ಚಂದ್ರಯಾನ ಮತ್ತು ಭಂಗಿ ನೆಟ್ಟ ನೆನಪು..!

ಚಂದ್ರಯಾನ ಮತ್ತು ಭಂಗಿ ನೆಟ್ಟ ನೆನಪು..!

ಚಂದ್ರನ ಮೇಲೆ ಇಳಿಯಲು ಹೋದ 'ವಿಕ್ರಮ್'(ಚಂದ್ರಯಾನ- 2) ತಿರುಗಿ ಬಂದು ನಿರೀಕ್ಷಿಸಿದಂತೆ ಯಶಸ್ವಿಯಾಗಿ ನೆಲ ತಲುಪಲಿಲ್ಲ! ಇದರಿಂದಾಗಿ ಭಾರತೀಯರಾದ ನಮ್ಮ ವಿಶ್ವಗುರುವಿನ ಮಾನ ವಿಶ್ವಮಟ್ಟದಲ್ಲಿ ಜಖಂಗೊಂಡಿದೆ! "ನಾವು ಎದೆಗುಂದಬೇಕಿಲ್ಲ ನಮ್ಮ ಪ್ರಯತ್ನ ಮುಖ್ಯವೇ ಹೊರತು ಸೋಲು ಗೆಲುವಲ್ಲ.. ವಿಜ್ಞಾನದಲ್ಲಿ ಸೋಲೆಂಬುದು ಇಲ್ಲ.. ಪ್ರತಿ ಸೋಲೂ ಒಂದು ಹೊಸ ಕಲಿಕೆಗೆ ಮೆಟ್ಟಿಲು.." ಎಂದೆಲ್ಲಾ ನಮಗೆ ನಾವೇ ಸಾಂತ್ವನ ಹೇಳಿಕೊಳ್ಳುತಿದ್ದೇವೆ.  ಸೋಲಿನಿಂದ ಕಂಗೆಟ್ಟಿದ್ದ  ಇಸ್ರೋ ಅಧ್ಯಕ್ಷರನ್ನು ನಮ್ಮ ಪ್ರಧಾನಿಗಳು‌ ಮಾಧ್ಯಮದ ಮುಂದೆ ತಬ್ಬಿ ಸಾಂತ್ವನ ಹೇಳಿದ್ದು good gesture.(ಕ್ಯಾಮರ ಹಿಂದೆ ನಡೆದಿರಬಹುದಾದ ಘಟನಾವಳಿಗಳ ಬಗ್ಗೆ  ಸದ್ಯಕ್ಕೆ ಚರ್ಚೆ ಬೇಡ) ತೀರಾ ನಿರಾಶರಾಗಿದ್ದ ಇಸ್ರೋ ಅಧ್ಯಕ್ಷ  ಕೆ. ಸಿವನ್ ರಿಗೆ ಈ ಸಂದರ್ಭದಲ್ಲಿ ಇಂತಹದ್ದೊಂದು ಸಾಂತ್ವನ ನಿಜಕ್ಕೂ ಬೇಕಿತ್ತು. ಈ ಸೋಲನ್ನು ನಾವು ಕೂಡ ಕೇವಲ ಟೀಕೆಗಾಗಿ ಈ ಸನ್ನಿವೇಶದಲ್ಲಿ ಬಳಸಬಾರದು‌ ನಿಜ, ಆದರೆ ಇಂತಹದ್ದೊಂದು costly ಪ್ರಯತ್ನಕ್ಕೆ ನಾವು ಅರ್ಹರೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಚರ್ಚಿಸುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ.

ಕಳೆದ ವರ್ಷ ಇಸ್ರೋದಲ್ಲಿ ಡಾ.ಅಂಬೇಡ್ಕರ್ ಜನ್ಮದಿನಾಚರಣೆಯ ಕಾರ್ಯಕ್ರಮಕ್ಕೆ ಭಾಷಣಕಾರನಾಗಿ ಆಹ್ವಾನಿತನಾಗಿ ಹೋದಾಗ 'ಕೈಲಾಸವಡಿವು ಸಿವನ್' ಅರ್ಥಾತ್ ಕೆ.ಸಿವನ್ ಅವರ ಜತೆ, ನನ್ನ ಭಾಷಣಕ್ಕೆ ಮುಂಚೆ ಅವರ ಛೇಂಬರಿನಲ್ಲಿ ಒಂದಷ್ಟು ಮಾತನಾಡಿದ್ದೆ. ಚಂದ್ರಯಾನದ ಸಿದ್ದತೆಗಳ ಬಗ್ಗೆ ಅಭಿಮಾನದಿಂದ ಸೂಕ್ಷ್ಮವಾಗಿ ಹೇಳಿದ್ದರು. "ಯಾರೋ ಹೊರದೇಶದ ಅತಿಥಿಗಳು ಬಂದಿರುವ ಕಾರಣ ನಿಮ್ಮ ಭಾಷಣಕ್ಕೆ ಹತ್ತು ನಿಮಿಷ ಮಾತ್ರ ಇದ್ದು ಹೋಗುತ್ತೇನೆ, ಕ್ಷಮಿಸಿ.." ಎಂದವರು ನಲವತ್ತು ನಿಮಿಷ ಭಾಷಣ ಕೇಳುತ್ತಾ ಕೂತರು. ನಂತರ  ಒಂದು ಚಿನ್ನದ ಲೇಪನದ ಒಂದು ಸುಂದರವಾದ ಪುಟ್ಟ 'ಸ್ಪೇಸ್ ರಾಕೆಟ್'  ಕೊಡುಗೆಯನ್ನು ಕೊಟ್ಟು ಜತೆಯಲ್ಲಿ ಊಟ ಮಾಡಿ ಬೀಳ್ಕೊಟ್ಟರು.‌ ಇದನ್ನು ಬರೆಯುತ್ತಿರುವ ಈ ಸಂದರ್ಭದಲ್ಲಿ ಇವರು ಅಂದು ಕೊಟ್ಟ ಕೊಡುಗೆ ಕಣ್ಣಮುಂದಿದೆ, ಅದು ಇಂದಿನ ಸಂಧರ್ಭದಲ್ಲಿ ಕೆಲ ಹೊಳಹುಗಳನ್ನು ಹೊರಹೊಮ್ಮಿಸುತ್ತಿದೆ!? 

ಇದೇ ಸಿವನ್ ಎಂಬ ವಿಜ್ಞಾನಿ ಚಂದ್ರಯಾನದ ಯಶಸ್ಸಿಗಾಗಿ ಗುಡಿ ಗುಂಡಾರಗಳನ್ನು ಸುತ್ತಿದಾಗ ನಮ್ಮ 'ಪ್ರಗತಿಪರರು' ಟೀಕಿಸಿದರು, ಆಗಲೂ ನಾನು "ಅದು ಅವರ ವೈಯಕ್ತಿಕ ನಂಬಿಕೆ.. ಅದನ್ನು ಗೌರವಿಸೋಣ" ಎಂದುಕೊಂಡೆ ಆದರೆ ಸಾರ್ವಜನಿಕವಾಗಿ ಇವರು ತಮ್ಮ ಭಕ್ತಿಯನ್ನು ಮೆರೆದಾಗ ವಿಜ್ಞಾನದ ವಿದ್ಯಾರ್ಥಿಗಳಿಗೆ 'ಇವರ ಈ ನಂಬಿಕೆ ತಪ್ಪು ಸಂದೇಶಗಳನ್ನು ಕಳಿಸುತ್ತದಲ್ಲ' ಎಂದು ಆತಂಕವಾಯಿತು. ಇಂತಹ ದೈವ ಭಕ್ತರಾದ(ಇಸ್ರೋದಲ್ಲಿ ಅಬ್ರಾಹ್ಮಣರು ಇಂತಹ ಪದವಿಗೆ ಬರುವುದು ಅಪರೂಪ) ವಿಜ್ಞಾನಿ ಸಿವನ್ ಅವರನ್ನು ಯಾವ ದೇವರೂ ಕೈಹಿಡಿಯದೇ ಹೋದುದು ದುರಂತ! ಇರಲಿ.. ನಾನು ಹೇಳಲು ಹೊರಟಿರುವುದು ಇದಲ್ಲ.

