“ಜನ್ರ ಕಷ್ಟ ಕೇಳೋದ ಬಿಟ್ಟು ಜನರಿಂದ ದೂರ ಬಂದು  ಸಿಎಮ್  ಹಿಂಗ್ ಗೌಸೆದಾಗ ಇದ್ರ ಹೆಂಗ್ಯ”...?

“ಜನ್ರ ಕಷ್ಟ ಕೇಳೋದ ಬಿಟ್ಟು ಜನರಿಂದ ದೂರ ಬಂದು  ಸಿಎಮ್  ಹಿಂಗ್ ಗೌಸೆದಾಗ ಇದ್ರ ಹೆಂಗ್ಯ”...?

ಏನಪಾ ಬಸಣ್ಣ ಅಂತು-ಇಂತು ಚುನಾವಣೆ ಮುಗಿಸಿದಿ......ಹಣೆಬರಹಾ ಹೊರಗ ಬರೋಕ ಇನ್ನು ಹತ್ತೊಂಬತ್ತ ದಿನಾ ಕಾಯಬೇಕು....! ಅಲ್ಲಲೇ ನಿಮ್ಮ “ಸಿಎಮ್ -ಮಾಜಿ ಪಿಎಮ್ ಅದೇನೋ ಕಡೆದು ಕಟ್ಟೆಹಾಕ್ಯಾರ ಅಂತ   ನಿಸರ್ಗದೊಳಗ ಚಿಕಿತ್ಸೆ ಪಡೆ ನೆವಾ ಮಾಡಿಕೊಂಡು  ಉಡುಪಿಗೆ ಹೋಗಿ ಯಾಕ ಅಡಗಿಕೊಂಡಾರ”….....?

ಅಲ್ರೀ ಪಾಟೀಲ್ರ.............. “ನೀವು ವಿರೋಧಪಕ್ಷದಾಗ ಇರಬೇಕಿತ್ತು....?.ತಪ್ಪಿ ನಮ್ಮ ಊರ ಗೌಡ್ರ ಆಗೀರಿ “!. “ಯಲ್ಲಾದ್ದನ್ನು ಯಡೆಯೂರಪ್ಪ ಟೀಕಾ ಮಾಡಿದಂಗ್ ಟೀಕಾ ಮಾಡ್ತೀರಲ್ಲ” …….? “ಅಲ್ರೀ ನಮ್ಮ ಸಿಎಮ್ ಮಾಜಿ ಪಿಎಮ್ ಇಲೇಕ್ಷನ್‍ಒಳಗ ಓಡಾಡಿ..ಓಡಾಡಿ ದಣಕಂಡಾರ, ಹಗಲು ರಾತ್ರಿ ಪ್ರಚಾರಕ್ಕಂತ ಮೈಕ್ ಮುಂದ್,  ಮೈಕ್ ಹಿಂದ್ ಒಂದಸಮನ ಮಾತಾಡಿ,ಮಾತಾಡಿ ಸಿಕ್ಕಾಪಟ್ಟೆ ದಣದಾರ. ಈದಣಿವು ನೀಗಿಸಿಕೊಳ್ಳಾಕ ಅಂತ್ ನಾಲ್ಕದಿನ ನಿಸರ್ಗ ಚಿಕಿತ್ಸಾಲಯ ಸೇರ್ಯಾರ... ಇದರಾಗ ತಪ್ಪೇನೈತಿ..” ?

ಚಿಕಿತ್ಸೆ ಪಡಕೊಳ್ಳಲಿ ಬೇಡ ಅಂದೋರೂ ಯಾರು...? “ಆದ್ರ ಮುಖ್ಯಮಂತ್ರಿ ಆದೋರು ಮೊದ್ಲ ರಾಜ್ಯದಾಗ ಎಲ್ಲ ಸರಿ ಐತೋ ಇಲ್ಲೋ?ಅನ್ನೋದರಕಡಿಗೆ ಲಕ್ಷಕೋಡಬೇಕು”. “ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಜನರು ಕುಡಿಯೋ ನೀರಿಲ್ದ ಕೋಗಾಡಾಕ ಹತ್ಯಾರ”...!. “ಅಡ್ಡಾ-ದಿಡ್ಡಿ ಮಳೆಗೆ -ಗಾಳಿಗೆ ಕೆಲವು ಕಡೆ ಜನ್ರು ದಿಕ್ಕಾಪಾಲಾಗ್ಯಾರ. ಜನರ ಕಷ್ಟಕ್ಕ ನಿಮ್ಮ ಸಿಎಮ್ ಸ್ಪಂದಿಸಬೇಕು ಹೌದಿಲ್ಲ..”? “ಜನ್ರ ಕಷ್ಟ ಕೇಳೋದ ಬಿಟ್ಟು ಜನರಿಂದ ದೂರ ಬಂದು ಹಿಂಗ್ ಗೌಸೆದಾಗ ಇದ್ರ ಹೆಂಗ್ಯ...” ?

