ಕೃಷಿ ಸಾಲ ಮನ್ನಾ ಮಾಡಲು ರಾಜ್ಯಗಳ ಪೈಪೋಟಿ : 6 ವರ್ಷದಲ್ಲಿ 10 ರಾಜ್ಯಗಳಿಂದ 2.4 ಲಕ್ಷ ಕೋಟಿ ರೂ. ಮನ್ನಾ

ಕೃಷಿ ಸಾಲ ಮನ್ನಾ ಮಾಡುವ ರಾಜ್ಯ ಸರ್ಕಾರಗಳ ಪೈಪೋಟಿ ಧೋರಣೆ ಸಾಲದ ಸಂಸ್ಕೃತಿಯನ್ನೇ ದುರ್ಬಲಗೊಳಿಸುತ್ತದೆಯಲ್ಲದೆ ರಾಜ್ಯದ ಹಣಕಾಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮೂಲಕ ಮಧ್ಯಮ ರೈತರ ಹಿತಾಸಕ್ತಿಗಳಿಗೆ ದೀರ್ಘಾವಧಿಯ ಹಾನಿಗೆ ಕಾರಣವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಹೇಳಿದೆ.

ಕೃಷಿ ಸಾಲ ಮನ್ನಾ ಮಾಡಲು ರಾಜ್ಯಗಳ ಪೈಪೋಟಿ : 6 ವರ್ಷದಲ್ಲಿ 10 ರಾಜ್ಯಗಳಿಂದ 2.4 ಲಕ್ಷ ಕೋಟಿ ರೂ. ಮನ್ನಾ

ಕಳೆದ 6 ವರ್ಷಗಳಲ್ಲಿ ಕರ್ನಾಟಕವೂ ಸೇರಿದಂತೆ ದೇಶದ 10 ರಾಜ್ಯಗಳು ಒಟ್ಟು 2.4 ಲಕ್ಷ ಕೋಟಿ ರು. ಕೃಷಿ ಸಾಲ ಮನ್ನಾ ಘೋಷಿಸಿವೆ. ಸಾಲ ಮನ್ನಾ ಹೆಸರಿನಲ್ಲಿ ಬಜೆಟ್ ನಲ್ಲಿ ಅವಕಾಶ ಮಾಡಿಕೊಂಡಿರುವ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಘೋಷಣೆ ಮಾಡಿವೆ.

ಈಗ ಘೋಷಣೆ ಮಾಡಿರುವ ಸಾಲದ ಮೊತ್ತ ರಾಷ್ಟ್ರವ್ಯಾಪಿ ಮಾಡುವ ಸಾಲ ಮನ್ನಾ ಕಾರ್ಯಕ್ರಮಗಳಿಗಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. ರಾಜ್ಯ ಸರ್ಕಾರಗಳ ಈ ಧೋರಣೆ, ಭಾರತೀಯ ರಿಸರ್ವ್ ಬ್ಯಾಂಕ್ 2019ರ ಸೆಪ್ಟಂಬರ್ ನಲ್ಲಿ ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.

ಅದೇ ರೀತಿ  ಕೃಷಿ ಸಾಲ ಮನ್ನಾ ಮಾಡಲು ಹೇಗೆ ಪೈಪೋಟಿಗಿಳಿದಿದೆ ಎಂಬ ಸಂಗತಿಯನ್ನು ಹೊರಗೆಡವಿರುವ  ರಿಸರ್ವ್ ಬ್ಯಾಂಕ್,  ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕೃಷಿ ಆದಾಯ ಕಳೆದ 14 ವರ್ಷಗಳಿಗಿಂತಲೂ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂಬ ವಾಸ್ತವಾಂಶವನ್ನೂ ತೆರೆದಿಟ್ಟಿದೆ.

ಸಾಲ ಮನ್ನಾ ಕುರಿತು 2014-15ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಅಧ್ಯಯನ ನಡೆಸಿರುವ ರಿಸರ್ವ್ ಬ್ಯಾಂಕ್, ಕೃಷಿ ಸಾಲ ಮನ್ನಾ 'ನೈತಿಕ ಅಪಾಯ' ಸೃಷ್ಟಿಸುತ್ತದೆ ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಿರುವುದು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶದಂತಿದೆ.

