ಬಣ್ಣದ  ಲೋಕಕ್ಕೇ ಮಣ್ಣೆರಚಿದ ಸರ್ಕಾರಗಳು : ಸಿನಿಮಾ ನಗರಿ ಎಂಬ ಭ್ರಮಾ ಲೋಕಕ್ಕೇ ಸವಾಲು

ಬಣ್ಣದ  ಲೋಕಕ್ಕೇ ಮಣ್ಣೆರಚಿದ ಸರ್ಕಾರಗಳು : ಸಿನಿಮಾ ನಗರಿ ಎಂಬ ಭ್ರಮಾ ಲೋಕಕ್ಕೇ ಸವಾಲು

ಕರ್ನಾಟಕಕ್ಕೊಂದು ಸುಸಜ್ಜಿತ ಸಿನಿಮಾ ನಗರ  ಬೇಕು ಎಂಬ ಬೇಡಿಕೆಗೆ ಹಲವಾರು ದಶಕಗಳ ಇತಿಹಾಸವಿದೆ. ಮೈಸೂರಿನ 20 ಕಿಮೀ ವ್ಯಾಪ್ತಿಯೊಳಗೆಯೇ ಹಲವಾರು ತಾಣಗಳು ಸಿನಿಮಾಕ್ಕೆ ಹೇಳಿ ಮಾಡಿಸಿದಂತಿರುವುದರಿಂದ ಇಲ್ಲಿಯೇ ಸಿನಿಮಾ ನಗರವಾಗಲಿ ಎಂಬ ಬೇಡಿಕೆಗೆ ಸಿದ್ದರಾಮಯ್ಯ ಸರ್ಕಾರ ಅಸ್ತು ಎಂದಿತ್ತು.

ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕ ಪ್ರದೇಶದ  ಹಿಮ್ಮಾವು ಬಳಿ ಕಂದಾಯ ಇಲಾಖೆಯ 116 ಮತ್ತು ಅರಣ್ಯ ಇಲಾಖೆಯ 30 ಎಕರೆ ಭೂಮಿಯನ್ನ ಬಳಸಿಕೊಂಡು 400 ಕೋಟಿ ವೆಚ್ಚದಲ್ಲಿ ಸಿನಿಮಾಕ್ಕೆ ಬೇಕಾದ ವ್ಯವಸ್ಥೆ, ಪಂಚತಾರಾ ಹೋಟೆಲ್, ಆಟದ ಮೈದಾನ ಎಲ್ಲವನ್ನೂ ನಿರ್ಮಿಸಲು ಯೋಜಿಸಲಾಗಿತ್ತು,. ಕಂದಾಯ ಇಲಾಖೆ 30 ವರ್ಷಗಳ ಕಾಲ ಗುತ್ತಿಗೆಗೆ ನೀಡುವುದಾಗಿ ಹೇಳಿದರೂ, ಈ ಅವಧಿಯನ್ನ 60 ಅಥವಾ 90 ವರ್ಷಕ್ಕೆ ಏರಿಸಬೇಕೆಂಬ ಅಹವಾಲು ಇಡಲಾಗಿತ್ತು.

