ವರ್ಷಗಳುರುಳಿದರೂ ಚೇತರಿಸಿಕೊಳ್ಳದ ಕೊಡಗು; ಆತಂಕದಲ್ಲಿ ಮುಳುಗಿದ ಕಾಫಿ ಬೆಳೆಗಾರರು

ವರ್ಷಗಳುರುಳಿದರೂ ಚೇತರಿಸಿಕೊಳ್ಳದ ಕೊಡಗು; ಆತಂಕದಲ್ಲಿ ಮುಳುಗಿದ ಕಾಫಿ ಬೆಳೆಗಾರರು

ಕಳೆದ ವರ್ಷದಲ್ಲಿ ಸಂಭವಿಸಿದ ಗುಡ್ಡ ಕುಸಿತ, ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕಾಫಿ ನಾಡು ಕೊಡಗು ಇನ್ನೂ ಚೇತರಿಸಿಕೊಂಡಿಲ್ಲ. ಹವಾಮಾನ ವೈಪರಿತ್ಯ ಕೊಟ್ಟಿರುವ ಹೊಡೆತ ಇಡೀ ಕೊಡಗನ್ನು ಮೇಲೆಳೆದಂತೆ ಮಲಗಿಸಿಬಿಟ್ಟಿದೆ. ಕಾಫಿ ಬೆಳೆಯಲ್ಲಿ ಲಾಭ ದೊರೆಯದ ಕಾರಣ ಕರಿಮೆಣಸು ಬೆಳೆಯಿಂದ ಬರುವ ಆದಾಯವನ್ನು ನೆಚ್ಚಿಕೊಂಡಿದ್ದ ಇಲ್ಲಿನ ಬೆಳೆಗಾರರಿಗೆ, ಕರಿಮೆಣಸಿನ ಬೆಲೆ ಕುಸಿತಕ್ಕೊಳಗಾಗಿರುವುದು ಇನ್ನಷ್ಟು ಆಘಾತಕ್ಕೊಳಗಾಗಿಸಿದೆ.
ಸುಮಾರು ‎4,102 (ಚ ಕಿ ಮೀ) ಭೂ ಪ್ರದೇಶ ಹೊಂದಿರುವ ಕೊಡಗು ಅತಿ ಮಳೆ ಬೀಳುವ ಗುಡ್ಡಗಾಡು ಪ್ರದೇಶವೂ ಹೌದು. ಭತ್ತ, ಕಾಫಿ, ಕರಿಮೆಣಸು ಬೆಳೆ ಇಲ್ಲಿನ ಆರ್ಥಿಕತೆಯ ಒಂದು ಭಾಗ. ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿ ಮಾಡಲು ವಾತಾವರಣವೂ ಅನುಕೂಲಕವಾಗಿಲ್ಲ. ಕೆಲವೆಡೆ ರೈತರು ದೈನಂದಿನ ಜೀವನಕ್ಕೆ ಭತ್ತವನ್ನು ಬೆಳೆಯುತ್ತಿರುವುದನ್ನು ಬಿಟ್ಟರೆ ಬಹುತೇಕ ರೈತರು ಭತ್ತವನ್ನು ಕೈಬಿಟ್ಟಿದ್ದಾರೆ. ಪ್ರೋತ್ಸಾಹ ಧನವೂ ಸಕಾಲಕ್ಕೆ ದೊರೆಯದಿರುವುದು ಇದಕ್ಕೆ  ಕಾರಣ ಇರಬಹುದು.
ಸದ್ಯ, ಕಾಫಿ ಬೆಳೆಯೂ ಭತ್ತದ ದಾರಿಯನ್ನೇ ಹಿಂಬಾಲಿಸಿದೆ. ಕಾಫಿ ಬೆಳೆಗಾರರು ಹೊರ ಜಗತ್ತಿಗೆ ಸಿರಿವಂತರು. ಆದರೀಗ ಅವರ ಪರಿಸ್ಥಿತಿಯೂ ಮೊದಲಿನಂತಿಲ್ಲ. ಕಾಫಿ ಈಗ ಇಲ್ಲಿನ ಬೆಳೆಗಾರರ ಕೈಯನ್ನು ಸುಟ್ಟು ಹಾಕಿದೆ. ಕಾಫಿ ಕೊಯ್ಲು ಆರಂಭವಾಗಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಕಾಫಿ ಇಳವರಿ ಸಿಗುವುದು ಅನುಮಾನ. ಕಳೆದ ವರ್ಷದಲ್ಲಿ ಸುರಿದ ಭಾರೀ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕಾಫಿ ಬೀಜ ನೆಲಕ್ಕುರುಳಿವೆ.
ಈ ಹಿಂದಿನ ವರ್ಷಗಳಲ್ಲಿ ಕಾಫಿ ಇಂತಹ ಸ್ಥಿತಿ ತಲುಪಿರಲಿಲ್ಲ. ಕಾಫಿ ಗಿಡಗಳು ಶ್ವೇತ ಸುಂದರಿಯಂತೆ ಕಾಣಿಸುತ್ತಿದ್ದ ಆ ಮನೋಹರ ದೃಶ್ಯ, ಸೌಂದರ್ಯವೇ ಬೇರೆ. ಇಂತಹ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದ ಪ್ರವಾಸಿಗರು ಕೂಡ ಕೊಡಗನ್ನು ಇನ್ನಷ್ಟು ಚಲನಶೀಲವಾಗಿಸುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಬೇರೆ ಇದೆ.
