ಕಾಂಗ್ರೆಸ್ ಪುನಶ್ಚೇತನಕ್ಕೆ ಬೇಕಿದೆ ಹೊಸ ನಾಯಕತ್ವ

ಕಾಂಗ್ರೆಸ್ ಪುನಶ್ಚೇತನಕ್ಕೆ ಬೇಕಿದೆ ಹೊಸ ನಾಯಕತ್ವ

ಕಾಂಗ್ರೆಸ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರೂ ಕುಟುಂಬಕ್ಕೆ ಅವಿನಾಭಾವ ಸಂಬಂಧ. ಈ ಬಾಂಧವ್ಯ ಬೆಳೆದದ್ದು ನೆಹರೂ ಅವರ ಪುತ್ರಿ ಇಂದಿರಾ ಪ್ರಿಯದರ್ಶಿನಿ ಗಾಂಧಿ ಅವರು ಪ್ರಧಾನಿಯಾಗಿ ಮತ್ತು ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಂತರ. ಅದರಲ್ಲೂ 1969 ರಲ್ಲಿಕಾಂಗ್ರೆಸ್ ಒಡೆದು ಹೋಳಾದ ಮೇಲೆ ಎಸ್. ನಿಜಲಿಂಗಪ್ಪ, ಎಸ್. ಕೆ. ಪಾಟೀಲ್, ಎನ್. ಸಂಜೀವರೆಡ್ಡಿ, ಮೊರಾರ್ಜಿ ದೇಸಾಯಿ ಹೀಗೆ ಘಟಾನುಘಟಿಗಳೆಲ್ಲ ಸಂಸ್ಥಾ ಕಾಂಗ್ರೆಸ್ ಎಂದು ತಾವೇ ಮೂಲ ಕಾಂಗ್ರೆಸ್ಸಿಗರು ಎಂದು ಉಳಿದುಕೊಂಡರು. ಇಂದಿರಾ ಗಾಂಧಿ ಅವರು ಕಾಂಗ್ರೆಸ್ (ಆರ್) ಎಂದು ಹಿರಿ ತಲೆಗಳಿಂದ ಬೇರ್ಪಟ್ಟು ಪ್ರಧಾನಿಯಾಗಿ ಉಳಿದರು.

ತಾವು ತರಬೇಕೆಂದಿರುವ ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಮತ್ತಿತರ ಬಡವರ ಪರವಾದ ಕಾರ್ಯಕ್ರಮಗಳಿಗೆ ಈ ಮಂದಿ ತಮಗೆ ಸಹಕರಿಸುತ್ತಿಲ್ಲ. ಎಲ್ಲವನ್ನೂ ವಿರೋಧಿಸುತ್ತಿದ್ದಾರೆ. ಆದ್ದರಿಂದ ನನ್ನ ಕೈ ಬಲಪಡಿಸಿ ಎಂದು ದೇಶದಾದ್ಯಂತ ಸುಂಟರಗಾಳಿಯಂತೆ ಸುತ್ತಿ ಬಡವರ ಪರವಾಗಿ ಮಾತನಾಡಲು ಇಂದಿರಾ ಗಾಂಧಿ ಅವರು ಶುರು ಮಾಡಿದ ಮೇಲೆ ಕಾಂಗ್ರೆಸ್ಸಿನ ರಾಜಕೀಯ ದಿಕ್ಕೇ ಬದಲಾಯಿತು.

1971ರ ಲೋಕಸಭೆ ಚುನಾವಣೆ ನಡೆದಾಗ ಇಂದಿರಾ ಗಾಂಧಿ ಅವರ ಪರ ಇಡೀ ದೇಶ ನಿಂತಿತು. ಭಾರೀ ಜನಬೆಂಬಲದೊಂದಿಗೆ ಮತ್ತೆ ಸರ್ಕಾರ ರಚನೆ ಮಾಡಿದರು. ಆಗ ಕರ್ನಾಟಕದಲ್ಲಿ ಒಟ್ಟು 28 ಕ್ಷೇತ್ರಗಳನ್ನೂ ಗೆದ್ದುಕೊಂಡರು. ಇಂದಿರಾ ಗಾಂಧಿ ಹೆಸರಿನಲ್ಲಿ ಕತ್ತೆ ನಿಂತರೂ ಗೆದ್ದು ಬರುತ್ತದೆ ಎನ್ನುವ ಮಾತುಗಳು ಹಾದಿ ಬೀದಿಗಳಲ್ಲಿ ಹರಿದಾಡುವಂತಾಯಿತು.

