ಬಾಲ್ಯದ ಆಟ, ಆ ಹುಡುಗಾಟ..

ಬಾಲ್ಯದ ಆಟ, ಆ ಹುಡುಗಾಟ..

ಸೆಕೆಂಡ್ ಪಿಯುಸಿ ಧಾರಾವಾಡದ ಪ್ರತಿಷ್ಠಿತ ಕಾಲೇಜಿನಲ್ಲಿ ಮುಗಸಿ, ಮುಂದೆ ಪದವಿಗಾಗಿ ಹಳ್ಳಿ ಸೇರಿದ ಏಕೈಕ ಯುವ ಶಕ್ತಿ ನಾನೊಬ್ಬನೇನಾ? ಈಗಲೂ ನಗು, ಆಶ್ಚರ್ಯ ನನಗೆ! 

ಹೌದು, ಅಪ್ಪನ ನಿವೃತ್ತಿ ನಂತರ ಗ್ರಾಮೀಣ ಕಾಲೇಜಿನಲ್ಲಿ ಪದವಿ ವ್ಯಾಸಾಂಗಕ್ಕೆ ಸೇರಿದೆ, ನನ್ನ ಮೊದಲಿನ ಅಂದರೆ ಧಾರವಾಡದ ಕಾಲೇಜಿನ ಒಂದು ತರಗತಿಯ ಕೊಠಡಿಯಷ್ಟು ಆ ಇಡಿ ಗ್ರಾಮೀಣ ಕಾಲೇಜಿದೆ ಅನಿಸಿತು, ಇಷ್ಟು ದೊಡ್ಡ ಈ ಶಹರದ ಕಾಲೇಜಿಗೆ ಹೋಗುವಾಗಲೂ ಆಗದ ಭಯ, ಈ ರೂರಲ್ ಕಾಲೇಜಿಗೆ ಹೋಗುವ ಮೊದಲ ದಿನವೇ ಎದೆ ಹೊಕ್ಕಿತು! ಹಾಗೂ ಹೀಗೂ ಏನೋ ಒಂದಿಷ್ಟು ಕ್ಲಾಸು, ಒಂದಿಷ್ಟು ಹೊಸ ಗೆಳೆಯರು,  ಅದರಲ್ಲೂ ಹೊಲ-ತೋಟ ಹೀಗೆ ಕೃಷಿಕ  ಮತ್ತು ಕೂಲಿ ಗೆಳೆಯರ  ಸೇರಿಕೊಂಡು ಹೊಸ ಮತ್ತು ನಾನು ಅರಿಯದ ಬದುಕಿನ ಜೊತೆ ಒಂದಿಷ್ಟು ದಿನ ಉರುಳಿದವು.

ಈಗ ಮುಖ್ಯವಾಗಿ ಇಲ್ಲಿ ನನಗೆ ಕನ್ನಡ ಭಾಷೆ ತರಗತಿ ತುಂಬ ಇಷ್ಟವಾಯ್ತು, ಅದು ನನ್ನ ಶಹರದ ಕಾಲೇಜಿನಿಗಿಂತ ಭೇಷ್ ಅನ್ನುವಷ್ಟು. ಇಲ್ಲಿ ನಾವು ತರಲೆ ಮಾಡಿದ್ದೇನೂ ಇಲ್ಲ. ತರಲೆಗಾಗಿನೇ ಇದ್ದ ತರಗತಿ ಅಂದರೆ ಅದು ಇತಿಹಾಸ ತರಗತಿ, ನಮ್ಮ ಇತಿಹಾಸ ಮೇಷ್ಟ್ರ ಪಾಠ ಅದು ಪರೀಕ್ಷೆಗೆ ಎಷ್ಟು ಉಪಯುಕ್ತವಾಯಿತು? ಅನ್ನುವದಕ್ಕಿಂತ ನಮಗೆ ಇತಿಹಾಸ ಮರೆಯದಂತೆ ಉಳಿಸಿದ ಪಾಠ. ಮೇಷ್ಟ್ರು ನಮ್ಮ ಜೊತೆ ಗೆಳೆಯರೇ ಆಗಿದ್ದರು. ಪಾಠದ ಕೊನೆಯ 10 ನಿಮಿಷ ಪಾಠದ ಕುರಿತಾಗಿ ಪ್ರಶ್ನೆ ಮತ್ತು ಸಂವಾದ.

