇರು ಸೂಚ್ಯಂಕಗಳು ವರ್ಷಗಳಲ್ಲಿ ತಮ್ಮ ಕಳಪೆ ಮಟ್ಟವನ್ನು ದಾಖಲಿಸಿದೆ ಎಂದು ಈ ಹಿಂದೆ ಅವರು ಹೇಳಿಕೆ ನೀಡಿದ್ದರು.

ವ್ಯಾಪಾರ ಪ್ರಾರಂಭವಾದಾಗಲೂ ಬಿಎಸ್‌ಇ ಸೆನ್ಸೆಕ್ಸ್ 1,000 ಪಾಯಿಂಟ್‌ಗಳಿಗೆ ಕುಸಿತ ಕಂಡಿತ್ತು.ಇಂದಿಗೂ ಅದು ಚೇತರಿಸಿಕೊಂಡಿಲ್ಲ. ಸೂಚ್ಯಂಕ 1,448.37 ಪಾಯಿಂಟ್ ಇಳಿಕೆ ಕಂಡು 38,297.29 ಕ್ಕೆ ತಲುಪಿದೆ. ಮಿಂಟ್ ಪ್ರಕಾರ, ಸೆನ್ಸೆಕ್ಸ್‌ಗೆ ಇದು ಆಗಸ್ಟ್ 2015 ರ ನಂತರದ ಅತಿದೊಡ್ಡ ಏಕದಿನ ಕುಸಿತವಾಗಿದೆ. ಇದರ ಮಧ್ಯ ನಿಫ್ಟಿ 50, 431.55 ಪಾಯಿಂಟ್‌ಗಳನ್ನು ಕಳೆದುಕೊಂಡು 11,201.75 ಕ್ಕೆ ತಲುಪಿದೆ - ಇದು 2009 ರ ನಂತರದ ಅತೀ ಕಳಪೆ ಮಟ್ಟದ ಕುಸಿತವಾಗಿದೆ.

ಕೊರೊನಾದಿಂದಾಗಿ ಇದುವರೆಗೆ 2.800ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಇದರಲ್ಲಿ ಹೆಚ್ಚಿನವರು ಚೀನಾ ದೇಶದವರು. ಅಷ್ಟೇ ಅಲ್ಲದೆ ಈ ವೈರಸ್‌ 20ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿಕೊಂಡಿದೆ.