ಬಂದಿದ್ದು ಬೌಲರ್ ಆಗಿ, ಮಿಂಚಿದ್ದು ಬ್ಯಾಟ್ಸ್ ಮ್ಯಾನ್ ಆಗಿ   

ಬಂದಿದ್ದು ಬೌಲರ್ ಆಗಿ, ಮಿಂಚಿದ್ದು ಬ್ಯಾಟ್ಸ್ ಮ್ಯಾನ್ ಆಗಿ    

ಕಬಡ್ಡಿ ಬಗ್ಗೆ ಬರೆಯಲು ಸಿದ್ಧತೆ ನಡೆಸಿದ್ದೆ. ಮನಸ್ಸು ಬದಲಾಯಿಸಿ ಕ್ರಿಕೆಟ್ ಬಗ್ಗೆ ಬರೆಯುತ್ತಿದ್ದೇನೆ. ನನ್ನ ಮನಸ್ಸನ್ನು ಬದಲಾಯಿಸಿದ್ದು ಸ್ಟೀವ್ ಸ್ಮಿತ್. ಈ ಲೇಖನ ಬರೆಯುವ ಹೊತ್ತಿಗೆ ಆಸ್ಟ್ರೇಲಿಯಾ ಆಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ದವಡೆಯಿಂದಂತೂ ತಪ್ಪಿಸಿಕೊಂಡಿದೆ. ಇವತ್ತು ಪಂದ್ಯದ ಕೊನೆಯ ದಿನ. ಆಸ್ಟ್ರೇಲಿಯಾ ಗೆಲ್ಲುವ ಒಂದು ಅಲ್ಪಪ್ರಮಾಣದ ಸಾಧ್ಯತೆಯೂ ಇದೆ. ಆದರೆ, ಪಂದ್ಯದ ಫಲಿತಾಂಶದ ಬಗ್ಗೆ ನನಗೆ ಕುತೂಹಲವಿಲ್ಲ. ನಾಲ್ಕು ದಿನಗಳಲ್ಲೇ ಪಂದ್ಯದ ಹೀರೊ ಆಗಿ ಸ್ಮಿತ್  ಹೊರಹೊಮ್ಮಿದ್ದಾರೆ. 

ಪ್ರಥಮ ದಿನವೇ, ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಲ್ಲೇ ಮುಳುಗುತ್ತಿದ್ದ ತಂಡವನ್ನು ಏಕಾಂಗಿಯಾಗಿ ಮೇಲೆತ್ತಿದ ಸ್ಮಿತ್ ವಿಶ್ವಾದ್ಯಂತ ಕೊಂಡಾಡಲ್ಪಟ್ಟರು. ಇಂಗ್ಲೆಂಡ್ ನ ಮಾಜಿ ಕ್ಯಾಪ್ಟನ್ ಹಾಗೂ ಹಾಲಿ ಕ್ರಿಕೆಟ್ ಲೇಖಕ ಮೈಕೇಲ್ ವಾನ್ ಕ್ರಿಕೆಟ್ ಇತಿಹಾಸದಲ್ಲೇ ಸ್ಮಿತ್ ರ ಶತಕ ಶ್ರೇಷ್ಠ ಶತಕಗಳಲ್ಲೊಂದು ಎಂದು ಬಣ್ಣಿಸಿದ್ದಾರೆ. ಗಣ್ಯಾತಿಗಣ್ಯರಿಂದ ಪಡೆದ ಶ್ಲಾಘನೆಯ ಸುರಿಮಳೆಯಿಂದ ನೆಂದ ಸ್ಮಿತ್ ಒಣಗುವ ಮುಂಚೆಯೇ ಅವರು ಮ್ಯಾಚ್ ನ ಎರಡನೆಯ ಇನಿಂಗ್ಸ್ ನಲ್ಲೂ ಶತಕ ಗಳಿಸಿ ಮತ್ತಷ್ಟು ಅಭಿನಂದನೆಗೆ ಭಾಜನರಾಗಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಅವರು ಗಳಿಸಿದ ರನ್ 144, ಎರಡನೇ ಇನಿಂಗ್ಸ್ ನಲ್ಲಿ 142. ರನ್ ಎಷ್ಟು ಗಳಿಸಿದರು ಅನ್ನುವುದು ಮುಖ್ಯ, ಅಷ್ಟೇ ಮುಖ್ಯ ಪಂದ್ಯದ ಎಂತಹ ಸಂದಿಗ್ಧ ಸ್ಥಿತಿಯಲ್ಲಿ ಎರಡು ಬಾರಿ ಶತಕ ಗಳಿಸಿದರು ಎಂಬುದು ಅಷ್ಟೇ ಮುಖ್ಯ. 

