ಬಳಕೆಗೆ ಬಂದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಂಡ ವಿವಾದಾತ್ಮಕ ಡೀಪ್ ನ್ಯೂಡ್ ಆಪ್ !

ಬಳಕೆಗೆ ಬಂದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಂಡ ವಿವಾದಾತ್ಮಕ ಡೀಪ್ ನ್ಯೂಡ್ ಆಪ್ !

ಒಂದೇ ದಿನದಲ್ಲಿ ಎಲ್ಲರ ಗಮನ ಸೆಳೆದ, ಕೃತಕ ಬುದ್ದಿಮತ್ತೆಯ  ಸಹಾಯದಿಂದ ಮಹಿಳೆಯರ ನಗ್ನ ಚಿತ್ರ ರೂಪಿಸಬಲ್ಲ ಡೀಪ್ ನ್ಯೂಡ್ ಆಪ್ ಸ್ಥಗಿತಗೊಂಡಿದೆ. ನಿನ್ನೆ ಮಧ್ಯಾಹ್ನ ಇದನ್ನು ಪರಿಚಯಿಸಿದ ಮದರ್ ಬೋರ್ಡ್ ತನ್ನ ಹೊಸ ಆಪ್ ನಿಂದಾಗಿ ಎಲ್ಲರ ಗಮನ ಸೆಳೆದಿತ್ತು. ಈ ಆಪ್, ವಿಂಡೋಸ್ ಮತ್ತು ಲಿನಕ್ಸ್ ಗೆ ಲಭ್ಯವಿದ್ದು, ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಫೋಟೋಗಳನ್ನು ನಗ್ನ ಚಿತ್ರಗಳನ್ನಾಗಿ ಬದಲಾಯಿಸಬಹುದಾಗಿತ್ತು. ಅದೂ ಕೇವಲ ಮಹಿಳೆಯರ ಫೋಟೋಗಳನ್ನು ಮಾತ್ರ !!

ಈ ಆಪ್ ನ ಫ್ರೀ ವರ್ಷನ್ ನಲ್ಲಿ ಮಾರ್ಪಡಿಸಿದ ಭಾವಚಿತ್ರಗಳಿಗೆ ವಾಟರ್ ಮಾರ್ಕ್ ಇದ್ದು ಅದು ನಕಲಿ ಚಿತ್ರ ಎಂದು ತೋರಿಸುತ್ತದೆ. ಆದರೆ ಖರೀದಿಸಿದ ಆವೃತ್ತಿಯ ಆಪ್ ನಲ್ಲಿ ಚಿಕ್ಕ ವಾಟರ್ ಮಾರ್ಕ್ ಇದ್ದು,  ಫೋಟೋ ಎಡಿಟಿಂಗ್ ನಲ್ಲಿ ಅದನ್ನು ಕ್ರಾಪ್ ಮಾಡಿ ತೆಗೆಯಲು ಸಾಧ್ಯವಿತ್ತು .ಈ ಆಪ್ ಕೆಲ ತಿಂಗಳುಗಳ ತನಕ ಮಾರಾಟಕ್ಕೆ ಇತ್ತು. 

ಡೀಪ್ ಫೇಕ್ ತಂತ್ರಾಂಶವು ಮಹಿಳೆಯರ ಸಮ್ಮತಿಯಿಲ್ಲದೆ ಅವರ ಫೋಟೋಗಳನ್ನು ಮಾರ್ಪಡಿಸಿ ನೀಲಿ ಚಿತ್ರಗಳಿಗೆ, ವಿಡಿಯೋಗಳಿಗೆ ಬಳಸಿಕೊಳ್ಳುವಂತಿದ್ದು, ಅವು ಅಂತರ್ಜಾಲದಲ್ಲಿ ಹರಡಿದ ಮೇಲೆ ಮಹಿಳೆಯರು ತಮ್ಮ ರಕ್ಷಣೆ ಮಾಡಿಕೊಳ್ಳಲು ಅವಕಾಶವಿರಲಿಲ್ಲ. 

ತಮ್ಮ ಈ ಆಪ್ ನ ದುರ್ಬಳಕೆಯಿಂದ ವಿಚಲಿತರಾದ ಡೀಪ್ ನ್ಯೂಡ್ ನ ಟೀಮ್‍ ಟ್ಟೀಟ್  ಒಂದರಲ್ಲಿ “ಈ ಪ್ರಾಜೆಕ್ಟ್ ನಲ್ಲಿ ಜನರ ಆಸಕ್ತಿ ಕಡಿಮೆ ಇರುತ್ತದೆ ಎಂದು ಅಂದಾಜಿಸಿದ್ದೆವು,  ಆದರೆ ಅದರ ದುರುಪಯೋಗವೇ ಜಾಸ್ತಿ ಇದೆ “ ಎಂದಿದೆ. ಇನ್ನು ಮುಂದೆ ಈ ಆಪ್ ಮಾರಾಟಕ್ಕೆ ಚಾಲ್ತಿಯಲ್ಲಿ ಇರುವುದಿಲ್ಲ, ಇದರ ಮುಂದುವರಿದ ಆವೃತ್ತಿಗಳು ಹೊರ ಬರುವುದಿಲ್ಲ, ಈ ತಂತ್ರಾಂಶವನ್ನು ಆನ್ ಲೈನ್ ನಲ್ಲಿ ಶೇರ್ ಮಾಡುವಂತಿಲ್ಲ ಎಂದು ಟೀಮ್ ಎಚ್ಚರಿಸಿದೆ. ಒಮ್ಮೆ ಮಾಡಿದ್ದೇ  ಆದರೆ ಅದು ಸೇವಾ ಷರತ್ತುಗಳಿಗೆ ವಿರುದ್ಧವಾಗಿರಲಿದೆ ಎಂದಿದೆ. ಆದರೆ ಇಷ್ಟರಲ್ಲೇ ಇದರ ಆವೃತ್ತಿಗಳು ಬಹುತೇಕ ಶೇರ್ ಮಾಡಲ್ಪಟ್ಟಿವೆ ಎಂಬ ವಾಸ್ತವವನ್ನು ಅವರು ಒಪ್ಪಿಕೊಳ್ಳುತ್ತಾರೆ.

