ಅನ್ನಭಾಗ್ಯ ಯೋಜನೆ ನಿರಂತರ, ಹೆಚ್ಚುವರಿ 2 ಕೆ.ಜಿ. ಅಕ್ಕಿ ಕೊಡುವ ಮೈತ್ರಿ ಸರ್ಕಾರದ ಘೋಷಣೆ ಹರೋಹರ: ಬೂಸಿ ಯಡಿಯೂರಪ್ಪ ಸರ್ಕಾರದ ನಿರ್ಧಾರ

ಅನ್ನಭಾಗ್ಯ ಯೋಜನೆ ನಿರಂತರ, ಹೆಚ್ಚುವರಿ 2 ಕೆ.ಜಿ. ಅಕ್ಕಿ ಕೊಡುವ ಮೈತ್ರಿ ಸರ್ಕಾರದ ಘೋಷಣೆ ಹರೋಹರ: ಬೂಸಿ ಯಡಿಯೂರಪ್ಪ ಸರ್ಕಾರದ ನಿರ್ಧಾರ

ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿ ಹಣ ಹೊಂದಿಸುವ ಬಗ್ಗೆ ಚಿಂತಿಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ! ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು  2 ಕೆ.ಜಿ. ಯಷ್ಟು ಹೆಚ್ಚಿಸಬೇಕೆಂಬ ಹಿಂದಿನ ಮೈತ್ರಿ ಸರ್ಕಾರದ  ಘೋಷಣೆಯನ್ನು ನಿರ್ಲಕ್ಷಿಸುವ ಮೂಲಕ ಈ ಕೊರತೆಯನ್ನು ಸರಿದೂಗಿಸುತ್ತಿದ್ದಾರೆ. ಬಡ ಕುಟುಂಬಗಳಿಗೆ ಹೆಚ್ಚುವರಿ ಅಕ್ಕಿ ನೀಡುವುದರಿಂದ ಪರೋಕ್ಷವಾಗಿ ರೈತರಿಗೇ ಅನುಕೂಲವಾಗುತ್ತದೆ ಎಂಬ ಅರಿವು ಕೂಡ ಇಲ್ಲದಿರುವುದು ಮೂರ್ಖ ರಾಜಕಾರಣದ ಫಲ. ಈ ಅಕ್ಕಿ ರಾಜಕಾರಣದ ಬಗ್ಗೆ ಜಿ.ಮಹಂತೇಶ್ ವಿವರಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು 2 ಕೆ ಜಿ ಗೆ ಹೆಚ್ಚಳ ಮಾಡುವ ಸಂಬಂಧ ಮೈತ್ರಿ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಜೆಟ್ನಲ್ಲಿ ಘೋಷಿಸಿದ್ದ ಅಂಶವನ್ನು ಬಿಜೆಪಿ ಸರ್ಕಾರ ಕೈ ಬಿಟ್ಟಿದೆ. 

ಅನ್ನಭಾಗ್ಯ ಯೋಜನೆ ಮುಂದುವರಿಯಲು ನಾನು ಈಗಾಗಲೇ ಸಹಿ ಹಾಕಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಬೆನ್ನಲ್ಲೇ ಈ ಮಾಹಿತಿಯೂ ಹೊರಬಿದ್ದಿದೆ. 

2 ಕೆ ಜಿ ಹೆಚ್ಚಳ ಮಾಡುವ ಪ್ರಸ್ತಾಪ ಹೊಂದಿರುವ ಯೋಜನೆಯನ್ನು ಮುಂದುವರೆಸುವ ಅಗತ್ಯವಿಲ್ಲ ಎಂಬ ಒಕ್ಕಣೆ ಹೊಂದಿರುವ ಟಿಪ್ಪಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನದ ಹಿಂದೆಯಷ್ಟೇ ಸಹಿ ಮಾಡುವ ಮೂಲಕ ಅನುಮೋದಿಸಿದ್ದಾರೆ. ಈ ಬಗ್ಗೆ ವಿಶ್ವಸನೀಯ ಮೂಲಗಳು 'ಡೆಕ್ಕನ್ ನ್ಯೂಸ್ ' ಗೆ ಖಚಿತಪಡಿಸಿವೆ. ಆದರೆ ಜಾರಿಯಲ್ಲಿರುವ ಯೋಜನೆ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೆರವು ನೀಡಲು ಹಣವನ್ನು ಹೊಂದಿಸಿಕೊಳ್ಳಲು ಪರದಾಡುತ್ತಿರುವ ಯಡಿಯೂರಪ್ಪ ಅವರು ಹೆಚ್ಚುವರಿ ಅಕ್ಕಿ ನೀಡುವ ಪ್ರಸ್ತಾಪವನ್ನು ಕೈ ಬಿಟ್ಟಿದ್ದಾರೆ. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ 200ರಿಂದ 250 ಕೋಟಿ ರು.ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎಂದು ತಿಳಿದು ಬಂದಿದೆ.

