ಅನುರೂಪ 

ಮೊದಲ ಸಲ ನೋಡಿದಾಗಿನಿಂದ ನನ್ನ ಕಣ್ಣಲ್ಲಿ ಬಾಟನಿ ಲೆಕ್ಚರ್ ಅನುರೂಪ, ಅವರ ಮೈಬಣ್ಣವೇ ಮನೆ ಮಾಡಿತು. ಅದು ಅವರ ಮೈ ಬಣ್ಣವಲ್ಲ. ನನ್ನ ಕಣ್ಣಿನ ಬಣ್ಣವೇ ಆಗಿ ಹೋಯಿತು. ‘ವಯಸ್ಸಾದಂಗೆಲ್ಲ ಕನಡಿ ಮುಂದ ನಿಲ್ಲೋದು ಭಾಳ ಅಗೇತಿ ನಿಮ್ದು’ ಎಂದು ಈಗೀಗ ಚುಚ್ಚುವ ಹೆಂಡತಿಯ ಮಾತು ಎರಡು ಕಿವಿಯ ನಡುವಿನ ರಾಜಮಾರ್ಗದಲ್ಲಿ ಹಾದು ಹೋಗಿಬಿಡುತ್ತದೆ.

ಅನುರೂಪ 

ನನಗೆ ಬಾಟನಿ ವಿಷಯದ ಮೇಲೆ ಕಂಡಾಬಟ್ಟೆ ಪ್ರೀತಿ ಅಮರಿಕೊಳ್ಳಲು ಬಾಟನಿ ಲೆಕ್ಚರರೇ ಕಾರಣ ಎಂದುಕೊಳ್ಳುವುದನ್ನು ಬಿಡಲು ಇತ್ತಿತ್ತಲಾಗಿ ರೂಢಿ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದರೂ ಪೂರ್ತಿ ಯಶಸ್ಸು ಕಾಣುವ ಮಾತು ದೂರವಾಗುತ್ತಿದೆ. ಅರಿಯಲು ಕಷ್ಟಪಡುವದಕ್ಕಿಂತ ಮನುಷ್ಯ ಮರೆಯಲು ಕಷ್ಟಪಡಬೇಕೆಂಬುದು ನನಗೆ ತಿಳಿದಿರಲಿಲ್ಲ. ಎಲ್ಲವನ್ನೂ ತಿಳಿದಿರಲು ನಾನೇನು ಸರ್ವಜ್ಞನಲ್ಲ. ಏನೂ ತಿಳಿಯದ ವ್ಯಕ್ತಿ ಕೂಡ ಎಲ್ಲಿಯೂ ಇಲ್ಲ. ಒಬ್ಬ ಹುಚ್ಚನಿಗೂ ಕೂಳು ನೀರು ಸೇವಿಸಬೇಕೆಂಬ ತಿಳಿವನ್ನು ಈ ಪ್ರಕೃತಿ ಕೊಟ್ಟಿದೆ. ಬಾಟನಿ ಸಬ್ ಜೆಕ್ಟನ್ನು ಈ ಪರಿ ಕಕ್ಕುಲಾತಿಯಿಂದ ಹಚ್ಚಿಕೊಂಡವನು ಇಷ್ಟೂ ತಿಳಿಯದಿದ್ದರೆ ಹೇಗೆ? ಹಾಂ! ಹಾಂ! ಎಲ್ಲ ತಿಳಿದಿದ್ದೇವೆ ಎಂಬಂತ ಹುಚ್ಚರು ಮೊನ್ನೆಯೂ ಇದ್ದರು, ನಿನ್ನೆಯೂ ಇದ್ದರು. ಇವತ್ತು ಅಂಥವರ ಸಂಖ್ಯೆ ಜಾಸ್ತಿಯಾಗಿದೆಯೆಷ್ಟೆ. ಇದನ್ನೂ ಬಾಟನಿ ಟೀಚರೇ ಹೇಳಿಕೊಟ್ಟರೆ? ನೆನಪಿಲ್ಲ.

ನೆನಪು? ಹಾಳು ಮರೆವು! ಏನೇನೋ ಅರಿಯಲು ಸಾಧ್ಯವಾದಂತೆ, ಎಷ್ಟೆಷ್ಟೋ ಮರೆಯಲು ಕೂಡ ಸಾಧ್ಯವಾಗಿದೆ. ಆದರೆ.... ಆ ಬಣ್ಣ? ಯಾವ ಬಣ್ಣ? ಅದೇ ಎಡವಟ್ಟಾಗಿರುವುದು. ಮರೆಯಲು ಸಾಧ್ಯವಾಗುತ್ತಿಲ್ಲ, ಅರಿಯಲು ದಕ್ಕುತ್ತಿಲ್ಲ. ಬಿಳಿ, ಕಪ್ಪು, ಕೆಂಪು, ಹಳದಿ, ಹಸಿರು.... ಇನ್ನೂ ಏನೇನೊ.... ಹೆಸರಿರುವ ಬಣ್ಣಗಳು ಮಾತ್ರ ಬಣ್ಣವೇ? ಇನ್ನೂ ಹೆಸರಿಡದ ಬಣ್ಣವೊಂದು ಈ ಭೂಮಿಯ ಮೇಲಿಲ್ಲವೇ? ಇದ್ದರೆ, ಅದು ಯಾವುದು? ಹೋಗಲಿ ಭೂಮಂಡಲದಿಂದ ಹೊರಗೆ? ಅನಂತ ಅವಕಾಶದಲ್ಲಿ? ಇ..ರ..ಬ..ಹು..ದ..ಲ್ಲ? 

ಅದು ಥಂಡಿಕಾಲ. ಕ್ಲಾಸು ಮುಗಿಯುವಷ್ಟರಲ್ಲಿ ಕತ್ತಲಾಗುತ್ತಿತ್ತು. ಎಕ್ಸಟ್ರಾ ಕ್ಸಾಸೆಂದರೆ ಹುಡುಗಾಟಿಕೆಯೆ? ಅದರ ಬಣ್ಣವೇ ಬೇರೆ. ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಹಿರಣ್ಯಕಶಿಪುವಿನ ವಧಾಕಾಲ. ಎಲ್ಲೆಲ್ಲೂ ದ್ವಂದ್ವ; ಮನಸ್ಸಿನೊಳಗೂ. ನಾವು ನಾಲ್ಕು ಮಂದಿ ಮನೆ ಕಡೆಗೆ ನಡೆದು ಹೋಗುವ ದಾರಿಯಲ್ಲಿ ತುಂಬಿ ತುಳುಕಾಡುವಷ್ಟು ಕತ್ತಲಿತ್ತು. ಕತ್ತಲೆಂದರೆ ನಮಗೆ ತಾಯಿಯಿದ್ದಂತೆ. ಅದು ಹೊಟ್ಟೆಯಲ್ಲಿ ಹಾಕಿಕೊಂಡು ಕಾಪಾಡಿದಂತೆ ಬೇರೆ ಯಾವುದೂ ನಮ್ಮನ್ನು ಕಾಪಿಟ್ಟಿಲ್ಲ. ನಮ್ಮೊಳಗೆ ಇಳಿದಿಲ್ಲ. ಆದರದ ಮತ್ತು ಹಾದರದ ಮಾತು ಆಡಿಕೊಳ್ಳಲು ಬೆಳಕೇಕೆ ಬೇಕು? ಮಾತು ಹತ್ತಿತು.ಹತ್ತಿತು ಎನ್ನುವುದಕ್ಕಿಂತ ಹೊತ್ತಿಕೊಂಡಿತು. ಒಬ್ಬ ಹೇಳಿದ, ‘ಅದು ಗುಲಾಬಿ ಬಣ್ಣಾನ ಸೈ’

‘ಗುಲಾಬಿ ಹೂವಾ ಎಂದರ ನೋಡಿಯೇನ್ಲೆ? ತಾಟನಾಗಿನ ರೊಟ್ಟೀನ  ನಿಂಗ ಕಾಣುದಿಲ್ಲ. ಗುಲಾಬಿ ಬಣ್ಣ ಅಲ್ಲಾ.... ಅದು ಗ್ಯಾರಂಟಿ ಪಿಂಕ್ ಬಣ್ಣಾ’ ಮತ್ತೊಬ್ಬ ಕಿಡಿ ಹೊತ್ತಿಸಿದ. ಆಫ್‍ ಕೋರ್ಸ್ ಕತ್ತಲಲ್ಲಿ ಅವನು ಹಾಸ್ಯ ಮಾಡಿದನೋ, ಅಪಹಾಸ್ಯಕ್ಕೊಳಗಾದನೊ? ಅಂತೂ ಇದರಿಂದ ಹುಕಿ ಬಂದ ನಮ್ಮೊಳಗಿನ ಬಣ್ಣ ತಜ್ಞನಿಗೆ ಸುಮ್ಮನಿರಲಾಗಲಿಲ್ಲ. ಸರಿಯಾಗಿ ಕಾರಿದ,-

‘ಲೇ ಪಿಂಕ ಬಣ್ಣಕ್ಕ ಕನ್ನಡದಾಗ ಗುಲಾಬಿ ಬಣ್ಣ ಅಂತಾರ್ಲೇ. ಖರೇ ಹೇಳಬೇಕಂದ್ರ.... ಅದು ಬಂಗಾರದ ಬಣ್ಣ.’ 

ಮೂರನೇ ಪಾತ್ರದ ಡೈಲಾಗ್ ಡಿಲೆವರಿ ನಂತರ, ನಾಲ್ಕನೆ ಪಾತ್ರದಿಂದ ಕನಿಷ್ಟ ಸ್ವಗತವಾದರೂ ಬೇಡವೇ? ಎಲ್ಲರೂ ನನ್ನ ಕಡೆಗೆ ನೋಡುತ್ತಿದ್ದಾರೆಂದು ಅನುಭವದ ಬೆಳಕು ಹೇಳುತ್ತಿತ್ತು. ಆದರೆ ನನ್ನ ಕಣ್ಣೊಳಗೆ ಕಟ್ಟಿಕೊಂಡ ಆ ಬಣ್ಣವನ್ನು ಬಾಯಿಯಲ್ಲಿ ಕಟ್ಟಿ ಹೇಳುವುದು ಸಾಧ್ಯವೂ ಇರಲಿಲ್ಲ; ಮನಸ್ಸೂ ಇರಲಿಲ್ಲ. ಅದೇನು ಹಾದಿಬೀದಿಯಲ್ಲಿ ನಡೆಸುವ ಗೋಷ್ಠಿಯೆ?

‘ಎಲೈ ರಾಜನೆ, ಉತ್ತರ ಹೇಳದಿದ್ದರೆ ನಿನ್ನ ತಲೆ ಹೋಳು ಹೋಳಾಗುತ್ತದೆ’ ಎಂಬ ಚಂದಮಾಮದ ಬೇತಾಳನ ಖಾಯಂ ಕೊಟೇಶನ್ ನೆನಪಾಯಿತು. ಮಾತನ್ನು ಆಡಬೇಕೆ, ನುಂಗಬೇಕೆ? 

ಮತ್ತೆ ದ್ವಂದ್ವ. ಒಳಗೂ ಹೊರಗೂ.

ಒಂದು ಸಣ್ಣ ಪಾಜ್ ‘. . . . .’

ತಲೆ, ಬೆನ್ನು, ಕಪಾಳ, ಕುಂಡಿ ಎಲ್ಲೆಂದರಲ್ಲಿ ದಬದಬ ಹೊಡೆತಗಳು. ಇರುವೆರಡು ಕೈಗಳು ಎಲ್ಲ ದಿಕ್ಕಿನಿಂದಲೂ ಬೀಸಿ ಬರುತ್ತಿದ್ದವು. ‘ಲೆಕ್ಚರ್ ಮೈ ಬಣ್ಣದ ಬಗ್ಗೆ ಮಾತಾಡ್ತೀರ್ಯಾ ಮಂಗ್ಯಾನ ಮಕ್ಳ, ಒಬ್ಬೊಬ್ಬರ ಚಮಡ ಸುಲಿದು ಬಿಡ್ತೇನಿ’ ಎನ್ನುತ್ತ ಗಣಿತ ಲೆಕ್ಚರ್ ಗಿರಗಿಟ್ಲೆ ತರ ತಿರುತಿರುಗಿ ಬರುತ್ತಿದ್ದರು. ಅವರು ಹೇಗೆ ಪ್ರತ್ಯಕ್ಷವಾದರೋ, ಹೇಗೆ ಮಾಯವಾದರೊ ಎಂಬುದು ಇಂದಿಗೂ ಅರ್ಥವಾಗದ ರಹಸ್ಯವಾಗಿದೆ; ಗಣಿತದ ಜಟಿಲ ಲೆಕ್ಕಕ್ಕಿಂತ ಜಟಿಲವಾಗಿದೆ. ಅದು ಕತ್ತಲು ನಮಗೆ  ಮಾಡಿದ ಮೊದಲ ಮೋಸ. ನಂತರ ನಾನು ಕತ್ತಲನ್ನು ಬಳಸಿಕೊಂಡು ಮಾಡಿದ ಮೋಸಕ್ಕೆಲ್ಲ ಗಣಿತ ಮಾಸ್ತರರ ಸಂಧಿಕಾಲವೇ ಆಧಾರ.