ಗ್ರಾಮೀಣ ಉದ್ಯೋಗ ಕಾರ್ಯಕ್ರಮದ ಹೆಸರಿನಲ್ಲಿ 10 ರಾಜ್ಯಗಳು ಘೋಷಿಸಿರುವ ಒಟ್ಟು 2.4 ಲಕ್ಷ ಕೋಟಿ ರೂ. ಮೊತ್ತದ ಕೃಷಿ ಸಾಲ, ಕೇಂದ್ರದ 2019-20ರ ಬಜೆಟ್ ನ ನಾಲ್ಕು ಪಟ್ಟು ಅಥವಾ ಶೇ 9% ರಷ್ಟಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಕಳೆದ ಆರು ವರ್ಷಗಳ ಪೈಕಿ 2017-18ನೇ ವರ್ಷವೊಂದರಲ್ಲೇ ಹೆಚ್ಚಿನ ಮನ್ನಾ ಘೋಷಿಸಲಾಗಿದೆ. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ , ಪಂಜಾಬ್ ಸೇರಿದಂತೆ ಈ ಏಳು ರಾಜ್ಯಗಳಲ್ಲಿ ಒಟ್ಟು ಹಣಕಾಸಿನ ಕೊರತೆಯ 12% (ಆದಾಯಕ್ಕಿಂತ ಹೆಚ್ಚಿನ ಖರ್ಚು) ತಲುಪಿರುವುದು ವರದಿಯಿಂದ ಗೊತ್ತಾಗಿದೆ.

ಕೃಷಿ ಸಾಲ ಮನ್ನಾ ಘೋಷಣೆ ಸಂಬಂಧ ಬಜೆಟ್ ನಲ್ಲಿ ಅವಕಾಶ ಮಾಡಿಕೊಂಡಿರುವ ಮೊತ್ತಕ್ಕಿಂತಲೂ ವಾಸ್ತವದಲ್ಲಿ ಎರಡು ಪಟ್ಟು ಹೆಚ್ಚಿನ ಮೊತ್ತವನ್ನು ಘೋಷಿಸಿದೆ ಎಂಬ ಅಂಶವನ್ನೂ ವರದಿ ಹೊರಗೆಡವಿದೆ.

ಉದಾಹರಣೆಗೆ 2018-19ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ತನ್ನ ಬಜೆಟ್ ನಲ್ಲಿ 28,530 ಕೋಟಿ ರು.ಗಳನ್ನು ಕೃಷಿ ಸಾಲಕ್ಕೆಂದು ಅವಕಾಶ ಮಾಡಿಕೊಂಡಿದ್ದರೆ, ವಾಸ್ತವದಲ್ಲಿ 44,000 ಕೋಟಿ ರು.ಎಂದು ಘೋಷಿಸಲಾಗಿತ್ತು.ಅಂದರೆ 15,470 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಘೋಷಿಸಲಾಗಿದೆ.

ಮಧ್ಯ ಪ್ರದೇಶ ಸರ್ಕಾರ 2018-19ನೇ ಸಾಲಿನ ಬಜೆಟ್ ನಲ್ಲಿ ಸಾಲಮನ್ನಾಕ್ಕೆಂದು 13,000 ಕೋಟಿ ರು.ನಿಗದಿಪಡಿಸಿಕೊಂಡಿದ್ದರೆ, 36,500 ಕೋಟಿ ರು.ಮೊತ್ತವನ್ನು ಘೋಷಿಸಿತ್ತು. ಉತ್ತರ ಪ್ರದೇಶ 27,200 ಕೋಟಿ ರು.ಗಳಿಗೆ ಅವಕಾಶ ಮಾಡಿಕೊಂಡಿದ್ದರೆ 36,360 ಕೋಟಿ ರು.ಘೋಷಿಸಿತ್ತು. ಅದೇ ರೀತಿ ಬಜೆಟ್ ನಲ್ಲಿ 25,480 ಕೋಟಿ ರು.ಗಳಿಗಷ್ಟೇ ನಿಗದಿಪಡಿಸಿಕೊಂಡಿದ್ದ ಮಹಾರಾಷ್ಟ್ರ ಸರ್ಕಾರ, 34,020 ಕೋಟಿ ರು.ಗಳನ್ನು ಘೋಷಿಸಿತ್ತು.

