ವನ್ಯಜೀವಿಗಳ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ: ನರೇಂದ್ರ ಮೋದಿ

ವನ್ಯಜೀವಿಗಳ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ:  ನರೇಂದ್ರ ಮೋದಿ

ದೆಹಲಿ: ವನ್ಯಜೀವಿ ಮತ್ತು ಆವಾಸಸ್ಥಾನಗಳ ಸಂರಕ್ಷಣೆ, ಭಾರತದ ಸಾಂಸ್ಕೃತಿಕ ನೀತಿಗಳಲ್ಲಿ ಒಂದು ಭಾಗವಾಗಿದ್ದು ಅದು ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಕಲಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ (ಯುಎನ್) ವಲಸೆ ಜಾತಿಗಳ ಸಮಾವೇಶವನ್ನು (ಸಿಎಮ್ಎಸ್) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.

ಯುಗಯುಗದಲ್ಲಿ, ವನ್ಯಜೀವಿ ಮತ್ತು ಆವಾಸಸ್ಥಾನಗಳ ಸಂರಕ್ಷಣೆ ನಮ್ಮ ಸಾಂಸ್ಕೃತಿಕ ನೀತಿಯ ಒಂದು ಭಾಗವಾಗಿದೆ, ಇದು ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುತ್ತದೆ" ಎಂದು ಪ್ರಧಾನಿ ಮೋದಿ ಗಾಂಧಿನಗರದಲ್ಲಿ ವನ್ಯ ಪ್ರಾಣಿಗಳ ವಲಸೆ ಪ್ರಭೇದಗಳ ಸಂರಕ್ಷಣೆ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.

ಭಾರತ ದೇಶ ಹಲವು ಜೈವಿಕ ಜೀವಿಗಳ ಆವಾಸಸ್ಥಾನವಾಗಿದೆ. ಇಲ್ಲಿ 4 ಜೀವ ವೈವಿಧ್ಯ ಕೇಂದ್ರಗಳಿವೆ. ವಿಶ್ವದ ಶೇಕಡಾ 2.4ರಷ್ಟು ಭೂ ಪ್ರದೇಶಗಳಲ್ಲಿ ಜೀವ ವೈವಿಧ್ಯತೆಯಿದ್ದು ಅವುಗಳಲ್ಲಿ ಶೇಕಡಾ 8ರಷ್ಟು ಕೊಡುಗೆ ಭಾರತದ್ದಾಗಿದೆ, ಪೂರ್ವ ಹಿಮಾಲಯ, ಪಶ್ಚಿಮ ಘಟ್ಟ, ಇಂಡೋ-ಮ್ಯಾನ್ಮಾರ್ ಭೂದೃಶ್ಯ, ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು. ಹಲವು ಜೀವ ವೈವಿಧ್ಯಗಳ ತಾಣಗಳಾಗಿವೆ ಎಂದು ಹೇಳಿದ್ದಾರೆ.

ಭಾರತವು ಜಗತ್ತಿನಾದ್ಯಂತ ಸುಮಾರು 500 ಜಾತಿಯ ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ.

ಗುಜರಾತ್ ನಲ್ಲಿ ಸಮ್ಮೇಳನ ನಡೆಯುತ್ತಿರುವಾಗ ಮಹಾತ್ಮಾ ಗಾಂಧಿಯವರನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡ ಪ್ರಧಾನಿ ಅಹಿಂಸೆ ಮತ್ತು ಪ್ರಾಣಿ-ಪಕ್ಷಿಗಳ ರಕ್ಷಣೆಗೆ, ಪ್ರಕೃತಿಯನ್ನು ಕಾಪಾಡುವುದಕ್ಕೆ ಗಾಂಧೀಜಿಯವರು ಪ್ರೋತ್ಸಾಹಿಸುತ್ತಿದ್ದರು. ಅವರ ತತ್ವ, ಆದರ್ಶಗಳಂತೆ ಅದನ್ನು ಸಂವಿಧಾನದಲ್ಲಿ, ಕಾನೂನು ಮತ್ತು ಶಾಸನಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು .

ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಲಾಗುತ್ತಿರುವ ಯುಎನ್ ಸಿಎಮ್ಎಸ್ ಇಂದು ಪ್ರಾರಂಭವಾಗಿದ್ದು ಫೆಬ್ರವರಿ 22 ರಂದು ಮುಕ್ತಾಯಗೊಳ್ಳಲಿದೆ.