ಮೊದಲ ಸಲ ನೋಡಿದಾಗಿನಿಂದ ನನ್ನ ಕಣ್ಣಲ್ಲಿ ಬಾಟನಿ ಲೆಕ್ಚರ್ ಅನುರೂಪ ಅವರ ಮೈಬಣ್ಣವೇ ಮನೆ ಮಾಡಿತು. ಅದು ಅವರ ಮೈ ಬಣ್ಣವಲ್ಲ. ನನ್ನ ಕಣ್ಣಿನ ಬಣ್ಣವೇ ಆಗಿ ಹೋಯಿತು. ‘ವಯಸ್ಸಾದಂಗೆಲ್ಲ ಕನಡಿ ಮುಂದ ನಿಲ್ಲೋದು ಭಾಳ ಅಗೇತಿ ನಿಮ್ದು’ ಎಂದು ಈಗೀಗ ಚುಚ್ಚುವ ಹೆಂಡತಿಯ ಮಾತು ಎರಡು ಕಿವಿಯ ನಡುವಿನ ರಾಜಮಾರ್ಗದಲ್ಲಿ ಹಾದು ಹೋಗಿಬಿಡುತ್ತದೆ. ಕನ್ನಡಿ ಮುಂದೆ ನಿಂತು ನೋಡಿದರೆ ಕಾಣುವುದು ನನ್ನ ರೂಪವಲ್ಲ, ಅನುರೂಪ. ಇದನ್ನು ಗಂಡ ಮನೆ ಮಕ್ಕಳು ಎಂದು ಏಗುವ ಹೆಂಡತಿಯ ಮುಂದೆ ಹೇಗೆ ಹೇಳುವುದು? ಅಲ್ಲಿರುವುದು ಎರಡೇ ಸಂಗತಿ. ಕಣ್ಣು ಮತ್ತು ಅದಕ್ಕಂಟಿರುವ ಬಣ್ಣ. ಕಣ್ಣಲ್ಲಿ ಕಣ್ಣಿಟ್ಟು ನೋಡಿದವರ ಕಣ್ಣಿನಲ್ಲೂ ಅದೇ ಬಣ್ಣ. ಅನುಭವಿಸಬಲ್ಲೆ. ಹೇಳಲಾರೆ. ಭೂಮಿಯ ಮೇಲೆ ಇನ್ನೂ ಹೆಸರಿಡದ ಬಣ್ಣ ಅನುರೂಪ. ಊರಲ್ಲಿ ಸೀತಾ, ಗೀತಾ, ಸರೋಜಾ, ಅಂಬುಜಾ ಎಂಬಂತಹ ಹೆಸರು ಕೇಳಿ ಗೊತ್ತಿತ್ತು. ದೊಡ್ಡವರ ಮನೆಯ ಹೆಣ್ಣುಮಕ್ಕಳನ್ನು ಐಶ್ವರ್ಯ, ಸೌಂದರ್ಯ ಎಂದು ತಡವರಿಸುತ್ತ ಕರೆದು ಪುಳಕಿತಗೊಂಡ ಅನುಭವವಿತ್ತು. ಆದರೆ ಕಾಲೇಜಿಗೆ ಬಂದ ಹೊಸದರಲ್ಲಿ ಈ ಅನುರೂಪ ಎನ್ನುವ ಹೆಸರೊಂದು ಬೇಧಿಸಲಾಗದ ಸಂಗತಿಯಾಗಿತ್ತು. ಹಾಗೇ ಕುತೂಹಲಕ್ಕೆ ಕನ್ನಡ ಟು ಇಂಗ್ಲೀಷ್ ಡಿಕ್ಶನರಿ ತೆಗೆದು ‘ಅನುರೂಪ’ ಎನ್ನುವ ಪದಕ್ಕೆ ಇಂಗ್ಲೀಷ್‍ ನಲ್ಲೇನಾದರೂ ಅರ್ಥವಿದೆಯೇ ಎಂದು ನೋಡಿದೆ. ಅಲ್ಲಿ symmetry ಅಂತಿತ್ತು. ಅಂದರೆ ಎಡಬಲ ಸರಿಸಮನಾಗಿರುವುದು. ಪರಸ್ಪರ ಸಮರೂಪವಾಗಿರುವುದು. ನಮ್ಮ ಮನೆ ಎದುರಿನ ಆಲದ ಮರದ ನೆನಪಾಯಿತು. ಚಿಕ್ಕಂದಿನಲ್ಲಿ ಅದರ ಮೃದುವಾದ ಎಲೆಯನ್ನು ಗಲ್ಲದ ಮೇಲಿಟ್ಟು ಸವರಿಕೊಂಡ ಅನುಭವ ಎದೆಯಲ್ಲಿ ಹಾದುಹೋಯಿತು. ಆಲದ ಎಲೆಯ ಎಡಬಲ ಎಂದೆಂದಿಗೂ ಸರಿಸಮ. ಪರಸ್ಪರ ಅನುರೂಪ.

ಕಥೆ ಅದಲ್ಲ. 

ಕಥೆ, ಅಪ್ಪ ದಿನ ಬೆಳಗಾದರೆ ಬಿಚ್ಚುತ್ತಿದ್ದ ಪಂಚಾಂಗದ್ದು. ‘ಎಲ್ಲಾದ್ಕೂ ಎಡಗೈ ಮುಂದ ತರಬ್ಯಾಡಲೆ ರೊಡ್ಡ ಸೂಳೆ ಮಗನ’ ಎಂಬ ನಿತ್ಯಸ್ತೋತ್ರ. ಸೂಳೆ ಮಗನ ಎಂದು ಕರೆಯುವದು ಅವನ credibility ಯ ಪ್ರಶ್ನೆ. ಅದರೆ ‘ರೊಡ್ಡಾ’ ಎನ್ನುವುದು ನನ್ನ ಪ್ರಾಣಶಕ್ತಿಯ ಅಳಿವು ಉಳಿವು. ಮಾನಾಪಮಾನದ ಪರೀಕ್ಷೆ. ಅವ್ವ ಮತ್ತು ಆಕೆಯಂತಿರುವ ಅನೇಕಾನೇಕ ಜೀವಗಳು ಅವನ ಬಾಯಿಂದ ಬೀಳುತ್ತಿದ್ದ ಅಣಿಮುತ್ತುಗಳನ್ನು ಆರಿಸಲೂ ಬರಲಿಲ್ಲ. ಕಾಲಿನಿಂದ ಸರಿಸಲೂ ಹೋಗಲಿಲ್ಲ. ಇನ್ನೇನು ಗಂಟಲು ಗಡಸಾಗುತ್ತಿದೆ ಎನ್ನುವ ಕಾಲಕ್ಕೆ ಅದೊಂದು ದಿನ ಇದ್ದಬಿದ್ದ ಧೈರ್ಯವನ್ನೆಲ್ಲ ನಾಲಿಗೆಯ ಮೇಲೆ ಹೇರಿಕೊಂಡು ಹೇಳಿದ್ದೆ.