ಒಂದು ವರ್ಷದ ಕೆಳಗಷ್ಟೇ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅದೇ ದೇಶದಲ್ಲಿ ನಡೆದ ಟೆಸ್ಟ್ ಮ್ಯಾಚ್ ಸಂದರ್ಭದಲ್ಲಿ ಚೆಂಡಿನ ಹೊರಮೈಯನ್ನು ವಿಕೃತಗೊಳಿಸಿದ ಆರೋಪ ಸಾಬೀತಾಗಿ ಅಜ್ಞಾತವಾಸದ ಶಿಕ್ಷಾವಧಿ ಮುಗಿಸಿದ ನಂತರ ಸ್ಮಿತ್ ಆಡಿದ ಮೊದಲ ಟೆಸ್ಟ್ ಇದು ಎಂಬುದನ್ನು ಗಮನಿಸಿದಾಗ ಅವರ ಬ್ಯಾಟಿಂಗ್ ಗುಣಮಟ್ಟದ ಒಂದು ಅಳತೆ ಸಿಗುತ್ತದೆ. (ಅದೇ ಶಿಕ್ಷೆಯ ಮುಂದುವರಿದ ಭಾಗವಾಗಿ ನಾಯಕತ್ವ ಪಟ್ಟವನ್ನು ಕಳೆದುಕೊಂಡ ಸ್ಮಿತ್ ಮತ್ತೆ ನಾಯಕನಾಗುವ ಅರ್ಹತೆ ಪಡೆಯಬೇಕೆಂದರೆ ಮುಂದಿನ ಮಾರ್ಚ್ ವರೆವಿಗೂ ಕಾಯಬೇಕು.) 

ಸ್ಮಿತ್ ಜತೆಯಲ್ಲಿ ಅದೇ ಆರೋಪಕ್ಕೆ ಸಿಕ್ಕಿ ಶಿಕ್ಷೆ ಎದುರಿಸಿದವರಲ್ಲಿ ಉಪನಾಯಕ ಡೇವಿಡ್ ವಾರ್ನರ್ ಮತ್ತು ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟರಿಬ್ಬರೂ ಸೇರಿದ್ದಾರೆ. ಅವರಿಬ್ಬರೂ ಬಹಿಷ್ಕಾರದಿಂದ ಹೊರಬಂದ ನಂತರ ಆಡುತ್ತಿರುವ ಪ್ರಪ್ರಥಮ ಟೆಸ್ಟ್ ಪಂದ್ಯವಿದು. ಅವರಿಬ್ಬರೂ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಗಳಿಸಿದ ಒಟ್ಟು ರನ್ ಮೊತ್ತ  ೨೫.  

2007ರ ಕೊನೆಗೆ ಸ್ಟೀವನ್ ಪೀಟರ್ ದೆವರೋ ಸ್ಮಿತ್ ಅವರ ಬ್ಯಾಟಿಂಗ್ ಅಂಕ 947 ಇದ್ದಿದ್ದು, ಅವರದೇ ದೇಶದ ಸಾರ್ವಕಾಲಿಕ ಶ್ರೇಷ್ಠ ಡಾನ್ ಬ್ರಾಡ್ಮನ್ ರ (941) ಹೊಂದಿದ್ದರು. ಅತ್ಯುತ್ತಮ ಸಮಕಾಲೀನ ಟೆಸ್ಟ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯೂ ಅವರದ್ದೇ. ಸದರಿ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಅವರು ಸಿಡಿಸಿದ್ದು ತಮ್ಮ ಟೆಸ್ಟ್ ಜೀವನದ 25ನೇ ಶತಕ.  ಇದೇ ಮೈಲಿಗಲ್ಲನ್ನು ತಲುಪಲು ಬ್ಯಾಟಿಂಗ್ ದೈತ್ಯ ತೆಗೆದುಕೊಂಡಿದ್ದು 130 ಇನಿಂಗ್ಸ್, ಭಾರತೀಯ ತಂಡದ ಕ್ಯಾಪ್ಟನ್ ಆದ ವಿರಾಟ್ ಕೊಹ್ಲಿ ತೆಗೆದುಕೊಂಡಿದ್ದು 12ವೈ ಇನಿಂಗ್ಸ್, ಸ್ಮಿತ್ ತೆಗೆದುಕೊಂಡಿದ್ದು ಕೇವಲ 119 ಇನಿಂಗ್ಸ್. ಇವರಾರೂ ಪ್ರಚಂಡ ಬ್ರಾಡ್ಮನ್ ತೆಗೆದುಕೊಂಡ 68 ಇನಿಂಗ್ಸ್ ಹತ್ತಿರ ಹೋಗಿಲ್ಲವೆನ್ನುವುದು ಕುತೂಹಲಕರ.    

