ಮಾಮರವೆಲ್ಲೋ ಕೋಗಿಲೆಯೆಲ್ಲೋ...

ತೆಲುಗು, ತಮಿಳರ ಕೂಡ ಒಡನಾಡಿ ಬಂದಿದ್ದರಿಂದ ಚಿಕ್ಕಣ್ಣನ ಮಾತಿನ ಧಾಟಿಯೂ ಬದಲಾಗಿ ಬಿಟ್ಟಿತ್ತು. ಏನ್ರಾ, ಎಲ್ಲಿ ಪೊಯಟ್ರಾ ಹೀಗೆ ಎಲ್ಲದಕ್ಕೂ ರಾ ಹಚ್ಚಿ ಮಾತನಾಡುವ ಅವನ ಶೈಲಿ ಸ್ಥಳೀಕರೆದುರು ಅವನೇನೋ ಪರದೇಶಿ ಇರಬೇಕು ಎನ್ನುವಂತೆ ಮಾಡಿಬಿಡುತಿತ್ತು. ಹಿರಿಯರಿಗೆಲ್ಲ ಅವನ ಮಾತು ಒಗಟಾಗಿ ಕಂಡರೆ, ಕಿರಿಯರಿಗೆ ನಗೆಚಾಟಿಕೆ ಎನ್ನಿಸಿ ಅವರೂ ಇವನೊಂದಿಗೆ ಏನ್ರಾ, ಯಾಕ್ರಾ..ಎಂದೇ ಮಾತನಾಡತೊಡಗಿ ಅದೇ ಊರಲ್ಲಿ ಹವಾ ಆಗಿತ್ತು!

ಮಾಮರವೆಲ್ಲೋ ಕೋಗಿಲೆಯೆಲ್ಲೋ...

ಪೊಲೀಸರೇನೋ ಚಿಕ್ಕಣ್ಣನನ್ನು ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಶಾಮೀಲು ಮಾಡಿದ್ದರು. ಆದರೆ, ಅವರಿಗೆ ನ್ಯಾಯಾಲಯದಲ್ಲಿ ಚಿಕ್ಕಣ್ಣನನ್ನು ಅಪರಾಧಿ ಎಂದು ಪುರಾವೆ ಸಮೇತ ಸಾಬೀತು ಪಡಿಸಲಾಗಲಿಲ್ಲ. ಆದಾಗ್ಯೂ ಆರೇಳು ತಿಂಗಳಕಾಲ ಅವನಿಗೆ ಕಾರಾಗೃಹ ಶಿಕ್ಷೆಯಾಯಿತು. ಬಳ್ಳಾರಿ ಕಾರಾಗೃಹದಲ್ಲಿ ಅಂತಹ ಅಪರಾಧಿಗಳೊಂದಿಗೆ ಕಾಲ ಕಳೆಯಬೇಕಾಯಿತು. ಈ ಅಲ್ಪಾವಧಿಯಲ್ಲಿ ಅವನೂ ಬಹಳಷ್ಟು ಬದಲಾಗಿಬಿಟ್ಟಿದ್ದ. ತಮಿಳುನಾಡಿನ ವೇಲುದೊರೈ, ಆಂಧ್ರದ ಮಾಣಿಕ್ಯ ಎಂಬ ಸಂಗಾತಿಗಳಿಂದಾಗಿ ಇವನ ನಡೆನುಡಿಯಲ್ಲೂ ವಿಚಿತ್ರ ವ್ಯತ್ಯಾಸ ಕಂಡುಬಂದಿತ್ತು‌. ತಿರುಳಕನ್ನಡ ಸೀಮೆಯ ಇವನ ಕನ್ನಡದಲ್ಲಿ, ತೆಲುಗು, ತಮಿಳು ಶಬ್ಧಗಳು ಮಿಶ್ರಗೊಂಡು ಅದೊಂದು ವಿಚಿತ್ರ ಭಾಷೆಯೆ ಆಗಿ ಮಾರ್ಪಟ್ಟಿತು. 

ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ  ಚಿಕ್ಕಣ್ಣ ಬೇರೆಯೆ ಮನುಷ್ಯನಾಗಿದ್ದ. ಗಾಂಜಾವ್ಯಸನ ಮತ್ತಷ್ಟು ಹೆಚ್ಚಿತ್ತು. ಇದರ ಪರಿಣಾಮವೋ ಎಂಬಂತೆ, ನಿನ್ನೆಯ ಬಗ್ಗೆ  ಕೊರಗದ, ನಾಳೆಯ ಬಗ್ಗೆ ಚಿಂತಿಸದ ಒಂದು ಬಗೆಯ ಸಂತತನವೂ ಅವನನ್ನು ಆವರಿಸಿಕೊಂಡಿತ್ತು. ಚಿಲುಮೆಯನ್ನು ತುಟಿಯೊಳಗಿಟ್ಟು, ಒಂದು ಜೂರಿ ಎಳೆದು ಸೂರ್ಯ‌ನನ್ನೊಮ್ಮೆ ದಿಟ್ಟಿಸಿ ಹೊಗೆ ಬಿಟ್ಟನೆಂದರೆ ಸಾಕು..‌‌‌‌ಒಂದಿಷ್ಟು ನುಡಿಮುತ್ತುಗಳು ಅವನಿಂದ ತಂತಾನೆ ಉದುರುತಿದ್ದವು. ಅದರಲ್ಲಿ `ಗನ್ ಆಪ್ ದಿ ಸ್ಕೈ; ಸನ್...ಸನ್ ಆಪ್ ದಿ ಅರ್ಥ' ಎಂಬುದೊಂದು ಅವನ ವಿಚಿತ್ರ ನುಡಿಗಟ್ಟಾಗಿತ್ತು‌. ಅದರ ತಲೆಬುಡ ಅರ್ಥವಾಗದೇ ದಿಗ್ಭ್ರಾಂತರಾದ ಜನ `ಹೀಂಗಂದ್ರೇನೋ ಚಿಕ್ಕಣ್ಣ' ಎಂದು ಕೇಳಿದರೆ, ತನ್ನ ಚಿಲುಮೆಯನ್ನು ಅವರಿಗೆ ತೋರಿಸುತ್ತ ` ಆಕಾಶದ ಮದ್ದಿನ ಗುಂಡಿನಂಥ ಸೂರ್ಯ.‌ ಭೂಮಿಯ ಮಗ..ಹಾಗೇ ಈ ಚಿಲುಮೆ ಮತ್ತು ನಾನು' ಎಂದೇನೋ ಹೇಳುತಿದ್ದ.

ಆದರೆ ಅದು ಕೂಡ ಯಾರಿಗೂ ಅರ್ಥವಾಗುತ್ತಲೇ ಇರಲಿಲ್ಲ. ಅರ್ಥವಾಗಲಿಲ್ಲ ಎಂದು ಹೆಚ್ಚಿನ ವಿವರಣೆ ಕೇಳಬೇಕೆಂದರೆ ನಾವು ಅವನಿಗಿಂಥ ದಡ್ಡರು ಆದಂತಾಗುತ್ತಲ್ಲಪಾ ಎಂದುಕೊಂಡ ಅವರು ಮತ್ತೊಮ್ಮೆ ಅವನ ಸ್ಲೋಗನ್ನಿನ  ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ತೆಲುಗು, ತಮಿಳರ ಕೂಡ ಒಡನಾಡಿ ಬಂದಿದ್ದರಿಂದ ಚಿಕ್ಕಣ್ಣನ ಮಾತಿನ ಧಾಟಿಯೂ ಬದಲಾಗಿ ಬಿಟ್ಟಿತ್ತು. ಏನ್ರಾ, ಎಲ್ಲಿ ಪೊಯಟ್ರಾ ಹೀಗೆ ಎಲ್ಲದಕ್ಕೂ ರಾ ಹಚ್ಚಿ ಮಾತನಾಡುವ ಅವನ ಶೈಲಿ ಸ್ಥಳೀಕರೆದುರು ಅವನೇನೋ ಪರದೇಶಿ ಇರಬೇಕು ಎನ್ನುವಂತೆ ಮಾಡಿಬಿಡುತಿತ್ತು. ಹಿರಿಯರಿಗೆಲ್ಲ ಅವನ ಮಾತು ಒಗಟಾಗಿ ಕಂಡರೆ, ಕಿರಿಯರಿಗೆ ನಗೆಚಾಟಿಕೆ ಎನ್ನಿಸಿ ಅವರೂ ಇವನೊಂದಿಗೆ ಏನ್ರಾ, ಯಾಕ್ರಾ..ಎಂದೇ ಮಾತನಾಡತೊಡಗಿ ಅದೇ ಊರಲ್ಲಿ ಹವಾ ಆಗಿತ್ತು!