ಅಲ್ಲಿಂದೀಚೆಗೆ ಕಾಕತಾಳೀಯ ಎನ್ನುವಂತೆ ಹೆಸರಿಗಷ್ಟೇ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಿ.ಕೆ ಬರೂವಾ ಅವರು “ಇಂಡಿಯಾ ಎಂದರೆ ಇಂದಿರಾ; ಇಂದಿರಾ ಎಂದರೆ ಇಂಡಿಯಾ” ಎಂದು ತಮ್ಮ ಘೋಷವಾಕ್ಯವನ್ನು ಹರಿಯ ಬಿಟ್ಟರು. ಇಂತಹದ್ದೇ ಬೆಳವಣಿಗೆ ಈಗ ಬಿಜೆಪಿಯಲ್ಲೂ ಕೇಳಿ ಬರುತ್ತಿರುವುದು ವಿಪರ್ಯಾಸ !

ಆ ನಂತರ ತುರ್ತುಪರಿಸ್ಥಿತಿಯ ಹೇರಿಕೆಯ ಅತಿರೇಕಗಳಿಂದ 1977ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರಿಗೆ ಸೋಲು. ಹಲವು ವಿರೋಧ ಪಕ್ಷಗಳೆಲ್ಲ ಸೇರಿ ಜನತಾ ಪಕ್ಷವಾಗಿ ಅಧಿಕಾರಕ್ಕೆ ಬಂದದ್ದು. ಪಂಜಾಬ್ ಖಾಲಿಸ್ತಾನ ಚಳುವಳಿ, ಇಂದಿರಾಗಾಂಧಿ ಹತ್ಯೆ, ರಾಜೀವ್ ಗಾಂಧಿ ಅವರ ಉತ್ತರಾಧಿಕಾರಿಯಾಗಿ ಬಂದದ್ದು ಹೀಗೆ ಕಾಂಗ್ರೆಸ್ ಮತ್ತು ನೆಹರೂ ಕುಟುಂಬಕ್ಕೆ ಬಿಡಿಸಲಾಗದ ರಕ್ತ ಸಂಬಂಧ ಎನ್ನುವಂತೆ ಬೆಳೆದು ಬಂದಿದೆ.

ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ ಅವರ ಉತ್ತರಾಧಿಕಾರಿಯಾಗಲು ಅಂದಿನ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಸಿದ್ಧರಾಗಿದ್ದರು. ಆದರೆ ಪಕ್ಷದ ಹಿರಿಯರೆಲ್ಲ ಸಹಜ ನಡವಳಿಕೆ ಎನ್ನುವಂತೆ ಆ ಅವಧಿಯಲ್ಲಿ ಲೋಕಸಭೆ ಸದಸ್ಯರಾಗಿದ್ದ ರಾಜೀವ್ ಗಾಂಧಿ ಅವರನ್ನು ಇಂದಿರಾ ಗಾಂಧಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡರು. 1984ರಲ್ಲಿ ರಾಜೀವ್ ನೇತೃತ್ವದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಪ್ರಚಂಡ ಗೆಲುವು ಸಾಧಿಸಿತು. ಆದರೆ ರಾಜೀವ್ ಗಾಂಧಿ ಅವರು ಪ್ರಧಾನಿಯಾದ ಬಳಿಕ ಶ್ರೀಲಂಕಾದ ಎಲ್ ಟಿ ಟಿ ಇ ತಮಿಳು ಸಂಘಟನೆ ಬಗೆಗೆ ತೆಗೆದುಕೊಂಡ ನಿಲುವು ಅವರನ್ನೇ ಬಲಿ ಪಡೆಯಿತು. 