ಇವಿಷ್ಟೂ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಾಗಿ ಇನ್ನೆನು ಹಿಮ್ಮಾವುನಲ್ಲಿ ಬಣ್ಣದ ಲೋಕ ಬರುತ್ತೆ ಎಂಬ ಕಾರಣದಿಂದ, ಬೇರೆ ಕಡೆ ಇದ್ದ ನಿವೇಶನವನ್ನ ಮಾರಿ ಅದೆಷ್ಟೋ ಜನ ಈ ಊರಿನ  ಆಸುಪಾಸಿನ ಭೂಮಿ ಖರೀದಿಸುವ ಬುದ್ದಿವಂತಿಕೆ ಮೆರೆದಿದ್ದರು. ಸಿನಿಮಾ  ಲೋಕ ಬಂದರೆ ಭೂಮಿ ಬಂಗಾರವಾಗುತ್ತೆ ಎಂಬ ಕನಸನ್ನೊತ್ತಿರುವ ರಿಯಲ್ ಎಸ್ಟೇಟ್‍ನ ಅನೇಕಾನೇಕ ಮಂದಿ ಈಗಾಗಲೇ ಇಲ್ಲಿ ಹೂಡಿಕೆ ಭರಾಟೆಯನ್ನೆಚ್ಚಿಸಿದ್ದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಂತೆ, ರಾಮನಗರದಲ್ಲಿ ಸಿನಿಮಾ ಸಿಟಿ ಎಂದು ಘೋಷಿಸಿದರು. ಇದಕ್ಕೆ ಸಿದ್ದರಾಮಯ್ಯ ಆಕ್ಷೇಪಿಸಿದಾಗ ಇಲ್ಲಿ ಸ್ಥಾಪನೆಯಾಗುವುದು ಸಿನಿಮಾ ವಿಶ್ವವಿದ್ಯಾನಿಲಯ ಎಂದೇಳಲಾಯಿತು. 

ಹೇಗೋ ಅಲ್ಲೊಂದು ಇಲ್ಲೊಂದು ಸಿನಿಮಾಗೆ ಸಂಬಂಧಿಸಿದ್ದು ಆಗುತ್ತಲ್ಲ ಎಂದುಕೊಂಡಿರುವಾಗಲೇ, ಸಂಸದ ಪ್ರತಾಪ ಸಿಂಹ ಕೂಡ ಕಳೆದವಾರವಷ್ಟೇ ಹಿಮ್ಮಾವಿನಲ್ಲಿ ಸಿನಿಮಾ ನಗರ ಸ್ಥಾಪನೆಗೆ ಆಸ್ಥೆ ವಹಿಸುತ್ತೇನೆಂದೇಳುವ ಮೂಲಕ ಮತ್ತಷ್ಟು ಆಶಾಭಾವನೆ ಹೆಚ್ಚಿಸಿದ್ದರು. 

ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಇದ್ದಕ್ಕಿದ್ದಂತೆಯೇ ಕನಕಪುರ ರಸ್ತೆಯಲ್ಲಿರುವ ತಾತಗುಣಿ ಎಸ್ಟೇಟ್‍ನ್ನ ಸಿನಿಮಾ ನಗರಿ ಮಾಡುವುದಾಗಿ ಹೇಳಿಬಿಟ್ಟಿದ್ದಾರೆ. ಇದರ ಪರಿಣಾಮವಾಗಿ ಹಿಮ್ಮಾವು  ರಾಮನಗರದ ಯೋಜನೆಗಳೆಲ್ಲ ಗೋತಾ ಹೊಡೆಯುವಂತಾಗಿವೆ.

ಬನ್ನೇರುಘಟ್ಟ-ಸಾವನದುರ್ಗ ಆನೆ ಕಾರಿಡಾರ್ ನಲ್ಲಿ ಬರುವ ರೋರಿಚ್ ಅಥವಾ ತಾತಗುಣಿ ಎಸ್ಟೇಟ್ ತನ್ನದೇ ಇತಿಹಾಸವನ್ನೂ ಜತೆಯಲ್ಲೇ ವಿವಾದಗಳನ್ನೂ ಇಟ್ಟುಕೊಂಡು ಬರುತ್ತಿರುವ ಪ್ರದೇಶ. ಮೂಲತಃ ರಷ್ಯಾದವರಾದ ಖ್ಯಾತ ಕಲಾಕಾರ ಸ್ಪೆಟೊಸ್ವಾವ್ ನಿಕೊಲೊವಿಚ್ ರೋರಿಚ್, ಭಾರತದ ಖ್ಯಾತ ನಟಿ ದೇವಿಕಾ ರಾಣಿಯನ್ನ ವಿವಾಹವಾಗಿ ಕನಕಪುರ ರಸ್ತೆಯಲ್ಲಿ 468 ಎಕರೆ ವಿಸ್ತಾರದ ತಾತಗುಣಿ ಎಸ್ಟೇಟ್‍ನಲ್ಲಿ ನೆಲೆಸಿದ್ದರು.

