ಮುಖ್ಯಮಂತ್ರಿ ಪರಮಾಧಿಕಾರಕ್ಕೆ ಕಂಟಕ :  ಕರಾಳ ದಿನಗಳ ದ್ಯೋತಕ

ಮುಖ್ಯಮಂತ್ರಿ ಪರಮಾಧಿಕಾರಕ್ಕೆ ಕಂಟಕ :  ಕರಾಳ ದಿನಗಳ ದ್ಯೋತಕ

ಎಲ್ಲಾ ಕಡೆಯು ಒಬ್ಬಂಟಿಯಾಗಿ ಓಡಾಡುತ್ತಿರುವ ಬೂಸಿ ಯಡಿಯೂರಪ್ಪ ಶಾಸಕರಿಂದಲೇ ಇನ್ನು ಸಚಿವ ಸಂಪುಟವು ರಚಿಸದೇ ಪ್ರವಾಸ ಮಾಡುವುದರಲ್ಲೇ ಮುಳಗಿ ಹೋಗಿದ್ದಾರೆ. ಇತ್ತ ಬಿಜೆಪಿ ವರಿಷ್ಟರು ಸಹ ಈ ಕಡೆ ಕಣ್ಣಾಯಿಸದೇ ಸುಮ್ಮನೆ ಕೂತಿಯಿರುವುದು ಮುಂದಿನ ಕರಾಳ ಹಿಡಿತದ ಮುನ್ನೋಟವಾಗಿದೆಯೇ ಹೊರತು ಇನ್ನೇನಲ್ಲ ಎನ್ನುತ್ತಾರೆ ಜಿ.ಆರ್ ಸತ್ಯಲಿಂಗರಾಜು

ಸ್ವಾತಂತ್ರೋತ್ಸವದ ದ್ವಜಾರೋಹಣ ನಂತರವಾದರೂ ಸಂಪುಟ ರಚನೆಯ ಸ್ವಾತಂತ್ರ್ಯವನ್ನ ಮುಖ್ಯಮಂತ್ರಿ ಯಡಿಯೂರಪ್ಪಗೆ, ಅಮಿತ್ ಷಾ ದಯಪಾಲಿಸುವರೇ ಎಂಬ ನಿರೀಕ್ಷೆಗಳು  ಗರಿಗೆದರಿಕೊಂಡಿವೆ.

ಬಹಳಷ್ಟು ಕಡೆ ಗುಡಿಸಿಲು ಹೋಟೆಲ್‍ಗಳಲ್ಲಿ ಅಡುಗೆ ಭಟ್ಟ, ಸಪ್ಲೈಯರ್, ಟೇಬಲ್ ಒರೆಸುವುದು, ಪಾತ್ರೆ ತೊಳೆದು, ಕಸ ಗುಡಿಸುವುದು, ಕ್ಯಾಷ್ ತೆಗೆದುಕೊಳ್ಳುವುದು, ಬಾಗಿಲು ತೆಗೆವುದು, ಹಾಕುವುದು ಎಲ್ಲವನ್ನ ಏಕೈಕವಾಗಿ ನಿಭಾಯಿಸುವ ರೀತಿಯಲ್ಲೇ ಮುಖ್ಯಮಂತ್ರಿತ್ವವನ್ನ ಹದಿನೇಳು ದಿನಗಳಲ್ಲಿ ಏಕೈಕವಾಗಿಯೇ ನಿರ್ವಹಿಸುತ್ತಿರುವ ಯಡಿಯೂರಪ್ಪಗೆ, ಸಂಪುಟ ರಚನೆ ಮುಖ್ಯಮಂತ್ರಿಗಿರುವ ಪರಮಾಧಿಕಾರ ಎಂಬ ಸಂವಿಧಾನದ ಆಶಯವೇ ಬುಡಮೇಲಾಗಿರುವುದು ಅರಿವಾಗುತ್ತಲೇ ಇಲ್ಲ.