‘ನೀ ಏನರ ಅನ್ನು, ಆದ್ರ ರೊಡ್ಡಾ ಅಂತ ಮಾತ್ರ ಅನಬ್ಯಾಡಾ.’ ಮುಂದಿನದು ಅಸಾಧ್ಯ ಸಂಗತಿ. ಅದುವರೆಗೂ ಬಾಯಿ ಮಾತ್ರ ಮಾತನಾಡುತ್ತಿತ್ತು. ನಂತರ ಕೈಕಾಲುಗಳು ಮಾತನಾಡಲು ಶುರು ಮಾಡಿದವು. ನನ್ನ ಕೊನೆಯ ಶಬ್ದಕ್ಕೂ ಮೊದಲು ದೇಹ ಗೋಡೆಯಿಂದ ಗೋಡೆಗೆ ಬಡೆದ ಶಬ್ದ ಕೇಳಹತ್ತಿತು. ಅಡ್ಡ ಬಂದು ಬಿಡಿಸಿಕೊಂಡ ಅವ್ವನ ಮಡಿಲು ಸೇರಿದ ಲಾಗಾಯ್ತು, ಅಪ್ಪ ಮತ್ತು ನಾನು ಭವಿಷ್ಯದಲ್ಲಿ ಮುಖಾಮುಖಿಯಾಗಲಿಲ್ಲ. ಅವನ ಬಾಯಿಂದ ನನ್ನ ಹಣೆಯ ಮೇಲೆ ಬಿದ್ದ ನೀಲಿ ಸಿಕ್ಕಾ ಮಾತ್ರ ಖಾಯಂ ಮಂತ್ರವಾಯಿತು. ಮೂಲ ಹೆಸರನ್ನು ಇಟ್ಟವರು ಮತ್ತು ನಾನು ಇಬ್ಬರೂ ಮರೆಯುವಂತೆ ಶಬ್ದಬ್ರಹ್ಮನ ಕೃಪಾಶೀರ್ವಾದವಾಯಿತು. ಹೋದಲ್ಲಿ, ಬಂದಲ್ಲಿ; ಸಣ್ಣವರು ದೊಡ್ಡವರು ಕರೆಯುತ್ತಿದ್ದುದು ರೊಡ್ಡ...ರೊಡ್ಡ...ರೊಡ್ಡ... ಮೊದಮೊದಲು ಕೇವಲ ತಿರುಗಿ ನೋಡುತ್ತಿದ್ದವನು, ನಂತರ ಓ... ಎನ್ನುವಷ್ಟು ಬೆಳೆದು ನಿಂತೆ.

ಅಪ್ಪನದ್ದು ಅದೇ ತಕರಾರು ‘ನಿನ್ನ ಬಲಗೈಯೇನು ಸೇದಿ ಹೋಗೇತೇನ್ಲೆ? ಅರಿಷ್ಟಗೈ ಮುಂದಕ ತಂದು ಮಂತ್ಯಾನ ಹಾಳು ಮಾಡಾಕ ನಿಂತಿಯೇನ್ಲೆ?’ ಕೇಳುವರು ಸುಮ್ಮನೆ ಕೇಳುತ್ತಿದ್ದರು, ನೋಡುವರು ಮೋಜು ನೋಡುತ್ತಿದ್ದರು.

ಪಂಚಾಯತಿ ಚುನಾವಣೆ ಫಲಿತಾಂಶ ಬಂದ ದಿನ ಮಾತ್ರ ಅಪ್ಪ ಅಪ್ಪನಾಗಿರಲಿಲ್ಲ. ಮೈಮೇಲೆ ಅದೇನೋ ಬಂದಂತೆ ಹಾರಾಡುತ್ತಿದ್ದ. ಚುನಾವಣೆಯಲ್ಲಿ ಆತ ಸೋತಿದ್ದಕ್ಕೆ ನನ್ನ ಎಡಗೈ ಮಹಿಮೆಯೇ ಕಾರಣವೆಂದು ನಡುಮನೆಯಲ್ಲಿ ಏಕವ್ಯಕ್ತಿ ತಾಂಡವ ನೃತ್ಯ ಏರ್ಪಡಿಸಿದ್ದ. ನೃತ್ಯಗಾರನೂ ಅವನೇ. ನಾಮಪತ್ರಕ್ಕೆ ಸಹಿ ಮಾಡಲು ಪೆನ್ನು ಕೇಳಿದಾಗ ಎಂದಿನಂತೆ ನಾನು ಜನ್ಮಜಾತವಾಗಿ ಯಾವ ಕೈಯಿಂದ ಕೊಡಬೇಕೊ ಅದೇ ಕೈಯಲ್ಲಿ ಕೊಟ್ಟಿದ್ದೆ. ಆತ ಮುಸುಗುಡುತ್ತ ಹೋಗಿದ್ದ. ಫಲಿತಾಂಶ ಬಂದು ತಾನು ಸೋತನೆಂದು ತಿಳಿಯುತ್ತಿದ್ದಂತೆ ನನ್ನ ನೆನಪಿಸಿಕೊಂಡು ಮನೆ ಕಡೆಗೆ ಧಾವಿಸಿದ್ದ. ‘ಬಲಗೈನ ಮುಂಜೆಲೆದ್ದು ಮುಕುಳಿ ತೊಕ್ಕೊಳಾಕ ಇಟ್ಟಿಯೇನ್ಲೆ ಬೊಸಡಿಕೆ. ಇವತ್ತು ಈ ಮನ್ಯಾಗ ನೀ ಇರ್ಬೇಕು, ಇಲ್ಲಾ ನಾ ಇರ್ಬೇಕು’ ಎನ್ನುತ್ತ ಲೋಕದ ಸಕಲ ಸಂಕಷ್ಟಗಳ ಪರಿಹಾರಕ್ಕಾಗಿ ಯಜ್ಞಯಾಗ ನಡೆಸುವ ಉಗ್ರ ಮುನಿಯಂತಾದ. ಅಷ್ಟೊತ್ತಿಗಾಗಲೇ ನನ್ನ ಗಂಟಲಿನ ಗಡಸುತನದ ಮುಂದುವರಿದ ಭಾಗವಾಗಿ ಮುಖದ ಚರ್ಮಕ್ಕೆ ಒಂದಷ್ಟು ಒರಟುತನ ಬರುತ್ತಿತ್ತು. ಇದನ್ನೆಲ್ಲ ಕಣ್ಣಾರೆ ಕಿವಿಯಾರೆ ಕಂಡುಂಡಿದ್ದ ಅವ್ವ ಗಟ್ಟಿ ನಿರ್ಧಾರಕ್ಕೆ ಬಂದಿದ್ದಳು. ದೂರದೂರಿನಲ್ಲಿದ್ದ ತನ್ನ ತಂಗಿಯ ಮನೆಗೆ ಅಟ್ಟಿ ನನ್ನ ಮೈಮನಸ್ಸಿಗೆ ಮೆತ್ತಿಕೊಂಡಿದ್ದ ಕತ್ತಲನ್ನು ಕಳೆಯವ ನಿಷ್ಕರ್ಷೆ ಮಾಡಿದಳು. ಕಥೆಯೊಳಗೊಂದು ಉಪಕಥೆ ಹುಟ್ಟುತ್ತದಲ್ಲ, ಹಾಗೆ.