ಇವರು ಬಿಡಿಸಿದ ನೆಹರು, ಇಂದಿರಾಗಾಂಧಿ ಚಿತ್ರಗಳು ಇಂದಿಗೂ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿವೆ. ಇನ್ನಷ್ಟು ಚಿತ್ರಗಳು ರಾಷ್ಟ್ರಪತಿ ಭವನದಲ್ಲಿವೆ. ಬೇರೆಬೇರೆ ರಾಜ್ಯಗಳಲ್ಲಿ ರೋರಿಚ್ ಮ್ಯೂಜಿಯಂಗಳಿವೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಇವರ ಕೊಡುಗೆಗಳಿವೆ. ಚಿನ್ನಾಭರಣ, ಪ್ರಾಚೀನ ವಸ್ತುಗಳು, ಬೆಲೆಬಾಳುವ ಕಲಾಕೃತಿ ಸೇರಿದಂತೆ ಅಮೂಲ್ಯ ಸಂಪತ್ತಿನಲ್ಲಿ ಕೆಲವಷ್ಟನ್ನ ಇವರ ಸಿಬ್ಬಂದಿಯಾಗಿದ್ದ ಮೇರಿ ಜೂಮ್ಲೆ ಪೂಣಚ್ಚ ಮತ್ತು ಈಕೆ ಪತಿ ಪೂಣಚ್ಚ ಮತ್ತು ಗೆಳೆಯ ನಂದಕುಮಾರ್ ದೋಚಿದ್ದಾರೆ. ರೋರಿಚ್ ದಂಪತಿಗೆ ಸಂತಾನವಿಲ್ಲದ್ದರಿಂದ ಎಸ್ಟೇಟ್ ಸೇರಿದಂತೆ ಆಸ್ತಿ ಎಲ್ಲ ಇವರಿಗೇ ಸೇರಬೇಕು ಎಂಬ ಖೊಟ್ಟಿ ಉಯಿಲನ್ನ ಸೃಷ್ಟಿಸಿಕೊಂಡಿದ್ದರು ಎಂಬ ಮೊಕದ್ದಮೆ ಇನ್ನೂ ಅಂತ್ಯಕಂಡಿಲ್ಲ.

ರೋರಿಚ್ ಸಂಬಂಧಿ ಎಂದು ಆಸ್ಟೇಲಿಯಾದ ನೀಲಿಮಾ ಡೀಟ್ಜೆ ಎಂಬಾಕೆಯೂ ಹಕ್ಕು ಪ್ರತಿಪಾದಿಸಿದ್ದುಂಟು. 141 ಎಕರೆ ಭೂಮಿ ಮಾರಲು ಒಪ್ಪಿ 89 ಲಕ್ಷ ರುಪಾಯನ್ನ ರೊರಿಚ್ ಪಡೆದಿದ್ದರೆಂದು ಕೆ.ಟಿ.ಪಿ.ಸಂಸ್ಥೆ ವಾದಿಸಿತ್ತು. ನ್ಯಾಯಾಲಯ ಅಷ್ಟು ಹಣ ಪಡೆದಿದ್ದರೆ ಕೊನೇ ದಿನಗಳಲ್ಲಿ ರೊರಿಚ್ ದಂಪತಿ ಅಶೋಕಾ ಹೋಟೆಲ್‍ನಲ್ಲೇ ವಾಸ್ತವ್ಯ ಹೂಡಿದ್ದಾಗ, ಪಡಿಪಾಟಲು ಪಟ್ಟಿದ್ದೇಕೆ ಎಂದು ಪ್ರಶ್ನಿಸುವ ಮೂಲಕ, ಆ ಮಾರಾಟ ವ್ಯವಹಾರವನ್ನ ಸಂಶಯಿಸಿತ್ತು.