ಒಂದುವರೆ ವರ್ಷದ ಹಿಂದೆ ರಾಹುಲ್ ಗಾಂಧಿ ಅಮ್ಮನಿಂದ ಅಧಿಕಾರ ಪಡೆದು ಹಾಗೂ ಹೀಗೂ ಪಕ್ಷದ ಸಾರಥ್ಯವನ್ನುನಡೆಸಿದರು. ರಾಹುಲ್ ಇನ್ನೂ ಎಳಸು ಎನ್ನುವ ಟೀಕೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬಂದ ಅವರು ಸ್ವಲ್ಪಮಟ್ಟಿಗೆ ರಾಜಕೀಯ ಜ್ಞಾನ, ಪಕ್ಷದ ವ್ಯವಹಾರದಲ್ಲಿ ಪಳಗಿ ಪರವಾಗಿಲ್ಲ ಎನಿಸಿಕೊಂಡರು. ಆದರೆ ಪ್ರಧಾನಿ ಸ್ಥಾನಕ್ಕೆ ತಾನು ಸ್ಪರ್ಧಿ ಎನ್ನುವ ಒಳ ಆಸೆಯಿಂದ ಅವರ ನಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸರಿಸಾಟಿ ಎನಿಸಲಿಲ್ಲ. ಬಿಜೆಪಿಯ ವೈಫಲ್ಯದಿಂದ ಕಳೆದ ವರ್ಷ ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಘಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಈ ಗೆಲುವು ಪಕ್ಷದಲ್ಲಿ ಮತ್ತು ಜನರಲ್ಲಿ ಕಾಂಗ್ರೆಸ್ಸಿಗೆ ರಾಹುಲ್ ನೇತೃತ್ವದಲ್ಲಿಯೂ ಭವಿಷ್ಯವಿದೆ ಎನ್ನುವ ವಿಶ್ವಾಸ ಮೂಡಿತು. ಆದರೆ ಈ ವಿಶ್ವಾಸ ಲೋಕಸಭೆ ಚುನಾವಣೆಯಲ್ಲಿ ಠುಸ್ಸಾಯಿತು. ಲೋಕಸಭೆ ಚುನಾವಣೆ ಪ್ರಚಾರದಲ್ಲಿ ರಾಹುಲ್ ಭರಾಟೆಯ ಪ್ರಚಾರವನ್ನೇನೋ ನಡೆಸಿದರು. ಆದರೆ ದೇಶದ ಮತದಾರ ಮೋದಿಯ ಪರವಾಗಿಯೇ ನಿಂತರು. ಇದೀಗ ರಾಹುಲ್ ರಾಜಕೀಯ ಭವಿಷ್ಯವನ್ನೇ ಮಂಕು ಮಾಡಿದೆ.

ಈ ಸೋಲಿನ ಹೊಣೆಯನ್ನು ತಾನೆ ಹೊತ್ತುಕೊಂಡು ಪಕ್ಷದ ಅಧ್ಯಕ್ಷ ಸ್ಥಾನವನ್ನೂ ತ್ಯಜಿಸಿದ್ದಾರೆ. ಪಕ್ಷದ ಹಿರಿಯರು “ನೀವೇ ಮುಂದುವರಿಯಿರಿ” ಎಂದು ದುಂಬಾಲು ಬಿದ್ದರೂ ರಾಹುಲ್ ಮನಸ್ಸು ಬದಲಾಯಿಸುತ್ತಿಲ್ಲ. ಹಾಗಾಗ ಹೊಸ ನಾಯಕನಿಗಾಗಿ ಹುಡುಕಾಟ ನಡೆದಿದೆ. ಕಾಂಗ್ರೆಸ್ ಪಕ್ಷದ ಒಟ್ಟು 134 ವರ್ಷದಲ್ಲಿ ಮೋತಿಲಾಲ್ ನೆಹರೂ, ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದನ್ನೂ ಗಮನಿಸಿದರೆ ಈ ಕುಟುಂಬ ಒಟ್ಟಾರೆಯಾಗಿ 44 ವರ್ಷ ತನ್ನ ಪಾರುಪತ್ಯಯನ್ನು ನಡೆಸಿದೆ.

ಈವೊತ್ತಿನವರೆಗಿನ ಈ 44 ವರ್ಷಗಳಲ್ಲಿ ಆರು ವರ್ಷ ಈ ಕುಟುಂಬದ ಕೈತಪ್ಪಿದ ಅಧಿಕಾರಾವಧಿಯಲ್ಲಿ ಪಿ.ವಿ. ನರಸಿಂಹರಾವ್, ಸೀತಾರಾಂ ಕೇಸರಿ ಅವರು ಅಧ್ಯಕ್ಷರಾಗಿದ್ದರು ಎನ್ನುವುದನ್ನು ಬಿಟ್ಟರೆ ನೆಹರೂ ಕುಟುಂಬದ ಆಳ್ವಿಕೆಯೇ ನಡೆದಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆ ನಡೆದ ಹಿನ್ನೆಲೆ ಕೆಲವು ನಾಯಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಕಟ್ಟಿದರು. ಅವರಲ್ಲಿ ಮುಖ್ಯರೆಂದರೆ ಎನ್.ಡಿ ತಿವಾರಿ ಮತ್ತು ಪ್ರಣವ್ ಮುಖರ್ಜಿ 1984ರಲ್ಲಿ ಸಮಾಜವಾದಿ ಕಾಂಗ್ರೆಸ್ ಕಟ್ಟಿದರು. 1996ರಲ್ಲಿ ಮಾಧವರಾವ್ ಸಿಂಧಿಯಾ ಮಧ್ಯಪ್ರದೇಶ ವಿಕಾಸ ಪಕ್ಷ, ಮತ್ತು ಅರ್ಜುನ್ ಸಿಂಗ್ ಅಖಿಲ ಭಾರತ ಇಂದಿರಾ ಕಾಂಗ್ರೆಸ್ ಆರಂಭಿಸಿದರು. 1996ರಲ್ಲಿ ಜಿ.ಕೆ. ಮೂಪನಾರ್ ಕಾಂಗ್ರೆಸ್ ತೊರೆದು ತಮಿಳ್ ಮಾನಿಲಾ ಕಾಂಗ್ರೆಸ್ ಕಟ್ಟಿದರು. 1997ರಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಬಿಟ್ಟು ತಮ್ಮದೇ ಆದ ತೃಣ ಮೂಲ ಕಾಂಗ್ರೆಸ್ ಸ್ಥಾಪಿಸಿದರು. 1999ರಲ್ಲಿ ಸೋನಿಯಾ ಗಾಂಧಿ ನಾಯಕತ್ವನ್ನು ವಿರೋಧಿಸಿದ ಶರದ್ ಪವಾರ್ ಸಹಾ ಪಕ್ಷವನ್ನು ತೊರೆದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಆರಂಭಿಸಿದರು. 

ನೆಹರೂ ಮತ್ತು ಇಂದಿರಾ ಗಾಂಧಿ ಅವರಿಂದ ಹಿಡಿದು ಇಂದಿನವರೆಗೂ ಈ ಕುಟುಂಬದ ಹೆಸರಿನ ನೆರಳು ಮತ್ತು ನಂಟಿಲ್ಲದೆ ಈ ಪಕ್ಷ ಉಳಿಯುವುದು ಕಷ್ಟ ಎನ್ನುವಂತಾಗಿದೆ. ಶರದ್ ಪವಾರ್ ಮತ್ತು ಮಮತಾ ಬ್ಯಾನರ್ಜಿ ಅವರನ್ನು ಹೊರತು ಪಡಿಸಿದರೆ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟಿದ ಉಳಿದ ನಾಯಕರೆಲ್ಲ ಮತ್ತೆ ಕಾಂಗ್ರೆಸ್ಸಿಗೆ ಮರಳಿದ ಇತಿಹಾಸವಿದೆ.

ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಿರುವ ಶರದ್ ಪವಾರ್ ಮತ್ತು ಮಮತಾ ತಮ್ಮ ರಾಜ್ಯಗಳಿಗಷ್ಟೇ ಸೀಮಿತಗೊಂಡಿದ್ದಾರೆ. ಅವರ ಪ್ರಭಾವಳಿ ದೇಶದ ಬೇರೆಡೆ ಗೌಣ. ಹೀಗಾಗಿ ರಾಷ್ಟ್ರೀಯ ವರ್ಚಸ್ಸು ಹೊಂದಿರುವ ನೆಹರೂ –ಇಂದಿರಾ ಕುಟುಂಬಕ್ಕೇ ಕಾಂಗ್ರೆಸ್ ಜೋತುಬೀಳುವಂತಾಗಿರುವುದು ರಾಜಕೀಯ ವಿಪರ್ಯಾಸ.

1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಾದ ಬಳಿಕ ಪಕ್ಷದ ನಾಯಕತ್ವವಹಿಸಿಕೊಳ್ಳುವವರಾರೂ ಈ ಕುಟುಂಬದಲ್ಲಿ ಕಾಣಲಿಲ್ಲ. ರಾಜೀವ್ ಆಪ್ತರು ಮತ್ತು ಪಕ್ಷದ ಹಲವು ಹಿರಿಯ ನಾಯಕರು ಸೋನಿಯಾ ಗಾಂಧಿ ಅವರನ್ನು ನಾಯಕತ್ವವಹಿಸಿಕೊಳ್ಳುವಂತೆ ದುಂಬಾಲು ಬಿದ್ದರೂ, ಅವರು ಪಕ್ಷದ ಚುಕ್ಕಾಣಿ ಹಿಡಿಯಲು ಮುಂದಗಲಿಲ್ಲ. ಅತ್ತೆ ಇಂದಿರಾ ಗಾಂಧಿ ಮತ್ತು ಪತಿ ರಾಜೀವ್ ಹತ್ಯೆಯಿಂದ ಸಾರ್ವಜನಿಕ ಜೀವನದ ಬಗ್ಗೆಯೇ ನೈತಿಕ ಸ್ಥೈರ್ಯ ಕಳೆದುಕೊಂಡು ಕುಗ್ಗಿಹೋಗಿದ್ದ ಸೋನಿಯಾ ತಮ್ಮ ಇಬ್ಬರು ಎಳೆಯ ಮಕ್ಕಳೊಡನೆ ಮನೆಯೊಳಗೇ ಇದ್ದುಬಿಟ್ಟರು.

ಈ ಅವಧಿಯಲ್ಲಿ ಪಕ್ಷದ ಹಿರಿಯ ನಾಯಕರಾಗಿದ್ದ ಪಿ.ವಿ. ನರಸಿಂಹರಾವ್ ಪಕ್ಷದ ಚುಕ್ಕಾಣಿ ಹಿಡಿದು ಪ್ರಧಾನ ಮಂತ್ರಿಯೂ ಆದರು. ನರಸಿಂಹರಾವ್ ಜಾಗತಿಕ ಕಾಲಮಾನಕ್ಕೆ ತಕ್ಕಂತೆ ಮುಕ್ತ ಆರ್ಥಿಕ ನೀತಿಯನ್ನು ಜಾರಿಗೆ ತಂದು ದೇಶದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತಂದರು. ಇದು ನಿಜವಾದರೂ, ಅವರ ಅವಧಿಯಲ್ಲಿ ನಡೆದ ಬಾಬ್ರಿ ಮಸೀದಿ ನೆಲಸಮದಿಂದ ಹಲವಾರು ವರ್ಷದಿಂದ ಪಕ್ಷವನ್ನು ಬೆಂಬಲಿಸಿಕೊಂಡು ಬಂದ ಮುಸ್ಲಿಮರ ವಿಶ್ವಾಸವನ್ನು ಕಳೆದುಕೊಂಡದ್ದು ಪಕ್ಷದಲ್ಲಿನ ರಾವ್ ವಿರೋಧಿಗಳಾಗಿದ್ದ ಅರ್ಜುನ್ ಸಿಂಗ್ ಮುಂತಾದವರು ಪಕ್ಷ ಬಿಡುವಂತಹ ಪರಿಸ್ಥಿತಿ ಬಂದದ್ದು ಇತಿಹಾಸ.