ಇತ್ತ ಹಿಂದೆ ಒದ್ದ ಹಳ್ಳಿಯೂ ಅಲ್ಲದ, ಅತ್ತ ಮುಂದೆ ಹಾಯ್ದ ಪಟ್ಟಣವೂ ಅಲ್ಲದ, ಆ ಊರಿನಲ್ಲಿ ನನ್ನನ್ನು ನನ್ನ ಹೆಸರಿನಿಂದಲೇ ಕರೆಯುತ್ತಿದ್ದರು. ಬದಲಾವಣೆಯ ಗಾಳಿ ಬೀಸುವುದೆಂದರೆ ಇದೇ ಇರಬೇಕು.

ಅವ್ವನ ತಂಗಿಯ ಮನೆ ವಾತಾವರಣ ಹೇಗಿತ್ತೆಂದರೆ.... ಹಾಗಿತ್ತು, ‘ನೀ ಎಡಗೈಲಾದ್ರು ತೊಳಕೊ, ಬಲಗೈಲಾದ್ರೂ ತೊಳಕೊ’, ವರ್ಷಕ್ಕಾಗುವಷ್ಟು ಕಾಳು-ಕಡಿ, ಬಟ್ಟೆ-ಬರೆ, ಎಣ್ಣೆ-ಬತ್ತಿಗೆ ನ್ಯಾರಾ ಮಾಡಿದರೆ ಸಾಕೆಂಬಂತ್ತಿತ್ತು. ಮನೆಯವರು ಅಷ್ಟು ಕರುಣಿಸುವ ಸಂಕಲ್ಪವಾಗಿತ್ತು. ಚುರ್ರೆನ್ನುವ ಕರುಳು ತಣಿಸಲು ಆಗಾಗ ಅವ್ವ ಬಂದು ಹೋಗುವುದನ್ನು ಬಿಟ್ಟರೆ ಆ ಕಡೆಯ ಯಾವ ಗಾಳಿಯು ಹಿಂಗೆ ಸುಳಿಯಲಿಲ್ಲ. ಇನ್ನು ಅಪ್ಪನಂತೂ....!ಅಪ್ಪನಿಗಾದಂತೆ ಈ ಮನೆಯವರ ಬದುಕಿನ ದಾರಿಮುಳ್ಳಾಗದಿರುವುದೇ ನನ್ನ ಪಾಲಿನ ಸೌಭಾಗ್ಯವೆಂಬ ವರಸ್ವೀಕಾರ ಮಾಡಿ ಕದಲದಂತಿದ್ದೆ. ಅಲ್ಲಿ ವಯಸ್ಸಾದ ಮುದುಕನೊಬ್ಬ ಮರುದಿನ ಬೆಳಿಗ್ಗೆ ರಭಸದಿಂದ ಅಂಗಳ ಗೂಡಿಸುತ್ತಿದ್ದ, ಎಡಗೈಯಿಂದ. ಮನೆಯವರಂತೆಯೇ ಇದ್ದ ಅವನನ್ನು ಅದೊಂದು ದಿನ ಮನೆಯವರ್ಯಾರೂ ಇಲ್ಲದ ಸಂದರ್ಭದಲ್ಲಿ ಮಾತಿಗೆಳೆದೆ.

‘ಎಡಗೈ ಅರಿಷ್ಟಾ ಅಂತಾರಲ್ಲ ಎಜ್ಜ, ಖರೇನ?’ ಎಂದೆ.

ಯಾವ್ದೂ ಅರಿಸ್ಟಲ್ಲ, ಯಾವ್ದೂ ಕನಿಸ್ಟಲ್ಲ. ಈ ಎಡಾ ಬಲಾ ಎಲ್ಲಾ ತಿಂದು ಹೆಚ್ಚಾದವರ ತೀಟಿ. ದುಡಿದು ತಿನ್ನಂವಗ ರಟ್ಟಿ ಬಲಾನ ಬಲ. ಇಲ್ಲಾಂದ್ರ ಅವನ ಬಾಳೇನ ಎಡಾ.’ ಎಂದು ನಿರ್ವಿಕಾರವಾಗಿ ಹೇಳಿ ಕೊಡವಿ ಕೊಡವಿ ಕಸ ಗೂಡಿಸಲು ಶುರು ಮಾಡಿದ, ಎಡಗೈಯಿಂದ.

ಕಾಲೇಜಿಗೆ ಹೋಗುವುದು ಬರುವುದು ನಡೆದಿತ್ತು. ಅದೂ ಒಂದು ಕಥೆ. ಲೈಬ್ರರಿ, ಲ್ಯಾಬೊರೇಟರಿ, ರೆಸ್ಟರೂಮ್, ಕಾರಿಡಾರ್, ಪ್ಲೇಗ್ರೌಂಡ್, ಸ್ಟಾಫ್‍ರೂಮ್, ಆಡಿಟೋರಿಯಂ ಇವೆಲ್ಲ ಏನು? ಅವು ಕಾಲೇಜಿನಲ್ಲಿ ಯಾಕಿರಬೇಕು? ಎಂಬಂತ ಪ್ರಶ್ನೆಗಳು ನಾನೇ ರಚಿಸಿಕೊಂಡ ಪಠ್ಯಕ್ರಮದಲ್ಲಿ ಸೇರಿಕೊಂಡವು. ಕ್ಷಣಕ್ಷಣಕ್ಕೂ ನನ್ನ ಎಡಗೈ ಮುಂದೆ ಬರುವುದನ್ನು ಕ್ರಮೇಣ ಗಮನಿಸುತ್ತಿದ್ದ ಅವರಿವರು ಹೇಳಿ ಕೇಳಿ ತಮ್ಮ ಸಂಶಯವನ್ನು ಪರಿಹರಿಸಿಕೊಂಡರು. ಕೆಲವರು ಬೆನ್ನ ಹಿಂದೆ, ಸಲುಗೆ ಹೆಚ್ಚಾದಂತೆ ಬೆನ್ನ ಮುಂದೆ ವಿಷ್ಣುವರ್ಧನ ಎಂದು ನಗುತ್ತಿದ್ದರು. ಅವರೂ ಮನಸ್ಸಿನಲ್ಲಿ ರೊಡ್ಡರೊಡ್ಡ ಎಂದುಕೊಂಡಿರಬಹುದೆ?