ಒಂದೇ ಒಂದು ದಿನಕ್ಕೂ ಇತಿಹಾಸದ ಮೇಷ್ಟ್ರನ್ನ ಅಡ್ಡ-ಅಸಮಂಜಸ ಪ್ರಶ್ನೆ ಕೇಳಿ ಹೈರಾನ್ ಮಾಡದೆ ಬಿಟ್ಟಿರಲಿಲ್ಲ. ನಾನು ಮಲ್ಲ ಮತ್ತು ಸೂರಿ ಇತಿಹಾಸದ ಮೇಷ್ಟ್ರ ಕೆಂಗಣ್ಣಿಗೆ ಬಲು ಕಾರಣರಾದವರು! ಅದೊಂದು ದಿನ ಬಾದಾಮಿ ಚಾಲುಕ್ಯರ ಪಾಠ, ಇಮ್ಮಡಿ ಪುಲಕೇಶಿ ಹರ್ಷವರ್ಧನನ್ನ ನರ್ಮದಾ ನದಿ ದಂಡೆ ಮೇಲೆ ನಡೆದ ಯುದ್ಧದಲ್ಲಿ ಸೋಲಿಸಿದ ಪಾಠ. ಮೇಷ್ಟ್ರು ಪಾಠ ಮಾಡುತ್ತ ತುಂಬ ತಲ್ಲೀನರಾಗಿ, ಅಕ್ಷರಶಃ ಯುದ್ಧೋತ್ಸಾಹದಲ್ಲಿ ಇಮ್ಮಡಿ ಪುಲಕೇಶಿ ಮತ್ತು  ಹರ್ಷವರ್ಧನನ ನಡವೆ ಆದ ಘೋರ ಯುದ್ಧದಲ್ಲಿ ಹರ್ಷವರ್ಧನ ಸೋತು ಓಡಿ ಹೋಗುತ್ತಾನೆ, ಜಯಶಾಲಿಯಾದ ಚಾಲುಕ್ಯ ಸೈನ್ಯ ಯುದ್ಧ ಗೆದ್ದಾನಂತರದಲ್ಲಿ ಪುಲಕೇಶಿಗೆ ದಕ್ಷಿಣಪಥೇಶ್ವರ ಅಂತ ಬಿರುದು ಕೊಟ್ಟು ಸಂಭ್ರಮಿಸುತ್ತಾರೆ. ಮೇಷ್ಟ್ರು ಫುಲ್ ಕಾನ್ಫಿಡೆನ್ಸ್ ಮೈಮೇಲೆ ಬಿಟ್ಟುಕೊಂಡು, ಜೋರು ಉಸಿರೆಳೆದು 12 ವರ್ಷ ಇದಾ ಪಾಠಾ ಮಾಡೇನಿ, ಅದೇನ್ ಕೇಳ್ತೀರಿ ಕೇಳ್ರೆಲೆ ಮಕ್ಕಳಾ ಅಂದರು.

ನಮಗೆ ಖಂಡಿತವಾಗಿಯೂ ಪ್ರಶ್ನೆಗಳಿರಲಿಲ್ಲ, ಆದರೆ ಅವರ ಕಾನ್ಫಿಡೆನ್ಸ್ ಕೆಣಕುವ ಜರೂರತ್ತು ಆ ಕ್ಷಣ ಭಯಂಕರ ಹುಟ್ಟಿ, ಕಾಡಿತು! ಪಕ್ಕದ ಸೂರಿಯ ಕಾಲು ತುಳಿದೆ, ಎರಡು ಸೆಕೆಂಡ್ ಗುಸುಗುಸು, ಪಿಸುಪಿಸು ನಮ್ಮ ನಡುವೆ ಮಾತು. ಅಷ್ಟೇ ಸೂರಿ ಕೈಯೆತ್ತಿದ. ಮೇಷ್ಟ್ರ ಪಿತ್ತ ನೆತ್ತಿಗೇರಿತು..