ಇಂತಪ್ಪ ಚಿಕ್ಕಣ್ಣ ಜೈಲಿನಿಂದ ಸೀದಾ ಊರಿಗೇನೂ ಬಂದಿರಲಿಲ್ಲ. ಕೆಲವು ದಿನ ಹರಿಹರದ ಪಾಲಿಫೈಬರ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲೇನೋ ಆಗಿ ಕಂಪನಿ ಕೆಲ ಕೆಲಸಗಾರರನ್ನು ಕೈಬಿಟ್ಟಿದ್ದರಿಂದ ಇವನೂ ಕೆಲಸ ಕಳೆದುಕೊಂಡ. ಮತ್ತೆ ಟೆಲಿಫೋನ್ ಇಲಾಖೆ ಸೇರಿದ. ಆಗ ಎಲ್ಲ ಕಡೆಯೂ ಟೆಲಿಫೋನ್ ಸಂಪರ್ಕ ಕಲ್ಪಿಸುವ ದಿ. ರಾಜೀವಗಾಂಧಿ ಹಾಗೂ ಸ್ಯಾಮ್ ಪಿತ್ರೋಡಾರ ಕನಸು ಕಾರ್ಯಗತಗೊಳ್ಳುತಿದ್ದ ದಿನಗಳವು. ಚಿಕ್ಕಣ್ಣ ಹೀಗೆ ದೂರಸಂಪರ್ಕ ಇಲಾಖೆ ಸೇರಿ ಹಳ್ಳಿ ಹಳ್ಳಿಗೆ ಕಂಬ ಹಾಕುವ, ತಂತಿ ಎಳೆವ ಮೂಲಕ ಜನರ ಸಂಪರ್ಕ ಸೇತುವಾಗಿ ಕೆಲಸ ಮಾಡಿದ. ಅದು ಪೂರ್ಣಾವಧಿ ಕೆಲಸವಾಗಿರಲಿಲ್ಲವಾದ್ದರಿಂದ ಚಿಕ್ಕಣ್ಣ ಮತ್ತೂ ನಿರುದ್ಯೋಗಿ‌ಯಾದ!