ಗಣಿತ ಮಾಸ್ತರರು ಕರೆದು ಬೋರ್ಡ್ ಮೇಲೆ ಬೀಜಗಣಿತದ ಸೂತ್ರ ಬರೆಯಲು ಹೇಳಿದರು. ಚಾಕ್‍ಫೀಸ್ ತೆಗೆದುಕೊಳ್ಳುವಾಗ ಯಾವ ಕೈ ಮುಂದೆ ಬರಬೇಕಾಗಿತ್ತೊ ಅದು ಬಾರದಿದ್ದಾಗ ನನ್ನನ್ನು ಕೆಳಗಿನಿಂದ ಮೇಲೆ, ಮೇಲಿನಿಂದ ಕೆಳಗೆ ನೋಡಿದರು. ಬೋರ್ಡ್ ಮೇಲೆ ಬರೆಯಲು ಹೋದಾಗ ಮೈಯೊಳಗಿನ ಮಾಂಸಖಂಡಗಳನ್ನು ಕಿತ್ತು, ಕಾದ ತೆವಿಯ ಮೇಲೆ ಹಾಕಿ ಹುರಿದಂತಾಯಿತು. ಶಕ್ತಿ ಕುಂದುತ್ತ ಕುಂದುತ್ತ ಕುಸಿಯತೊಡಗಿದೆ. ಮಾಸ್ತರರ ಕಣ್ಣುಗಳು ಕತ್ತಿಯಂತೆ ಝಳಪಿಸುತ್ತಿದ್ದವು. ಸರಕ್ಕನೆ ಬಳಪವನ್ನು ಕಸಿದುಕೊಂಡು ತೊಲಗಲು ಕಣ್ಸನ್ನೆ ಮಾಡಿದರು. ಇಡೀ ತರಗತಿ ನನ್ನನ್ನು ನೋಡುತ್ತಿತ್ತೇ? ಗೊತ್ತಿಲ್ಲ. ಕಣ್ಣಲ್ಲಿ ಕತ್ತಲಾಗುತ್ತಿತ್ತಲ್ಲ.

ಅವರೇನು ಕಲಿಸಿದರೋ, ನಾನೇನು ಕಲಿತೆನೋ! ಒಂದಷ್ಟು ಮಳೆಗಾಲದ ನಂತರ ಬಂದ ಸುಡುಬೇಸಿಗೆಯ ಬಿಸಿಲಲ್ಲಿ ಕಣ್ಣು ಕುಕ್ಕುವಂತಹ ಸರ್ಟಿಫಿಕೇಟ್ ಕೈಯಲ್ಲಿತ್ತು. ಎ ಭಾಗ, ಬಿ ಭಾಗ ಏನೇನೋ ಇತ್ತು. ಕೊನೆಯಲ್ಲಿ ‘ಪಾಸ್’ ಎಂಬ ಶಬ್ದವೂ ಕಾಣುತ್ತಿತ್ತು. ಹೌದಾ ಎಂದು ಕೇಳುವರೂ ಇಲ್ಲ. ಅಲ್ಲಾ ಎಂದು ಆಕ್ಷೇಪಿಸುವರೂ ಇಲ್ಲ. ಇಡೀ ಸರ್ಟಿಫಿಕೇಟ್‍ನಲ್ಲಿ ಹುಡುಕಾಡಿದ್ದೆಂದರೆ, ಬಾಟನಿ ವಿಷಯಕ್ಕೆ ಬಂದ ಅಂಕಗಳು. ಎಷ್ಟಾದರೂ ಬಂದಿರಲಿ ಕಲಿಯುವಷ್ಟು ಹೊತ್ತು ಹಸಿರಾಗಿತ್ತಲ್ಲ, ಅಷ್ಟೇ ಸಾಕು. 

ಬಾಟನಿ ವಿಷಯವನ್ನು ಕಲಿಯುವಾಗ ಟೀಚರೊಂದಿಗೆ ಗಿಡಮರ ಬಳ್ಳಿಗಳೂ ಪಾಠವನ್ನು ಕಲಿಸಿದವು. ಅವೆಲ್ಲ ನಾನು ಹಳ್ಳಿಯ ಹೊಲಗದ್ದೆ ಕಾಡುಮೇಡುಗಳಲ್ಲಿ ನೋಡಿದ ಸೃಷ್ಟಿಗಳು. ಕಿವಿ ಮೇಲೆ ಬಿದ್ದ ಶಬ್ದಗಳು ಮನಪರದೆಯ ಮೇಲೆ ಬಿಂಬಗಳಾಗಿ ಬೆಳಗಿದಾಗ ಸಜೀವ ಗಿಡಮರಗಳನ್ನೇ ಮುಟ್ಟುತ್ತಿದ್ದೆ. ಹೂವಿನ ಪರಿಮಳವನ್ನು ಹೀರಿಕೊಳ್ಳುತ್ತಿದ್ದೆ. ಹೀಚುಕಾಯಿಯ ಒಗರನ್ನು ಸವಿಯುತ್ತಿದ್ದೆ. ಬೇಲಿ, ಸರವಿನಲ್ಲಿ ಪರದೇಶಿಯಂತೆ ಬೆಳೆಯುತ್ತಿದ್ದ ಮುಳ್ಳುಕಂಟಿಗಳನ್ನು, ಗಿಡಗಂಟಿಗಳನ್ನು ಹೊಳೆಯುವ ಗಾಜಿನ ಡಬ್ಬಿಯಲ್ಲಿ ಇಡುವುದು, ಅವುಗಳನ್ನು ಅರ್ಥವಿಲ್ಲದ ಹೆಸರಿನಿಂದ ಕರೆಯುವುದು, ತಾಸುಗಟ್ಟಲೇ ವರ್ಣಿಸುವುದು ವಿಚಿತ್ರವಾಗಿತ್ತು. ಮೊದಲ ಟೆಸ್ಟ್ ನಲ್ಲಿ ಕೈಯೊಂದಿಗೆ ಪೇಪರೂ ಅದರುತ್ತಿದ್ದಾಗ ನನ್ನ ಎಡಭುಜದ ಮೇಲೆ ಮೃದುವಾಗಿ ಯಾರೋ ಸವರಿದಂತಾಯಿತು. ತಿರುಗಿ ನೋಡಿದರೆ ಬಾಟನಿ ಟೀಚರ್. ಎಷ್ಟೋ ಸಲ ಕೈಕಾಲುಗಳಿಗೆ ಚುಚ್ಚಿದ ಮುಳ್ಳುಕಂಟಿಗಳ ಬಗ್ಗೆ ಉತ್ತರಿಸುವುದು ಎಷ್ಟೊತ್ತು! ಎಂಬ ವಿಶ್ವಾಸ ಆ ಸವರಿಕೆಯಲ್ಲಿತ್ತು. ಆ ಪರೀಕ್ಷೆಯಲ್ಲಿ ಪಾಸಾದ ವಿಷಯವೆಂದರೆ ಬಾಟನಿ ಒಂದೇ. ಬಾಟನಿ ಟೀಚರ್ ರ ನೆಚ್ಚಿನ ವಿದ್ಯಾರ್ಥಿ ಹುಟ್ಟಿದ್ದು ಹೀಗೆ. ಕ್ಲಾಸಿನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದೂ ತಡವರಿಸುತ್ತಿದ್ದ ನನ್ನನ್ನು ಆಲದೆಲೆಯಂತೆ ಕೈ ಸವರಿದಾಗ ಹಿಂತಿರುಗಿ ನೋಡಿದರೆ, ಅವರೇ. ನಂತರ ಎಲ್ಲೆಲ್ಲೂ ಅವರೇ.