ಪ್ರಶ್ನೆ ಐತ್ಯಾ? ಇಂಥಾ ಪಾಠದಾಗ? ಇಷ್ಟು ಚೆಂದ ಪಾಠದಾಗ? ಅದ್ಯಾವ ಮೂಲ್ಯಾಗ? ಅದೇನ್ ಪ್ರಶ್ನೆ ಹುಟ್ತು ಕೇಳಲೆ ಸುರೇಶಾ, ಅಂತ ಚೂರು ಗರಮ್ ಆಗಿನೆ ಕೇಳಿದರು. ಸೂರಿಯ ಕಾಲು ನಡುಗುತ್ತಿದ್ದವಾದರೂ ಧೈರ್ಯ ಮಾಡಿ ನನ್ನ ಕಡೆ ನೋಡಿದವನೆ, ಫುಲ್ ಸಿರಿಯಸ್ಸಾಗಿ 

ಸೂರಿ- ಸಾ...

ಸಾ- ಹೂಂ ಕೇಳಲೇ..

ಸೂರಿ- ಯುದ್ಧ ನರ್ಮದಾ ನದಿ ದಂಡಿಮ್ಯಾಗ ಆತು ಹೌದ್ರ್ಯಾ?

ಸಾ- ಹೂಂ ಅದನ್ನಾ ಒದರೇನಿ ಇಷ್ಟೊತ್ತು.

ಸೂರಿ- ಅದು ಖರೇ ಹರ್ಷವರ್ಧನ ಸೋತು ಓಡಿ ಹೋದ್ನ ಹೌದಲ್ರಿ..?

ಸಾ- ಹೂಂನಲೇ ಓಡಿ ಹ್ವಾದಾ..

ಸೂರಿ- ಹಂಗಾರ ಯುದ್ಧ ಅಕ್ಕಡಿ ದಂಡಿ ಮ್ಯಾಲ ನಡಿತೋ? ಏನ ಈಕ್ಕಡಿ ದಂಡಿಮ್ಯಾಲ ನಡಿತೋ?

ಸಾ- ಆಂ.... ಇದೆಂಥಾ ಪ್ರಶ್ನೆ? ಏನಲೆ ನೀ ಕೇಳೊದು?

ಅಂಕಿ ಅಟಾಪು, ಸೊನ್ನಿ ಸೂಕ್ಷ್ಮ ಏನಾರೈತೇನು ನಿನಗ?

ಇಡೀ ಕ್ಲಾಸು ಗೊಳ್ಳಂತ ನಗುವಾಗ, ನಗು ಮುರಿದು ಸೂರಿ ಮುಂದುವರೆದು..

ಸೂರಿ- ಹಂಗಲ್ಸಾ ಇತ್ತಾಗ ನಡದಿದ್ರ ಓಡಿ ಹೋಗವನ ಹಿಡ್ದು ಸೆರಿಯಾಳು ಮಾಡಕೋಬಹುದಿತ್ತು ಅಂತ ಕೇಳಿದೆ ಅಂದ.

ಸಾ- ಹೇಳ್ತೇನಿ ಸುರೇಶ ಹೇಳ್ತಿನಿ, ನನ್ನ 12 ವರ್ಷದ ಪಾಠದಾಗ, ಯಾವನ್ನೂ ಇಲ್ಲಿತಂಕ ಕೇಳದಂಥ ಪ್ರಶ್ನೆ ಇದು, ನನ್ನ ಕಲ್ಪನಾದಾಗೂ ಇದ್ದಿಲ್ಲ, ಅನ್ನುತ್ತಿರುವಾಗಲೆ ಗಂಟೆ ಬಾರಿಸಿತು.. ಅವತ್ತಿನ ತರಗತಿ ಮುಗಿಯಿತು, ಮತ್ತ್ಯಾವ ತರಗತಿಯಲ್ಲಿಯೂ ಉತ್ತರ ಬರಲಿಲ್ಲ, ನಾವೂ ಮತ್ತೆ ಕೇಳಲಿಲ್ಲ.