ಟೆಸ್ಟ್ ಗೆ ಸ್ಮಿತ್ ಪಾದಾರ್ಪಣ ಮಾಡಿದ್ದು 2010ರಲ್ಲಿ, ಲಾರ್ಡ್ಸ್ ಮೈದಾನದಲ್ಲಿ, ಆದರೆ ಪಾಕಿಸ್ತಾನದ ವಿರುದ್ಧ. ಅವರು ಆಯ್ಕೆಯಾದದ್ದೇ ಬೌಲರ್ ಆಗಿ ಅಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ. ಆಗ ತಾನೇ ನಿವೃತ್ತಿ ಘೋಷಿಸಿದ್ದ ಶೇನ್ ವಾರ್ನ್ರನ್ನು ನೆನಪಿಸುವಂಥ ಬೌಲಿಂಗ್ ಆಕ್ಷನ್ ಹೊಂದಿದ ಸ್ಮಿತ್ ತಮ್ಮ ಡೆಬ್ಯು ಮ್ಯಾಚ್ ನ ಮೊದಲ ಇನಿಂಗ್ಸ್ ನಲ್ಲಿ ಬೌಲ್ ಮಾಡಲಿಲ್ಲ, ಎರಡನೇ ಇನಿಂಗ್ನ್ ನಲ್ಲಿ ಮೂರು ವಿಕೆಟ್ ಪಡೆದರು. ಟೇಲ್ ಎನ್ದರ್ಸ್ ನ ಸಹಭಾಗಿತ್ವದಲ್ಲಿ 77 ರನ್ ಗಿಟ್ಟಿಸಿ ಬ್ಯಾಟ್ಸಮನ್ನಾಗಿ ಗಮನ ಸೆಳೆದರು. 

ಅದೇ ವರ್ಷ ಆಷಸ್ ಸರಣಿಯ ಮೂರು ಪಂದ್ಯಗಳಲ್ಲಿ ಆರನೇ ನಂಬರ್ ಬ್ಯಾಟ್ಸ್ಮನ್ನಾಗಿ ಆಡಿದ ಅವರು ಎರಡು ಅರ್ಧ ಶತಕ ಗಳಿಸಿದರಾದರೂ ಮತ್ತೆರಡು ವರ್ಷ ಅವರನ್ನು ಕಡೆಗಣಿಸಲಾಯಿತು.  ಮತ್ತೆ ಸ್ಮಿತ್ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು 2013 ರಲ್ಲಿ. ಭಾರತದ ಪ್ರವಾಸಕ್ಕಾಗಿ ಬಂದ ಆಸ್ಟ್ರೇಲಿಯಾ ತಂಡದ ಪರ ಅವರು ಗಳಿಸಿದ 92 ರನ್ ಅವರ ಅತ್ಯಧಿಕ ಸ್ಕೋರ್ ಆಯಿತು. ತಮ್ಮ ಚೊಚ್ಚಲ ಟೆಸ್ಟ್ ಶತಕಕ್ಕಾಗಿ ತಾಯ್ನಾಡಿನಲ್ಲಿ ಅದೇ ವರ್ಷ ನಡೆದ ಆಷಸ್ ಸರಣಿಗಾಗಿ ಕಾಯಬೇಕಾಯಿತು. ಆ ನಂತರ, ಬಹಿಷ್ಕಾರದ ಕಾರಣಕ್ಕಾಗಿ ಒಂದು ವರ್ಷ ಆಡದಿದ್ದುದನ್ನು ಬಿಟ್ಟರೆ, ಸ್ಮಿತ್ ತಮ್ಮ ತಂಡದ  ಬ್ಯಾಟಿಂಗ್ ಬೆನ್ನೆಲುಬು. 