ಇನ್ನು ನಾನಲ್ಲಿದ್ದು ಸಾಧಿಸಬೇಕಾದ್ದೇನೂ ಇಲ್ಲ ಎನ್ನುವ ಸಂದೇಶ ಆಶ್ರಯದಾತರ ಮನೆಯ ಗೋಡೆಗೋಡೆಯಿಂದ ಅನುರಣಿಸತೊಡಗಿದಂತೆ ಊರ ಕಡೆ ಮುಖ ಮಾಡಿದೆ. ವಿಷ್ಣುವರ್ಧನನ ಸಿನೆಮಾ ಹಾಡು ಗುನುಗುನಿಸುತ್ತ ಹೋದ ನನ್ನನ್ನು ಅಪ್ಪ ಎದುರುಗೊಳ್ಳುವ ಪ್ರಶ್ನೆಯೇ ಇರಲಿಲ್ಲ. ಆತ ಅಂಗಾತ ಮಲಗಿದ್ದ. ಅವನ ಹಾಸಿಗೆಯಿಂದ ಹೊರಟ ಗುಮುಸು ವಾಸನೆ ಮನೆಯಲ್ಲೆಲ್ಲ ವ್ಯಾಪಿಸಿತ್ತು. ಲಕ್ವ ಹೊಡೆದು ದೇಹದ ಬಲಭಾಗ ನಿರ್ಜೀವಗೊಂಡಿತ್ತು. ಪಾರ್ಸಿ ದೇಹದ ಅರ್ಧಭಾಗಕ್ಕೆ ಹೊಡೆಯುತ್ತದೆಯೆಂದು ಚಿಕ್ಕಂದಿನಿಂದಲೂ ಕೇಳಿದ್ದ ನನಗೆ, ನಮ್ಮ ಅಪ್ಪನ ದೇಹದ ಬಲಭಾಗವನ್ನೇ ಬೇಡುತ್ತದೆಯೆಂಬುದು ತಿಳಿದಿರಲಿಲ್ಲ.

ನಾನು ಹೋಗುವುದನ್ನೇ ಕಾಯುತ್ತಿದ್ದ ಮನೆಯವರು ಹೊಲಮನೆ ವಹಿವಾಟಿನ ಜವಾಬ್ದಾರಿ ವಹಿಸಿಕೊಳ್ಳುವ ಅನಿವಾರ್ಯತೆಯನ್ನು ಬಹಳ ಚೆಂದಾಗಿ ತಂದಿಟ್ಟರು. ಅವ್ವನಿಗೆ ಮನೆ ಕೆಲಸ ಮಾಡಿಕೊಂಡು ಅಪ್ಪನನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆಯೆಂದು ಸೊಸೆ ತರುವ ವಿಚಾರ ಎತ್ತಿದರು. ಅವರೊಂದು ಇವರೊಂದು ಹೇಳಿ ಮದುವೆಗೆ ಒಪ್ಪಿಸಿದರು. ಅಷ್ಟರಲ್ಲಿ ಸೋದರಮಾವ ಕನ್ಯೆಯನ್ನು ನೋಡಿಟ್ಟಿದ್ದ.

ನಾನು ಎಡಚನಾಗಿರುವ ವಿಷಯ ಅವರಿಗೆ ತಿಳಿಸಬೇಕೆಂದು ಒತ್ತಾಯಿಸಿದೆ. ‘ಅದರ ಬಗ್ಗೆ ನೀ ಭಾಳ ತಲಿ ಕೆಡಿಸ್ಕೊಬ್ಯಾಡಾ. ಹುಡುಗೀನೂ ಎಡಚಿ ಅದಾಳು’ ಎಂದು ಮಾವ ಕಟ್ಟಿಕಲ್ಲು ಕಟ್ಟಿಗೆ ಸಮ ಎನ್ನುವ ಲೆಕ್ಕದಂತೆ ಹೇಳಿದ. ಅಬ್ಬಬ್ಬಾ! ಇವರದು ವ್ಯವಹಾರ ಚತುರತೆಯೊ, ಲೋಕಾನುಭವವೊ? ನಾನು ಕಲಿತ ಯಾವ ವಿದ್ಯೆಯೂ ಅವರು ಬೀಸಿದ ಬಲೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲಿಲ್ಲ. 

ಹುಡುಕಿ ಹುಡುಕಿ ಸೋದರಮಾವ ಸರಿಯಾದ ಹುಡುಗಿಯನ್ನೇ ತಂದಿದ್ದ. ಎಷ್ಟು ಬೇಗ ನನ್ನ ಜೀವನದಲ್ಲಿ ಬಂದಳೋ ಅಷ್ಟೇ ಬೇಗ ನಮ್ಮ ಮನೆಗೆ ಹೊಂದಿಕೊಂಡಳು. ಮನೆ ಒಳಹೊರಗೆ ದುಡಿದು ಸಂಸಾರ ತೂಗಿಸುತ್ತಿದ್ದಳು. ಅವಳು ಎಡಗೈಯಿಂದ ಕೊಟ್ಟ ಗಂಜಿಯನ್ನು ಅಪ್ಪ ಅದೇ ಕೈಯಿಂದ ತಗೊಂಡು ಕುಡಿಯುತ್ತಿದ್ದ. ಬರುಬರುತ್ತ ಮಾತನಾಡಲು ಆಗದಷ್ಟು ನಾಲಿಗೆ ಎಡಪಕ್ಕಕ್ಕೆ ತಿರುಗಿಕೊಂಡು ಸತ್ತ ಕಪ್ಪೆಯಾಯಿತು. ಉಳಿದರ್ಧ ಶರೀರವೂ ನಿಶ್ಚಲವಾಗತೊಡಗಿತು. ಎಡಗೈಯಿಂದ ಸಣ್ಣಮಕ್ಕಳಂತೆ ಟಾಟಾ ಮಾಡುತ್ತ ಹೋಗಿಯೇಬಿಟ್ಟ. ತನ್ನ ಕರ್ತವ್ಯವನ್ನು ಪೂರೈಸಿಯಾಯಿತು ಎಂಬಂತೆ ಆತನ ಹಿಂದೆ ಅವ್ವನೂ ನಡೆದುಬಿಟ್ಟಳು.

