ಬಾಪೂ ಬದಲಾಗಿದೆ ಭಾರತ.....

ಬಾಪೂ ಬದಲಾಗಿದೆ ಭಾರತ.....

ಹಿಂದಿನಂತೆ ಇಲ್ಲ ಬಾಪೂ ನಮ್ಮ ಭಾರತ
ಬದಲಾಗಿದೆ.....

ರೈತರು ದೇಶದ ಬೆನ್ನೆಲುಬು ಎಂದು 
ಪ್ರತಿ ಭಾಷಣದಲ್ಲಿ ಹೇಳುವರೂ  ಬಾಪೂ 
ನೋಡಿಲ್ಲಿ ಹಸಿವಿನಲ್ಲಿ ನಮ್ಮ ರೈತರು ನರಳುತ್ತಿದ್ದಾರೆ,
ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ,
ಬದಲಾಗಿದೆ ಬಾಪೂ ನಮ್ಮ ಭಾರತ....

ನೋಡು ಬಾಪೂ ನಮ್ಮ  ಭಾರತ ಎಷ್ಟು ಮುಂದುವರೆದಿದೆ 
ಬೀದಿಯಲ್ಲಿ ನಮ್ಮವರು ಚಿಂದಿ ಆಯ್ದರೆ,
ಕಾರ್ಪೇಟ್ ಹಾಕಿಕೊಂಡು ಚಿಂದಿ ಆಯೋದನ್ನ ನೋಡಿದಿಯಾ ?
ಬದಲಾಗಿದೆ ಬಾಪೂ ನಮ್ಮ ಭಾರತ...

ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದ್ದೀರಿ
ಇಲ್ಲಿ ನಮ್ಮ ಶಿಕ್ಷಣ ಖಾಸಗೀಕರಣಗೊಳ್ಳುತ್ತಿದೆ,
ಶಿಕ್ಷಣ ಸಂಸ್ಥೆಗಳು ಮಾರಾಟವಾಗುತ್ತಿವೆ ಬಾಪೂ
ಬದಲಾಗಿದೆ ಬಾಪೂ ನಮ್ಮ ಭಾರತ...

ಮಧ್ಯರಾತ್ರಿ ಹೆಣ್ಣು ಒಬ್ಬಳು ನಡೆದುಕೊಂಡು ಬಂದರೆ
ನಮಗೆ ಸ್ವಾತಂತ್ರ ಎಂದಿದ್ದಿರೀ..
ಹಾಡಹಗಲೇ ಅತ್ಯಾಚಾರವೆಸಗಿ ಕ್ರೂರವಾಗಿ ಹಿಂಸಿಸಿ ಕೊಲ್ಲುತ್ತಿದ್ದಾರೆ, 
ವಿರೋಧಿಸಿ ಕ್ರಮತೆಗೆದುಕೊಳ್ಳುವ ಯಾವ ಗಟ್ಟಿ ಸರಕಾರ 
ನಮ್ಮಲ್ಲಿಲ್ಲ ಬಾಪೂ ಭಾರತ ಬದಲಾಗಿದೆ...
 
ದಿನದಿಂದ ದಿನಕ್ಕೆ ಜವಳಿ ಕಾರ್ಖಾನೆಗಳು ಮುಚ್ಚಿಹೋಗುತ್ತಿವೆ
ನಿರುದ್ಯೋಗ ಹೆಚ್ಚುತ್ತಿದೆ, ಅಭಿವೃದ್ಧಿ ಹೆಸರಿನಲ್ಲಿ 
ನಮ್ಮ ಭೂಮಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ 
ಬಾಪೂ ಭಾರತ ಬದಲಾಗಿದೆ....

ಬಾಪೂ ಗ್ರಾಮ ಸ್ವರಾಜ್ಯ ನಿಮ್ಮ ಕನಸಾಗಿತ್ತು,
ಗ್ರಾಮಗಳು ಉದ್ದಾರವಾಗದೇ ದೇಶ ಉದ್ದಾರವಾಗದು ಎಂದು ಹೇಳಿದ್ದಿರಿ..
ಈ ನವಉದಾರಿಕರಣ, ಜಾಗತೀಕರಣದಿಂದ
ಕೈಕಸಬು,ಗ್ರಾಮೀಣ ಉದ್ಯೋಗ, ಗುಡಿಕೈಗಾರಿಕೆ ಸದ್ದಿಲ್ಲದೆ ಮಾಯವಾಗುತ್ತಿದೆ
ಬಾಪೂ ಭಾರತ ಬದಲಾಗಿದೆ.....