ಅನ್ನಭಾಗ್ಯ ಯೋಜನೆಯ ಕಡಿತ ಮಾಡಿದ ಅಕ್ಕಿ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ ಎಂಬ ಸುದ್ದಿಯನ್ನು ಇದು ಮತ್ತಷ್ಟು ಪುಷ್ಠೀಕರಿಸಿದಂತಾಗಿದೆ. 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಂಡಿದ್ದ ಅನ್ನಭಾಗ್ಯ ಯೋಜನೆ, ಮೈತ್ರಿ ಸರ್ಕಾರದ ಅವಧಿಯಲ್ಲಿಯೂ ಮುಂದುವರೆದಿತ್ತು. ಆದರೆ ಅಕ್ಕಿ ಪ್ರಮಾಣವನ್ನು ಹೆಚ್ಚಳ ಮಾಡಲು ಹಿಂದಿನ ಸಚಿವ ಜಮೀರ್ ಅಹ್ಮದ್ ಖಾನ್ ಬಹಿರಂಗ ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಹೆಚ್ಚಳ ಮಾಡುವ ಸಂಬಂಧ ಇವರಿಬ್ಬರ ನಡುವೆ ಶೀತಲ ಸಮರ ನಡೆದಿತ್ತು. ಅಲ್ಲದೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಜಮೀರ್ ಅಹ್ಮದ್ ಖಾನ್ ಅವರನ್ನು ಬೆಂಬಲಿಸಿದ್ದರು.  ಈ ವಿಚಾರ ರಾಜಕೀಯಕರಣಗೊಳ್ಳುತ್ತಿದ್ದುದನ್ನು ಗಮನಿಸಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಕಡೆಗೆ ಅಕ್ಕಿ ಪ್ರಮಾಣವನ್ನು 2 ಕೆ ಜಿ ಗೆ ಹೆಚ್ಚಳ ಮಾಡಲಾಗುವುದು ಎಂದು ಕಳೆದ ಬಜೆಟ್ನಲ್ಲಿ ಘೋಷಿಸಿ ಕೈ ತೊಳೆದುಕೊಂಡಿದ್ದರು. 

ಬಜೆಟ್ ನಲ್ಲಿ ಘೋಷಣೆ ಆದ ನಂತರ ಹೆಚ್ಚುವರಿ ಅಕ್ಕಿ ನೀಡುವ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದಿದ್ದವೇ ಹೊರತು ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ಹೀಗಾಗಿ ಅಕ್ಕಿ ಹೆಚ್ಚಳದ ವಿಚಾರ ಪ್ರಸ್ತಾವನೆ ಹಂತದಲ್ಲಿ ಇರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಳ ಮಾಡುವ ಯೋಜನೆಯನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ಕಡತಕ್ಕೆ ಸಹಿ ಹಾಕಿದ್ದಾರೆ. 

ಅನ್ನಭಾಗ್ಯ ಯೋಜನೆ ಮುಂದುವರಿಕೆ,  ಅಕ್ಕಿ ಪ್ರಮಾಣವನ್ನು ಹೆಚ್ಚಳ ಮಾಡುವ ಪ್ರಸ್ತಾಪ ಮತ್ತು ಇದನ್ನು ಕೈ ಬಿಡುವ ವಿಚಾರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳ ನಡುವೆ ಟ್ವೀಟ್ ಸಮರ ಮುಂದುವರೆದಿದೆ. 

ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಅಕ್ಕಿ ಪ್ರಮಾಣವನ್ನು ಕಡಿತ ಮಾಡುವ ಯಾವುದೇ ಯೋಜನೆ ನಮ್ಮ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರೆ, ರಾಜ್ಯ ಬಿಜೆಪಿ ಸರ್ಕಾರ ಅಕ್ಕಿಯನ್ನು ಕಡಿಮೆ ಮಾಡಲು ಚರ್ಚೆ ನಡೆಸಿದೆ ಎಂಬ ಮಾಹಿತಿ ಬಂದಿದೆ. ಈ ರೀತಿಯೇನಾದರೂ ಮಾಡಿದರೆ ನಾನು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

'ರೈತರಿಗೆ 4 ಸಾವಿರ ಕೊಡಲು ನಮ್ಮದೇನು ಅಡ್ಡಿ ಇಲ್ಲ, ಆದರೆ, ಬಡವರ ಅಕ್ಕಿ ಕಡಿತ ಮಾಡಿ ಹಣ ನೀಡುತ್ತೇವೆ ಎನ್ನುವುದು ಬಡವರ ವಿರೋಧಿ ಧೋರಣೆಯಾಗುತ್ತದೆ. ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ಮೇಲೆ ಗುಳೆ ಪದ್ಧತಿ ಕಡಿಮೆ ಆಗಿದೆ. ಬಡವರು ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಇದು ಇಡೀ ದೇಶದಲ್ಲಿ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮ. ಹಾಗಾಗಿ ಅಕ್ಕಿ ಕಡಿತಗೊಳಿಸುವ ಆಲೋಚನೆಯೇನಾದರೂ ಯಡಿಯೂರಪ್ಪನವರಿಗೆ ಇದ್ದಲ್ಲಿ ತಕ್ಷಣವೇ ಅದನ್ನು ಕೈಬಿಡಲಿ' ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.