ಎಪ್ಪತ್ತೇಳು ವರ್ಷವಾಗಿದ್ದರೂ ಧಣಿವರಿಯದೆ ಸುತ್ತಾಡುತ್ತಿದ್ದಾರೆ ಎಂಬುದೇನೋ ನಿಜ, ಆದರೆ ಇಡೀ ಸಂಪುಟವೇ ಏಗಲಾಗದನ್ನ ಒಂಟಿಯಾಗಿಯೇ ದಡ ಸೇರಿಸುತ್ತೇನೆ ಎಂಬುದು ಕಾಟಾಚಾರದ್ದಾಗುತ್ತೆ. ಹೊಗಳುಭಟರು ಕೂಡ ಇವರೊಬ್ಬರೇ ಸಾಕು ಎಂಬರ್ಥದ ಮಾತೇಳುತ್ತಿರುವವರು ಸಂವಿಧಾನಾತ್ಮಕವಾಗಿರುವ ಸ್ವತಂತ್ರವನ್ನ ಯಡಿಯೂರಪ್ಪರಿಂದ ಅಪಹರಣ ಮಾಡಲಾಗಿದೆ ಎಂಬ ಬಗ್ಗೆ ಏಕೆ ಯೋಚಿಸುತ್ತಿಲ್ಲ ಎಂಬುದೇ ನಿಗೂಢ.

ಇವರೊಬ್ಬರೇ ಓಡಾಡುತ್ತಿರುವುದರ ಮಧ್ಯೆ ಉಪಮುಖ್ಯಮಂತ್ರಿ ಆಸೆಯಿರುವ ಶ್ರೀರಾಮುಲು ಕಬಡ್ಡಿ, ಮಂತ್ರಿಯಾಗುವ ಬಯಕೆಯಿರುವ ರೇಣುಕಾಚಾರ್ಯ ನೆಲದಲ್ಲೇ ತೆಪ್ಪಕ್ಕೆ ಹುಟ್ಟುಹಾಕುತ್ತಿದ್ದರೆ, ರಾಯಚೂರಿನ ಶಾಸಕ ಡಾ.ಶಿವರಾಜ ಕ್ರಿಕೆಟ್, ಮೂಡಿಗೆರೆ ಶಾಸಕ ಕುಮಾರಸ್ವಾಮಿ ಎಗರೆಗರಿ ಬೀಳುವುದು, ಸಂತ್ರಸ್ತರ ಮೇಲೆ ಸಿಎಂ ಎದುರೇ ಬೆತ್ತ ಪ್ರಹಾರ ಮಾಡುವಂಥ ಅಭಾಸಗಳೆಲ್ಲ ಸಂಧು ಹೋಗಿವೆ. ಅದೆಷ್ಟೆಷ್ಟೋ ಟೀಕೆ ಟಿಪ್ಪಣಿಗಳು, ಸಮರ್ಥನೆಗಳು ಪ್ರವಾಹದಂತೆಯೇ ನುಗ್ಗಿ ಹರಿದು ಹೋಗಿದೆ.

ಮಹಾರಾಷ್ಟ್ರದಲ್ಲಿ ಚುನಾವಣೆಗಳು ಹತ್ತಿರವಿರುವುದರ ಹಿನ್ನೆಲೆಯಲ್ಲೇ ಅದರ ಸೆರಗಿನಲ್ಲಿರುವ ಬೆಳಗಾಗಿ ಹಾಗು ಇತರೆ ಪ್ರದೇಶಗಳಿಗೆ ಬಂದು ಹೋದ ಸಚಿವೆ ನಿರ್ಮಲಾ ಸೀತಾರಾಂ ಮತ್ತು ಗೃಹ ಸಚಿವ ಅಮಿತ್ ಷಾಗೆ ರಾಜ್ಯದ ಇನ್ನುಳಿದ ಪ್ರದೇಶಗಳು ನೆನಪಿಗೇ ಬಂದಿಲ್ಲ. ಪರಿಹಾರ ಎಷ್ಟು ಎಂಬುದನ್ನ ಹೇಳಲು ದೆಹಲಿಗೆ ಬನ್ನಿ ಎಂದು ಹೋಗಿಬಿಟ್ಟಾಗಿದೆ.

ಇಷ್ಟು ವರ್ಷದ ಇತಿಹಾಸದಲ್ಲಿ ಸ್ವಾತಂತ್ರ್ಯೋತ್ಸವ ದಿನಗಳಲ್ಲಿ ಸಂಪುಟವೇ ಇಲ್ಲದಿದ್ದುದು ಇದೇ ಮೊದಲು, ಆಯಾ ಜಿಲ್ಲೆಗಳಲ್ಲಿಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡುತ್ತಿದ್ದ ಪದ್ದತಿಯನ್ನ ಈ ಸಲದ ವರ್ಷಧಾರೆ ಕೊಚ್ಚಿಕೊಂಡು ಹೋಗಿದೆ. ಪರಿಹಾರ ಕೇಳಲಾ, ಮಂತ್ರಿ ಮಂಡಲಕ್ಕೆ ಅನುಮತಿ ಕೊಡಿ ಎಂದು ಕೋರಲಾ ಎಂಬ ಸಂದಿಗ್ದತೆಯಲ್ಲಿ ಸಿಲುಕಿರುವ ಬಿಎಸ್‍ವೈಗೆ ಹದಿನಾರನೇ ತಾರೀಕು ಮಹತ್ವದ್ದಾಗಿದೆ.