ಆಂಧ್ರ ಪ್ರದೇಶ ಬಜೆಟ್ ನಲ್ಲಿ 12,830 ಕೋಟಿ ರು.ಗೆ ಗುರಿ ಇಟ್ಟುಕೊಂಡಿದ್ದರೆ 24,000 ಕೋಟಿ ರು.ಗಳನ್ನು ಘೋಷಿಸಿತ್ತು. ಹಾಗೆಯೇ ರಾಜಸ್ಥಾನ 6,240 ಕೋಟಿ ರು.ಗಳನ್ನು ಬಜೆಟ್ ನಲ್ಲಿ ಅವಕಾಶಮಾಡಿಕೊಂಡಿದ್ದರೆ 18,000 ಕೋಟಿ ರು.ಗಳನ್ನು ಘೋಷಿಸಿತ್ತು. ತೆಲಂಗಾಣವೂ ಇದಕ್ಕೆ ಹೊರತಲ್ಲ. 14,400 ಕೋಟಿ ರು.ಗೆ ಗುರಿನಿಗದಿಪಡಿಸಿಕೊಂಡಿದ್ದ ತೆಲಂಗಾಣ 17,000 ಕೋಟಿ ರು.ಗಳನ್ನು ಘೋಷಿಸಿತ್ತು. ಪಂಜಾಬ್ ಸರ್ಕಾರ 7,620 ಕೋಟಿ ರು.ಬಜೆಟ್ ನಲ್ಲಿ ಕಾಯ್ದಿರಿಸಿಕೊಂಡಿದ್ದರೆ ಘೋಷಿಸಿದ್ದು 10,000 ಕೋಟಿ ರು.ಗಳನ್ನು. 9,220 ಕೋಟಿ ರು.ಗಳನ್ನು ಬಜೆಟ್ ನಲ್ಲಿ ಅವಕಾಶ ಮಾಡಿಕೊಂಡಿದ್ದ ಛತ್ತೀಸ್ ಘಡ್ 6,100 ಕೋಟಿ ರು.ಘೋಷಿಸಿತ್ತು. ಬಜೆಟ್ ನಲ್ಲಿ 4,360 ಕೋಟಿ ರು.ಗಳಿಗೆ ಅವಕಾಶ ಮಾಡಿಕೊಂಡಿದ್ದ ತಮಿಳುನಾಡು 5,280 ಕೋಟಿ ರು.ಗಳನ್ನು ಘೋಷಿಸಿತ್ತು ಎಂದು ವರದಿ ತಿಳಿಸಿದೆ.  

ಕೃಷಿ ಸಾಲ ಮನ್ನಾ ಇತ್ತೀಚಿನ ವಿದ್ಯಮಾನವಲ್ಲವಾದರೂ 2014-15 ರಿಂದ ಹಲವು ರಾಜ್ಯ ಸರ್ಕಾರಗಳು ಸಾಲಮನ್ನಾವನ್ನೇ ಅತಿ ಹೆಚ್ಚು ಪ್ರೋತ್ಸಾಹಿಸುತ್ತಿದೆ. ಸರ್ಕಾರಗಳ ಈ ಧೋರಣೆ ಸಾಲದ ಸಂಸ್ಕೃತಿಯನ್ನೇ ದುರ್ಬಲಗೊಳಿಸುತ್ತದೆಯಲ್ಲದೆ ರಾಜ್ಯದ ಹಣಕಾಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮೂಲಕ ಮಧ್ಯಮ ರೈತರ ಹಿತಾಸಕ್ತಿಗಳಿಗೆ ದೀರ್ಘಾವಧಿಯವರೆಗೆ ಹಾನಿಗೆ ಕಾರಣವಾಗುತ್ತದೆ ಎಂದು ವರದಿ ಹೇಳಿದೆ.