ನಿನ್ನೆ 'ಕಲ್ಕತ್ತಾ ಟ್ಯೂಬ್ಸ್' ಎಂಬ ನೆಲಮಂಗಲ ಬಳಿಯ ಕಾರ್ಖಾನೆಯ ಕಾರ್ಮಿಕರು ಬಂದಿದ್ದರು. ಈ ಕಾರ್ಖಾನೆಯ ಕಾರ್ಮಿಕರಿಗೆ ನಾನು ಕಳೆದ ಸುಮಾರು ಹತ್ತು ವರ್ಷದಿಂದ ಕಾನೂನು ಸಲಹೆಗಾರನಾಗಿದ್ದೇನೆ.‌ ಇವರಿಗೆ ನ್ಯಾಯಯುತವಾಗಿ ದಕ್ಕಬೇಕಾದ ಬೇಡಿಕೆಗಳಿಗಾಗಿ ಹೋರಾಡಿ ಯಶಸ್ಸನ್ನೂ ಕಂಡಿದ್ದೇನೆ. ಈಗಿನ ಸಮಸ್ಯೆಯೆಂದರೆ ಇವರ ಕಾರ್ಖಾನೆ ಮುಚ್ಚಲಾಗುತ್ತಿದ್ದು, ಇಲ್ಲಿನ ಕಾರ್ಮಿಕರನ್ನು ಹಠಾತ್ ಆಗಿ ಕೆಲಸದಿಂದ ತೆಗೆಯುತಿದ್ದಾರೆ. ಇದಕ್ಕೆ ಕಾರಣಗಳನ್ನು ಬಿಡಿಸಿ ಹೇಳಬೇಕಿಲ್ಲ. ನೋಟು ಅಮಾನ್ಯೀಕರಣದಿಂದ ಹಿಡಿದು, ಜಿ.ಎಸ್.ಟಿ ಮುಂತಾಗಿ ಇಂದಿನ ಆರ್ಥಿಕ ಸ್ಥಿತಿ ನೆಲಕಚ್ಚಿರುವವರೆಗೂ ಅನೇಕ ಕಾರಣಗಳು ಕಣ್ಣ ಮುಂದೆ ನಿಲ್ಲುತ್ತವೆ. ಸರಿ, ಕಾರ್ಖಾನೆ ಮುಚ್ಚಿ, ಅದರ ಸಾಹುಕಾರನಾದ ಯಜಮಾನ ಉಳಿದು ಬಳಿದದ್ದನ್ನು ಬಾಚಿಕೊಂಡು ಕಲ್ಕತ್ತಾ ಸೇರಿಕೊಳ್ಳುತ್ತಾನೆ. ಆದರೆ ಇಲ್ಲಿನ ಕಾರ್ಮಿಕರ ಕತೆಯೇನು? ಈ ಕಾರ್ಮಿಕರು ಆ ಸುತ್ತಮುತ್ತಲಿನ ಗ್ರಾಮಗಳವರು, ಇವರು ಜಾತಿಯಲ್ಲಿ ಒಕ್ಕಲಿಗರಾದರೂ ಯಾರೂ ಭೂಮಿ ಹೊಂದಿದವರಲ್ಲ, ಎಲ್ಲರೂ ಭೂಹೀನರೇ. ದೇವೇಗೌಡರು, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಆರ್. ಅಶೋಕ್ ಎಂಬ ಯಾವ ಒಕ್ಕಲಿಗರ ನಾಯಕರನ್ನೂ ಇವರು ತಮ್ಮ ಕೆಲಸ ಕಾರ್ಯಗಳಿಗಾಗಿ ತಮ್ಮ ಜೀವನದಲ್ಲಿ ಒಮ್ಮೆಯೂ ಭೇಟಿಯಾದವರಲ್ಲ. ಕಲ್ಕತ್ತಾ ಟ್ಯೂಬ್ ಕಾರ್ಖಾನೆಯಲ್ಲಿ ಹಗಲಿರುಳೂ ಅತ್ಯಂತ ಭಾರವಾದ ಕಬ್ಬಿಣವನ್ನು ಎತ್ತಿ, ದೇಹ ಸವೆದು ಮೂಳೆ ಚಕ್ಕಳವಾದವರು! ಈಗ ಇವರಿಗೆ 50 ರಿಂದ 60ರ ಮಧ್ಯೆ ಎಷ್ಟಾದರೂ ವಯಸ್ಸಾಗಿರುವವರು. ಕಾಕತಾಳೀಯವೆಂಬಂತೆ ಈ ಕಾರ್ಮಿಕರು ಬಂದಾಗ ನಮ್ಮ ಆಫೀಸಿನಲ್ಲಿ ಸೇರಿದ್ದ ಕೆಲ ಮಂದಿ ಗೆಳೆಯರು ಚಂದ್ರಯಾನ-2  ರ ಬಗ್ಗೆ ಗಂಭೀರವಾಗಿ ಚರ್ಚಿಸುತಿದ್ದರೆ, ಇವರು 'ಇದು ನಮಗೆ ಸಂಬಂಧಿಸಿದ್ದೇ ಅಲ್ಲ.. ಎಲ್ಲೋ ಯಾವುದೋ ದೇಶದಲ್ಲಿ ನಡೆಯುತ್ತಿರಬಹುದಾದ ವಿದ್ಯಮಾನವಿರಬಹುದು..' ಎನ್ನುವಂತೆ ಚಂದ್ರಯಾನ-2ರ ಬಗ್ಗೆ ನಿರ್ಭಾವುಕರಾಗಿ ತಲೆಮೇಲೆ ಕೈಹೊತ್ತು ಕುಂತಿದ್ದರು...! ಅದೇ ಸಂದರ್ಭದಲ್ಲಿ ಮೊನ್ನೆ ಮೊನ್ನೆಯಷ್ಟೇ ಬಂದುಹೋದ ಕೊರಗರು ನನ್ನ ಕಣ್ಣ ಮುಂದೆ ಬಂದರು. ಆದಿವಾಸಿ, ಅಸ್ಪೃಶ್ಯ, ಅರೆಅಲೆಮಾರಿ ಸಮುದಾಯಕ್ಕೆ ಸೇರಿದ ಕೊರಗರು ನಿರಂತರ ಸಾವಿಗೆ ತುತ್ತಾಗುತ್ತಿದ್ದು ಅವರ ಕುಲವೇ ನಶಿಸಿಹೋಗುತ್ತಿದೆ!? ಈ ಬಗ್ಗೆ ಮಾತಾಡಲು ದಕ್ಷಿಣ‌ ಕನ್ನಡದಿಂದ ಬಂದಿದ್ದ ಕೊರಗ ಸಂಘದ ಕೆಲವರನ್ನು ಕರೆದುಕೊಂಡು ಇಬ್ಬರು ಮುಖ್ಯಮಂತ್ರಿಗಳನ್ನು (ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ) ಭೇಟಿಮಾಡಿಸಲು ಪ್ರಯತ್ನಿಸಿ ಸೋತಿದ್ದೆ! ಕೊರಗರ ಕುಲಶಾಸ್ತ್ರೀಯ ಅಧ್ಯಯನ ಮಾಡುವಾಗ ಕೊರಗರ ಆದಿವಾಸಿ ಕತೆಗಳಲ್ಲಿ ಅನೇಕ ಕಡೆ ಚಂದ್ರ, ತಾರೆಗಳು ವಿಜೃಂಭಣೆಯಿಂದ ಬಂದು ಹೋಗುತ್ತಾರೆ. ಆದರೆ ಅವರಿಗೆ ಈ ಚಂದ್ರಯಾನ-2 ರ ಚಂದ್ರ ಯಾವ ರೀತಿಯಲ್ಲೂ ಸಂಬಂಧಿಸಿಲ್ಲ! ಅವರಿಗೆ ಅವರ ಸಂಕುಲ ಬದುಕುಳಿಯುವುದು ಮುಖ್ಯ.‌ ಆದರೆ ಚಂದ್ರಯಾನಕ್ಕೆ ಕೋಟಿಕೋಟಿ ಖರ್ಚು ಮಾಡುವ ಸರ್ಕಾರಗಳು(ಕೇಂದ್ರ, ರಾಜ್ಯ ಯಾವುದೇ ಆಗಿರಲಿ) ಇವರನ್ನು ಬದುಕಿಸಿಕೊಳ್ಳುವ ಕನಿಷ್ಟ ಮಾತುಕತೆಗೂ ಸಿದ್ಧವಿರಲ್ಲ! 

