ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಲೋಪವಾಗದಂತೆ ಕಾರ್ಯನಿರ್ವಹಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಲೋಪವಾಗದಂತೆ ಕಾರ್ಯನಿರ್ವಹಿಸಲು  ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

ಬೆಂಗಳೂರು:  ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ವಿಡಿಯೋ ಕಾನ್ಪರೆನ್ಸ್‌ ನಡೆಸಿದ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರು ಕುಡಿಯುವ ನೀರು ಪೂರೈಕೆ, ಜಾನುವಾರುಗಳ ಮೇವು, ಜನರಿಗೆ ಉದ್ಯೋಗ ನೀಡುವುದೂ ಸೇರಿದಂತೆ ಬರಪರಿಸ್ಥಿತಿ ನಿರ್ವಹಣೆಯಲ್ಲಿ ಲೋಪವಾಗದಂತೆ ಆಯಾ ಜಿಲ್ಲಾಡಳಿತ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ನಡೆಸಿದ ವಿಡಿಯೋ ಕಾನ್ಪರೆನ್ಸ್‌ನಲ್ಲಿ 'ಬರದ ಅಸಮರ್ಪಕ ನಿರ್ವಹಣೆ ಬಗ್ಗೆ ಜಿಲ್ಲೆಗಳಿಂದ ದೂರು ಬಂದರೆ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳೆ ಹೊಣೆ'  ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಬರ ನಿರ್ವಹಣೆಗೆ ಹಣದ ಕೊರತೆ ಇದ್ದರೆ ಕೂಡಲೇ ಮನವಿ ಸಲ್ಲಿಸಬಹುದು, ಬರ ಪರಿಸ್ಥಿತಿ ಎದುರಿಸಲು ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

'ಯಾವುದೇ ಕಾರಣಕ್ಕೂ ಬರ ನಿರ್ವಹಣೆಯಲ್ಲಿ ಹಿಂದೆ ಬೀಳಬಾರದು, ಜಾನುವಾರಗಳಿಗೆ ಕುಡಿಯುವ ನೀರು ಪೂರೈಕೆ ಮೊದಲ ಅಧ್ಯತೆ. ನೀರು ಲಭ್ಯವಿಲ್ಲದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಸಬೇಕು, ಟ್ಯಾಂಕರ್‌ಗಳ ಬಿಲ್ಲುಗಳ ಪಾವತಿ  ಬಾಕಿ ಉಳಿಸಿಕೊಳ್ಳಬಾರದು, ಹಾಗೆಯೇ ದುರ್ಬಳಕೆಯೂ ಆಗಬಾರದು' ಎಂದು ಎಚ್ಚರಿಕೆ ನೀಡಿದರು..

ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಾಗಲಕೋಟೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜಾನುವಾರುಗಳ ಮೇವಿಗೆ ತೊಂದರೆ ಇರುವುದು ಕಂಡು ಬಂದಿದ್ದು ಕೂಡಲೇ ಆಯಾ ಜಿಲ್ಲಾಡಳಿತ ಅಗತ್ಯವಿರುವೆಡೆ ಗೋಶಾಲೆಗಳನ್ನು ತೆರೆಯಬೇಕು. ಹಾಗೆಯೇ ಮೇವು ಬ್ಯಾಂಕುಗಳನ್ನು ತೆರೆದು ಜಾನುವಾರುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕುಮಾರಸ್ವಾಮಿ ಸೂಚಿಸಿದರು.