ಅಲ್ರೀ....”ಮಳಿ ಬಂದ ನಿಂತ್ರು ಮರದಹನಿ ನಿಲ್ಲೋದಿಲ್ಲ ಅನ್ನೋಹಂಗ್.... ಚುನಾವಣೆ ಮುಗದ್ರು ಈಚುನಾವಣಾ ಆಯೋಗದವ್ರು ಹಾಕಿರೋ ನೀತಿ ಸಂಹಿತೆ ಅನ್ನೋ ಲಕ್ಷ್ಮಣರೇಖಾ ಅನ್ನೋ ಗೆರಿನ ಇನ್ನು ಅಳಿಸಿಲ್ರೀ. ಈನೀತಿ ಸಂಹಿತೆ ಮುಗೆಮಟಾ ಏನು ಮಾಡೋಹಂಗಿಲ್ರೀ. ಅದಕ ನಮ್ಮ ಸಿಎಂ ಸಾಹೇಬ್ರು ಇದನ್ ನೆಪಾ ಮಾಡಿಕೊಂಡು ನಾಲ್ಕದಿನ ಆರಾಮ ಆಗಾಕ ಹೋಗ್ಯಾರ, ಹೋಗಲಿ ಬಿಡ್ರೀ.....” !

ನಾ ಎಲ್ಲಿ ಹಿಡಕೊಂಡನೋ ಮರಾಯಾ....ನಿಂದೊಳ್ಳೆಕತಿಯಾತಲ್ಲ....! ಅಷ್ಟುಕ್ಕೂ  “ನಿಮ್ಮ ಕುಮಾರಣ್ಣ ಹಿಡಕೊಳ್ಳಾಕ ನಮ್ಮಂತವರ ಕೈಗೆ ಅಷ್ಟು ಸರಳಾಗಿ ಸಿಗೋ ವ್ಯಕ್ತಿನ...? ಹೇಳಿ ಕೇಳಿ ಅವ್ರು ಈರಾಜ್ಯದ ಆರುಕೋಟಿ ಕನ್ನಡಿಗರ ಮುಖ್ಯಮಂತ್ರಿ”.  ಆದ್ರ ನಂದು ಒಂದ ಕಳಕಳಿ ಏನಪಾ... “ಈನೀತಿ ಸಂಹಿತೆ , ಕಾನೂನು, ಅದು.. ಇದೋ ಅಂತ ಜನರು ಕಷ್ಟಾ ಅನುಭವಿಸಬಾರ್ದು.  ಹೆಂಗಿದ್ರೂ ಚುನಾವಣೆ ಮುಗಿದೈತಿ...ಜನ್ರೂ ಅದೇನೂ ತೀರ್ಪುಕೊಡ್ತಾರ ಕೊಡ್ಲಿ. ಅದು ಅಮಾಕ..! ಆದ್ರ ಈಗ ಅರ್ಜಂಟಾಗಿ “ ಜನ್ರಿಗೆ ಕುಡ್ಯಾಕ ನೀರು ಬೇಕು, ಅದಕ ನೀರು ಇಲ್ದಕಡಿಗೆ ಬೋರವೆಲ್ ಕೊರಸಾಕ್ ಚುನಾವಣಾ ಆಯೋಗದವ್ರಿಗೆ ಪತ್ರ ಬರ್ದು ಪರವಾನಗಿ ಪಡ್ದು ಅರ್ಜಂಟಾಗಿ ಕೋಳವಿಬಾವಿ ಕೊರ್ಸಿ ಜನ್ರಿಗೆ ನೀರು ಕೊಡ್ಸಬೇಕು. ಇದೇನೂ ದೊಡ್ಡ ಮಹಾ ಕೆಲಸಾ ಅಲ್ಲ..! ಮುಖ್ಯಮಂತ್ರಿ ಕೈಕೆಳಗ ಹತ್ತಾರು ಅಧಿಕಾರಿಗಳು ಇರ್ತಾರ. ಅವರನ್ ಕರ್ದು.... ಇಂತಾ ಕಡೆ ನೀರಿಲ್ಲ....ಅಲ್ಲೆ ಬೋರವೆಲ್ ಕೊರಸ್ರಿ.... ಇಂತಾ ಕಡೆ ಮಳಿಇಂದ ಹಾನಿ ಆಗೈತಿ ಅವ್ರಿಗೆ ಪರಿಹಾರ ಕೊಡ್ರಿ ಅಂತ ಹೇಳಬಹುದಲ್ಲ”.....?