ಇಡೀ ಆಸ್ತಿ ವಿವಾದ ಬಗ್ಗೆ ಮಧ್ಯಪ್ರವೇಸಿಸುವಂತೆ ಮೇರಿ ಪೂಣಚ್ಚ ಆಗಿನ ರಷ್ಯಾ ಅಧ್ಯಕ್ಷರಿಗೇ ರೊರಿಚ್ ಹೆಸರಲ್ಲೆ ತಂತಿ ಕಳುಹಿಸಿ ಸಿಕ್ಕಿಬಿದ್ದಿದ್ದರು. ಎಸ್.ಎಂ.ಕೃಷ್ಣ ಇಡೀ ತಾತಗುಣಿ ಎಸ್ಟೇಟ್ ಸರ್ಕಾರದ ವಶ ಪಡಿಸಿಕೊಳ್ಳಲು ಮುಂದಾದರು. ನ್ಯಾಯಾಲಯದ ಹೋರಾಟದಿಂದಾಗಿ ಇದೀಗ ಸರ್ಕಾರದ್ದಾಗಿ, ಮಂಡಳಿಯೊಂದನ್ನ ರಚಿಸಿ ಸರ್ಕಾರದ ಮುಖ್ಯಕಾರ್ಯದರ್ಶಿಯನ್ನೆ ಅಧ್ಯಕ್ಷರನ್ನಾಗಿಸಿ ಹಲವಾರು ಇಲಾಖೆಯ ಅಧಿಕಾರಿಗಳನ್ನ ನಿರ್ದೇಶಕರನ್ನಾಗಿಸಿದ್ದರೂ, ಮಂಡಳಿಯಿಂದ ನಯಾಪೈಸೆ ಉಪಯೋಗವೂ ಆಗಿಲ್ಲ.

ಇಡೀ ಎಸ್ಟೇಟ್ ಹಾಳು ಸುರಿಯುತ್ತಿದೆ. ಮುಂಬೈ ಸೇರಿದಂತೆ ಬೇರೆಡೆಗೆ ಸುಗಂಧ ದ್ರವ್ಯ ತಯಾರಿಕೆಗೆ ಕಳುಹಿಸುತ್ತಿದ್ದ ಎಣ್ಣೆ ಕೊಡುತ್ತಿದ್ದ ಲಿನೊಲಾಯ್ ಅಥವಾ ಇಂಡಿಯಾ ಲ್ಯಾವೆಂಡರ್ ಮರಗಳು ನಾಶಗೊಂಡಿವೆ. 1993ರಲ್ಲಿ ರೊರಿಚ್ ಮತ್ತು ಮರು ವರ್ಷದಲ್ಲಿ ದೇವಿಕಾರಾಣಿ ಸತ್ತ ನಂತರ ಇವರ ಅಮೂಲ್ಯ ಸರಕುಗಳು ಪೆಟ್ಟಿಗೆಯಲ್ಲಿವೆ. ಸಾರ್ವಜನಿಕರಿಗೆ ಪ್ರವೇಶವಿಲ್ಲದಂತಾಗಿ, ರಿಯಲ್ ಎಸ್ಟೇಟ್ ಧಂದೆಯವರು  ಆಗೊಮ್ಮೆ ಈಗೊಮ್ಮೆ ಇದರ ಮೇಲೆ ಕಣ್ಣಾಕುವಂಥದ್ದನ್ನ ನಿರ್ವಾಹತವಾಗಿ ಮಾಡಿಕೊಂಡೇ ಬರುತ್ತಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೊರಿಚ್ ಎಸ್ಟೇಟ್ ಅಭಿವೃದ್ದಿ ಮಂಡಳಿಗೆ 25 ಕೋಟಿ ಬಿಡುಗಡೆಗೊಳಿಸಿ, ಸಭಾಂಗಣ, ಚಿತ್ರ ವೀಕ್ಷಣೆಗಾಗಿ ಚಿಕ್ಕ ಥಿಯೇಟರ್ ಇತ್ಯಾದಿಯನ್ನ ಅನುಷ್ಠಾನಕ್ಕೆ ತರಲು ಹೇಳಿದ್ದರೂ ಅದ್ಯಾವುದೂ ಆಗಿಲ್ಲ.