ಪಿ.ವಿ.ನರಸಿಂಹರಾವ್ ನೇತೃತ್ವದಲ್ಲಿ 1996ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 140 ಸ್ಥಾನಗಳನ್ನು ಪಡೆದು ಅಧಿಕಾರ ಕಳೆದುಕೊಂಡಿತು. ನರಸಿಂಹರಾವ್ ವರ್ಚಸ್ಸು ಚುನಾವಣೆಯಲ್ಲಿ ಮತ ತಂದುಕೊಡಲಿಲ್ಲ. ಈ ವಾಸ್ತವವನ್ನು ಮನಗಂಡ ಇಂದಿರಾ ಕುಟುಂಬಕ್ಕೆ ಆಪ್ತರಾದ ಮತ್ತು ಭಟ್ಟಂಗಿಗಳ ಕೂಟ ನರಸಿಂಹರಾವ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಹಿರಿಯ ಕಾಂಗ್ರೆಸ್ಸಿಗ ಸೀತಾರಾಂ ಕೇಸರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತು. ಆದರೆ ಅವರು ಒಂದು ವರ್ಷ ಪೂರೈಸುವ ಹೊತ್ತಿಗೆ ಮತ್ತೆ ಇಂದಿರಾ ಪರಿವಾರದ ಭಟ್ಟಂಗಿಗಳ ಕೂಟ ಮನೆಯಲ್ಲಿ ಮೌನವಾಗಿ ತಮ್ಮಷ್ಟಕ್ಕೆ ತಾವಿದ್ದ ಸೋನಿಯಾ ಗಾಂಧಿ ಅವರಲ್ಲಿ ರಾಜಕೀಯ ಆಸಕ್ತಿ ತುಂಬುವಲ್ಲಿ ಯಶಸ್ವಿಯಾಯಿತು. ಪಕ್ಷದ ಕಾರ್ಯಕಾರಿಣಿಯಲ್ಲಿ ಕೇಸರಿಯವರ ಬದಲಿಗೆ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯ ಮಾಡಿತು. 1998ರ ಮಾರ್ಚ್ನಲ್ಲಿ ಒಂದು ದಿನ ಕೇಸರಿಯವರನ್ನು ಪಕ್ಷದ ಕಚೇರಿಯಿಂದ ಹೊರಗಟ್ಟಿ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿತು.

ಆರು ವರ್ಷ ತಮ್ಮ ಪರಿವಾರದ ಕೈತಪ್ಪಿದ್ದ ಕಾಂಗ್ರೆಸ್ಸನ್ನು ಸೋನಿಯಾ ಗಾಂಧಿ ಕೈಗೆ ತೆಗೆದುಕೊಂಡರು. ಈ ಬದಲಾವಣೆಯಿಂದ ಇಂದಿರಾ ಗಾಂಧಿ ಕುಟುಂಬದ ನೆರಳಿನಲ್ಲಿ ಬೆಳೆದ ಹಲವು ಕಾಂಗ್ರೆಸ್ಸಿಗರು ಕುಣಿದು ಕುಪ್ಪಳಿಸಿದರು. ಸೋನಿಯಾ ನಾಯಕತ್ವ ಬಂದ ಮೇಲೆ 2004ರಿಂದ 2013ವರೆಗೆ ಕಾಂಗ್ರೆಸ್ ಮತ್ತೆ ತನ್ನ ಅಧಿಕಾರ ನಡೆಸಿತು. ಈ ಅವಧಿಯಲ್ಲಿ ಅವರು ಹುಟ್ಟಿನಿಂದ ಭಾರತೀಯರಲ್ಲ ಎನ್ನುವ ಬಿಜೆಪಿ ಮತ್ತು ಸಂಘಪರಿವಾರದ ವಿರೋಧದಿಂದ ಪ್ರಧಾನಿಯಾಗುವ ಅವಕಾಶ ತಪ್ಪಿತು. ತಾವು ಹೇಳಿದಂತೆ ಕೇಳುವ ವ್ಯಕ್ತಿಯನ್ನು ಸೋನಿಯಾ ಪ್ರಧಾನಿ ಪಟ್ಟಕ್ಕೆ ಕೂರಿಸಿದರು. ರಾಜಕೀಯದಲ್ಲಿ ನಿರುಪದ್ರವಿಯಾದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ಪ್ರಧಾನಿಯಾದರು, ಆದರೆ ವಾಸ್ತವವಾಗಿ ಆಡಳಿತದ ಸೂತ್ರವೆಲ್ಲ ಸೋನಿಯಾ ಗಾಂಧಿ ಅವರ ಕೈಯಲ್ಲೇ ಇದ್ದದ್ದು ಸುಳ್ಳಲ್ಲ. ಇದೇ ಈಗ ಅವರ ಕುಟುಂಬದ ರಾಜಕಾರಣಕ್ಕೆ ಮಗ್ಗಲ ಮುಳ್ಳಾದದ್ದು ವಿಪರ್ಯಾಸ.

