ಫೈನಲ್‌ಗೇರಿದ ಚೆನ್ನೈ ಸೂಪರ್ ಕಿಂಗ್ಸ್: ಈಡೇರಲಿಲ್ಲ ಡೆಲ್ಲಿಯ ಕನಸು

ಫೈನಲ್‌ಗೇರಿದ ಚೆನ್ನೈ ಸೂಪರ್ ಕಿಂಗ್ಸ್: ಈಡೇರಲಿಲ್ಲ ಡೆಲ್ಲಿಯ ಕನಸು

ವಿಶಾಖಪಟ್ಟಣ: ಐಪಿಎಲ್ ಕ್ವಾಲಿಫೈಯರ್ -2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೇರಿದೆ. ನಿನ್ನೆ ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ನಷ್ಟಕ್ಕೆ 147ರನ್ ಕಲೆಹಾಕಿತು. ಪೃಥ್ವಿ ಶಾ 5 ರನ್‌ಗಳಿಗೆ ವಿಕೆಟ್ ನೀಡಿದರೆ ಶಿಖರ್ ಧವನ್ 14 ಎಸೆತಗಳಲ್ಲಿ 18 ರನ್ ಬಾರಿಸಿ ಔಟ್ ಆದರು. ತಂಡದ ನಾಯಕ ಶ್ರೇಯಸ್ 13ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. ಕಾಲಿನ್ ಮನ್ರೋ 24 ಎಸೆತಗಳಲ್ಲಿ 27 ರನ್ ಗಳಿಸುವ ಮೂಲಕ ತಂಡಕ್ಕೆ ಸ್ವಲ್ಪ ಬಲ ತುಂಬಿದರೆ ರಿಷಭ್ ಪಂತ್ 25 ಎಸೆತಗಳಲ್ಲಿ 38 ರನ್ ಗಳಿಸಿ ತಂಡದ ರನ್ ಹೆಚ್ಚಿಸಲು ನೆರವಾದರು. ಇನ್ನುಳಿದ ಐವರು ಬ್ಯಾಟ್ಸ್‌ಮನ್‌ ಒಂದಂಕಿಯ ರನ್ ಗಳಿಸಿ ವಾಪಾಸಾದರು.

ಡೆಲ್ಲಿ ತಂಡವನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ಕಳೆದುಕೊಂಡು ತನ್ನ ಗುರಿ ಮುಟ್ಟಿತು. ಚೆನ್ನೈ ತಂಡದ ಪ್ಲೆಸಿ 39ನೇ ಎಸೆತಕ್ಕೆ ಅರ್ಧ ಶತಕ ಬಾರಿಸಿದರೆ, ಶೇನ್ ವಾಟ್ಸನ್ 32ನೇ ಎಸೆತಕ್ಕೆ ಅರ್ಧ ಶತಕ ಬಾರಿಸಿ ಪ್ರೇಕ್ಷಕರಲ್ಲಿ ಉತ್ಸಾಹ ಹೆಚ್ಚಿಸಿದರು. ಸುರೇಶ್ ರೈನಾ 13 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಅಂಬಟಿ ರಾಯ್ಡು 20 ಎಸೆತಗಳಲ್ಲಿ 20* ರನ್, ಧೋನಿ 9 ಎಸೆತಗಳಲ್ಲಿ 9 ರನ್ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಗೆಲುವಿಗೆ ಎರಡೇ ರನ್‌ ಬಾಕಿ ಇದ್ದಾಗ ಧೋನಿ ವಿಕೆಟ್‌ ಕಳೆದುಕೊಂಡರು.

ಫೈನಲ್ ಪಂದ್ಯವು ಭಾನುವಾರ ನಡೆಯಲಿದ್ದು, ಈಗಾಗಲೇ ಫೈನಲ್ ತಲುಪಿರುವ ಮುಂಬೈ ಇಂಡಿಯನ್ಸ್ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನಾಡಲಿದೆ.

ಕ್ವಾಲಿಫೈಯರ್ -2 ಪಂದ್ಯದ ಗೆಲುವಿನ ಮೂಲಕ ಐಪಿಎಲ್ ಸರಣಿಯಲ್ಲಿ 8ನೇ ಬಾರಿಗೆ ಫೈನಲ್‌ಗೇರಿದ ತಂಡ ಎನ್ನುವ ಖ್ಯಾತಿ ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಸಿಕ್ಕಿದೆ. ಕಳೆದ 10 ವರ್ಷಗಳ ಐಪಿಎಲ್‌ನಲ್ಲಿ ಚೆನ್ನೈ 8 ಬಾರಿ ಫೈನಲ್ ತಲುಪಿದೆ. ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ 2016 ಮತ್ತು 2017ರಲ್ಲಿ ಚೆನ್ನೈ ತಂಡವನ್ನು ಐಪಿಎಲ್‌ನಿಂದ ಬ್ಯಾನ್ ಮಾಡಲಾಗಿತ್ತು.