ಅದಕ್ಕೇನ್ರೀ ಅವರು ಹೇಳೇ ಹೇಳಿರ್ತಾರ.... “ಸರ್ಕಾರದ ಕೆಲಸ ದೇವರ ಕೆಲಸ ಅನ್ನೋಮಾತಿನಹಂಗ್ ನಮ್ಮ ಅಧಿಕಾರಿಗಳು ಜನ್ರ ಕೆಲಸ ದೇವರ ಕೆಲಸ ಅಂತ ಸ್ವಲ್ಪ ತಡಾಮಾಡಿ ಮಾಡ್ತಾರ...!  ನಾನು ಹೇಳ್ತನಿ ಬಿಡ್ರಿ ಪಾಟೀಲ್ರ”.....!

ಅಷ್ಟಮಾಡಿ ಪುಣ್ಯಾಕಟ್ಟಿಕೋ ಮಾರಾಯ...! “ಒಟ್ಟಿನ್ಯಾಗ ನಮ್ಮ ಜನ್ರ ಸಮಸ್ಯೆ ಬಗಿಹರದ್ರ ನನಗ ಅಷ್ಟ ಸಾಕು... ಅಂದಂಗ್ ಜಾರಕಿಹೊಳಿ-ಡಿಕೆಶಿ ಜಗಳ ಎಲ್ಲಿಗೆ ಬಂತೋ”...?

ಎಲ್ಲಿಗೆ ಬಂದಿಲ್ರೀ..ಅದು ಇಂತಲ್ಲೆ ನಿಂತತೀ..... ಇತ್ಲಿತ್ತಾಗ ರಾಜ್ಯದಾಗ “ಎಲ್ಲೆ ಉಪ ಚುನಾವಣೆ ನಡದ್ರೂ ಅಲ್ಲೆ ಡಿಕೆಶಿ ಹಾಜರಾಗಿ ಸೆಡ್ಡು ಹೊಡ್ದು ಎದುರಾಳಿಗಳಿಗೆ ನೀರು ಕುಡ್ಸಿ ಕೈ ಅಭ್ಯರ್ಥಿನ ಗೆಲ್ಲಿಸಿಕೊಂಡು ಬರ್ತಿದ್ರು.... ಆದ್ರ ಕುಂದಗೋಳ ಉಪಚುನಾವಣೆಗೆ ಡಿಕೆಶಿಗಿಂತ ನಾನು ಎದರಾಗೂ ಕಮ್ಮಿ ಇಲ್ಲಾ ಅಂತ ಬಳಗಾವಿ ಸತೀಶ ಸಾವುಕಾರ್ರು..  ಕುಂದಗೋಳ ಭೇಟ್ಟಿಕೊಟ್ಟು ಉತ್ತರ ಕರ್ನಾಟಕದಾಗ ಡಿಕೆಶಿ ಹವಾ ನಡಿದಂಗ ನೋಡಿಕೊಂಡ್ರು. ಇದು ಡಿಕೆಶಿ ಕಣ್ಣು ಕೆಂಪಗ ಆಗಾಕ ಕಾರಣ ಆಗೇತಿ.  ಇದ್ರಾಗ ಸಿದ್ರಾಮಣ್ಣನ ಮೈಂಡು ಕೆಲಸಾಮಾಡಿದ್ರು ಮಾಡಿರಬಹುದು...! ಹೇಳಿ -ಕೇಳಿ ಬೆಳಗಾವಿ ಸಾಹುಕಾರ್ರು ಸಿದ್ರಾಮಣ್ಣನ ಬೆಂಬಲಿಗರು, ಇದ್ರಾಗ ಸಿದ್ದಾಮಣ್ಣ ಸಾವಕಾರ ಮೂಲಕ ಡಿಕೆಶಿಗೆ ಡಿಚ್ಚಿಕೊಡಸ್ಯಾರ ಅನ್ನೋ ಮಾತು ಐತಿ”!.