ಆದರೆ ಸೋನಿಯಾ ವಿದೇಶಿ ಮಹಿಳೆ ಮತ್ತು ಕ್ರೈಸ್ತರೆಂದು ಬಿಜೆಪಿ ಮತ್ತು ಸಂಘಪರಿವಾರ ನಿರಂತರವಾಗಿ ನಡೆಸಿಕೊಂಡು ಬಂದ ಪ್ರಚಾರ ರಾಹುಲ್ ವರ್ಚಸ್ಸು ಹೆಚ್ಚಲು ಅಡ್ಡಗೋಡೆಯಂತಾಯಿತು ಎನ್ನುವುದು ಬೆಳಕಿನಷ್ಟು ಸತ್ಯ. ಹಾಗಾಗಿ ರಾಹುಲ್ ಯುವಕರಾದರೂ ಇಡೀ ದೇಶದ ಯುವಜನತೆಯ ಪ್ರತಿನಿಧಿಯಾಗಿ ಬೆಳೆಯಲಾಗಿಲ್ಲ. ಬದಲಾಗಿ ಪಕ್ಷದಲ್ಲಿನ ಯುವಕರಿಗಷ್ಟೇ ಭವಿಷ್ಯದ ‘ಪ್ರಧಾನಿ’ ಎಂಬ ಕನಸು ಕಾಣುವಷ್ಟಕ್ಕೇ ಅವರ ವ್ಯಕ್ತಿತ್ವ ಸೀಮಿತಗೊಂಡದ್ದು ವಿಚಿತ್ರ. ಅರುವತೆಂಟು ವರ್ಷದ ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನತೆಗೆ ಆಶಾದಾಯಕವಾಗಿ ಕಂಡು ಬಂದರೂ 48 ವರ್ಷದ ರಾಹುಲ್, ಯುವಜನರ ಐಕಾನ್ ಆಗಿ ಭರವಸೆಯನ್ನು ಹುಟ್ಟುಹಾಕಲು ಸಾಧ್ಯವಾಗದೇ ಹೋಗಿರುವುದು ಅವರ ಹಲವು ವೈಫಲ್ಯಗಳಲ್ಲಿ ಒಂದು.

ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಆಸ್ತಿಯಲ್ಲ. ಅದು ಇಡೀ ದೇಶದ ಜನರಿಗೆ ಸೇರಿದ ಪಕ್ಷ ಎನ್ನುವ ವಿಶ್ವಾಸವನ್ನು ಮೂಡಿಸುವ ಹೊಣೆ ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರದ್ದು. ಹಾಗಾಗಿ ಜನತೆಯಲ್ಲಿ ಹೊಸದಾದ ವಿಶ್ವಾಸ ಮೂಡಿಸಬೇಕು.  ಕಾಂಗ್ರೆಸ್ ತಮ್ಮ ಕುಟುಂಬದ ಆಸ್ತಿಯಲ್ಲ ಎನ್ನುವುದನ್ನು ಕಾರ್ಯತಃ ಸಾಬೀತುಪಡಿಸಬೇಕು. ಹೊಸ ನಾಯಕನಿಗೆ ಪಟ್ಟಕಟ್ಟಬೇಕು.  ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ದೇಶದ ರಾಜಕೀಯ ರಂಗದಲ್ಲಿ ಪುನಶ್ಚೇತನಗೊಳಿಸಬೇಕಿದೆ.