1990ರಲ್ಲಿ ಕೇಂದ್ರ ಸರ್ಕಾರ 10,000 ಕೋಟಿ ರು. ಮನ್ನಾ ಮಾಡಿತ್ತು. 2016-17ರಲ್ಲಿ 50,600 ಕೋಟಿ ರು.ಗೇರಿದೆ. ಅಂದರೆ 24 ಪಟ್ಟು ಹೆಚ್ಚಳವಾಗಿರುವುದು ವರದಿಯಿಂದ ಗೊತ್ತಾಗಿದೆ.

ಇನ್ನು ಸಾಲ ಮನ್ನಾ ಘೋಷಿಸಿರುವ ರಾಜ್ಯಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಳಗೊಂಡಿದೆ. ಸಾಲ ಮನ್ನಾ ಘೋಷಿಸದ ಹೆಚ್ಚಿನ ರಾಜ್ಯಗಳಲ್ಲಿಯೂ(ಬಿಹಾರ, ಒಡಿಶಾ ಮತ್ತು ಹರಿಯಾಣ ಹೊರತು ಪಡಿಸಿ) ಅನುತ್ಪಾದಕ ಆಸ್ತಿ ಪ್ರಮಾಣದಲ್ಲಿ ಯಾವುದೆ ಬದಲಾವಣೆಗಳೂ ಕಂಡು ಬಂದಿಲ್ಲ. ಆದರೆ 2017-18 ಮತ್ತು 2018-19ನೇ ಸಾಲಿನಲ್ಲಿ ಕೃಷಿ ಸಾಲ ಮನ್ನಾ ಘೋಷಿಸಿರುವ ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳಲ್ಲಿಯೂ ಅನುತ್ಪಾದಕ ಆಸ್ತಿ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೇ "ನೈತಿಕ ಅಪಾಯ" ಎಂದು ಬಣ್ಣಿಸಿರುವ ರಿಸರ್ವ್ ಬ್ಯಾಂಕ್,  ಸಾಲ ಮನ್ನಾವು ಫಲಾನುಭವಿಗಳು ಮತ್ತು ಫಲಾನುಭವಿಗಳಲ್ಲದವರನ್ನೂ ಸುಸ್ತಿದಾರರಾಗಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದೆ.

ರಾಜ್ಯದ ಖರ್ಚಿನಲ್ಲಿ ಕೃಷಿ ಸಾಲ ಮನ್ನಾ ಪಾಲು ಹೆಚ್ಚಳ ಕಂಡಿರುವ ಕಾರಣ “ಕೃಷಿ ವಲಯಕ್ಕೆ  ರಾಜ್ಯ ಸರ್ಕಾರಗಳ ಬಂಡವಾಳ ವೆಚ್ಚವನ್ನು ತಗ್ಗಿಸಬಹುದು ಮತ್ತು ಘೋಷಿತ ಸಾಲ ಮನ್ನಾ ಕಡೆಗೆ ಖರ್ಚನ್ನು ನಿಭಾಯಿಸಲು ಬಜೆಟ್ ನ ನಿಬಂಧನೆಗಳನ್ನು ಸಡಿಲಗೊಳಿಸಬಹುದು. ಇದೆಲ್ಲದರಿಂದ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಬಲ್ಲದು ಎಂದು ವರದಿ ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಕೃಷಿ ವಲಯ ಮಾತ್ರವಲ್ಲದೆ ಗ್ರಾಮೀಣರ ಸಂಕಷ್ಟಗಳು ಹೆಚ್ಚಿವೆ. ರೈತರು ಬೆಳೆದ ಬೆಲೆಗೆ ಉತ್ತಮ ಬೆಲೆ ಅಥವಾ ಬೆಂಬಲ ಬೆಲೆ ಸಿಗದ ಕಾರಣ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಭಾರತೀಯ ಜನತಾಪಕ್ಷ ಭರವಸೆ ನೀಡಿದೆ.