ರಾಜಕಾರಣದಾಗ ಇವೆಲ್ಲ ಇದ್ದದ್ದ ಬೀಡು ಅಂದಂಗ “ಚಿಂಚೋಳಿಗೆ ಸಾವುಕಾರು, ಡಿಕೆಶಿ ಯಾಕಹೋಗಿಲ್ಲ...? ಅಲ್ಲೆ ಇವ್ರ ಆಟ ನಡೆಂಗಿಲ್ಲನ”..?

ಹಂಗ ಇವ್ರು ಕಂಡಕಂಡಲ್ಲೆ ಹೋಗೋದಿಲ್ರೀ...ಅಲ್ಲೆ ಹೆಂಗ್ಯ ಅದಾರ ಅಂತೀರಿ.. ಖರ್ಗೆ ಅಪ್ಪಾ ಮಕ್ಕಳು....! “ಅಲ್ಲೆ ಡಿಕೆಶಿ-ಸಾವುಕಾರದ್ದು ಆಟ ನಡೆಯುದಿಲ್ಲ. ಅಲ್ಲೇ ಏನಿದ್ರು ಅಪ್ಪಾ-ಮಕ್ಕಳು ಹೇಳಿದಂಗ್ಯ ನಡೆಯೋದು!. ಹಿಂಗಾಗಿ ಈಎರಡು ಪಾರ್ಟಿಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಕುಂದಗೋಳಾನ ವೇದ್ಕಿಮಾಡಿಕೊಂಡಾವು ನೋಡ್ರೀ”....

ಆತು ಬಿಡೋ ಮಾರಾಯ, ಈರಾಜಕೀಯದವ್ರ ಸುದ್ದಿ ಇದ್ದದ್ದ ಆದ್ರ ನೀಏನೋ ಅನ್ನು “ನಮ್ಮ ಮಾಸ್ಟರ್ ಹಿರಣ್ಯಯ್ಯ ಇಷ್ಟಬೇಗ ಸಾಯಬಾರದಿತ್ತು”.

“ಸಾವು ಯಾರನ್ನ ಬಿಟೈತಿ ಹೇಳ್ರೀ?. ಎಲ್ಲಾರು ಒಂದದಿನ್ ಹೋಗಾಕಬೇಕು, ಆದ್ರ ಪುಣ್ಯಾತ್ಮ ಹಿರಣ್ಣಯ್ಯ ತಮ್ಮ ನಾಟಕದೊಳ್ಗ ಈಪುಡಾರಿಗಳಿಗೆ ಮಾತಿನ ಚಾಟಿ ಬೀಸಿ ಬರೋಬ್ಬರಿ ಬರಿ ಹಾಕತಿದ್ದ್ರು. ಅವರಷ್ಟು ಇದ್ದದ್ದ ಇದ್ದಂಗ ಹೇಳಿ ರಂಗಮಂಚದಮ್ಯಾಲ ಈರಾಜಕಾರಣಿಗಳ ಅಂಗಿ-ಚೊಣ್ಣ ಹರ್ದು ಇವರ ಆಟಾನೆಲ್ಲ ಬಟಾಬಯಲಮಾಡ್ತಿದ್ದ ಈ ಮಾರಾಯ ಹೋಗಿದ್ದು ನಮ್ಮ ರಾಜ್ಯದ ಸಾಂಸ್ಕ್ರತಿಕ ಲೋಕಕ್ಕ ದೊಡ್ಡ ಹಾನಿ”.

“ಹೌದೋ ತಮ್ಮ ಹೌದು ಹಿರಣ್ಣಯ್ಯನಂತವರು ಕೋಟಿಗೊಬ್ಬರು, ಮತ್ತೊಬ್ಬ ಹಿರಣ್ಣಯ್ಯನ ಸೃಷ್ಟಿಮಾಡಾಕ ಆಕೈತನು..! ಸಾಧ್ಯಾನ ಇಲ್ಲ. ಬಾ ನಾವು ಹಿರಣ್ಣಯ್ಯನವರಿಗೆ ಮಾಲಿ ಹಾಕಿ ಶೃದ್ಧಾಂಜಲಿ ಸಲ್ಲಿಸಿ ಬರೋಣ ನಡಿ ಎನ್ನುತ್ತಾ ಇಬ್ಬರು ಮಾತಿಗೆ ವಿರಾಮ ನೀಡಿದರು”.