ಚಿಕ್ಕಣ್ಣ ಅಲೆಮಾರಿಯಾಗಿ ತಿರುಗುತ್ತಿರುವಾಗಲೇ ಸಾಬರ ಬಾಬಣ್ಣ ಕೂಡಿದ. ಬಾಬಣ್ಣನದು ರಾಣೇಬೆನ್ನೂರಿನಲ್ಲಿ ಒಂದು ಕಟ್ಟಿಗೆ ಅಡ್ಡೆ ಇತ್ತು. ಈಗೀಗ ಎಲ್ಲರ ಮನೆಯಲ್ಲೂ ಗ್ಯಾಸಿನ ಒಲೆಗಳೇ ಬಂದಿವೆ. ಆಗಿನ್ನೂ ಒಲೆ ಉರುವಲಿಗೆ ಕಟ್ಟಿಗೆಯೆ ಪ್ರಧಾನ ಇಂಧನದ ಸರಕಾಗಿತ್ತು. ನಗರ ಪ್ರದೇಶಗಳಲ್ಲಿ ಉರುವಲು ಕಟ್ಟಿಗೆಗೆ ಬೇಡಿಕೆಯೂ ಹೆಚ್ಚಿತ್ತು.ಬಾಬಣ್ಣ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಓಡಾಡಿ ರೈತರ ಹೊಲಗಳ ಬದುವಿನಲ್ಲಿ ಬೆಳೆದಿರುತಿದ್ದ ಜಾಲಿಮರಗಳನ್ನು ಖರೀದಿಸುತಿದ್ದ. ಅವುಗಳನ್ನು ಕಡಿದು ತುಂಡು ಹಾಕಿ ಅಡ್ಡೆಯಲ್ಲಿ ಮಾರುತಿದ್ದ. ಗಿಡಮರಗಳ ಖರೀದಿಗೆ ನಮ್ಮೂರಿಗೆ ಬರುತಿದ್ದ ಬಾಬಣ್ಣನಿಗೆ ತಮ್ಮ ಹಳ್ಳದ ದಂಡೆಯ ಹೊಲದ ಪೀಕಜಾಲಿ ಮರಗಳನ್ನು ಮಾರುತಿದ್ದ ಚಿಕ್ಕಣ್ಣ ಪರಿಚಿತನಾಗಿ ಸ್ನೇಹಿತನೂ ಆಗಿದ್ದ.

ಚಿಕ್ಕಣ್ಣನನ್ನು ಕಂಡವನೇ ಬೆರಗಾದ ಸಾಬರ ಬಾಬಣ್ಣ `ಏನ್ ಚಿಕ್ಕ, ಊರಲ್ಲಿ ನಿನ್ನ ಬಗ್ಗೆ ಏನೇನೋ ಕೇಳ್ದೆ. ಮತ್ತೆ ನಿನ್ನ ನೋಡ್ತೀನಿ ಅಂದ್ಕೊಂಡಿರಲಿಲ್ಲ..ಭಾಳ ಬ್ಯಾಸರ ಆಗಿತ್ತು...ಮತ್ತೀಗ ಎಲ್ಲಿಂದ ಬಂದೆ? ಏನ್ಕಥೆ? ಎಂದೆಲ್ಲ ವಿಚಾರಿಸಿದ. ಚಿಕ್ಕಣ್ಣ ತನ್ನ ವೃತ್ತಾಂತವನ್ನೆಲ್ಲ ತಣ್ಣಗೆ ವಿವರಿಸಿ, ತನಗೆ ತನ್ನವರೆ ಬೆನ್ನಿಗೆ ಚೂರಿ ಹಾಕಿದರು. ಅವರನ್ನ ನಾನು ಸುಮ್ಮನೆ ಬಿಡೋದಿಲ್ಲ' ಎಂದು ಹಲ್ಲು ಕಡಿದ.

ಬಾಬಣ್ಣ ಅವನಿಗೆ ಸಮಾಧಾನ ಹೇಳಿದ. `ಏನೋ ಆಗೋದು ಆಗಿ ಹೋಯ್ತು ಚಿಕ್ಕಾ.. ಹಳೇದನ್ನೆಲ್ಲ ಮರ್ತುಬಿಡು' ಎಂದ. ಚಿಕ್ಕಣ್ಣನ ಭಾಷೆ, ಹಾವಭಾವ ಎಲ್ಲ ಬದಲಾಗಿದ್ದರೂ ಅವನಲ್ಲಿನ ದುಡಿಯಬೇಕೆಂಬ ಉಮೇದು, ಮನುಷ್ಯ ಸಹಜ ಕರುಣೆ, ಮಗುತನ ಹಾಗೇ ಇರುವುದನ್ನು ಗಮನಿಸಿದ ಬಾಬಣ್ಣನಿಗೆ ಇವನಿಗೆ ಏನಾದರೂ ದಾರಿ ಮಾಡಿಕೊಡಬೇಕು ಅಂತೆನ್ನಿಸಿತು. 