ತಾಂತ್ರಿಕವಾಗಿ ಅವರ ಬ್ಯಾಟಿಂಗ್ ಪರಿಪೂರ್ಣವೇನಲ್ಲ. ಹಾಗೆ ನೋಡಿದರೆ, ಬ್ಯಾಟಿಂಗ್ ಖ್ಯಾತಿಯ ಸಚಿನ್ ಏನು ಪರಿಪೂರ್ಣರಲ್ಲವಲ್ಲ. ಹಾಗಿದ್ದೂ ಅವರಿಬ್ಬರ ಬ್ಯಾಟಿಂಗ್ ಸರಾಸರಿ  ಹುಬ್ಬೇರಿಸುತ್ತದೆ. ಆ ಸಾಧನೆಗೆ ತಕ್ಕಂತೆ ಮೈಕೇಲ್ ಕ್ಲಾರ್ಕ್ ನಿವೃತ್ತಿಯ ನಂತರ ಸ್ಮಿತ್ ರನ್ನು ನಾಯಕಸ್ಥಾನಕ್ಕೇರಿಸಲಾಯಿತು. ಆ ಪಟ್ಟಕ್ಕೆ ಸ್ಮಿತ್ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಬಾಲ್ ವಿಕೃತಿಗೊಳಿಸಿದ ಆಪಾದನೆ ಹೊತ್ತ ಕಳಂಕವನ್ನು ಮರೆಮಾಚಲಾಗುವುದಿಲ್ಲ. ಅದನ್ನು ಕಡೆಗಣಿಸಿದರೆ, ಸ್ಮಿತ್ ಉತ್ತಮ ನಾಯಕ, ತನ್ನ ಅಸಾಧಾರಣ ಪ್ರತಿಭೆಯಿಂದಲೇ ತನ್ನ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಬೌಲರ್ ಆಗಿ ಟೆಸ್ಟ್ ಕ್ರಿಕೆಟ್ ನ್ನು ಪ್ರವೇಶಿಸಿದ ಸ್ಮಿತ್ ಈಗ ಬೌಲ್ ಮಾಡುವುದೇ ಅಪರೂಪ. 

ಅಂದ ಹಾಗೆ, ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ನ ದಾಖಲೆ ಅಸೂಯೆ ಹುಟ್ಟಿಸುವಂತಿದ್ದು, ಇತ್ತೀಚಿಗೆ ನಡೆದ ವಿಶ್ವ ಕಪ್ ಸೆಮಿಫೈನಲ್ ನಲ್ಲಿ ಪ್ರಬಲ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಕಳೆದ ಹತ್ತು ಆಷಸ್ ಟೆಸ್ಟ್ ಗಳಲ್ಲಿ, ಸ್ಮಿತ್ 1000 ಕ್ಕೂ ಹೆಚ್ಚು ರನ್ ಪೇರಿಸಿದ್ದಾರೆ.   

ವಿರಾಟ್ ಕೊಹ್ಲಿಯಂತೆ ಕ್ರಿಕೆಟ್ ನ ಮೂರೂ ಫಾರ್ಮಾಟ್ ಗಳಿಗೂ ಅಗತ್ಯ ಮಾರ್ಪಾಡನ್ನು ಮಾಡಿಕೊಂಡು ಮೂರರಲ್ಲೂ ಕೊಡುಗೆ ನೀಡುತ್ತಾ ಬಂದಿರುವ ಸ್ಮಿತ್ ಗೆ ಈಗ 30 ವರ್ಷ ವಯಸ್ಸು. ವಿರಾಟರಂತೆ ಫಾರ್ಮ್ ಹೆಚ್ಚು ಕಳೆದುಕೊಂಡಿಲ್ಲ. ಇನ್ನೆಷ್ಟು ದಾಖಲೆಗಳನ್ನು ನಿರ್ಮಿಸುತ್ತಾರೆ ಮುರಿಯುತ್ತಾರೆ ನೋಡಬೇಕು.