ಮಹಿಳೆಯರಿಗೆ ಸಮಾನ ಅವಕಾಶಗಳು, ಸಮಾನ ಗೌರವ 
ನೀಡಿದರೇ ಸಂಸ್ಕೃತಿ ಉಳಿದುಕೊಳ್ಳುತ್ತದೆ ಎನ್ನುತ್ತೀರಿ,,,
ಬಾಪೂ ಹೆಣ್ಣು ಮುಟ್ಟಾದರೇ ಸಾಕು ಅವಳು ಮೈಲಿಗೆ ಎಂದು
ವಾದಿಸುವ ಬೆದ್ದ ಜೀವಿಗಳು ನಮ್ಮಲ್ಲಿದ್ದಾರೆ 
ಬಾಪೂ ಭಾರತ ಬದಲಾಗಿದೆ....

ನೀವು ಜನರ ಮಧ್ಯೆ ಸಾಮಾನ್ಯರಂತೆ ಬದುಕಿದ್ದೀರಿ
ನೋಡು ಬಾಪೂ ಹೊರದೇಶಗಳಲ್ಲಿ ಹೋಗಿ ಕ್ಯಾಮರಗಳಿಗೆ
ಫೋಸ್ ಕೊಡುತ್ತಾರೆ ಬಾಪೂ..
ನಮ್ಮ ನೆಲದಲ್ಲಿರುವ ನೆರಸಂತ್ರಸ್ಥರಿಗೆ 
ಭೇಟಿ ನೀಡಲೂ ಇಲ್ಲ, ಪರಿಹಾರವಂತೂ ಇಲ್ಲಿಯವರೆಗೂ ಬರಲಿಲ್ಲ
ಭಾರತ ಬದಲಾಗಿದೆ ಬಾಪೂ....

ದೇಶಭಕ್ತಿ ಹೆಸರಿನಲ್ಲಿ ಯುವಜನತೆಯನ್ನು 
ದಾರಿ ತಪ್ಪಿಸುತ್ತಿದ್ದಾರೆ ಬಾಪೂ...
ಬಣ್ಣಗಳಿಂದ ಭಾವನೆಗಳನ್ನು ಅಳಿಸಿಹಾಕುತ್ತಿದ್ದಾರೆ,
ತಿಲಕಗಳಿಂದ ಜನಗಳ ಮನಸ್ಸುಗಳನ್ನು ಒಡೆಯುತ್ತಿದ್ದಾರೆ 
ಬಾಪೂ ಭಾರತ ಬದಲಾಗಿದೆ ......

ಬಾಪೂ ನೋಡಿಲ್ಲಿ ನಾಯಿ, ಹಂದಿ,  ಆಕಳು,
ಎತ್ತು, ಕೋತಿ ಎಮ್ಮೆಗಳಿಗೆಲ್ಲ ಇಲ್ಲಿ ಜಾಗವಿದೆ, ಪ್ರೀತಿ ಇದೆ
ಮನುಜ ಜಾತಿಗಳಲ್ಲಿಯೇ ಬೇಧವಿದೆ, ಅಂತರವಿದೆ, 
ಬಾಪೂ ಭಾರತ ಬದಲಾಗಿದೆ....

ನಾವೆಲ್ಲರೂ ಸರ್ವಜನಾಂಗದ ಶಾಂತಿಯ ತೋಟವನ್ನು
ಉಳಿಸಿ ಬೆಳಸೋಣ ಬಾಪೂ ನಿಮ್ಮ ನೆನಪಿನೊಂದಿಗೆ..

                                                                                                     -ಲಕ್ಷ್ಮೀದೇವಿ ಹಿಟ್ನಾಳ