ಅತಿ ಕಡಿಮೆ ಅವಧಿಯಲ್ಲಿ ಈ ಆಪ್ ಎಲ್ಲರ ಗಮನ ಸೆಳೆಯುವಷ್ಟರ ಮಟ್ಟಿಗೆ ಯಶಸ್ಸು ಕಂಡಿತ್ತು. ಈ ಮೊದಲೇ ಕೆಲವರು  ಡಿಜಿಟಲ್ ಆಗಿ ಫೋಟೋ ಗಳನ್ನು ಬೇಕಾದ ಹಾಗೆ ಬದಲಿಸಬಲ್ಲವರಾಗಿದ್ದರು, ಈಗ ಡೀಪ್ ನ್ಯೂಡ್ ಅದನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಿ ಕ್ಷಣಾರ್ಧದಲ್ಲಿ ಬದಲಾವಣೆ ಮಾಡಿದ ಫೋಟೋ ಸಿಗುವಂತೆ ಮಾಡಿದೆ. ಈ ರೀತಿಯಾಗಿ ಮಾರ್ಪಡಿಸಿದ ಫೋಟೋಗಳಿಂದ ಮಹಿಳೆಯರ ತೇಜೋವಧೆ ಮಾಡಲು ಲೈಂಗಿಕ ಕಿರುಕುಳ ನೀಡಲು ಬಳಸಬಹುದಾಗಿದೆ. 

ಈ ಆಪ್ ನ ರೂವಾರಿ ಆಲ್ಬರ್ಟ್ ಎಂಬಾತನ ಹೇಳಿಕೆಯು ಆತನೇ ಮೊದಲು ಮಾಡಿರದಿದ್ದರೂ  ಈ ತರಹದ ಆಪ್ ಅನ್ನು ಇನ್ಯಾರಾದರೂ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಲ್ಲರನ್ನು ತಲುಪುತ್ತಿದೆ. ಆಪ್ ನ ದುರುಪಯೋಗವಾದಲ್ಲಿ ಡೀಪ್ ನ್ಯೂಡ್ ಟೀಮ್ ಅದನ್ನು ಕೈ ಬಿಡುತ್ತಾರೆ ಎಂಬುದು. 

ಈ ಆಪ್ ಅನ್ನು ಸ್ಥಗಿತ ಗೊಳಿಸುವುದರೊಂದಿಗೆ ಡೀಪ್ ನ್ಯೂಡ್ ಟೀಮ್ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ “ಜಗತ್ತು ಇನ್ನೂ ಡೀಪ್ ನ್ಯೂಡ್ ಗೆ ಸಿದ್ಧವಾಗಿಲ್ಲ. ಭವಿಷ್ಯದಲ್ಲಿ ಈ ತಂತ್ರಾಂಶವನ್ನು ಸರಿಯಾದ ರೀತಿಯಲ್ಲಿ ಬಳಸಬಹುದು “ ಎಂದಿದೆ. ಆದರೆ ಡೀಪ್ ಫೇಕ್ಸ್ ಮಾಡಿದ್ದೇನೆಂದರೆ ಸುಲಭವಾಗಿ ಫೋಟೋ ಬದಲಾವಣೆ ಮಾಡಿ ಅದನ್ನು ಗುರುತಿಸಲು ಕಠಿಣವಾಗಿಸಿ,  ಕೊನೆಯಲ್ಲಿ ಇದು ಅಸಲಿಯೋ ನಕಲಿಯೋ ಎಂಬ ಸಮಸ್ಯೆಯನ್ನು ಹುಟ್ಟು ಹಾಕಿದ್ದು. 

ಈ ರೀತಿಯದಾದ ಆಪ್ ಗಳು ಜನರ, ಅದರಲ್ಲೂ ಮಹಿಳೆಯರ ಫೋಟೋಗಳನ್ನು ಕ್ಷಣ ಮಾತ್ರದಲ್ಲಿ ಮಾರ್ಪಡಿಸಿ ಸಲೀಸಾಗಿ ದುರ್ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತವೆ. ಈಗಾಗಲೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು ಇನ್ನಷ್ಟು ಕ್ರೌರ್ಯಗಳಿಗೆ ದಾರಿ ಮಾಡಿಕೊಡುತ್ತವೆ. 

ಒಟ್ಟಿನಲ್ಲಿ ತಂತ್ರಜ್ಞಾನವನ್ನು ಒಳಿತಿಗಾಗಿ ಬಳಸದೆ ತೆವಲಿಗಾಗಿ ಬಳಸಿಕೊಳ್ಳುವ ಬುದ್ದಿವಂತಿಕೆಯನ್ನು ಏನನ್ನೋಣ?