ಸಹೋದ್ಯೋಗಿಗಳ ತಂಟೆ ತಕರಾರು ಇಲ್ಲದೆ ಎಲ್ಲಾ ನಿರ್ಣಯ ತಾನೇ ತೆಗೆದುಕೊಳ್ಳಬಹುದು ಎಂಬ ಅವಕಾಶ ಮುಖ್ಯಮಂತ್ರಿಗೆ ನುಂಗಲೂ ಆಗದೆ ಉಗುಳಲೂ ಆಗದಂಥ ಸ್ಥಿತಿ ತಂದಿಟ್ಟಿದೆ. ಮಂತ್ರಿಯಾಗುವ ಆಸೆಯಿಟ್ಟುಕೊಂಡವರು ಒಳಗೊಳಗೇ ಅಳುತ್ತಿರುವುದು ಪ್ರವಾಹದ ನೀರಿನಿಂದಾಗಿ ಗೋಚರಿಸುತ್ತಿಲ್ಲ. ಮೊದಲೇ ಬಂಡೆದ್ದ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕೊಟ್ಟರೆ ಮುಗೀತು ನಮ್ಮ ಕತೆ ಎಂದುಕೊಂಡಿದ್ದರೆ,  ವಿಶ್ವನಾಥ್‍ರಂಥ ಬಂಡಾಯಗಾರರೀಗ ರಾಜಾರೋಷವಾಗಿಯೇ ಬಿಜೆಪಿಯವರ ಜತೆ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು  ಆತಂಕಕ್ಕೀಡು ಮಾಡಿದೆ.

ತಮ್ಮ ದು:ಖ ದುಮ್ಮಾನ ಹೇಳಿಕೊಳ್ಳುವ ಎಂದರೆ, ಊರಿಗೆ ಉಳಿದವನೇ ಗೌಡ ಎಂಬಂತೆ ಮುಖ್ಯಮಂತ್ರಿ ಯಾರ ಕೈಗೂ ಸಿಗುತ್ತಿಲ್ಲ. ಪ್ರವಾಸಗಳಲ್ಲೇ ಮುಳುಗಿದ್ದಾರೆ. ಇದು ಆದ್ಯತೆಯ ವಿಚಾರವಾದರೂ ಉಳಿದ ಇಲಾಖೆಯ ಕೆಲಸ ಕಾರ್ಯಗಳು ಗ್ರಹಣ ಬಡಿದುಕೊಂಡು ನಿಂತಿವೆ. ಮೈತ್ರಿ ಸರ್ಕಾರದಲ್ಲಿ ಆಡಳಿತವೇ ಇರಲಿಲ್ಲ ಎಂಬ ಆರೋಪಗಳೇನಿತ್ತೊ, ಅದು ಈಗ ದುಪ್ಪಟ್ಟಾಗಿದೆ.

ಮುಖ್ಯಮಂತ್ರಿಯ ಪರಮಾಧಿಕಾರಕ್ಕೂ ಸಂಚಕಾರ ತಂದಿಟ್ಟ ಈ ಪರಿಯ ವರಿಷ್ಟ ಮಂಡಳಿ, ಇಂದಿರಾ ಎಂದರೆ ಇಂಡಿಯಾ ಎಂಬಂತಿದ್ದ ಕಾಲಘಟ್ಟದಲ್ಲೂ ಇರಲಿಲ್ಲ. ರಾಜ್ಯದಲ್ಲಿ ಅನಾಹುತಕಾರಿ ಸಂದರ್ಭಗಳಿದ್ದರೂ ಇನಿತಾದರೂ ಬಿಎಸ್‍ವೈ ಬಗ್ಗೆ ವರಿಷ್ಟರು ಕರುಣೆ ತೋರದಿರುವುದು ಮುಂದಿನ ದಿನಗಳ ಕರಾಳ ಹಿಡಿತದ ಮುನ್ನೋಟವಾಗಿದೆ ಹೊರತು ಬೇರೇನಲ್ಲ.