ಮೂರು ವರ್ಷ ಮುಗೀತು. ನಮ್ಮನ್ನ ಬೀಳ್ಕೊಡುವ ಕಾರ್ಯಕ್ರಮ. ಇತಿಹಾಸದ ಮೇಷ್ಟ್ರು ವೇದಿಕೆಯಲ್ಲಿ, ಭರಪೂರ ಮಾತು... ಇದು ನಾನು ನೆನಪಿಡುವಂತ ಅದ್ಭುತ ಬ್ಯಾಚ್, ಇಲ್ಲೆದಾರಲ್ಲ ಈ ಮೂರು ಮಂದಿ ಇವರ ಸಲುವಾಗಿ ಮೂರು ಬುಕ್ಕಾ ಹೆಚ್ಚು ಓದಿಕೊಂಡು ಪಾಠ ಮಾಡೇನಿ, ಅವರು ಪ್ರಶ್ನೇ ಕೇಳಿದಾಗ ಸಿಟ್ಟು ಬರೋದು, ಒಬ್ಬೊಬ್ಬರನ್ನ ಒದಿಬೇಕು ಅನಸೂದು, ಅಂತಂಥ ಪ್ರಶ್ನೆ ಕೇಳತಿದ್ರು, ನಾಳಿಂದ ಇವರೆಲ್ಲ ಇಲ್ಲ ಅಂದ್ರ ದುಃಖ ಆಕ್ಕೇತಿ, ಏನೆಲ್ಲ ಪ್ರಶ್ನೆ ಕೇಳಿದರು ಅಂದವರೆ ಪುಲಕೇಶಿ ಹರ್ಷವರ್ಧನ ನದಿ ದಂಡೆ ನೆನಪು ಮಾಡಿದರು. ಸೂರಿಯ ಕಾಲು ತುಳಿದೆ, ಸೂರಿ ಎದ್ದವನೆ ಇವತ್ತರ ಉತ್ತರ ಹೇಳ್ರಿ ಅಂದ. ನಾನು ಹೇಳೂದಿಲ್ಲ ಅಂದರು ಮೇಷ್ಟ್ರು.

ಮೇಷ್ಟ್ರಿಗೆ ಉತ್ತರಗೊತ್ತಿರಲಿಲ್ವ? ಅಂದ ಹಾಗೆ ನಿಜ ಯಾವ ಕಡೆ ದಂಡೇ ಮೇಲೆ ಯುದ್ಧ ನಡದಿದ್ದು? ಈಗಲೂ ಅವರು ಸಿಕ್ಕರೆ ಕೇಳುವ ಮೊದಲಿನ ಉತ್ಸಾಹದಲ್ಲೇ ಇದೆ ಆ ಆಸೆ. 

ಈಗ್ಗೆ ತಿಂಗಳ ಹಿಂದೆ ಅವರು ತೀರಿದರಂತೆ ಈಗಷ್ಟೇ ಸೂರಿ ಫೋನ್ ಮಾಡಿ ಹೇಳಿದ. ಯಾಕೋ ಬಾದಾಮಿ ಚಾಲುಕ್ಯರ ಚಾಪ್ಟರ್ ಮುಗಿತ್ನೋಡಪಾ ಇಲ್ಲಿಗೆ ಅಂದಂಗಾಯ್ತು ಖುದ್ದು ಅವರೇ....
            

                                                                                                                                   ರಾಜಕುಮಾರ ಮಡಿವಾಳರ, ಧಾರವಾಡ.