ಕಳೆದ ಕೆಲ ವರ್ಷಗಳಿಂದ ಕೊಡಗಿನಲ್ಲಿ ಹೂ ಮಳೆಯೇ ಇಲ್ಲ. ಹೀಗಾಗಿ ಕಾಫಿ ಬೆಳೆಗಾರರು ಸಂಕಷ್ಟದ ಸುಳಿಯಲ್ಲಿದ್ದಾರೆ. ಕಾಫಿ ಬೆಳೆಯುವ ಪ್ರದೇಶದ ಸುತ್ತಮುತ್ತ ಸುಮಾರು 2 ರಿಂದ 3 ಇಂಚು ಮಳೆ ಸತತ 4 ಗಂಟೆವರೆಗೆ ಸುರಿಯಬೇಕು. ಆದರೆ ವಾಡಿಕೆಯಂತೆ ಹೂ ಮಳೆ ಸುರಿಯುತ್ತಿಲ್ಲ. ಇದು ಒಟ್ಟಾರೆ ಕಾಫಿ ಇಳುವರಿಯನ್ನೇ ಬುಡಮೇಲು ಮಾಡಿದೆ. ಇದು ಹವಾಮಾನ ವೈಪರಿತ್ಯದಿಂದಾಗಿರುವ ನೇರ ಪರಿಣಾಮ.
ಇನ್ನು ನಶಿಸುತ್ತಿರುವ ಜೇನಿನ ಸಂತತಿಯೂ ಕೂಡ ಕಾಫಿ ಬೆಳೆಗೆ ತೀವ್ರತರವಾದ ಹೊಡೆತ ಕೊಟ್ಟಿದೆ. ಕಾಫಿ ಹೂ ಅರಳಿದ ನಂತರ   ಸಹಜವಾಗಿ ಪರಾಗಸ್ಪರ್ಶ ನಡೆಯಬೇಕು. ಕಾಫಿ ಬೆಳೆಯಲ್ಲಿ ಪರಾಗಸ್ಪರ್ಶದ ಒಂದು ಮುಖ್ಯ ಪ್ರಕ್ರಿಯೆ.  ಪರಾಗಸ್ಪರ್ಶ, ಗಾಳಿ ಮತ್ತು ಕೀಟಗಳಿಂದ ನಡೆಯುವುದು ವಾಡಿಕೆ.
ಗಾಳಿಯಿಂದ ಸುಮಾರು ಶೇ. 20 ರಿಂದ 30ರಷ್ಟು ನಡೆದರೆ,  ಇನ್ನುಳಿದ ಭಾಗ ಉಳಿದ ಕೀಟಗಳಿಂದ ನಡೆಯುತ್ತದೆ. ಅದರಲ್ಲೂ ಸುಮಾರು ಶೇ.60ರಿಂದ 70ರಷ್ಟು ಈ ಪ್ರಕ್ರಿಯೆ ಜೇನು ಹುಳುಗಳ ಮೂಲಕವೇ ನಡೆಯಬೇಕು. ಆದರೆ ಜೇನು ಹುಳುಗಳ ಸಂತತಿ ಕ್ರಮೇಣ ಕುಂದುತ್ತಿದೆ. ಇದು ಬೆಳೆಗಾರರ ತಲೆನೋವನ್ನು ಹೆಚ್ಚಿಸಿದೆ.
ಈ ಎಲ್ಲ ಬಿಕ್ಕಟ್ಟುಗಳ ನಡುವೆಯೇ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯೂ ಕ್ಷೀಣಿಸತೊಡಗಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಸ್ಥಳೀಯ ಕಾರ್ಮಿಕರ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಕಾರ್ಮಿಕರ ಅಭಾವವನ್ನು ಸರಿದೂಗಿಸಲು ಬೇರೆ ಸ್ಥಳಗಳಿಂದ ಕಾರ್ಮಿಕರನ್ನು ಕರೆ ತಂದರೂ ಸಹ ಅವರ್ಯಾರು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕುಶಲತೆ ಪಡೆದಿರುವುದಿಲ್ಲ. ಹಾಗೆಯೇ ಅವರಲ್ಲಿ ಎಳ್ಳಷ್ಟು ಅನುಭವವೂ ಇರುವುದಿಲ್ಲ.
ಸದ್ಯ ಅರಬಿ ಗಿಡಗಳಿಗೆ ಕಾಯಿ ಕೊರಕಲು (stem borer) ರೋಗ ಕಾಣಿಸಿಕೊಂಡು ನಾಶವಾಗಿದೆಯಲ್ಲದೆ ಇದೀಗ ಅದು ಕೂಡ ಅಳಿವಿನ ಅಂಚಿನಲ್ಲಿದೆ. ಪ್ರಸ್ತುತ  ರೊಬಸ್ಟ ಗಿಡಗಳು ತೋಟವನ್ನು ಆವರಿಸಿವೆ.