`ಚಿಕ್ಕಾ, ಟೇಲಿಫೋನಿನ ಕೆಲಸಾನೂ ಹೋತು ಅಂತೀ. ಹಂಗಾದ್ರ ಈಗ ನೀ ಏನ್ ಮಾಡಬೇಕಂತ ವಿಚಾರ ಮಾಡೀ' ಅಂದ. ಅದಕ್ಕೆ ಚಿಕ್ಕಣ್ಣ, ತನ್ನದೇ ನುಡಿಗಟ್ಟಿನ ಭಾಷೆಯಲ್ಲಿ..ಚಿಲುಮೆಯನ್ನು ತೋರಿಸುತ್ತ....`ಇದೊ ಸ್ಕೈ ಆಫ್ ದಿ ಗನ್! ರನ್ ಆಪ್ ದಿ ಡನ್!' ಅಂದ. ಬಾಬಣ್ಣನಿಗೆ ಒಂದೂ ಅರ್ಥವಾಗದೆ `ಹಂಗಂದ್ರೇನೋ ಮಾರಾಯ..ಸ್ವಲ್ಪ ಬಿಡಿಸಿ ಹೇಳು' ಕೇಳಿದ. 

`ನೋಡು ಬಾಬು. ಆಕಾಶಕ್ಕ ಸೂರ್ಯ ಹೆಂಗ ಗನ್ನೋ ಹಂಗ ನನ್ನ ಕೈಯಾಗ ಈ ಗನ್(ಚಿಲುಮೆ)ಐತೀ. ಮತ್ಯಾಕ ಹೆದರಿಕೀ..ಓಡಬಲ್ಲನಿಗೆ ಅಸಾಧ್ಯ ಆದುದ್ಯಾವ್ದೂ ಇಲ್ಲ!' ಅಂದ. ಬಾಬಣ್ಣನಿಗೆ ಇದೆಲ್ಲ ಸವಾಲ್ ಜವಾಬು ಕವ್ವಾಲಿ ಕೇಳ್ದಂಗಾಗಿ ದಂಗಾಗಿ ನಿಂತ. `ಹೌದ ಮರಾಯ, ನೀ ಅನ್ನೋದೆಲ್ಲ ಸರಿಬಿಡು. ನಿನಗ ಕೆಲಸ ಇಲ್ಲಂದ್ರ ನಮ್ಮ ಅಡ್ಡಾದಾಗರ ಇರು ಮತ್ತ. ಅಲ್ಲೆ ನಿನಗ ಆದಷ್ಟು ಕಟ್ಟಿಗೆ ಕಡ್ಕೊಂಡು, ನಮ್ಮನ್ಯಾಗ ಊಟ ಮಾಡ್ಕೊಂಡು ಆರಾಮಾಗಿರು.` ಎಂದ. 

ಬಾಬಣ್ಣನ ಮಾತು ಕೇಳಿ ಚಿಕ್ಕಣ್ಣ ಕರಗಿ ಹೋದ. `ಮಾಮರವೆಲ್ಲೋ, ಕೋಗಿಲೆ ಎಲ್ಲೋ ಏನೀ ಸ್ನೇಹಾ ಸಂಬಂಧ'  ಹಾಡು ಎದೆಯೊಳಗೆ ಅನುರಣಿಸಿದಂಗಾತು. ಚಿಕ್ಕಣ್ಣ ಬಾಬಣ್ಣನ ಮಾತಿಗೆ ಮರು ಮಾತಾಡದೆ ಒಪ್ಪಿಕೊಂಡ. ಇಬ್ಬರೂ ಅಡ್ಡಾದತ್ತ ಹೆಜ್ಜೆ ಹಾಕಿದರು.