ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್‌: ಪ್ರದ್ಯುಮನ್‌, ಕಮಲನಾಥ್‌ ಆರೋಪ

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್‌: ಪ್ರದ್ಯುಮನ್‌, ಕಮಲನಾಥ್‌ ಆರೋಪ

ಭೋಪಾಲ್‌: ಮಧ್ಯಪ್ರದೇಶದಲ್ಲಿ ಆಡಳಿತ ಪಕ್ಷ ಬಹುಮತ ತೋರಿಸಲಿ ಎಂದು ಬಿಜೆಪಿ ಸವಾಲೆಸೆದ ಹಿನ್ನೆಲೆ, ಬಿಜೆಪಿಯವರು ಕಾಂಗ್ರೆಸ್‌ನ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಆಪರೇಷನ್‌ ಕಮಲದಡಿಯಲ್ಲಿ ಶಾಸಕರಿಗೆ ಹಣದ ವ್ಯಾಮೋಹ ತೋರಿಸುತ್ತಿದೆ ಎಂದು ಸಚಿವ ಪ್ರದ್ಯುಮನ್‌ ಸಿಂಗ್‌ ಗುಡುಗಿದ್ದಾರೆ.

“ಕಾಂಗ್ರೆಸ್‌ ತೊರೆದು ತಮ್ಮ ಪಕ್ಷ ಸೇರಿ ಎಂದು ಬಿಜೆಪಿಯವರು ನಮ್ಮ ಪಕ್ಷದ ಶಾಸಕರ ಹಿಂದೆ ಬಿದ್ದಿದ್ದಾರೆ. 50 ಕೋಟಿ ಹಣ ಕೊಡುವುದಾಗಿ ಆಫರ್‌ ನೀಡಿದ್ದಾರೆ.” ಎಂದು ಕಾಂಗ್ರೆಸ್‌ನ ಸಚಿವ ಪ್ರದ್ಯುಮನ್‌ ಸಿಂಗ್‌ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು “ನಮ್ಮ ಪಕ್ಷದ 10 ಶಾಸಕರಿಗೆ ಬಿಜೆಪಿ ಬಲೆ ಬೀಸಿದೆ. ಆಫರ್‌ಗಳನ್ನು ಮುಂದಿಟ್ಟುಕೊಂಡು ಫೋನ್‌ ಕರೆಗಳನ್ನು ಮಾಡುತ್ತಿದ್ದಾರೆ. ಬೇಕಾದರೆ ಆ 10 ಶಾಸಕರ ಹೆಸರನ್ನು ನಾನು ಬಹಿರಂಗಗೊಳಿಸಬಲ್ಲೆ. ಇದೊಂದು ರೀತಿಯ ಕುದುರೆ ವ್ಯಾಪಾರದಂತಾಗಿದೆ” ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ಹೇಳಿಕೆ ನೀಡಿದ್ದಾರೆ.

2018ರಲ್ಲಿ ಮಧ್ಯಪ್ರದೇಶದ ವಿಧಾನಸಬೆಯ 230 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ 114 ಸೀಟುಗಳನ್ನು ಗೆದ್ದುಕೊಂಡು, 2 ಸೀಟುಗಳನ್ನು ಗೆದ್ದ ಬಹುಜನ ಸಮಾಜ ಪಕ್ಷದೊಂದಿಗೆ ಬೆಂಬಲ ಪಡೆದು ಸರ್ಕಾರ ರಚಿಸಿದೆ. ಉಳಿದಂತೆ ಬಿಜೆಪಿ 109, ಸಮಾಜವಾದಿ ಪಾರ್ಟಿ 1 ಮತ್ತು 4 ಪಕ್ಷೇತರ ಸೀಟುಗಳು ವಿರೋಧ ಸ್ಥಾನದಲ್ಲಿವೆ.