ರೈತರು ಮತ್ತು ಕೃಷಿಯೇತರ ಕಾರ್ಮಿಕರ ನಡುವಿನ ಅಸಮಾನತೆಯಿಂದಾಗಿಯೇ ಕೃಷಿಯಲ್ಲಿ ಬಿಕ್ಕಟ್ಟುಗಳು ಉಲ್ಬಣಗೊಳ್ಳುತ್ತಿವೆ. ಆದಾಯ ಕಡಿಮೆ ಮಟ್ಟದಲ್ಲಿದ್ದರೂ ಅದು ಸಂಪೂರ್ಣವಾಗಿ ದೊರೆಯಬೇಕು. ಇದು ಸಾಧ್ಯವಾದಲ್ಲಿ ಮಾತ್ರ ಅಸಮಾನತೆ ನಿವಾರಿಸಿದಂತಾಗುತ್ತದೆ ಎಂದು ನೀತಿ ಆಯೋಗವೂ 2017ರಲ್ಲಿ ಹೇಳಿತ್ತು.

1980 ರ ದಶಕದ ಆರಂಭದಲ್ಲಿ ಕೃಷಿಯೇತರ ಕಾರ್ಮಿಕರ ಆದಾಯ ಶೇ. 34% ರಷ್ಟಿತ್ತು. ಇದು ಒಂದು ದಶಕದಲ್ಲಿ ಅಂದರೆ 1993-94ರಲ್ಲಿ ಶೇ. 25% ಕ್ಕೆ ಇಳಿದಿತ್ತು ಎಂದು ಅಧ್ಯಯನವು ತಿಳಿಸಿದೆ. 2011-12ರ ಮಧ್ಯೆ ಎಂಟು ವರ್ಷಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು.

2015-16ರ ಎರಡು ದಶಕಗಳಲ್ಲಿ ಪ್ರತಿ ಬೆಳೆಗಾರನಿಗೆ ನೈಜ ಆದಾಯವು ವರ್ಷಕ್ಕೆ ಶೇ. 3.4% ರಷ್ಟು ಹೆಚ್ಚಾಗಿದೆಯಾದರೂ 2015-16ರ ಆರಂಭದ ವರ್ಷದಲ್ಲಿ ರೈತರ ನೈಜ ಆದಾಯವನ್ನು (ಹಣದುಬ್ಬರಕ್ಕೆ ಸರಿಹೊಂದಿಸಿದ ಆದಾಯ) ದ್ವಿಗುಣಗೊಳಿಸಲು, ಕೃಷಿ ಆದಾಯವು ವಾರ್ಷಿಕವಾಗಿ ಶೇ. 10.41%, ಏರುಗತಿಯಲ್ಲಿರಬೇಕು ಎಂದು ನೀತಿ ಆಯೋಗದ ಅಧ್ಯಯನವೂ ಗಮನಿಸಿತ್ತು.

ಆದರೆ 2018-19ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕೃಷಿ ಆದಾಯದ ಬೆಳವಣಿಗೆ ಶೇ.2.04ರಷ್ಟಿತ್ತು. ಇದು ಕಳೆದ 14 ವರ್ಷಗಳಲ್ಲಿ ಅತ್ಯಂತ ಕಡಿಮೆ ಎಂದು ಹೇಳಲಾಗಿದೆ.

ಹೀಗಾಗಿ ಕೃಷಿಯನ್ನು ಕಾರ್ಯಸಾಧ್ಯವಾದ ಮತ್ತು ಸುಸ್ಥಿರ ವಲಯವನ್ನಾಗಿ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು “ಪ್ರಸ್ತುತ ಕೃಷಿ ಸಬ್ಸಿಡಿ ನೀತಿಗಳು ಹೇಗೆ ಪರಿಣಾಮ ಬೀರಿವೆ ಎಂಬ ಬಗ್ಗೆ ಮೌಲ್ಯಮಾಪನ ಮಾಡಬೇಕು ಎಂದು ವರದಿ ಶಿಫಾರಸು ಮಾಡಿದೆ.