ಹೇಗೂ ಸಂಸಾರದ ನೊಗಕ್ಕೆ ನಾವಿಬ್ಬರೂ ಹೆಗಲು ಕೊಟ್ಟಾಗಿತ್ತು. ನಮ್ಮದೇ ಆದ ಪುಟ್ಟ ಲೋಕವನ್ನು ಕಟ್ಟಿಕೊಂಡೆವು. ಕಾಲಕಾಲಕ್ಕೆ ಹುಟ್ಟಿದ ಮಕ್ಕಳು ನೋಡನೋಡುತ್ತ ಬೆಳೆದರು. ಎಡಬಲದ ವಿಷಯ ಆಗಾಗ ನಮ್ಮ ನಡುವೆ ಚರ್ಚೆಯಾಗುತ್ತಿತ್ತು. ಅವಾಗೆಲ್ಲ ಆಕೆ ನನ್ನೆದುರಿಗೆ ಮುಖ ಮಾಡಿ ನಿಂತು ಹೇಳುತ್ತಿದ್ದಳು. ‘ನೋಡ್ರಿ, ನಿಮ್ಮ ಎಡ ನನ್ನ ಬಲಕ್ಕ ಬರ್ತೆತಿ, ನನ್ನ ಬಲ ನಿಮ್ಮ ಎಡಕ್ಕ ಬರ್ತೆತಿ. ಎರಡೂ ಒಂದ, ಎರಡೂ ಇರ್ಬೇಕು.’
ಒಮ್ಮೊಮ್ಮೆ ಛೇಡಿಸುತ್ತಿದ್ದಳು,- ‘ಇತ್ತಿತ್ತಲಾಗ ಕನಡಿ ಮುಂದ ಭಾಳ ನಿಲ್ಲಾಕತೀರಿ.’ 

‘ಅಲ್ಲಿ ನಿಂತರ ಎಡ ಬಲಕ್ಕ ಬರ್ತತಿ, ಬಲ ಎಡಕ್ಕ ಬರ್ತತಿ’ ಎಂದು ಉತ್ತರಿಸಿದಾಗ ಮನೆಯಲ್ಲಿ ನಗು ತುಂಬಿಕೊಳ್ಳುತ್ತಿತ್ತು. ಮಗಳು ಕಾಲೇಜಿಗೆ ಸೇರುವಷ್ಟು ಬೆಳೆದಳು. ನಾನು ಕಲಿತ ಕಾಲೇಜಿಗೆ ಸೇರಿಸಬೇಕೆಂದು ಅವಳನ್ನು ಕರೆದೊಯ್ದೆ. ಬಾಟನಿ ಟೀಚರನ್ನೂ ನೋಡಬಹುದಲ್ಲ. ಆಫೀಸಿನಲ್ಲಿ ಅಡ್ಮೀಷನ್ ಬಗ್ಗೆ ವಿಚಾರಿಸುತ್ತ ಬಾಟನಿ ಲೆಕ್ಚರರ್ ಕುರಿತಾಗಿಯೂ ಕೇಳಿದೆ. ಅವರೀಗ ಪ್ರಿನ್ಸಿಪಾಲ್ ಆಗಿದ್ದಾರೆಂದು ಹೇಳಿದ ಸಿಬ್ಬಂದಿ ಅವರು ಕೂರುವ ಪ್ರತ್ಯೇಕ ಕೋಣೆಯನ್ನು ತೋರಿಸಿದ. ಕಾಲೇಜು ಮುಗಿಸಿ ಹೋದಾಗಿನಿಂದ ಅವರನ್ನು ಮತ್ತೆ ಭೇಟಿಯಾಗಿರಲಿಲ್ಲ. ಉತ್ಸಾಹ, ಕುತೂಹಲದಿಂದ ಅವರ ಕೋಣೆಯೊಳಗೆ ಕಾಲಿಟ್ಟೆ. ಅವರ ಹೆಸರು ಹೊತ್ತ ಬೋರ್ಡ್ ನೇತಾಡುತ್ತಿತ್ತು. ಚರ್ ಚರ್ ಎಂದು ತಿರುಗುವ ಕುರ್ಚಿಯಲ್ಲಿ ಬಸವಳಿದ ದೇಹವೊಂದು ಕಂಡುಬಂದಿತು. ಚರ್ಮದ ರೋಮರೋಮವನ್ನೂ ಬಿಡದಂತೆ ಬಿಳುಪು ಆವರಿಸಿಕೊಂಡಿತ್ತು. ಕಾಡ್ಗಿಚ್ಚು ತನ್ನೆದುರಿಗೆ ಬರುವ ಗಿಡಮರಗಳ ಎಲೆಎಲೆಗಳನ್ನು ಸುಟ್ಟು ಬೂದಿ ಮಾಡುವಂತೆ ತೊನ್ನು ಅವರ ಮೇಲೆ ಆಕ್ರಮಣ ಮಾಡಿತ್ತು. ಕಣ್ಣಿನ ಕೆಳಗೆ ಸ್ವಲ್ಪ ಹೆಚ್ಚಾಗಿಯೇ ಆವರಿಸಿದ್ದ ಬಿಳುಪು ಮುಖದ ವಿಕಾರತೆಯನ್ನು ಹೆಚ್ಚಿಸಿತ್ತು. ಕೂಡಲು ಕಣ್ಸನ್ನೆ ಮಾಡಿದರು. ಕುಸಿಯುವುದರಲ್ಲಿದ್ದವನು ಬಲಗೈ ಸೋಫಾದ ಮೇಲೂರಿ ಸಾವರಿಸಿಕೊಂಡೆ. ಅಪ್ಪ, ಬಾಟನಿ ಟೀಚರ್, ನಾನು, ಹೆಂಡತಿ, ಹೊಲ, ಮನೆ, ಸಂಸಾರ, ಮಕ್ಕಳು, ಕಣ್ಣು, ಬಣ್ಣ, ಒಂದೇ ಎರಡೇ... ಅದಲ್ ಬದಲ್ ಕಂಚಿ ಬದಲ್.....
 

-