ಕಾಫಿ ಕೊಯ್ಲು ವಿಳಂಬ : ರಫ್ತುದಾರರಿಗೆ ಕಹಿ?

ಕಾಫಿ ಕೊಯ್ಲು ವಿಳಂಬ : ರಫ್ತುದಾರರಿಗೆ ಕಹಿ?

ಅನುಕೂಲಕರವಲ್ಲದ ಹವಾಮಾನದಿಂದಾಗಿ ವಿಶ್ವ ಕಾಫಿ ಉತ್ಪಾದನೆಯಲ್ಲಿ ಕೊರತೆ ಮತ್ತು ದೀರ್ಘಾವಧಿಯಿಂದ  ಅಂತಾರಾಷ್ಟ್ರೀಯ ಮಟ್ಟದಲ್ಲಿ ತಗ್ಗಿದ ಬೆಲೆಯಿಂದಾಗಿ ಹಡಗು ಸಾಗಣೆಯಲ್ಲಿನ ಇಳಿಕೆಯನ್ನು ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ ಬಿಂಬಿಸುತ್ತಿದ್ದ ಪರಿಣಾಮ ಜಾಗತಿಕ ಕಾಫಿ ಬೆಲೆ ಏರುಗತಿಯ ಸೂಚನೆ ನೀಡಿತ್ತು.

2018-19 ನೇ ಸಾಲಿನಲ್ಲಿ ಬೆಳೆ ಉತ್ಪಾದನೆಯಲ್ಲಿನ ಕುಸಿತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆಯಿಂದಾಗಿ ಕಳೆದ ವರ್ಷ ಭಾರತೀಯ ಕಾಫಿ ರಫ್ತು ಪ್ರಮಾಣ ಶೇ. 9 ರಷ್ಟು ಕುಸಿದಿತ್ತು.

ದೇಶದ ಅತಿ ದೊಡ್ಡ ಕಾಫಿ ಉತ್ಪಾದಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಮಳೆಗಾಲದ ನಂತರವೂ ಸುರಿಯುತ್ತಿರುವ ಮಳೆಯಿಂದಾಗಿ ಸಾಮಾನ್ಯವಾಗಿ ನವಂಬರ್ ಕೊನೆಯಲ್ಲಿ ಆರಂಭವಾಗಬೇಕಿದ್ದ ಅರೇಬಿಕಾ ಕಾಫಿ ಕೊಯ್ಲಿಗೆ ತಡೆಯೊಡ್ಡಿದೆ. ಈಗಾಗಲೇ ಬರ ಮತ್ತು ಮುಂಗಾರು ವಿಳಂಬದಿಂದಾಗಿ ಶೇ.30-35 ರಷ್ಟು ಕಾಫಿ ಉತ್ಪಾದನೆ ಕಡಿಮೆಯಾಗಬಹುದೆಂಬ ನಿರೀಕ್ಷೆ ಇತ್ತು. ಈಗ ಕೊಯ್ಲು ವಿಳಂಬದಿಂದಾಗಿ ಉತ್ಪಾದನೆಯ ಮೇಲೆ ಇನ್ನಷ್ಟು ಪ್ರತಿಕೂಲ ಪರಿಣಾಮವಾಗಲಿದೆ ಎಂದು ಕರ್ನಾಟಕ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎಂ.ಬಿ.ಗಣಪತಿ “ದಿ ಇಕನಾಮಿಕ್ ಟೈಮ್ಸ್” ಗೆ ತಿಳಿಸಿದ್ದಾರೆ.

ತೇವ ಪರಿಸ್ಥಿತಿಯಿಂದಾಗಿ ಶಿಲೀಂದ್ರ ಸೋಂಕು (fungal infection) ತಗುಲಿ ಕಾಫಿಯ ಗುಣಮಟ್ಟ ಹಾಳಾಗಬಹುದಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಕಾಫಿ ಬೀಜಗಳು ಇನ್ನಷ್ಟೇ ಬಲಿಯಬೇಕಾಗಿದೆ. ಇನ್ನಿತರ ಸ್ಥಳಗಳಲ್ಲಿ ಮಳೆಯಿಂದಾಗಿ ಕಾಫಿ ಬೀಜಗಳು ಸೀಳಿಕೊಳ್ಳುವುದರಿಂದ ತಕ್ಷಣ ಕೀಳದಿದ್ದರೆ ನೆಲಕ್ಕೆ ಬಿದ್ದು ಹಾಳಾಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಕಾಫಿ ಮಂಡಳಿಯ ಅಂದಾಜಿನಂತೆ 2019 ರಲ್ಲಿ ಅರೇಬಿಕಾ ಕಾಫಿ 95ಸಾವಿರ ಟನ್ ಗಳಷ್ಟು ಉತ್ಪಾದನೆಯಾಗಲಿದೆ. ಆದರೆ ಜನವರಿ ಮಧ್ಯ ಭಾಗದಲ್ಲಿ ಕೊಯ್ಲು ಆರಂಭವಾಗಬೇಕಿರುವ ರೋಬಸ್ಟಾ ಕಾಫಿಯ ಮೇಲೆ ಈಗಿನ ಹವಾಮಾನ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಭಾರತೀಯ  ಕಾಫಿಯಲ್ಲಿ ಶೇ.70 ರಷ್ಟು ಪಾಲು ಪಡೆದಿರುವ ರೋಬಸ್ಟಾ ಕಾಫಿ ಉತ್ಪಾದನೆ 2018-19 ರಲ್ಲಿ ಶೇ.10 ರಿಂದ 15 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.