2017 ರಲ್ಲಿ ಬೆಂಗಳೂರು ಮೆಟ್ರೋದವರು ಡಿಪೋ ಸ್ಥಾಪಿಸಿಕೊಳ್ಳಲು ರೊರಿಚ್ ಎಸ್ಟೇಟ್ ಪಕ್ಕದ ಉತ್ತರಹಳ್ಳಿ ಮಾನವಂತೆ ಕಾವಲ್ ಭೂಮಿಯನ್ನ ಕೇಳಿದ್ದರೂ, ವೈವಿಧ್ಯಮಯ ಪರಿಸರಕ್ಕೆ ಹಾನಿ ಎಂಬುದರಿಂದ ಕೊಟ್ಟಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ 209 ನ್ನು ವಿಸ್ತರಿಸಲು ಈ ಎಸ್ಟೇಟ್ ಜಾಗ ಬೇಕಾಗಿದ್ದಾಗಲೂ ಅದಕ್ಕೆ ಅನುಮತಿ ಕೊಡಲಿಲ್ಲ. ಕೊನೆಗೆ ಆ ಹೆದ್ದಾರಿ ಮಾರ್ಗವನ್ನೆ ಬದಲಿಸಲಾಗಿತ್ತು.

ಆನೆ, ನವಿಲು ಸೇರಿದಂತೆ ಹಲವಾರು ವನ್ಯಜೀವಿಗಳ ಸ್ವಚ್ಚಂದ ವಿಹಾರ ವ್ಯಾಪ್ತಿಯಲ್ಲಿನ ತಾತಗುಣಿ ಎಸ್ಟೇಟನ್ ನ ಪರಿಸರಪ್ರಿಯವಾಗಿಯೇ ಇಟ್ಟುಕೊಂಡು ಸದ್ದುಗದ್ದಲವಿಲ್ಲದ ಅಭಿವೃದ್ದಿ ಮಾಡಬೇಕೆಂಬ ಹೋರಾಟಗಳಿರುವಾಗಲೇ, ಯಡಿಯೂರಪ್ಪ ಇದ್ದಕ್ಕಿದ್ದಂತೆ ಇಲ್ಲಿ ಸಿನಿ ನಗರಿ ನಿರ್ಮಿಸುವ ಮಾತಾಡಿರುವುದು ದೊಡ್ಡ ಆಘಾತ ತಂದಿಟ್ಟಿದೆ.

ಮೈಸೂರಿನ ಹಿಮ್ಮಾವು, ರಾಮನಗರದಲ್ಲಿ ಶುರುವಾಗಿಯೇ ಬಿಡುತ್ತೆ ಎಂಬಂತಿದ್ದ ಸಿನಿಮಾ ನಗರ ಮತ್ತೆ ತಾತಗುಣಿ ಎಸ್ಟೇಟ್‍ನತ್ತ ಹೊರಳಿಕೊಂಡಿರುವುದು ಇಡೀ ಯೋಜನೆಯೇ ಗಂಟುಮೂಟೆ ಕಟ್ಟಿಕೊಳ್ಳುವಂತಾಗುತ್ತಿದೆ. ಹಿಮ್ಮಾವು ಬಳಿ ಹಣ ಹೂಡಿದ್ದವರು ಕಂಗಾಲಾಗಿದ್ದರೆ, ತಾತಗುಣಿ ಎಸ್ಟೇಟ್ ಆಸ್ತಿ ಮೇಲೆ ಕಣ್ಣಿಟ್ಟಿದ್ದವರು ಎದೆ ಸೆಟೆಸಿ ನಿಂತಿದ್ದಾರೆ. ಸರ್ಕಾರ ಬದಲಾದಂತೆಲ್ಲ ಸ್ಥಳವೂ ಬದಲಾಗುತ್ತಿರುವುದರಿಂದ ಸಿನಿಮಾ ಜನ ಎಡಬಿಡಂಗಿ ಸ್ಥಿತಿಗೆ ನೂಕಲ್ಪಟ್ಟಿದ್ದಾರೆ.