ಈ ಚಂದ್ರಯಾನ-2 ಕ್ಕೆ ಒಟ್ಟಾರೆ 2019ರ ಜೂನ್ ಅಷ್ಟರ ಹೊತ್ತಿಗೆ ಅಂದಾಜು ಖರ್ಚಾಗಿರುವುದು 141 ಮಿಲಿಯನ್ ಅಮೆರಿಕನ್ ಡಾಲರ್! ಅಂದರೆ 978 ಕೋಟಿ!  ಇದೇ ಸಂದರ್ಭದಲ್ಲಿ ದೇಶದ ಆರ್ಥಿಕ ಕುಸಿತದಿಂದಾಗಿ ಅನೇಕ ಕಂಪೆನಿಗಳು, ಖಾಸಗಿ ಉದ್ಯಮಗಳು, ಗುಡಿ ಕೈಗಾರಿಕೆಗಳು, ಸಣ್ಣಪುಟ್ಟ ಕಾರ್ಖಾನೆಗಳು ಮುಚ್ಚಲಾಗುತ್ತಿದ್ದು, ನಿರುದ್ಯೋಗ ನಿವಾರಣೆಯಿರಲಿ ಇರುವ ಇದ್ದಬದ್ದ ಉದ್ಯೋಗಗಳನ್ನು ಕೂಡ ಕಳಕೊಂಡು ಭಾರತದ ದೇಶವಾಸಿಗಳು  ಬೀದಿಗೆ ಬೀಳುತಿದ್ದಾರೆ. ಇಲ್ಲಿನ ‌ಆದಿವಾಸಿ, ಅಸ್ಪೃಶ್ಯ, ಅಲೆಮಾರಿಗಳಂತಹ ಅಸಹಾಯಕರ ಗೋಳುಗಳಂತೂ ಹೇಳತೀರದು. ಅಂಬಾನಿ, ಅದಾನಿಗಳಂತವರು ಸರ್ಕಾರಿ‌ ಸ್ವಾಮ್ಯದ ನಿಗಮಗಳನ್ನು ಮುಚ್ಚಿಸಿ ತಾವೇ ಸರ್ಕಾರಗಳ ವಾರಸುದಾರರಾಗುತಿದ್ದಾರೆ. ದೇಶದಲ್ಲಿ ಇಷ್ಟೆಲ್ಲಾ ಸಂಕಷ್ಟಗಳು ತಾಂಡವವಾಡುತಿದ್ದರೂ ನಾವು ಚಂದ್ರಯಾನದಂತಹ ದುಬಾರಿ ಯಾನಗಳನ್ನು ಮಾಡುವ ನೈತಿಕತೆ ನಮಗಿದೆಯೇ ಎಂಬ  ಪ್ರಶ್ನೆ ಗಾಢವಾಗಿ ಕಾಡುತ್ತದೆ. ಮನುಷ್ಯನ ಮೂಲಭೂತ ಅಗತ್ಯಕ್ಕೆ, ಆಗಿನ‌ ಸಂದರ್ಭಕ್ಕೆ ಉಪಯೋಗಕ್ಕೆ ಬಾರದ ಯಾವುದೇ ವಿಜ್ಞಾನದ ಆವಿಷ್ಕಾರಗಳು ದಂಡ ಎನಿಸುತ್ತದೆ. ಅದರಲ್ಲೂ ಭಾರತದಂತಹ ದೇಶದಲ್ಲಿನ ನಿರ್ಗತಿಕರ ಹೀನಾಯ ಬದುಕಿನ ಮೌಲ್ಯವನ್ನು ಗಮನಿಸಿದಾಗ ಇದು ನಿಷ್ಪ್ರಯೋಜಕ ಮತ್ತು ಅನಗತ್ಯ ಅಂತಲೂ ಅನಿಸುತ್ತದೆ. ನಮ್ಮ ಆದ್ಯತೆಗಳ ಬಗ್ಗೆ ಸರಿಯಾದ ಜ್ಞಾನ ಮತ್ತು ಕಾಳಜಿಗಳ ಅರಿವಿರದಿದ್ದರೆ ಇಂತಹ ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ.

ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಅವರ ಸರ್ಕಾರ ಅಣುಬಾಂಬ್ ಪ್ರಯೋಗ ಮಾಡಿದಾಗ ಲಂಕೇಶರು "ಮಗ ಎಲ್ಲಾ ಬಿಟ್ಟ ಭಂಗಿ ನೆಟ್ಟ" ಎಂಬ ಟೈಟಲ್ ನೀಡಿ ನನ್ನ ಕೈಯಲ್ಲೇ 'ಲಂಕೇಶ್ ಪತ್ರಿಕೆ'ಗೆ ಲೇಖನ ಬರೆಸಿದ್ದು ನೆನಪಾಗುತ್ತಿದೆ.ದುರಂತವೆಂದರೆ ಇಂದು ಇಂತಹ ಕೃತ್ಯಗಳು ನಡೆದಾಗ ಅದನ್ನು ವಿಶ್ಲೇಷಿಸಬಲ್ಲ ಲಂಕೇಶರಂಥ ಸಂಪಾದಕರು ಕಾಣುತ್ತಿಲ್ಲ!

ಈ ಎಲ್ಲಾ ನೆನಪುಗಳೊಂದಿಗೆ ಯಾಕೋ ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರದ ಹಳೆಯ ಹಾಡೊಂದು ಕೂಡ ನೆನಪಾಗುತ್ತಿದೆ. ಡಾ.ರಾಜಕುಮಾರ್ ಅಭಿನಯದ ಭೂಪತಿರಂಗ ಚಿತ್ರಕ್ಕಾಗಿ ಗೀತಪ್ರಿಯ ಬರೆದ ಈ ಹಾಡು ಹೀಗಿದೆ...

"ನಾಗರಿಕ ಮಾನವ
ಗಗನದಲ್ಲಿ ಮೇಲೆಮೇಲೆ
ಹಾರುವುದನು ಕಲಿತೆ,
ನೀರಿನಲ್ಲಿ ಮೀನಿನಂತೆ 
ಈಜುವುದನು ಕಲಿತೆ
ಭೂಮಿಯಲ್ಲಿ ಬದುಕುವುದನು
ಕಲಿಯಲಿಲ್ಲವೇಕೆ.." ಎಂದು ಆರಂಭವಾಗುವ ಈ ಹಾಡು ಮುಂದುವರೆದು..
"ಇಲ್ಲೇ ಇರುವ ಮನುಜರೊಡನೆ
ಸ್ನೇಹದಿಂದ ಬಾಳದೆ
ಎಲ್ಲೋ ಇರುವ ಗ್ರಹಗಳೆಡೆಗೆ
ದಾರಿಯನ್ನು ಹುಡುಕಿದೆ..
ಮನುಜ ಮುಂದುವರಿಯಲು
ವಿಜ್ಞಾನವನ್ನು ಬಳಸಿದೆ
ಇಂದು ಅದನು ಅಸ್ತ್ರವಾಗಿ
ಬಳಸುತಿರುವೆ ಏಕೆ.?